ಮಾವೋವಾದಿಗಳಿಗೆ ಮಹಿಳೆಯರೆಂದರೆ ಮೋಜು...
ನಕ್ಸಲರೆಂದಾಕ್ಷಣ ನಮ್ಮ ಕಣ್ಣೆದುರಿಗೆ ಬರುವುದು ಬಾಡಿದ ಮುಖಗಳ, ಭಾರತದ ಬುಡಕಟ್ಟು ಪ್ರದೇಶಗಳಲ್ಲಿ ತಲೆ ಮರೆಸಿಕೊಂಡು ಓಡಾಡುವ ಶಸ್ತ್ರಸಜ್ಜಿತ ಮಾರಣಾಂತಿಕ ವ್ಯಕ್ತಿಗಳ ಚಿತ್ರ. ಇನ್ನೂ ಕೆಲವರ ಮನಸ್ಸಿನಲ್ಲಿ ಅವರ ಕೈಯಲ್ಲಿ ಭೀಕರವಾಗಿ ಹತ್ಯೆಯಾದ ಪೊಲೀಸರ, ನಾಗರಿಕರ, ರಾಜಕಾರಣಿಗಳ ಅಥವಾ ಸೈನಿಕರ ರಕ್ತರಂಜಿತ ದೇಹಗಳು ಹಾದು ಹೋಗಬಹುದು. ಇಲ್ಲವೇ ಛಿದ್ರವಾದ ವಾಹನಗಳು, ನೆಲಬಾಂಬ್ಗಳ ನೆನಪಾಗಬಹುದು. ಇವು ಸತ್ಯದಿಂದ ದೂರವಿರುವ ಚಿತ್ರಗಳೇನೂ ಅಲ್ಲ. ಆದರೆ 'ಶೋಭಾ ಮಂಡಿ' ಎನ್ನುವ ಮಾಜಿ ಮಾವೋವಾದಿಯೊಬ್ಬಳು, ಹೊರಜಗತ್ತಿಗೆ ಗೊತ್ತಿರದ ನಕ್ಸಲರ ಇನ್ನೊಂದು ಕ್ಷುದ್ರ ಮುಖವನ್ನು ತನ್ನ ಪುಸ್ತಕದ ಮೂಲಕ ಅನಾವರಣಗೊಳಿಸಿದ್ದಾಳೆ.
ಮಾವೋವಾದಿಗಳದ್ದು ನಿಜಕ್ಕೂ ಹೇವರಿಕೆ ತರಿಸುವ ಕ್ರೂರ ಪ್ರಪಂಚ. ಅಲ್ಲಿ ಹಾದರ, ಅತ್ಯಾಚಾರ, ಹೆಂಡತಿಯರನ್ನು ಬದಲಾಯಿಸಿಕೊಳ್ಳುವುದು, ಕಿರುಕುಳ ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಎನ್ನುತ್ತಾಳೆ ಶೋಭಾ. ಶೋಭಾ ಮಂಡಿಗೆ, ಉಮಾ ಮತ್ತು ಶಿಖಾ ಎನ್ನುವ ಪರ್ಯಾಯ ಹೆಸರುಗಳೂ ಇವೆ. ಶಸ್ತ್ರಸಜ್ಜಿತ ನಕ್ಸಲರ ತಂಡದಲ್ಲಿದ್ದ ಆಕೆ ಅವರ ಹಿಂಸೆ ತಾಳಲಾರದೆ 2010ರಲ್ಲಿ ಹೊರಜಗತ್ತಿಗೆ ಓಡಿ ಬಂದಳು. 'ಏಕ್ ಮಾವೋವಾದಿ ಕೀ ಡೈರಿ'(ಮಾವೋವಾದಿಯೊಬ್ಬಳ ಡೈರಿ) ಎನ್ನುವ ತನ್ನ ಪುಸ್ತಕದಲ್ಲಿ, ಹೇಗೆ ನಿರಂತರವಾಗಿ 7 ವರ್ಷಗಳವರೆಗೆ ಸಹ ಕಮಾಂಡರ್ಗಳು ತನ್ನ ಮೇಲೆ ಅತ್ಯಾಚಾರ ನಡೆಸಿದರು, ಕಿರುಕುಳ ನೀಡಿದರು ಎನ್ನುವುದನ್ನು ಮನಮಿಡಿಯುವಂತೆ ಹೇಳಿದ್ದಾಳೆ. ಹಿರಿಯ ನಾಯಕರು ಯುವತಿಯರಿಗೆ ಹಿಂಸೆ ಕೊಡುತ್ತಿದ್ದಾರೆ ಎಂದು ಹಲವಾರು ಬಾರಿ ಆಕೆ ಮಹಿಳಾ ಕಮಾಂಡರ್ಗಳಿಗೆ ದೂರು ಕೊಟ್ಟಿದ್ದಳಂತೆ. ಆದರೆ 'ಸಹಿಸಿಕೊಳ್ಳಬೇಕು' ಎಂಬ ಉತ್ತರ ಮಾತ್ರ ಅವರಿಂದ ಬಂದಿದ್ದು. 'ಮಾವೋವಾದಿಗಳ ಮಹಾ ನಾಯಕ' ಎಂದು ಕರೆಸಿಕೊಳ್ಳುವ ಕಿಶನ್ಜೀಗೂ ಒಮ್ಮೆ ನನ್ನ ಗೋಳನ್ನು ಹೇಳಿಕೊಂಡಾಗ ಆತ ನಕ್ಕು ಸುಮ್ಮನೆ ಮುಂದೆ ಹೋಗಿದ್ದ ಎಂದು ಶೋಭಾ ನೆನೆಯುತ್ತಾಳೆ.
'ನಾನು ದೂರು ಕೊಟ್ಟದ್ದೇ ತಪ್ಪಾಯಿತು. ಹಿರಿಯ ಲೀಡರ್ಗಳೆಲ್ಲ ನನಗೆ ಧಮಕಿ ಹಾಕತೊಡಗಿದರು. ಯಾರೂ ಕೂಡ ನನ್ನ ಜೊತೆಗೆ ಮಾತನಾಡುವಂತಿಲ್ಲ ಎಂದು ಉಳಿದವರಿಗೆ ಎಚ್ಚರಿಕೆ ಕೊಟ್ಟರು. ಪ್ರತಿಭಟಿಸಿದರೆ ಕೊಂದುಬಿಡುತ್ತೇವೆ ಎಂದು ಹೆದರಿಸಿ ಸುಮ್ಮನಾಗಿಸಿದರು. ಅವಡುಗಚ್ಚಿ ಎಲ್ಲಾ ನೋವನ್ನೂ ಸಹಿಸಿಕೊಂಡೆ. ಇದು ನನ್ನದೊಬ್ಬಳದೇ ಕತೆಯಲ್ಲ, ಹೊಸತಾಗಿ ಸೇರಿಕೊಂಡ ಎಲ್ಲಾ ಯುವತಿಯರಿಗೂ ಇದೇ ಗತಿ. ಇನ್ನು ಹಿರಿಯ ಮಹಿಳಾ ಕ್ಯಾಡರ್ಗಳಿಗಂತೂ ಅನೇಕ ಲೈಂಗಿಕ ಸಂಗಾತಿಗಳಿರುತ್ತಾರೆ. ಇನ್ನು ಚಿಕ್ಕ ಮಕ್ಕಳನ್ನು ಅಪಾಯ ಎಂದು ಅಲ್ಲಿ ನೋಡಲಾಗುತ್ತದೆ. ಹಾಗಾಗೇ ಒಂದು ವೇಳೆ ಯಾರಾದರೂ ಗರ್ಭ ಧರಿಸಿದ್ದು ತಿಳಿದರೆ, ಕೂಡಲೇ ಏನೇನೋ ತಿನ್ನಿಸಿ ಗರ್ಭಪಾತವಾಗುವಂತೆ ಮಾಡಿಬಿಡುತ್ತಾರೆ. ನಾವೆಲ್ಲಾ ಪುರುಷರ ಚಪಲ ತಣಿಸುವ ವಸ್ತುಗಳಾಗಿದ್ದೆವಷ್ಟೆ. 2003ರಲ್ಲಿ ನಾನು ನಕ್ಸಲ್ ಪ್ರಪಂಚಕ್ಕೆ ಕಾಲಿಡುವಾಗ, ಅಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸಮಾನ ಹಕ್ಕಿರುತ್ತದೆ ಎಂದೇ ಭಾವಿಸಿದ್ದೆ. ಆದರೆ ಕೆಲವೇ ದಿನಗಳಲ್ಲಿ ನಾನೆಂಥ ಕ್ರೂರ ಜಗತ್ತಿಗೆ ಕಾಲಿಟ್ಟಿದ್ದೇನೆ ಎನ್ನುವುದು ಅರ್ಥವಾಯಿತು ಎನ್ನುತ್ತಾಳೆ ಶೋಭಾ.
----
ಇನ್ನು ಶೋಭಾ ಮಂಡಿಯ ಪುಸ್ತಕ, 2011ರಲ್ಲಿ ರಕ್ಷಣಾ ಪಡೆಗಳಿಂದ ಸತ್ತ ನಕ್ಸಲ್ ನಾಯಕ 'ಕಿಶನ್ಜಿ' ಮುಖ್ಯವಾಹಿನಿ ರಾಜಕೀಯ ಪಕ್ಷವೊಂದರ ಸದಸ್ಯನಾಗಿದ್ದ ಎಂದು ಹೇಳುತ್ತದೆ. 'ಬಹುಶಃ ಕಿಶನ್ಜೀಗೆ 'ಬಹಳಷ್ಟು ರಹಸ್ಯಗಳು' ಗೊತ್ತಿರುವ ಕಾರಣದಿಂದಲೇ ಆತನನ್ನು ಕೊಲ್ಲಲು ಕೆಲವು ರಾಜಕಾರಣಿಗಳು ಆದೇಶವಿತ್ತಿರಬಹುದು. ನಂತರ ಆ ಕಾರ್ಯಾಚರಣೆಯನ್ನು ದೊಡ್ಡ ಸಾಧನೆ ಎಂದು ಮಾಧ್ಯಮಗಳ ಮುಂದೆ ಅವರು ಬಿಂಬಿಸಿಕೊಂಡರು. ಅಷ್ಟೇ ಅಲ್ಲ, ಕಿಶನ್ಜೀ ಕೂಡ ಹಲವಾರು ಬಾರಿ ತನ್ನ ವಿರೋಧಿ ರಾಜಕಾರಣಿಗಳನ್ನು ಕೊಲ್ಲಲು ನಮಗೆ ಆಜ್ಞೆ ನೀಡುತ್ತಿದ್ದ. ರಾಜಕಾರಣಿಗಳನ್ನು ಕೊಲ್ಲುವುದು ಪ್ರಜಾಪ್ರಭುತ್ವದ ವಿರುದ್ಧದ ಹೋರಾಟ ಎಂದು ಅಂದುಕೊಂಡಿದ್ದೆವು. ಆದರೆ ನಾಗರಿಕರನ್ನು ಕೊಲ್ಲಲು ಆತ ಏಕೆ ಆದೇಶಿಸುತ್ತಿದ್ದನೋ ನಮಗೆ ತಿಳಿಯುತ್ತಿರಲಿಲ್ಲ' ಎಂದು ಮುಗ್ಧವಾಗಿ ಪ್ರಶ್ನಿಸುತ್ತಾಳಾಕೆ.
ಇತ್ತೀಚೆಗೆ ಬಿಹಾರ ಪೊಲೀಸರು ಬಂಧಿಸಿದ ಸಿಪಿಐ(ಮಾವೋಯಿಸ್ಟ್)ನ ಸದಸ್ಯ ಅನೂಪ್ ಠಾಕೂರ್, ಶೋಭಾ ಹೇಳಿದ್ದರಲ್ಲಿ ಸತ್ಯವಿದೆ ಎಂದು ಒಪ್ಪಿಕೊಂಡಿದ್ದಾನೆ. ಶೋಭಾಳ ಗಂಡ ಅಮರ್ದೇವ್ ಕೂಡ ಮಾವೋವಾದಿಯೇ. ಆತ ಬಹಳ ವರ್ಷಗಳಿಂದ ತಲೆಮರಿಸಿಕೊಂಡಿದ್ದಾನೆ. ಪೋಲೀಸರು ಆತನ ಹುಡುಕಾಟಕ್ಕಿಳಿದಿದ್ದಾರೆ.
----
ಈಗ ಆಕೆ ರಾಂಚಿಯ ಪಕ್ಕದಲ್ಲಿರುವ ತನ್ನ ತವರಿನಲ್ಲಿ ಶಾಂತಿಯಿಂದ ಬದುಕುತ್ತಿದ್ದಾಳೆ. 'ಆದರೆ ಮಾವೋವಾದಿಯಾಗಿದ್ದಾಗ ಅನುಭವಿಸಿದ ಹಿಂಸೆ ನೆನಪಾದಾಗಲೆಲ್ಲ ಈಗಲೂ ತತ್ತರಿಸಿಹೋಗುತ್ತೇನೆ...' ಎಂದು ತನ್ನ ಮಾತು ಮುಗಿಸುತ್ತಾಳೆ.
- ಸೈಫುಲ್ ಹಕ್ (ಡೈಲಿ ಮೇಲ್)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

