ಪಂಚಾಯ್ತಿ: ಸುಧಾರಣೆ ಬೇಕು, ನಿಯಂತ್ರಣವಲ್ಲ
ಇತ್ತೀಚೆಗೆ ರಾಜ್ಯ ಸರ್ಕಾರವು ಪಂಚಾಯ್ತಿ ಕಾಯ್ದೆಯ ತಿದ್ದುಪಡಿ ಮಸೂದೆಗೆ ಅಸ್ತು ಎಂದ ಪರಿಣಾಮ ಕಡ್ಡಾಯವಾಗಿ, ಕನಿಷ್ಠ 6 ತಿಂಗಳಿಗೊಮ್ಮೆಯಾದರೂ ಗ್ರಾಮ ಪಂಚಾಯ್ತಿಗಳು, ಗ್ರಾಮ ಸಭೆ ಮತ್ತು ವಾರ್ಡು ಸಭೆ ಮಾಡಲೇಬೇಕು. ಇಲ್ಲದೇ ಹೋದರೆ ಅಧ್ಯಕ್ಷ ಮತ್ತು ಸದಸ್ಯರ ತಲೆ ದಂಡ ಗ್ಯಾರೆಂಟಿ ಎಂದು ಹೇಳುತ್ತದೆ ಈ ತಿದ್ದುಪಡಿ ವಿಧೇಯಕ. ಇಂತಹ ಮಸೂದೆಗೆ ಅಸ್ತು ಎಂದ ಬೆನ್ನಲ್ಲೆ ಅದರ ಸಾಧಕ, ಬಾಧಕಗಳು ಮತ್ತು ಯಾವ ಪುರುಷಾರ್ಥದ ಸಾಧನೆಗಾಗಿ ಇಂತಹ ತಿದ್ದುಪಡಿ ಮಾಡಲಾಗಿದೆ ಎನ್ನುವ ಸಂಗತಿ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಈಗಿನ ಗ್ರಾಮ ಪಂಚಾಯ್ತಿ ವ್ಯವಸ್ಥೆಯಲ್ಲಿ ವಿಕೇಂದ್ರೀಕರಣದ ಪರಿಕಲ್ಪನೆಯನ್ನೇ ಗಂಟುಮೂಟೆ ಕಟ್ಟಿ ಬಿಸಾಡಲಾಗಿದೆ. ಹಲ್ಲು ಕಿತ್ತ ಹಾವಿನಂತಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಆಡಳಿತ ವ್ಯವಸ್ಥೆಗಳು ಕೇವಲ ಸರ್ಕಾರದ ಏಜೆಂಟರಂತೆ ಕೆಲಸ ಮಾಡುತ್ತವೆ. ಆದರೆ, ಆಯಾ ಕ್ಷೇತ್ರದ ಶಾಸಕರಿಗೆ ಮಾತ್ರ ಸರ್ಕಾರದ ಎಲ್ಲಾ ಇಲಾಖೆಯಲ್ಲೂ ನೀಡಲಾಗಿರುವ ಪರಮಾಧಿಕಾರವು ಸ್ಥಳೀಯ ಜನಪ್ರತಿನಿಧಿಗಳ ಅಸ್ತಿತ್ವವನ್ನೇ ಬುಡಮೇಲು ಮಾಡುತ್ತಿದೆ. ಗ್ರಾಮ ಪಂಚಾಯ್ತಿ ಆಡಳಿತ ವ್ಯವಸ್ಥೆಯೂ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆಯಲ್ಲೂ ಹಸ್ತಕ್ಷೇಪ ಮಾಡುವ ಶಾಸಕರಿಗೆ, ಗ್ರಾಮಸಭೆ ಮತ್ತು ವಾರ್ಡು ಸಭೆಗಳ ನಿರ್ಣಯಗಳಂತೂ ಲೆಕ್ಕಕ್ಕೆ ಎನ್ನುವುದು ಒಂದು ಪುಟ್ಟ ಉದಾಹರಣೆ.
ಇನ್ನು ಗ್ರಾಮ ಪಂಚಾಯ್ತಿಗಳಿಗೆ ಹೇಳಿಕೊಳ್ಳುವಷ್ಟು ಅನುದಾನವೂ ಅಲಭ್ಯ. ಸ್ವತಂತ್ರ ಅಧಿಕಾರವಂತೂ ಇಲ್ಲವೇ ಇಲ್ಲ. ಇಂತಹ ಅತಂತ್ರ ಸ್ಥಿತಿಯಲ್ಲಿರುವ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು 'ಯಾಕಾದರೂ ಸದಸ್ಯರಾಗಿ ಆಯ್ಕೆಯಾದೆವೋ?' ಎನ್ನುತ್ತಿದ್ದಾರೆ. ಗ್ರಾಮ ಪಂಚಾಯ್ತಿಗಳ ಆಡಳಿತ ವ್ಯವಸ್ಥೆಯೇ ಗೊಂದಲದ ಗೂಡಾಗಿದೆ. ಬಹುತೇಕ ಪಂಚಾಯ್ತಿಗಳಲ್ಲಿ ಅಧ್ಯಕ್ಷರು ಹಾಗೂ ಸದಸ್ಯರಲ್ಲಿ ಹೊಂದಾಣಿಕೆ ಇರುವುದಿಲ್ಲ. ಅಧ್ಯಕ್ಷರ ಅಥವಾ ಸದಸ್ಯರ ಕಿತ್ತಾಟ, ಒಳ ಜಗಳಗಳ ಲಾಭ ಮಾಡಿಕೊಳ್ಳಲು ಅಲ್ಲಿರುವ ಅಧಿಕಾರಿಗಳು, ಸಿಬ್ಬಂದಿ ಹಾತೊರೆಯುತ್ತಾರೆ. ಹೀಗಾಗಿ ಪಂಚಾಯ್ತಿಗಳಲ್ಲಿ ಅಧ್ಯಕ್ಷರು ಅಥವಾ ಸದಸ್ಯರ ಮಾತುಗಳನ್ನು ಪಿಡಿಒಗಳು ಇರಲಿ, ಅಲ್ಲಿರುವ ಕಾರ್ಯದರ್ಶಿ, ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್ ಮತ್ತು ನೀರು ಬಿಡುವ ನೌಕರನೂ ಕೇಳದಂತಹ ಮನಸ್ಥಿತಿಯನ್ನು ಅನೇಕ ಕಡೆ ನೋಡಬಹುದು. ಮತ್ತೆ ಕೆಲವು ಕಡೆ ಗ್ರಾಮ ಪಂಚಾಯ್ತಿಗಳಲ್ಲಿ ಇಂದಿಗೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜಂಟಿಯಾಗಿ ಸೇರಿಕೊಂಡೇ ಸಾಕಷ್ಟು ಅವ್ಯವಹಾರ, ದುರಾಡಳಿತ ಮಾಡುತ್ತಾರೆ. ಕಮಿಷನ್ ಹಂಚಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಮಾಸಿಕ ಸಭೆಗಳಲ್ಲಿ ರಂಪು ರಾಮಾಯಣ ಕಾಣಬಹುದು.
ಗ್ರಾಮ ಪಂಚಾಯ್ತಿಯವರು ಇದುವರೆಗೂ ಕಡ್ಡಾಯವಲ್ಲದೇ ಹೋದರೂ ಸಾಕಷ್ಟು ಗ್ರಾಮ ಸಭೆ ಮತ್ತು ವಾರ್ಡು ಸಭೆಗಳನ್ನು ನಡೆಸಿದ್ದಾರೆ. ಇಂತಹ ಸಭೆಗಳಿಂದ ಯಾವುದೇ ಪ್ರಯೋಜನವಾಗಿಲ್ಲ ಎಂಬ ಸಾರ್ವಜನಿಕರ ದೂರು ಇದ್ದೇ ಇದೆ. ಆದರೂ ಈ ಸಭೆಗಳಲ್ಲಿ ಅಧ್ಯಕ್ಷರು, ಸದಸ್ಯರು ಸಾರ್ವಜನಿಕರಿಗೆ ತಮಗೆ ಗೊತ್ತಾದಷ್ಟು ಸರ್ಕಾರದ ಸೌಲಭ್ಯಗಳ ಬಗ್ಗೆ ವಿವರ ನೀಡುತ್ತಾರೆ. ತಾಲೂಕು ಮಟ್ಟದ ಯಾವುದೇ ಅಧಿಕಾರಿಗಳು ಇಂತಹ ಸಭೆಗಳಿಗೆ ಬರುವುದಿರಲಿ ಕನಿಷ್ಠ ಪಕ್ಷ ಪಂಚಾಯ್ತಿಗಳ ಸಂಪರ್ಕಕ್ಕೂ ಬರುವುದಿಲ್ಲ. ಗ್ರಾಮ ಮತ್ತು ವಾರ್ಡು ಸಭೆಗಳಲ್ಲಿ ಜನ ಕೇಳುವುದು ಸಾಮಾನ್ಯ ಬೇಡಿಕೆಗಳೇ. ಕನಿಷ್ಠ ಬೇಡಿಕೆಗಳನ್ನು ಮುಂದಿಟ್ಟರೂ ಅವುಗಳನ್ನು ಈಡೇರಿಸಲು ಸಾಧ್ಯವಾಗದಷ್ಟು ಆರ್ಥಿಕ ದುಸ್ಥಿತಿ ಜೊತೆಗೆ ಪರಮಾಧಿಕಾರ ಪಂಚಾಯ್ತಿಗಳಿಗೆ ಇಲ್ಲ ಎಂಬುದು ಗಮನಾರ್ಹ. ಗ್ರಾಮ ಮತ್ತು ವಾರ್ಡು ಸಭೆಯ ಮತ್ತೊಂದು ದೊಡ್ಡ ದೌರ್ಬಲ್ಯ .ಯಾರ ಕಣ್ಣಿಗೂ ಕಾಣುವುದಿಲ್ಲ. ಇಂತಹ ಸಭೆಗಳಲ್ಲಿ ಸರ್ಕಾರಿ ಸೌಲಭ್ಯಗಳಾದ ವಸತಿ, ಶೌಚಾಲಯ ನಿರ್ಮಾಣ ಅನುದಾನಕ್ಕೆ ಆಯ್ಕೆ, ಎಸ್ಸಿ, ಎಸ್ಟಿ ಜನಾಂಗದವರಿಗೆ ಗಂಗಾ ಕಲ್ಯಾಣ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟಿ ಸಿದ್ದಪಡಿಸಿದರೂ ಅಂತಿಮವಾಗಿ ಶಾಸಕರೇ ಅದಕ್ಕೆ ಅಂಕಿತ ಹಾಕಬೇಕು. ಶಾಸಕರಿಗೆ ಪಟ್ಟಿ ಬದಲಿಸುವ ಶಕ್ತಿ ಇದೆ. ಹೆಸರು ತೆಗೆದು ಹಾಕುವ ಧೈರ್ಯವೂ ಇದೆ. ತಮಗೆ ಬೇಕಾದವರನ್ನೇ ಫಲಾನುಭವಿಗಳಾಗಿ ಆಯ್ಕೆ ಮಾಡುವ ಪರಮಾಧಿಕಾರವೂ ಇದೆ ಎಂದ ಮೇಲೆ ವಾರ್ಡು ಮತ್ತು ಗ್ರಾಮ ಸಭೆ ಮಾಡಿದರೂ ಯಾವ ಪ್ರಯೋಜನ ಎಂಬ ಪ್ರಶ್ನೆ ಪ್ರತಿ ಬಾರಿ ಕಾಡಿದರೂ ಇದುವರೆಗೂ ಉತ್ತರ ಸಿಕ್ಕಿಲ್ಲ.
ಗ್ರಾಮಗಳಲ್ಲಿ ಪಡಿತರ ವಿತರಣೆ ಮತ್ತು ಪಡಿತರ ಕಾರ್ಡಿನ ಸಮಸ್ಯೆಗೆ ಕೊನೆ ಮೊದಲು ಎಂಬುದಿಲ್ಲ, ಖಾಸಗಿ ಅಂಗಡಿಗಳಿಗೆ ಪಡಿತರ ವಿತರಣಾ ವ್ಯವಸ್ಥೆಯ ಜವಾಬ್ದಾರಿ ನೀಡಲಾಗಿದೆ. ಗ್ರಾಮ ಪಂಚಾಯ್ತಿಯವರು ಕೇವಲ ಅದರ ಉಸ್ತುವಾರಿ ನೋಡಿಕೊಳ್ಳಬೇಕು. ಆದರೆ ಖಾಸಗಿ ಅಂಗಡಿಯವರು ತಿಂಗಳಲ್ಲಿ ತನಗೆ ಅನುಕೂಲವಾದ ದಿನದಂದು ಅಂಗಡಿ ಬಾಗಿಲು ತೆಗೆದು ಪಡಿತರ ವಿತರಣೆ ಮಾಡುತ್ತಾನೆ. ಅದೇ ವ್ಯವಸ್ಥೆಯನ್ನು ಪಂಚಾಯ್ತಿಗಳಿಗೆ ವಹಿಸಿದರೆ ಜನರಿಗೂ ಅನುಕೂಲ ಹಾಗೂ ಪಂಚಾಯ್ತಿ ಸಿಬ್ಬಂದಿಗೂ ಜವಾಬ್ದಾರಿ ನೀಡಿದಂತಾಗುತ್ತದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಪ್ರತಿ ನಿತ್ಯವೂ ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಪಂಚಾಯ್ತಿ ಮಳಿಗೆಯಲ್ಲೇ ಪಡಿತರ ವಿತರಣೆ ಮಾಡಬಹುದು. ಇದರಿಂದ ಪಂಚಾಯ್ತಿಗೂ ಕಮಿಷನ್ ಸಿಗುತ್ತದೆ ಆದಾಯ ಮೂಲ ಕೂಡ ಸಿಕ್ಕಂತಾಗುತ್ತದೆ. ಇಂತಹ ಪರಿಕಲ್ಪನೆಗಳತ್ತ ಯಾವುದೇ ಸರ್ಕಾರ ಯಾವತ್ತೂ ಚಿಂತಿಸುವ ಮನಸ್ಸು ಮಾಡಿಲ್ಲ.
ವಿಕೇಂದ್ರೀಕರಣದ ಪರಿಕಲ್ಪನೆಗೆ ತಿಲಾಂಜಲಿ: ಗ್ರಾಮ ಪಂಚಾಯ್ತಿ ಮೂಲ ಉದ್ದೇಶವೇ ಅಧಿಕಾರ ವಿಕೇಂದ್ರೀಕರಣ. ಸಂವಿಧಾನಕ್ಕೆ 73ನೇ ತಿದ್ದುಪಡಿ ತಂದು ಸಾಮಾನ್ಯರು, ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡ, ಅಲ್ಪಸಂಖ್ಯಾತರಿಗೂ ಅಧ್ಯಕ್ಷ ಮತ್ತು ಸದಸ್ಯರ ಅಧಿಕಾರ ಸಿಗುವಂತೆ ಮಾಡಲಾಗಿದೆ. ಆದರೆ, ಸರ್ಕಾರ ಮಾತ್ರ ಗ್ರಾ .ಪಂ. ಗಳಲ್ಲಿ ಎಲ್ಲಾ ಅಧಿಕಾರವನ್ನು ಕಿತ್ತುಕೊಳ್ಳುತ್ತಾ ಬಂದಿವೆ. ಉದಾಹರಣೆಗೆ ಗ್ರಂಥಾಲಯ ನಿರ್ವಹಣೆ, ಅಂಗನವಾಡಿ ಕಾರ್ಯಕರ್ತೆಯರ ಸಂಬಳ, ಉಸ್ತುವಾರಿ, ಆರೋಗ್ಯ ಇಲಾಖೆಯ ರಕ್ಷಣಾ ಸಮಿತಿ ಅಧಿಕಾರಗಳನ್ನೇ ಕಿತ್ತುಕೊಂಡಿರುವ ಸರ್ಕಾರ ವಿಕೇಂದ್ರಿಕರಣದ ಮೌಲ್ಯವನ್ನು ಹರಾಜು ಹಾಕಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಸದಸ್ಯರೂ ಸೇರಿದಂತೆ ಇಡೀ ಆಡಳಿತ ಮಂಡಳಿಯನ್ನು ತಮ್ಮ ಮುಷ್ಠಿಯಲ್ಲಿ ಇಟ್ಟುಕೊಳ್ಳುವ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿಗಳ ನಿರ್ಲಕ್ಷ್ಯ ಆಡಳಿತ ವ್ಯವಸ್ಥೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಅಧಿಕಾರಿಗಳು ಇದ್ದೂ ಯಾವುದೇ ಪ್ರಯೋಜನವಿಲ್ಲ. ಆ ಹಂತದ ಅಧಿಕಾರಿಗಳಿಂದ ದೂರುಗಳ ಬಗ್ಗೆ ನಿರ್ಲಕ್ಷ್ಯ, ಯೋಜನೆಗಳ ಅನುಷ್ಠಾನಕ್ಕೆ ಗಮನಹರಿಸದೇ ಇರುವುದು ಪಂಚಾಯ್ತಿ ವ್ಯವಸ್ಥೆಗೆ ಮಾರಕವಾಗಿದೆ.
ಇಂತಹ ಹಲವಾರು ಕಾರಣಗಳು ಪಂಚಾಯ್ತಿ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿವೆ. ಆಡಳಿತ ವ್ಯವಸ್ಥೆಯಲ್ಲಿನ ತಳಪಾಯ ಭದ್ರ ಇಲ್ಲದೇ ಹೋದರೆ ಎಂತಹ ನಿರ್ಧಾರಗಳು ಮತ್ತು ಕಾಯ್ದೆಗಳು ಪ್ರಯೋಜನಕ್ಕೆ ಬರುವುದಿಲ್ಲ. ವಾರ್ಡ್ ಮತ್ತು ಗ್ರಾಮ ಸಭೆಗಳನ್ನು ಕಡ್ಡಾಯ ಮಾಡುವುದು ತಪ್ಪಲ್ಲ. ಆದರೆ, ಇಂತಹ ಸಭೆಗಳಲ್ಲಿ ಪಾಲ್ಗೊಳ್ಳುವ ಅಧ್ಯಕ್ಷ ಮತ್ತು ಸದಸ್ಯರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಅಗತ್ಯ ಮಾಹಿತಿಗಳೇ ಇರುವುದಿಲ್ಲ. ಅನುಷ್ಠಾನದ ದಾರಿ ಗೊತ್ತಿರುವುದಿಲ್ಲ. ಇವೆಲ್ಲವನ್ನು ತಿಳಿಸಿ ಹೇಳುವ ಅಧಿಕಾರಿಗಳು ಯಾವುದೇ ಸಭೆಗಳಿಗೆ ಬರುವುದಿಲ್ಲ ಎಂದ ಮೇಲೆ ಯಾವ ಪುರುಷಾರ್ಥಕ್ಕಾಗಿ ಇಂತಹ ವಾರ್ಡ್ ಮತ್ತು ಗ್ರಾಮ ಸಭೆ ಮಾಡಬೇಕು ಎಂಬುದು ಯಕ್ಷಪ್ರಶ್ನೆಯಾಗಿದೆ.
ಪಂಚಾಯತ್ರಾಜ್ ಸಬಲೀಕರಣದ ಸವಾಲುಗಳು
1. ಪಂಚಾಯತ್ರಾಜ್ಗೆ ಸಬಲೀಕರಣ ಮಾಡುವ ಉದ್ದೇಶದಿಂದ ಬೇಲೂರು ಘೋಷಣೆಯಡಿ 28 ಇಲಾಖೆಗಳ ವಿಷಯಗಳನ್ನು ಗ್ರಾಮ ಪಂಚಾಯ್ತಿಗೆ ವರ್ಗಾವಣೆ ಮಾಡಿದರು. ಆದರೆ, ಯಾವುದೇ ಇಲಾಖೆ ಅಧಿಕಾರಿಗಳು ವಾರ್ಡ್ ಅಥವಾ ಗ್ರಾಮಸಭೆ ಬಂದ ಉದಾಹರಣೆ ಇಲ್ಲ. ಸಭೆಗಳಿಗೆ ಬಂದು ಮಾಹಿತಿ ನೀಡಿಲ್ಲ. ಕನಿಷ್ಠ ಪಕ್ಷ ಗ್ರಾಮ ಪಂಚಾಯ್ತಿಗಳ ಸಂಪರ್ಕಕ್ಕೂ ಈ ಇಲಾಖೆ ಅಧಿಕಾರಿಗಳು ದಕ್ಕುವುದಿಲ್ಲ.
2. ಗ್ರಾಮ ಪಂಚಾಯ್ತಿಗಳಿಗೆ ನೀಡುತ್ತಿದ್ದ ಶಾಸನ ಬದ್ದ ಅನುದಾನ ಈಗ ವಿದ್ಯುತ್ ಬಿಲ್ ಪಾವತಿ ಹಾಗೂ ಪಂಚಾಯ್ತಿ ನೌಕರರ ಸಂಬಳಕ್ಕೆ ವರ್ಗಾವಣೆಯಾಗಿದೆ. 13ನೇ ಹಣಕಾಸು ಯೋಜನೆಯ ಅಲ್ಪ ಮೊತ್ತದ ಅನುದಾನ ನೀಡಿರುವ ಸರ್ಕಾರ ನಿರ್ಬಂಧಗಳನ್ನು ಹೇರಿ ಸ್ಥಳೀಯ ಜನಪ್ರತಿನಿಧಿಗಳ ಕೈ ಕಟ್ಟಿ ಹಾಕಿದೆ. ಈ ಅನುದಾನ ನೇರವಾಗಿ ಗ್ರಾಮ ಪಂಚಾಯ್ತಿಗಳಿಗೆ ಬರುವುದಿಲ್ಲ. ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಮೂಲಕವೇ ಬರಬೇಕು. ಇದರಿಂದ ಶೇ.10 ರಿಂದ 15ರಷ್ಟು ಕಮಿಷನ್ ಆ ಹಂತಗಳಲ್ಲಿ ಸೋರಿಕೆಯಾಗುತ್ತದೆ.
3. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಪಂಚಾಯ್ತಿಗಳಿಗೆ ವರದಾನ. ಆದರೆ, ಈ ಯೋಜನೆ ಅನುಷ್ಠಾನದಲ್ಲಿರುವ ಲೋಪಗಳು ಮಾತ್ರ ಲೆಕ್ಕವಿಲ್ಲದಷ್ಟು. ಸರಿಯಾದ ವೇಳೆಗೆ ಜಾಬ್ ಕಾರ್ಡ್ ಮಾಡಿಸುವುದಿಲ್ಲ. ಕ್ರಿಯಾ ಯೋಜನೆಗೆ ಸೂಕ್ತ ಕಾಲದಲ್ಲಿ ಅನುಮೋದನೆ ನೀಡುವುದಿಲ್ಲ. ಕಾಲಮಿತಿಯೊಳಗೆ ಕಾಮಗಾರಿ ಪೂರೈಸುವುದಿಲ್ಲ. ಕೂಲಿ ಕಾರ್ಮಿಕರಿಗೆ ಹಣ ಪಾವತಿಗಾಗಿ ಅಲೆದಾಡಬೇಕು. ಅಧಿಕಾರಿಗಳು ಈ ಯೋಜನೆಗೆ ತೋರುತ್ತಿರುವ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ಯೋಜನೆಯನ್ನು ಮೂಲೆಗುಂಪಾಗಿ ಮಾಡಿದೆ.
4. ಗ್ರಾಮ ಪಂಚಾಯ್ತಿಗಳಲ್ಲಿ ನಿಯಮಗಳ ಉಲ್ಲಂಘನೆ, ಅಕ್ರಮ ಖಾತೆಗಳು, ಲಕ್ಷಾಂತರ ರು. ಅವ್ಯವಹಾರ, ಕಡತಗಳ ನಿರ್ವಹಣೆ ಇಲ್ಲದಿರುವುದು, ಜಮಾಬಂಧಿ ಹಾಗೂ ಆಡಿಟ್ ವರದಿಗಳಲ್ಲಿನ ಲೋಪ, ವಸತಿ ಯೋಜನೆ ಕಾಳಸಂತೆಯಲ್ಲಿ ಮಾರಾಟ, ಸಕಾಲ ಮತ್ತು ಮಾಹಿತಿ ಹಕ್ಕು ಕಾಯ್ದೆಯನ್ನು ಉಲ್ಲಂಘನೆ ಮಾಡುವುದು ಪಂಚಾಯ್ತಿ ಹಂತದಲ್ಲಿ ಎದ್ದು ಕಾಣುತ್ತದೆ. ಈ ಎಲ್ಲಾ ವಿಚಾರದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ತೋರುವ ನಿರ್ಲಕ್ಷ್ಯ ಮತ್ತು ಶಾಮೀಲುತನವೇ ಗ್ರಾಪಂಗಳ ಅವನತಿಗೆ ಕಾರಣವಾಗಿವೆ.
- ಕೆ.ಎನ್. ರವಿ
ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

