ಕೊಳಕು ತೊಳೆಯುವ ಭಂಗಿಗಳು ಸಮಾಜಕ್ಕೆ ಕಳಂಕವೇ?

ಸಮಾಜಕ್ಕೆ ಕಳಂಕ ಎನ್ನುವಂಥ ಜಾತಿ ಯಾವುದಾದರೂ ಇದೆಯೇ?...
Updated on: 

ಸಮಾಜಕ್ಕೆ ಕಳಂಕ ಎನ್ನುವಂಥ ಜಾತಿ ಯಾವುದಾದರೂ ಇದೆಯೇ?
'ಖಂಡಿತಾ ಇದೆ. ನಮ್ಮ ಸಮುದಾಯ ಸಮಾಜಕ್ಕೆ ಒಂದು ಕಳಂಕ. ಜನ ಕೂಡ ಅದೇ ಭಾವನೆಯಿಂದ ನಮ್ಮನ್ನು ನೋಡುತ್ತಾರೆ' ಎಂಬ ನೋವಿನ ಉತ್ತರ ಈ ಪ್ರಶ್ನೆಗೆ ಸಿಗುತ್ತದೆ. 'ಇದು ಅಮಾನವೀಯ ಅದರೂ ಸತ್ಯ' ಎನ್ನುತ್ತಾರೆ ಜಾತಿಯ ಜನ.
ಇದು ಭಂಗಿ ಸಮುದಾಯದ ಜನರ ದುಸ್ಥಿತಿ. ಸಮಾಜದಲ್ಲಿ ಅವರ ಸ್ಥಿತಿಗತಿ ಏನು ಎಂಬುದು ಅವರ ಈ ಮಾತುಗಳಿಂದಲೇ ತಿಳಿಯುತ್ತದೆ. 'ಸಮಾಜದ ದೃಷ್ಟಿಯಲ್ಲಿ ನೀವೇಕೆ ಕಳಂಕಿತರು?' ಎಂದು ಪ್ರಶ್ನಿಸಿದರೆ, 'ಏನು ಮಾಡುವುದು ಹೇಳಿ. ನಾವು ಮಾಡುವ ಕೆಲಸವೇ ಅಂಥದ್ದು. ನೀವು ಈ ಕೆಲಸವನ್ನೇ ಮಾಡಿ ಎಂದು ಹಿಂದಿನವರು ಹೇಳಿ ಹೋಗಿದ್ದಾರೆ. ಅವರ ಮಾತನ್ನು ಚಾಚೂತಪ್ಪದೆ ಪಾಲಿಸುತ್ತಿದ್ದೇವೆ. ಹೀಗಾಗಿ ಇಂತಹ ದುಸ್ಥಿತಿ ಬಂದೊದಗಿದೆ' ಎನ್ನುತ್ತಾರೆ ಸವಣೂರಿನ ಮಂಜುನಾಥ್.
ಮಂಜುನಾಥ್ ಅವರು ಸವಣೂರಿನಲ್ಲಿ ತಲೆಯ ಮೇಲೆ ಮಲ ಸುರಿದುಕೊಂಡು ಸರ್ಕಾರದ ಗಮನ ಸೆಳೆದವರು. ತಮ್ಮ ಸಮುದಾಯದ ಜನರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ಅವರು ಈ ರೀತಿ ಮಾಡಿ ರಾಜ್ಯವ್ಯಾಪಿ ಸುದ್ದಿ ಮಾಡಿದ್ದರು.

ಭಂಗಿಗಳು ಆಂಧ್ರದವರು: ಭಂಗಿ ಸಮುದಾಯದವರು ಮೂಲತ: ಆಂಧ್ರದವರು. ಅಲ್ಲಿ ಬರಗಾಲ ಕಾಣಿಸಿಕೊಂಡಾಗ ಅವರ ಬದುಕು ದುರ್ಬರವಾಯಿತು. ಹೀಗಾಗಿ ಕರ್ನಾಟಕದಕಡೆ ವಲಸೆ ಬಂದರು. ಆಗ ಇಲ್ಲಿ ನವಾಬರ ಕಾಲ. ವಲಸೆ ಬಂದ ಭಂಗಿಗಳನ್ನು ಅವರು ಶೌಚಾಲಯ ಸ್ವಚ್ಛ ಮಾಡುವ ಕೆಲಸಕ್ಕೆ ನೇಮಕ ಮಾಡಿದರು. ಅಂದಿನಿಂದ ಅದುವೇ ಅವರ ಕಸುಬು ಆಯಿತು. ಅಂದಹಾಗೆ ಶೌಚಾಲಯ ಸ್ವಚ್ಛ ಮಾಡುವುದು ಭಂಗಿಗಳ ಮೂಲ ಕಸುಬು ಏನಲ್ಲ. ಆಂಧ್ರದಲ್ಲಿ ಅವರು ಒಂದೆರಡು ಎಕರೆ ಜಮೀನು ಇಟ್ಟುಕೊಂಡು ವ್ಯವಸಾಯ ಮಾಡುತ್ತಿದ್ದರು. ಬರಗಾಲ ಅವರ ಕೃಷಿಯನ್ನು ನುಂಗಿ ಹಾಕಿದ ಪರಿಣಾಮ ವಲಸೆ ಬಂದು ಮಲ ಹೊರುವ ಕೆಲಸಕ್ಕೆ ಇಳಿಯಬೇಕಾಯಿತು.
ಈ ಹಿಂದೆ ಈಗಿನಂತೆ ಶೌಚಾಲಯದ ವ್ಯವಸ್ಥೆ ಇರಲಿಲ್ಲ. ಶೌಚಕ್ಕಾಗಿ ಜನ ರಸ್ತೆ ಬದಿ ಕೂರುತ್ತಿದ್ದರು. ಮಲದ ಮೇಲೆ ಮಣ್ಣು ಹಾಕಿ ಅದನ್ನು ಊರಿನಿಂದ ಹೊರಗೆ ಸಾಗಿಸುವುದು ಭಂಗಿಗಳ ಕೆಲಸ. ಅದು ಅವರ ಕಾರ್ಯ ಉದ್ಯೋಗವೂ ಆಗಿ ಹೋಯಿತು. ಭಂಗಿಗಳದ್ದು ಇದೇ ಕೆಲಸ, ಇನ್ನುಮುಂದೆ ಅವರಿಗೆ ಬೇರೆ ಕೆಲಸ ಕೊಡುವಂತಿಲ್ಲ ಎಂಬ ಅಲಿಖಿತ ನಿಯಮವೂ ಜಾರಿಗೆ ಬಂತು.

ಇಂದಿಗೂ ಅದೇ ಪದ್ಧತಿ: ಅದ್ಯಾವ ಶಾಪವೋ ಏನೋ ಭಂಗಿಗಳು ಇಂದಿಗೂ ಶೌಚಾಲಯ ಸ್ವಚ್ಛ ಮಾಡುತ್ತಲೇ ಜೀವನ ಸಾಗಿಸುತ್ತಿದ್ದಾರೆ. ಹಾವೇರಿ, ಹಾನಗಲ್, ಸವಣೂರು, ಶಿಗ್ಗಾವಿ ಮತ್ತಿತರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆಜಿಎಫ್‌ನಲ್ಲಿ ಇವರನ್ನು ಜಾಡಮಾಲಿಗಳು ಅಥವಾ ಸಫಾಯಿ ಕರ್ಮಚಾರಿಗಳು ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಅಲ್ಲಿ ಇತ್ತೀಚಿನವರೆಗೂ ತಲೆಯ ಮೇಲೆ ಮಲ ಹೊರುವ ಪದ್ಧತಿ ಜಾರಿಯಲ್ಲಿತ್ತು. ಈಗಲೂ ಅಲ್ಲೊಂದು ಇಲ್ಲೊಂದು ಪ್ರಕರಣ ಬೆಳಕಿಗೆ ಬರುತ್ತಲೇ ಇದೆ.
ಆದರೆ, ಕೆಲ ಸಂಘಟನೆಗಳ ಹೋರಾಟದ ಫಲವಾಗಿ ನಿಯಂತ್ರಣಕ್ಕೆ ಬಂದಿದೆ. ಅದರೂ ಸಫಾಯಿ ಕರ್ಮಚಾರಿಗಳ ಮರು ವಸತಿ ಕೆಲಸ ಸಮರ್ಪಕವಾಗಿ ಆಗಿಲ್ಲ ಎನ್ನುತ್ತಾರೆ ಕೋಲಾರ ಜಿಲ್ಲಾ ಸಫಾಯಿ ಕರ್ಮಚಾರಿಗಳ ಹೋರಾಟ ಸಮಿತಿಯ ಸಂಚಾಲಕರಾದ ಎಂ.ಪದ್ಮ ಅವರು.
ಕೆಜಿಎಫ್ ಸಫಾಯಿ ಕರ್ಮಚಾರಿಗಳು ಬ್ರಿಟಿಷರ ಕಾಲದಲ್ಲಿ ಆಂಧ್ರ ಪ್ರದೇಶದ ಒಂಗೋಲ್‌ನಿಂದ ಕೆಲಸಕ್ಕಾಗಿ ವಲಸೆ ಬಂದವರು. ಬ್ರಿಟಿಷರು ಚಿನ್ನದ ಗಣಿಗಳನ್ನು ಪ್ರಾರಂಭಿಸಿದ ವೇಳೆ ಆ ಗಣಿಗಳಲ್ಲಿ ಕಾರ್ಯ ನಿರ್ವಹಿಸಲು ತಮಿಳುನಾಡಿನ ಆರ್ಕಾಟ್ ಪ್ರದೇಶದಿಂದ ಕಾರ್ಮಿಕರನ್ನು ಕಷ್ಟದ ಕೆಲಸಕ್ಕೆ ಕರೆ ತಂದರು.  ಅದೇ ರೀತಿ ಚಿನ್ನದ ಗಣಿ ವ್ಯಾಪ್ತಿಯ ಕಾಲೋನಿಗಳಲ್ಲಿ, ಮೈನ್ಸ್ ಶಾಪ್‌ಗಳಲ್ಲಿ ಶೌಚಾಲಯಗಳ ಸ್ವಚ್ಚತೆಗಾಗಿ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಒಂಗೋಲ್‌ನಿಂದ ಸಫಾಯಿ ಕರ್ಮಚಾರಿಗಳನ್ನು ಕರೆತಂದರು.

ಬ್ರಿಟಿಷರು ಕರೆತಂದರು: ಹೀಗೆ 1890ರಲ್ಲಿ ಆಂಧ್ರಪ್ರದೇಶದಿಂದ ಕೆಜಿಎಫ್‌ಗೆ ಲಕ್ಷಾಂತರ ಮಂದಿ ಆಗಮಿಸಿದರು. ಇವರಿಗಾಗಿ ಬ್ರಿಟಿಷರು  ಪ್ರತ್ಯೇಕವಾಗಿ ಆಂಧ್ರ ಕಾಲೋನಿಯನ್ನೇ ನಿರ್ಮಿಸಿದರು. ಅದರಂತೆ ಕೆಜಿಎಫ್‌ನ ಮಾರಿಕುಪ್ಪಂ, ಚಾಂಪಿಯನ್, ಆಂಡರ್‌ಸನ್ ಪೇಟೆ, ಕೋರಮಂಡಲ ವ್ಯಾಪ್ತಿಯಲ್ಲಿ 2001ರಲ್ಲಿ ಗಣಿಗಳನ್ನು ಮುಚ್ಚಿದಾಗ ಸುಮಾರು 26ಕ್ಕೂ ಹೆಚ್ಚು ಆಂಧ್ರ ಕಾಲೋನಿಯಲ್ಲಿ ಸಫಾಯಿ ಕರ್ಮಚಾರಿಗಳು ವಾಸಿಸುತ್ತಿದ್ದರೂ. ಚಿನ್ನದ ಗಣಿಗಳು ಮುಚ್ಚಿದ ನಂತರ ಕೆಲಸ ವಿಲ್ಲದೇ ಈ ಆಂಧ್ರಕಾಲೋನಿ ನಿವಾಸಿಗರು ಉದ್ಯೋಗವಿಲ್ಲದೇ ಸಂಕಷ್ಟದ ಜೀವನ ಸಾಗಿಸಿದರು ಗಣಿ ಮುಚ್ಚಿದ ನಂತರ ಇವರು ಒಂದು ವರ್ಷ ಚಿನ್ನದ ಗಣಿಗಳ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಕೆಲಸ ಮಾಡಿದರು. ಅವರಿಗೆ ವೇತನ ನೀಡದ ಕಾರಣ ಎಲ್ಲರೂ ಬೀದಿಪಾಲಾಗಿದ್ದಾರೆ. ಕೆಲವರು ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಶೌಚಾಲಯ ಹಾಗೂ ಇತರೇ ಸ್ಚಚ್ಚತೆ ಕೆಲಸ ಮಾಡಿಕೊಂಡಿದ್ದಾರೆ. ಆದರೂ ಸಂಕಷ್ಟ ನಿವಾರಣೆ ಆಗಿಲ್ಲ.
ಸಂಕಷ್ಟದ ಜೀವನದ ಕಾರಣ ಮಲದ ಗುಂಡಿಯನ್ನು ರಾತ್ರಿ ವೇಳೆ ಸ್ವಚ್ಚಗೊಳಿಸಲು 4-8 ಮಂದಿಯ ತಂಡ ಗುಂಡಿಯ ಕಲ್ಲು ತೆಗೆದು ಮೊದಲಿಗೆ ಕೊಳಚೆ ನೀರು ತೆಗೆದು ನಂತರ ಕಬ್ಬಿಣದ ರಾಡ್ ಮೂಲಕ ಆಳವನ್ನು ನೋಡಿ ಗುಂಡಿಯ ಒಳಗೆ ಇಳಿದು ಮಲವನ್ನು ಸ್ಚಚ್ಚಗೊಳಿಸುತ್ತಾರೆ.  ಈಗ ಪ್ರತಿ ಮಲಗುಂಡಿಯನ್ನು ಸ್ಚಚ್ಚಗೊಳಿಸಲು 8 ರಿಂದ 10 ಸಾವಿರ ಪಡೆಯುತ್ತಾರೆ. ಸರ್ಕಾರ ಮಲ ಹೊರುವ ಪದ್ದತಿಯನ್ನು 1993ರಿಂದ ನಿಷೇಧ ಮಾಡಿದರೂ ಆ ಪದ್ದತಿಯಲ್ಲಿ ತೊಡಗಿರುವ ಕುಟುಂಬದವರಿಗೆ ಶಾಶ್ವತ ಪರ್ಯಾಯ ಉದ್ಯೋಗ, ಯೋಜನೆ ಇಲ್ಲ. ಅವರ ಬಗ್ಗೆ ಸರ್ಕಾರವೂ ಗಮನ ಹರಿಸುತ್ತಿಲ್ಲ.

ಎಲ್ಲ ದೇವರುಗಳಿಗೂ ಪೂಜೆ: ಈ ಭಂಗಿ ಸಮುದಾಯದ ಜನರಿಗೆ ನಿರ್ದಿಷ್ಟವಾದ ದೇವರು ಎಂಬುದಿಲ್ಲ. ಅವರು ಎಲ್ಲ ದೇವರುಗಳನ್ನೂ ಆರಾಧಿಸುತ್ತಾರೆ. ರಂಜಾನ್ ಬಂದರೆ ಉಪವಾಸ ಆಚರಿಸುತ್ತಾರೆ. ಚೌತಿ ಬಂದರೆ ಗಣೇಶನ ಪೂಜೆ ಮಾಡುತ್ತಾರೆ. ಮನೆ ದೇವರು ಮಾತ್ರ ತಿರುಪತಿಯ ವೆಂಕಟರಮಣ. ಮಾತೃಭಾಷೆ ತೆಲುಗು. ಮದುವೆ, ನಾಮಕರಣ ಮತ್ತಿತರ ಕಾರ್ಯಕ್ರಮಗಳು ಹಿಂದೂ ಸಂಪ್ರದಾಯದ ಪ್ರಕಾರ ನಡೆಯುತ್ತವೆ. ಕೆಜಿಎಫ್‌ನ ಸಫಾಯಿ ಕರ್ಮಚಾರಿಗಳೂ ಹಿಂದೂ ಸಂಪ್ರದಾಯವನ್ನೇ ಅನುಸರಿಸುತ್ತಿದ್ದರು. ಮನೆಯಲ್ಲಿ ದೇವರ ಫೋಟೋ ಇಟ್ಟು ಪೂಜೆ ಮಾಡುವುದು. ದೇವಸ್ಥಾನಗಳಿಗೆ ಹೋಗಿಬರುವುದು ಮತ್ತು ಹಬ್ಬ ಹರಿದಿನಗಳನ್ನು ಆಚರಿಸುವುದು ಎಲ್ಲವೂ ಇತ್ತು. ಮದುವೆ ಕಾರ್ಯವನ್ನು ಹಿಂದೂ ಸಂಪ್ರದಾಯದ ಪ್ರಕಾರ ಪುರೋಹಿತರನ್ನು ಭೇಟಿ ಮಾಡಿ ಅವರು ಬರೆಯುವ ಲಗ್ನದ ಪ್ರಕಾರ ಅತಿ ಸರಳವಾಗಿ ಮಾಡಿಕೊಂಡು ಬರುತ್ತಿದ್ದರು. ಇವರ ಮನೆಗಳಲ್ಲಿ ಮಹಿಳೆಯರು ಬಲಗೈಗೆ ಸೆರಗು ಹಾಕುವುದು ವಿಶೇಷವಾಗಿತ್ತು. ಈ ಹಿಂದೆ ಯಾವುದೇ ವಿಷಯವನ್ನು ಇವರು ಗುಪ್ತವಾಗಿ ಇಡುವಂತಿರಲಿಲ್ಲ. ಸಂಪ್ರದಾಯ, ಪದ್ದತಿ, ಪಾಲಿಸದ ಕುಟುಂಬವನ್ನು ದೂರ ಇಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಸಫಾಯಿ ಕರ್ಮಚಾರಿಗಳಲ್ಲಿ ಕೆಲವರು ಮತಾಂತರಗೊಳ್ಳುತ್ತಿದ್ದು, ಕ್ರಿಶ್ಚಿಯನ್ ಆಗುತ್ತಿದ್ದಾರೆ.

ಶಾಲೆ ಮುಖ ನೋಡದವರು: ಅರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಭಂಗಿಗಳು ತೀರಾ ಹಿಂದುಳಿದಿದ್ದಾರೆ. ಹೊಸ ತಲೆಮಾರಿನವರೂ ಶೌಚಾಲಯ ಸ್ವಚ್ಛ ಮಾಡುವುದನ್ನೇ ಕಾಯಕ ಮಾಡಿಕೊಂಡಿರುವುದರಿಂದ ಏಳಿಗೆಯ ಮಾತೇ ಇಲ್ಲ. ಹೀಗಾಗಿ ಮಕ್ಕಳು ಶಾಲೆ ಮುಖ ನೋಡುವುದು ಅಪರೂಪ ಎನ್ನುವಂತಾಗಿದೆ.
ಮಲದ ಗುಂಡಿಗಳನ್ನು ಸ್ವಚ್ಚ ಮಾಡಬೇಕಾದರೆ ಇವರ ಪಾಲಿಗೆ ಮದ್ಯ ಸೇವನೆ ಆನಿವಾರ್ಯ. ಗುಂಡಿಯ ಮುಚ್ಚಳ ತೆಗೆದ ತಕ್ಷಣ ಅದರಲ್ಲಿರುವ ಅನಿಲ ಹೊರಗೆ ಬರುತ್ತದೆ. ಅದು ಇಂಗಾಲ ಡೈ ಆಕ್ಸೈಡ್. ಏಕೆಂದರೆ ಗುಂಡಿಯಲ್ಲಿ ಆಮ್ಲಜನಕ ಇರುವುದಿಲ್ಲ. ಇದರಿಂದ ಕಣ್ಣಿನಲ್ಲಿ ನೀರು ಸೋರಲು ಶುರುವಾಗುತ್ತದೆ. ಬಳಿಕ ಗುಂಡಿಯಲ್ಲಿಳಿದು ಸ್ವಚ್ಚ ಮಾಡಬೇಕು. ಇದು ಒಮ್ಮೊಮ್ಮೆ ಪ್ರಾಣಕ್ಕೂ ಸಂಚಕಾರ ತರುತ್ತದೆ. ಕೆಜಿಎಫ್‌ನಲ್ಲಿ ಇತ್ತೀಚೆಗೆ ಮೂವರು ಸಫಾಯಿ ಕರ್ಮಚಾರಿಗಳು ಮಲದ ಗುಂಡಿಯಲ್ಲಿ ಇಳಿದಾಗ ಉಸಿರುಗಟ್ಟಿ ಧಾರುಣವಾಗಿ ಸಾವನ್ನಪ್ಪಿದ್ದರು.

- ಕೆ.ವಿ.ಪ್ರಭಾಕರ 
 prabhukolar@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com