ಈಗಲಾದರೂ ರಾಜಕಾರಣಿಗಳ ದೃಷ್ಟಿ ದೇಶದ ಹಿತಾಸಕ್ತಿಯತ್ತ ನೆಡುವುದೇ?
ಪ್ರಾಚೀನ ಕಾಲದಲ್ಲಿ ತೀರ್ಥಯಾತ್ರೆಗಳಿಗಾಗಿ ಬೆಟ್ಟಗುಡ್ಡಗಳಲ್ಲಿ ಕೊರೆಸಿದ ರಸ್ತೆಗಳು ಅಥವಾ ಅದರಂಚಿಗೆ ಕಟ್ಟಿದ ಕುಟೀರಗಳು/ ಮನೆಗಳು ಎಂದಿಗೂ ನದಿಯಿಂದಾಗಿ ಅಥವಾ ಭೂಸ್ಖಲನದಿಂದಾಗಿ ಹಾನಿಗೊಂಡ ಉದಾಹರಣೆಗಳಿಲ್ಲ. ಹಿಂದಿನವರು ಇಂಜಿನಿಯರಿಂಗ್ ಕಾಲೇಜಿನ ಗ್ರಾಜ್ಯುಯೇಟ್ಗಳಾಗಿರಲಿಲ್ಲ. ಆದರೆ, ಅನುಭವಿಗಳಂತೂ ಆಗಿದ್ದರು!
ನೆರೆ ಹಾಗೂ ಭೂಸ್ಖಲನದ ಪ್ರಕೋಪದಿಂದ ನಡುಗಿ ಹೋಗಿರುವ ನಾಗರಿಕರು, ಇದೇ ಸಮಯದಲ್ಲಿ ರಾಷ್ಟ್ರೀಯ ಪಟಲದ ಮೇಲೆ ಆಗುತ್ತಿರುವ ರಾಜಕೀಯ ಪ್ರಕೋಪವನ್ನೂ ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಎನ್ಡಿಎದಿಂದ ಜೆಡಿಯು ದೂರವಾಗಿರುವ ವಿದ್ಯಮಾನವನ್ನು, ಇಂದಿನಿಂದ ಹಿಡಿದು ಚುನಾವಣೆಯವರೆಗಿನ ತನಕದ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಕೆಲವರು ವಿಶ್ಲೇಷಣೆಗಿಳಿದಿದ್ದಾರೆ. ಈಗ ಎಲ್ಲರ ಗಮನವೇನಿದ್ದರೂ ತಮ್ಮ ಪಕ್ಷವನ್ನು ಹೇಗೆ ವಿಜಯ ಪಥದತ್ತ ಕೊಂಡೊಯ್ಯಬೇಕು ಮತ್ತು ಎದುರಾಗಿರುವ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎನ್ನುವುದರತ್ತ ಇರಬೇಕು.
2010ರಲ್ಲಿ ಬಿಜೆಪಿಯ ಕಾರ್ಯಕಾರಿಣಿ ಸಭೆಗೆ ಬರಲು ನಿತೀಶ್ ಹಿಂದೇಟು ಹಾಕಿದಾಗಲೇ ಒಂದು ವಿಷಯ ಸ್ಪಷ್ಟವಾಗಿತ್ತು. ಜೆಡಿಯುನೊಂದಿಗಿನ ಸಂಬಂಧ ಅಮರ ಮತ್ತು ಅವಿನಾಶಿ ಆಗಿರಲು ಸಾಧ್ಯವಿಲ್ಲ. ನಿತೀಶ್ ನಡೆಯಿಂದ ಕಾರ್ಯಕರ್ತರು ಖಿನ್ನರಾದರಾದರೂ ಈ ಕಹಿ ಘಟನೆಯನ್ನು ಅದ್ಹೇಗೋ ಅರಗಿಸಿಕೊಂಡರು. ಈಗ ರಾಜಕೀಯ ವಿವೇಕವಿರುವುದು ನಿತೀಶ್ ಕುಮಾರ್ ಅವರ ಬಗ್ಗೆ ಉತ್ತೇಜನಾತ್ಮಕ ಪ್ರತಿಕ್ರಿಯೆ ನೀಡುವುದರ ಬದಲು, ಪಟನಾಗೆ ಭೇಟಿ ನೀಡಿದಾಗಲೆಲ್ಲ ನಾವು ಹೇಗೆ ಅವರನ್ನು ಪ್ರಶಂಸೆ ಮಾಡುತ್ತಿದ್ದೆವು ಎನ್ನುವುದನ್ನು ನೆನಪಿಸಿಕೊಳ್ಳುವುದರಲ್ಲಿ. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ ಅಥವಾ ಶಾಶ್ವತ ಮಿತ್ರರೂ ಅಲ್ಲ ಎನ್ನುವ ಮಾತಿದೆ. ಈ ಸಂದರ್ಭದಲ್ಲಿ ಒಂದು ಹಳೆಯ ಶಾಯರಿ ನನಗೆ ನೆನಪಾಗುತ್ತಿದೆ- 'ದ್ವೇಷವನ್ನು ತೀವ್ರವಾಗಿ ಮಾಡು, ಆದರೆ ಒಂದು ವಿಷಯ ನೆನಪಿನಲ್ಲಿರಲಿ, ಮುಂದೆ ಎಂದಾದರೂ ಮತ್ತೆ ಗೆಳೆಯರಾದರೆ ಹಿಂದಾದದ್ದೆಲ್ಲವನ್ನು ಮರೆತುಬಿಡು' ಎನ್ನುವುದು ಅದರ ಸಾರವಾಗಿತ್ತು.
ಈಗ ಇಡೀ ದೇಶ ಯಾರ ನಜರಿನಲ್ಲಿದೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಾವೋವಾದಿಗಳಿಂದ ಮತ್ತು ಇನ್ನುಳಿದ ಉಗ್ರರಿಂದ ಸಾಮಾನ್ಯ ನಾಗರಿಕರು ದಿನನಿತ್ಯವೂ ಹತ್ಯೆಯಾಗುತ್ತಿದ್ದಾರೆ. ತಮ್ಮ ಮಕ್ಕಳಿಗೆ ಒಪ್ಪತ್ತಿನ ಊಟವಿಕ್ಕಲೂ ಗೃಹಿಣಿಯರು ಪರಿತಾಪ ಪಡುತ್ತಿದ್ದಾರೆ.
ಇವರೆಲ್ಲರೂ ಯಾವ ರಾಜಕಾರಣಿಗಳ, ಯಾವ ರಾಜಕೀಯ ದಳಗಳ ಅಜೆಂಡಾಗಳಲ್ಲಿ ಬರುತ್ತಾರೋ?
ತಮ್ಮ ಮಕ್ಕಳಿಗೆ ಉತ್ತಮ ಶಾಲೆಗಳಲ್ಲಿ ಪ್ರವೇಶ ದೊರಕಿಸಲು, ರೇಲ್ವೇ ರಿಸರ್ವೇಶನ್ ಪಡೆಯಲು, ವಿದೇಶಿ ಯಾತ್ರೆ ಕೈಗೊಳ್ಳಲು ಅಥವಾ ಗ್ಯಾಸ್ ಸಿಲಿಂಡರ್ ಪಡೆಯಲು ಎಂದಾದರೂ ಈ ರಾಜಕಾರಣಿಗಳಿಗೆ ತೊಂದರೆಯಾಗಿದೆಯೇ? ನಾಕರರು, ಚಿಕ್ಕ ವ್ಯಾಪಾರಿಗಳು, ಕೂಲಿಕಾರ್ಮಿಕರು ಮತ್ತು ರೈತರು ಇಂತಹ ಸಣ್ಣ ಕೆಲಸವನ್ನು ಮಾಡಲೂ ಹರಸಾಹಸ ಪಡಬೇಕಾಗುತ್ತದೆ. ಇವರೆಲ್ಲರೂ ಯಾವ ರಾಜಕೀಯ ಪಕ್ಷಗಳ ಭವಿಷ್ಯದ ಪಥದಲ್ಲಿ ಮಹತ್ವಪೂರ್ಣ ವಿಷಯಗಳಾಗಿದ್ದಾರೋ?
ರಾಜಕೀಯ ವರ್ಗ ಮಂದಿರ-ಮಸೀದಿಗಳಿಗಾಗಿ ಗುದ್ದಾಡಿಕೊಳ್ಳುತ್ತದೆ, ಆರಕ್ಷಣೆಗಾಗಿ ರಕ್ತಪಾತಕ್ಕೂ ಇಳಿಯುತ್ತದೆ ಆದರೆ ಯಾವತ್ತಾದರೂ ಅದು, ದೇಶದಿಂದ ಬಡತನ ಮತ್ತು ನಿರಕ್ಷರತೆಯನ್ನು ನಿರ್ನಾಮ ಮಾಡುವುದರ ಬಗ್ಗೆಯಾಗಲಿ ಅಥವಾ ಸಾಧಾರಣ ಸರ್ಕಾರಿ ಆಸ್ಪತ್ರೆಗಳನ್ನು ಸುಧಾರಣೆ ಮಾಡುವುದರ ಬಗ್ಗೆಯಾಗಲಿ, ಹಳ್ಳಿಗಾಡಿನಲ್ಲಿ ವಿದ್ಯುತ್, ರಸ್ತೆ ಮತ್ತು ನೀರಿನ ಸೌಲಭ್ಯ ಹೆಚ್ಚಿಸುವ ವಿಚಾರವಾಗಿಯಾಗಲಿ ನಿರ್ಣಾಯಕ ಸಂಘರ್ಷ ಮಾಡಿದೆಯೇ? ಎಂದಾದರೂ ಇಂತಹ ವಿಚಾರಗಳನ್ನೆತ್ತಿ ಸಂಸತ್ತಿನಲ್ಲಿ ಗರ್ಜಿಸಿದೆಯೇ?
1952ರಲ್ಲಿ ಜೀವಂತವಿದ್ದ ರಾಜಕೀಯ ಪಕ್ಷಗಳ ಚುನಾವಣಾ ಘೋಷಣಾ ಪತ್ರ, ಆಶ್ವಾಸನೆಗಳತ್ತ ಒಮ್ಮೆ ಗಮನಹರಿಸಿದರೆ ಅಂದಿಗೂ ಇಂದಿಗೂ ಏನೇನೂ ಬದಲಾವಣೆಗಳಾಗಿಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. 'ನಿರಕ್ಷರತೆಯನ್ನು ಕಡಿಮೆ ಮಾಡುತ್ತೇವೆ, ಬಡತನವನ್ನು ಇಲ್ಲವಾಗಿಸುತ್ತೇವೆ, ದೈವಸಮಾನವಾದ ಹಳ್ಳಿಗಳು ಮತ್ತು ರೈತರ ವಿಕಾಸ ಮಾಡುತ್ತೇವೆ, ವಿದ್ಯುತ್, ಜಲ ಮತ್ತು ರಸ್ತೆಯನ್ನು ಕೊಡುತ್ತೇವೆ......!!'
52ರಲ್ಲಿ ಕೊಟ್ಟ ಆಶ್ವಾಸನೆಗೂ, 2013ರಲ್ಲಿ ನೀಡಲಾಗುತ್ತಿರುವ ಆಶ್ವಾಸನೆಗಳಿಗೂ ಏನಾದರೂ ವ್ಯತ್ಯಾಸವಿದೆಯೇ?
ಆ ಲೇಖನವನ್ನು ನಾನು ಬರೆಯುತ್ತಿರುವ ಸಮಯದಲ್ಲೇ ಉತ್ತರಾಖಂಡ ಭಯಾನಕ ನೆರೆಯಿಂದ ತತ್ತರಿಸಿಹೋಗಿದೆ. ಗಂಗೋತ್ರಿ-ಯಮುನೋತ್ರಿ, ಕೇದಾರ್ನಾಥ್ ಮತ್ತು ಹೇಮಕುಂಡ ಸಾಹಿಬ್ನ ಯಾತ್ರಾ ಮಾರ್ಗಗಳೆಲ್ಲ ನೈಸರ್ಗಿಕ ನಿರ್ಬಂಧಕ್ಕೊಳಗಾಗಿವೆ. ಕಳೆದ ವರ್ಷವೂ ಇದೇ ಪರಿಸ್ಥಿತಿ ಎದುರಾಗಿತ್ತು. ಸರಿಯಾಗಿ ಹತ್ತು ವರ್ಷದ ಹಿಂದಿನ ಮಳೆಗಾಲದಲ್ಲೂ ಹೀಗೇ ಆಗಿತ್ತು. ಇಂತಹ ಪ್ರತಿಯೊಂದು ನೈಸರ್ಗಿಕ ವಿಕೋಪಗಳ ಸಮಯದಲ್ಲೂ ಸರ್ಕಾರ ಪರಿಹಾರ ನೀಡಲು ಮುಂದಾಗುತ್ತದೆ. ಅಧಿಕಾರಿಗಳು ಮತ್ತು ನಾಯಕರು ಈ 'ಪರಿಹಾರ' ಹಣದಿಂದ ದೊಡ್ಡ ದೊಡ್ಡ ಬಂಗಲೆಗಳನ್ನೂ, ವಾಹನಗಳನ್ನೂ ಖರೀದಿಸಿಬಿಡುತ್ತಾರೆ! ನದಿ ಕಿನಾರೆಯಲ್ಲಿ ವಾಸಿಸುವ ಜನರು ತಮ್ಮ ಬೆವರು ಹರಿಸಿ ಕಟ್ಟಿದ ಮನೆಗಳು ಕೊಚ್ಚಿಹೋಗಂದತಹ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳುವುದಕ್ಕೆ ಏಕೆ ಇದುವರೆಗೂ ಸಾಧ್ಯವಾಗಿಲ್ಲ?
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಜೀವಿ ಡಾ. ನಿತ್ಯಾನಂದ ಅವರಿಗೀಗ 88 ವರ್ಷ ವಯಸ್ಸು. 'ಪ್ರಾಚೀನ ಕಾಲದಲ್ಲಿ ತೀರ್ಥಯಾತ್ರೆಗಳಿಗಾಗಿ ಬೆಟ್ಟಗುಡ್ಡಗಳಲ್ಲಿ ಕೊರೆಸಿದ ರಸ್ತೆಗಳು ಅಥವಾ ಅದರಂಚಿಗೆ ಕಟ್ಟಿದ ಕುಟೀರಗಳು/ ಮನೆಗಳು ಎಂದಿಗೂ ನದಿಯಿಂದಾಗಿ ಅಥವಾ ಭೂಸ್ಖಲನದಿಂದಾಗಿ ಹಾನಿಗೊಂಡ ಉದಾಹರಣೆಗಳಿಲ್ಲ' ಎಂದವರು ಕೆಲವು ವರ್ಷಗಳ ಹಿಂದೆ ಹೇಳಿದ ನೆನಪು. ಆಗ ನಿವಾಸಗಳನ್ನು ಮತ್ತು ರಸ್ತೆಗಳನ್ನು ನದಿಯಿಂದ ಮೇಲ್ಭಾಗದಲ್ಲಿರುವ ಪರ್ವತೀಯ ಕ್ಷೇತ್ರಗಳಲ್ಲಿ ಚಾಕಚಕ್ಯತೆಯಿಂದ ನಿರ್ಮಾಣ ಮಾಡಲಾಗುತ್ತಿತ್ತು. ಹಿಂದಿನವರು ಇಂಜಿನಿಯರಿಂಗ್ ಕಾಲೇಜಿನ ಗ್ರಾಜ್ಯುವೇಟ್ಗಳಾಗಿರಲಿಲ್ಲ ಆದರೆ...ಅನುಭವಿಗಳಂತೂ ಆಗಿದ್ದರು! ಇಂತಹ ಅನುಭವದ ಲಾಭವನ್ನು ಪ್ರಸಕ್ತ ಸರ್ಕಾರ ಪಡೆಯಬಾರದೇಕೆ? ಆದರೆ ಈ ರೀತಿ ಮಾಡುವುದಕ್ಕೆ ಪ್ರಬಲ ಇಚ್ಛಾಶಕ್ತಿ ಮತ್ತು ವಿಶಾಲ ಹೃದಯದ ಅಗತ್ಯವಿರುತ್ತದೆ. ಜಾತಿ, ಪಂಥ ಮತ್ತು ಪಕ್ಷೀಯವಾದವನ್ನು ನೆಚ್ಚಿಕೊಂಡವರಿಗೆ ಇದೆಲ್ಲ ಅರ್ಥವಾಗುವುದಾದರೂ ಹೇಗೆ?
ಹಿಂದುಸ್ಥಾನ ಮಗ್ಗಲು ಬದಲಿಸಲು ಬಯಸುತ್ತಿದೆ. ಪ್ರಪಂಚದ ಅತಿ ಹೆಚ್ಚು ಯುವಕರನ್ನು ಹೊಂದಿರುವ ಭಾರತ
2020 ಮತ್ತು 2050ರ ಬಗ್ಗೆ ಯೋಚಿಸುತ್ತಿದೆ. ಮನಸ್ಸು ಮಾಡಿದರೆ ಕೆಲವೇ ವರ್ಷಗಳಲ್ಲಿ ನಾವು ಚೀನಾ ಮತ್ತು ಅಮೆರಿಕವನ್ನು ಹಿಂದಿಕ್ಕಬಲ್ಲೆವು. ಎಲ್ಲಾ ಪಕ್ಷಗಳಲ್ಲೂ ಒಳ್ಳೆಯವರು ಇದ್ದೇ ಇರುತ್ತಾರೆ. ಅಂಥವರ ದಿಕ್ಕಿಗೆ ದೇಶದ ವಿಶ್ವಾಸ ತಿರುಗಬಲ್ಲದೇ? ಬಹಳ ವರ್ಷಗಳ ನಂತರ ಇಡೀ ದೇಶ, 'ದೇಶದ ದಿಶೆಯನ್ನೇ' ಬದಲಾಯಿಸಬಲ್ಲ ನಾಯಕನಿಗಾಗಿ ಹಾತೊರೆಯುತ್ತಿದೆ. ತುಳಿತ, ಅಸುರಕ್ಷೆ ಮತ್ತು ಆರ್ಥಿಕ ದುರ್ದೆಸೆಯಿಂದ ಪಾರು ಮಾಡಬಲ್ಲ ನಾಯಕ ಜನತೆಗೆ ಬೇಕಿದ್ದಾನೆ. ಆದರೆ ನಾವು ನಮ್ಮದೇ ಕೊಳಗಳ ಕೆಸರಿನಲ್ಲೇ ಸಿಲುಕಿಕೊಂಡು ವಿಕಾಸದ ಸಾಗರದೆಡೆಗಿನ ಯಾತ್ರೆಯನ್ನು ಕೈಗೊಳ್ಳಲು ಅಸಫಲರಾಗುತ್ತೇವಾ ಎನ್ನುವ ಭಯವೂ ಕಾಡುತ್ತಿದೆ. ಒಂದು ವೇಳೆ 'ನಿರ್ಣಾಯಕ ಸಮಯ' ಎದುರಾಗಿದೆ ಎನ್ನುವುದೇ ಆದರೆ ಎಲ್ಲರೂ ಒಂದಾಗಿ, ಅರ್ಜುನನಂತೆ ವಿಜಯ ಸಾಧನೆಯತ್ತ ನಮ್ಮ ಧ್ಯಾನವನ್ನು ಕೇಂದ್ರೀಕರಿಸುವುದು ಒಳ್ಳೆಯದು.
- ತರುಣ್ ವಿಜಯ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

