ಶಾಶ್ವತ ನೀರಾವರಿ ಎಂಬುದು ಈಗ ಮರೀಚಿಕೆ
ಶಾಶ್ವತ ನೀರಾವರಿ ಎಂಬುದು ಈಗ ಮರೀಚಿಕೆಯಾಗಿದೆ. ದೇಶದ ಒಟ್ಟು ಮೇಲ್ಮೈ ಜಲಸಂಪನ್ಮೂಲದ ಶೇ. 6 ರಷ್ಟು ಸಂಪತ್ತನ್ನು ಹೊಂದಿದೆ ಮತ್ತು ಶೇ. 5.83 ರಷ್ಟು ಭೂ ಪ್ರದೇಶವನ್ನು ಹೊಂದಿದೆ. ಹಾಗಾಗಿ ಅತ್ಯಂತ ತೃಪ್ತಿಕರ ಜಲಸಂಪತ್ತನ್ನು ಹೊಂದಿದ್ದೇವೆ. ಆದರೂ ಈ ಜಲ ಬಿಕ್ಕಟ್ಟು ನಮ್ಮನ್ನೇಕೆ ಕಾಡುತ್ತಿದೆ. ರಾಜ್ಯದ ಒಟ್ಟು ಮೇಲ್ಮೈ ಜಲಸಂಪನ್ಮೂಲದ ಪ್ರಮಾಣ 17 ಲಕ್ಷ ಮಿಲಿಯನ್ ಕ್ಯುಬಿಕ್ ಮೀಟರ್ಗಳೆಂದು ಅಂದಾಜಿಸಲಾಗಿದೆ. ಇದರ ಶೇ. 40 ಭಾಗ ಪೂರ್ವಕ್ಕೆ ಹರಿಯುವ ನದಿ ಪಾತ್ರಗಳಲ್ಲಿ ಮತ್ತು ನದಿಗಳಲ್ಲಿದೆ. ಉಳಿದ ಭಾಗ ಪಶ್ಚಿಮಾಭಿಮುಖವಾಗಿ ಹರಿಯುವ ನದಿ ಪಾತ್ರಗಳಲ್ಲಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಕಾವೇರಿ, ಕೃಷ್ಣ, ಗೋದಾವರಿ, ಕೇಪ್ಕಾಮೋರಿನ್ನಿಂದ ಶರಾವತಿಯವರೆಗೆ ಮತ್ತು ಶರಾವತಿಯಿಂದ ತೃಪ್ತಿ ನದಿವರೆಗೆ ಪಶ್ಚಿಮಾಭಿಮುಖವಾಗಿ ಹರಿಯುವ ಅನೇಕ ನದಿ ಪಾತ್ರಗಳಿವೆ. ಇದಲ್ಲದೆ ಕಾವೇರಿ ಮತ್ತು ಕೃಷ್ಣೆಯ ನಡುವಿನ ಪೆನ್ನಾರ್ ಮತ್ತು ಪಾಲಾರ್ ನದಿ ಪಾತ್ರಗಳಿವೆ. ಇದೊಂದು ಚಿಕ್ಕ ನದಿ ಪಾತ್ರವನ್ನು ಬಿಟ್ಟು ಉಳಿದ ನದಿಗಳ ಉಗಮ ಪಶ್ಚಿಮ ಘಟ್ಟದಲ್ಲಿದೆ. ಮತ್ತು ಈ ನದಿ ಪಾತ್ರಗಳಲ್ಲಿನ ನೀರಿನ ಹರವು ಬಹಳ ಪ್ರಧಾನವಾಗಿ ಪಶ್ಚಿಮ ಘಟ್ಟಗಳಲ್ಲಿನ ಜೀವಿ ಪರಿಸ್ಥಿತಿಯನ್ನು ಅವಲಂಭಿಸಿದೆ. ಹಾಗಾಗಿ ಪಶ್ಚಿಮ ಘಟ್ಟಗಳನ್ನು ಕೇವಲ ಕರ್ನಾಟಕದ ಜಲಗೋಪುರವೆಂದು ಮಾತ್ರ ಪರಿಗಣಿಸದೆ ಅದನ್ನು ಇಡೀ ದಖನ್ ಪ್ರಸ್ಥ ಭೂಮಿಯ ಜಲಗೋಪುರವೆಂದೇ ಪರಿಗಣಿಸಲಾಗಿದೆ.
58 ಕ್ಕೂ ಹೆಚ್ಚು ದಖನ್ ಪ್ರಸ್ಥಭೂಮಿಗಳಲ್ಲಿ ಹರಿಯುವ ನದಿಗಳ ಮೂಲ ನೆಲೆ ಪಶ್ಚಿಮ ಘಟ್ಟಗಳಾಗಿವೆ. ಇವುಗಳಲ್ಲಿ 47 ನದಿಗಳು ಪಶ್ಚಿಮಕ್ಕೆ ಹರಿದರೆ 8 ಪ್ರಧಾನ ನದಿಗಳು ಪೂರ್ವಕ್ಕೆ ಹರಿಯುತ್ತವೆ. ಉಳಿದ ನದಿಗಳು ದಕ್ಷಿಣಕ್ಕೆ ಹರಿಯುತ್ತವೆ ಈ ಪ್ರದೇಶಗಳು ಮುಂಗಾರು ಮಾರುತಗಳಿಂದ ವಾರ್ಷಿಕವಾಗಿ 2 ಸಾವಿರ ಮಿ.ಮೀ. ನಿಂದ 8 ಸಾವಿರ ಮಿ.ಮಿ ವರೆಗೆ ಮಳೆ ಪಡೆಯುತ್ತದೆ. ಇವು ಕೇವಲ ನೀರನ್ನೊದಗಿಸುವುದೇ ಅಲ್ಲದೇ ಅತ್ಯಂತ ಪ್ರಮುಖವಾದ ಜಲೀಯ ಮತ್ತು ಜಲಾನಯನ ಕಾರ್ಯಗಳನ್ನು ನಡೆಸುವ ಮೂಲಕ ದಖನ್ ಪ್ರಸ್ಥಭೂಮಿಯ ವಾಯು ಗುಣವನ್ನು ನಿರ್ಧರಿಸುತ್ತದೆ. ಇದಲ್ಲದೆ ಪಶ್ಚಿಮಘಟ್ಟಗಳು ಜಗತ್ತಿನ ಜೀವವೈವಿಧ್ಯತೆಯ 35 ಸೂಕ್ಷ್ಮ ಪ್ರದೇಶಗಳಲ್ಲೂ ಒಂದಾಗಿದೆ. ಭಾರತದ 7 ಮಹಾ ಪರ್ವತಗಳ ಸಾಲಿನಲ್ಲಿ ಪಶ್ಚಿಮ ಘಟ್ಟಗಳು ಪ್ರಧಾನವಾಗಿದೆ. ಸುಮಾರು 25 ಕೋಟಿ ಗೂ ಅಧಿಕ ಜನರ ಜೀವನಾಡಿ ಪಶ್ಚಿಮ ಘಟ್ಟಗಳೆಂಬುದು ಅತಿಶಯೋಕ್ತಿಯಲ್ಲ. 25 ಕೋಟಿ ಗೂ ಅಧಿಕ ಜನರ ಜೀವ ಸಂಕುಲವಾದ ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸುವುದು ಹೇಗೆ ಮತ್ತು ಅವುಗಳ ಒಡಲಿನಲ್ಲಿ ನಡೆಸಬಹುದಾದ ಅಭಿವೃದ್ಧಿ ಕಾರ್ಯಗಳ ಸ್ವರೂಪ ಮತ್ತು ತೀವ್ರತೆಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಬೇಕೆಂದು ಅಂದಿನ ಅರಣ್ಯ ಮತ್ತು ಪರಿಸರ ಸಚಿವರಾಗಿದ್ದ ಜಯರಾಂ ರಮೇಶ್ ಅವರು ಖ್ಯಾತ ಪರಿಸರ ತಜ್ಞ ಪ್ರೊ. ಮಾಧವ ಗಾಡ್ಗೀಳ್ ಅಧ್ಯಕ್ಷತೆಯಲ್ಲಿ ಪಶ್ಚಿಮಘಟ್ಟ ಜೀ ಪರಿಸರ ಪರಿಣಿತ ತಂಡವನ್ನು ರಚಿಸಿದರು. 18 ತಿಂಗಳ ನಿರಂತರ ಪರಿಶ್ರಮದ ನಂತರ ಪರಿಣಿತ ತಂಡದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದಾಗ ಶ್ರೀಮತಿ ಜಯಂತಿ ನಟರಾಜನ್ ಮಂತ್ರಿಗಳಾಗಿದ್ದರು. ಅವರಿಗೆ ಈ ವರದಿಯ ಶಿಫಾರಸ್ಸುಗಳು ರುಚಿಸಲಿಲ್ಲ. ಹಾಗಾಗಿ ಅದನ್ನು ಬಹಿರಂಗಪಡಿಸದೆ ಕಾಲಹರಣ ಮಾಡಿದರು. ಕೇರಳದ ರಿವರ್ ರಿಸರ್ಚ್ ಫೌಂಡೇಶನ್ನ ಕೃಷ್ಣನ್ ನ್ಯಾಯಾಂಗ ಹೋರಾಟ ನಡೆಸಿ ಯಶಸ್ವಿಯಾದರು. 2012 ರ ಮೇ 23 ರಂದು ಬಲಾತ್ಕರಿಸಲ್ಪಟ್ಟ ಸರ್ಕಾರ ಅನಿವಾರ್ಯವಾಗಿ ವರದಿಯನ್ನು ಸಾರ್ವಜನಿಕರಿಗೆ ತನ್ನ ಜಾಲತಾಣದಲ್ಲಿ ಪ್ರಕಟಿಸಿತು. ಹೀಗಾಗಿ ಸರ್ಕಾರ ಮುಚ್ಚಿ ಹಾಕಲು ಪ್ರಯತ್ನಿಸಿದ ವರದಿ ಸಾರ್ವಜನಿಕರಿಗೆ ಲಭ್ಯವಾಯಿತು. ವರದಿ ಬಹಿರಂಗಗೊಳ್ಳುತ್ತಿದ್ದಂತೆ ಅದರ ಮೇಲೆ ಪಶ್ಚಿಮ ಘಟ್ಟಗಳ ವ್ಯಾಪ್ತಿಯ 6 ರಾಜ್ಯ ಸರ್ಕಾರಗಳು, ಬಹುಪಾಲು ರಾಜಕೀಯ ಪಕ್ಷಗಳು ಪರಿಣಿತ ವರದಿಯ ಮೇಲೆ ಹರಿಹಾಯುತ್ತಿದ್ದಾರೆ.
ಇದರ ಜತೆಗೆ ಈ ಪ್ರದೇಶದ ಮುಗ್ದ ಜನರನ್ನು ವರದಿಯ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ಇನ್ನುಳಿದ ಪಶ್ಚಿಮಘಟ್ಟಗಳ ಬಹುಪಾಲು ನೀರನ್ನು ಬಳಸಿಕೊಂಡು ಅದರ ಫಲಾನುಭವಿಗಳಿಗೆ ಅಪಾರ ಲಾಭ ಪಡೆಯುತ್ತಿರುವ ಬಯಲುಸೀಮೆ ಜನ ನಮಗೂ ಅದಕ್ಕೂ ಸಂಬಂಧವೇ ಇಲ್ಲವೇನೋ ಎನ್ನುವಂತೆ ನಿದ್ದೆ ಹೊಡೆಯುತ್ತಿದ್ದಾರೆ. ಕೃಷ್ಣರಾಜ ಸಾಗರ, ಹೇಮಾವತಿ, ಕಬಿನಿ, ಹಾರಂಗಿ, ತುಂಗಭದ್ರಾ, ಆಲಮಟ್ಟಿ, ನಾರಾಯಣಪುರ, ಘಟಪ್ರಭ, ಮಲಪ್ರಭ, ಲಿಂಗನಮಕ್ಕಿ, ಕಾಳಿ ಇತ್ಯಾದಿ ನೀರಾವರಿ ಮತ್ತು ಜಲವಿದ್ಯುತ್ ಯೋಜನೆಗಳ ಸಕಲ ಭೋಗ್ಯ ಭಾಗ್ಯಗಳನ್ನು ಅನುಭವಿಸುವ ಜನ ದಿವ್ಯ ಮೌನಿಗಳಾಗಿದ್ದಾರೆ. ಈ ಮೌನವೇ ಮುಂದೊಂದು ದಿನ ನಮಗೆ ಮಾರಕವಾಗಬಲ್ಲದೆಂಬುದನ್ನು ಅವರು ಅರಿತುಕೊಳ್ಳುತ್ತಿಲ್ಲ. ಪಶ್ಚಿಮ ಘಟ್ಟಗಳು ಕೇವಲ ಅವುಗಳ ವ್ಯಾಪ್ತಿಯ ಜನರಿಗೆ ಮಾತ್ರ ಪರಿಸರ ಸೇವೆಗಳನ್ನು ಒದಗಿಸುತ್ತಿಲ್ಲ. ಅವು ಇಡೀ ಕರ್ನಾಟಕದ ಜನತೆಯ ಜೀವ ಜೀವಾಳವಾಗಿದೆ ಎಂಬ ಪರಮ ಸತ್ಯದ ಬಗ್ಗೆ ಹಗಲು ಕುರುಡುತನ ಪ್ರದರ್ಶಿಸುತ್ತಿದ್ದಾರೆ.
ಗಾಡ್ಗೀಳ್ ಸಮಿತಿ 1,29,037 ಚ.ಕಿ.ಮೀ ವಿಸ್ತೀರ್ಣದ ಪಶ್ಚಿಮ ಘಟ್ಟದ ಇಡೀ ಪ್ರದೇಶವನ್ನು ಜೀವಿ ಪರಿಸರಾತ್ಮಕ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿದೆ. ಈ ಒಟ್ಟು ಪ್ರದೇಶದ ಜೀವಿ ಪರಿಸರಾತ್ಮಕ ಸೂಕ್ಷ್ಮತೆಯನ್ನು ಅವಲಂಭಿಸಿ ಅವುಗಳನ್ನು ಇಎಸ್ಝೆಡ್1, 2, 3, ಎಂದು ಗುರುತಿಸಿದೆ. ಒಂದು ಪ್ರದೇಶದ ಪ್ರಬೇಧಗಳ ಶ್ರೀಮಂತಿಕೆ, ಜೀವವಾಸಗಳ ಶ್ರೀಮಂತಿಕೆ, ಬೀಳುವ ಮಳೆಯ ಪ್ರಮಾಣ, ಇಳಿಜಾರು, ನದಿಮೂಲ ಸ್ಥಾನ, ಅಲ್ಲಿನ ಸಾಂಸ್ಕೃತಿಕ ಮೌಲ್ಯಗಳನ್ನಾಧರಿಸಿ ಪಶ್ಚಿಮ ಘಟ್ಟಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಹಂತಗಳುಳ್ಳ ಅಥವಾ ಹೊದಿಕೆಗಳುಳ್ಳ ದೃಷ್ಟಿಕೋನಗಳನ್ನು ಪ್ರತಿಪಾದಿಸಿದೆ.
ಪಶ್ಚಿಮಘಟ್ಟಗಳ ಕೆಲ ಪ್ರದೇಶಗಳನ್ನು ಈಗಾಗಲೇ ಬೇರೆ ಪರಿಸರ ಕಾಯ್ದೆಗಳನ್ವಯ ಸಂ ರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ. ಇವುಗಳ ನಿರ್ವಹಣೆ ಯಥಾವತ್ತಾಗಿ ಮುಂದುವರಿಯಲಿದೆ. ಹೀಗಾಗಿ ಈ ಪರಿಣಿತ ವರದಿ ಸಂಪೂರ್ಣವಾಗಿ ಪಶ್ಚಿಮಘಟ್ಟಗಳ ಪ್ರದೇಶವನ್ನು ಸಂರಕ್ಷಿತ ಪ್ರದೇಶ ಜೀವಿ ಪರಿಸರಾತ್ಮಕ ಸೂಕ್ಷ್ಮ ಪ್ರದೇಶ 1,2 ಮತ್ತು 3 ಎಂದು ವಿಂಗಡಿಸಲಾಗಿದೆ. ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಹಲವಾರು ನಿಯಂತ್ರಣ ಮತ್ತು ಪ್ರೋತ್ಸಾಹಕ ಕ್ರಮಗಳನ್ನು ಸಲಹೆ ಮಾಡಲಾಗಿದೆ. ವಂಶವಾಹಿ ರೂಪಾಂತರಿತ ತಳಿಗಳಿಗೆ ಇಲ್ಲಿ ಅವಕಾಶ ನೀಡಬಾರದು. ಮೂರು ವರ್ಷಗಳೊಳಗೆ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ವಿಶೇಷ ಆರ್ಥಿಕ ವಲಯಗಳಿಗೆ ಅವಕಾಶ ನೀಡಬಾರದು. ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕ ಭೂಮಿಯನ್ನು ಖಾಸಗಿ ಭೂಮಿಯನ್ನಾಗಿ ಪರಿವರ್ತಿಸಬಾರದೆಂದು ಶಿಫಾರಸ್ಸು ಮಾಡಲಾಗಿದೆ. ಯಾವುದೇ ಹಳ್ಳ, ನದಿಗಳ ಸ್ವಾಭಾವಿಕ ಹರಿವನ್ನು ವಿದ್ಯುತ್ ಯೋಜನೆಗಳಿಗೆ ತಿರುಗಿಸಬಾರದು. ತಮ್ಮ ಸಾರ್ಥಕ ಜೀವಿತಾವಧಿಯನ್ನು ಪೂರೈಸುವ ಅಣೆಕಟ್ಟುಗಳನ್ನು ಉಷ್ಣಸ್ಥಾವರಗಳನ್ನು ಹಂತ ಹಂತವಾಗಿ ಕಳಚಿ ಹಾಕಬೇಕು. ಪಶ್ಚಿಮ ಘಟ್ಟಗಳ ನದಿ ಪಾತ್ರಗಳ ನೀರಿನ ಅಂತರ್ ವರ್ಗಾವಣೆಗಳಿಗೆ ಅವಕಾಶ ನೀಡಬಾರದೆಂದು ಸೂಚಿಸಿದೆ. ಇದೇ ರೀತಿಯ ಅನೇಕ ನಿಯಂತ್ರಣ ಮತ್ತು ಪ್ರೋತ್ಸಾಹ ಕ್ರಮಗಳನ್ನು ಸೂಕ್ಷ್ಮ ವಲಯ 1, 2 ಮತ್ತು 3 ಕ್ಕೂ ಸಲಹೆ ಮಾಡಲಾಗಿದೆ. ಅತ್ಯಂತ ವಿವಾದಾತ್ಮಕವಾದ ಕರ್ನಾಟಕ ಗುಂಡ್ಯಜಲ ವಿದ್ಯುತ್ ಯೋಜನೆಯನ್ನು, ಕೇರಳದ ಅಥಿರಪಲ್ಲಿ ಜಲವಿದ್ಯುತ್ ಯೋಜನೆಯನ್ನು, ಮಹಾರಾಷ್ಟ್ರದ ಸಿಂಧು ದುರ್ಗ್ ಮತ್ತು ರತ್ನಗಿರಿ ಜಿಲ್ಲೆಗಳಲ್ಲಿ ಆರಂಭಿಸಲು ಉದ್ದೇಶಿಸಲಾಗಿರುವ ಕೈಗಾರಿಕಾಭಿವೃದ್ಧಿ ಯೋಜನೆಗಳನ್ನು ಕೂಡಲೇ ಕೈ ಬಿಡಲು ಸಲಹೆ ಮಾಡಿದೆ. ಗೋವಾದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಕಲ್ಲು ಗಣಿಗಾರಿಕೆ, ಮಣ್ಣು ಗಣಿಗಾರಿಕೆಯನ್ನು 5 ವರ್ಷಗಳೊಳಗೆ ಸಂಪೂರ್ಣವಾಗಿ ನಿಷೇಧಿಸಲು ಸಲಹೆ ಮಾಡಿದೆ. ಒಟ್ಟಾರೆಯಾಗಿ ಗಾಡ್ಗೀಳ್ ವರದಿ ಎಚ್ಚರಗೇಡಿ ಅಭಿವೃದ್ಧಿಯನ್ನು ಮತ್ತು ವಿವೇಚನಾರಹಿತ ಸಂರಕ್ಷಣೆಯನ್ನು ಕೈ ಬಿಡಲು ಕರೆ ನೀಡಿದೆ. ಅದರ ಸ್ಥಾನದಲ್ಲಿ ವಿಕೇಂದ್ರೀಕೃತ, ಜನಸಹಭಾಗಿತ್ವ ಅಭಿವೃದ್ಧಿ ಮಾದರಿಯನ್ನು ಪ್ರತಿಪಾದಿಸುತ್ತದೆ.
ಈ ವರದಿಯನ್ನು ಮೂಲೆಗೆ ತಳ್ಳಲು ಡಾ. ಕಸ್ತೂರಿ ರಂಗನ್ ನೇತೃತ್ವದಲ್ಲಿ ಮತ್ತೊಂದು ಉನ್ನತ ಹಂತದ ಸಮಿತಿಯನ್ನು ನೇಮಿಸಿತು. ಇತ್ತೀಚೆಗೆ ಈ ಸಮಿತಿ ಕೂಡ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆದರೆ ಈ ಸಮಿತಿಯ ಶಿಫಾರಸ್ಸುಗಳು ಗಾಡ್ಗೀಳ್ ಸಮಿತಿಯ ಶಿಫಾರಸ್ಸುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಶೇ. 60 ರಷ್ಟು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಎಚ್ಚರಗೇಡಿ ಅಭಿವೃದ್ಧಿಗೆ ಮುಕ್ತ ಅವಕಾಶ ಕಲ್ಪಿಸಿದೆ ಮತ್ತು ಜೀವಿ ಪರಿಸರ ಸಂರಕ್ಷಣೆಯನ್ನು ರಾಜಕೀಯ ನೇತೃತ್ವದ ಸಮಿತಿಯ ಸುಪರ್ದಿಗೆ ನೀಡಲು ರಹದಾರಿ ಮಾಡಿದೆ. ಈಗಾಗಲೇ ಪಶ್ಚಿಮ ಘಟ್ಟಗಳ ವಿಶಾಲ ಪ್ರದೇಶಗಳು ಅಭಿವೃದ್ಧಿ ಕ್ರಾಂತಿ ವೀರರ ಮತ್ತು ರಾಜಕಾರಣಿಗಳ ದುರಾಕ್ರಮಗಣಗಳಿಗೆ ಬಲಿಯಾಗಿವೆ.
ನಾವಿಂದು ಮಣ್ಣು, ನೀರು, ಜೀವಿ ವೈವಿಧ್ಯತೆ ಮತ್ತು ಜೀವಿ ಪರಿಸರಗಳ ನಡುವಿರುವ ಅವಿನಾಭಾವ ಸಾವಯವ ಸಂಬಂಧಗಳನ್ನು ತುಂಡರಿಸುತ್ತಿದ್ದೇವೆ. ಈ ಸಾವಯವ ಸೂಕ್ಷ್ಮ ಸಂಬಂಧಗಳನ್ನು ಅತ್ಯಂತ ಸೂಕ್ತವಾದ ಭೂ ಬಳಕೆ ಮತ್ತು ಭೂ ಹೊದಿಕೆಗಳ ಪುನರ್ ವಿನ್ಯಾಸದಿಂದ ಪುನರುಜ್ಜೀವನಗೊಳಿಸಿ ಮರುಸ್ಥಾಪಿಸಬೇಕಾಗಿದೆ. ಈಗಾಗಲೇ ತುಂಬಾ ತಡವಾಗಿದೆ. ಎಂದೂ ಮಾಡದಿರುವುದಕ್ಕಿಂತ ತಡವಾಗಿಯಾದರೂ ಆರಂಭಿಸೋಣ.
-ಸಿ. ಯತಿರಾಜು
ಸಂಪಾದಕರು, ಧರಣಿ ಮಂಡಲ ಪತ್ರಿಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

