ಪಾಪಿಗಳಿದ್ದಲ್ಲಿ ನೀರಿರುವುದಿಲ್ಲ ಎಂಬ ನಂಬಿಕೆ ಸತ್ಯವಲ್ಲವೇ?

ಮೊನ್ನೆ ಮೊನ್ನೆ (ಜೂನ್ 5) ಮತ್ತೊಂದು ವಿಶ್ವ ಪರಿಸರ ದಿನ ಬಂದು ಹೋಯಿತು.
Updated on: 

ಮೊನ್ನೆ ಮೊನ್ನೆ (ಜೂನ್5) ಮತ್ತೊಂದು ವಿಶ್ವ ಪರಿಸರ ದಿನ ಬಂದು ಹೋಯಿತು. ಒಂದಷ್ಟು ಸಂಘ ಸಂಸ್ಥೆಗಳು, ಎನ್‌ಜಿಒಗಳು, ಸರಕಾರಿ ಪ್ರಾಯೋಜಿತ ಯೋಜನೆಗಳು, ಶಾಲಾ ಕಾಲೇಜುಗಳಲ್ಲಿ ಈ ಹಿನ್ನೆಲೆಯಲ್ಲಿ ಒಂದಷ್ಟು ಕಾರ್ಯಕ್ರಮಗಳು, ಸೆಮಿನಾರ್‌ಗಳು ಭರದಿಂದ ನಡೆದವು. ಮಾಧ್ಯಮಗಳು ತಾವೇನೂ ಕಡಿಮೆ ಇಲ್ಲವೆಂಬಂತೆ ಪತ್ರಿಕೆಗಳ ಮಾಸ್ಟ್‌ಹೆಡ್‌ಗಳನ್ನೇ ಹಸಿರಾಗಿಸಿದ್ದವು, ಟೀವಿ ಸ್ಕ್ರೋಲ್‌ಗಳಲ್ಲಿ ಹಸಿರು ಪಟ್ಟಿ ಇಣುಕಿತ್ತು. ಮೆಲ್ಲಗೆ ಒಂದೆರಡು ಹದಮಳೆಯನ್ನೂ ನಾಡು ಕಂಡಿದ್ದರಿಂದ ಉತ್ತೇಜಿತರಾದ ಕೆಲವು ಸಂಘಟನೆಗಳು ವನಮಹೋತ್ಸವದ ಹೆಸರಿನಲ್ಲಿ ಗಣ್ಯರನ್ನು ಕರೆಸಿ ಗಿಡಗಳನ್ನು ನೆಡಿಸಿ ತಮ್ಮ  ಕರ್ತವ್ಯ(?) ಮೆರೆದಿದ್ದಾರೆ.
ಪರಿಸರಕ್ಕೂ, ಅರಣ್ಯಕ್ಕೂ, ನೀರಿಗೂ ತೀರಾ ಹತ್ತಿರದ ಸಂಬಂಧವಿದೆ. ಅರಣ್ಯವಿಲ್ಲದ ಪರಿಸರ ಎಂದರೆ ಅದು ಅರ್ಥಹೀನ. ಹಾಗೆಯೇ ಅರಣ್ಯವಿಲ್ಲದೇ ನೀರಿನ ಸಮೃದ್ಧತೆ ಇರಲೂ ಸಾಧ್ಯ ಇಲ್ಲ. ಅರಣ್ಯಕ್ಕೂ ನೀರಿಗೂ ಅವಿನಾಭಾವ ಸಂಬಂಧ. ಹಾಗಾಗಿಯೇ ಅವರೆಡೂ ದಿನಗಳು ಪರಸ್ಪರ ಅಕ್ಕ ಪಕ್ಕದಲ್ಲಿಯೇ ಬರುತ್ತವೆ. (ಮಾರ್ಚ್ 21, 22) ನಮ್ಮಲ್ಲಿ ಬಹುತೇಕ ಬೇಸಿಗೆಯ ದಿನಗಳವು. ನೀರಿನ ತುಟ್ಟಿ ಕಾಣಿಸಿಕೊಳ್ಳಲಾರಂಭಿಸುತ್ತಿದ್ದಂತೆಯೇ ಅರಣ್ಯದೆಡೆಗಳೂ ಬಿಟ್ಟುಕೊಂಡು ಬಿಸಿಲು ಒಳ ನುಗ್ಗುತ್ತಿರುತ್ತದೆ. ಎರಡು ತಿಂಗಳು ಕಳೆದರೆ ಪರಿಸರ ದಿನ. ನಮಗೆ ಅಭ್ಯಾಸವಾಗಿಬಿಟ್ಟಿದೆ. ಜಲ ದಿನಕ್ಕೆ ಒಂದಷ್ಟು ಘೋಷಣೆಗಳು, ಪ್ಲೆಕಾರ್ಡ್ ಪ್ರದರ್ಶನ ಹಾಗೆಯೇ ಅರಣ್ಯ ದಿನಕ್ಕೆ ವನ್ಯ ಪ್ರಾಣಿಗಳ ಸಂರಕ್ಷಣೆಯ ಭಾಷಣವೋ, ಜಾಥಾವೋ ಇರುತ್ತದೆ (ಏಕೆಂದರೆ ಆಗ ಸಸಿ ನೆಟ್ಟರೆ ನೀರು ಹಾಕುವವರಿರುವುದಿಲ್ಲ!) ಇನ್ನು ಪರಿಸರ ದಿನಕ್ಕೆ ಸಸಿ ನೆಡುವುದು.
 ತಪ್ಪು ಮಾಡುತ್ತಿದ್ದೇವೆ. ಪರಿಸರ ದಿನದಂದು ನಾವು ಹೀಗೆ ಗಿಡಗಳನ್ನು ನೆಟ್ಟು ಖಂಡಿತಾ ತಪ್ಪು ಮಾಡುತ್ತಿದ್ದೇವೆಂಬುದು ಎಷ್ಟು ಜನರಿಗೆ ಗೊತ್ತು? ಹೀಗೆ ನಾವು ಗಿಡ ನೆಡುವುದರ ಮೂಲಕ, ಮರ ಬೆಳೆಸುವ ಹುಮ್ಮಸ್ಸಿನಲ್ಲಿ ಭೂಮಿಯನ್ನು ಬರಡಾಗಿಸುತ್ತಿದ್ದೇವೆ!
ಹೀಗೆ ಹೇಳಿದರೆ ನೀವು ನಗಬಹುದು. ಹಾಸ್ಯ ಮಾಡಬಹುದು. ಹುಬ್ಬೇರಿಸಬಹುದು. ಬುದ್ಧಿ ಇಲ್ಲವೆಂದು ವ್ಯಂಗ್ಯ ಮಾಡಬಹುದು. ಅಯ್ಯೋ, ಏನೋ ಸರಿ ಇಲ್ಲ ಎಂದು ನಿರ್ಲಕ್ಷ್ಯ ಮಾಡಲೂಬಹುದು. ಆದರೆ ಇದು ನೂರಕ್ಕೆ ನೂರು ಸತ್ಯ. ಅವೈಜ್ಞಾನಿಕ ರೀತಿಯಲ್ಲಿ ಸಸ್ಯ ಬೆಳೆಸುವುದರಿಂದ ಅಂತರ್ಜಲ ಬರಿದಾಗಿ ಹೋಗುತ್ತದೆ. ಔದ್ಯಮೀಕರಣ, ನಗರೀಕರಣದ ದಿನಗಳು ಸಾಮಾನ್ಯವಾದಂತೆಲ್ಲ ಅರಣ್ಯದ ಚಿತ್ರಣವೇ ಮರೆಯಾಗಿ ಹೋಗುತ್ತದೆ. ಹೀಗಾಗಿ ಅದರ ಪುನರುಜ್ಜೀವನದ ಮಾತುಗಳ ಬೆನ್ನಲ್ಲೇ ಸಸಿ ನೆಡುವ ಫ್ಯಾಷನ್ ಸಹ ಪ್ರಾಮುಖ್ಯ ಪಡೆದಿದೆ. ಮೊದಲೆಲ್ಲ ಅರಣ್ಯ ಇಲಾಖೆಯೇ ಉಚಿತ ಸಸಿಗಳನ್ನು ವಿತರಿಸುತ್ತಿತ್ತು. ಆದರೆ ಸಸಿಗಳ ದುರ್ಬಳಕೆ ಮತ್ತು ನಿರ್ವಹಣೆಯಲ್ಲಿನ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಇದೀಗ ಹಣ ತೆತ್ತು ಸಸಿಗಳನ್ನು ಕೊಳ್ಳುವ ಪದ್ಧತಿ ಜಾರಿಗೊಳಿಸಲಾಗಿದೆ. ಆಧುನಿಕ ನಾಗರಿಕತೆಯ ಧಾವಂತವೋ, ಮೂರ್ಖತನವೋ, ಅಜ್ಞಾನವೋ ಅಂತೂ ಇಲಾಖೆಯ ಈ ಉದ್ದೇಶವೂ ಸಾಫಲ್ಯ ಕಾಣುತ್ತಿಲ್ಲ. ಹಣ ತೆರಬೇಕಾದ ಅನಿವಾರ್ಯದ ಹಿಂದೆ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಚೌಕಾಸಿಯೂ ಕೆಲಸಕ್ಕಿಳಿದಿದೆ. ಸಸ್ಯ ವೈವಿಧ್ಯದ ಪರಿಚಯ ಹಾಗೂ ಅವುಗಳ ಮಹತ್ವದ ಕುರಿತಾದ ಮಾಹಿತಿಯ ಕೊನೆಗೆ ಅಗ್ಗಕ್ಕೆ ಸಿಗುವ ಏಕ ಜಾತಿಯ, ಶೀಘ್ರ ಬೆಳವಣಿಗೆ ಕಾಣುವ ಸಸಿಗಳೇ ಇಂಥ 'ಒಣಮಹೋತ್ಸವಕಾರರ' ಆದ್ಯತೆಯಾಗುತ್ತಿದೆ. ಯಾವುದೇ ಸಸಿ ನೆಡುವುದು ತಪ್ಪಲ್ಲ. ಆದರೆ ಆಯಾ ಪರಿಸರಕ್ಕೆ ಹೊಂದಿಕೆಯಾಗದ, ಅರಣ್ಯ ವೈವಿಧ್ಯಕ್ಕೆ ಧಕ್ಕೆ ತರುವ ಸಸ್ಯಗಳನ್ನು ತಂದು ಮನಬಂದಂತೆ ಬೆಳೆಸುವುದರಲ್ಲಿ ಖಂಡಿತಾ ಸಾರ್ಥಕ್ಯ ಇಲ್ಲ.
ರಾಜ್ಯದಲ್ಲಿ ಹಿಂದೊಮ್ಮೆ ನಡೆದಿದ್ದ ನೀಲಗಿರಿ ವಿರೋಧಿ ಆಂದೋಲನವನ್ನು ನೆನಪಿಸಿಕೊಳ್ಳಿ. ಕಾಗದ ಕಾರ್ಖಾನೆ, ಪಾಲಿಫೈಬರ್ ಉದ್ದಿಮೆಯ ಲಾಬಿಗೆ ಮಣಿದು ಬೆಟ್ಟ ಗುಡ್ಡಗಳೆನ್ನದೇ ನೀಲಗಿರಿ ತುಂಬಲು ಆರಂಭಿಸಲಾಗಿತ್ತು.  ಮಂದಿಗೂ ಸುಲಭದಲ್ಲಿ ನಾಲ್ಕು ಕಾಸು ಸಂಪಾದಿಸಬಹುದೆಂದು ಅನ್ನಿಸಿರಲಿಕ್ಕೂ ಸಾಕು. ಸುಮ್ಮನೆ ಪಾಳು ಬಿದ್ದ ಬೋಳು ಬೇಣದಲ್ಲಿ ಒಂದೈದು ಸಾವಿರ ಖರ್ಚು ಮಾಡಿ ನೀಲಗಿರಿ ಸಸಿಗಳನ್ನು ಊರಿದರೆ ಸಾಕು, ನಾಲ್ಕಾರು ವರ್ಷಗಳಲ್ಲಿ ಹಾಕಿದ ಬಂಡವಾಳಕ್ಕೆ ಹತ್ತರಷ್ಟು ಕೈ ಸೇರುತ್ತದೆ. ನಮ್ಮಪ್ಪನ ಗಂಟೇನು ಹೋದೀತು? ಇದೇ ಧೋರಣೆಯೊಂದಿಗೆ ಎಲ್ಲಿ ನೋಡಿದರೂ ನೀಲಗಿರಿ ಆಕ್ರಮಿಸಿಕೊಳ್ಳತೊಡಗಿತು. ಕೊನೆಗೆ ಹೊಲ ಗದ್ದೆಗಳನ್ನೂ ಬಿಡಲಿಲ್ಲ.
ಶಿವರಾಮ ಕಾರಂತರು ಇದರ ವಿರುದ್ಧ ಬೀದಿಗಿಳಿದರು. 'ಹಾಗಲ್ಲ, ಹೀಗೆ' ಎಂದು ಬುದ್ಧಿ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಜನರಿರಲಿಲ್ಲ. ಕೊನೆಗೆ ಅನಿವಾರ್ಯವಾಗಿ ಕಾರಂತರು ಇದೇ ವಿಚಾರದಲ್ಲಿ ಕೋರ್ಟ್‌ಗೂ ಹೋಗಬೇಕಾಯಿತು. ಅದೃಷ್ಟಕ್ಕೆ ನ್ಯಾಯ ಕಾರಂತರ (ನಮ್ಮೆಲ್ಲರ) ಪರವಾಗಿತ್ತು. ಸುಪ್ರೀಂ ಕೋರ್ಟ್ 'ಇಂಥ ಹುಡುಗಾಟಿಕೆಗಳಿಗೆಲ್ಲ ಕಡಿವಾಣ ಹಾಕಿ' ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿತು. ಪರಿಣಾಮ ನೀಲಗಿರಿ ಸಾಮ್ರಾಜ್ಯ ಪತನವಾಯಿತು, ನಾಡು ಗಂಡಾಂತರದಿಂದ ಮುಕ್ತವಾಯಿತಾದರೂ ಕೋಲಾರ, ಚಿತ್ರದುರ್ಗ, ಹಾವೇರಿಯಂಥ ಜಿಲ್ಲೆಗಳಲ್ಲಿ ನೀಲಗಿರಿ ಸಾಕಷ್ಟು 'ಲಿಗಾಡಿ' ಎಬ್ಬಿಸಿಯಾಗಿತ್ತು.
ಇಲ್ಲಿ ಒಂದು ಮಾತನ್ನು ಅರ್ಥಮಾಡಿಕೊಳ್ಳಲೇಬೇಕು. ಹಸಿರಾಗಿದ್ದವೆಲ್ಲವೂ ಪರಿಸರಕ್ಕೆ ಹಿತವಾದದ್ದೆಂಬ ಭ್ರಮೆ ಬೇಡ. ಹಾಗೊಮ್ಮೆ ಹಸಿರೆಲ್ಲವೂ ಪೂರಕವಾಗುತ್ತವೆ ಎನ್ನುವಂತಾಗಿದ್ದರೆ ಪಾರ್ಥೇನಿಯಂನ ವಿರುದ್ಧ ಸಮರ ಸಾರುವ ಅಗತ್ಯವಿರಲಿಲ್ಲ. ಹಾಗೆಂದು, ನೀಲಗಿರಿ, ಪಾರ್ಥೇನಿಯಂಗಳು ಅನುಪಯುಕ್ತವೂ ಅಲ್ಲ. ಆದರೆ ಕರ್ನಾಟಕದಂಥ, ಅದರಲ್ಲೂ ಪಶ್ಚಿಮ ಘಟ್ಟಗಳ ಸಮೃದ್ಧ ಸಸ್ಯ ವೈವಿಧ್ಯದ ತಾಣದಲ್ಲಿ ನಾವು 'ಪ್ಲಾಂಟೇಷನ್ ಸಂಸ್ಕೃತಿ' ಯನ್ನು ಹೇರುವುದು ಅಪಚಾರವಾಗುತ್ತದೆ; ಹಾಗೆಯೇ ಒಣ ಪ್ರದೇಶಗಳು ಹಸಿರಾಗಬೇಕೆಂಬ ಹುಮ್ಮಸ್ಸಿನಲ್ಲಿ ಮಿತಿಮೀರಿ ಸಸಿಗಳನ್ನು ಬೆಳೆಸುವುದೂ.
ಇದು ಸ್ವತಃ ಅರಣ್ಯ ತಜ್ಞರ ಅನುಭವ. ವಿಪರೀತ ಗಿಡಗಳನ್ನು ಬೆಳೆಸಿದ ಮಾತ್ರಕ್ಕೆ, ಎಲ್ಲೆಡೆ 'ಕಾಡು' (?) ಸೃಷ್ಟಿಯಾದ ಮಾತ್ರಕ್ಕೆ ಎಲ್ಲ ಸಮಸ್ಯೆಗಳೂ ಬಗೆ ಹರಿದು ಬಿಡುವುದಿಲ್ಲ. ಎಲ್ಲಿ, ಎಷ್ಟು, ಯಾವ ಸಸ್ಯಗಳು ಇರಬೇಕೋ ಅದಿದ್ದರೆ ಮಾತ್ರ ಒಳಿತು. 'ಕಾಡು'  ಎನ್ನುವುದು ತಾನೇ ತಾನಾಗಿ ಬೆಳೆಯಬೇಕು. ಅದು ನಿಸರ್ಗ ಸಹಜ ವ್ಯಾಪಾರ. ಅದರ ಬದಲಾಗಿ ಬೋಳು ಬೆಟ್ಟದಲ್ಲೂ ಕಾಡನ್ನು ಬಲವಂತವಾಗಿ 'ಸೃಷ್ಟಿ' ಮಾಡಬೇಕೆಂದು, ನೀಲಗಿರಿ, ಅಕೇಶಿಯಾ, ತೇಗ, ಗಾಳಿ ಗಿಡಗಳನ್ನು ತುಂಬಿದರೆ ಅದು ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದಕ್ಕೆ ದಕ್ಷಿಣ ಆಫ್ರಿಕಾವೇ ಸಾಕ್ಷಿ.
ಒಣ ಪ್ರದೇಶದಲ್ಲಿ ಅರಣ್ಯ ಬೆಳೆದರೆ ನೀರು ನಷ್ಟವಾಗುತ್ತದೆ. ಭೂಮಿಯ ಮೇಲ್ಮೈ ಎಷ್ಟೇ ಶುಷ್ಕವಾಗಿದ್ದರೂ, ಮಣ್ಣಿನ ಕಣಗಳಲ್ಲಿ ತೇವಾಂಶ ಇದ್ದೇ ಇರುತ್ತದೆ. ಹಾಗೆಯೇ ನೆಲದ ಒಳ ಪದರವೂ ನೀರಿನ ಸೆಲೆಯನ್ನು ಹೊಂದಿರುತ್ತದೆ. ಇಂಥ ಪ್ರದೇಶದಲ್ಲಿ ನೀಲಗಿರಿಯಂಥ ಸಸ್ಯಗಳು ಬೆಳೆಯಲಾರಂಭಿಸಿದರೆ ಅವುಗಳ ಬೇರು ತೀರಾ ಆಳದವರೆಗೆ ಇಳಿದು, ಭೂಮಿಯೊಳಗಣ ನೀರನ್ನೆಲ್ಲ ಹೀರಿ ಮೇಲಕ್ಕೆ ಸಾಗಿಸುತ್ತದೆ. ಯಾವುದೇ ಸಸ್ಯ, ಅದು ಎಷ್ಟು ಎತ್ತರಕ್ಕೆ ಬೆಳೆದಿರುತ್ತದೋ, ಅಷ್ಟೇ ಆಳದವರೆಗೆ ಬೇರುಗಳನ್ನು ನೆಲದಡಿ ಇಳಿಬಿಟ್ಟಿರುತ್ತದೆ. ಅಂದರೆ ಅತಿ ಎತ್ತರಕ್ಕೆ ಹೋಗುವ ನೀಲಗಿರಿಯಂಥ ಸಸ್ಯ ತೀರಾ ಆಳದಲ್ಲಿರುವ ಜಲಸೆಲೆಯನ್ನು ಸುಲಭವಾಗಿ ಹೀರಬಲ್ಲವು.
ಮಳೆ ಚಕ್ರದ 'ಜಂಕ್ಷನ್‌' ಸಸ್ಯಗಳು. ನೆಲದ ನೀರನ್ನು ಸಸ್ಯಗಳು ಹೀರಿ ಆವಿಯಾಗಿಸಿ ಆಗಸಕ್ಕೆ ಬಿಡುತ್ತವೆ ಎಂಬುದು ಪ್ರಾಥಮಿಕ ಜ್ಞಾನ. ಒಣಪ್ರದೇಶದ ನೀರು ಹೀಗೆ ವೇಗವಾಗಿ ಆರಿ ಹೋಗಲು ಸಸ್ಯಗಳೇ ಕಾರಣವೆಂದರೆ ಅರ್ಥವಾದೀತು. ನಿಜವಾಗಿ ಭೂಮಿಗೆ ಬಿದ್ದ ನೀರು ಬಹಳಷ್ಟು ಬಾರಿ ಇಂಗುವ ಮೊದಲೇ ಆವಿಯಾಗುವ ಅಪಾಯವೂ ಇಲ್ಲದಿಲ್ಲ.
ಈ ಹಿನ್ನೆಲೆಯಲ್ಲಿ ಹೇಗೆಂದರೆ ಹಾಗೆ, ಎಲ್ಲೆಂದರಲ್ಲಿ ಮರ ಬೆಳೆಸುವುದರಿಂದ ಮಳೆ ಚಕ್ರ ವ್ಯತ್ಯಾಸವಾಗಬಹುದು ಎನ್ನುತ್ತಾರೆ ತಜ್ಞರು. ಬಹುಶಃ ಇಂದು ಅಕಾಲಿಕವಾಗಿ ಸುರಿಯುತ್ತಿರುವ ಭಾರಿ ಮಳೆ, ಕಾಲ, ದೇಶ ತಪ್ಪಿ ತಿರುಗುತ್ತಿರುವ ಮೇಘ ಮಾಲೆಗೆ ಹೀಗೆ ಮನಬಂದಂತೆ ಬೆಳೆಸುತ್ತಿರುವ ಮರಗಳೇ ಕಾರಣವಾಗಿರಬಹುದು.
ಏನೇ ಇರಲಿ, ಪರಿಸರವನ್ನು ಪ್ಲಾಂಟೇಷನ್ ಪ್ರವೃತ್ತಿ ಭ್ರಷ್ಟವಾಗಿಸಿದೆ ಎಂಬುದಂತೂ ಸತ್ಯ. ಭಾರೀ ಕೈಗಾರಿಕೆಗಳು, ಗಣಿಗಾರಿಕಾ ಕಂಪನಿಗಳು ಸೃಷ್ಟಿ ಮಾಡಿರುವ ನಕಲಿ ಕಾಡುಗಳನ್ನು ಗಮನಿಸಿದರೆ ಇದರ ಅರಿವಾಗುತ್ತದೆ. ಕುದುರೆಮುಖ ವ್ಯಾಪ್ತಿಯಲ್ಲಿ ನಡೆದ ಸುದೀರ್ಘ ಗಣಿಗಾರಿಕೆಯ ಪರಿಣಾಮ ಸಹ್ಯಾದ್ರಿಯ ಸಹಜ ಸಸ್ಯ ವೈವಿಧ್ಯ ನಾಶವಾಯಿತು. ಪರಿಸರ ಪರರು ಇದರ ವಿರುದ್ಧ ಸೊಲ್ಲೆತ್ತುತ್ತಿದ್ದಂತೆ ಜಾಗೃತರಾದ ಕಂಪನಿಯವರು, ಅರಣ್ಯ ಪುನರ್ ಅಭಿವೃದ್ಧಿಯ ಮಾತುಗಳನ್ನಾಡಿದರು. ಸಮೃದ್ಧ ಕಾಡಿದ್ದ ತುಂಗಾ ನದಿಯ ದಂಡೆಯಲ್ಲಿ ಇಂದು ಏಕ ಜಾತಿಯ ವೃಕ್ಷಗಳೇ ತುಂಬಿಹೋಗಿವೆ. ಒಂದು ಕಾಲದಲ್ಲಿ ಅಮೂಲ್ಯ ಜೀವ ಸಂಕುಲದ ಆಗರವಾಗಿದ್ದ ಆ ಭಾಗದ ಬೆಟ್ಟಗಳು, ಸಾವಿರಾರು ವರ್ಷಗಳಿಂದ ನೆಲ-ಜಲವನ್ನು ಪೊರೆದಿದ್ದ ಅರಣ್ಯ ಪ್ರದೇಶ ಬೋಳಾದ ನಾಲ್ಕಾರು ವರ್ಷಗಳಲ್ಲೇ ಹಿಮಾಲಯ ಭಾಗದ 'ಸೂಚಿ ಪರ್ಣ' ಕಾಡುಗಳಂತೆ ಗೋಚರಿಸುತ್ತಿದೆ. ಇದು ಪ್ಲಾಂಟೇಷನ್ ಮಹಿಮೆಗೊಂದು ಸ್ಪಷ್ಟ ಉದಾಹರಣೆ.
ಇಂಥ ಕಾರಣಗಳಿಂದಲೇ ಪ್ಲಾಂಟೇಷನ್ ಬೆಳೆಸಲು, ಶುಷ್ಕ ಪ್ರದೇಶದಲ್ಲಿ ಅರಣ್ಯ 'ಸೃಷ್ಟಿ'ಸಲು ದಕ್ಷಿಣ ಆಫ್ರಿಕಾ ಸರಕಾರ ನಿರ್ಬಂಧ ಹೇರಿದೆ. ಖಾಸಗಿ ಅರಣ್ಯಕ್ಕಿಂತ ಸಹಜ ಕುರುಚಲುಗಳೇ ಯೋಗ್ಯವೆಂಬ ಸ್ಪಷ್ಟ ಜಾಗೃತಿ ಅಲ್ಲಿ ಮೂಡಿದೆ. ಅವೈಜ್ಞಾನಿಕವಾಗಿ ಬೆಳೆಯುವ ಪ್ಲಾಂಟೇಷನ್‌ಗಳು ಅಂತರ್ಜಲದ ವಿಷಯದಲ್ಲಿ ಬೋರ್ವೆಲ್‌ಗಳಿಗಿಂತ ಅಪಾಯಕಾರಿ.
ಹಾಗೆಯೇ ಕೃಷಿ ಬೆಳೆಗಳಿಗೆ ಅತಿಯಾದ ನೀರುಣಿಸುವುದರಿಂದಲೂ ಜಲಚಕ್ರ ದಿಕ್ಕು ತಪ್ಪುತ್ತದೆ ಎಂಬುದನ್ನು ಮರೆಯಲಾಗದು. ಒಂದು ಅಂಕಿ-ಅಂಶದ ಪ್ರಕಾರ ಕೃಷಿಗಾಗಿ ಬಳಸುವ ಶೇ.70ರಷ್ಟು ನೀರು ವ್ಯರ್ಥವಾಗುತ್ತಿದೆ. ವೈಜ್ಞಾನಿಕವಲ್ಲದ ರೀತಿಯ ನೀರು ಸಂಗ್ರಹ, ಬೆಳೆಗಳಿಗೆ ಅನಗತ್ಯ ನೀರು ಪೂರೈಕೆಗಳಿಂದ ಹೀಗಾಗುತ್ತಿದೆ. ನಮ್ಮಲ್ಲಿ ಕೇವಲ ಒಂದೇ ಒಂದು ಟೊಮೇಟೊ ಬೆಳೆಯಲು 30 ಲೀಟರ್ ನೀರು ಬಳಸುತ್ತಿದ್ದೇವೆ ಎಂದರೆ ನಂಬಲಾದೀತೆ? ಹಾಗೆಯೇ ಒಂದು ಕೆ.ಜಿ. ಧಾನ್ಯದ ಕೃಷಿಗೆ ನಾವು ಬಳಸುತ್ತಿರುವುದು ಬರೋಬ್ಬರಿ ಸಾವಿರ ಲೀಟರ್ ನೀರು. ಹೀಗೆ ಲೆಕ್ಕ ಹಾಕುತ್ತ ಹೋದರೆ ನಾವು ಒಂದು ದಿನಕ್ಕೆ ತಿನ್ನುವ ಒಟ್ಟೂ ಆಹಾರವನ್ನು ಬೆಳೆಯಲು ಸರಾಸರಿ 2.5 ಸಾವಿರ ಲೀಟರ್ ನೀರು ಬಳಕೆಯಾಗುತ್ತದೆ.
ಗುಜರಾತಿನಲ್ಲಿ ಇಂದು 10 ಸಾವಿರ ಚೆಕ್‌ಡ್ಯಾಮ್‌ಗಳು ಸಮೃದ್ಧಿಯನ್ನು ಕಟ್ಟಿ ಕೊಡುತ್ತಿವೆ. ಅಲ್ಲಿ ನೀರಿಗಾಗಿ ಸರಿಸುಮಾರು 50 ರು.ಗಳಷ್ಟು ಹೂಡಿಕೆ ಮಾಡುವ ರೈತ ಮೂರು ವರ್ಷಗಳಲ್ಲಿ ಒಂದೂವರೆ ಪಟ್ಟು ಹೆಚ್ಚು ಅಂದರೆ 150 ರು.ಗಳಿಗೂ ಹೆಚ್ಚು ಲಾಭ ಪಡೆಯುತ್ತಿದ್ದಾನೆ. ಗುಜರಾತ್ ನೀರಾವರಿ ವ್ಯವಸ್ಥೆಯಲ್ಲಿನ ಸುಧಾರಣೆ ದೇಶದ ಕೃಷಿ ಉತ್ಪಾದಕತೆಯನ್ನು ಐದು ಪಟ್ಟು ಹೆಚ್ಚಿಸುತ್ತಿದೆ. ಆಂಧ್ರದಲ್ಲಿನ ಕಡಿಮೆ ವೆಚ್ಚದ ಹನಿನೀರಾವರಿ ಯೋಜನೆಗಳು ಉತ್ಪಾದನೆಯನ್ನು ದ್ವಿಗುಣಗೊಳಿಸಿವೆ. ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲೂ ಮಿತ ನೀರು ಬಳಕೆಯ ಕೃಷಿ ಪದ್ಧತಿಗಳು ಅಲ್ಲಿನ ರೈತರನ್ನು ಯಶಸ್ಸಿನೆಡೆಗೆ ಕೊಂಡೊಯ್ದಿವೆ.
ಈ ಭೂಮಿಯಲ್ಲಿರುವ ಒಟ್ಟು ನೀರು ಸಾವಿರದ ಮುನ್ನೂರ ತೊಂಬತ್ತು ದಶಲಕ್ಷ ಘನ ಕಿ.ಮೀ ಗಳಷ್ಟು. ಅಂದರೆ 1390ರ ಮುಂದೆ 17 ಸೊನ್ನೆ ಹಾಕಿದರೆ ಎಷ್ಟಾಗುತ್ತದೋ ಅಷ್ಟು ಲೀಟರ್. ಅಂದಿನಿಂದ ಇಂದಿನವರೆಗೂ ಈ ಪ್ರಮಾಣ ಬದಲಾಗಿಲ್ಲ. ನೀರಿನ ವಿಚಾರದಲ್ಲಿ ಪಾರದರ್ಶಕತೆ ಹಾಗೂ ಲೆಕ್ಕಾಚಾರದ ಕೊರತೆ, ಸೂಕ್ತ ನಿರ್ವಹಣಾ ನಾಯಕತ್ವದ ಕೊರತೆ, ಮೂಲಸೌಕರ್ಯದ ಕೊರತೆ, ಬದ್ಧತೆಯ ಕೊರತೆ, ಯೋಜನೆ ಹಾಗೂ ವ್ಯವಸ್ಥಾಪನೆಯ ಕೊರತೆಯಿಂದಾಗಿ ನಮ್ಮಲ್ಲಿ ಸಮಸ್ಯೆ ಇನ್ನಷ್ಟು ಉಲ್ಬಣಿಸಿದೆ. ನೀರಿನ ವಿಚಾರದಲ್ಲಿ ಈ ಯಾವ ಲೆಕ್ಕಾಚಾರವನ್ನೂ ನಾವು ಪರಿಗಣಿಸದಿರುವುದೇ ಕ್ಷಾಮಕ್ಕೆ ಕಾರಣ. ನಿಜವಾಗಿ ಜಗತ್ತಿನ ನೀರು, ಮಳೆ ಪ್ರಮಾಣ ಯಾವತ್ತೂ ಬದಲಾವಣೆಯಾಗುವುದೇ ಇಲ್ಲ. ಅದು ಸದಾ ಸ್ಥಿರವಾಗಿರುತ್ತದೆ. ಆದರೆ ನಮ್ಮ ಬುದ್ಧಿಗೇಡಿ ಪ್ರವೃತ್ತಿಗೆ ಸಿಲುಕಿ ಅದು ಏರುಪೇರಾಗುತ್ತದೆ. ಈ ದೃಷ್ಟಿಯಿಂದ ಪಾಪಿಗಳಿದ್ದಲ್ಲಿ ನೀರಿರುವುದಿಲ್ಲ ಎಂಬ ನಂಬಿಕೆ ಸತ್ಯವಲ್ಲವೇ?

- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com