ಸಿಗರೇಟಿನಲ್ಲಿ ಹೋದ ಆರೋಗ್ಯ ಗುಟ್ಕಾ ನಿಷೇಧದಿಂದ ಬರುತ್ತಾ?

Updated on: 

ಗುಟ್ಕಾ ನಿಷೇಧ ರಾಜ್ಯಾದ್ಯಂತ ಭರ್ಜರಿ ಚರ್ಚೆಯಾಗುತ್ತಿದೆ.
ಪಾಪದ ಅಡಕೆ ಬೆಳೆಗಾರ ಮದ್ದು ಹೊಡೆಯೋದು, ಅಡಕೆ ಚಪ್ಪರ ತೆಗೆಯೋದು, ಸೋರುತ್ತಿರುವ ಮನೆಯ ಚಾವಣಿ ರಿಪೇರಿಯಲ್ಲಿ ನಿರತನಾಗಿದ್ದಾನೆ. ಯಾವ ತಂಟೆ ತಕರಾರಿಗೂ ಬಾರದೇ ತನ್ನಷ್ಟಕ್ಕಿರುವ ಅಡಕೆ ಬೆಳೆಗಾರರನ್ನು ರಾಜಕಾರಣಿಗಳು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿವೆ.
ತಾನು ಅಡಕೆ ಬೆಳೆಗಾರರ ಪರ ಎಂದು ಬಿಂಬಿಸಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ. ತಾನು ಜನರ ಆರೋಗ್ಯದ ಪರ ಎಂದು ಕಾಂಗ್ರೆಸ್ ಪೋಸು ಕೊಡುತ್ತಿದೆ. ಆದರೆ ಗೊತ್ತಿರಲಿ ಎರಡೂ ಸುಳ್ಳು. ಸುಪ್ರೀಂಕೋರ್ಟ್ ಆದೇಶವಿದೆ. ಅದಕ್ಕೇ ಗುಟ್ಕಾ ಬ್ಯಾನ್ ಮಾಡುವುದು ಕಾಂಗ್ರೆಸ್ ಸರ್ಕಾರಕ್ಕೆ ಅನಿವಾರ್ಯವಾಗಿತ್ತು. ಇದು ಬಿಜೆಪಿಗೂ ಗೊತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ವಿರುದ್ಧವಾಗಿ ತಾನು ಮಾತಾಡಿ, ಅಡಕೆ ಬೆಳೆಗಾರರ ಪರ ಎಂದು ಬಿಂಬಿಸಿಕೊಳ್ಳುವ ಹವಣಿಕೆ ಬಿಜೆಪಿಯದ್ದು.
ಇಬ್ಬರೂ ಜನರ ಕಣ್ಣಿಗೆ ಮಣ್ಣೆರಚುವವರೇ!
ಸಣ್ಣ ಉದಾಹರಣೆ ನೋಡಿ. ಗುಟ್ಕಾ ನಿಷೇಧದ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರಿಸುತ್ತ, 'ಅಡಕೆ ಬೆಳೆಗಾರರ ಬೆಂಬಲಕ್ಕೆ ಸರ್ಕಾರ ನಿಲ್ಲುತ್ತದೆ. ಗುಟ್ಕಾ ನಿಷೇಧದಿಂದ ಅಡಕೆ ಬೆಲೆಗೇನೂ ಪರಿಣಾಮವಾಗಿಲ್ಲ' ಎಂದು ಹೇಳಿ, ಗುಟ್ಕಾ ನಿಷೇಧಕ್ಕೂ ಮುನ್ನ ಕೆಂಪಡಕೆ ಬೆಲೆ ಎಷ್ಟಿತ್ತು ಮತ್ತು ಅದಕ್ಕೂ ನಂತರ ಎಷ್ಟಿದೆ ಎಂಬ ವಿವರ ನೀಡಿ, ಗುಟ್ಕಾ ನಿಷೇಧದಿಂದ ಅಡಕೆ ಬೆಲೆ ಮೇಲೆ ಯಾವುದೇ ಪರಿಣಾಮವಾಗಿಲ್ಲ ಎಂದು ಸಮರ್ಥಿಸಿಕೊಂಡರು.
ಸಿದ್ದರಾಮಯ್ಯನವರು ಒಂದು ಬುದ್ದಿವಂತಿಕೆ ಪ್ರದರ್ಶಿಸಿದರು. ಅದೇನೆಂದರೆ ಅವರು ಕೆಂಪಡಕೆ ಬೆಲೆ ಹೇಳಿದರು. ಆದರೆ ಕೆಂಪಡಕೆ ಗುಟ್ಕಾಕ್ಕೆ ಬಳಕೆಯಾಗುವುದೇ ಇಲ್ಲ! ಅವರು ಬಿಳಿ ಅಡಕೆ ಅಥವಾ ಚಾಲಿ ದರ ಹೇಳಿದ್ದರೆ ಆಗ ದರ ಇಳಿದಿದೆಯೋ? ಏರಿದೆಯೋ? ಗೊತ್ತಾಗುತ್ತಿತ್ತು. ಅಡಕೆ ಬೆಳೆಗಾರರ ಪರವಾಗಿ ನಿಂತು ಸಭಾತ್ಯಾಗ ಮಾಡಲು ಹೊರಟಿದ್ದ ಬಿಜೆಪಿಯವರು ಇದನ್ನು ಪ್ರಶ್ನಿಸಲೂ ಇಲ್ಲ. ಬಹುಶಃ ಅವರಿಗೂ ಈ ಸಂಗತಿ ಗೊತಿದ್ದಂತಿಲ್ಲ!
ಇಬ್ಬರೂ ಸೇರಿ ಅಡಕೆ ಬೆಳೆಗಾರರನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ನೋಡುತ್ತಿದ್ದಾರೆ. ಇಬ್ಬರಿಗೂ ನಿಜ ಸ್ಥಿತಿ ಅರಿವಿಲ್ಲ. ನಿಜಕ್ಕೂ ಎಷ್ಟು ಅಡಕೆ ಗುಟ್ಕಾಕ್ಕೆ ಬಳಕೆಯಾಗುತ್ತದೆ? ಅದಕ್ಕೆ ಬಳಕೆಯಾಗುವ ಅಡಕೆ ಯಾವ ಗುಣಮಟ್ಟದ್ದು? ಗುಟ್ಕಾ ಬಂದ ಮೇಲೆ ಅಡಕೆ ಬೆಲೆ ಯಾವ ಪ್ರಮಾಣದಲ್ಲಿ ಏರಿದೆ? ಅಡಕೆ ಬೆಲೆಗೂ ಗುಟ್ಕಾಗೂ ಸಂಬಂಧ ಇದೆಯಾ? ಇದ್ದರೆ ಅದು ಯಾವ ಪ್ರಮಾಣದಲ್ಲಿ? ಯಾವ ಅಡಕೆಗೆ? ಅಡಕೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತದೆ? ಯಾವುದರ ಕುರಿತೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ.
ಒಟ್ಟಾರೆ ಅಡಕೆ ಬೆಳೆಯಲ್ಲಿ ಶೇ.70ರಷ್ಟು ಬಿಳಿ ಅಥವಾ ಚಾಲಿ ಅಡಕೆ. ಶೇ.30ರಷ್ಟು ಕೆಂಪಡಕೆ. ಶೇ.70ರಷ್ಟು ಚಾಲಿ ಅಡಕೆಯಲ್ಲಿ ಶೇ.10-15ರಷ್ಟು ಕೋಕಾ ಅಥವಾ ಕಳಪೆ ಗುಣಮಟ್ಟದ ಅಡಕೆ ಸಿಗುತ್ತದೆ. ಬೆಳೆಗಾರರು ಕಾಲಕ್ಕೆ ಸರಿಯಾಗಿ ಸಂಸ್ಕರಣೆ ಮಾಡಿದರೆ ಈ ಕೋಕಾದ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.
ಈ ಕೋಕಾವನ್ನೇ ಗುಟ್ಕಾ ನಿರ್ಮಾಪಕರು ಬಳಸುವುದು. ಚಾಲಿ ಅಡಕೆಗೆ ಇರುವ ಬೆಲೆಯ ಅರ್ಧದಷ್ಟು ಬೆಲೆಗೆ ಈ ಕೋಕಾ ಅಡಕೆ ಸಿಗುತ್ತದೆ. ಗುಟ್ಕಾ ಬಂದ ಮೇಲೆ ಅಡಕೆಗೆ ದರ ಕೊಂಚ ಹೆಚ್ಚಾಗಿದ್ದು ನಿಜ. ಹೀಗಾಗಿ ದರ ಸ್ವಲ್ಪ ಕುಸಿಯಬಹುದು. ಆದರೆ ಗುಟ್ಕಾ ಲಾಬಿ ಮತ್ತು ಬಿಜೆಪಿಯವರು ಹೇಳುತ್ತಿರುವಷ್ಟು ಕುಸಿಯಲಾರದು.  ಗುಟ್ಕಾ ನಿಷೇಧದಿಂದ ಚಾಲಿ ಅಡಕೆಗೆ ಯಾವ ತೊಂದರೆಯೂ ಆಗದು. ಇದು ಅಡಕೆ ಬೆಳೆಗಾರನಿಗೂ ಗೊತ್ತು.
ಅಡಕೆಯಿಂದ ಗುಟ್ಕಾ ಇದೆಯೇ ಹೊರತು, ಗುಟ್ಕಾದಿಂದಾಗಿ ಅಡಕೆ ಇಲ್ಲ. 4ನೇ ಶತಮಾನದಲ್ಲೇ ಅಡಕೆ ಇತ್ತು. ಅದಕ್ಕೆ ಉಲ್ಲೇಖಗಳೂ ಇವೆ. ಅಂದಿನಿಂದ ಇಂದಿನವರೆಗೂ ಅಡಕೆ ಬೆಳೆಯಲಾಗುತ್ತಿದೆ. ಅಂದಿಗೂ ಇಂದಿಗೂ ಅಡಕೆಗೆ ಬೆಲೆ ಇದೆ. ಅಡಕೆಯಲ್ಲಿ ಔಷಧೀಯ ಗುಣಗಳಿವೆ. ಪಾನ್ ಬೀಡಾಗಳಿಗೆ, ಸೌಂದರ್ಯ ಸಾಧನಗಳಿಗೆ, ಬಣ್ಣ ತಯಾರಿಕೆಗಳಲ್ಲಿ ಬಳಕೆಯಾಗುತ್ತದೆ. ಗುಟ್ಕಾ ಇತಿಹಾಸ ಕೇವಲ 20-25 ವರ್ಷದ್ದು. ಗುಟ್ಕಾ ಲಾಬಿ ಎಷ್ಟು ಚೆನ್ನಾಗಿ ಕೆಲಸ ಮಾಡುತ್ತಿದೆಯೆಂದರೆ ಗುಟ್ಕಾದಿಂದಲೇ ಅಡಕೆ ಎಂಬಂತೆ ಬಿಂಬಿಸಲಾಗುತ್ತಿದೆ. ಅಡಕೆ ಬೆಳೆಗಾರರು ಗುಟ್ಕಾವನ್ನೇ ಅವಲಂಬಿಸಿದ್ದಾರೆ ಎಂಬಂಥ ಸಂಗತಿಗಳನ್ನು ವೈಭವೀಕರಿಸಲಾಗುತ್ತಿದೆ.
ಎಲೆ-ಅಡಕೆ ಎಂಬುದು ನಮ್ಮ ಸಂಸ್ಕೃತಿಯ ಭಾಗ. ಎಲೆ- ಅಡಕೆ ಶುಭದ ಸಂಕೇತವೂ ಹೌದು. ಯಾವುದೇ ಶುಭ ಸಮಾರಂಭ ಇರಲಿ ಎಲೆ ಅಡಕೆ ಇರಲೇಬೇಕು. ಮದುವೆ ನಿಶ್ಚಿತಾರ್ಥದಲ್ಲಿ ಎಲೆ-ಅಡಕೆ ಕೊಡುಕೊಳ್ಳುವ ಮೂಲಕ ಮಾತುಕತೆ ಯಶಸ್ವಿಯಾಯಿತು ಎಂಬುದನ್ನು ಸಾರಲಾಗುತ್ತದೆ. ಒಂದರ್ಥದಲ್ಲಿ ಎಲೆ-ಅಡಕೆ ಕೊಡುವುದು ಅಂದರೆ ಪರಸ್ಪರರು ಮಾತಿಗೆ ಒಪ್ಪಿದಂತೆ. ಶುಭದ ಸಂಕೇತವಾಗಿ ಎಲೆ-ಅಡಕೆ ಬಳಕೆಯಾಗುತ್ತಿದೆ.
ಇದು ನಮ್ಮ ದೇಶದಲ್ಲಿ ಅಥವಾ ಕರ್ನಾಟಕದಲ್ಲಿ ಮಾತ್ರ ಅಂದುಕೊಳ್ಳಬೇಡಿ. ವಿಯೆಟ್ನಾಂನಲ್ಲಿ ಕೂಡ! ನಿಮಗೆ ಆಶ್ಚರ್ಯವಾಗಬಹುದು. ವಿಯೆಟ್ನಾಂನಲ್ಲಿ ಎಲೆ-ಅಡಕೆಯನ್ನು ಪ್ರೀತಿ ಮತ್ತು ಮದುವೆಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಎಲೆ-ಅಡಕೆ ವಿನಿಮಯದ ನಂತರವೇ ಅಲ್ಲಿ ಮದುವೆ ಮಾತುಕತೆ ಆರಂಭಿಸೋದಂತೆ. ಆಸ್ಸಾಂ ರಾಜ್ಯದಲ್ಲಿ ಮದುವೆಗೆ ಎಲೆ-ಅಡಕೆ ಕೊಟ್ಟು ಕರೆಯುವ ಪದ್ಧತಿಯಿದೆ. ಹೋಮದಲ್ಲಿ ಕೂಡ ಅಡಕೆಯನ್ನು 8 ದ್ರವ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಹೋಮ-ಹವನಗಳಲ್ಲಿ ಪೂರ್ಣಾಹುತಿ ಸಂದರ್ಭ ಅಡಕೆ ಇರಲೇಬೇಕು. ಇತರ ಧಾರ್ಮಿಕ ವಿಧಿವಿಧಾನಗಳಲ್ಲೂ ಅಡಕೆ ಅತ್ಯಗತ್ಯ. ಇಂತಹ ಅಡಕೆಯನ್ನು ಕೇವಲ ಗುಟ್ಕಾಕ್ಕೆ ಸೀಮಿತಗೊಳಿಸಿದ ಕೀರ್ತಿ ನಮ್ಮ ರಾಜಕಾರಣಿಗಳಿಗೆ ಮತ್ತು ಗುಟ್ಕಾ ಲಾಬಿಗೆ ಸಲ್ಲಬೇಕು.
ಬಾಯಿಹುಣ್ಣು ಆದಾಗ ಅಥವಾ ಒಡೆದಾಗ ಅಡಕೆ ತಿಂದರೆ ಕಡಿಮೆಯಾಗುತ್ತದೆ ಎಂಬುದು ಪೂರ್ವಜರ ನಂಬಿಕೆ. ಈಗ ಅಡಕೆಯಲ್ಲಿರುವ ರಾಸಾಯನಿಕಗಳನ್ನು ಪತ್ತೆಮಾಡಿರಬಹುದು. ಆದರೆ ಅದ್ಯಾವುದೂ ಗೊತ್ತಿಲ್ಲದೇ ಪೂರ್ವಜರು ಅಡಕೆಯನ್ನು ಬಾಯಿಹುಣ್ಣು ನಿವಾರಣೆಗೆ ಬಳಸುತ್ತಿದ್ದರು. ಕವಳ ಅಥವಾ ಬೀಡಾಕ್ಕೆ ಬಳಸುವ ಎಲೆಯಲ್ಲಿ ಕ್ಯಾನ್ಸರ್ ತಡೆಯುವ ಗುಣವಿದೆ ಅಂತ ಇತ್ತೀಚೆಗೆ ಕಂಡುಹಿಡಿದಿದ್ದಾರಂತೆ. ಎಲೆ-ಅಡಕೆ ತಿನ್ನುವುದು ಖಂಡಿತ ಆರೋಗ್ಯಕ್ಕೆ ಹಾನಿಕಾರಕವಲ್ಲ. ಅದರಿಂದ ಕ್ಯಾನ್ಸರ್ ಬರುವುದೂ ಇಲ್ಲ. ಇದನ್ನು ಹೇಳೋದಕ್ಕೆ ಯಾವುದೇ ತನಿಖೆ, ಅಧ್ಯಯನದ ಅಗತ್ಯವಿಲ್ಲ. ನಮ್ಮ ಊರುಗಳಲ್ಲಿ 80-90 ವರ್ಷಗಳಿಂದ ಎಲೆ-ಅಡಕೆ ತಿಂದು, ಹಲ್ಲೂ ಗಟ್ಟಿಯಾಗಿಟ್ಟುಕೊಂಡು, ಕ್ಯಾನ್ಸರ್ ಒಂದೇ ಅಲ್ಲ ಯಾವ ರೋಗವೂ ಇಲ್ಲದೇ ಜೀವಿಸಿದವರು ಮತ್ತು ಜೀವಿಸುತ್ತಿರುವವರಿದ್ದಾರೆ. ಅವರ ಹಲ್ಲುಗಳು ದಿನಕ್ಕೆರಡು ಸಾರಿ ಹಲ್ಲು ತಿಕ್ಕುವ ಪೇಟೆ ಮಂದಿಗಿಂತ ಚೆನ್ನಾಗಿದೆ. ಹಾಗೆಯೇ ಎಲೆ-ಅಡಕೆ ಹಾಕದವರಿಗೂ ಕ್ಯಾನ್ಸರ್ ಬಂದಿದೆ. ಎಲೆ-ಅಡಕೆ ಜತೆ ತಂಬಾಕು ಹಾಕುವುದು ಆರೋಗ್ಯಕ್ಕೆ ಹಾನಿಕರ. ಅದೂ ಅಲ್ಪಪ್ರಮಾಣದಲ್ಲಿದ್ದರೆ ಹಾನಿಯಾಗಲಿಕ್ಕಿಲ್ಲ. ಹಾಗೇನಾದರೂ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂದಾಗಿದ್ದರೆ ಕರಾವಳಿ ಪ್ರದೇಶದ ಶೇ.80ರಷ್ಟು ಮಂದಿ ಆಸ್ಪತ್ರೆಯಲ್ಲೇ ಇರಬೇಕಿತ್ತು. ಅಲ್ಲಿನ ಜನರೆಲ್ಲ ಕ್ಯಾನ್ಸರ್‌ನಿಂದ ಬಳಲಿ, ದೊಡ್ಡ ಸಾಮಾಜಿಕ ಸಮಸ್ಯೆ ಸೃಷ್ಟಿಯಾಗಬೇಕಿತ್ತು. ಯಾಕೆಂದರೆ ಕರಾವಳಿ ಪ್ರದೇಶದಲ್ಲಿ ಕವಳ ಬಟ್ಟಲು (ಕವಳ ಎಂದರೆ ತಾಂಬೂಲ ಎಂದರ್ಥ. ಅದಕ್ಕೆ ಬೇಕಾಗುವ ಸಾಮಗ್ರಿಗಳನ್ನು ಇಡುವ ಸಾಧನ) ಇಲ್ಲದ ಮನೆಯೇ ಅಪರೂಪ. ಆದರೆ ಅಂತಹ ಯಾವುದೇ ಅನಾಹುತವೂ ಆ ಪ್ರದೇಶದಲ್ಲಿ ಆಗಿಲ್ಲ.
ಗುಟ್ಕಾ ನಿಷೇಧದ ನಂತರ ಒಂದು ಪತ್ರಿಕೆಯಲ್ಲಿ ಅಡಕೆ ಬೆಳೆಗಾರನಿಗೆ ಇನ್ನೊಬ್ಬ 'ಜನರ ಆರೋಗ್ಯ ಹೆಚ್ಚಾ? ಅಡಕೆ ಬೆಲೆ ಹೆಚ್ಚಾ' ಎಂದು ಕೇಳುವ ಅರ್ಥದಲ್ಲಿ ವ್ಯಂಗ್ಯಚಿತ್ರವೊಂದು ಪ್ರಕಟವಾಗಿತ್ತು. ಸ್ವಾಮಿ, ಅಡಕೆ ಬೆಳೆಗಾರರು ಜನರ ಆರೋಗ್ಯ ಹಾಳಾಗಲಿ ಎಂಬ ದುರುದ್ದೇಶ ಇಟ್ಟುಕೊಂಡು ಬೆಳೆಯುತ್ತಿಲ್ಲ. ಗುಟ್ಕಾ ತಯಾರಿಸಿ, ಜನರ ಆರೋಗ್ಯ ಹಾಳು ಮಾಡಿ ಎಂದು ಅಡಕೆ ಬೆಳೆಗಾರರು ಎಲ್ಲೂ ಒತ್ತಾಯ ಮಾಡಿಯೂ ಇಲ್ಲ. ಗುಟ್ಕಾ ನಿಷೇಧಿಸಿದಾಗ ಯಾವ ಅಡಕೆ ಬೆಳೆಗಾರರೂ ಪ್ರತಿಭಟನೆ ಮಾಡಿಲ್ಲ. ಪ್ರತಿಭಟನೆ ಮಾಡಿದ್ದು ರಾಜಕೀಯ ಪಕ್ಷಗಳು. ಹೀಗಿರುವಾಗ ಅನಗತ್ಯವಾಗಿ ಅಡಕೆ ಬೆಳೆಗಾರರನ್ನು ಗುಟ್ಕಾಕ್ಕೆ ಯಾಕೆ ಹೊಣೆಗಾರರನ್ನಾಗಿ ಮಾಡುತ್ತೀರಿ?
ಹೊಳೆಯಲ್ಲಿ ಯಾರಾದರೂ ಮುಳುಗಿ ಸತ್ತರೆ ಅದಕ್ಕೆ ಹೊಳೆಯನ್ನು ಹೊಣೆಮಾಡಲು ಸಾಧ್ಯವೇ?
ಗುಟ್ಕಾ ನಿಷೇಧದ ಪರವಾಗಿ ಇಷ್ಟೆಲ್ಲ ವಾದ ಮಾಡುವವರಿಗೆ ನನ್ನದೊಂದು ಪ್ರಶ್ನೆಯಿದೆ. ಸ್ವಾಮಿ, ಮನುಷ್ಯನ ಆರೋಗ್ಯಕ್ಕೆ ಗುಟ್ಕಾ ಹೆಚ್ಚು ಹಾನಿಕಾರಕವೋ? ಸಿಗರೇಟೋ? ನನ್ನ ಪ್ರಕಾರ ಸಿಗರೇಟು ಹೆಚ್ಚು ಅಪಾಯಕಾರಿ. ಯಾಕೆಂದರೆ ಸಿಗರೇಟು ಸೇದುವವನ ಆರೋಗ್ಯದ ಜತೆಗೆ, ಅದರ ಹೊಗೆ ಅಕ್ಕಪಕ್ಕದ ಜನರ ಆರೋಗ್ಯವನ್ನೂ ಹಾಳು ಮಾಡುತ್ತದೆ. ಆದರೆ, ಗುಟ್ಕಾ ತಿಂದವನ ಆರೋಗ್ಯವನ್ನು ಮಾತ್ರ ಹಾಳು ಮಾಡುತ್ತದೆ.
ನೀವು ಸಿಗರೇಟನ್ನು ಇಷ್ಟು ಮುಕ್ತವಾಗಿ ಮಾರಾಟ ಮಾಡಲು ಮತ್ತು ಸೇದಲು ಬಿಟ್ಟು, ಆರೋಗ್ಯದ ದೃಷ್ಟಿಯಿಂದ ಗುಟ್ಕಾ ಮಾತ್ರ ನಿಷೇಧಿಸುತ್ತೇವೆ ಎನ್ನುವುದು ಯಾವ ನ್ಯಾಯ? ಇದ್ಯಾವ ಆರೋಗ್ಯ ಕಾಳಜಿ? ಸಾರ್ವಜನಿಕ ಪ್ರದೇಶದಲ್ಲಿ ಸಿಗರೇಟು ಸೇದುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ವಿಧಾನಸೌಧ ಸೇರಿದಂತೆ ಎಲ್ಲ ಸಾರ್ವಜನಿಕ ಪ್ರದೇಶಗಳಲ್ಲಿ ಅದನ್ನು ಎಷ್ಟು ಪರಿಣಾಮಕಾರಿಯಾಗಿ ಜಾರಿ ಮಾಡಿದ್ದೀರಿ? ಜನರ ಆರೋಗ್ಯದ ಕುರಿತು ಅಪಾರ ಕಾಳಜಿ ಹೊಂದಿರುವ ಕಾಂಗ್ರೆಸ್ ಸರ್ಕಾರ ಇದಕ್ಕೆ ಉತ್ತರಿಸಬೇಕಲ್ಲವೇ?
ಸಿಗರೇಟು ಸೇದುವುದು ಹಾನಿಕರ ಅಂತ ಸಿಗರೇಟ್ ಪ್ಯಾಕ್ ಮೇಲೆ ಬರೆಸುತ್ತಾರೆ. ತೆರಿಗೆ ಹೆಚ್ಚಿಸಿದ್ದಾರೆ. ಚಲನಚಿತ್ರಗಳ ಆರಂಭದಲ್ಲಿ ಸಿಗರೇಟು ಸೇದಿದರೆ ಆಗುವ ಹಾನಿಯ ಕುರಿತು ಕಿರುಚಿತ್ರ ಪ್ರದರ್ಶಿಸಲಾಗುತ್ತದೆ. ಹಾಗೆಯೇ ಗುಟ್ಕಾ ಬಗ್ಗೆಯೂ ತೋರಿಸಿ. ಗುಟ್ಕಾಕ್ಕೂ ಹೆಚ್ಚು ತೆರಿಗೆ ಹಾಕಿ. ಗುಟ್ಕಾ ಪ್ಯಾಕೆಟ್ ಮೇಲೂ ಅಪಾಯಕಾರಿ ಅಂತ ಬರೆಸಿ ಮಾರಾಟಕ್ಕಿಡಿ. ಅದ್ಯಾವುದನ್ನೂ ಮಾಡದೇ ಗುಟ್ಕಾವನ್ನು ನಿಷೇಧಿಸಿ, ಸಿಗರೇಟು ಸೇದಲು ಬಿಟ್ಟರೆ ಆರೋಗ್ಯಕ್ಕಾಗುವ ಹಾನಿ ಕಡಿಮೆಯಾಗುತ್ತದೆಯೇ? ಅಲ್ಲದೇ ಸಿಗರೇಟಿಗೊಂದು ನ್ಯಾಯ, ಗುಟ್ಕಾಗೊಂದು ನ್ಯಾಯ ಮಾಡಿದಂತಾಗುವುದಿಲ್ಲವೇ? ಅಧಿಕೃತವಾಗಿ ಸರ್ಕಾರವೇ ಗುಟ್ಕಾಗಿಂತ ಸಿಗರೇಟೇ ಪರ್ವಾಗಿಲ್ಲ ಎಂಬ ಸಂದೇಶ ನೀಡಿದಂತಾಗುವುದಿಲ್ಲವೇ? ಗುಟ್ಕಾ ನಿಷೇಧಿಸಿದ್ದು ಖಂಡಿತ ಒಳ್ಳೆಯ ನಿರ್ಧಾರ. ಆದರೆ...
ಸಿಗರೇಟು ಹೊಗೆಯಿಂದ ಹೋದ ಆರೋಗ್ಯ ಗುಟ್ಕಾ ನಿಷೇಧದಿಂದ ಮರಳಿ ಬರುತ್ತಾ?

- ವಿನಾಯಕ ಭಟ್ಟ ಮೂರೂರು
ಕನ್ನಡಪ್ರಭ   

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com