ಬಟ್ಟೆ ನೇಯ್ಗೆಗೆ ನಾಂದಿ ಹಾಡಿದ ಸ್ವಕುಳಸಾಳಿ ಸಮುದಾಯ

ಜಗತ್ತು ಸೃಷ್ಟಿ ಆದ ಸಂದರ್ಭದಲ್ಲಿ ಜನರಿಗೆ ಬಟ್ಟೆಬರೆ ಇರಲಿಲ್ಲ. ಅವರು ಆಗ ಅರೆನಗ್ನ...
Updated on: 

ಜಗತ್ತು ಸೃಷ್ಟಿ ಆದ ಸಂದರ್ಭದಲ್ಲಿ ಜನರಿಗೆ ಬಟ್ಟೆಬರೆ ಇರಲಿಲ್ಲ. ಅವರು ಆಗ ಅರೆನಗ್ನ ಸ್ಥಿತಿಯಲ್ಲಿರುತ್ತಿದ್ದರು. ಹಾಗಾದರೆ ಬಟ್ಟೆ ನೇಯ್ಗೆಯನ್ನು ಕಂಡು ಹಿಡಿದವರು ಯಾರು ? ಬಟ್ಟೆ ಕಂಡು ಹಿಡಿದದ್ದು ಜಿಹ್ವೇಶ್ವರ. ಆತ ನಮ್ಮ ಸಮುದಾಯದ ಮೂಲ ಪುರುಷ ಎನ್ನುತ್ತಾರೆ ಸ್ವಕುಳ ಸಾಳಿ ಸಮಾಜದ ಹಿರಿಯರು.
ಸ್ವಕುಳ ಎಂದರೆ ಸ್ವಂತ ಕುಲ, ಸಾಳಿ ಎಂದರೆ ಬೆಳೆಸಿದವನು ಎಂದರ್ಥ. ಇನ್ನು ಈಶ್ವರನ ಜಿಹ್ವೆ ಅಂದರೆ ನಾಲಿಗೆ, ಅದರಿಂದ ಸೃಷ್ಟಿ ಅದವನು ಜಿಹ್ವೇಶ್ವರ.
ಅರೆನಗ್ನ ಸ್ಥಿತಿಯಲ್ಲಿದ್ದ ಜನ ಬಟ್ಟೆಬರೆಗೆ ವ್ಯವಸ್ಥೆ ಮಾಡುವಂತೆ ದೇವರುಗಳನ್ನು ಬೇಡಿಕೊಳ್ಳುತ್ತಾರೆ. ಆಗ ಈಶ್ವರ ತನ್ನ ನಾಲಿಗೆಯಿಂದ ಜಿಹ್ವೇಶ್ವರನನ್ನು ಸೃಷ್ಟಿ ಮಾಡುತ್ತಾನೆ. ಭೂಲೋಕಕ್ಕೆ ಹೋಗಿ ಜನರಿಗೆ ಬಟ್ಟೆಬರೆ ವ್ಯವಸ್ಥೆ ಮಾಡುವಂತೆ ಆತನಿಗೆ ಈಶ್ವರನಿಂದ ಅದೇಶವಾಗುತ್ತದೆ.

ನೆರವಾದರು ದೇವರುಗಳು
ಅದರಂತೆ ಭೂಮಿಗೆ ಬರುವ ಜಿಹ್ವೇಶ್ವರ ಬಟ್ಟೆ ತಯಾರು ಮಾಡುವುದು ಹೇಗೆ ಎಂಬುದು ತಿಳಿಯದೆ, ಅದಕ್ಕಾಗಿ ಮಾರ್ಗ ತೋರಿಸುವಂತೆ ತಪಸ್ಸು ಮಾಡುತ್ತಾನೆ. ಆಗ ಬಟ್ಟೆ ನೇಯಲು ಏನೇನು ಬೇಕು ಎಂಬುದು ತಿಳಿಯುತ್ತದೆ. ಅದರಂತೆ ಆಗತ್ಯವಾದ ಉಪಕರಣಗಳ 330 ಕೋಟಿ ದೇವರುಗಳು ಒದಗಿಸುತ್ತಾರೆ. ದಾರ, ಚರಕ ಸೇರಿದಂತೆ ಎಲ್ಲ ಸಾಮಗ್ರಿಗಳನ್ನು ಜಿಹ್ವೇಶ್ವರ ಸಿದ್ಧ ಮಾಡಿಕೊಂಡು ಬಟ್ಟೆ ನೇಯುವ ಕೆಲಸಕ್ಕೆ ಮುಂದಾಗುತ್ತಾನೆ. ಎಲ್ಲರಿಗೂ ವಸ್ತ್ರ ತಯಾರಿಸಿಕೊಡುತ್ತಾನೆ.
ಅಂದಿನಿಂದ ಬಟ್ಟೆ ನೇಯುವ ಕೆಲಸ ಸ್ವಕುಳ ಸಾಳಿ ಸಮುದಾಯದ ಕುಲ ಕಸುಬು ಆಗುತ್ತದೆ. ಜಿಹ್ವೇಶ್ವರ ಕಾರ್ಯಕ್ಕೆ ಮೆಚ್ಚಿ ಬ್ರಹ್ಮ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಆತನಿಗೆ ಕೊಟ್ಟು ಮದುವೆ ಮಾಡಿಸುತ್ತಾನೆ. ಜಿಹ್ವೇಶ್ವರನ ವಂಶ ಬೆಳೆದು ಅದು ಹಲವು ಪಂಗಡಗಳಾಗಿ ಸ್ವಕುಳ ಸಾಳಿ ಸಮುದಾಯ ಎಲ್ಲೆಡೆ ಬೆಳೆಯಿತು ಎನ್ನುತ್ತಾ ಪುರಾಣದ ಕಥೆಯನ್ನು ಹೀಗೆ ವಿವರಿಸುತ್ತಾರೆ ಸಮಾಜದ ಸಂಘಟಕರು ಮತ್ತು ಹಿರಿಯರಾದ ಅನಂತ್ ಅವರು.

ಮರಾಠಿ ಭಾಷೆ, ಸಂಸ್ಕೃತ ಬಳಕೆ
ಸ್ವಕುಳ ಸಾಳಿ ಸಮುದಾಯದವರು ಮೂಲತ: ಮರಾಠಿ ಭಾಷಿಕರು ಮತ್ತು ಮೊದಲಿಗೆ ಉತ್ತರ ಕಣಿವೆಯಲ್ಲಿ ನೆಲೆಸಿದ್ದವರು. ಕೈಲಾಸ, ಮಾನಸ ಸರೋವರ ಇರುವುದು ಆ ಭಾಗದಲ್ಲಿ. ಹೀಗಾಗಿ ಅಲ್ಲಿ ಈ ಸಮುದಾಯದ ಉಗಮ ಆಗಿರಬಹುದು ಎನ್ನುತ್ತಾರೆ ಅನಂತ್. ಸ್ವಕುಳಿ ಸಾಳಿ ಸಮಾಜದ ಜನ ಮರಾಠಿ ಮಾತನಾಡಿದರೂ ಮಾತಿನಲ್ಲಿ ಶೇ.50ರಷ್ಟು ಸಂಸ್ಕೃತ ಬಳಸುತ್ತಾರೆ.
ಉತ್ತರ ಕಣಿವೆಯಿಂದ ವಲಸೆ ಹೊರಟ ಇವರು ಮಹಾರಾಷ್ಟ್ರದ ಕಡೆ ವಲಸೆ ಬಂದಾಗ ಕ್ರಿ.ಶ.750ರಲ್ಲಿ ಆ ಭಾಗದಲ್ಲಿ ಮುಸ್ಲಿಂರ ದಾಳಿ ಹೆಚ್ಚಾಗಿರುತ್ತದೆ. ಅವರ ದಾಳಿಯಿಂದ ಊರು ಕೇರಿಗಳು ಧ್ವಂಸವಾಗುತ್ತವೆ. ಧರ್ಮ ಭ್ರಷ್ಟತೆ ಹೆಚ್ಚುತ್ತದೆ. ಅದ್ದರಿಂದ ಸ್ವಕುಳಿ ಸಾಳಿ ಜನರು ಅಲ್ಲಿಂದ ಹೊರಟು ದಕ್ಷಿಣ ಭಾರತದ ನಾನಾ ರಾಜ್ಯಗಳಿಗೆ ಹೋಗಿ ನೆಲೆ ನಿಲ್ಲುತ್ತಾರೆ. ತೊಂದರೆ ಮತ್ತು ತಾಪತ್ರಯ ಇರುವುದಿಲ್ಲ ಮತ್ತು ಶಾಂತಿ ವಾತಾವರಣ ಎಂಬ ಕಾರಣಕ್ಕೆ ಕರ್ನಾಟಕಕ್ಕೂ ಬಂದು ನೆಲೆಸಿದರು.
ಸ್ವಕುಳ ಸಾಳಿ ಜನರಲ್ಲಿ ಒಂದು ಸಿದ್ಧಾಂತ ಇದೆ. ಅದೇನೆಂದರೆ ಆತ್ಮಕ್ಕೆ ಮೋಕ್ಷ ಸಿಕ್ಕರೆ ಪರಮಾತ್ಮನಲ್ಲಿ ಲೀನವಾಗುತ್ತದೆ ಎಂಬುದು. ಅದನ್ನು ಹೇಳಿಕೊಟ್ಟಿದ್ದು ವಿಷ್ಣುವಿನ ಎರಡನೇ ಅವತಾರವಾದ ದತ್ತಾತ್ರೇಯ. ಹೀಗಾಗಿ ವೈದಿಕ ಕ್ರಿಯೆಗಳನ್ನು ನಡೆಸುತ್ತಾರೆ.  ಅದ್ವೈತ ಸಿದ್ಧಾಂತವನ್ನು ಅನುಸರಿಸುವ ಇವರು ಶಾಕ್ತೇಯ ಪಂಥದವರು. ಅಂದರೆ ಶಕ್ತಿ ದೇವತೆಗಳ ಅರಾಧಕರು. ಹೀಗಾಗಿ ಅಂಬಾ ಭವಾನಿ, ತುಳುಜಾ ಭವಾನಿ ಮತ್ತಿತರ ದೇವರುಗಳನ್ನು ಪೂಜಿಸುತ್ತಾರೆ. ಈಶ್ವರ ಮತ್ತು ವಿಷ್ಣುವನ್ನೂ ಆರಾಧಿಸುತ್ತಾರೆ.

ಪಿತೃ ದೇವತೆಗಳಿಗೆ ಆಹ್ವಾನ
ಮಕ್ಕಳಿಗೆ ಉಪ ನಯನ ಮಾಡಿಸುವಾಗ ಪಿತೃ ದೇವತೆಗಳನ್ನು ಆಹ್ವಾನಿಸಿ ಪೂಜಿಸುವ ಪದ್ಧತಿ ಇವರಲ್ಲಿದೆ. ಜೊತೆಗೆ ಏನಾದರೂ ಧಾರಣೆ ಮಾಡುವ ಮುನ್ನ ಇತರರಿಗೆ ದಾನ ಮಾಡುವ ಸಂಪ್ರದಾಯವನ್ನೂ ಚಾಚೂ ತಪ್ಪದೆ ಪಾಲಿಸುತ್ತಾರೆ. ಈ ಹಿಂದೆ ಈ ಸಮುದಾಯದವರಲ್ಲಿ ನ್ಯಾಯ ಪಂಚಾಯಿತಿ ವ್ಯವಸ್ಥೆ ಜಾರಿಯಲ್ಲಿ ಇತ್ತು. ಆಗೆಲ್ಲ ಕೋರ್ಟು ಕಟೆಕಟೆಗಳು ಇರಲಿಲ್ಲ.
ಏನಾದರೂ ಸಮಸ್ಯೆಗಳು ಬಂದಲ್ಲಿ ಅಥವಾ ಕುಲದೊಳಗೆ ತಂಟೆ ತಕರಾರು ಉಂಟಾದಲ್ಲಿ ಹಿರಿಯರಾದವರು ಎಲ್ಲವನ್ನೂ ಬಗೆ ಹರಿಸುತ್ತಿದ್ದರು. ಅದಕ್ಕಾಗಿ ನ್ಯಾಯ ಪಂಚಾಯಿತಿ ವ್ಯವಸ್ಥೆ ಇತ್ತು. ಅದಕ್ಕೆ ಮುಖ್ಯಸ್ಥರಾದವರನ್ನು ಶೆಟ್ಟಿ, ದೈವದವರು ಎಂದು ಕರೆಯುತ್ತಿದ್ದರು. ಅವರು ಸಲಹೆ, ಸೂಚನೆಗಳು ಮತ್ತು ನ್ಯಾಯ ಪಂಚಾಯಿತಿ ಸಂದರ್ಭದಲ್ಲಿ ಅವರು ಕೊಡುತ್ತಿದ್ದ ತೀರ್ಪುಗಳಿಗೆ ಎಲ್ಲರೂ ತಲೆಬಾಗುವ ಸ್ಥಿತಿ ಇತ್ತು. ಹೀಗಾಗಿ ನಮ್ಮ ಸಮಾಜ ಹೊರ ಜಗತ್ತಿಗೆ ಅಷ್ಟಾಗಿ ಪರಿಚಯ ಆಗಿರಲಿಲ್ಲ ಎನ್ನುತ್ತಾರೆ ಅನಂತ್. ನಮ್ಮಲ್ಲಿ ಹೆಣ್ಣು ಮಕ್ಕಳು ಶಾಲೆ ಮುಖ ನೋಡುವಂತೆಯೇ ಇರಲಿಲ್ಲ. ಅದು ಸಹ ಈ ದೈವದವರು ಮತ್ತು ಶೆಟ್ಟಿಗಳ ಆದೇಶವಾಗಿತ್ತು ಎಂದು ಅವರು ವಿವರಿಸುತ್ತಾರೆ.

ವೈದಿಕ ವಿಚಾರದಲ್ಲಿ ಹೆಸರುವಾಸಿ
ಸ್ವಕುಳ ಸಾಳಿಗಳ ಜನಸಂಖ್ಯೆ ಕರ್ನಾಟಕದಲ್ಲಿ ಅಂದಾಜು ಮೂರೂವರೆ ಲಕ್ಷ ಇರಬಹುದು. ಬೆಂಗಳೂರಿನಲ್ಲಿ ಈ ಸಮುದಾಯದವರ 10ಕ್ಕೂ ಹೆಚ್ಚು ದೇವಾಲಯಗಳು ಇರುವುದು ವಿಶೇಷ. ಬಶೆಟ್ಟಿ ಪೇಟೆಯಲ್ಲಿ ಪಾಂಡುರಂಗ, ತೆಲಗುಪೇಟೆಯಲ್ಲಿ ಮಲ್ಲಿಕಾರ್ಜುನ, ಈಶ್ವರ, ರಾಮದೇವರು, ರಂಗಸ್ವಾಮಿ ಗುಡಿ ಬೀದಿಯಲ್ಲಿ ಶ್ರೀಕಂಠೇಶ್ವರ, ಗಾಂಧಿ ನಗರದಲ್ಲಿ ಚಂದ್ರಮೌಳೇಶ್ವರ ದೇವಾಲಯವಿದೆ. ಆಧ್ಯಾತ್ಮ ವಿಚಾರದಲ್ಲಿ 150 ವರ್ಷಗಳ ಹಿಂದೆ ತುತ್ತತುದಿ ತಲುಪಿದ ಅನಂತಸ್ವಾಮಿಗಳ ಆಶ್ರಮವೂ ಗಾಂಧಿ ನಗರದಲ್ಲಿದೆ. ವೈದಿಕ ವಿಚಾರದಲ್ಲಿ ಇವರಿಗೆ ಶಿಷ್ಯರಾದವರು ಕೃಷ್ಣಸ್ವಾಮಿ ಅಯ್ಯರ್, ಹೊಳೆನರಸೀಪುರದ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು ಮತ್ತು ಗೋಪಾಲಸ್ವಾಮಿಗಳು. ಸ್ವಕುಳಸಾಳಿಗಳು ಸಸ್ಯಾಹಾರಿಗಳಾಗಿದ್ದವರು. ಕ್ರಮೇಣ ಕೆಲವರು ಮಾಂಸಾಹಾರದ ಕಡೆಗೂ ಮುಖ ಮಾಡಿದರು.
ಮೊದಲೇ ಹೇಳಿದಂತೆ ನೇಯ್ಗೆ ಸ್ವಕುಳ ಸಾಳಿಗಳ ಕುಲ ಕಸುಬು ಆಗಿತ್ತು. ಆದರೀಗ ಆ ವೃತ್ತಿ ಇವರಲ್ಲಿ ಕಡಿಮೆ ಆಗುತ್ತಿದೆ. ಏಕೆಂದರೆ ಬಟ್ಟೆ ತಯಾರು ಮಾಡುವ ಕೆಲಸಕ್ಕೆ ನಾನಾ ಸಮುದಾಯಗಳ ಜನ ಮುಂದಾಗಿದ್ದಾರೆ. ಜೊತೆಗೆ ಕೈಮಗ್ಗಗಳಿಗೂ ಬೇಡಿಕೆ ಕಡಿಮೆ ಆಗಿ ಅವುಗಳ ಜಾಗದಲ್ಲಿ ವಿದ್ಯುತ್ ಮಗ್ಗ ಮತ್ತು ಕುಸುರಿ ಕೆಲಸಕ್ಕೆ ಕಂಪ್ಯೂಟರ್‌ಗಳು ಬಂದಿವೆ. ಈ ಹಿಂದೆ ಈ ಸಮುದಾಯದ ಜನ ತಯಾರು ಮಾಡುತ್ತಿದ್ದ ರೇಷ್ಮೆ ಸೀರೆಗಳು ಮತ್ತು ಅದರ ಮೇಲಿನ ಕುಸುರಿ ಕೆಲಸ ಭಾರಿ ಜನಪ್ರಿಯ ಆಗಿತ್ತಂತೆ.

ಕುಸುರಿ ಕೆಲಸದಲ್ಲಿ ಎತ್ತಿದ ಕೈ
ಅದರಲ್ಲೂ ನವಿಲು ಮತ್ತಿತರ ಪಕ್ಷಿಗಳ ಚಿತ್ರಗಳನ್ನು ಇವರು ಕಲಾಬತ್ ಸೀರೆಗಳ ಮೇಲೆ ಅತ್ಯಂತ ಕಲಾತ್ಮಕತೆಯಿಂದ ಬಿಡಿಸುತ್ತಿದ್ದರಂತೆ. ಕಂಪ್ಯೂಟರ್‌ಗಳ ಪ್ರವೇಶವಾದ ಮೇಲೆ ಕುಸುರಿ ಕೆಲಸವೂ ನಿಂತು ಹೋಗಿದೆ. ಪ್ರೋತ್ಸಾಹದ ಕೊರತೆಯೂ ಇದಕ್ಕೆ ಪ್ರಮುಖ ಕಾರಣ. ಹೀಗಾಗಿ ನೇಕಾರಿಕೆ ಮಾಡುತ್ತಿದ್ದವರು ಈಗ ಟೈಲರ್‌ಗಳಾಗಿದ್ದಾರೆ. ಇನ್ನೂ ಕೆಲವರು ಓದಿ ವಿದ್ಯಾವಂತರಾಗಿ ಜೀವನೋಪಾಯಕ್ಕೆ ನಾನಾ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ರಾಜ ಮಹಾರಾಜರ ಕಾಲದಲ್ಲಿ ಏನೇ ಕಷ್ಟ ಬಂದರೂ ಅವರ ಬಳಿ ಕೈ ಒಡ್ಡುವ ಪರಿಸ್ಥಿತಿ ಇತ್ತು. ಹೀಗಾಗಿ ಒಂದೇ ಕಸುಬಿನಲ್ಲಿದ್ದ ನಮ್ಮವರ ಮಧ್ಯೆ ವೈಷಮ್ಯ ಶುರುವಾಯಿತು. ಈಗ ಆ ಸಮಸ್ಯೆ ಇಲ್ಲ ಎನ್ನುತ್ತಾರೆ ಅನಂತ್. ನಾವು ವಲಸೆ ಬಂದವರಾದರೂ ಇಲ್ಲಿಯ ಜನ ಮತ್ತು ವಾತಾವರಣಕ್ಕೆ ಹೊಂದಿಕೊಂಡಿದ್ದೇವೆ ಎಂಬುದು ಅವರ ಅಭಿಪ್ರಾಯ.

ಉತ್ತಮವಾಗಿದೆ ಸಂಘಟನೆ

ಸ್ವಕುಳ ಸಾಳಿ ಸಮಾಜವೀಗ ಉತ್ತಮ ರೀತಿಯಲ್ಲಿ ಸಂಘಟಿತವಾಗುತ್ತಿದೆ. ಈ ಸಮುದಾಯದ ಸಂಘ, ಸೊಸೈಟಿಗಳಿವೆ. ಈ ಮೂಲಕ ಹಲವಾರು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ವಿಚಾರದಲ್ಲಿ ಪರಿಸ್ಥಿತಿ ಕೊಂಚ ಪರವಾಗಿಲ್ಲ. ಆದರೆ, ರಾಜಕೀಯವಾಗಿ ಈ ಸಮುದಾಯದವರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. 30.40 ವರ್ಷದ ಹಿಂದೆ ಒಬ್ಬರು ವಿಧಾನ ಪರಿಷತ್ ಸದಸ್ಯರಾಗಿದ್ದರು. ಅದನ್ನು ಹೊರತು ಪಡಿಸಿದರೆ ಒಬ್ಬರೂ ಶಾಸಕ, ಸಂಸದ ಆಗಿಲ್ಲ ಎನ್ನುವ ಕೊರಗು ಇವರನ್ನು ಕಾಡುತ್ತಿದೆ.

- ಕೆ.ವಿ.ಪ್ರಭಾಕರ
prabhukolar@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com