ಬಂಗಾರವಾಗುವುದೇ ಬಯಲು ಸೀಮೆಯ ಜನರ ಬದುಕು?
ಯಾವುದೇ ರಾಜ್ಯದ ಸರ್ವತೋಮುಖ ಅಭಿವೃದ್ಧಿಯಲ್ಲಿ ನೀರಾವರಿ ಯೋಜನೆಗಳನ್ನು ರೂಪಿಸುವುದು ಮತ್ತು ಅದರ ಸಮರ್ಪಕವಾದ ಅನುಷ್ಠಾನ ಅತ್ಯಂತ ಮಹತ್ತರವಾಗಿದೆ. ನೀರಾವರಿ ಯೋಜನೆಗಳಿಂದ ವಂಚಿತವಾಗಿರುವ ಪ್ರದೇಶವು ಎಲ್ಲಾ ರೀತಿಯಲ್ಲೂ ಹಿಂದುಳಿಯುತ್ತದೆ. ಇದಕ್ಕೆ ಕರ್ನಾಟಕದ ಬಯಲು ಸೀಮೆಯ ಜಿಲ್ಲೆಗಳೇ ಸಾಕ್ಷಿ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬಯಲು ಸೀಮೆಯ ಎಂಟು ಜಿಲ್ಲೆಗಳಲ್ಲಿ ಕಳೆದ ಹಲವು ವರ್ಷಗಳಿಂದ ಮಳೆಯ ಪ್ರಮಾಣ ಗಣನೀಯವಾಗಿ ಕುಸಿದಿದೆ. ಬಯಲು ಸೀಮೆ ಸತತವಾಗಿ ಬರದಿಂದ ತತ್ತರಿಸಿದೆ. ಕೃಷಿಗೆ ಮೂಲಾಧಾರವಾಗಿರುವ ನೀರು ಇಲ್ಲವಾಗಿದೆ. ಶೇಖಡ 75 ರಷ್ಟು ಜನ ಜೀವನಾವಲಂಬನೆಗಾಗಿ ಕೃಷಿಯನ್ನೇ ಅವಲಂಬಿಸಿರುವುದರಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಸತತ ಬರಗಾಲದಿಂದಾಗಿ ಕುಡಿಯುವ ನೀರಿನ ಪೂರೈಕೆಯೂ ಸಹ ಕಷ್ಟಸಾಧ್ಯವಾಗಿದೆ. ಕೃಷಿ ಕಾರ್ಮಿಕರು, ಕೂಲಿಗಾರರು ಗುಳೆ ಹೋಗುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ಉತ್ತರವಾಗಿ ಇಲ್ಲಿನ ಜನರು ಎದುರು ನೋಡುತ್ತಿರುವುದು ಸರ್ಕಾರದಿಂದ ಬಯಸುತ್ತಿರುವುದು ಒಂದೇ ಅದು 'ಶಾಶ್ವತ ನೀರಾವರಿ ಯೋಜನೆ'.
ರಾಜ್ಯದಲ್ಲಿ ಅತೀ ಕಡಿಮೆ ನೀರಾವರಿ ಇರುವ ಪ್ರದೇಶಗಳಾದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತಿತರ ಜಿಲ್ಲೆಗಳಲ್ಲಿ ನೀರಾವರಿಗೆ ಯಾವುದೇ ನದಿಗಳು ಇಲ್ಲದಿರುವುದರಿಂದ ಅಲ್ಲಿನ 75 ಪ್ರತಿಶತ ಜನರು ವ್ಯವಸಾಯಕ್ಕಾಗಿ ಕೇವಲ ಮಳೆ ನೀರನ್ನೇ ಅವಲಂಬಿಸಿದ್ದಾರೆ, ಶೇ25 ರಷ್ಟು ಜನರು ಕೆರೆ, ಬಾವಿ, ಕೊಳವೆಬಾವಿಯನ್ನು ಆಧರಿಸಿದ್ದಾರೆ. ಆದರೆ ಇತ್ತೀಚೆಗೆ ಕೆರೆ, ಬಾವಿಗಳೂ ಬತ್ತಿ ಹೋಗುತ್ತಿವೆ. ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದು 800 ರಿಂದ 1500 ಅಡಿಗಳಷ್ಟು ಕೊರೆದರೂ ಕೂಡ ನೀರು ಸಿಗುವುದು ಅಪರೂಪವಾಗಿದೆ. ಸರ್ಕಾರದ ಸಹಾಯದಿಂದ ಅಥವಾ ಸ್ವಂತ ಖರ್ಚಿನಿಂದ ರೈತರು ಕೊಳವೆ ಬಾವಿ ಕೊರೆಸಿದರೂ ಸಹ ಎರಡು ಮೂರು ತಿಂಗಳಲ್ಲಿ ನೀರು ಬತ್ತಿ ಹೋಗುತ್ತಿದೆ. ಕುಡಿಯುವ ನೀರಿಗೂ ಪರಿತಪಿಸುವಂತಹ ಗಂಭೀರ ಪರಿಸ್ಥಿತಿಯಿದೆ. ತಾಲೂಕಿನ ಬಹುತೇಕ ಕೆರೆ, ಕುಂಟೆ, ಕಾಲುವೆ, ಗೋಮಾಳಗಳು, ಮತ್ತು ಕೃಷಿ ಭೂಮಿ ಮರಳು ಮಾಫಿಯಾಗಳ ಅಟ್ಟಹಾಸಕ್ಕೆ ಸಿಲುಕಿ ಸ್ವಾಭಾವಿಕ ಸಂಪತ್ತು ನಾಶವಾಗುತ್ತಿರುವುದಲ್ಲದೇ ಬರಡು ಭೂಮಿಯಾಗಿ ಮಾರ್ಪಾಡಾಗುತ್ತಿದೆ. ಅಕ್ರಮ ಮರಳುಗಣಿಗಾರಿಕೆ ನಡೆಯುತ್ತಿರುವುದರಿಂದ ಆಗಾಗ ಅಲ್ಪ ಸ್ವಲ್ಪ ಬೀಳುವ ಮಳೆಯ ನೀರೂ ಸಹ ಭೂಮಿಯೊಳಗೆ ಇಂಗಲು ಅಗತ್ಯವಾದ ಮರಳೇ ನಶಿಸಿ ಹೋಗುತ್ತಿದೆ. ಆದ್ದದರಿಂದ ಮರಳು ನೀತಿ ಅತ್ಯಂತ ಸಮರ್ಪಕವಾಗಿ ಜಾರಿಯಾಗಬೇಕಿದೆ. ಅಕ್ರಮ ಮರಳು ಗಣಿಕಾರಿಕೆ ಮಾಡುತ್ತಿರುವವರಿಗೆ ಕಠಿಣ ಶಿಕ್ಷೆ ಆಗಬೇಕಾಗಿದೆ, ಆದರೆ ಕಟ್ಟಡ ನಿರ್ಮಾಣ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಮರಳಿನ ಅಗತ್ಯ ಇರುವುದರಿಂದ ಮರಳಿಗೆ ಬದಲಿ ವಸ್ತುವನ್ನು ಉಪಯೋಗಿಸಲು ಚಿಂತನೆ ನಡೆಸಬೇಕಾಗಿದೆ. ಕೃತಕ ಮರಳನ್ನು ಉಪಯೋಗಿಸಲು ಪ್ರಾಮುಖ್ಯತೆ ನೀಡಬೇಕಾಗಿದೆ.
ಬರಡಾಗುತ್ತಿದೆ ಕರ್ನಾಟಕದ ಬಯಲು ಸೀಮೆ: ಇರುವ ಅಲ್ಪ ಸ್ವಲ್ಪ ನೀರಿನ ಮೂಲಗಳನ್ನೇ ಆಶ್ರಯಿಸಿರುವ ಜನರು ಹೈನುಗಾರಿಕೆ ಮತ್ತು ರೇಷ್ಮೆ, ಹೂವು, ಹಣ್ಣು, ತರಕಾರಿ ಮತ್ತು ದ್ರಾಕ್ಷಿ ಪ್ರಮುಖವಾಗಿ ಬೆಳಯುತ್ತಿದ್ದಾರೆ. ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಹತ್ತಿರ ಇರುವುದರಿಂದ ಪುಷ್ಪೋದ್ಯಮಕ್ಕೆ ಮಹತ್ವವನ್ನು ನೀಡಿ ರೈತರಿಗೆ ಸಂಬಂಧಿಸಿದ ಇಲಾಖೆಯಿಂದ ಸೂಕ್ತ ತರಬೇತಿ ಮತ್ತು ಮಾಹಿತಿ ನೀಡಿದರೆ, ಪುಷ್ಪಗಳ ಪರಿಮಳವು ವಿಶ್ವವ್ಯಾಪ್ತಿಯಾಗುವುದರಲ್ಲಿ ಸಂಶಯ ಇಲ್ಲ. ಹೂ ಬೆಳೆಯುವುದಕ್ಕೆ ಮತ್ತು ದ್ರಾಕ್ಷಿ ಬೆಳೆಗೆ ಈ ಭಾಗದ ರೈತರು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಆದರೆ ಅದಕ್ಕೆ ಸಂಬಂಧಿಸಿದ ಸಲಕರಣೆಗಳು ಜನರಿಗೆ ಅಗ್ಗದ ದರದಲ್ಲಿ ಸಿಗುವಂತಾಗಬೇಕು. ಒಂದೆರಡು ದಶಕಗಳ ಹಿಂದೆ ಇದೇ ಬಯಲು ಸೀಮೆ ಪ್ರದೇಶಗಳಲ್ಲಿ ಕಬ್ಬು, ಭತ್ತ, ರಾಗಿ, ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದರು. ಈ ಭಾಗದ ರೈತರು ಸಾಂಪ್ರದಾಯಿಕ ವ್ಯವಸಾಯ ಪದ್ಧತಿಯನ್ನು ಅಳವಡಿಸಿಕೊಂಡಿದ್ದರೂ ಕೂಡ ಪ್ರಗತಿ ಪರರಾಗಿದ್ದರು. ಕೃಷಿ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದರು. ಇಲ್ಲಿನ ರೈತರು ಸಂಕಷ್ಟದಲ್ಲಿದ್ದರೂ, ದೈನಂದಿನ ಸಮಸ್ಯೆಗಳಿಂದ ತತ್ತರಿಸಿ ಹೋದರೂ ಆತ್ಮಗೌರವದಿಂದ ಬದುಕುತಿದ್ದಾರೆ. ಇತರೆ ಕೆಲವರು ಅನಿವಾರ್ಯವಾಗಿ ವಲಸೆ ಹೋಗುತ್ತಿದ್ದಾರೆ. ಗಾಂಧೀಜಿಯವರ ಮಾತಿನಂತೆ 'ರೈತರು ಈ ದೇಶದ ಬೆನ್ನೆಲುಬು' ಎನ್ನುವುದು ಸತ್ಯ. ರೈತರ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಯಾದರೆ ಮಾತ್ರ ದೇಶದ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ. ಆದುದರಿಂದ ರೈತರಿಗೆ ಶಕ್ತಿತುಂಬುವ ಕೆಲಸ ಸರ್ಕಾರದಿಂದ ಆಗಬೇಕಾಗಿದೆ. ಸಮಾಜ ಸಮೃದ್ಧಿಯನ್ನು ಕಾಣಬೇಕಾದರೆ ರೈತರ ಅಶೋತ್ತರಗಳಿಗೆ ಸರ್ಕಾರ ಸ್ಪಂದಿಸಲೇಬೇಕು.
ಒಂದು ಕೊಳವೆ ಬಾವಿಗೆ ಸರ್ಕಾರ ಸುಮಾರು 5 ರಿಂದ 6 ಲಕ್ಷ ಖರ್ಚು ಮಾಡುತ್ತಿದೆ. ಆದರೆ ಅದು ಕೆಲವೇ ತಿಂಗಳುಗಳಲ್ಲಿ ಬತ್ತಿ ಹೋಗುವುದರಿಂದ ಸರ್ಕಾರದ ಭೂಕೆಲಸಕ್ಕೆ ಕೋಟ್ಯಂತರ ರುಪಾಯಿ ನಷ್ಟವಾಗಿರುತ್ತದೆ. ಅಂತರ್ಜಲ ಕೂಡ ಕಲುಶಿತಗೊಳ್ಳುತ್ತಿದೆ. ಫ್ಲೋರೈಡ್ ಮಿಶ್ರಿತ ನೀರು ಸೇವಿಸಿ ಜನರಿಗೆ ಹಲವಾರು ರೀತಿಯ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ.
ಪರಮಶಿವಯ್ಯನವರ ವರದಿಯಲ್ಲಿ ಹೇಳಿರುವಂತೆ, 'ಪಶ್ಚಿಮ ಘಟ್ಟಗಳಿಂದ ನೇತ್ರಾವತಿ ಮತ್ತು ಅದರ ಉಪನದಿಗಳ ಮೂಲಕ ಹರಿದು ಅರಬ್ಬಿ ಸಮುದ್ರ ಸೇರುವ ನೀರನ್ನು ಪೂರ್ವಕ್ಕೆ ತಿರುಗಿಸಿ ನಾಲೆಗಳ ಮೂಲಕ ಬಯಲು ಸೀಮೆಯ ಬರಪೀಡಿತ ಜಿಲ್ಲೆಗಳಿಗೆ ನೀರು ಹರಿಸುವ ಶಾಶ್ವತ ನೀರಾವರಿ ಯೋಜನೆ ಅಥಾವ ಎತ್ತಿನ ಹೊಳೆ ಹಾಗೂ ಇನ್ನಿತರ ಉಪನದಿಗಳಿಂದ ನೀರನ್ನು ಎತ್ತಿ ಕೊಳವೆಗಳ ಮೂಲಕ ಪಶ್ಚಿಮ ಘಟ್ಟವನ್ನು ದಾಟಿಸುವುದು ಮತ್ತು ಜಲಾಶಯದಲ್ಲಿ ಸಂಗ್ರಹಿಸುವುದು ನಂತರ ಈ ನೀರನ್ನು ಎತ್ತಿ ಕೊಳವೆಗಳ ಮೂಲಕ ಬಯಲು ಸೀಮೆಗೆ ನೀರನ್ನು ಒದಗಿಸುವ. ಎತ್ತಿನ ಹೊಳೆ ಯೋಜನೆ ಯಾವುದೇ ಇರಲಿ, ಅತೀ ಶೀಘ್ರವಾಗಿ ಜಾರಿಯಾಗಬಹುದಾದಂತಹ, ಆರ್ಥಿಕವಾಗಿ ಮಿತವ್ಯಯವಾದಂತಹ, ಅದಕ್ಕಿಂತ ಹೆಚ್ಚಾಗಿ ರೈತರಿಗೆ, ಸಾಮಾನ್ಯ ಜನರಿಗೆ ಉಪಯೋಗವಾಗುವಂತಹ ಯೋಜನೆ ಅತ್ಯಂತ ತ್ವರಿತವಾಗಿ ವಿವೇಚನೆಯಿಂದ ಜಾರಿಯಾಗಬೇಕಾಗಿದೆ.
ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆ ಅನೇಕ ಸವಾಲುಗಳಿವೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ವೇಗ ನೀಡಬೇಕಾಗಿದೆ. ಎಲ್ಲರನ್ನೂ ಜೊತೆ ಗೂಡಿಸಿಕೊಂಡು ಸರ್ಕಾರ ನಡೆಸಬೇಕಾದ ಈ ಎಲ್ಲಾ ಸವಾಲುಗಳ ನಡುವೆ ಬಯಲು ಸೀಮೆಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ಕೂಡ ಒಂದು ದೊಡ್ಡ ಸವಾಲು. ಸಿದ್ದರಾಮಯ್ಯನವರ ಹೆಗ್ಗುರುತೆಂದರೆ ಅವರು ಇಲ್ಲಿಯವರೆಗೆ ಪಾಲಿಸಿಕೊಂಡು ಬಂದ ಸಿದ್ಧಾಂತಗಳು, ಅವರ ಸಾಮಾಜಿಕ ಚಿಂತನೆಗಳು, ರೈತರ ಮತ್ತು ಬಡವರ ಬಗ್ಗೆ ಅನುಕಂಪ, ಕಾಳಜಿ. ಇವೆಲ್ಲವುಗಳಿಂದಾಗಿ ಜನಸಾಮಾನ್ಯರು ಅವರ ಮೇಲೆ ತುಂಬ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.
ಈ ಹಿಂದೆ ದಿ. ದೇವರಾಜ್ ಅರಸ್ರವರು 'ಉಳುವವನೇ ಹೊಲದೊಡೆಯ' ಎಂಬ ಅತ್ಯಂತ ಪ್ರಗತಿಪರ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತರುವ ಮೂಲಕ ಜನಮನದಲ್ಲಿ ನೆಲೆಯೂರಿದ್ದಾರೆ. ಮಾಜಿ ಮುಖ್ಯ ಮಂತ್ರಿ ಎಸ್. ಎಂ. ಕೃಷ್ಣ ಅವರು 'ಯಶಸ್ವಿನಿ' ಮತ್ತು ಐಟಿ, ಬಿಟಿ. ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ಕೊಟ್ಟು ಕರ್ನಾಟಕ ರಾಜ್ಯವನ್ನು ಮಾಹಿತಿ ತಂತ್ರಜ್ಞಾನದಲ್ಲಿ ವಿಶ್ವವೇ ಗುರುತಿಸುವಂತೆ ಮಾಡಿದ್ದಾರೆ ಮತ್ತು ಮಾಜಿ ಮುಖ್ಯ ಮಂತ್ರಿ ಎಂ ವೀರಪ್ಪಮೊಯ್ಲಿ ರವರು ಸಿ. ಇ. ಟಿ. ಕಾಯ್ದೆಯಂತಹ ಕಾನೂನನ್ನು ರೂಪಿಸಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತಂದಿದ್ದಾರೆ. ಈಗ ಸಿದ್ದರಾಮಯ್ಯನವರ ಸರದಿ. ಬಯಲು ಸೀಮೆಯ ಜಿಲ್ಲೆಗಳಿಗೆ ನೀರನ್ನು ಹರಿಸಲು ಸಿದ್ದರಾಮಯ್ಯನವರು ಭಗೀರಥನಾಗಬೇಕಾಗಿದೆ. ಭಗೀರಥ ಪ್ರಯತ್ನ ಮಾಡಬೇಕಿದೆ.
ಭಗೀರಥನು ಎಷ್ಟೇ ಅಡ್ಡಿ ಆತಂಕಗಳು ಎದುರಾದರೂ ಗಂಗೆಯನ್ನು ಭೂಮಿಗೆ ತರುತ್ತಾನೆ. ಅಂತೆಯೇ ಸಿದ್ದರಾಮಯ್ಯನವರು ಎಲ್ಲರ ಮನವೊಲಿಸಿ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೆ ತಂದರೆ ಅವರು ಬಯಲು ಸೀಮೆಯ ಜನರ ಪಾಲಿಗೆ ಭಗೀರಥ ಆಗುವುದರಲ್ಲಿ ಸಂಶಯವೇ ಇಲ್ಲ.
ಅಧಿಕಾರ ಎಂದೂ ಶಾಶ್ವತ ಅಲ್ಲ. ಅದು ಸೀಮಿತ ಅವಧಿಗೆ ಜನರು ನೀಡಿದ ಜವಬ್ದಾರಿ ಅಷ್ಟೆ. ಆದರೆ ಅಧಿಕಾರಾವಧಿಯಲ್ಲಿ ಮಾಡುವ ಕೆಲಸ ಕಾರ್ಯಗಳಿಂದ ಮುಖ್ಯಮಂತ್ರಿಗಳು ಜನರ ಮನಸ್ಸಿನಲ್ಲಿ ಆಳವಾಗಿ ಬೇರೊರುವ ಪ್ರಯತ್ನ ಮಾಡಬೇಕಿದೆ. ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೆ ತರಲು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ. ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು, ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೆ ತಂದು ಬಯಲು ಸೀಮೆ ಪ್ರದೇಶಕ್ಕೆ ನೀರು ಹರಿಸಿದ್ದೇ ಆದಲ್ಲಿ ರಾಜ್ಯದ ಆರ್ಥಿಕ ಸ್ಥಿತಿಯಲ್ಲಿ ಮಹತ್ತರವಾದ ಬದಲಾವಣೆ ಸಾಧ್ಯವಾಗಲಿದೆ. ಬಯಲು ಸೀಮೆ ಕೃಷಿ, ಕೈಗಾರಿಕೆ, ಪ್ರವಾಸೊದ್ಯಮ ಮತ್ತಿತರ ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದಿ ರಾಜ್ಯದ ಸರ್ವತೋಮುಖ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡಲಿದೆ. ಈ ಜಗತ್ತಿನಲ್ಲಿ ನೀರಾವರಿ ಯೋಜನೆಗಳಿಂದಾಗಿ ಮರಳುಗಾಡಿನಂತಾಗಿದ್ದ ನೆಲವೂ ಸಹ ಫಲವತ್ತಾದ ಕೃಷಿಭೂಮಿಯಾಗಿ ಪರಿವರ್ತನೆಯಾದ ಅದೇಷ್ಟೋ ಉದಾಹರಣೆಗಳಿವೆ.
ನೀರಾವರಿ ಯೋಜನೆಗಳಿಂದಾಗಿ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿದ ಪಂಜಾಬ್ ನಮಗೆ ಉತ್ತಮ ಉದಾಹರಣೆಯಾಗಿದೆ. ಆದುದರಿಂದ ಬಯಲು ಸೀಮೆಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಿ, ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು, ರೈತರಿಗೆ ಉತ್ತಮ ಮಾಹಿತಿ ಮತ್ತು ತರಬೇತಿಯನ್ನು ನೀಡಿ ಬೆಳೆಗಳಿಗೆ ಉತ್ತಮ ಮಾರುಕಟ್ಟೆಗಳನ್ನು ಒದಗಿಸಿದರೆ, ಮುಂದೊಂದು ದಿನ ಬರಿದಾದ ಈ ಬಯಲು ಸೀಮೆಯಲ್ಲಿ ಬಂಗಾರದಂಥ ಬೆಳೆ ಬೆಳೆದು ಆ ಮೂಲಕ ರಾಜ್ಯದ, ದೇಶದ ಅಭಿವೃದ್ಧಿಗೆ ಈ ಭಾಗದ ರೈತರು ಗುರುತರವಾದ ಕೊಡುಗೆ ನೀಡುವುದಲ್ಲಿ ಸಂದೇಹವಿಲ್ಲ.
ಯೋಜನೆ ಯಾವುದೇ ಇರಲಿ ಅದನ್ನು ಸಾಕಾರಗೊಳಿಸಲು ಬೇಕಿರುವುದು ರಾಜಕೀಯ ಇಚ್ಛಾಶಕ್ತಿ. ಯಾವುದೇ ಹೊಸ ಯೋಜನೆ ರೂಪಿಸುವಾಗ ಪರ ಮತ್ತು ವಿರೋಧ ಚರ್ಚೆಗಳು ಇದ್ದೆ ಇರುತ್ತವೆ. ಇಲ್ಲಿ ನಮಗೆ ಎದುರಾಗಿರುವುದು 8 ಜಿಲ್ಲೆಗಳ ಜನರ ಅಳಿವು ಉಳಿವಿನ ಪ್ರಶ್ನೆ. ಒಂದು ಸ್ಪಷ್ಟವಾದ ದೂರ ದೃಷ್ಟಿಕೋನದ ಮೂಲಕ ಎಲ್ಲರನ್ನೂ ಒಗ್ಗೂಡಿಸಿಕೊಂಡು ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಬೇಕು.
ಈ ಭಾಗದ ಎಲ್ಲಾ ಶಾಸಕರು, ಸಂಸದರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಮತ್ತು ರೈತರು, ವಿಧಾನ ಸೌಧದ ಒಳಗೆ ಮತ್ತು ಹೊರಗೆ ಕಾನೂನಿನ ಚೌಕಟ್ಟಿನಲ್ಲಿ ಹೋರಾಟವನ್ನು ಮಾಡಿ ಜನರ ಹಿತದೃಷ್ಟಿಯಿಂದ ಯೋಜನೆಯನ್ನು ಜಾರಿಗೆ ತರಲು ಭಗೀರಥ ಪ್ರಯತ್ನವನ್ನೇ ಮಾಡಬೇಕಿದೆ. ಈ ಮಹೋನ್ನತ ಕಾರ್ಯದಲ್ಲಿ ಚಿಕ್ಕಬಳ್ಳಾಪುರದ ಜವಾಬ್ದಾರಿಯುತ ಶಾಸಕನಾಗಿ, ರೈತ ಕುಟುಂಬದ ಹಿನ್ನಲೆಯಿಂದ ಬಂದಿರುವ ನಾನು ಯಾವುದೇ ರೀತಿಯಲ್ಲಿ ಬೇಕಾದರೂ ತೊಡಗಿಸಿಕೊಂಡು ಕಾರ್ಯ ನಿರ್ವಹಿಸಲು ಸಿದ್ಧನಿದ್ದೇನೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖನಾಗಿದ್ದೇನೆ.
- ಡಾ.ಕೆ ಸುಧಾಕರ್
ಶಾಸಕರು, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

