ಮುಸ್ಲಿಂ ರಾಷ್ಟ್ರದ ಸರಸ್ವತಿ ಸಂದೇಶ!

ಇಂಡೊನೇಷ್ಯ ಜಗತ್ತಿನ ಅತಿಹೆಚ್ಚಿನ ಮುಸ್ಲಿಂ ಜನಸಂಖ್ಯೆ ಹೊಂದಿರುವ ರಾಷ್ಟ್ರ. ಇತ್ತೀಚೆಗೆ ಅಮೆರಿಕದ ವಾಷಿಂಗ್ಟನ್ ಡಿ. ಸಿ. ನಗರಕ್ಕೆ ಗಿಫ್ಟ್ ಕೊಡಬೇಕು ಎಂದಾದಾಗ ಅಲ್ಲಿನ ರಾಯಭಾರಿಯ ಆಯ್ಕೆ ಏನಾಗಿತ್ತು ಗೊತ್ತೇ? ಹಿಂದುಗಳಲ್ಲಿ ವಿದ್ಯೆ ಪ್ರಾಪ್ತಿಗಾಗಿ ಪೂಜಿಸುವ ದೇವತೆ ಸರಸ್ವತಿಯ 10 ಅಡಿಗಳ ವಿಗ್ರಹ!
ಇದೀಗ ಆ ವಿಗ್ರಹವು ಇಂಡೊನೇಷ್ಯದ ರಾಯಭಾರ ಕಚೇರಿಯ ಮುಂಭಾಗದ ಮೆಸಾಚುಸೆಟ್ಸ್ ಅವೆನ್ಯೂದಲ್ಲಿ ತಲೆ ಎತ್ತಿ ನಿಂತಿದೆ. ಅದೇ ರಸ್ತೆಯ ಇನ್ನೊಂದು ತುದಿಯಲ್ಲಿ ಇಸ್ಲಾಮಿಕ್ ಸೆಂಟರ್ ಇದೆ. ಅದು 50 ವರ್ಷಗಳ ಹಿಂದೆ ಇಜಿಪ್ತ್ನ ರಾಯಭಾರಿ ಕೊಡುಗೆ ರೂಪದಲ್ಲಿ ನೀಡಿದ್ದು. 'ಅಮೆರಿಕದಲ್ಲಿ ಇಸ್ಲಾಂ ಅರ್ಥವನ್ನು ಸ್ಫುಟಗೊಳಿಸುವುದು' ಈ ಇಸ್ಲಾಮಿಕ್ ಕೇಂದ್ರದ ಉದ್ದೇಶವಾಗಿದೆ. ಅಂತೆಯೇ ಈ ಸರಸ್ವತಿ ವಿಗ್ರಹದ ಉದ್ದೇಶ ಇಂಡೋನೇಷ್ಯ ಜನಸಂಖ್ಯೆಯ ಶೇಕಡ 88 ಪ್ರಮಾಣವು ಮುಸ್ಲಿಮರಿಂದಲೇ ಕೂಡಿದ್ದರೂ ಶೇಕಡ 3ರಷ್ಟು ಮಾತ್ರವಿರುವ ಹಿಂದುಗಳೂ ಅಲ್ಲಿ ಮುಖ್ಯರಾಗುತ್ತಾರೆ ಎಂಬುದನ್ನು ಸಾರುವುದು.
ಸರಸ್ವತಿ ವಿಗ್ರಹವನ್ನೇ ಗಿಫ್ಟ್ ಕೊಡುವುದಕ್ಕೆ ಆಯ್ದುಕೊಂಡ ರಾಯಭಾರಿ ಡಿನೊ ಡಿಜಲಾಲ್ ಅವರಿಗೆ ಕ್ರೈಸ್ತರು ಮತ್ತು ಯಹೂದಿಗಳೂ ಮುಖ್ಯವಾದವರೇ ಆಗಿದ್ದಾರೆ. ಕಳೆದ ವರ್ಷ ಡಿನೊ ಮತ್ತು ರಬ್ಬಿ ಸಿದ್ ಸ್ಕೂವಾರ್ಜ್ ಎಂಬುವವರ ನೇತೃತ್ವದಲ್ಲಿ ಕ್ರೈಸ್ತರು, ಯಹೂದಿ ಮತ್ತು ಮುಸ್ಲಿಂ ಮುಖಂಡರನ್ನು ಒಳಗೊಂಡ 24 ಮಂದಿಯ ತಂಡವು ಅಮೆರಿಕದಿಂದ ಜೋರ್ಡಾನ್, ಪ್ಯಾಲೆಸ್ತೀನ್ ಹಾಗೂ ಇಸ್ರೇಲ್ನ ನಾಯಕರುಗಳೊಂದಿಗೆ ಮಾತುಕತೆ ನಡೆಸುವುದಕ್ಕೆ ಪ್ರವಾಸ ಕೈಗೊಳ್ಳಲಾಗಿತ್ತು. ಹಲವು ಮತಗಳ ನಾಯಕರೆಲ್ಲ ಒಟ್ಟಿಗೆ ಪ್ರಯಾಣಿಸಿದ ಕಾರಣಕ್ಕೆ ಆ ಪ್ರವಾಸ ಪ್ರಾಮುಖ್ಯ ಪಡೆಯುತ್ತದೆ. ಇದು ಇನ್ನೂ ವಿಶೇಷವೆನಿಸಿಕೊಳ್ಳುವುದು. ಏಕೆಂದರೆ ಇಂಡೊನೇಷ್ಯವು ಇಸ್ರೇಲ್ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲ ಹಾಗೂ ಜುಡಾಯಿಸಂ ಅನ್ನು ಆರು ಪ್ರಮುಖ ಮತಗಳ ಪೈಕಿ ಒಂದೆಂದು ಪರಿಗಣಿಸುವುದೇ ಇಲ್ಲ.
ಅದಕ್ಕೂ ವರ್ಷ ಮುಂಚೆ ರಾಯಭಾರಿ ಡಿಜಲಾಲ್ ಅವರು ಚರ್ಚಾವೇದಿಕೆಯೊಂದನ್ನು ರೂಪಿಸಿದ್ದರು. ಅದರಲ್ಲಿ ಇಂಡೊನೇಷ್ಯದ ಪ್ರಮುಖ ಮುಸ್ಲಿಂ ಪುರೋಹಿತ ಡಾ. ದಿನ್ ಶಮ್ಸುದ್ದೀನ್ ಇದ್ದರು. ನ್ಯಾಷನಲ್ ಕೌನ್ಸಿಲ್ ಆಫ್ ಚರ್ಚ್ಸ್ನ ರೆವರೆಂಡ್ ಮಿಶೆಲ್ ಲಿವಿಂಗ್ಸ್ಟನ್ ಮತ್ತು ರಬ್ಬಿ ಸ್ಕೂವಾರ್ಜ್ ಪಾಲ್ಗೊಂಡಿದ್ದರು. ಆ ಚರ್ಚೆಯನ್ನು ಇಂಡೊನೇಷ್ಯದ ವಾಹಿನಿಯಲ್ಲಿ ಬಿತ್ತರಿಸಲಾಯಿತು. ಜುಡಾಯಿಸಂ ಸೇರಿದಂತೆ ಹಲವು ನಂಬಿಕೆ- ಪಂಥಗಳ ಪ್ರಮುಖರನ್ನು ಒಂದು ವೇದಿಕೆಯಲ್ಲಿ ತಂದ ಆಲೋಚನೆಯೇ ಅದ್ಭುತ ಎಂಬ ಪ್ರಶಂಸೆ ವೀಕ್ಷಕರಿಂದ ಲಭ್ಯವಾಗಿತ್ತು. ತಮ್ಮ ನಂಬಿಕೆಗಳಲ್ಲಿ ಧೃಡ ಹಾಗೂ ಬಲಿಷ್ಠವಾಗಿದ್ದುಕೊಂಡೂ ಇತರ ಪಂಥಗಳನ್ನು ಗೌರವಿಸುವುದು ಸಾಧ್ಯ ಎಂಬುದನ್ನು ಆ ಚರ್ಚಾ ವೇದಿಕೆ ಜಾಹೀರುಪಡಿಸಿತ್ತು. ರಾಷ್ಟ್ರಗಳ ನಡುವೆ ಬಾಂಧವ್ಯಗಳನ್ನು ಗಟ್ಟಿಗೊಳಿಸುವುದು, ಆರ್ಥಿಕ ಸಹಕಾರವನ್ನು ವೃದ್ಧಿಸುವುದು ಹೀಗೆ ರಾಯಭಾರಿ ಹುದ್ದೆಯ ಸಾಂಪ್ರದಾಯಿಕ ಜವಾಬ್ದಾರಿಗಳನ್ನು ನಿರ್ವಹಿಸುವುದರ ಜತೆಗೆ, ವೈವಿಧ್ಯದಲ್ಲೂ ಏಕತೆಯ ಎಳೆಯನ್ನು ಹುಡುಕುವತ್ತಲೂ ರಾಯಭಾರಿ ಡಿಜಲಾಲ್ ಶ್ರಮಿಸುತ್ತಿರುವುದನ್ನು ಆ ಚರ್ಚಾವೇದಿಕೆಯೇ ಬಿಂಬಿಸಿತ್ತು.
ಅದೇ ವರ್ಷ ರಾಯಭಾರಿ ಡಿಜಲಾಲ್ ಅವರು ವಾಷಿಂಗ್ಟನ್ ಡಿ.ಸಿ.ಯಲ್ಲಿ ಅತಿಹೆಚ್ಚಿನ ಜನ ಕಲೆತು, ಇಂಡೊನೇಷ್ಯದ ಬಿದಿರಿನ ವಾದ್ಯ ಆ್ಯಂಗ್ಕ್ಲುಂಗ್ ನುಡಿಸಬಲ್ಲರೇ ಎಂಬ ಸವಾಲೊಂದನ್ನು ಎಸೆದರು. ಆ್ಯಂಗ್ಕ್ಲುಂಗ್ ನುಡಿಸುವುದಕ್ಕೆ ಪರಿಣತಿಯೇನೂ ಬೇಕಾಗಿರಲಿಲ್ಲ. ಅದನ್ನು ಹಿಡಿದು ಅಲುಗಾಡಿಸಿದರೆ ಸ್ವರ ಹೊರಡುತ್ತದೆ. ಅಲ್ಲಿನ ಸಂದೇಶವೂ ಸ್ಪಷ್ಟ: ಬಹುಸಂಖ್ಯೆಯ ಆ್ಯಂಗ್ಕ್ಲುಂಗ್ಗಳನ್ನು ಒಟ್ಟಿಗೆ ನುಡಿಸಿದಾಗ ಅದು ಮಾಧುರ್ಯವನ್ನು ಹೊಮ್ಮಿಸುತ್ತದೆ. ಅಂತೆಯೇ 'ವಿ ಆರ್ ದಿ ವರ್ಲ್ಡ್' ಎಂಬ ಘೋಷ ಮೊಳಗಿಸುತ್ತಾ ನಾನಾ ಧರ್ಮಗಳಿಗೆ ಸೇರಿದ 5182 ಮಂದಿ ಒಟ್ಟಾಗಿ ವಾದ್ಯ ನುಡಿಸಿದ್ದರು. ಬಹುಸಂಸ್ಕೃತಿ ಹಾಗೂ ಧಾರ್ಮಿಕ ವೈವಿಧ್ಯದ ಸಂಕಲ್ಪವನ್ನು ಸಾರಿತ್ತದು.
ದೇವಿ ಸರಸ್ವತಿಯ ವಿಗ್ರಹ ಈಡೇರಿಸುತ್ತಿರುವ ಉದ್ದೇಶವನ್ನೇ ಆ್ಯಂಗ್ಕ್ಲುಂಗ್ ವಾದ್ಯ ಪರಿಕರವೂ ಈಡೇರಿಸಿತ್ತು. ಅದೆಂದರೆ ಧಾರ್ಮಿಕ ಸಹಿಷ್ಣುತೆಯನ್ನು ಜನರು ಇನ್ನೂ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂಬುದು. ಸರಸ್ವತಿವಿಗ್ರಹ ರೂಪುಗೊಂಡಿದ್ದರ ಬಗ್ಗೆ ಅದರ ಶಿಲ್ಪಿ ನ್ಯೊಮನ್ ಸುಧರ್ವ ಅವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತು. ಇಂಡೋನೇಷ್ಯದ ಬಾಲಿಯಿಂದ ಇನ್ನಾರು ಮಂದಿ ಕೆತ್ತನೆ ಕೆಲಸದವರೊಂದಿಗೆ ವಾಷಿಂಗ್ಟನ್ ಡಿ.ಸಿ. ರಾಯಭಾರ ಕಚೇರಿ ಎದುರು ಸರಸ್ವತಿ ವಿಗ್ರಹ ನಿರ್ಮಾಣದ ಕೆಲಸಕ್ಕೆ ತೊಡಗಿಸಿಕೊಂಡರು ಸುಧರ್ವ. ಬಾಲಿಯಲ್ಲಿ ಶಿಲ್ಪಕಲೆಗೆ ಸುಧರ್ವ ಪ್ರಖ್ಯಾತಿ ಪಡೆದವರು. ಆದರೆ ಇಂಡೊನೇಷ್ಯದ ಹೊರಗಡೆ ಮಾಡಿದ ಮೊದಲ ಕೆತ್ತನೆ ಇದು. ಮೂರು ವಾರಗಳಲ್ಲಿ ವಿಗ್ರಹಕ್ಕೆ ಬೇಕಾದ ಪದಾರ್ಥಗಳನ್ನು ಕಲೆ ಹಾಕಿದ್ದಲ್ಲದೇ ಅದನ್ನು ನಿರ್ಮಿಸಿಯೂ ಬಿಟ್ಟರು ಸುಧರ್ವ ಮತ್ತವರ ತಂಡದ ಸದಸ್ಯರು. ಸರಸ್ವತಿಯ ಚರಣಗಳಲ್ಲಿ ಕುಳಿತಿರುವ ಮೂವರು ಮಕ್ಕಳು. ಒಬ್ಬಾತ ಆಫ್ರಿಕನ್ ಅಮೆರಿಕನ್, ಇನ್ನೊಬ್ಬ ಕಕೂಷಿಯನ್ ಮತ್ತೊಬ್ಬ ಪೂರ್ವ ಏಷ್ಯದವ ಎಂಬುದಾಗಿ ಕೆತ್ತನೆಯಲ್ಲಿ ಅರಳಿಸಲಾಗಿದೆ. ಇಂಗ್ಲಿಷಿನ ಒಂದು ಪದವೂ ಗೊತ್ತಿಲ್ಲದ, ಹಿಮ ಬೀಳುವ ವಾತಾವರಣಕ್ಕೆ ಸಂಪೂರ್ಣ ಅಪರಿಚಿತರಾದ ಸುಧರ್ವರ ತಂಡ ಸರಸ್ವತಿಯನ್ನು ಶಿಲೆಯಲ್ಲಿ ಅರಳಿಸಿತು. ಆ ಅನುಭವ ಹೇಗಿತ್ತೆಂದು ಕೇಳಿದರೆ, 'ಸಹಜ... ವಿಶ್ವವಿದ್ಯಾಲಯ ಹಾಗೂ ಸರ್ಕಾರಿ ಕಟ್ಟಡಗಳ ಮುಂದೆ ಸರಸ್ವತಿ ಇರುವುದು ಉಚಿತ ತಾನೇ' ಎನ್ನುತ್ತಾರೆ ಶಿಲ್ಪಿ ಸುಧರ್ವ.
ಬಾಲಿಯಲ್ಲಿ ಇದು ಸಹಜವೇ ಆಗಿರಬಹುದು. ಆದರೆ ವಾಷಿಂಗ್ಟನ್ ಡಿ.ಸಿ.ಯಲ್ಲಿ ಅರಳಿರುವ ಸರಸ್ವತಿ ವಿಗ್ರಹವು 28 ಕೋಟಿ ಮುಸ್ಲಿಮರಿರುವ ಇಂಡೊನೇಷ್ಯದ ಔದಾರ್ಯ ಸಾರುತ್ತ ಧಾರ್ಮಿಕ ಸಹಿಷ್ಣುತೆ ಪಾಠವನ್ನು ಜಗತ್ತಿಗೆಲ್ಲ ಸಾರುತ್ತಿದೆ!
- ಅಲಿಸ್ಸಾ ಸ್ಟೆರ್ನ್
ಬಾಲಿಯ ವೆಬ್ಜರ್ನಲ್ ನಿರ್ದೇಶಕಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


