ಮೂರನೇ ರಂಗ ನಂಬಿದರೆ ಸಿಗುವುದು ಮೂರು ನಾಮ!

'ನಾವೆಲ್ಲ ಒಂದಾಗೋಣ. ಹಿಂದುಳಿದ ರಾಜ್ಯಗಳ ಸಾಮಂತರಾದ ನಾವು ಪರಸ್ಪರ...
Updated on: 

'ನಾವೆಲ್ಲ ಒಂದಾಗೋಣ. ಹಿಂದುಳಿದ ರಾಜ್ಯಗಳ ಸಾಮಂತರಾದ ನಾವು ಪರಸ್ಪರ ಕೈಜೋಡಿಸಿದರೆ ದಿಲ್ಲಿ ನಮಗೆ ಮಣಿಯಲೇಬೇಕು. ಇದಕ್ಕಾಗಿ ನಮ್ಮಂತಹ ರಾಜ್ಯಗಳ ನಾಯಕರನ್ನು ಒಟ್ಟುಗೂಡಿಸೋಣ. ಈ ಕಾಯಕದಲ್ಲಿ ನೀವು ನಮ್ಮೊಂದಿಗಿರಿ'.
ನರೇಂದ್ರ ಮೋದಿಗೆ ಬಿಜೆಪಿ ತನ್ನ ಪಕ್ಷದಲ್ಲಿ ಬಡ್ತಿ ನೀಡಿದ್ದನ್ನು ನೆಪವಾಗಿಟ್ಟುಕೊಂಡು ಅದರೊಂದಿಗಿನ 17 ವರ್ಷಗಳ ಮೈತ್ರಿಯಿಂದ ಹಿಂದೆ ಸರಿಯುವ ನಿಟ್ಟಿನಲ್ಲಿ ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್ಕುಮಾರ್ ಮೊದಲ ಹೆಜ್ಜೆ ಇಡುತ್ತಿದ್ದಂತೆಯೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ನ ಅಧಿನಾಯಕಿ ಫೋನಾಯಿಸಿ ನಿತೀಶ್ ಬಳಿ ಹೇಳಿದ ಮಾತಿನ ಸಾರಾಂಶ ಇದು. ಈ ಮಾತುಗಳನ್ನು ಕೇಳಿದರೆ 1956ರಲ್ಲಿ ಸೂಯೆಜ್ ಕಾಲುವೆಗಾಗಿ ನಡೆದ ಸಂಘರ್ಷ ಮತ್ತು ಅದು ಅಂತ್ಯಗೊಂಡ ಸಂದರ್ಭದಲ್ಲಿ ಜರ್ಮನಿಯ ಛಾನ್ಸಲರ್ ಫ್ರಾನ್ಸಿನ ನಾಯಕನಿಗೆ ಹೇಳಿದ ಮಾತು ನೆನಪಿಗೆ ಬರುತ್ತದೆ. ಅಂದು ಬ್ರಿಟನ್, ಫ್ರಾನ್ಸ್ ಗಳು ಈ ಕಾಲುವೆಗಾಗಿ ಈಜಿಪ್ತಿನ ಜೊತೆ ಭಾರಿ ಸಂಘರ್ಷ ನಡೆಸಿದ್ದವು. ಕೊನೆಗೆ ಅಮೆರಿಕದ ಮಧ್ಯಸ್ತಿಕೆಯಲ್ಲಿ ಈ ಸಂಘರ್ಷಕ್ಕೆ ತೆರೆ ಬಿತ್ತು. ಇದು ಈಜಿಪ್ತಿನಲ್ಲಿ ಜನಮನ್ನಣೆ ಗಳಿಸಿತಾದರೂ ಯುರೋಪಿನಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಆಗ ಜರ್ಮನಿಯ ಛಾನ್ಸಲರ್ ಆಗಿದ್ದ ಕೊನ್ರಾಡ್ ಅಡೆನಾಯರ್ ಫ್ರಾನ್ಸಿನ ಮುಖಂಡನ ಬಳಿ 'ನಾವುಗಳು ಎಷ್ಟೇ ಪ್ರಬಲರಾಗಿದ್ದರೂ, ಜಾಗತಿಕ ಮಟ್ಟದಲ್ಲಿ ನಮ್ಮ ಬೇಳೆ ಬೇಯಬೇಕು ಎಂದಾದರೆ ನಾವೆಲ್ಲ, ಅಂದರೆ ಯೂರೋಪಿನ ದೇಶಗಳು ಒಂದಾಗಬೇಕು. ಆಗಷ್ಟೇ ಅಮೆರಿಕದಂತಹ ಬಲಾಢ್ಯ ದೇಶಗಳು ನಮ್ಮ ಮಾತು ಕೇಳುತ್ತವೆ. ಇಲ್ಲದಿದ್ದರೆ ಅವರಿಗೆ ನಾವು ಸಲಾಮು ಹೊಡೆಯುತ್ತಿರಬೇಕಷ್ಟೇ' ಎಂದು ಹೇಳಿದ್ದ. ಅಂದರೆ ವ್ಯವಸ್ಥೆಯ ವಿರುದ್ಧದ ದನಿಗಳನ್ನು ಒಂದಾಗಿಸಿ ಜೋರು ಗಂಟಲಿನಿಂದ ಅರಚುವುದು. ಅದರಿಂದ ವ್ಯವಸ್ಥೆ ತಮ್ಮ ಕೈವಶವಾಗದಿದ್ದರೂ ಸರಿ; ಕನಿಷ್ಠ ತಮ್ಮ ಮಾತಿಗೆ ಕಿಮ್ಮತ್ತು ದೊರೆಯುವಂತೆ ಬ್ಲ್ಯಾಕ್ಮೇಲ್ ಮಾಡುವುದು. ಈಗ ಮಮತಾ ಬ್ಯಾನರ್ಜಿ ಮಾಡಹೊರಟಿರುವುದೂ ಇದನ್ನೆ. ಹಿಂದುಳಿದ ರಾಜ್ಯಗಳ ನೆಪದಲ್ಲಿ ಒಂದು ಸಾಮಾನ್ಯ ವೇದಿಕೆ ಸೃಷ್ಟಿಸಿಕೊಂಡು ಆ ಮೂಲಕ ದಿಲ್ಲಿಯನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುವುದು ಅಥವಾ ಅವಕಾಶ ಪ್ರಾಪ್ತವಾದರೆ ತಾವೇ ತಾಳ ಹಾಕುವುದು ಮಮತಾ ಉದ್ದೇಶ. ಅದಕ್ಕಾಗಿ ಅವರು ಆರಿಸಿಕೊಂಡಿರುವುದು ಬಿಹಾರ, ಒರಿಸ್ಸಾಗಳನ್ನು. ಈ ಮೂರೂ ರಾಜ್ಯಗಳೂ ಹಿಂದುಳಿದ ಸ್ಥಾನಮಾನ ನೀಡಿ ಹೆಚ್ಚಿನ ಹಣಕಾಸಿನ ನೆರವಿಗಾಗಿ ಕೇಂದ್ರ ಸರ್ಕಾರವನ್ನು ಪೀಡಿಸುತ್ತಲೇ ಇವೆ. ಇದಕ್ಕಾಗಿ ದಿಲ್ಲಿಯಲ್ಲಿ ಶಕ್ತಿ ಪ್ರದರ್ಶನ ಮಾಡಿವೆ. ರಚ್ಚೆ ಹಿಡಿದಿವೆ, ರಾದ್ಧಾಂತಗಳನ್ನು ಮಾಡಿವೆ. ಆದರೆ ಅವರ ಬೇಡಿಕೆ ಮಾತ್ರ ಇದ್ದಲ್ಲಿಯೇ ಇದೆ. ಇದನ್ನೇ ನೆಪವಾಗಿಸಿಕೊಂಡು ಒಂದು ವೇದಿಕೆ ರಚಿಸಿ 2014ರ ಲೋಕಸಭಾ ಚುನಾವಣೆಯಲ್ಲಿ ಒಂದಷ್ಟು ಹೆಚ್ಚಿನ ಸ್ಥಾನ ಗೆದ್ದು ಯಾರೇ ಅಧಿಕಾರಕ್ಕೆ ಬಂದರೂ ಅವರ ಮೇಲೆ ಒತ್ತಡ ಹೇರುವುದು ಇದರ ಉದ್ದೇಶ. ಇದಕ್ಕೆ ಮಮತಾ ಬ್ಯಾನರ್ಜಿ ಫೆಡರಲ್ ಫ್ರಂಟ್ ಎಂದು ಹೆಸರು ನೀಡಿ, ಇತರರಿಗೂ ಆಹ್ವಾನ ನೀಡುವುದಾಗಿ ಹೇಳಿದರೂ ಇದೊಂದು Pressure Group (ಒತ್ತಡ ಹೇರುವ ಗುಂಪು) ಅಷ್ಟೆ.
ಆದರೆ ಇಂತಹ ಗುಂಪು ಅಥವಾ ಫ್ರಂಟ್ಗಳು ತಮ್ಮ ಪ್ರಭಾವವನ್ನು ಇಷ್ಟಕ್ಕೇ ಸೀಮಿತಗೊಳಿಸಿಕೊಳ್ಳುತ್ತವೆ ಎಂಬುದಕ್ಕೆ ಪುರಾವೆ ಇಲ್ಲ. ಒಂದಿಲ್ಲೊಂದು ಅರ್ಥದಲ್ಲಿ ಇದು ಕಾಂಗ್ರೆಸ್ ಮತ್ತು ಬಿಜೆಪಿ ಸುತ್ತ ಧ್ರುವೀಕರಣಗೊಂಡಿರುವ ಶಕ್ತಿಗಳಿಗೆ ಪರ್ಯಾಯವಾದ ತೃತೀಯ ಶಕ್ತಿ, ಅಥವಾ ತೃತೀಯ ರಂಗವೇ ಸರಿ. ಹಾಗಾದರೆ ಇಂತಹ ರಂಗಗಳ ರಚನೆ ತಪ್ಪೆ. ಕಾಂಗ್ರೆಸ್ ಮತ್ತು ಬಿಜೆಪಿಯಂತಹ ದೊಡ್ಡ ಪಕ್ಷಗಳು ಮಾತ್ರ ಈ ದೇಶವನ್ನು ಆಳಬೇಕೇ?. ಈ ಎರಡೂ ಪಕ್ಷಗಳಿಗೆ ಭಿನ್ನವಾದ ಸಿದ್ಧಾಂತ ಹೊಂದಿರುವ ಪಕ್ಷಗಳು ಅಧಿಕಾರ ಚಲಾಯಿಸಲೇಬಾರದೇ? ಸದಾ ಸಣ್ಣವರಾಗಿಯೇ ಇರಬೇಕೇ?
1956ರಲ್ಲಿ ಕೊನ್ರಾಡ್ ಅಡೆನಾಯರ್ ಬಿತ್ತಿದ್ದ ಐರೋಪ್ಯ ಒಕ್ಕೂಟದ ಬೀಜ 1980ರ ದಶಕದ ಅಂತ್ಯಕ್ಕೆ ಶೀತಲ ಸಮರದ ಅವಸಾನದ ನಂತರ ಮತ್ತೆ ಮೊಳಕೆಯೊಡೆದು ಅಸ್ತಿತ್ವಕ್ಕೂ ಬಂತು. ಯುರೋಪಿನ ಬಹುತೇಕ ದೇಶಗಳು ಒಕ್ಕೂಟದ ಛತ್ರಿಗೆ ಕಂಬಿಗಳಾದವು. ಈ ಭೌಗೋಳಿಕ, ರಾಜಕೀಯ ಸಹಭಾಗಿತ್ವದ ಸಂಕೇತವಾಗಿ ಯೂರೋ ಕರೆನ್ಸಿಯನ್ನು ಚಾಲ್ತಿಗೆ ತರಲಾಯಿತು. ಡಾಲರ್ ಲೆಕ್ಕದಲ್ಲಿ ನಡೆಯುವ ಜಾಗತಿಕ ವ್ಯಾಪಾರವನ್ನು ಯೂರೊ ಲೆಕ್ಕಕ್ಕೆ ಪರಿವರ್ತಿಸುವುದು ಇದರ ಗುರಿಯಾಗಿತ್ತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಸಾಗಿತು. ಆದರೆ ಇಂದು ಪರಿಸ್ಥಿತಿ ಏನಾಗಿದೆ? ಐರೋಪ್ಯ ಒಕ್ಕೂಟದ ಪರಿಕಲ್ಪನೆಯೇ ಅಲುಗಾಡುತ್ತಿದೆ. ಯೂರೊ ಶಾಶ್ವತವಾಗಿ ಕಾಣೆಯಾಗುವ ಲಕ್ಷಣಗಳು ಗೋಚರಿಸುತ್ತಿದೆ. ಯಾವುದೋ ಸಿದ್ಧಾಂತಕ್ಕೆ ಕಟ್ಟುಬಿದ್ದು ಯೂರೊವನ್ನು ಅಪ್ಪಿಕೊಂಡಿದ್ದ ದೇಶಗಳು, ಪ್ರಮುಖವಾಗಿ ಇಟಲಿ ಮತ್ತು ಗ್ರೀಸ್ ತಳಮಳದಲ್ಲಿವೆ. ಈ ಇಡೀ ಪ್ರಯತ್ನವನ್ನು, ಅದರ ಹಿಂದಿಕ್ಕೆ Idealism ಮತ್ತು ಅದರ ಅವನತಿಯನ್ನು ಟೈಮ್ ನಿಯತಕಾಲಿಕೆ ಸುಂದರವಾಗಿ ಕಟ್ಟಿಕೊಟ್ಟಿದೆ. ಈ ವರ್ಣನೆ ತೃತೀಯ ರಂಗ ರಚನೆಯ ಪ್ರಯೋಗಕ್ಕೆ ಮತ್ತೆ ಮತ್ತೆ ಕೈ ಹಾಕುವ ನಮ್ಮ ಅಸಹಾಯಕ ನಾಯಕರಿಗೆ ಹೇಳಿ ಮಾಡಿಸಿದಂತಿದೆ.

ಪರಸ್ಪರ ಕಚ್ಚಾಟ: ಭಾರತದ ರಾಜಕಾರಣದಲ್ಲಿ ತೃತೀಯ ರಂಗದ ಪ್ರಯೋಗ ಈ ಹಿಂದೆಯೂ ಆಗಿದೆ. 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಆ ಕರಾಳ ಅಧ್ಯಾಯದ ವಿರುದ್ಧ ಇಡೀ ದೇಶವೇ ತಿರುಗಿ ಬಿದ್ದಿತ್ತು. ಆಗ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವೇ ಇರಲಿಲ್ಲ. ಸಣ್ಣಪುಟ್ಟ ಪಕ್ಷಗಳು ತಮ್ಮದೇ ಪರಿಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಅಂತಹ ಸಂದರ್ಭದಲ್ಲಿ ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ಜನರ ಆಕ್ರೋಶಕ್ಕೆ ದನಿಯಾದರು. ಹರಿದು ಹಂಚಿ ಹೋಗಿದ್ದ ಪಕ್ಷಗಳನ್ನು ಜನತಾ ಪಕ್ಷ (ಚಳವಳಿ) ಛತ್ರಿಯಡಿ ಒಂದುಗೂಡಿಸಿ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿದರು. ಜನತಾ ಪರಿವಾರದಲ್ಲಿ ತದ್ವಿರುದ್ಧ ಸಿದ್ಧಾಂತದ ಪಕ್ಷಗಳೂ ಕೈಜೋಡಿಸಿದವು. ಅಧಿಕಾರದ ಗದ್ದುಗೆಯೂ ಪ್ರಾಪ್ತವಾಯಿತು. ಹಲವಾರು ಧೀಮಂತ ನಾಯಕರ ದಂಡೇ ಅಲ್ಲಿತ್ತು. ಮೊರಾರ್ಜಿ ದೇಸಾಯಿ, ಬಾಬು ಜಗಜೀವನರಾಂ, ಚರಣ್ ಸಿಂಗ್, ಚಂದ್ರಶೇಖರ್, ಜಾರ್ಜ್ ಫರ್ನಾಂಡೀಸ್, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಆಡ್ವಾಣಿ ಮುಂತಾದ ಅತಿರಥರ ಜೊತೆಗೆ ಅವರುಗಳ 'ಇಗೊ'(ಅಹಂ) ಕೂಡ ಧಾರಾಳವಾಗಿತ್ತು. ಇವರನ್ನೆಲ್ಲ ಒಂದುಗೂಡಿಸಿ ಅಧಿಕಾರದ ಕದ ತಟ್ಟಿದ ಜಯಪ್ರಕಾಶ್ ನಾರಾಯಣ್ ನಂತರ ತಟಸ್ತರಾದರು. ಅಲ್ಲಿಗೆ ಈ ವರ್ಚಸ್ವಿ ನಾಯಕರ ಇಗೊಗೆ ಮೂಗುದಾರ ಹಾಕುವ ನಾಯಕನೇ ಇಲ್ಲದಂತಾಯಿತು. ಪರಿಣಾಮ 22 ತಿಂಗಳಿಗೇ ಈ ಪ್ರಯೋಗ ಅಂತ್ಯಗೊಂಡಿತು. ಮೊರಾರ್ಜಿ ಜೊತೆ ಜಗಳವಾಡಿಕೊಂಡು ಹೊರಬಂದ ಚರಣ್ ಸಿಂಗ್ ಕಾಂಗ್ರೆಸ್ ನೆರವಿನಿಂದ ಎರಡು ವಾರ ಪ್ರಧಾನಿಯೂ ಆದರು. ಅಲ್ಲಿಗೆ ವ್ಯವಸ್ಥೆಯ ವಿರುದ್ಧ ಪರ್ಯಾಯ ಶಕ್ತಿಯ ಮೊದಲ ಪ್ರಯತ್ನ ವಿಫಲವಾಯಿತು. ನಂತರ 1987ರಲ್ಲಿ ರಾಜೀವ್ಗಾಂಧಿಗೆ ಬೋಫೋರ್ಸ್ ಕಳಂಕ ತಟ್ಟಿದಾಗ ಅದರ ಪೂರ್ಣಲಾಭ ಪಡೆದ ವಿ.ಪಿ. ಸಿಂಗ್, ನ್ಯಾಷನಲ್ ಫ್ರಂಟ್ ಎಂಬ ಪರ್ಯಾಯ ರಂಗದ ಬೆನ್ನೇರಿ ಪ್ರಧಾನಿಯಾದರು. ಆದರೆ ಅವರ ಕಾಲೆಳೆಯಲು ದೇವಿಲಾಲ್ ಮತ್ತು ಚಂದ್ರಶೇಖರ್ ಇಬ್ಬರೂ ಇದ್ದರು. ಕೆಲವೇ ತಿಂಗಳುಗಳಲ್ಲಿ ಆ ಪ್ರಯತ್ನವೂ ವಿಫಲವಾಯಿತು. ವಿಭಿನ್ನ ನಿಲುವು, ಸಿದ್ಧಾಂತದ ಪಕ್ಷಗಳು ಒಂದೆಡೆ ಕಲೆತಾಗ ಅಲ್ಲಿ ಅಭಿಪ್ರಾಯ ಭೇದ ಸಹಜ. ಆದರೆ ಅದನ್ನು ನಿಭಾಯಿಸುವ, ಬೆಳೆಯದಂತೆ ನೋಡಿಕೊಳ್ಳುವ ವ್ಯವಸ್ಥೆ ತೃತೀಯ ರಂಗದಂತಹ ವೇದಿಕೆಯಲ್ಲಿ ಇಲ್ಲ. ಅದೇ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷಗಳಲ್ಲಾದರೆ ಹೈಕಮಾಂಡ್ ಎಂಬ ವ್ಯವಸ್ಥೆ ಇರುತ್ತದೆ. ಅದು ವೈಯಕ್ತಿಕ ಸಂಘರ್ಷಗಳಿಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತದೆ. ಆದರೆ ಈ ಹಿಂದಿನ ಅಥವಾ ಈಗ ಉದ್ದೇಶಿತ ತೃತೀಯ ರಂಗದಲ್ಲಿ ಇಂತಹ ವ್ಯವಸ್ಥೆ ಇರಲು ಸಾಧ್ಯವೇ?

ಸಿದ್ಧಾಂತದ ಕೊರತೆ: ತೃತೀಯ ರಂಗ ಎಂಬುದು ಸಾಮಾನ್ಯವಾಗಿ ಪ್ರಾದೇಶಿಕ ಪಕ್ಷಗಳ ವೇದಿಕೆ. ಈ ಪ್ರಾದೇಶಿಕ ಪಕ್ಷಗಳಿಗೆ ಯಾವುದೇ ರಾಷ್ಟ್ರೀಯ ಸಿದ್ಧಾಂತ ಇರುವುದಿಲ್ಲ. ಅವುಗಳ ಸಿದ್ಧಾಂತ ಮತ್ತು ಬದ್ಧತೆ ಆಯಾ ಪ್ರದೇಶಗಳಲ್ಲಿ ಅಧಿಕಾರ ಹಿಡಿಯುವುದು, ಉಳಿಸಿಕೊಳ್ಳುವುದಕ್ಕಷ್ಟೇ ಸೀಮಿತವಾಗಿರುತ್ತದೆ. ಸದ್ಯ ದೇಶ ಎದುರಿಸುತ್ತಿರುವ ಆರ್ಥಿಕ ಸಂಕಷ್ಟ ಮತ್ತು ಅದರಿಂದ ಹೊರ ಬರುವ ದಾರಿ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಸ್ಪಷ್ಟ ನಿಲುವಿದೆ. ಎರಡೂ ಪಕ್ಷಗಳಿಗೂ ಬಂಡವಾಳದ ಮಹತ್ವದ ಅರಿವಿದೆ. ಮತ್ತು ಬಂಡವಾಳದ ಹರಿವಿಗೆ ತೆಗೆದುಕೊಳ್ಳಬೇಕಾದ ಸುಧಾರಣಾ ಕ್ರಮಗಳ ಅಂದಾಜಿದೆ. ಆದರೆ ಉದ್ದೇಶಿತ ತೃತೀಯ ರಂಗ ಈ ವಿಷಯದಲ್ಲಿ ಯಾವ ನಿಲುವು ತಳೆಯಲಿದೆ? ಎಡಪಕ್ಷಗಳ ಸಿದ್ಧಾಂತವನ್ನು ಅಲ್ಲಗಳೆದು ಅಧಿಕಾರಕ್ಕೇರಿದ ಮಮತಾ ಆರ್ಥಿಕ ಸುಧಾರಣೆಗಳಿಗಿಂತ ಸಮಾಜವಾದದತ್ತಲೇ ವಾಲಿದ್ದಾರೆ. ನಿತೀಶ್ ಇದೇ ಸ್ಕೂಲಿನವರಾದರೆ, ನವೀನ್ ಪಟ್ನಾಯಕ್ ಇದಕ್ಕೆ ವಿರುದ್ಧ. ತಮ್ಮ ರಾಜ್ಯದಲ್ಲಿ 50 ಸಾವಿರ ಕೋಟಿ ರೂಪಾಯಿಗಳ ಬಂಡವಾಳ ಹೂಡಲು ಮುಂದಾಗಿರುವ ಪೋಸ್ಕೋಗೆ ಅನುಮತಿ ನೀಡುವಂತೆ ಇಂದಿಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದಾರೆ. ಆಂಧ್ರದ ಚಂದ್ರಬಾಬು ನಾಯ್ಡು ಎಡ ಹಾಗೂ ಸಮಾಜವಾದದಿಂದ ದೂರ. ಬಂಡವಾಳಕ್ಕೆ ಹತ್ತಿರ. ಇಂತಹ ವೈರುಧ್ಯಗಳಿರುವ ಒಕ್ಕೂಟದಿಂದ ಯಾವ ಪ್ರಗತಿ ನಿರೀಕ್ಷಿಸಲು ಸಾಧ್ಯ?

ಸಂಕುಚಿತತೆ: ತೃತೀಯ ರಂಗದ ಅಂಗಪಕ್ಷಗಳು ಪ್ರಾದೇಶಿಕ ಮನೋಭಾವದಿಂದ ಹೊರಬರುವುದು ಸಾಧ್ಯವೇ ಇಲ್ಲ. ಉದಾಹರಣೆಗೆ ಜೆಡಿಎಸ್ ಮತ್ತು ಎಡಿಎಂಕೆ ಅಥವಾ ಡಿಎಂಕೆ ಈ ರಂಗದ ಜೊತೆ ಕೈಜೋಡಿಸಿದ್ದೇ ಆದರೆ ಕಾವೇರಿ ನದಿ ನೀರಿನ ಹಂಚಿಕೆ ಕುರಿತ ವಿವಾದ ಭುಗಿಲೇಳುತ್ತಲೇ 'ನಾನೊಂದು ತೀರಾ...ನೀನೊಂದು ತೀರಾ' ಎನ್ನುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ?
ಪರಸ್ಪರ ವಿಶ್ವಾಸ: ವಿರುದ್ಧ ದಿಕ್ಕಿನತ್ತ ಮುಖ ಮಾಡಿದವರು ಒಂದೇ ದಿಕ್ಕಿನತ್ತ ನೋಡುವಂತಾಗಲು ಅವರಲ್ಲಿ ಪರಸ್ಪರ ವಿಶ್ವಾಸ ಬೆಳೆಯಬೇಕು. ಈ ಉದ್ದೇಶಿತ ತೃತೀಯ ರಂಗದಲ್ಲಿ ಅಂತಹ ವಿಶ್ವಾಸಕ್ಕೆ ಆಸ್ಪದ ಇದೆಯೇ? ನಿತೀಶ್, ಮಮತಾ, ನಾಯ್ಡು ಒಂದಾಗಿ ಚುನಾವಣೆಗೆ ಹೋಗಿ ಅವರ ವಿರುದ್ಧ ಪಾಳಯದ ತೃತೀಯ ಮುಖಂಡರಾದ ಲಾಲೂ, ಎಡ ಹಾಗೂ ಜಗನ್ಮೋಹನ್ ಮುಂತಾದವರು ಹೆಚ್ಚಿನ ಸೀಟು ಗೆದ್ದರೆ ಇವರನ್ನು ಬಿಟ್ಟು ಅವರ ಕೈ ಹಿಡಿಯುವುದಿಲ್ಲ ಎನ್ನುವುದಕ್ಕೆ ಯಾವುದೇ ಖಾತ್ರಿ ಇಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ತಮ್ಮ ಪಾಳೆಯಗಾರಿಕೆ ಉಳಿಸಿಕೊಂಡು ಮತ್ತು ಅದಕ್ಕೆ ಯಾವ ರಾಜಿ ಮಾಡಿಕೊಳ್ಳಬೇಕೊ ಅವೆಲ್ಲವನ್ನೂ ಮಾಡಿಕೊಂಡು ಸಾಧ್ಯವಾದರೆ ಚಕ್ರಾಧಿಪತ್ಯಕ್ಕೆ ಗಾಳ ಹಾಕುವುದೇ ಇವರ ಉದ್ದೇಶವಾಗಿರುವಾಗ ಇವರ ಬದ್ಧತೆ ಸಹಜವಾಗಿಯೇ ಪ್ರಶ್ನಾರ್ಹವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಇಂತಹ ಪ್ರಯತ್ನಗಳನ್ನು ತಡೆಯುವುದು ಸಾಧ್ಯವಿಲ್ಲ. ಆದರೆ ಹಾಗೆ ಪ್ರಯತ್ನಿಸುವವರಿಗೆ ಬುದ್ಧಿ ಕಲಿಸುವುದು ಖಂಡಿತ ಸಾಧ್ಯ. ಅದು ಬಿಟ್ಟು ಮೂರನೇ ರಂಗ ನಂಬಿದರೆ ನಮ್ಮ ಹಣೆಗೆ ಬೀಳುವುದು ಮೂರು ನಾಮ ಮಾತ್ರ!

- ಕೆ.ಎಸ್.ಜಗನ್ನಾಥ್
jagannath.kudinoor@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com