ಅಂಕಣಗಳು

ಒಬಾಮಾ ಹಾದಿಯಲ್ಲಿ ಸಾಗುತ್ತಿದ್ದಾರೆಯೇ ಮೋದಿ?

Published On :

ಒಬಾಮಾ ಹಾದಿಯಲ್ಲಿ ಸಾಗುತ್ತಿದ್ದಾರೆಯೇ ಮೋದಿ?
ಅದು 2008ರ ನವೆಂಬರ್ 04ನೇ ತಾರೀಖು.  ಹಲವು ಕಾರಣಗಳಿಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ವಿಶೇಷತೆ ಪಡೆದುಕೊಂಡಿತ್ತು.  ಅದಕ್ಕೆ ಮುಖ್ಯವಾಗಿ ಕಾರಣವಾಗಿದ್ದು ಬರಾಕ್ ಒಬಾಮಾ.  ಎಲ್ಲಾ ಅಡೆತಡೆಗಳನ್ನು ದಾಟಿ ಚುನಾವಣೆಯ ಹೊಸ್ತಿಲಲ್ಲಿ ನಿಂತ ಒಬಾಮಾಗೆ ರಿಪಬ್ಲಿಕನ್ ಪಕ್ಷದ ಜಾನ್ ಮೆಕೇನ್ ಪ್ರತಿಸ್ಪರ್ಧಿಯಾಗಿದ್ದರು. ಒಬಾಮಾ ಗೆಲ್ಲುತ್ತಾರೆ ಎಂದು ಚುನಾವಣೆಗೂ ಮುನ್ನವೆ ಅಮೆರಿಕದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲೇ ನಿರೀಕ್ಷೆಗಳೂ ಹುಟ್ಟಿದ್ದವು. ಅವರ ಪ್ರಚಾರ ವೈಖರಿ, ಬದಲಾವಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ್ದು, ಎಲ್ಲವೂ ಒಬಾಮಾ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದವು.  ಅಂತೆಯೇ ಗೆದ್ದು, ಅಧ್ಯಕ್ಷರಾದರು.
ಒಬಾಮಾ ಗೆಲುವಿನ ಹಾದಿಗೆ ಸಾಮ್ಯತೆ ಎನಿಸುವಂತಹ ಬೆಳವಣಿಗೆಗಳು ಭಾರತದಲ್ಲಿಯೂ ಗೋಚರಿಸುತ್ತಿವೆ.  
ಒಬಾಮಾ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗುವುದು ಸುಲಭವಾಗಿರಲಿಲ್ಲ. ಜಾನ್ ಎಡ್ವರ್ಡ್ಸ್ ಮತ್ತು ಹಿಲರಿ ಕ್ಲಿಂಟನ್ ಅವರಿಂದ ಭಾರೀ ಸ್ಪರ್ಧೆಯನ್ನೇ ಎದುರಿಸಬೇಕಾಯಿತು. ಅದರಲ್ಲೂ ಹಿಲರಿ ಕ್ಲಿಂಟನ್ ಕೊನೆಯ ಕ್ಷಣದವರೆಗೂ ಒಬಾಮಾ ಹಾದಿಗೆ ಮುಳ್ಳಾಗುತ್ತಲೇ ಇದ್ದರು. ಅಧ್ಯಕ್ಷೀಯ ಚುನಾವಣೆಗಿಂತಲೂ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಆಯ್ಕೆಯೇ ಅಮೆರಿಕದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದು ಒಬಾಮಾ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನೂ ವಹಿಸಿತ್ತು.  ‘We Need Change’, ‘Yes we can’ ಎಂಬ ಘೋಷವಾಕ್ಯಗಳೊಂದಿಗೆ ಒಬಾಮಾ ಜನರ ಬಳಿಗೆ ಹೋದರು.  ಹಿಲರಿ ಕ್ಲಿಂಟನ್ 'ಅನುಭವದ' ಮಾತನಾಡುತ್ತ ಜನರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸಿದರು. ಮೊದಮೊದಲು ಜನರ ಭಾವನೆಗಳು ಅನುಭವಿ ಎಂಬ ಕಾರಣಕ್ಕೆ ಹಿಲರಿಯತ್ತ ವಾಲುತ್ತಿದ್ದವು. ಆದರೆ ವಾಸ್ತವವನ್ನರಿತು ಬದಲಾವಣೆ ತರಲು ತಮ್ಮಲ್ಲಿರುವ ಸಾಮರ್ಥ್ಯವನ್ನು ಜನರಿಗೆ ಬಿಡಿಬಿಡಿಯಾಗಿ ಬಿಚ್ಚಿಟ್ಟರು ಒಬಾಮಾ. ಹಿಲರಿ ತಮ್ಮ ಅನುಭವದ ಬಗ್ಗೆ ಹೇಳಿದರೇ ಹೊರತು, ಬದಲಾವಣೆಯ ಬಗ್ಗೆ ಅಲ್ಲ. ಅಭ್ಯರ್ಥಿ ಆಯ್ಕೆಯಲ್ಲಿ ಒಬಾಮಾಗೆ ಶೇ.52ರಷ್ಟು ಮತ ಬಂದರೆ, ಹಿಲರಿ ಶೇ.42 ಮತಗಳಿಗೆ ತೃಪ್ತಿಪಡಬೇಕಾಯಿತು. ಹಿರಿತನಕ್ಕಿಂತಲೂ ಇಚ್ಛಾಶಕ್ತಿಯೇ ಮುಖ್ಯ ಎಂಬುದನ್ನು ಸಾಬೀತುಪಡಿಸಿದರು. ಇದು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಅವಕಾಶವನ್ನು ಒಬಾಮಾಗೆ ತಂದಿತ್ತಿತು. ಇದರ ಪರಿಣಾಮ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಜಾನ್ ಮೆಕೇನ್ ಅವರ ಹಿನ್ನಡೆಗೂ ಕಾರಣವಾಯಿತು. ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಆಯ್ಕೆಯಂತೆಯೇ ಸಾಗುತ್ತಿದೆ ಭಾರತದಲ್ಲಿ ಎನ್.ಡಿ.ಎ. ಪ್ರಧಾನಿ ಅಭ್ಯರ್ಥಿ ಆಯ್ಕೆ. ನರೇಂದ್ರ ಮೋದಿ ಮುಂಚೂಣಿಯಲ್ಲಿದ್ದರೂ, ಎಲ್.ಕೆ.ಅಡ್ವಾಣಿ ಸೇರಿದಂತೆ ಕೆಲವು ನಾಯಕರುಗಳ ನಿರ್ಧಾರಗಳು ಕುತೂಹಲ ಹುಟ್ಟಿಸಿವೆ. ಅಡ್ವಾಣಿಯವರು ಹಿರಿಯರಾದರು, ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದರೂ, 2009ರಲ್ಲಿಯೇ ದೊರೆತ ಅವಕಾಶವನ್ನು ಕಳೆದುಕೊಂಡಿದ್ದಾರೆ. ಅಲ್ಲದೆ ನರೇಂದ್ರ ಮೋದಿ ಗುಜರಾತ್ನಲ್ಲಿನ ಅಭಿವೃದ್ಧಿ ಮತ್ತು ಯು.ಪಿ.ಎ.ವನ್ನು ಎದುರಿಸುವ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿರುವುದರಿಂದ ದೇಶಾದ್ಯಂತ ಬದಲಾವಣೆಯ ಗಾಳಿ ಬಲವಾಗಿಯೇ ಬೀಸುತ್ತಿದೆ. 1957ರಲ್ಲಿಯೇ ಲೋಕಸಭಾ ಸದಸ್ಯರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಮತ್ತು 1989ರಿಂದಲೂ ಲೋಕಸಭೆಗೆ ಆಯ್ಕೆಯಾಗುತ್ತ ಬಂದಿರುವ ಎಲ್.ಕೆ. ಅಡ್ವಾಣಿ ಅವರ ಅನುಭವವನ್ನು ಮೋದಿಯವರೊಂದಿಗೆ ಹೋಲಿಸಿ 'ಅನನುಭವಿ' ಎಂಬ ಪಟ್ಟ ಕಟ್ಟುವವರೂ ಇದ್ದಾರೆ. ಆದರೆ ಯಾವುದೇ ಅನುಭವವೂ ಇರದ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಹುದ್ದೆಯನ್ನು ಸಂಭಾಳಿಸಿದ ರೀತಿ ಮತ್ತು ಸತತ ನಾಲ್ಕನೇ ಬಾರಿಗೂ ಗೆದ್ದು ಬಂದದ್ದನ್ನು ನೋಡಿದರೆ ಅವರ ಸಾಮರ್ಥ್ಯದ ಅರಿವಾಗುತ್ತದೆ.  
ಒಬಾಮಾ ಅವರ ಅಭ್ಯರ್ಥಿ ಆಯ್ಕೆಯ ಸ್ಪರ್ಧೆ ಮತ್ತು ಚುನಾವಣೆಯಲ್ಲಿ ಪ್ರಚಾರಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಂಡದ್ದು ಸಾಮಾಜಿಕ ಜಾಲತಾಣಗಳನ್ನು. 'ಸ್ಟೂಡೆಂಟ್ಸ್ ಫಾರ್ ಬರಾಕ್ ಒಬಾಮಾ' ತರಹದ ಪ್ರೊಫೈಲ್ಗಳ ಮೂಲಕ ಒಬಾಮಾ ಜನರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಒಂದು ಅಂದಾಜಿನ ಪ್ರಕಾರ ಫೇಸ್ಬುಕ್ನಲ್ಲಿ ಒಬಾಮಾ ಮತ್ತು ಹಿಲರಿ ಕ್ಲಿಂಟನ್ ಅಭಿಮಾನಿಗಳು 6:1 ರಷ್ಟಿದ್ದರು. ಸದ್ಯ ಭಾರತದಲ್ಲಿನ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಾದರೂ ರಾಜಕಾರಣಿಗಳ ಪಟ್ಟಿಯಲ್ಲಿ ನರೇಂದ್ರ ಮೋದಿಯೇ ಮೊದಲಿಗರು.
ಒಬಾಮಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಆಡಳಿತ ವಿರೋಧಿ ಅಲೆ.  ಅಮೆರಿಕ ಆರ್ಥಿಕವಾಗಿ ಮುಗ್ಗರಿಸುವ ಲಕ್ಷಣಗಳಿದ್ದರೂ, ಇರಾಕ್ ಮೇಲಿನ ಯುದ್ಧ ಮತ್ತು ಆಡಳಿತದಲ್ಲಿ ವೈಫಲ್ಯದಿಂದಾಗಿ ಜಾರ್ಜ್ ಬುಷ್ ಜನಪ್ರಿಯತೆ ಕಳೆದುಕೊಂಡಿದ್ದರು. ಅಮೆರಿಕನ್ನರು ಬದಲಾವಣೆ ಬಯಸುತ್ತಿರುವುದು ಸ್ಪಷ್ಟವಾಗಿತ್ತು.  ಸಾರ್ವತ್ರಿಕ ಆರೋಗ್ಯ ಪಾಲನೆಗೆ ಒತ್ತು, ಸಂಪೂರ್ಣ ಉದ್ಯೋಗ, ಗ್ರೀನ್ ಅಮೆರಿಕ, ಅಮೆರಿಕದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ಕಠಿಣ ಕ್ರಮಗಳು ಹೀಗೆ ಒಬಾಮಾ ತಾವು ಅಧಿಕಾರಕ್ಕೆ ಬಂದರೆ ತರಲಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಜನರ ಮುಂದಿಡುತ್ತಾ ಹೋದರು. ಇದು ಅಭ್ಯರ್ಥಿಯ ಆಯ್ಕೆಯಲ್ಲಿ ಹಿಲರಿ ಕ್ಲಿಂಟನ್ ಮತ್ತು ಚುನಾವಣೆಯಲ್ಲಿ ಮೆಕೇನ್ ಸೋಲಿಗೆ ಕಾರಣವಾಯಿತು. ಸದ್ಯ ಭಾರತದಲ್ಲಿಯೂ ಆಡಳಿತ ವಿರೋಧಿ ಅಲೆಯದ್ದೇ ಚರ್ಚೆಗಳು ನಡೆಯುತ್ತಿವೆ. ಯುಪಿಎ ಸರ್ಕಾರದಲ್ಲಿ ನಡೆದಿರುವ ಭಾರೀ ಹಗರಣಗಳು, ಆರ್ಥಿಕ ತಜ್ಞರೇ ಪ್ರಧಾನಿಯಾದರೂ ಆರ್ಥಿಕವಾಗಿ ಭಾರತ ಯಶ ಗಳಿಸದಿರುವುದು, 19 ಕಿ.ಮೀ. ವರೆಗೆ ಚೀನಾ ದೇಶದೊಳಗೆ ಸೈನ್ಯ ಕಳುಹಿಸಿದ್ದು, ಆಂತರಿಕವಾಗಿ ಹಲವು ಗಲಭೆಗಳ ನಿಯಂತ್ರಣದಲ್ಲಿನ ವೈಫಲ್ಯಗಳು ಆಡಳಿತ ಪಕ್ಷದ ಮೇಲೆ ಬೊಟ್ಟು ಮಾಡಿ ತೋರಿಸುತ್ತಿವೆ. ವಿರೋಧ ಪಕ್ಷಗಳು ಪ್ರಧಾನಿ ರಾಜಿನಾಮೆಗೆ ಒತ್ತಾಯಿಸಿದ್ದೇ ಆಯಿತು. ಮೋದಿ ಯುಪಿಎ ಸರ್ಕಾರವನ್ನು ಟೀಕಿಸುವುದಷ್ಟೇ ಅಲ್ಲ, ಮುಂದೆ ಆಗಬೇಕಾಗಿರುವ ಬದಲಾವಣೆಗಳ ಬಗ್ಗೆಯೂ ಪ್ರಸ್ತಾಪಿಸುತ್ತಿದ್ದಾರೆ. '21ನೆಯ ಶತಮಾನವೆಂದರೆ ಅದು ಜ್ಞಾನದ ಕಾಲ. ಜ್ಞಾನವೇ ಬಡತವನವನ್ನು ತೊಲಗಿಸುತ್ತದೆ ಎನ್ನುತ್ತಾರೆ ಮೋದಿ. 'ಸರ್ ಕ್ರೀಕ್' ವಿವಾದವೆದ್ದಾಗ ಪಾಕಿಸ್ತಾನದೊಂದಿಗೆ ಮಾತುಕತೆಯನ್ನೇ ನಿಲ್ಲಿಸಿ ಎಂದು ಪ್ರಧಾನಿಗೆ ಒತ್ತಾಯಿಸಿದ್ದರು. ಜೊತೆಗೆ ಗುಜರಾತ್ನ ಅಭಿವೃದ್ಧಿಗೆ ಪೂರಕವಾದ ಯೋಜನೆಗಳ ಬಗ್ಗೆಯೂ ಪ್ರಸ್ತಾಪಿಸುತ್ತಿದ್ದಾರೆ.
ಒಬಾಮಾರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನಗಳು ನಡೆದವು.  ಬರಾಕ್ 'ಹುಸೇನ್' ಒಬಾಮಾ ಹೆಸರೇ ವಿರೋಧಿಗಳಿಗೂ ಅಸ್ತ್ರವಾದಂತಿತ್ತು. ನೈತಿಕವಾಗಿ ಅಮೆರಿಕದ ಸ್ಥೈರ್ಯವನ್ನು ಕಸಿದದ್ದು ಮುಸ್ಲಿಂ ಭಯೋತ್ಪಾದಕರು ನಡೆಸಿದ 09/11ರ ದಾಳಿ.  ಮುಸ್ಲಿಂ ಹೆಸರಿನ ಜೊತೆಗೆ ಒಬಾಮಾ ಕುಟುಂಬ ಮೂಲತಃ ಆಫ್ರಿಕನ್ನರು (ಆಫ್ರಿಕನ್ ಅಮೆರಿಕನ್) ಎಂಬುದು ಸೇರಿದಂತೆ, ಪಾಸ್ಪೋರ್ಟ್ ವಿವಾದ, ನಾಫ್ತಾ ವಿಚಾರಗಳನ್ನು ಮುಂದಿಟ್ಟುಕೊಂಡು ವೈಯಕ್ತಿಕವಾಗಿ ಕುಗ್ಗಿಸುವ ಪ್ರಯತ್ನಗಳು ನಡೆದವು.  ಆದರೆ ಅವರು ಮೂಡಿಸಿದ್ದ ಭರವಸೆಗಳ ನಡುವೆ ಇವೆಲ್ಲವೂ ಕೊಚ್ಚಿ ಹೋದವು. ನರೇಂದ್ರ ಮೋದಿಯವರನ್ನು ಟೀಕಿಸಲು ವಿರೋಧಿಗಳು ಬಳಸುವುದು 2002ರ ಗುಜರಾತ್ ಹಿಂಸಾಚಾರ.  ಆದರೆ ಅವರ ಹೆಸರಿನಲ್ಲಿ ಭ್ರಷ್ಟಾಚಾರದ ಆರೋಪಗಳಾಗಲಿ, ಆಡಳಿತದ ವೈಫಲ್ಯವಾಗಲಿ ಇಲ್ಲ. ಹೀಗಾಗಿ 2002ರಿಂದ ಇಲ್ಲಿಯವರೆಗೂ ರಾಷ್ಟ್ರಮಟ್ಟದ ಮಾಧ್ಯಮಗಳಿಗೆ, ಕೆಲವು ಬುದ್ಧಿಜೀವಿಗಳಿಗೆ, ವಿರೋಧಿ ಪಕ್ಷಗಳಿಗೆ ಬೇರೆ ಕಾರಣಗಳು ಸಿಗುತ್ತಿಲ್ಲ.  ಒಂದೇ ವಿಚಾರವನ್ನು ಮುಂದಿಟ್ಟುಕೊಂಡು ಎಷ್ಟೇ ಅಪಪ್ರಚಾರ ನಡೆಸಿದರೂ, ಗುಜರಾತ್ನ ಅಭಿವೃದ್ಧಿಯ ಬಗ್ಗೆ ಪತ್ಯಕ್ಷವಾಗಿ ಮತ್ತು ತಾನು ಪ್ರಧಾನಿಯಾದರೆ ಬಯಸಬಹುದಾದ ಬದಲಾವಣೆಗಳ ಬಗ್ಗೆ ಪರೋಕ್ಷವಾಗಿ ತಿಳಿಸುತ್ತಾ ದೇಶವಾಸಿಗಳಲ್ಲಿ ಭರವಸೆ ಮೂಡಿಸುತ್ತಿದ್ದಾರೆ.
ಪಕ್ಷದ ಅಭ್ಯರ್ಥಿ ಆಯ್ಕೆಯಾಗುವ ಬಗೆಗಿನ ಬೆಳವಣಿಗೆಗಳು ಮತ್ತು ಇದರ ಸುತ್ತ ದೇಶಾದ್ಯಂತ ಚರ್ಚೆಯಾಗುತ್ತಿರುವುದು ಪರೋಕ್ಷವಾಗಿ ನರೇಂದ್ರ ಮೋದಿಯವರಿಗೆ ಅನುಕೂಲವಾಗಲಿದೆ. ತಮ್ಮ ಶಕ್ತಿಯನ್ನು ತಮ್ಮದೇ ಪಕ್ಷದವರಿಗೆ ತೋರುತ್ತಲೇ, ದೇಶದ ಜನತೆಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.
ಈ ಶತಮಾನ ಭಾರತೀಯರದ್ದು ಎಂಬುದನ್ನು ಕಾರ್ಯರೂಪಕ್ಕಿಳಿಸುವ ನಾಯಕನ ಅಗತ್ಯವಿದೆ. 1947ರಿಂದ 1991ರವರೆಗಿನ ಬೆಳವಣಿಗೆಯ ವೇಗಕ್ಕೂ, 1991ರಿಂದೀಚೆಗೆ ಆದ ಬೆಳವಣಿಗೆಗೂ ಅಜಗಜಾಂತರ ವ್ಯತ್ಯಾಸವಿದೆ.  ಭಾರತದ ಅರ್ಥವ್ಯವಸ್ಥೆ ಹಿಗ್ಗಿದೆ. ಸಂಪರ್ಕ, ಸಾರಿಗೆ, ಹಣಕಾಸು ಹಾಗೂ ಹೈಟೆಕ್ ಕ್ಷೇತ್ರಗಳು ಭಾರತದಲ್ಲಿ ಗಟ್ಟಿ ನೆಲೆ ಕಂಡುಕೊಂಡಿವೆ. ಅದರಲ್ಲೂ ಬೆಂಗಳೂರಿನ ಬೆಳವಣಿಗೆ ಕಂಡು ಬರಾಕ್ ಒಬಾಮಾ ಅವರೇ ಅಚ್ಚರಿಪಡುತ್ತಿದ್ದಾರೆ. ಆದರೆ ಈ ಬದಲಾವಣೆಗಳು ಹೆಚ್ಚಿನ ಜನರಿಗೆ ಇನ್ನೂ ತಲುಪಿಲ್ಲ. ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳು ದೊರೆಯುವಂತಹ ಕಾರ್ಯಗಳು ಇನ್ನಷ್ಟೇ ಆಗಬೇಕಿದೆ. ಶ್ರೀಸಾಮಾನ್ಯನ ನಾಯಕನೆಂದರೆ ಆಟದ ನಿಯಮಗಳನ್ನಷ್ಟೇ ಬದಲಾಯಿಸುವವನಾಗಬಾರದು, ಜನಹಿತಕ್ಕಾಗಿ ಆಟವನ್ನೇ ಬದಲಾಯಿಸುವಷ್ಟು ತಾಕತ್ತಿರಬೇಕು. ಇಂತಹ ಬದಲಾವಣೆಯನ್ನೇ ಅಮೆರಿಕನ್ನರು 2008ರಲ್ಲಿ ಬಯಸಿದ್ದರು.  ಪ್ರತಿಫಲವೇ ಒಬಾಮಾ ಅಧ್ಯಕ್ಷರಾಗಿದ್ದು. ಎರಡನೇ ಅವಧಿಗೂ ಆಯ್ಕೆಯಾಗಿದ್ದಾರೆ. ಇಂತಹುದೇ ಹಾದಿಯಲ್ಲಿ ಸಾಗುತ್ತಿರುವ ನರೇಂದ್ರ ಮೋದಿ ಯಶಸ್ವಿಯಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

- ಗೋಪಾಲಕೃಷ್ಣ ಕೆ.ಸಿ.
gkckm@yahoo.in

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.