

ಒಂಬತ್ತು ವರ್ಷಗಳ ಹಿಂದಿನ ಮಾತು. ಚೆನ್ನೈನ ಟೆನಿಸ್ ಅಂಗಳ ಅದಾಗಲೇ ಕಾವೇರಿತ್ತು. ಸ್ಪರ್ಧೆಯ ತುರುಸಿಗಿಂತ ಹೆಚ್ಚಾಗಿ ತಾಪಮಾನದ ಬಿಸಿ ಎಲ್ಲರ ಬೆವರಿಳಿಸಿತ್ತು. ಕೃತಕವಾಗಿ ಹಾಸಲಾಗಿದ್ದ ಅಂಕಣದ ಮೇಲೆ ಟೆನಿಸ್ ಚೆಂಡು ಅತ್ತಿಂದಿತ್ತ ಪುಟಿಯುತ್ತಿತ್ತು. ತೀರಾ ಹಿರಿಯ ಆಟಗಾರರ ನಡುವೆ ಭರವಸೆಯ ಕಿರಿ ಆಟಗಾರರು ತಮ್ಮ ಮುಂದಿನ ಟೆನಿಸ್ ಜೀವನದ ಹೆಜ್ಜೆ ಗುರುತುಗಳನ್ನು ಕಂಡುಕೊಳ್ಳುತ್ತಿದ್ದರು. ಹಲವರಿಗೆ ತಮ್ಮ ರ್ಯಾಂಕಿಂಗ್ ಹೆಚ್ಚಿಸಿಕೊಳ್ಳಲು ಚೆನ್ನೈ ಓಪನ್ ಟೆನಿಸ್ ಟೂರ್ನಿ ಪ್ರತಿ ವರ್ಷದ ಜನವರಿಯ ಸ್ಟಾಪ್ ಓವರ್ ಆಗಿತ್ತು. ಅಂತಹುದೇ ಇರಾದೆಯಿಂದ ಸ್ಪೇನಿನ ಹದಿಹರೆಯದ ಆಟಗಾರ ಅಲ್ಲಿ ಬೆವರಿಳಿಸುತ್ತಿದ್ದ. ರ್ಯಾಂಕಿಂಗ್ನಲ್ಲಿ ಇನ್ನೂ ಕೆಳಸ್ತರದಲ್ಲಿಯೇ ಇದ್ದರೂ ಆ ವಯಸ್ಸಿಗೇ ಆತನ ಛಲ, ಹೋರಾಟದ ಮನೋಭಾವ ಮತ್ತು ಪ್ರಬಲ ಹೊಡೆತಗಳು ಎಲ್ಲರ ಗಮನ ಸೆಳೆದಿದ್ದವು. ಕುತ್ತಿಗೆಯವರೆಗೆ ಹರವಿಕೊಂಡ ನೀಳಕೇಶಕ್ಕೆ ಒಪ್ಪುವ ನೀಳಕಾಯ. ಆ ಹುಡುಗನ ಬಗ್ಗೆ ಇಂಡಿಯನ್ ಓಪನ್ ಪಂದ್ಯಾವಳಿಯ ಪ್ರೇರಕ ಶಕ್ತಿಗಳಲ್ಲಿ ಒಬ್ಬರಾಗಿದ್ದ ವಿಜಯ್ ಅಮೃತ್ರಾಜ್ ಹೇಳಿದ್ದೇನೆಂದರೆ 'ಈತ ಸಾಮಾನ್ಯ ಆಟಗಾರನಲ್ಲ. ಇಲ್ಲಿ ಬರುವ ಅನೇಕ ಆಟಗಾರರು ತಮ್ಮ ರ್ಯಾಂಕಿಂಗ್ ಹೆಚ್ಚಿಸಿಕೊಳ್ಳಲು ಸ್ಪರ್ಧಿಸುತ್ತಾರೆಯೇ ಹೊರತು ಅವರಲ್ಲಿ ದೊಡ್ಡ ಮಟ್ಟದ ಸಾಧನೆಯ ಹಸಿವು ಇರುವುದಿಲ್ಲ. ನಾ ಕಂಡಂತೆ ಇಲ್ಲಿ ಬಂದ ಅನೇಕ ಯುವಕರು ಮುಂದೆ ಜಾಗತಿಕ ಟೆನಿಸ್ನಲ್ಲಿ ಹೇಳ ಹೆಸರಿಲ್ಲದಂತಾಗಿದ್ದಾರೆ. ಇಲ್ಲವೇ ಆರಕ್ಕೇರದ ಮೂರಕ್ಕಿಳಿಯದ ಯಥಾಸ್ಥಿತಿ ಆಟಗಾರರಾಗಿದ್ದಾರೆ. ಆದರೆ ಈ ಹುಡುಗ ಅವರಂತಲ್ಲ. ಈತನಲ್ಲಿ ಅದಮ್ಯವಾದ ಛಲ ಇದೆ, ಚಾಂಪಿಯನ್ನರಿಗೆ ತಕ್ಕ ಆಟ ಇದೆ. ಈ ಕಿರಿಯ ವಯಸ್ಸಿನಲ್ಲಿಯೇ ಆಟದ ಸೂಕ್ಷ್ಮಗಳ ಅರಿವು ಈತನಿಗೆ ಇರುವಂತಿದೆ. ದೈಹಿಕವಾಗಿ ಇನ್ನಷ್ಟು ಸಧೃಡನಾದರೆ ಮುಂದೆ ಚಾಂಪಿಯನ್ ಆಟಗಾರ ಆಗಬಲ್ಲ, ಅದರಲ್ಲೂ ಹೆಚ್ಚಿನ ಪುಟಿತ ಇರುವ ಅಂಗಳಗಳಲ್ಲಿ ಈತನನ್ನು ಕಟ್ಟಿ ಹಾಕುವುದು ಕಷ್ಟ. ನನ್ನ ದೃಷ್ಟಿಯಲ್ಲಿ ಹೇಳುವುದಾದರೆ ನಾನು ಈತನಲ್ಲಿ ಭವಿಷ್ಯದ ಚಾಂಪಿಯನ್ ಒಬ್ಬನನ್ನು ನೋಡುತ್ತಿದ್ದೇನೆ' ವಿಜಯ್ ಅಮೃತ್ರಾಜ್ ಇಷ್ಟೆಲ್ಲ ಕೊಚ್ಚಿಕೊಂಡ ಆ ಹುಡುಗ 2004ರ ಆ ಪಂದ್ಯಾವಳಿಯ ಸಿಂಗಲ್ಸ್ನಲ್ಲಿ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದ್ದ. ಆದರೆ ಡಬಲ್ಸ್ನಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದ. ಆದರೂ ಮೊದಲ ಸುತ್ತಿನಲ್ಲಿಯೇ ಸೋತ ಯುವ ಆಟಗಾರನ ಬಗ್ಗೆ ಈ ಪರಿಯ ಹೊಗಳಿಕೆ ಕೇಳಿ ಕೆಲವರಿಗೆ ಮುಜುಗರ ಆಗಿರಲಿಕ್ಕೂ ಸಾಕು. ಆದರೆ ಒಂಬತ್ತು ವರ್ಷ 12 ಗ್ರಾಂಡ್ಸ್ಲಾಂ ಟ್ರೋಫಿ ಗೆಲುವಿನ ತರುವಾಯ ಆ ಭವಿಷ್ಯವಾಣಿ ನಿಜವಾಗಿದೆ. ಅಂದು ಅಷ್ಟೆಲ್ಲ ಹೊಗಳಿಸಿಕೊಂಡ ಆಟಗಾರ ಬೇರಾರೂ ಅಲ್ಲ, ಭಾನುವಾರ ದಾಖಲೆಯ ಎಂಟನೇ ಬಾರಿಗೆ ಫ್ರೆಂಚ್ ಓಪನ್ ಗೆದ್ದ ರಫೆಲ್ ನಡಾಲ್ ಪೆರೆರಾ.
ಸ್ಪೇನಿನಲ್ಲಿ ಜನಮನ ಗೆದ್ದಿರುವ ಆಟಗಳೆಂದರೆ ಗೂಳಿಕಾಳಗ ಮತ್ತು ಫುಟ್ಬಾಲ್. ಅದರಲ್ಲೂ ಫುಟ್ಬಾಲ್ ಅಂತೂ ಒಂದು ಧರ್ಮವೇ ಆಗಿ ಹೋಗಿದೆ. ಅಂತಹುದರಲ್ಲಿ ನಡಾಲ್ ತನ್ನ ವೈಭವವನ್ನು ಟೆನಿಸ್ನಲ್ಲಿ ಕಂಡುಕೊಂಡಿದ್ದರ ಹಿಂದೆ ಒಂದು ಕತೆಯೇ ಇದೆ. ಈತನ ತಂದೆ ವ್ಯಾಪಾರೋದ್ಯಮಿ. ಆದರೆ ಇಬ್ಬರು ಸೋದರ ಮಾವಂದಿರು ವಿಭಿನ್ನ ಅಭಿರುಚಿ ಉಳ್ಳವರು. ಅವರಲ್ಲಿ ಒಬ್ಬ ಸ್ಪೇನಿನ ಖ್ಯಾತ ಫುಟ್ಬಾಲ್ ಪಟು ಮಿಗ್ಯುಯಲ್ ಈತನನ್ನು ಫುಟ್ಬಾಲ್ನತ್ತ ಎಳೆದರೆ ಮತ್ತೊಬ್ಬ ಅಂಕಲ್ ಟೋನಿ ನಡಾಲ್ಗೆ ಟೆನಿಸ್ ಮಾಸ್ಟರ್ ಆದ. ಆರಂಭದ ವರ್ಷಗಳಲ್ಲಿ ಇಬ್ಬರಿಗೂ ನೋವಾಗದಂತೆ ನಡಾಲ್ ಫುಟ್ಬಾಲ್ ಮತ್ತು ಟೆನಿಸ್ ಎರಡನ್ನೂ ಆಡುತ್ತಿದ್ದ. ದಿನಕ್ಕೆ ಗಂಟೆಗಟ್ಟಲೆ ಪ್ರಾಕ್ಟೀಸ್. ಬೆಳಗ್ಗೆ ಟೆನಿಸ್ ಚೆಂಡಿನ ಜೊತೆ ಆಡಿದರೆ ಸಂಜೆ ಕಾಲ್ಚೆಂಡಿನ ಜೊತೆ ಸರಸ. 11ನೇ ವಯಸ್ಸಿಗೆ ಕಾಲಿಡುವ ವೇಳೆಗೆ ನಡಾಲ್ ಇಬ್ಬಂದಿಗೆ ಸಿಲುಕಿದ. ಆತ ಆಡುತ್ತಿದ್ದ ಫುಟ್ಬಾಲ್ ತಂಡಕ್ಕೆ ನೂತನ ಕೋಚ್ ಆಗಮನವಾಯಿತು. ಹಿಂದಿನ ಕೋಚ್ ನಡಾಲ್ನ ಟೆನಿಸ್ ತರಬೇತಿಗೆ ಅಡ್ಡ ಬಂದಿರಲಿಲ್ಲ. ಆದರೆ ಹೊಸ ವ್ಯಕ್ತಿ ಅದಕ್ಕೆ ಕಡಿವಾಣ ಹಾಕಿದ. ಮನೆಯಲ್ಲಿ ತಂದೆ ಸೇರಿದಂತೆ ಎಲ್ಲರೂ ಫುಟ್ಬಾಲ್ನಲ್ಲಿಯೇ ಉಳಿಯುವಂತೆ ನಡಾಲ್ನ ಮೇಲೆ ಒತ್ತಡ ಹೇರಿದ್ದರು. ಆದರೆ ನಡಾಲ್ ಟೆನಿಸ್ ಅನ್ನೇ ಆಯ್ದುಕೊಂಡ. ಅಲ್ಲದೆ ಸೋದರ ಮಾವ ಟೋನಿಯೇ ಆತನ ಮಾರ್ಗದರ್ಶಕನಾದ. ಆತನ ಓರೆ-ಕೋರೆಗಳನ್ನು ತಿದ್ದುವ ಕೆಲಸ ಶುರುಹಚ್ಚಿಕೊಂಡ. ಎರಡೂ ಕೈ ಬಳಸಿ ಫೋರ್ಹ್ಯಾಂಡ್ ಹೊಡೆತ ಹೊಡೆಯುವ ಚಟ ಬಿಡಿಸಿದ. ಎಡತೋಳುಗಳಿಗೆ ಬಲ ತುಂಬಿಸಿ ಚೆಂಡನ್ನು ಬುಲೆಟ್ನಂತೆ ಹೊಡೆಯುವುದನ್ನು ಹೇಳಿಕೊಟ್ಟ, ಅತ್ಯಂತ ಕೆಟ್ಟ ಪಿಚ್ಗಳಲ್ಲಿ, ಕಳಪೆ ಚೆಂಡುಗಳನ್ನು ನೀಡಿ ಆಡಲು, ಗೆಲ್ಲಲು ಹೇಳಿದ. ಇದಕ್ಕೆ ಟೋನಿ ಕೊಟ್ಟ ಸಮಜಾಯಿಷಿ ಎಂದರೆ 'ಕೋರ್ಟು, ಚೆಂಡು, ವಾತಾವರಣದ ನೆಪ ನೀಡದೆ ಗೆಲ್ಲುವುದೊಂದನ್ನೇ ಗುರಿಯಾಗಿಸಿಕೊಂಡು ಆಡಬೇಕು. ಆಗಷ್ಟೇ ಗುರಿ ಸಾಧನೆ ಸುಲಭ' ಎಂದು. ನಡಾಲ್ ಈ ಎಲ್ಲ ಟಿಪ್ಸ್ಗಳನ್ನು ಚಾಚೂತಪ್ಪದೆ ಪಾಲಿಸಿದ. ಗೊಣಗದೆ ಅನುಸರಿಸಿದ. 13ನೇ ವಯಸ್ಸಿಗೆ ಕಾಲಿಡುವ ವೇಳೆಗೆ ನಡಾಲ್ ದಿನದ ಆರು ಗಂಟೆ ಅಭ್ಯಾಸ ನಡೆಸಲಾರಂಭಿಸಿದ. ಅದೂ ಶಾಲೆ ತಪ್ಪಿಸದೆ. ಇದೆಲ್ಲವೂ ನಡಾಲ್ನನ್ನು ಒಬ್ಬ ಗಟ್ಟಿ ಆಟಗಾರನನ್ನಾಗಿಸಿತು. ಜೂನಿಯರ್ ಯೂರೋಪಿಯನ್ ಚಾಂಪಿಯನ್ ಶಿಪ್ ಗೆದ್ದ ಸಂದರ್ಭದಲ್ಲಿ ನಡಾಲ್ಗೆ ಆತನ ಮುಂದಿನ ಗುರಿಯ ಬಗ್ಗೆ ಸ್ಪಷ್ಟ ಅರಿವು ಇತ್ತು. ಟೋನಿಯ ಟೆನಿಸ್ ಪ್ರೇಮ ನಡಾಲ್ ಮೂಲಕ ಹೊಸ ವಿಸ್ತಾರ ಪಡೆದುಕೊಳ್ಳುವ ಲಕ್ಷಣಗಳು ಕಾಣತೊಡಗಿದವು.
Challenge, Confidence, Conviction.
ನಡಾಲ್ನ ಮುಂದಿನ ಹಾದಿ, ಜೂನಿಯರ್ ಸ್ತರದಿಂದ ಸೀನಿಯರ್ ಸ್ತರದವರೆಗೆ ಕೊನೆಗೆ ಜಗಮೆಚ್ಚಿದ ಚಾಂಪಿಯನ್ ಎನಿಸಿಕೊಳ್ಳುವವರೆಗೆ, ಈ ಮೂರು ಪದಗಳಲ್ಲಿ ಅಡಕವಾಗಿದೆ. 2001ರಲ್ಲಿ ವಿಶ್ವದ 811ನೇ ರ್ಯಾಂಕ್ ಆಟಗಾರನಾಗಿದ್ದ ನಡಾಲ್ 2005ರಲ್ಲಿ ಫ್ರೆಂಚ್ ಗೆಲ್ಲುವ ಮಟ್ಟಕ್ಕೆ ಬೆಳೆದುದ್ದರ ಹಿಂದೆ ಇರುವುದು ತನಗೆ ತಾನೇ ಸವಾಲೆಸೆದುಕೊಳ್ಳುವ ಸ್ವಭಾವ. ಎದುರಾಳಿ ಒಡ್ಡುವ ಸವಾಲಿಗಿಂತ ಹೆಚ್ಚಾಗಿ ನಡಾಲ್ ತನಗೆ ತಾನೇ ಸವಾಲು ಎಸೆದುಕೊಂಡ. ಸ್ಪೇನಿನ ಪುಟಿತದ ಅಂಗಳಗಳಿಂದ ಅಮೆರಿಕ, ಆಸ್ಟ್ರೇಲಿಯಾದ ಕೃತಕ ಹಾಸುಗಳು ಮತ್ತು ವಿಂಬಲ್ಡನ್ನ ಹುಲ್ಲಿನ ಹೊದಿಕೆ, ಇದೆಲ್ಲವೂ ನಡಾಲ್ಗೆ ದೊಡ್ಡ ಸವಾಲೇ ಆಗಿದ್ದವು. ನಡಾಲ್ ವೃತ್ತಿಪರ ಟೆನಿಸ್ನ ದೊಡ್ಡ ರಂಗದ ಮೇಲೆ ಕಾಣಿಸಿಕೊಂಡಾಗ ಪೀಟ್ ಸ್ಯಾಂಪ್ರಾಸ್ ಯುಗ ಮುಗಿದು ರೋಜರ್ ಫೆಡರರ್ ಯುಗ ಆರಂಭವಾಗುವುದರಲ್ಲಿತ್ತು. ಆಸ್ಟ್ರೇಲಿಯಾದ ಲೇಟನ್ ಹೆವಿಟ್ ಮತ್ತು ಅಮೆರಿಕದ ಆ್ಯಂಡಿ ರಾಡಿಕ್ ಅವರುಗಳು ಫೆಡರರ್ನ ಸವಾಲುದಾರರಾಗಿದ್ದರು. ಆದರೆ ಫೆಡರರ್ನ ಸರ್ವಾಂಗೀಣ ಆಟ ಈ ಸವಾಲನ್ನು ಮಕಾಡೆ ಮಲಗಿಸಿತು. ಪ್ಯಾರಿಸ್ನ ರೋಲ್ಯಾಂಡ್ ಗ್ಯಾರೋಸ್ ಅಂಕಣ ಹೊರತುಪಡಿಸಿ ಉಳಿದೆಡೆ ಫೆಡರರ್ ಪಾರುಪತ್ಯ ಸ್ಥಾಪನೆಯಾಯಿತು. ಫೆಡರರ್ ಅನಭಿಷಿಕ್ತ ದೊರೆಯಾಗಿ ಮೆರೆದರೆ ಉಳಿದವರೆಲ್ಲರೂ ಆತನ ಸಾಮಂತರಂತೆ ಕಂಡರು. ಇಂತಹ ಸಮಯದಲ್ಲಿಯೇ 2004ರಲ್ಲಿ ನಡೆದ ಮಿಯಾಮಿ ಮಾಸ್ಟರ್ಸ್ ಟೂರ್ನಿಯಲ್ಲಿ ಫೆಡರರ್ನನ್ನು 34ನೇ ರ್ಯಾಂಕ್ ಹೊಂದಿದ್ದ ಆಟಗಾರನೊಬ್ಬ ಆಟ್ಟಾಡಿಸಿಕೊಂಡು ಸೋಲಿಸಿದ್ದ. ಆತ ಬೇರಾರೂ ಅಲ್ಲ ಇದೇ ನಡಾಲ್. ಅಂದಿನ ಸಂದರ್ಭದಲ್ಲಿ ಅದನ್ನು ಫ್ಲೂಕ್ (ಹುಸಿ, ಅಡ್ಬೇಟಿನ ಮೇಲೆ ಗುಡ್ಡೇಟು) ಎಂದೂ ವಿಶ್ಲೇಷಿಸಲಾಗಿತ್ತು. ಆದರೆ ಅದಾಗಿ ಒಂದೇ ವರ್ಷದಲ್ಲಿ ನಡಾಲ್ ರೋಲ್ಯಾಂಡ್ ಗ್ಯಾರೋಸ್ ಅಂಗಳದಲ್ಲಿ ಮೊದಲ ಪ್ರವೇಶದಲ್ಲಿಯೇ ಚಾಂಪಿಯನ್ ಆಗಿ ಹೊರಹೊಮ್ಮಿದಾಗ ಜಗತ್ತು ಈತನ ಪ್ರತಿಭೆಯನ್ನು ಗುರುತಿಸಲಾರಂಭಿಸಿತು. ಬಳಿಕ 2006ರಲ್ಲಿ ಫೆಡರರ್ರನ್ನು ಮಣಿಸಿ, ಮರು ವರ್ಷ ಸಹ ಚಾಂಪಿಯನ್ ಆಗಿ ಹ್ಯಾಟ್ರಿಕ್ ಸಾಧಿಸಿ ರ್ಯಾಂಕಿಂಗ್ನಲ್ಲಿ ಫೆಡರರ್ ಜೊತೆ ಜಿದ್ದಿಗೆ ಬಿದ್ದಾಗ ಅಲ್ಲೊಬ್ಬ ನಿಜವಾದ ಚಾಂಪಿಯನ್ನ ಅನಾವರಣವಾಗಿತ್ತು. ಆದರೂ ಈತನ ಸಾಧನೆಯ ಪಯಣ ಗ್ಯಾರೋಸ್ನ ಆವೆ ಮಣ್ಣಿಗಷ್ಟೇ ಸೀಮಿತ ಎನ್ನುವ ಮಾತುಗಳಿಗೆ ಕೊರತೆ ಇರಲಿಲ್ಲ. ಇದಕ್ಕೆ ತಕ್ಕಂತೆ ಉಳಿದ ಅಂಗಳಗಳಲ್ಲಿ ನಡಾಲ್, ಸಾಧನೆ ಅಷ್ಟಕ್ಕಷ್ಟೇ ಎಂಬಂತಾಗಿತ್ತು. ಫೆಡರರ್ ತಲೆಯ ಮೇಲಿದ್ದ ಪ್ರಭಾವಳಿ ತನ್ನ ಪ್ರಭೆ ಕಳೆದುಕೊಂಡಿರಲಿಲ್ಲ. ಪ್ಯಾರಿಸ್ ಬಿಟ್ಟು ಹೊರಗೆ ಗೆದ್ದು ತೋರಿಸುವ ದೊಡ್ಡ ಚಾಲೆಂಜ್ ನಡಾಲ್ ಮುಂದಿತ್ತು.
ಇಲ್ಲಿ ನಡಾಲ್ ಪಾಲಿಗೆ ಫೆಡರರ್ ಮಾತ್ರ ಸವಾಲಾಗಿರಲಿಲ್ಲ. ಬದಲಿಗೆ ನಿಧಾನಗತಿಯ ವಿಂಬಲ್ಡನ್ನ ಹುಲ್ಲು ಹಾಸು ಹಾಗೂ ಆಸ್ಟ್ರೇಲಿಯ ಹಾಗೂ ಅಮೆರಿಕನ್ ಓಪನ್ನ ಸಮತಟ್ಟು ಪುಟಿತದ ಅಂಗಳಗಳೂ ನಡಾಲ್ಗೆ ಸವಾಲಾಗಿದ್ದವು. ಅಲ್ಲಿಗೆ ತಕ್ಕಂತೆ ತನ್ನ ಆಟವನ್ನು ಉನ್ನತೀಕರಿಸಿಕೊಳ್ಳಬೇಕಾದ ಸವಾಲಿತ್ತು. ಈ ಅಂಕಣಗಳಲ್ಲಿ ಅದರಲ್ಲಿಯೂ ವಿಂಬಲ್ಡನ್ನಲ್ಲಿ ಫೆಡರರ್ ಕಟ್ಟಿದ್ದ ಸಾಮ್ರಾಜ್ಯ ಒಡೆಯಲು ಆತನ ಆಟದ ಮಟ್ಟ ಮುಟ್ಟುವ ಸವಾಲಿತ್ತು. ಈ ಸವಾಲು ಸ್ವೀಕರಿಸಲಾಗದೆ ರಾಡಿಕ್ ಮತ್ತು ಹೆವಿಟ್ಗಳು ಮೂಲೆಗುಂಪಾಗಿದ್ದರು. ಬರಿಯ ಫೋರ್ಹ್ಯಾಂಡ್, ಏಸ್ಗಳಿಂದ, ತೋಳ್ಬಲದ ಆಟದಿಂದ ಫೆಡರರ್ರನ್ನು ಮಣಿಸುವುದು ಸುಲಭವಾಗಿರಲಿಲ್ಲ. ಅದಕ್ಕಾಗಿ ನೆಟ್ ಬಳಿ ಚಾಕಚಕ್ಯತೆ, ಬೇಸ್ಲೈನ್ ಹಾಗೂ ಕ್ರಾಸ್ಕೋಟ್ ಬ್ಯಾಕ್ಹ್ಯಾಂಡ್ ಹೊಡೆತಗಳೂ ಬೇಕಿದ್ದವು. ಇದು ಯಾವುದೇ ಆಟಗಾರನಿಗೆ ದೊಡ್ಡ ಸವಾಲೇ. ಇಲ್ಲಿ ನಡಾಲ್ ತನಗೆ ತಾನೇ ಸವಾಲೆಸೆದುಕೊಂಡ.ಅಷ್ಟೇ ಅಲ್ಲ 2008ರಲ್ಲಿ ಅದೇ ಫೆಡರರ್ನನ್ನು ಅದೇ ವಿಂಬಲ್ಡನ್ನಿನ ಹುಲ್ಲಿನಲ್ಲಿ ಹೂಳುವ (ಸೋಲಿಸುವ) ಮೂಲಕ ತನ್ನ ಆಟದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡ. ಅದಾದ ಬಳಿಕ ಮೆಲ್ಬೋರ್ನ್ ಮತ್ತು ನ್ಯೂಯಾರ್ಕ್ಸಹ ಕೈ ಹಿಡಿಯಿತು. ಈ ಇಡೀ ಪಯಣದಲ್ಲಿ ಎದ್ದು ಕಂಡಿದ್ದು ಸವಾಲಿಗೆ ಎಂದೂ ಬೆನ್ನು ಮಾಡದ ಈ ಮನೋಭಾವವೆ.
ಇನ್ನು ನಡಾಲ್ರಲ್ಲಿ ತುಂಬಿ ತುಳುಕುತ್ತಿರುವ ವಿಶ್ವಾಸ (Confidence) ಮತ್ತು ಆತ್ಮಬಲದ (Conviction) ಬಗ್ಗೆ ಹೇಳುವುದಾದರೆ ಅವನನ್ನು ನೆರಳಿನಂತೆ ಹಿಂಬಾಲಿಸುತ್ತಿರುವ ಬೆನ್ನು ಮತ್ತು ಎಡ ಮೊಣಕಾಲಿನ ಸಮಸ್ಯೆಯತ್ತ ನೋಡಬೇಕು. ನಡಾಲ್ನ ಆಟದ ವೈಖರಿ ಮತ್ತು ನೀಳಕಾಯ, ಈ ಎರಡರ ಕೊಡುಗೆಯಾಗಿ ಅಂಟಿದ ಬೇನೆ 2012ರ ವೇಳೆಗೆ ಉಚ್ಛ್ರಾಯ ತಲುಪಿ ಕಳೆದ ವರ್ಷ ವಿಂಬಲ್ಡನ್ ನಂತರ ಈಗಿನ ಫ್ರೆಂಚ್ ಓಪನ್ಗೆ ಮುಂಚೆ, ಸುಮಾರು ಎಂಟು ತಿಂಗಳು ನಡಾಲ್ ಟೆನಿಸ್ ರ್ಯಾಕೆಟ್ ಹಿಡಿಯುವ ಸ್ಥಿತಿಯಲ್ಲಿಯೇ ಇರಲಿಲ್ಲ. ಒಮ್ಮೆ ಅಂಗಳಕ್ಕೆ ಬಂದರೂ ಕಾಲು ಕೈಕೊಟ್ಟು ಮನೆ ಸೇರಿಕೊಳ್ಳಬೇಕಾಯಿತು. ಬೆನ್ನು ನೋವಿಗೆ ಮಣಿದು ಆಡುವುದರಿಂದಲೇ ದೂರ ಸರಿದ ಅನೇಕ ಆಟಗಾರರು ಇರುವಾಗ ನಡಾಲ್ ನೋವು ನುಂಗಿಕೊಂಡು ಮತ್ತೆ ಬಂದಿದ್ದಾನೆ. ಮತ್ತೆ ಗೆದ್ದಿದ್ದಾನೆ. ಇದು ಈತನ ಆತ್ಮವಿಶ್ವಾಸ ಮತ್ತು ಆತ್ಮಬಲದ ಪ್ರತೀಕ. 'ಮತ್ತೆ ಇಲ್ಲಿ ಬಂದು ಆಡುತ್ತೇನೆ ಎಂಬ ವಿಶ್ವಾಸ ಐದು ತಿಂಗಳ ಹಿಂದೆ ಇರಲಿಲ್ಲ. ನನ್ನ ಬೆನ್ನಿಗೆ ನಿಂತವರೂ ಹೀಗೇ ಹೇಳಿದ್ದರು. ಇಂದು ಅಸಂಭವವನ್ನು ಸಂಭವವಾಗಿಸಿದ ಹೆಮ್ಮೆ ನನಗಿದೆ' ಎಂದು ನಡಾಲ್ ಫ್ರೆಂಚ್ ಓಪನ್ ಗೆದ್ದ ಬಳಿಕ ಹೇಳಿದರು. ಈ ಹೆಮ್ಮೆ ಕೇವಲ ನಡಾಲ್ರದ್ದು ಮಾತ್ರವಲ್ಲ. ಏಕೆಂದರೆ ಈತ ಟೆನಿಸ್ ಜಗತ್ತಿನ ಹೆಮ್ಮೆ.
HATS OFF to a true Champion !
- ಕೆ.ಎಸ್.ಜಗನ್ನಾಥ್
jagannath.kudinoor@gmail.com