ಅಂಕಣಗಳು

ಬಿಜೆಪಿಯನ್ನು ಬಿಟ್ಟರೆ, ನಿತೀಶ್ ಕೆಟ್ಟರು!

Published On :

ಫಸ್ಟ್‌ಪೋಸ್ಟ್ ಜಾಲತಾಣ, 'ನಿತೀಶ್ ಕುಮಾರ್ 2014ರಲ್ಲಿ ಬಿಜೆಪಿಯೊಂದಿಗೆ ಸಂಬಂಧ ಕಡಿದುಕೊಳ್ಳಲಿದ್ದಾರಾ' ಎನ್ನುವ ಚರ್ಚೆಗೆ ಚಿನ್ಮಯ್ ಎನ್ನುವ ಓದುಗರೊಬ್ಬರು ಬರೆದಿದ್ದ ಪ್ರತಿಕ್ರಿಯೆಯನ್ನು ಲೇಖನದ ರೂಪದಲ್ಲಿ ಪ್ರಕಟಿಸಿದೆ. 'ಏಕೆ ನಿತೀಶ್ ಬಿಜೆಪಿಯನ್ನು ಬಿಟ್ಟಿರಲಾರರು' ಎಂಬ ಬಗ್ಗೆ ಚಿನ್ಮಯ್ ಹಲವಾರು ಕಾರಣಗಳನ್ನು ಕೊಡುತ್ತಾರೆ:
-------
ದೆಹಲಿಯಲ್ಲಿ ಕುಳಿತ ಕೆಲವು ರಾಜಕೀಯ ವಿಶ್ಲೇಷಕರಿಗೆ ಬಿಹಾರ ರಾಜಕೀಯದ ಕಿಂಚಿತ್ ಪರಿಜ್ಞಾನವೂ ಇಲ್ಲ.
ಅಸಂಬದ್ಧ ಅಭಿಪ್ರಾಯಗಳನ್ನುದುರಿಸುತ್ತಾ, ನಿತೀಶ್ ಕುಮಾರ್‌ಗೆ 'ಇಲ್ಲದ' ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಆದರೆ ಸತ್ಯವೇ ಬೇರೆಯಿದೆ. ಯಾವ ರೀತಿಯಲ್ಲಿ ನೋಡಿದರೂ ನಿತೀಶ್ ಕುಮಾರ್ ಬಿಜೆಪಿಯನ್ನು ಬಿಟ್ಟಿರಲಾರದ ಪರಿಸ್ಥಿತಿಗೆ ಸಿಲುಕಿದ್ದಾರೆ.
ಅಂತಹ ಮೂರ್ಖ ವಿಶ್ಲೇಷಣಕಾರರ ವಿಶ್ಲೇಷಣೆಗಳಲ್ಲಿ ಎಷ್ಟೊಂದು ಹಸೀ ಸುಳ್ಳಿದೆ ಎನ್ನುವುದನ್ನು ನೋಡೋಣ:
2010ರ ಬಿಹಾರ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮತ ಗಳಿಗೆಯ ಪ್ರಮಾಣ ಇಂತಿದೆ- ಜೆಡಿಯು(ಶೇ. 22.61), ಬಿಜೆಪಿ(ಶೇ. 16.41), ಆರ್‌ಜೆಡಿ(18.84 ಪ್ರತಿಶತ), ಎಲ್‌ಜೆಪಿ(6.75 ಪ್ರತಿಶತ) ಕಾಂಗ್ರೆಸ್(ಶೇ.8.38).
ಆದರೆ ಕೆಲವು ಕುತೂಹಲಕರ ಅಂಶಗಳೂ ಇದರಲ್ಲಿ ಅಡಗಿವೆ.
1)ಆ ಚುನಾವಣೆಯಲ್ಲಿ 243 ಸೀಟುಗಳಿಗೆ ನಡೆದ ಸ್ಪರ್ಧೆಯಲ್ಲಿ ಬಿಜೆಪಿ ಸ್ಪರ್ಧಿಸಿದ್ದು ಕೇವಲ 102 ಸ್ಥಾನಗಳಲ್ಲಿ. ಏಕೆಂದರೆ ಉಳಿದ ಸ್ಥಾನಗಳಿಗೆ ನಿತೀಶ್ ಕುಮಾರ್ ನೇತೃತ್ವದ ಅದರ ಮಿತ್ರಪಕ್ಷ ಕಣಕ್ಕಿಳಿದಿತ್ತು. ಹಾಗಾಗೇ ಬಿಜೆಪಿಯ ಓಟು ಹಂಚಿಕೆಯ ಪ್ರಮಾಣ 16.46 ಪ್ರತಿಶತದಷ್ಟಿದೆ. ಇನ್ನೊಂದೆಡೆ ಕಾಂಗ್ರೆಸ್ ಎಲ್ಲಾ 243 ಸ್ಥಾನಗಳಿಗೆ ಸ್ಪರ್ಧಿಸಿದರೂ ಅದು ಗಳಿಸಿದ್ದು 8.38 ಪ್ರತಿಶತ ಮತಗಳನ್ನು ಮಾತ್ರ. ಇದನ್ನು ವ್ಯರ್ಥ ಓಟುಗಳೆಂದೇ ಕರೆಯಬಹುದು. ಏಕೆಂದರೆ ಇಷ್ಟು ಕಡಿಮೆ ಮತಗಳಿಸಿದ ಪಕ್ಷದೊಂದಿಗೆ ಕೈ ಜೋಡಿಸಿದರೆ ಯಾವುದೇ ಪಕ್ಷಕ್ಕೂ ಉಪಯೋಗವಾಗುತ್ತಿರಲಿಲ್ಲ.
2)90ರ ದಶಕದಿಂದಲೂ ಬಿಹಾರ್‌ನಲ್ಲಿ ಬಿಜೆಪಿಯ ಓಟು ಗಳಿಕೆ ಪ್ರಮಾಣ 13-15 ಪ್ರತಿಶತದ ಅಜುಬಾಜು ಇದೆ. ಇನ್ನೊಂದೆಡೆ ಕಾಂಗ್ರೆಸ್ 8-10 ಪ್ರತಿಶತಕ್ಕೆ ತಟಸ್ಥವಾಗಿ ನಿಂತಿದೆ. ಹಾಗೆ ನೋಡಿದರೆ ಕಳೆದ 17 ವರ್ಷಗಳಲ್ಲಿ ಕಾಂಗ್ರೆಸ್ ಒಟ್ಟಾರೆ ಮತಗಳಲ್ಲಿ 15 ಪ್ರತಿಶತದಷ್ಟು ಮತಗಳಿಸಿದ ಉದಾಹರಣೆಯೇ ಇಲ್ಲ. ಇದೇ ಕಾರಣಕ್ಕಾಗಿಯೇ ಒಮ್ಮೆ ಲಾಲು ಪ್ರಸಾದ್ ಯಾದವ್, 'ಬಿಹಾರದಲ್ಲಿ ಕಾಂಗ್ರೆಸ್‌ಗೆ ಸೀಟು ಬಿಟ್ಟುಕೊಡುವುದು ಸೋಲಿಗೆ ಸಮ' ಎಂದು ಹೇಳಿದ್ದರು. ಕಾಂಗ್ರೆಸ್ ಒಂದನ್ನು ಬಿಟ್ಟು ಬಿಹಾರದ ಉಳಿದ ಪಕ್ಷಗಳಿಗೆಲ್ಲ ಅದರದ್ದೇ ಆದ ಮತದಾರರಿದ್ದಾರೆ. ಬಿಜೆಪಿಗೆ ಮೇಲ್ವರ್ಗಗಳ, ಕಾಯಾಸ್ತ್ ಮತ್ತು ಬನಿಯಾ ಜನಾಂಗಗಳ ಬೆಂಬಲವಿದ್ದರೆ, ಆರ್‌ಜೆಡಿಗೆ ಮುಸಲ್ಮಾನರ ಮತಗಳಿವೆ. ಇನ್ನು ಎಲ್‌ಜಿಪಿ ಪಾಸ್ಮಂದಾ ಮುಸಲ್ಮಾನರು ಮತ್ತು ಪಾಸ್ವಾನ್‌ಗಳಿಂದಾಗಿ ಜೀವಂತವಾಗಿದ್ದರೆ, ಹಿಂದುಳಿದ ವರ್ಗಗಳು, ಕುರ್ಮಿಗಳು ಮತ್ತು ಕೆಲವು ಪಾಸ್ಮಂದಾ ಮುಸಲ್ಮಾನರಿಂದಾಗಿ ಜೆಡಿಯು ಉಸಿರಾಡುತ್ತಿದೆ.
4) ಮೇಲ್ವರ್ಗದವರ ಸಂಖ್ಯೆ ಕೋಸಿ, ಮಿಥಿಲಾ ಮತ್ತು ಮಗಧ ಪ್ರಾಂತ್ಯಗಳಲ್ಲಿ ಹೆಚ್ಚಾಗಿ ಇದೆ. ಅದರಲ್ಲೂ ಅವರು ಧರ್‌ಭಾಂಗಾ, ಪಟ್ನಾ, ಭಾಗಲ್‌ಪುರ್, ಗಯಾ, ಔರಂಗಾಬಾದ್, ಮಧುಬನಿ, ಸಮಸ್ತಿಪುರ್ ಮತ್ತು ನಳಂದಾಗಳಲ್ಲಿ ಬಹುಸಂಖ್ಯಾರಾಗಿದ್ದಾರೆ. ಮೇಲ್ವರ್ಗದ ಮತದಾರರಿಗೆ ಒಂದು ಗುಣವಿದೆ. ಅವರ ನಡೆಯನ್ನು ಊಹಿಸುವುದು ಬಹಳ ಕಷ್ಟ, ಅಲ್ಲದೆ ತಾವು ಇಷ್ಟಪಟ್ಟ ಪಕ್ಷ ಸೋಲಿನ ಸನಿಹ ಬಂದಾಕ್ಷಣ ಅದನ್ನಲ್ಲೇ ಬಿಟ್ಟು ಗೆಲ್ಲುವ ಕುದುರೆಯ ಜೊತೆಗೆ ಕೈ ಜೋಡಿಸಿಬಿಡುವ ಸಮಯಸಾಧಕತನ ಅವರಲ್ಲಿರುತ್ತದೆ. ಇಂತಹ ಗುಣವನ್ನು ದೇಶದ ಎಲ್ಲಾ ರಾಜ್ಯಗಳ ಮೇಲ್ವರ್ಗದಲ್ಲಿ ಕಾಣಬಹುದು. ಆದರೆ ಬಿಹಾರವೊಂದನ್ನು ಬಿಟ್ಟು!
ಬಿಜೆಪಿ ಎಷ್ಟೊ ವರ್ಷಗಳವರೆಗೆ ವಿರೋಧ ಪಕ್ಷದ ಸ್ಥಾನದಲ್ಲಿದ್ದರೂ ಕೂಡ ಅಲ್ಲಿನ ಮೇಲ್ವರ್ಗ, ಮೊದಲಿನಿಂದಲೂ ಅದೇ ಪಕ್ಷಕ್ಕೇ ಮತ ಹಾಕುತ್ತಾ ಬಂದಿದೆ. ಬಿಜೆಪಿಯೊಂದನ್ನು ಬಿಟ್ಟು ಉಳಿದೆಲ್ಲಾ ಪಕ್ಷಗಳು ಮೊದಲಿನಿಂದಲೂ ಕೆಳವರ್ಗದ ಮತ್ತು ಅಲ್ಪಸಂಖ್ಯಾತರನ್ನೇ ನೆಚ್ಚಿಕೊಂಡಿರುವುದು ಇದಕ್ಕೆ ಇನ್ನೊಂದು ಕಾರಣ.
5)ಬಹಳಷ್ಟು ವಿಶ್ಲೇಷಕರು ಅಂದುಕೊಳ್ಳುವುದೇನೆಂದರೆ, ಓಡಿಶಾದಲ್ಲಿ ಬಿಜೆಡಿ ಹೇಗೆ ಬಿಜೆಪಿಯೊಂದಿಗೆ ಸಂಬಂಧ ಕಡಿದುಕೊಂಡಿತೋ ಅದೇ ರೀತಿ ನಿತೀಶ್ ಮತ್ತು ಜೆಡಿಯು ಬಿಜೆಪಿಯನ್ನು ದೂರತಳ್ಳಿದರೆ(ಮೋದಿಯ ನೆಪವೊಡ್ಡಿ) ಮೇಲ್ವರ್ಗದ ಮತಗಳನ್ನೆಲ್ಲ ತಾನೇ ಬಾಚಿಕೊಳ್ಳಬಹುದು ಎಂದು. ಇದರೊಂದಿಗೆ ಅದಕ್ಕೆ ಮೊದಲಿನಿಂದಲೂ ಸಿಗುತ್ತಿರುವ ಹಿಂದುಳಿದ ವರ್ಗಗಳ ಮತ್ತು ಮುಸಲ್ಮಾನರ ಮತಗಳೂ ಸೇರುವುದರಿಂದ ನಿತೀಶ್ ಸುಲಭವಾಗಿ ಚುನಾವಣೆಯಲ್ಲಿ ಕೇಕೆ ಹಾಕಬಹುದು ಎನ್ನುವುದು ಅವರ ವಾದ. ಆದರೆ ಗ್ರಾಮ ಪಂಚಾಯತಿಯಿಂದ ಹಿಡಿದು ವಿಧಾನಸಭಾ ಚುನಾವಣೆಗಳೆಲ್ಲದರಲ್ಲಿ ಮೇಲ್ವರ್ಗದ ಮತದಾರರು ಬಿಜೆಪಿಗೇ ಮಣೆ ಹಾಕುತ್ತಾ ಬಂದಿರುವುದನ್ನು ನೋಡಿದರೆ, ವಿಶ್ಲೇಷಕರ ಲೆಕ್ಕಾಚಾರ ಉಲ್ಟಾ ಆಗುವುದಂತೂ ನಿಶ್ಚಿತವೆಂದು ತಿಳಿಯುತ್ತದೆ.
6)ಇನ್ನೊಂದು ಕುತೂಹಲಕರ ವಿಷಯವಿದೆ. ಜೆಡಿಯುಗೆ ಮುಸಲ್ಮಾನರ ಬೆಂಬಲವಿರಬಹುದಾದರೂ ಆ 'ಸಂಖ್ಯೆ' ಮಾತ್ರ ಉತ್ಪ್ರೇಕ್ಷೆಯಿಂದ ಕೂಡಿದೆ. ಸಾರ್ವಜನಿಕ ಅಭಿಪ್ರಾಯವನ್ನು ನೋಡಿದಾಗ, ಬಿಹಾರದ ಮುಸಲ್ಮಾನರಿಗೆ ದೆಹಲಿ ಮಾಧ್ಯಮಗಳಲ್ಲಿ ತೋರಿಸುವಷ್ಟರ ಮಟ್ಟದಲ್ಲಿ ನಿತೀಶ್ ಬಗ್ಗೆ ಮಮತೆ ಇಲ್ಲ ಎನ್ನುವುದು ಗೊತ್ತಾಗುತ್ತದೆ.
ಈ ಅಂಕಿ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಿ: - 40 ಪ್ರತಿಶತಕ್ಕಿಂತಲೂ ಹೆಚ್ಚು ಮುಸ್ಲಿಂ ಮತಗಳಿದ್ದ 5 ಸ್ಥಾನಗಳಲ್ಲಿ ಜೆಡಿಯು ಗೆದ್ದದ್ದು ಕೇವಲ 1 ಸ್ಥಾನವನ್ನು ಮಾತ್ರ(ಅದಾಗ್ಯೂ ಅದು 5 ಸ್ಥಾನಗಳಿಗೂ ಮುಸ್ಲಿಂ ನಾಯಕರನ್ನೇ ಕಣಕ್ಕಿಳಿಸಿತ್ತು!). ಈ ಸ್ಥಾನಗಳಲ್ಲಿನ ಮತ ಹಂಚಿಕೆಯಲ್ಲಿ ಜೆಡಿಯುನ ಪಾಲು 32.3 ಪ್ರತಿಶತವಿದ್ದರೆ, ಆರ್‌ಜೆಡಿ-ಎಲ್‌ಜೆಪಿಯ ಪಾಲು ತುಸು ಕಡಿಮೆ, ಅಂದರೆ 28.3 ಪ್ರತಿಶತದಷ್ಟಿತ್ತು.
30-40 ಪ್ರತಿಶತದಷ್ಟು ಮುಸ್ಲಿಂ ಮತಗಳಿದ್ದ 10 ಸೀಟುಗಳಲ್ಲಿ ಬಿಜೆಪಿ ಗೆದ್ದದ್ದು 6 ಸ್ಥಾನಗಳನ್ನು. ಆದರೆ ಅದು ಸ್ಪರ್ಧಿಸಿದ್ದೂ 6 ಸ್ಥಾನಗಳಿಗೆ ಮಾತ್ರ. ಅಂದರೆ ಬಿಜೆಪಿ ತಾನು ಸ್ಪರ್ಧಿಸಿದ ಸ್ಥಾನಗಳನ್ನೆಲ್ಲ 'ಕ್ಲೀನ್‌ಸ್ವೀಪ್‌' ಮಾಡಿಕೊಂಡಿತು. ಉಳಿದ 4 ಸ್ಥಾನಗಳಿಗೆ ಸ್ಪರ್ಧಿಸಿದ ಜೆಡಿಯು ಗೆದ್ದುಕೊಂಡದ್ದು ಕೇವಲ 1 ಸೀಟನ್ನು!
ನಿಜ ಹೇಳಬೇಕೆಂದರೆ, ಜೆಡಿಯು-ಬಿಜೆಪಿಯ ಐತಿಹಾಸಿಕ ಗೆಲುವಿಗೆ ಮುಖ್ಯ ಕಾರಣವಾದದ್ದು ಒಬಿಸಿ ಮತ್ತು ಮೇಲ್ವರ್ಗಗಳ ಬೆಂಬಲವೇ ಹೊರತು ಮುಸಲ್ಮಾನರಲ್ಲ.
ಈ ಎಲ್ಲಾ ಅಂಕಿ ಅಂಶಗಳ ಬಗ್ಗೆ ನಿತೀಶ್ ಕುಮಾರ್‌ಗೆ ಚೆನ್ನಾಗಿ ಗೊತ್ತಿದೆ. ಹಾಗಾಗೆ ಮಾಧ್ಯಮಗಳ ಮಂತ್ರಕ್ಕೆ  ಮರುಳಾಗುವಂತಹ ಆಸಾಮಿ ಅವರಲ್ಲ. ಅದಾಗ್ಯೂ ಮುಖ್ಯಮಂತ್ರಿಯಾಗಲು ಅವರು ಪಾಪ 16 ವರ್ಷಗಳವರೆಗೆ ಕಾದಿದ್ದಾರೆ. ಒಂದು ವೇಳೆ ತಾವು ಬಿಜೆಪಿಯೊಂದಿಗೆ ಬಂಧ ಮುರಿದುಕೊಂಡರೆ, ಲಾಭವಾಗುವುದು ಲಾಲು-ಪಾಸ್ವಾನ್ ಬಳಗಕ್ಕೆ ಎನ್ನುವುದು ಅವರಿಗೆ ಗೊತ್ತಿಲ್ಲದೇ ಇಲ್ಲ.
ನಿತೀಶ್ ಬೆಕ್ಕಿನಂತೆ ಮೆಲ್ಲಗೆ ಕಾಲೊಳಗೆ ತಮ್ಮ ಬಾಲ ಮುದುರಿಕೊಂಡು ಬಿಜೆಪಿಯ ಹಿಂದ್ಹಿಂದೆ ಹೋಗಲಿದ್ದಾರೆ ಎನ್ನುವುದರಲ್ಲಿ ಸಂದೇಹಬೇಡ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.