ಅಂಕಣಗಳು

ಕುಲಪತಿ ನೇಮಿಸಿ ಕಾರು ಕೊಡುವ ನೆಪಕ್ಕೆ ವಿವಿ ಬೇಕಿಲ್ಲ

Published On :

ವೃತ್ತಿಪರ ಶಿಕ್ಷಣ ಸಂಸ್ಥೆಗಳ ನಿಯಂತ್ರಣ ಕಾಯಿದೆ-2006ನ್ನು ತಡೆಹಿಡಿದಿಡಲು ಕಾರಣವೇನು?
ಕಾಯಿದೆಯನ್ನು ನಿರ್ಲಕ್ಷಿಸುವುದು ಸಮಸ್ಯೆಗೆ ಪರಿಹಾರವಲ್ಲ. ಹಿಂದಿನ 7 ವರ್ಷಗಳ ಕಾಲ ಬೇರೇ ಬೇರೆ ರಾಜ್ಯ ಸರ್ಕಾರಗಳು ಈ ಕಾಯಿದೆಯನ್ನು ನಿರ್ಲಕ್ಷಿಸಿವೆ. ಹಿಂದಿನ ಸರ್ಕಾರವೇಕೆ ಜಾರಿಗೆ ತಂದಿಲ್ಲ ಎನ್ನುವುದರ ಬಗ್ಗೆ ನನ್ನಲ್ಲಿ ಉತ್ತರವಿಲ್ಲ. ಆದರೆ ಕಾಯಿದೆ ಅನುಷ್ಠಾನದಿಂದ ಆಡಳಿತ ಮಂಡಳಿಗಳ ಮೇಲೆ ಸರ್ಕಾರದ ನಿಯಂತ್ರಣ ಕಡಿಮೆಯಾಗಲಿದೆ. ಸಮಿತಿಗಳ ಮೇಲುಸ್ತುವಾರಿಯೇ ಹೆಚ್ಚಾಗುತ್ತದೆ ಎಂಬ ಚಿಂತನೆಯಲ್ಲಿ ಸರ್ಕಾರವಿತ್ತು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಕಾಯಿದೆ ಜಾರಿ ಮಾಡಲು ಅವಕಾಶವೇ ಇರಲಿಲ್ಲ. ಡಿಸೆಂಬರ್ ತಿಂಗಳೊಳಗೆ ಪ್ರವೇಶ ಮೇಲ್ವಿಚಾರಣೆ ಹಾಗೂ ಶುಲ್ಕ ನಿಯಂತ್ರಣ ಸಮಿತಿ ರಚಿಸಬೇಕಿತ್ತು. ಹೊಸ ಸರ್ಕಾರಕ್ಕೆ ಈ ಅವಕಾಶವೇ ಇಲ್ಲದಿರುವುದರಿಂದ ಕಾಯಿದೆಯನ್ನು ತಡೆಹಿಡಿದು ಒಪ್ಪಂದಕ್ಕೆ ಸಹಿ ಹಾಕುವುದು ಅನಿವಾರ್ಯವಾಗಿದೆ. ಮುಂದಿನ ವರ್ಷದಿಂದ ಕಾಯಿದೆ ಜಾರಿಗೆ ಬರಲಿದೆ.

-    ರಾಜ್ಯದ ಒಂದು ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಸಂಬಂಧಪಟ್ಟ ವಿಚಾರವನ್ನು 4 ಗೋಡೆಗಳ ಕೊಠಡಿಯಲ್ಲಿ ಕೂತು ಚರ್ಚಿಸಿ ನಿರ್ಧಾರ ಕೈಗೊಳ್ಳುವುದೇಕೆ? ಸಾರ್ವಜನಿಕ ಚರ್ಚೆ ಯಾಕಿಲ್ಲ?
ಕಾಯಿದೆ ರೂಪಗೊಂಡು 7 ವರ್ಷಗಳಾಗಿವೆ. ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಎಲ್ಲ ನಿಯಮಗಳನ್ನು ತಿಳಿದವನಾಗಿರುತ್ತಾನೆ. ಚರ್ಚೆಯನ್ನು ಎಲ್ಲಿಯೇ ನಡೆಸಿದರೂ ವಿದ್ಯಾರ್ಥಿಗಳ ಹಿತ ಕಾಪಾಡುವ ಕ್ರಮ ಕೈಗೊಂಡಿದ್ದೇವೆ. ಕಳೆದ ವರ್ಷ ಶೇ.10ರಷ್ಟು ಶುಲ್ಕ ಏರಿಕೆಯಾಗಿದ್ದರಿಂದ ಮತ್ತೆ ಶುಲ್ಕ ಪರಿಷ್ಕರಣೆ ಮಾಡಿಲ್ಲ. ಇನ್ನು ಕಾಯಿದೆಗೆ ಸಂಬಂಧಿಸಿ ಬದಲಾವಣೆ ಬೇಕಿದ್ದರೆ ಪರಿಶೀಲಿಸುತ್ತೇವೆ. ತಿದ್ದುಪಡಿಗೆ ಎಂದಿಗೂ ಅವಕಾಶವಿದೆ. ಈ ಬಗ್ಗೆ ಯಾವುದೇ ಸಲಹೆ ಬಂದರೂ ಸರ್ಕಾರ ಸ್ವೀಕರಿಸಲು ಸದಾ ಸಿದ್ದವಿದೆ.

-    ನಿಮ್ಮ ಪ್ರಕಾರ ಶಿಕ್ಷಣ ಸಂಸ್ಥೆಗಳ ಶುಲ್ಕ ಹೇಗಿರಬೇಕು?
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಬೇಕಿದೆ. ಪದವಿಯ ನಂತರ ಉದ್ಯೋಗಕ್ಕಾಗಿ ಅರಸುತ್ತಾ ಕೂರುವ ಬದಲು, ಉದ್ಯೋಗವೇ ಪದವೀಧರರನ್ನು ಆಕರ್ಷಿಸುವಂತೆ ಶಿಕ್ಷಣವಿರಬೇಕು. ಹಾಗೆಯೇ ಈ ಶಿಕ್ಷಣ ಎಲ್ಲರಿಗೂ ದೊರಕಬೇಕು. ಆರ್ಥಿಕವಾಗಿ ದುರ್ಬಲವಾಗಿದ್ದವರಿಗೂ ಶಿಕ್ಷಣವು ಭಾರವಾಗದಂತೆ ಸಿಗಬೇಕು. ಮತ್ತೊಂದೆಡೆ ಖಾಸಗಿ ಸಂಸ್ಥೆಗಳು ನಷ್ಟವನ್ನು ಅನುಭವಿಸದೇ ಮುಚ್ಚುವ ಪರಿಸ್ಥಿತಿ ಬಾರದಂತಹ ಶುಲ್ಕ ವ್ಯವಸ್ಥೆಯಿರಬೇಕು. ಸಾಮಾಜಿಕ ನ್ಯಾಯ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಎಂದಿಗೂ ಶುಲ್ಕದ ಕುರಿತಂತೆ ತನ್ನ ನಿಯಂತ್ರಣ ಸಡಿಲಿಸುವುದಿಲ್ಲ.

-    ಹೆಚ್ಚುವರಿ ಶುಲ್ಕವು ವಿದ್ಯಾರ್ಥಿಗಳಿಗೆ ತಲೆನೋವಾಗಿದೆ, ಈ ಸರ್ಕಾರದಿಂದಾದರೂ ಕಠಿಣ ಕ್ರಮ ನಿರೀಕ್ಷಿಸಬಹುದೇ?
ಕೆಲ ಕಾಲೇಜುಗಳು ನೀಡುವ ವಿಶೇಷ ಸವಲತ್ತುಗಳಿಗೆ ಕೆಲ ಹೆಚ್ಚುವರಿ ಶುಲ್ಕ ಪಡೆಯುವುದು ಅನಿವಾರ್ಯವಾಗಿದೆ. ಆದರೆ ಇದಕ್ಕೆ ಮಿತಿಯಿರಬೇಕು. ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಪಡೆಯುವ ಶುಲ್ಕವು ಇದರಲ್ಲಿ ಸೇರಿರಬಾರದು. ಈ ಸಂಬಂಧ ವಾರಾಂತ್ಯದೊಳಗೆ ಸ್ಪಷ್ಟ ನಿಯಮ ರಚಿಸಲಾಗುತ್ತದೆ. ಯಾವುದೇ ಶುಲ್ಕ ಪಡೆದರೂ ರಶೀದಿ ನೀಡಬೇಕು, ಅದು ಸರ್ಕಾರ ನಿಗದಿಪಡಿಸುವ ಮಿತಿ ಮೀರಬಾರದು. ಇದನ್ನು ಉಲ್ಲಂಘಿಸುವ ಯಾವುದೇ ಸಂಸ್ಥೆ ಸರ್ಕಾರ ಸಹಿಸುವುದಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು, ಪಾಲಕರಿಗೆ ನಾನು ಅಭಯ ನೀಡುತ್ತೇನೆ.

-    ಖಾಸಗಿ ಶಿಕ್ಷಣ ಸಂಸ್ಥೆಯ ಲಾಬಿಯ ಹುಟ್ಟು ಹಾಗೂ ದೈತ್ಯಗಳನ್ನು ಹೊಂದಿರುವ ಪಕ್ಷದಲ್ಲಿ ತಾವಿದ್ದೀರಿ. ಕೆಲ ಸಚಿವರು ಹಾಗೂ ನಿರ್ಣಾಯಕ ಹುದ್ದೆಯಲಿದ್ದವರು ಕಾಲೇಜುಗಳನ್ನು ಹೊಂದಿದ್ದಾರೆ. ಹಾಗಿದ್ದರೆ ಸರ್ಕಾರವು ಇದನ್ನು ಹೇಗೆನಿಭಾಯಿಸಲಿದೆ, ಹಿಂದಿನ ಸರ್ಕಾರಗಳಲ್ಲಿ ಕಾಣದ ಕಠಿಣ ನಿಲುವುಗಳನ್ನು ನಿಮ್ಮಿಂದ ನಿರೀಕ್ಷಿಸಬಹುದೇ?
ರಾಜ್ಯದಲ್ಲಿ ವಿದ್ಯಾರ್ಥಿಗಳ ಲಾಬಿ ಹೊರತುಪಡಿಸಿ ಮತ್ಯಾವ ಲಾಬಿಗಳಿರುವುದು ನನಗೆ ತಿಳಿದಿಲ್ಲ. ಒಂದೊಮ್ಮೆ ಇದ್ದರೂ ಕಾಂಗ್ರೆಸ್ ಸರ್ಕಾರ ಅದಕ್ಕೆ ಮಣಿಯುವುದಿಲ್ಲ. ಯಾವುದೇ ಒಬ್ಬ ವಿದ್ಯಾರ್ಥಿಗೆ ಅನ್ಯಾಯವಾದ ಬಗ್ಗೆ ನನ್ನ ಗಮನಕ್ಕೆ ಬಂದರೆ ಕಠಿಣ ಕ್ರಮ ಜರುಗಿಸುವುದು ಖಂಡಿತ. ಒಂದೊಮ್ಮೆ ಅಂತಹ ಒತ್ತಡಕ್ಕೆ ಮಣಿಯುವುದಿದ್ದರೆ ಶುಲ್ಕ ಪರಿಷ್ಕರಣೆಗೆ ಸರ್ಕಾರ ಮುಂದಾಗಬೇಕಿತ್ತು. ಶುಲ್ಕ ಪರಿಷ್ಕರಣೆಯನ್ನೂ ಮಾಡಿಲ್ಲ ಹಾಗೂ ಮುಂದಿನ ಶೈಕ್ಷಣಿಕ ವರ್ಷದಿಂದ ಕಾಯಿದೆ ಜಾರಿ ಮಾಡುವುದಾಗಿಯೂ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.

-    ಹಿಂದಿನ ಸರ್ಕಾರ ಪ್ರಾರಂಭಿಸಿದ ಬಹುತೇಕ ವಿಶೇಷ ವಿಶ್ವವಿದ್ಯಾಲಯಗಳಲ್ಲಿ ಕುಲಪತಿ, ಒಂದು ಕಚೇರಿ, ಕಾರು ಹೊರತುಪಡಿಸಿ ಮತ್ತೇನೂ ಇಲ್ಲ, ಇವುಗಳ ಕತೆಯೇನು?
ಕುಲಪತಿ ನೇಮಿಸಿ ಅವರಿಗೆ ಕಾರು ಕೊಡಲು ವಿಶ್ವವಿದ್ಯಾಲಯ ಪ್ರಾರಂಭಿಸಬಾರದು. ಅದರ ಹಿಂದಿನ ಮೂಲ ಉದ್ದೇಶಗಳು ಈಡೇರಬೇಕು. ಹೊಸ ವಿವಿಯ ಉದ್ಘಾಟನೆ ಕಾರ್ಯಕ್ರಮ ನಡೆಸಿ ಪ್ರಚಾರ ಪಡೆದು ಸನ್ಮಾನ ಮಾಡಿಸಿಕೊಳ್ಳುವುದರಿಂದ ನಾಮಫಲಕ ಮಾಚ್ರ ಉಳಿಯುತ್ತದೆ. ಇದಕ್ಕೆ ನಿಯಂತ್ರಣ ಹೇರಬೇಕಿದೆ. ಈ ರೀತಿ ಪ್ರಾರಂಭವಾದ ಎಲ್ಲ ವಿಶೇಷ ವಿವಿಗಳನ್ನು ಪರಿಶೀಲಿಸುತ್ತೇನೆ. ಅವಶ್ಯಕ ವಿವಿಗಳಿಗೆ ಮೂಲಭೂತ ಸೌಕರ್ಯವನ್ನು ಹಂತಹಂತವಾಗಿ ನೀಡಿ ಮುಂದುವರೆಸಲಾಗುವುದು. ಅನವಶ್ಯಕ ವಿವಿಗಳನ್ನು ಸಂಪುಟ ಸಭೆಯ ಅನುಮತಿ ಪಡೆದು ಮುಚ್ಚುತ್ತೇವೆ.

-   ಈ ರೀತಿ ವಿಶೇಷ ವಿವಿಗಳನ್ನು ಸ್ಥಾಪಿಸಿ ರಾಜ್ಯ ಸರ್ಕಾರವು ವಿಶ್ವವಿದ್ಯಾಲಯದ ಪರಿವ್ಯಾಪ್ತಿ ಹಾಳುಮಾಡುತ್ತಿದೆ, ಎನಿಸುವುದಿಲ್ಲವೇ?
ಯಾರಿಗೂ ಉಪಯೋಗವಿಲ್ಲದೇ ರಾಜಕೀಯ ಉದ್ದೇಶಕ್ಕೆ ವಿವಿ ಆರಂಭಿಸಿದರೇ ನಿಜವಾಗಿಯೂ ಯಾವುದೆ ಪ್ರಯೋಜನವಿಲ್ಲ. ವಿದ್ಯಾರ್ಥಿಗಳಿಗೆ ಹಾಗೂ ಆಯಾ ಪ್ರದೇಶಕ್ಕೆ ಅಂತಹ ವಿವಿಗಳಿಂದ ಸಹಾಯವಾಗಬೇಕು. ವಿಶ್ವವಿದ್ಯಾಲಯದ ಪರಿವ್ಯಾಪ್ತಿ ಏನೇ ಇದ್ದರೂ ವಿಶೇಷ ವಿವಿಗಳ ಅಗತ್ಯವೂ ಇದೆ. ಆದರೆ ಹೆಸರಿಗೆ ಹಾಗೂ ಪ್ರತಿಷ್ಠೆಗೆ ನಾವು ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸುವುದಿಲ್ಲ, ಅಂತಹ ವಿವಿಗಳು ನಮಗೆ ಬೇಡ ಎಂದಷ್ಟೇ ಸ್ಪಷ್ಟಪಡಿಸಬಲ್ಲೆ.

-    ನೀವು ಪ್ರತಿಪಕ್ಷದಲ್ಲಿದ್ದಾಗ ಖಾಸಗಿ ವಿವಿಗಳನ್ನು ವಿರೋಧಿಸಿದ್ದೀರಿ, ಈಗ ಖಾಸಗಿ ವಿವಿಗಳ ಬಗ್ಗೆ ನಿಮ್ಮ ನಿಲುವೇನು?
ಗುಣಮಟ್ಟದ ಶಿಕ್ಷಣಕ್ಕೆ ಕರ್ನಾಟಕವು ಬಹಳ ವರ್ಷಗಳಿಂದ ಬ್ರಾಂಡ್ ಆಗಿದೆ. ಈ ಖಾಸಗಿ ವಿವಿಗಳಿಂದ ಕರ್ನಾಟಕದ ಸ್ಥಾನಮಾನ ಇನ್ನಷ್ಟು ಹೆಚ್ಚಬೇಕು. ಕಾನೂನು ಚೌಕಟ್ಟಿನಲ್ಲಿ ಅರ್ಹತೆಯಿದ್ದರೆ ಯಾವುದೇ ಶಿಕ್ಷಣ ಸಂಸ್ಥೆ ಮುಂದೆ ಬಂದರೂ ಅವಕಾಶ ನೀಡುತ್ತೇವೆ. ಆದರೆ ಶಾಲೆಗಳನ್ನು ನಡೆಸುತ್ತಿರುವವರಿಗೆ ವಿವಿಯ ಸ್ಥಾನಮಾನ ನೀಡಲು ಸುತಾರಾಂ ಸಾಧ್ಯವಿಲ್ಲ. ಇಂತಹ ಅವ್ಯವಸ್ಥೆಗೆ ಕಡಿವಾಣ ಹಾಕುತ್ತೇವೆ. ಕರ್ನಾಟಕದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು, ಸರ್ಕಾರದ ನಿಯಮಗಳು ಪಾಲನೆಯಾಗಬೇಕು. ಇದರ ಜತೆಗೆ 2020ರೊಳಗೆ ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆಯುವವರ ಪ್ರಮಾಣವು ಶೇ.35ಕ್ಕೆ ಏರಬೇಕು. ಇದಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಅನಿವಾರ್ಯ ಕೂಡ.

-    ರಾಜ್ಯದಲ್ಲಿನ ಸರ್ಕಾರಿ ವಿಶ್ವವಿದ್ಯಾಲಯಗಳು ಜಾತಿ ಹಾಗೂ ರಾಜಕೀಯದ ಗೂಡಾಗಿವೆ. ಕುಲಪತಿಗಳ ನೇಮಕದಲ್ಲಿ ಭ್ರಷ್ಟಾಚಾರದ ಕೂಗು ಕೇಳಿಬರುತ್ತಿದೆ. ಇದಕ್ಕೆ ಸರ್ಕಾರದಿಂದ ಕಡಿವಾಣ ಹಾಕಲು ಸಾಧ್ಯವಿದೆಯೇ?
ಖಂಡಿತ ಸಾಧ್ಯವಿದೆ. ವಿಶ್ವವಿದ್ಯಾಲಯಗಳ ಘನತೆ ಕಾಪಾಡುವುದು ಸರ್ಕಾರಕ್ಕಿರುವ ದೊಡ್ಡ ಸವಾಲಾಗಿದೆ. ಅರ್ಹ ಕುಲಪತಿಗಳ ನೇಮಕವೇ ಇದಕ್ಕೆ ಪರಿಹಾರ ಎನ್ನುವುದು ನನ್ನ ವಾದವಾಗಿದೆ. ಕುಲಪತಿಗಳ ನೇಮಕದಲ್ಲಿ ಸಮಿತಿಯ ರಚನೆಯಲ್ಲಿ ಪಾರದರ್ಶಕ ವ್ಯವಸ್ಥೆ ಜಾರಿಗೆ ಬರಬೇಕಿದೆ. ಶೈಕ್ಷಣಿಕ ಹಾಗೂ ಆಡಳಿತಾತ್ಮಕವಾಗಿ ನೈಪುಣ್ಯತೆ ಹೊಂದಿರುವ ಶಿಕ್ಷಣ ತಜ್ಞರು ಹಾಗೂ ಅರ್ಹ ಪ್ರಾಮಾಣಿಕ ವ್ಯಕ್ತಿಗಳು ಕುಲಪತಿಗಳ ಹುದ್ದೆಗೆ ಬರುವಂತೆ ಸರ್ಕಾರ ನಿಗಾವಹಿಸಲಿದೆ. ಕುಲಪತಿ ನೇಮಕದಲ್ಲಿ ಭ್ರಷ್ಟಾಚಾರದ ಕೂಗು ನನ್ನ ಕಿವಿಗೂ ಬಿದ್ದಿದೆ. ಅರ್ಹತೆಯೊಂದೇ ಮಾನದಂಡವಾದಾಗ ಭ್ರಷ್ಟಚಾರಕ್ಕೆ ಕಡಿವಾಣ ಹಾಕಬಹುದು.

-    ಕರ್ನಾಟಕ ವಿಶ್ವವಿದ್ಯಾಲಯ ಕಾಯಿದೆ ತಿದ್ದುಪಡಿ, ರಾಜ್ಯಪಾಲರ ಅಧಿಕಾರ ಮೊಟಕಿನ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕುಲಪತಿಗಳ ವಿರುದ್ಧದ ತನಿಖೆ ಹಾಗೂ ಕ್ರಮದ ಕುರಿತಂತೆ ಸರ್ಕಾರದ ನಿಲುವು ಸಮರ್ಥನೀಯ. ಆದರೆ ಸಾಂವಿಧಾನಿಕ ಮುಖ್ಯಸ್ಥರಾಗಿರುವ ರಾಜ್ಯಪಾಲರು ಹಾಗೂ ಸರ್ಕಾರದ ನಡುವೆ ಸಾಮರಸ್ಯವಿರಬೇಕು. ರಾಜ್ಯಪಾಲರ ಅಧಿಕಾರ ಮೊಟಕು ಮಾಡಿರುವುದನ್ನು ಸಮರ್ಥಿಸಲು ಸಾಧ್ಯವಿಲ್ಲ. ಪ್ರಸ್ತುತವಾಗಿ ಕಾಯಿದೆಯೂ ರಾಜ್ಯಪಾಲರ ಬಳಿಯಿದೆ. ಅವರ ಕ್ರಮದ ಬಳಿಕ ಸರ್ಕಾರ ಪ್ರತಿಕ್ರಿಯಿಸಲಿದೆ.

-    ಉನ್ನತ ಶಿಕ್ಷಣಕ್ಕೆ ಸರ್ಕಾರ ನೀಡುತ್ತಿರುವ ಅನುದಾನವೇ ಸಾಕೆ? ಪ್ರಾಥಮಿಕ ಶಿಕ್ಷಣ ನೀಡಿ, ಗುಣಮಟ್ಟದ ಉನ್ನತ ಶಿಕ್ಷಣ ನೀಡದೇ ಜನರನ್ನು ಸೋಮಾರಿ ನಿರುದ್ಯೋಗಿ ಮಾಡುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ ಅನಿಸುತ್ತಿಲ್ಲವೇ?
ಇದೇ ಕಾರಣದಿಂದ ಗುಣಮಟ್ಟದ ಶಿಕ್ಷಣದ ಬಗ್ಗೆ ನಾನು ಮಾತನಾಡುತ್ತಿರುವುದು. ನಮ್ಮ ಶಿಕ್ಷಣ ವ್ಯವಸ್ಥೆಯ ಎಲ್ಲ ವಿಭಾಗಗಳಲ್ಲಿ ಉದ್ಯೋಗ ಪ್ರಪಂಚಕ್ಕೆ ಅಗತ್ಯವಾದ ರೀತಿಯಲ್ಲಿ ಪಠ್ಯಕ್ರಮ ಬದಲಾಯಿಸುವ ಅಗತ್ಯವಿದೆ. ಇನ್ನು ಉನ್ನತ ಶಿಕ್ಷಣಕ್ಕೆ ಸಿಗುತ್ತಿರುವ ಬಜೆಟ್ ಅನುದಾನವೇ ಅಲ್ಪ ಪ್ರಮಾಣದಲ್ಲಿದೆ. ಸರ್ಕಾರ ಈಗಾಲೇ ಸ್ಪಷ್ಟಪಡಿಸಿದಂತೆ ಸರ್ಕಾರಿ ಪದವಿ ಕಾಲೇಜು, ವಿಶ್ವವಿದ್ಯಾಲಯಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಬದ್ಧವಾಗಿದೆ. ಮುಂದಿನ ಬಜೆಟ್‌ನಲ್ಲಿ ಇದಕ್ಕೆ ಸೂಕ್ತ ಮನ್ನಣೆ ದೊರಕುವ ನಿರೀಕ್ಷೆಯಿದೆ.

-ರಾಜೀವ ಹೆಗಡೆ, ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.