ಬಹಳ ಎತ್ತರದ ಹಿಮಾಚ್ಛಾದಿತ ಪರ್ವತಗಳ ಮೇಲೆ ಏನೂ ಬೆಳೆಯುವುದಿಲ್ಲ ಎಂಬರ್ಥದ ಕವಿತೆಯೊಂದನ್ನು ಬರೆದಿದ್ದರು ಅಟಲ್ ಬಿಹಾರಿ ವಾಜಪೇಯಿ. ಎಲ್ಲರಿಂದಲೂ ದೂರವಾಗಿಸುವ ಆ ಎತ್ತರಕ್ಕೆ ನನ್ನನ್ನು ಏರಿಸುವುದು ಬೇಡ ಎಂಬ ಮೊರೆಯೊಂದು ಆ ಕವಿತೆಯಲ್ಲಿತ್ತು.
ಬಹಳ ಯಶಸ್ವಿ ಅಥವಾ ಶ್ರೀಮಂತ ವ್ಯಕ್ತಿ ಎನ್ನಿಸಿಕೊಂಡವನಿಗೆ, ಇಲ್ಲವೇ ಅಧಿಕಾರದ ತುಂಬ ಆಯಕಟ್ಟಿನ ಜಾಗದಲ್ಲಿ ಇರುವವನಿಗೆ ನಿಜಕ್ಕೂ ಸೃಜನಶೀಲವಾದದ್ದು ದೊರೆಯುವುದು ಸಾಧ್ಯವೇ ಎಂಬುದೊಂದು ಪ್ರಶ್ನೆ. ಏಕೆಂದರೆ ಆತನ ಸುತ್ತಲಿರುವವರೆಲ್ಲ ಬಾಸ್ ಆದವನನ್ನು ಸಂತುಷ್ಟಗೊಳಿಸುವುದಕ್ಕೆಂದೇ ಹಪಹಪಿಸಿಕೊಂಡಿರುತ್ತಾರೆ. ಆತನಿಗೆ ಎಲ್ಲರಿಂದಲೂ ಎಂಟರ್‌ಟೈನ್‌ಮೆಂಟ್ ಖಚಿತವಾಗಿ ಸಿಗುತ್ತದಾದರೂ ಹೊಸ ವಿಚಾರ ಅಥವಾ ಆತ ನಂಬಿಕೊಂಡಿದ್ದನ್ನು ಕದಲಿಸುವಂಥದ್ದು, ಇನ್ಯಾವುದೋ ಮಗ್ಗುಲಿನಲ್ಲಿ ಚಿಂತಿಸುವಂತೆ ಮಾಡುವಂಥದ್ದು ಸಿಗುವುದು ವಿರಳವೇನೋ. 'ಸಾರ್ ನೀವು ಮಾಡಿದ್ದು ಬಹಳ ಸರಿ ಇದೆ' ಎನ್ನುವವರೇ ಹೆಚ್ಚಾಗಿ ಬಿಡುತ್ತಾರೆ. ಈ ಬಗ್ಗೆ ಹೀಗೂ ವಿಚಾರ ಹರಿಸಬಹುದಿತ್ತು ಎಂಬ ಹೊಳಹು ಗೊತ್ತಿರುವವರೂ ಹೊಗಳುಭಟರ ನಡುವೆ ಅದನ್ನು ಹೇಳಲು ಹೋಗುವುದಿಲ್ಲ. ಎಲ್ಲರೂ ಹೊಗಳಿಕೊಂಡಿರುವಾಗ ತಾನು ಮಾತ್ರ ವಿಮರ್ಶಿಸಿ ನಿಷ್ಠುರವಾಗುವ ಸಾಧ್ಯತೆಯನ್ನು ಮೈಮೇಲೆ ಎಳೆದುಕೊಳ್ಳುವುದಕ್ಕೆ ಬುದ್ಧಿವಂತನಾದನು ತಯಾರಿರುವುದಿಲ್ಲ. ದಡ್ಡರಿಗೆ ವಿಮರ್ಶಿಸುವ ತಾಕತ್ತೇ ಇರುವುದಿಲ್ಲ. ಹೀಗಾಗಿ ಯಶಸ್ವಿ ನಾಯಕನಾದವನು ತನ್ನ ಸರಿ-ತಪ್ಪುಗಳನ್ನು ತಾನು ಮಾತ್ರವೇ ವಿಶ್ಲೇಷಿಸಿಕೊಳ್ಳಬೇಕಾದ ಹಂತ ತಲುಪಿಬಿಡುತ್ತಾನೆ. ಅದು ಹಿಮದ ಬೆಟ್ಟದ ನೆತ್ತಿಯ ಮೇಲೆ ಸಿಂಹಾಸನ ಹಾಕಿ ಕುಳಿತ ಹಾಗೆ. ನೋಡುವವರಿಗೆ ಅವನೇರಿರುವ ಎತ್ತರದ ಬಗ್ಗೆ ಅಚ್ಚರಿ. ಸುತ್ತಲೂ ಬಹುಪರಾಕ್‌ಗಳ ಝೇಂಕಾರ. ಆದರೆ ಅಷ್ಟೆಲ್ಲ ಗದ್ದಲಗಳ ನಡುವೆಯೂ ಆತ ಏಕಾಂಗಿಯಾಗಿಬಿಡುತ್ತಾನೇನೋ ಅನ್ನಿಸುತ್ತದೆ. ಏಕೆಂದರೆ ಅಲ್ಲಿ ಪ್ರಶಂಸೆಯ ಪುಷ್ಪವೃಷ್ಟಿಯ ಹೊರತಾಗಿ ಮತ್ತೇನೂ ಗೋಚರಿಸುವುದಿಲ್ಲ.
ಇತ್ತೀಚೆಗೆ ರಿಲಾಯನ್ಸ್ ಇಂಡಸ್ಟ್ರಿಯ ವಾರ್ಷಿಕ ಸಭೆ ಮುಂಬೈನಲ್ಲಿ ನಡೆಯಿತು. ಮುಕೇಶ್ ಅಂಬಾನಿಯವರೇನೋ ಕಂಪನಿಯನ್ನು ಇನ್ನೂ ಔನತ್ಯಕ್ಕೇರಿಸುವ ಬಗ್ಗೆ, ಮುಂದಿನ ಮೂರು ವರ್ಷಗಳಲ್ಲಿ 1.5 ಟ್ರಿಲಿಯನ್ ರುಪಾಯಿಗಳ ಹೂಡಿಕೆ ಮಾಡುವ ಬಗ್ಗೆ ಉತ್ಸಾಹದಿಂದ ಮಾತನಾಡಿದರು. ಆದರೆ ಅವರ ಸುತ್ತ ಜಮಾಯಿಸಿದ್ದ ಷೇರ್‌ಹೋಲ್ಡರ್ಸ್‌ಗಳ ವರ್ತನೆಯೇ ತಮಾಷೆಯದಾಗಿತ್ತು. ಷೇರ್‌ಹೋಲ್ಡರ್ಸ್‌ಗಳ ಪೈಕಿ ಕೆಲವರು ಆಡಿದ ಮಾತುಗಳನ್ನು ಕೇಳಿದರೆ ಅವರು ಮುಕೇಶ್ ಅಂಬಾನಿಯನ್ನು ಹೊಗಳಿ ಅಟ್ಟಕ್ಕೇರಿಸುವುದಕ್ಕೆಂದೇ ತಮ್ಮೆಲ್ಲ ಕುಶಾಗ್ರಮತಿಯನ್ನು ಹೊಳಪು ಮಾಡಿಕೊಂಡು ಬಂದಂತಿತ್ತು. ನಿಜ, ಉದ್ಯಮದ ಸಭೆಗಳಲ್ಲಿ ಕೇವಲ ಗಂಭೀರ ಮಾತುಗಳೇ ಇರಬೇಕು ಎಂದು ಅಪೇಕ್ಷಿಸುವುದು ಸರಿಯಲ್ಲವೇನೋ. ಆದರೆ ಅಲ್ಲಿ ಆಡುವ ಮಾತು, ಮಾಡುವ ಫನ್ ಮಿದುಳಿನಲ್ಲಿರುವ ಆಹ್ಲಾದವನ್ನೂ, ಆಲೋಚನೆಗಳ ಸೊಗಡನ್ನೂ ಬಿಚ್ಚಿಡಬೇಕಲ್ಲವೇ? ಯೋಚನೆಗಳ ಬಲದಿಂದ ತಾನು ನಾಯಕನ ಮನಸ್ಸು ಗೆಲ್ಲಬೇಕೇ ಹೊರತು ಹೊಗಳುವಿಕೆಯ ಸ್ಪರ್ಧೆಯಲ್ಲಿ ದೌಡಾಯಿಸುವುದರಿಂದ ಅಲ್ಲ ಎಂಬ ಅರಿವಿರುವವನಿಂದ ಮಾತ್ರ ಸೃಷ್ಟಿಶೀಲತೆ ಸಾಧ್ಯ. ಆದರೆ ಆ ಸಭೆಯಲ್ಲಿ ಕೆಲ ಷೇರ್‌ಹೋಲ್ಡ್‌ರ್ಸ್‌ಗಳು ಏನು ಮಾತಾಡಿದರು ಅಂತ ಓದಿಕೊಳ್ಳಿ...
- ಸರ್.. ನೀವು ಇಂಡಿಯಾದ ಕೋಹಿನೂರ್ ವಜ್ರವಿದ್ದಂತೆ ಸರ್...
- ಸರ್.. ಕಂಪನಿಯ ಹಣಕಾಸನ್ನು ಇಷ್ಟು ಉತ್ತಮವಾಗಿ ನಿರ್ವಹಿಸುತ್ತಿರುವ ನೀವು ದೇಶವನ್ನು ಆಳುವುದಕ್ಕೆ ಏಕೆ ಮುಂದಾಗಬಾರದು?
- ಸರ್ ನಿಮಗೆ ಝಡ್ ಸೆಕ್ಯುರಿಟಿ ಅಷ್ಟೇ ಅಲ್ಲ, ಎ ಟು ಝಡ್ ಸೆಕ್ಯುರಿಟಿ ಕೊಡಬೇಕು!
- ಬಂಗಾರದ ಮೌಲ್ಯ ಹೇಗೆ ಕಡಿಮೆಯಾಗದೋ ಹಾಗೆಯೇ ರಿಲಾಯನ್ಸ್ ಷೇರುಗಳ ಬೆಲೆ ಕಮ್ಮಿಯಾದರೂ ಅವುಗಳ ಮೌಲ್ಯ ಕಡಿಮೆಯಾಗದು!
- ಸರ್, ಮುಂಬೈ ಇಂಡಿಯನ್ಸ್ ತಂಡದ ಯಶಸ್ಸಿಗೆ ನಾನು ನೀತು ಭಾಬಿಗೆ ಅಭಿನಂದನೆ ಸಲ್ಲಿಸುತ್ತೇನೆ.
- ಸರ್ ಕಂಪನಿಯ ವಾರ್ಷಿಕ ವರದಿಯನ್ನು ಬಹಳ ವರ್ಣಮಯವಾಗಿ ರೂಪಿಸಿದ್ದಕ್ಕೆ ಅಭಿನಂದನೆ ಸಲ್ಲಿಸುವೆ. ಆದರೆ ಇದರಲ್ಲಿ ನೀತು ಭಾಬಿಯ ಫೋಟೊ ಇರಬೇಕಿತ್ತು!
- ಸರ್.. ಇವತ್ತು ಇಡೀ ಮನುಕುಲವೇ ರಿಲಾಯನ್ಸ್ ಕಂಪನಿಯನ್ನು ಅವಲಂಬಿಸಿದೆ.
- ಒಬ್ಬ ಷೇರ್‌ಹೋಲ್ಡರ್ ಆಗಿ ಕಂಪನಿಯ ಬಗ್ಗೆ ನನಗೆ ಯಾವ ಅಸಂತೋಷವೂ ಇಲ್ಲ. ಆದರೆ ಧೀರೂಭಾಯ್ ಅಂಬಾನಿಯವರ ಫೋಟೋದಲ್ಲಿ ಅವರು ಹಳದಿ ಹೂವುಗಳ ಮಾಲೆ ಹಾಕಿರುವಂತೆ ಚಿತ್ರಿಸಲಾಗಿದೆ. ಅಂಥ ಮಹಾಪುರುಷನಿಗೆ ಗುಲಾಬಿ ಹೂವಿನ ಮಾಲೆಯೇ ಸೂಕ್ತ ಎಂಬುದು ನನ್ನ ಅಭಿಪ್ರಾಯ.
ಇಷ್ಟೆಲ್ಲ ಹಾಗೂ ಇದೇ ಧಾಟಿಯ ಇನ್ನೂ ಹಲವಾರು ಹೊಗಳಿಕೆಯ ಹೊನ್ನ ಶೂಲಗಳಿಂದ ಇರಿಸಿಕೊಂಡ ಮುಕೇಶ್ ಅಂಬಾನಿಯವರ ಸ್ಥಿತಿಗೆ ಮರುಕ ಪಡದೇ ಇನ್ನೇನು ಮಾಡೋಣ ಹೇಳಿ? ಸಮಾಧಾನದ ಸಂಗತಿ ಎಂದರೆ ಕೆಲ ಷೇರುದಾರರಾದರೂ ತಮ್ಮ ಅಸಂತೋಷವನ್ನು ಹೇಳಿಕೊಳ್ಳುವುದಕ್ಕೆ ಹಿಂದಡಿ ಇಡಲಿಲ್ಲ ಎಂಬುದು. ತಮಗೆ ನೀಡುತ್ತಿರುವ ಡಿವಿಡೆಂಡ್ ಹೆಚ್ಚು ಮಾಡಿ, ತಮ್ಮತ್ತ ಇನ್ನಷ್ಟು ಗಮನ ಕೊಡಿ ಎಂದು ಕೇಳಿಕೊಂಡವರೂ ಕೆಲವರಿದ್ದರು. ಅಂಥ ಎರಡು ಅಭಿಪ್ರಾಯಗಳತ್ತ ಕಣ್ಣು ಹಾಯಿಸುವುದಾದರೆ...
- ಸರ್ ನಿಮಗೆ ಝಡ್ ಸೆಕ್ಯುರಿಟಿ ನೀಡಿರುವುದನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ. ಆದರೆ ನಮಗೂ 'ಎಬಿಸಿಡಿ' ಭದ್ರತೆಯ ಅಗತ್ಯವಿದೆ. ಎ ಅಂದರೆ ಅಪ್ರಸಿಯೇಷನ್, ಬಿ ಅಂದರೆ ಬೋನಸ್, ಸಿ ಅಂದರೆ ಕ್ಯಾಶ್ ಹಾಗೂ ಡಿ ಎಂದರೆ ಡಿವಿಡೆಂಡ್.
- ಸರ್ ನೀವು ಕೊಡುತ್ತಿರುವ 9 ರುಪಾಯಿ ಡಿವಿಡೆಂಡ್ ಏನಕ್ಕೂ ಸಾಕಾಗದು. ಅಲ್ಲದೇ ಈ ಸಭೆಗೆ ನಾವು ಬೆಳಗಿನಿಂದ ಉಪಸ್ಥಿತರಿದ್ದೇವೆ. ಉಪಾಹಾರದ ವ್ಯವಸ್ಥೆಯೂ ಇಲ್ಲ. ಮುಂದಿನ ಬಾರಿ ವಡಾ-ಪಾವ್ ಆದರೂ ಕೊಡುವ ವ್ಯವಸ್ಥೆ ಮಾಡಿ!
ನೀನು ಕೇಜ್ರಿವಾಲಾನಾ? ಬೇಡಿಯಾ?
ಈ ಅಂಕಣ ಓದುಗರಿಗೆ ಸುಹೇಲ್ ಸೇಠ್ ಅಪರಿಚಿತನಲ್ಲ. ಆತ ಆಗಾಗ ಪ್ರಸ್ತಾಪವಾಗುತ್ತಾನೆ, ಇಣುಕುತ್ತಾನೆ. ನಾನು ಆತನ ಟ್ವೀಟ್‌ಗಳನ್ನು ಹಾಗೂ ಕೋಲ್ಕತ್ತಾದ 'ದಿ ಟೆಲಿಗ್ರಾಫ್' ಪತ್ರಿಕೆಯ ಓದುಗರ ಪ್ರಶ್ನೆಗಳಿಗೆ ನೀಡುವ ಉತ್ತರಗಳನ್ನು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ಆತನ ದೃಷ್ಟಿಯಿದೆಯಲ್ಲ, ಅದು ಎಲ್ಲರಿಗಿಂತ ಭಿನ್ನ ಹಾಗೂ ನೇರ. ಆತ ಯಾವತ್ತೂ ಮಾತುಗಳನ್ನು ಉಳಿಸಿಕೊಳ್ಳುವುದಿಲ್ಲ. ಹೇಳಬೇಕಾದುದನ್ನು ನೇರಾನೇರ ಒಪ್ಪಿಸುತ್ತಾನೆ. ಬೇರೆಯವರಿಗೆ ಬೇಸರವಾದರೂ ಪರವಾಗಿಲ್ಲ, ಒಪ್ಪಿಸಬೇಕಾದುದನ್ನು ಚೆಂದವಾಗಿ ಮಾಡಿರುತ್ತಾನೆ. ಇತ್ತೀಚಿನ ಸಂಚಿಕೆಯೊಂದರಲ್ಲಿ ಹತ್ತನೇ ಕ್ಲಾಸಿನಲ್ಲಿ ಓದುತ್ತಿರುವ ಹದಿನಾರು ವರ್ಷದ ಹುಡುಗಿಯೊಬ್ಬಳು ಕೇಳಿದ್ದಳು-'ನನ್ನ ಕ್ಲಾಸ್‌ಮೇಟ್ ಒಬ್ಬಳು ಆಗಾಗ ಕ್ಲಾಸಿಗೆ ಚಕ್ಕರ್ ಹೊಡೆಯುತ್ತಾಳೆ ಹಾಗೂ ಮರುದಿನ ಬಂದು ಅಟೆಂಡೆನ್ಸ್ ಬುಕ್‌ನಲ್ಲಿ ಹಾಜರಿದ್ದುದಾಗಿ ತಿದ್ದುತ್ತಾಳೆ. ಆಕೆ ಶ್ರೀಮಂತರ ಮನೆ ಹುಡುಗಿ. ಈ ವಿಷಯವನ್ನು ಅವಳಿಗೆ ಹೇಳೋಣ ಅಂದ್ರೆ ಆಕೆ ದೊಡ್ಡ ರಂಪ ಮಾಡಬಹುದೆಂಬ ಭಯ. ಆದರೆ ಅವಳು ಮಾಡುತ್ತಿರುವುದು ಸರಿಯಲ್ಲ. ನನಗೆ ತೊಂದರೆಯಾಗದಂತೆ ಈ ವಿಷಯವನ್ನು ನಾನು ಹೇಗೆ ನಿಭಾಯಿಸಲಿ? ದಯವಿಟ್ಟು ಸಲಹೆ ನೀಡಿ.'
ಈ ಪ್ರಶ್ನೆ ಓದಿದ ಬಳಿಕ ಕುತೂಹಲವಾಯಿತು, ಸೇಠ್ ಹೇಗೆ ಉತ್ತರಿಸಬಹುದೆಂದು. ಆ ಹುಡುಗಿಗೆ ಆತ ಹೇಳಿದ್ದೇನು ಗೊತ್ತಾ?
'ಮೊಟ್ಟ ಮೊದಲನೆಯದಾಗಿ ಒಂದು ಅಂಶವನ್ನು ತಿಳಿದುಕೋ, ನೀನು ಅರವಿಂದ ಕೇಜ್ರಿವಾಲಾನೂ ಅಲ್ಲ, ಕಿರಣ್ ಬೇಡಿಯೂ ಅಲ್ಲ. ನಿನ್ನ ಕೆಲಸ ಏನೋ, ಅಷ್ಟೇ ಮಾಡಿಕೊಂಡು ತೆಪ್ಪಗಿರು. ಬೇರೆಯವರ ಉಸಾಬರಿಗೆ ಹೋಗಬೇಡ. ಈ ಜಗತ್ತಿನ ನೈತಿಕತೆಯನ್ನು ಕಾಪಾಡುವ ಬಿಟ್ಟಿ ಪೊಲೀಸ್‌ಗಿರಿ ಚಾಕರಿಯನ್ನು ನಿನಗೆ ಯಾರೂ ಕೊಟ್ಟಿಲ್ಲ ತಾನೆ? ಹಾಗಾದರೆ ತೆಪ್ಪಗಿರು. ನೈತಿಕತೆ, ಪ್ರಾಮಾಣಿಕತೆಯನ್ನು ಪ್ರದರ್ಶಿಸಿ ಕೇಜ್ರಿವಾಲಾ ಅಥವಾ ಕಿರಣ್ ಬೇಡಿಯವರಂತೆ ಹೆಸರು ಮಾಡಬೇಕೆಂದು ಬಯಸಿದರೆ ಮಮತಾ ಬ್ಯಾನರ್ಜಿ, ಮನಮೋಹನಸಿಂಗ್, ಸೋನಿಯಾ ಗಾಂಧಿಯವರ ಬಗ್ಗೆ ಮಾತಾಡು. ನಿನಗೆ ವಿಪರೀತ ಪ್ರಚಾರವಾದರೂ ಸಿಕ್ಕೀತು. ಜುಜುಬಿ ನಿನ್ನ ಕ್ಲಾಸ್‌ಮೇಟ್ ಬಗ್ಗೆ ಮಾತಾಡಿದರೆ ಏನು ಸಿಕ್ಕೀತು? ಜೀವನದಲ್ಲಿ ಯಾವತ್ತೂ ಸಣ್ಣಪುಟ್ಟ ಸಂಗತಿಗಳನ್ನು 'ಯೋಜನಾ ಆಯೋಗ'ಕ್ಕೆ (ಪ್ಲಾನಿಂಗ್ ಕಮಿಶನ್) ಬಿಟ್ಟು ಬಿಡಬೇಕು.'
ಹಣೆಗೇಕೆ ಕುಂಕುಮ
ವಿದೇಶಿಯನಿಗೆ ಅರ್ಥವೇ ಆಗಲಿಲ್ಲ. ಭಾರತದಲ್ಲಿ ಎಲ್ಲಿ ನೋಡಿದರೂ ಮಹಿಳೆಯರು ಹಣೆಗೆ ಕೆಂಪು ಡಾಟ್ (ಕುಂಕುಮ) ಇಟ್ಟುಕೊಳ್ಳುತ್ತಾರಲ್ಲ ಯಾಕೆ? ಕೆಲವರ ಬಳಿ ಹೋಗಿ ಕೇಳಿ, ಅವರು ನೀಡಿದ ಉತ್ತರದಿಂದ ಸಮಾಧಾನವಾಗಲಿಲ್ಲ. ಕೊನೆಗೆ ಕೋಲ್ಯನ ಬಳಿಗೆ ಹೋಗಿ ಕೇಳಿದ. 'ಮಹಿಳೆಯರು ಹಣೆಗೆ ಕೆಂಪು ಡಾಟ್ ಯಾಕೆ ಇಟ್ಟುಕೊಳ್ಳುತ್ತಾರೆ ಗೊತ್ತಾ? 'ಗಂಡ ಹೇಳಿದ್ದೆಲ್ಲವನ್ನೂ ಅವರು ರೆಕಾರ್ಡ್ ಮಾಡಿಕೊಳ್ಳುತ್ತಿರುತ್ತಾರೆ.'
ಖರೆ ಮಾತು
ಅದ್ಯಾವನು ಈ ಮಾತನ್ನು ಬರೆದನೋ ಏನೋ? ಆಟೋದ ಹಿಂಬದಿಗೆ ಬರೆದಿತ್ತು- 'ಈ ಭೂಮಿ ಮೇಲೆ ಕೇವಲ ಇಬ್ಬರು ಮಾತ್ರ ಪರಮ ಸುಖಿಗಳು. ಪ್ರೀತಿಯಲ್ಲಿ ಎಲ್ಲವನ್ನೂ ಪಡೆಯುವವರು ಹಾಗೂ ಪ್ರೀತಿ ಅಂದ್ರೆ ಏನು ಅಂತ ಗೊತ್ತಿಲ್ಲದಿರುವವರು.'
- ವಿಶ್ವೇಶ್ವರ ಭಟ್