ಹಲ್ಲು, ವಿಗ್ಗು, ಮೇಕಪ್ಪು, ಚೇಂಜಾಗೋಯ್ತು ಗೆಟಪ್ಪು

'ಹಲ್ಲು ಹೋಯಿತಲ್ಲೋ, ಬಾಡು ತಿನ್ನದಂತಾಯಿತಲ್ಲೋ' ಅಂತ ಸ್ಯಾಡ್ ...
Updated on: 

'ಹಲ್ಲು ಹೋಯಿತಲ್ಲೋ, ಬಾಡು ತಿನ್ನದಂತಾಯಿತಲ್ಲೋ' ಅಂತ ಸ್ಯಾಡ್ ಸಾಂಗು ಹಾಡ್ಕಂಡು ಮೈಲಾರಿ ವೋಯ್ತಾಯಿದ್ದ. ದಾರಿನಾಗೆ ಹೆಲ್ತ್ ಮಂತ್ರಿ ಖಾದರ್ರು ಸಿಕ್ಬುಟ್ರು.
'ಇದ್ಯಾಕೆ ಮೈಲಾರಿ, ಏನಾಗದೆ ಅಂತ ಹಿಂಗೆ ಸೋಕ ಗೀತೆ ಹಾಡ್ಕಂಡು ವೋಯ್ತಾಯಿದ್ದೀಯ. ಮೈನಾಗೆ ವುಸಾರಿಲ್ವಾ? ಹಂಗೇನರ ಇದ್ರೆ ಹೇಳು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆನಾಗೆ ಟ್ರೀಟ್‌ಮೆಂಟು ಕೊಡುಸ್ತೀನಿ' ಅಂದ್ರು ಮಂತ್ರಿಗ್ಳು.
'ಹಂಗೇನೂ ಇಲ್ಲ ಧಣಿ, ಸಿಂಪಲ್ ಪ್ರಾಬ್ಲಮ್ಮು, ವತ್ತಾರೆ ಎದ್ದು ಬೇವಿನ ಕಡ್ಡಿ ತಕ್ಕಂಡು ಹಲ್ಲು ವುಜ್ತಾ ಇದ್ದೆ. ಎರಡು ಹಲ್ಲು ಹಂಗಂಗೆ ವದ್ರೋಯ್ತು. ಹಲ್ಲು ಇಲ್ದೆ ಬಾಡು ತಿನ್ನಾದು ಹೆಂಗೆ?' ಅಂತೇಳಿ ಮೈಲಾರಿ ಕೇಳ್ದ.
'ಅಯ್ಯೋ ದಡ್ ಮುಂಡೇದೆ, ಅದುಕ್ಕೆ ಯಾಕೆ ಪೀಲಿಂಗು ಮಾಡ್ಕತೀಯ. ನಾನು ವೊಸ ಸ್ಕೀಮು ಅನೌನ್ಸು ಮಾಡಿದ್ದೀನಿ. ಪೇಪ್ರಾಗೆ ನ್ಯೂಜು ವೋದಿಲ್ವಾ? ಅಂತೇಳಿ ಮಂತ್ರಿಗ್ಳು ಕೇಳುದ್ರು?  ಯಾವ್ದು ಸಿವಾ ಸ್ಕೀಮು?' ಅಂತೇಳಿ ಮೈಲಾರಿ ಕೇಳ್ದು.
'ಹಲ್ಲು ಇಲ್ದೋರ್ಗೆ ಹಲ್ಲು ಕಟ್ಸಾದು, ಅದೇ ಪ್ರೀಯಾಗಿ ಹಲ್ಲು ಸೆಟ್ಟು ಕೊಡಾದು. ಪಾಪ, ಮುದುಕ್ರುಗೆ ಹಲ್ಲು ಬಿದ್ದೋಗಿ ಬಾಯಿ ಬುಡ್ದಂಗೆ ಆಗೋಗದೆ. ಬಾಯಿ ಬುಟ್ರೆ ಎಲ್ಲಾರೂ ಕಿಸೀತರೆ, ಮನ್ಯಾಗೆ ಬಾಡೂಟ ಮಾಡುದ್ರೂ ಅಗ್ಯೆಕ್ಕೆ ಆಗಾಕಿಲ್ಲ. ಸುಮ್ಕೆ ನೋಡ್ಕಂಡು ಕೂತ್ಕಬೇಕಾಯ್ತದೆ. ಅದುಕ್ಕೆ ಹಲ್ಲು ಕಟ್ಟುಸೋ ಸ್ಕೀಮು ತಕ್ಕಂಡು ಬಂದಿರಾದು' ಅಂದ್ರು ಮಂತ್ರಿ ಖಾದರ್ರು.
'ನಿಮ್ ಖದರ್ರೇ ಖದರ್ರು ಬುಡಿ ಖಾದರ್ ಸಾಹೇಬ್ರೆ. ನನ್ನೆಂಡ್ರು ಯಾವಾಗ್ಲೂ ಹಲ್ಲು ವುದುರುಸ್ತೀನಿ ಅಂತ ಧಮ್ಕಿ ಹಾಕ್ತಾಯಿರ್ತಳೆ. ಇನ್ನೇಕೆ ಭಯ ಇಲ್ಲ. ನಂದೊಂದು ಸಜೆಸನ್ನು ಐತೆ. ಅದುನ್ನೂ ನಿಮ್ ತಲೆವೊಳಿಕ್ಕೆ ಹಂಗೇ ಹಾಕ್ಕಂಬುಡಿ' ಅಂದ ಮೈಲಾರಿ.
'ಏನಿಲ್ಲ, ಹಲ್ಲು ಬಿದ್ದೋಗಿರೋರ್ಗೆ ಹಲ್ಲುಸೆಟ್ಟು ಕೊಡುಸ್ತೀರಿ. ಹಂಗೇ ತಲ್ಯಾಗೆ ಕೂದ್ಲು ವುದ್ರೋಗಿರೋರ್ಗೆ ವಿಗ್ಗು ಕೊಡುಸ್ಬುಡಿ. ಪಾಪ, ನಮ್ಮೂರ್ನಾಗೆ ಗಂಡು ಹೈಕ್ಳು ಸಣ್ಣ ವಯಸ್ಗೆ ಕೂದ್ಲು ಕಳ್ಕಂಬುಟ್ಟು ಸ್ಯಾನೆ ರೋದ್ನೆ ಮಡುಗ್ತಾವ್ರೆ. ಕೂದ್ಲು ಇಲ್ಲ ಅಂತೇಳಿ ಮದ್ವೇನೂ ಆಯ್ತಾಯಿಲ್ಲ. ದೊಡ್ ಮನ್ಸು ಮಾಡ್ಬುಟ್ಟು ವಿಗ್ಗು ಕೊಡುಸ್ಬುಟ್ರೆ ಅವ್ರು ನಾಲ್ಕು ಅಕ್ಕಿ ಕಾಳು ಬಿದ್ದೋಯ್ತದೆ. ತಲೆಮ್ಯಾಲೆ ವಿಗ್ಗು ಇದ್ದೋಯ್ತದೆ. ಹೆಂಗದೆ ಐಡಿಯಾ ?' ಅಂದ ಮೈಲಾರಿ.
'ಅಷ್ಟ್ರಾಗೆ ಅಮಾಸೆ ವೋಡೋಡಿ ಬಂದ, ನಮುಸ್ಕಾರ ಮಂತ್ರಿಗುಳ್ಗೆ, ಹಲ್ಲುಸೆಟ್ಟು, ವಿಗ್ಗು ಸರಿಯಾಗದೆ ಸ್ವಾಮಿ. ನಮ್ಮೂರ್ನಾಗೆ ಹೆಣ್ ಹೈಕ್ಳು ಬಿಸ್ನಾಗೆ ಕೆಲ್ಸ ಮಾಡಿ ಮಾಡಿ ಕರ್ರಗೆ ಆಬುಟ್ಟವ್ರೆ. ಕೂಲಿನಾಲಿ ಮಾಡಿ ಸಂಪಾದ್ನೆ ಮಾಡೋ ಕಾಸೆಲ್ಲಾ ಸ್ನೋ, ಪೌಡ್ರು ಅಂತೇಳಿ ಕಳ್ಕತಾವ್ರೆ. ಅವ್ರುಗೆ ಅನ್ಕೂಲ ಆಗಂಗೆ ಮೇಕಪ್ಪು ಸೆಟ್ಟು ಪುಗ್ಸಟ್ಟೆ ಕೊಡೋ ಸ್ಕೀಮು ತಕ್ಕಂಬನ್ನಿ. ಆವಾಗ ಅವ್ರು ಐಸ್ವರ್ಯ ರಾಯ್ ಥರ ಥಳಾಥಳಾಂತ ಆಗೋಯ್ತರೆ. ಆವಾಗ ಎಲ್ಲ ಹೆಣ್ಣಕ್ಳು ನಿಮ್ ಪಟ ತಕ್ಕಂಡೋಗಿ ಮನ್ಯಾಗೆ ಮಡಿಕ್ಕಂಬುಡ್ತರೆ' ಅಂದ ಆಮಾಸೆ.
'ಮೇಕಪ್ಪು ಸೆಟ್ಟು ಕೊಡೋ ಬದ್ಲು ವೂರೂರ್ನಾಗೆ ಬ್ಯೂಟಿ ಪಾರ್ಲರ್ರು ವೋಪನ್ ಮಾಡುದ್ರೆ ಹೆಂಗೆ? ಅಂತ ಮಂತ್ರಿಗ್ಳು ಕೇಳುದ್ರು. ಹಂಗಂದ್ದೆ ಏನು? ಅಂತೇಳಿ ಮೈಲಾರಿ ಕೇಳ್ದ. ಹೆಣ್ಣಕ್ಳು ಕಟಿಂಗ್ ಸಾಪು ಕಣಲೇ' ಅಂದ ಅಮಾಸೆ.
'ಸುಮ್ಕಿರಲೇ ಅಮಾಸೆ, ಆಮ್ಯಾಲೆ ಹೆಣ್ಣಕ್ಳು ವೋಗೋಗಿ ಕಟಿಂಗ್ ಸಾಪ್ನಾಗೆ ಕೂತ್ಕಂಡ್ರೆ ಮನ್ಯಾಗೆ ಹಿಟ್ಟು ಬೇಯ್ಸೋರು ಯಾರಲೆ ? ಇದು ಬ್ಯಾಡ ಬುಡಿ, ಮೇಕಪ್ಪು ಸೆಟ್ಟು ಸಾಕು, ಮನ್ಯಾಗೆ ಕನ್ನಡಿ ಮುಂದ್ಲಾಗಡೆ ನಿಂತ್ಕಂಡೇ ಇರ್ಲಿ ಅಂದ ಮೈಲಾರಿ. ಹಂಗೇ ಇನ್ನೊಂದು ಇಸ್ಯ ಕಣಣ್ಣ, ಹಲ್ಲುಸೆಟ್ಟು, ವಿಗ್ಗು ಸೆಟ್ಟು ಜತ್ಯಾಗೆ ಕೂಲಿಂಗು ಗ್ಲಾಸು ಕೊಡುಸ್ಬುಟ್ರೆ ಲೈಫು ವೊಂದು ಲೆವೆಲ್ಗೆ ಬಂದೋಯ್ತದೆ. ಯಾಕಂದ್ರೆ ಇತ್ತಿತ್ನಾಗೆ ವೂರ್ನಾಗೆ ಬಿಸ್ಲು ಸ್ಯಾನೆ ಆಬುಟ್ಟದೆ ಕಣ್ಣೇ ಬುಡಕ್ಕೆ ಆಗಾಕಿಲ್ಲ ಅಂತೀನಿ' ಅಂತೇಳ್ದ ಮೈಲಾರಿ.
'ಲೇ ಮುಂಡೇವಾ, ನಿಮ್ ಕಣ್ಗೆ ನಾನು ಹೆಂಗಲಾ ಕಾಣುಸ್ತೀನಿ? ಏನೋ ವಯ್ಸಾದೋರ್ಗೆ ಹಲ್ಲು ಸೆಟ್ಟು ಕೊಟ್ಟು ಪುಣ್ಯ ಕಟ್ಕಳಾವ ಅಂತಂದ್ರೆ ಲಿಸ್ಟು ಮಡುಗ್ತಾಯಿದ್ದೀರ ಲಿಸ್ಟು. ಇದುನ್ನೆಲ್ಲಾ ಕೊಟ್ರೆ ಜನ ವೊಲ, ಗದ್ದೆಗೆ ವೋಗಾಕಿಲ್ಲ. ಸಿನ್ಮಾ ಸೂಟಿಂಗು ನಡ್ಯೋ ಸೆಟ್ಗೆ ವೊಂಟೋಯ್ತರೆ. ಲೇ ನಾನು ಹೆಲ್ತು ಮಂತ್ರಿ ಕಣ್ರಲೇ ಹೆಲ್ತು ಮಂತ್ರಿ' ಅಂತೇಳಿ ಖಾದರ್ರು ಸಾಹೇಬ್ರು ಕೈನಾಗೆ ಹಲ್ಲು ಸೆಟ್ಟು ಹಿಡ್ಕಂಡು ವಯ್ಸಾದೋರನ್ನ ವುಡಿಕ್ಕಂಡು ವೊಂಟ್ರು.

- ಕೆ.ವಿ.ಪ್ರಭಾಕರ್
prabhukolar@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com