ಬಲಗೊಳ್ಳಬೇಕಾದ ಗ್ರಾಹಕ ರಕ್ಷಣಾ ಕಾನೂನು
ತಯಾರಕ, ವಿತರಕ ಹಾಗೂ ವ್ಯಾಪಾರಿಗಳಿಂದ ಶೋಷಣೆಗೆ ಒಳಗಾಗಿದ್ದ ಗ್ರಾಹಕರನ್ನು ರಕ್ಷಿಸಲು ನಡೆದ ಗ್ರಾಹಕರ ಚಳವಳಿಯು ಬಲಗೊಂಡ ಕಾರಣ 'ಗ್ರಾಹಕ ರಕ್ಷಣಾ' ಕಾನೂನು ಜಾರಿಯಲ್ಲಿ ಬಂದಿದೆ. ಜಾರಿಯಲ್ಲಿ ಬಂದರೂ ಶೈಶವಾವಸ್ಥೆಯಲ್ಲಿದ್ದ ಸದರಿ ಕಾನೂನನ್ನು ಸಮರ್ಪಕವಾಗಿ ಜಾರಿಯಲ್ಲಿ ತರುವಂತೆ ಗ್ರಾಹಕ ರಕ್ಷಕ ಸಂಘಟನೆಗಳ ಒತ್ತಾಯದಿಂದ ರಾಜ್ಯ, ರಾಷ್ಟ್ರ ಹಾಗೂ ಜಿಲ್ಲಾ ಮಟ್ಟದಲ್ಲಿ ದೂರು ವಿಚಾರಣಾ ವೇದಿಕೆಗಳು ರಚಿಸಲ್ಪಟ್ಟಿವೆ.
ನ್ಯಾಯಾಲಯ ಶುಲ್ಕವಿಲ್ಲದ, ಹೆಚ್ಚಿನ ಆರ್ಥಿಕ ಭಾರವಿಲ್ಲದೆ ಅಂಚೆ ಕಾರ್ಡ್ ಮುಖಾಂತರ ಕೂಡಾ ಇಂಥ ವೇದಿಕೆಗಳಿಗೆ ದೂರು ಸಲ್ಲಿಸಿ ತಮ್ಮ ತೊಂದರೆಗಳನ್ನು ಗ್ರಾಹಕರು ಪರಿಹಾರ ಮಾಡಿಕೊಳ್ಳಬಹುದಾಗಿದೆ. ಅನಾವಶ್ಯಕ ವೆಚ್ಚವಿಲ್ಲದ, ನೇರವಾಗಿ ದೂರು ಪಡೆದು ತ್ವರಿತ ಹಾಗೂ ಸಮರ್ಪಕ ನಿರ್ಣಯ ನೀಡುವುದರಿಂದ ಇಂತಹ ದೂರು ನಿವಾರಣಾ ವೇದಿಕೆಗಳು ಜನಪ್ರಿಯವಾಗಿದೆ.
ಬಾಡಿಗೆ ಹಾಗೂ ಸ್ಥಾಪನಾ ವೆಚ್ಚವನ್ನು ಪಡೆದು ಸೇವೆಯನ್ನು ನೀಡುವ ವಿದ್ಯುತ್ ಮಂಡಳಿ, ದೂರವಾಣಿ, ನಗರಸಭೆ ಹಾಗೂ ಮಹಾನಗರ ಸಭೆಗಳು ಮನೆ ಬಳಕೆದಾರರಿಗೆ ಮಾಹೆಯಾನ ಅಥವಾ ನಿರ್ದಿಷ್ಟ ಶುಲ್ಕವನ್ನು ಪಡೆದು ನೀರು, ವಿದ್ಯುತ್ ಸರಬರಾಜು ಮಾಡುವ ವ್ಯವಸ್ಥೆ ಕೂಡ ಸದರಿ ಕಾನೂನಿನಡಿ "ಸೇವೆ" ಎಂದು ಪರಿಗಣಿಲಾಗಿದೆ. ಅಂತಹ ಇಲಾಖೆಗಳು ನೀಡುವ ಸೇವೆಗಳು ಅಸಮರ್ಪಕ, ಅಸಂಬದ್ಧ ಹಾಗೂ ಅವಾಸ್ತವಿಕವಾಗಿದ್ದರೆ ಅವುಗಳಲ್ಲಿ ನ್ಯೂನತೆಗಳಿದ್ದರೆ ದೂರು ನಿವಾರಣಾ ವೇದಿಕೆಗಳಿಗೆ ದೂರು ಸಲ್ಲಿಸಬಹುದಾಗಿದೆ. ಬಾಧಿತ ವ್ಯಕ್ತಿಗಳು ನ್ಯೂನತೆ ಸರಿಪಡಿಸಿಕೊಂಡು ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತಿರುವುದು ಸ್ವಾಗತಾರ್ಹ.
ಆದರೆ ಈಗಿರುವ ಗ್ರಾಹಕರ ರಕ್ಷಣಾ ಕಾನೂನಿನಡಿಯಲ್ಲಿ ಮಧ್ಯಂತರ ತಾಕೀತಿನ ಅಧಿಕಾರವನ್ನು ಗ್ರಾಹಕರ ವೇದಿಕೆಗಳು ಹೊಂದಿಲ್ಲವೆಂದು ರಾಷ್ಟ್ರೀಯ ಆಯೋಗವು ತನ್ನ ಆದೇಶದಲ್ಲಿ ತಿಳಿಸಿದೆ. ರಾಷ್ಟ್ರೀಯ ಆಯೋಗವು ನೀಡಿದ ತೀರ್ಪಿನಿಂದಾಗಿ ವಿನಾ ಕಾರಣ ದೂರವಾಣಿ, ವಿದ್ಯುತ್ ಮಂಡಳಿ, ಪುರಸಭೆಗಳು ಗ್ರಾಹಕರುಗಳ ತಪ್ಪಿಲ್ಲದಿದ್ದರೂ ಸದರಿ ಸಂಸ್ಥೆಗಳ ಹೊಣೆಗೇಡಿ ವರ್ತನೆಯಿಂದಾಗಿ ಗ್ರಾಹಕನು ಮಾನಸಿಕ ಹಿಂಸೆ ಹಾಗೂ ಸೇವಾ ಸೌಲಭ್ಯಗಳಿಂದ ವಂಚಿತನಾಗುತ್ತಿದ್ದಾನೆ.
1997ರಲ್ಲಿ ಧಾರವಾಡದ ಗ್ರಾಹಕರ ರಕ್ಷಣಾ ವೇದಿಕೆಯ ಮುಂದೆ ದೂರು ಸಂ.243/97 ರಲ್ಲಿ ವಿಚಾರಣೆಗೆ ಬಂದ ಪ್ರಕರಣದಲ್ಲಿ ಉಲ್ಲೇಖ ಅರ್ಹವಾಗಿದೆ. ಧಾರವಾಡದ ದೂರವಾಣಿ ಗ್ರಾಹಕನಾಗಿದ್ದು ನಾನು ಪ್ರತಿ ತಿಂಗಳು ನನ್ನ ಮನೆಯ ದೂರವಾಣಿಗೆ ಸಂಬಂಧಿಸಿದ ಬಿಲ್ಲು ಪಾವತಿಸುತ್ತಿದ್ದರೂ, ದಿ. 11.7.1997ರಂದು ದೂರವಾಣಿ ಇಲಾಖೆ ದೂರವಾಣಿ ಬಿಲ್ ರೂಪದಲ್ಲಿ ರೂ. 7168 ರೂ.ಗಳನ್ನು ತುಂಬುವಂತೆ
ಬಿಲ್ ಕಳುಹಿಸಿಕೊಟ್ಟಿತ್ತು. ನಾನು ಪ್ರತಿ ತಿಂಗಳು ದೂರವಾಣಿ ಬಿಲ್ ಸರಿಯಾಗಿ ತುಂಬಿದ್ದರಿಂದ ಈ ಕುರಿತು ದೂರವಾಣಿ ಇಲಾಖೆಗೆ ತಕರಾರು ಸಲ್ಲಿಸಿದೆ. ಅದರ ಅನ್ವಯ ಅವರ ತಕರಾರು ವಿಚಾರಣೆಯಾಗುವವರೆಗೆ ತಾತ್ಕಾಲಿಕ ಬಿಲ್ ರೂಪದಲ್ಲಿ ಹಿಂದಿನ ತಿಂಗಳಷ್ಟೇ ಬಿಲ್ ತುಂಬುವಂತೆ ದಿ. 27.1.1997ರಂದು ಬಿಲ್ ನೀಡಿದರು. ಅದನ್ನು ತುಂಬಿದ ನಾನು ದೂರವಾಣಿ ಇಲಾಖೆಯಿಂದ ತಮಗಾದ ಅನಗತ್ಯ ತೊಂದರೆ ನಿವಾರಣೆ ಕುರಿತು ಧಾರವಾಡದ ಗ್ರಾಹಕರ ರಕ್ಷಣಾ ವೇದಿಕೆಗೆ ಧಾರವಾಡದ ಖ್ಯಾತ ಗ್ರಾಹಕ ರಕ್ಷಣಾ ಚಳವಳಿಯ ಪ್ರವರ್ತಕರಾಗಿರುವ ಹಿರಿಯ ನ್ಯಾಯವಾದಿ ಬಸವಪ್ರಭು ಹೊಕೇರಿರವರ ಮುಖಾಂತರ ದೂರನ್ನು ಸಲ್ಲಿಸಿದ್ದೆನು. ದೂರಿನ ಕುರಿತು ವಿಚಾರಣೆಗೆ ಹಾಜರಾಗಿ ಸಮಜಾಯಿಷಿ ನೀಡಲು ವೇದಿಕೆಯು ನೋಟಿಸ್ ಜಾರಿ ಮಾಡಿತ್ತು. ಅದು ದಿ. 21.10.1997ರಿಂದ ವಿಚಾರಣೆ ಹಂತದಲ್ಲಿತ್ತು.
ಈ ಸಂದರ್ಭದಲ್ಲಿ ನಾನು ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿದ್ದು ತಿಳಿದ ನಂತರ ದೂರವಾಣಿ ಇಲಾಖೆ ನನ್ನ ದೂರವಾಣಿ ಬಿಲ್ಲು ಕುರಿತು ನೀಡಿದ ತಕರಾರಿನ ಕುರಿತು ತನಿಖೆ ಮಾಡದೆ ಏಕಪಕ್ಷೀಯವಾಗಿ ನನ್ನ ದೂರವಾಣಿ ಸಂಪರ್ಕ ಕಡಿತ ಮಾಡುವುದಾಗಿ ನೋಟಿಸ್ ನೀಡಿತ್ತು. ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲದಿದ್ದರೂ, ನನ್ನ ದೂರವಾಣಿ ಸಂಪರ್ಕ ಕಡಿತ ಮಾಡದಂತೆ ತುರ್ತು ಹುಕ್ಕುಂ ನೀಡುವ ಅಧಿಕಾರ ಗ್ರಾಹಕರ ರಕ್ಷಣಾ ವೇದಿಕೆಗೆ ಇರದಿರುವ ಹಿನ್ನೆಲೆಯಲ್ಲಿ ದೂರವಾಣಿ ಇಲಾಖೆ ನನ್ನ ದೂರವಾಣಿ ಸಂಪರ್ಕವನ್ನು ಕಡಿತಗೊಳಿಸಿತ್ತು.
ನನ್ನ ದೂರಿನ ಸಮಗ್ರ ವಿಚಾರಣೆ ಮಾಡಿ ಅರ್ಜಿದಾರರ ಮತ್ತು ಎದುರುದಾರರ ಸಾಕ್ಷ್ಯಾಧಾರ ದಾಖಲೆಗಳನ್ನು ಪರಿಶೀಲಿಸಿದ ಧಾರವಾಡದ ಗ್ರಾಹಕರ ರಕ್ಷಣಾ ವೇದಿಕೆ ದಿ. 17.4.1998ರಂದು ತೀರ್ಪು ನೀಡಿ ದೂರವಾಣಿ ಗ್ರಾಹಕರಿಂದ ಯಾವುದೇ ಬಿಲ್ಲು ದೂರವಾಣಿ ಇಲಾಖೆಗೆ ಬಾಕಿ ಇರದಿರುವುದನ್ನು ಹಾಗೂ ಅದನ್ನು ನಿರಾಕರಿಸುವ ಸಾಕ್ಷ್ಯಾಧಾರಗಳನ್ನು ಇಲಾಖೆ ವೇದಿಕೆಗೆ ಒದಗಿಸಲು ವಿಫಲವಾದ ಕಾರಣ ದೂರನ್ನು ಪುರಸ್ಕರಿಸಿ ನನ್ನ ದೂರವಾಣಿ ಸಂಪರ್ಕವನ್ನು ಯಾವುದೇ ಹಣ ಪಡೆಯದೇ ಒದಗಿಸುವಂತೆ ಆದೇಶ ಮಾಡಿತ್ತು. ಅದರಂತೆ ಇಲಾಖೆ ತಾನು ಏಕಪಕ್ಷೀಯವಾಗಿ ಕಡಿತ ಮಾಡಿದ ದೂರವಾಣಿ ಸಂಪರ್ಕವನ್ನು ಪುನಃ ಒದಗಿಸಿತ್ತು.
ಇಂಥ ಸಂದರ್ಭಗಳನ್ನು ನಿರ್ವಹಿಸಲು ತುರ್ತು ಮಧ್ಯಂತರ ಹುಕ್ಕುಂ ಪಡೆಯುವ ಹಕ್ಕನ್ನು ಗ್ರಾಹಕರಿಗೆ ಒದಗಿಸಲು ಗ್ರಾಹಕ ರಕ್ಷಣಾ ಕಾನೂನಿನಲ್ಲಿ ಅವಕಾಶ ಮಾಡಿಕೊಡುವುದು ಅವಶ್ಯವಿದೆ. ಬಿಲ್ ಪಾವತಿಸುವಲ್ಲಿ ನನ್ನದೇನೂ ತಪ್ಪಿರದಿದ್ದರೂ ದೂರವಾಣಿ ಇಲಾಖೆಯ ಕರ್ತವ್ಯ ಚ್ಯುತಿಯಿಂದಾಗಿ ದೂರವಾಣಿ ಸಂಪರ್ಕ ಕಡಿತದಿಂದಾಗಿ ಮಾನಸಿಕ ಹಿಂಸೆ ಪಡುವಂತಾಯಿತು.
ದೂರು ನಿವಾರಣಾ ವೇದಿಕೆಯ ಗ್ರಾಹಕರಿಗೆ ನೀಡುವ ಪರಿಹಾರದ ಮೊತ್ತವನ್ನು ನೀಡದಿರಲು ಎದುರುದಾರಗಿಗೆ ತೊಂದರೆ ಮಾಡುವ ಸಾಧ್ಯತೆಗಳಿವೆ. ಇದರಿಂದಾಗಿ ಗ್ರಾಹಕನ ಹಕ್ಕುನಿಷ್ಠ ಮಾಡಲು ಎದುರುದಾರರು ತಮ್ಮ ಆಸ್ತಿ ವ ಅಂಗಡಿಗಳನ್ನು ಪರಭಾರೆ ಮಾಡುವ ಸಾಧ್ಯತೆಗಳಿವೆ. ಇದರಿಂದಾಗಿ ವೇದಿಕೆಯು ನೀಡುವ ಪರಿಹಾರದ ಫಲ ಗ್ರಾಹಕನಿಗೆ ತಲುಪದೇ ವೇದಿಕೆ ಮಾಡುವ ಆದೇಶಗಳು ಕೇವಲ 'ಪೇಪರ್ ಡಿಕ್ರಿ' ಆಗುತ್ತವೆ. ಗ್ರಾಹಕನಿಗೆ ಅವನ ಪರವೇ ಆದೇಶ ಇದ್ದರೂ ಪರಿಹಾರ ಸಿಗದಾಗುತ್ತಿದೆ.
ಇಂತಹ ಕೃತ್ಯಗಳನ್ನು ತಡೆಯಲು ದೂರು ನಿವಾರಣಾ ವೇದಿಕೆಗಳಿಗೆ ಸದರಿ ಕಾನೂನಿನಡಿ ಅಧಿಕಾರವಿರುವುದಿಲ್ಲ. ಗ್ರಾಹಕನಿಗೆ ಮೋಸ ಮಾಡುವ ಎದುರುದಾರನ ಇಂತಹ ಅನ್ಯಾಯದ ನಡವಳಿಕೆಗಳನ್ನು ತಡೆಗಟ್ಟಲು ತೀರ್ಪಿಗೆ ಮುಂಚೆ ಎದುರುದಾರನಿಗೆ ಸೇರಿದ ಆಸ್ತಿಗಳನ್ನು ಕಚ್ಚಾ ಜಫ್ತಿ ಮಾಡಲು ವ್ಯವಹಾರ ಪ್ರಕ್ರಿಯಾ ಸಂಹಿತೆಯಡಿ ಇರುವ ಕಾನೂನನ್ನು ಬಳಸಲು ಗ್ರಾಹಕರ ರಕ್ಷಣಾ ವೇದಿಕೆಗೆ ಅವಕಾಶ ಮಾಡಿಕೊಡುವುದು ಅತಿ ಅವಶ್ಯಕ.
ದೂರು ನಿವಾರಣಾ ವೇದಿಕೆಗೆ ಬಾಧಿತರಾದವರು ನೇರವಾಗಿ ದೂರು ಸಲ್ಲಿಸಲು ಅವಕಾಶವನ್ನು ಕಾನೂನಿನಡಿ ಒದಗಿಸಲಾಗಿದೆ. ಗ್ರಾಹಕರು ಪ್ರಚಲಿತವಿರುವ ಕಾನೂನುಗಳು ಸಮಗ್ರ ಜ್ಞಾನ ಹೊಂದಿರದ ಕಾರಣ ದೂರು ಸಲ್ಲಿಸಿದ ನಂತರ ದೂರಿನಲ್ಲಿ ತಿದ್ದುಪಡಿ ಮಾಡುವ ಪ್ರಸಂಗ ಬರುತ್ತದೆ. ಹೀಗಿರುವಂತೆ ಹಾಗೆ ತಿದ್ದುಪಡಿ ಮಾಡಲು ಸದರಿ ಕಾನೂನಿನಡಿ ಅವಕಾಶವಿಲ್ಲ. ಹೀಗಾಗಿ ದೂರು ಹಿಂದಕ್ಕೆ ಪಡೆದು ಮತ್ತೊಂದು ಹೊಸ ದೂರು ಸಲ್ಲಿಸಬೇಕಾಗುತ್ತದೆ. ಇದರಿಂದಾಗಿ ವಿನಾ ಕಾರಣ ವ್ಯಾಜ್ಯಗಳ ಸಂಖ್ಯೆ ಹೆಚ್ಚಾಗಿ ಗ್ರಾಹಕನಿಗೆ ಅನುಕೂಲಕ್ಕಿಂತ ಅನಾನುಕೂಲವೆ ಹೆಚ್ಚಾಗಿರುವುದು ಕಂಡು ಬರುತ್ತದೆ.
ಗ್ರಾಹಕನಿಗೆ ಆಗುತ್ತಿರುವ ತೊಂದರೆಗಳ ನಿವಾರಣೆಗಾಗಿ ವ್ಯವಹಾರ ಪ್ರಕ್ರಿಯೆ ಸಂಹಿತೆಯಲ್ಲಿರುವ ತಿದ್ದುಪಡಿ ಅವಕಾಶವನ್ನು ಗ್ರಾಹಕರ ರಕ್ಷಣಾ ಕಾನೂನಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
ಗ್ರಾಹಕರ ರಕ್ಷಣಾ ಕಾನೂನಿನಲ್ಲಿ ಮಧ್ಯಂತರ ಮನಾಯ, ತಾಕಿದಿ, ಕಚ್ಚಾ ಜಫ್ತಿ ಹಾಗೂ ತಿದ್ದುಪಡಿಯ ಬಗ್ಗೆ ವ್ಯವಹಾರ ಪ್ರಕ್ರಿಯೆ ಸಂಹಿತೆಯಲ್ಲಿ ಅಳವಡಿಸಿದ ಭಾಗಗಳನ್ನು ಸೇರಿಸಿ ಕಾನೂನನ್ನು ಬಲಗೊಳಿಸಬೇಕಾಗಿದೆ. ಹೀಗೆ ಮಾಡಿದಲ್ಲಿ ಶೋಷಿತ ಗ್ರಾಹಕರಿಗೆ ಸೂಕ್ತ ಪರಿಹಾರ ದೊರಕಿ ಗ್ರಾಹಕ ರಕ್ಷಣಾ ಚಳವಳಿ ಬಲಿಷ್ಠಗೊಂಡು ಗ್ರಾಹಕರನ್ನು ಶೋಷಣೆಯಿಂದ ಮುಕ್ತಗೊಳಿಸಿದಂತಾಗುತ್ತದೆ.
ಈ ಹಿನ್ನೆಲೆಯಲ್ಲಿ ಗ್ರಾಹಕ ಜಾಗೃತಿ ಸಂಘಟನೆಗಳು ಹಾಗೂ ಜನಪರ ಕಾಳಜಿ ಹೊಂದಿದ ಪ್ರಜ್ಞಾವಂತರು ಹಾಗೂ ನ್ಯಾಯವಾದಿಗಳು ಸಕಾರಾತ್ಮಕ ಚಿಂತನೆ ಮಾಡಿ ಗ್ರಾಹಕರಿಗೆ ಆಗುತ್ತಿರುವ ಅನಗತ್ಯ ಕಿರುಕುಳ ತಪ್ಪಿಸಲು ಸೂಕ್ತ ತಿದ್ದುಪಡಿಗೆ ಪ್ರಯತ್ನಿಸುವಂತೆ ಕೋರುತ್ತೇನೆ.
- ಬಸವರಾಜು ಹುಡೇದಗಡ್ಡಿ
ಸರ್ಕಾರಿ ಅಭಿಯೋಜಕರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

