ಮೊದಲಿನಿಂದಲೂ ನಾವು ಸಚಿವ ಸಂಪುಟ ಪುನಾರಚನೆಯಂಥ ಕ್ಷುಲ್ಲಕ ರಾಜಕಾರಣದ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡಿದ್ದೇವೆ. ಹಾಗಾಗೇ ನಮ್ಮ ಸುತ್ತಲೂ ಆಗುತ್ತಿರುವ ಬೃಹತ್ ಬದಲಾವಣೆಗಳನ್ನು ಗಮನಿಸಲು ವಿಫಲರಾಗುತ್ತಿದ್ದೇವೆ. ಕೈರೊ ಮತ್ತು ಇಸ್ತಾನ್‌ಬುಲ್ ಒಂದೇ ಸ್ಥಳಗಳಲ್ಲ ಎನ್ನುವುದೂ ನಮಗೆ ತಿಳಿದಿರುವುದಿಲ್ಲ. 'ಅಂದಿನ ಸರ್ಕಾರ ಕೆಲವು ವಸಾಹತು ಪ್ರದೇಶಗಳಲ್ಲಿ 'ಚಿತ್ರಹಿಂಸೆ'ಯನ್ನೇ ಒಂದು ಪಾಲಿಸಿಯನ್ನಾಗಿಯಾಗಿ ಬಳಸಿತ್ತು' ಎಂಬ ಆಘಾತಕಾರಿ ಸತ್ಯವನ್ನು ಈಗ ಬ್ರಿಟನ್ ಒಪ್ಪಿಕೊಂಡಿರುವುದು ಎಷ್ಟು ಜನರಿಗೆ ಗೊತ್ತು?
ಟರ್ಕಿಯಲ್ಲಾಗುತ್ತಿರುವ ಪ್ರತಿಭಟನೆಗೂ, ಇಜಿಪ್ತ್‌ನಲ್ಲಿ ಹುಟ್ಟಿಕೊಂಡ ಅರಬ್ ಕ್ರಾಂತಿಗೂ ಅಜಗಜಾಂತರ ವ್ಯತ್ಯಾಸವಿದೆ. ತಹ್ರೀರ್ ಚೌಕದಲ್ಲಿ ನಡೆದ ಪ್ರತಿಭಟನೆ ಕೇವಲ ಪ್ರಜಾಪ್ರಭುತ್ವಕ್ಕಾಗಿ ನಡೆದುದಲ್ಲ, ಅದರೊಟ್ಟಿಗೆ ಇಜಿಪ್ತ್‌ನಲ್ಲಾದ ಘಟನಾವಳಿಗಳು ಇಸ್ಲಾಂ ಅನ್ನು ಮತ್ತೆ ರಾಜಕೀಯದಲ್ಲಿ ತಂದು ಕೂರಿಸಲು ಸಹಕಾರಿಯಾದವಷ್ಟೆ. ಟರ್ಕಿಯಲ್ಲಿ ಹುಟ್ಟಿಕೊಂಡಿರುವ ಪ್ರತಿಭಟನೆಗಳಿಗೆ ಮುಖ್ಯ ಕಾರಣ ಆ ದೇಶದ ಪ್ರಧಾನ ಮಂತ್ರಿಯ ಸರ್ವಾಧಿಕಾರಿ ಧೋರಣೆ. ವ್ಯಂಗ್ಯವೆಂದರೆ, ಇದೇ ವ್ಯಕ್ತಿ ತನ್ನ ಆರ್ಥಿಕ ಮತ್ತು ರಾಜತಾಂತ್ರಿಕ ನೀತಿಯಿಂದಾಗಿ ಜನರ ಮನಗೆದ್ದು ನಿರಂತರವಾಗಿ ಮೂರನೇ ಬಾರಿಗೆ ಪ್ರಧಾನಿ ಕುರ್ಚಿಯಲ್ಲಿ ಕುಳಿತಿರುವಾತ! 'ಹಿಂದೆ ಎಷ್ಟೇ ಅಭಿವೃದ್ಧಿ ಮಾಡಿರಬಹುದು, ಹಾಗಂತ ಈಗ ಆತ ತೋರುತ್ತಿರುವ ಅಹಂಕಾರ ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ಹತ್ತಿಕ್ಕುವಂತಿರುವ ಆತನ ಆಡಳಿತ ವೈಖರಿಯನ್ನು ಸಹಿಸಿಕೊಳ್ಳಲಾಗದು' ಎನ್ನುತ್ತಿದ್ದಾರೆ ಅಲ್ಲಿನ ಜನತೆ.
ಬ್ರೆಜಿಲ್‌ನಲ್ಲೂ ಈಗ ಜನ ದಂಗೆಯೆದ್ದಿದ್ದಾರೆ. ಆಹಾರ ಧಾನ್ಯಗಳ ಬೆಲೆ ಹಿಂದೆಂದಿಗಿತಲೂ ಅಲ್ಲೀಗ ಹೆಚ್ಚಾಗಿದೆ. ವೈದ್ಯಕೀಯ ವೆಚ್ಚಗಳಂತೂ ಮಿತಿಮೀರಿವೆ. ದೇಶ ಇಂತಹ ಇಕ್ಕಟ್ಟಿನ ಸ್ಥಿತಿಯಲ್ಲಿರುವಾಗ ಅಲ್ಲಿನ ಸರ್ಕಾರ ಫುಟ್‌ಬಾಲ್ ವಿಶ್ವಕಪ್ ನೆಪದಲ್ಲಿ ಅಂದಾದುಂಧಿ ಹಣ ಖರ್ಚು ಮಾಡುತ್ತಿರುವುದು ಆ ಜನರ ಸಿಟ್ಟನ್ನು ಇನ್ನಷ್ಟು ಹೆಚ್ಚಿಸಿದೆ. ಈಗ ಬ್ರೆಜಿಲ್‌ನ ಫುಟ್‌ಬಾಲ್ ಆಟಗಾರರೂ ಕೂಡ ಪ್ರತಿಭಟನಾ ನಿರತ ನಾಗರಿಕರೊಂದಿಗೆ ಕೈ ಜೋಡಿಸಿದ್ದಾರೆ.
ಇನ್ನು ಬ್ರಿಟನ್‌ನಲ್ಲಾಗುತ್ತಿರುವ ಅನಿರೀಕ್ಷಿತ ಬೆಳವಣಿಗೆಗಳು ಎಲ್ಲರ ಗಮನವನ್ನು ಸೆಳೆಯುತ್ತಿವೆ. 'ಮೆಕಾಲೆಯ ದೇಶ'ದ ಬಗ್ಗೆ ನಮಗಿದ್ದ ಭಾವನೆಯೆಂದರೆ, ಬ್ರಿಟೀಷರು ಎಲ್ಲಿಗೇ ಹೋಗಲಿ, ಅಲ್ಲೆಲ್ಲ ಸರಿಯಾದ ಕಾನೂನನ್ನು, ಸಮಾನತೆಯನ್ನು ತರಲು ಪ್ರಯತ್ನಿಸುತ್ತಾರೆ. ಅಂತಹ ಗುಣದಿಂದಲೇ ಆ ರಾಷ್ಟ್ರ ಶೇಕ್ಸ್‌ಪಿಯರ್‌ನಂಥ ಲೇಖನನನ್ನು ಕೊಟ್ಟಿತು ಎಂಬುದು. ಆದರೆ ಇತ್ತೀಚೆಗೆ ಲಂಡನ್ ಹೈಕೋರ್ಟ್ ನೀಡಿದ ತೀರ್ಪು ನಮ್ಮ ಈ ಭಾವನೆಯನ್ನು ತಲೆಕೆಳಗಾಗಿಸುವಂತಿದೆ. ಬ್ರಿಟನ್, 1950ರ ಮಾವ್ ಮಾವ್ ದಂಗೆಯಲ್ಲಿ ಬಂಧಿತರಾದ ಕೀನ್ಯದ ನಾಗರಿಕರಿಗೆ ಚಿತ್ರಹಿಂಸೆಯನ್ನು ಕೊಟ್ಟಿರುವುದು ಸತ್ಯವೆಂದು ಹೈಕೋರ್ಟ್ ಹೇಳಿದೆ. ತಪ್ಪೊಪ್ಪಿಕೊಂಡಿರುವ ಬ್ರಿಟಿಷ್ ಸರ್ಕಾರ, ಜೈಲಿನಲ್ಲಿ ಚಿತ್ರಹಿಂಸೆ ಅನುಭವಿಸಿದ 5228 ಕೀನ್ಯನ್ನರಿಗೆ ತಲಾ 2670 ಪೌಂಡ್‌ನಷ್ಟು ಪರಿಹಾರ ಧನ ಕೊಡುವುದಾಗಿ ಹೇಳಿದೆ. ಸುಮಾರು 1500 ರಹಸ್ಯ ದಾಖಲೆಗಳು ಬಹಿರಂಗವಾದದ್ದರಿಂದಲೇ ಕೇಸು ಸರ್ಕಾರದ ವಿರುದ್ಧ ತಿರುಗಿಬಿದ್ದಿತು. ಜೈಲಿನಲ್ಲಿರುವ ಕೀನ್ಯಾದ ನಾಗರಿಕರಿಗೆ ನಿರಂತರವಾಗಿ ಚಿತ್ರಹಿಂಸೆ ಕೊಡಲಾಗುತ್ತಿತ್ತು, ಅಲ್ಲದೆ ಈ ರೀತಿ ನಡೆದುಕೊಳ್ಳಲು ಅಂದಿನ ಗವರ್ನರ್‌ಗಳು ಬ್ರಿಟಿಷ್ ಕ್ಯಾಬಿನೆಟ್‌ನಿಂದ ಅನುಮತಿ ಪಡೆಯುತ್ತಿದ್ದರು ಎಂಬುದನ್ನು ಈ ದಾಖಲೆಗಳು ಹೇಳುತ್ತವೆ. ನಿಸ್ಸಂಶಯವಾಗಿಯೂ ಕೆಲವು ಕಿರಿಯ ಬ್ರಿಟಿಷ್ ಅಧಿಕಾರಿಗಳಿಗೆ ಮೇಲ್ಮಟ್ಟದಿಂದ ಬರುತ್ತಿದ್ದ ಆಜ್ಞೆಗಳನ್ನು ಪಾಲಿಸಲು ಮನಸ್ಸಿರಲಿಲ್ಲ. ಒಲ್ಲದ ಮನಸ್ಸಿನಿಂದ ಅವರು ಆಜ್ಞೆ ಪಾಲಿಸುತ್ತಿದ್ದರು. ಹಾಗಾಗೇ ಮುಂದಿನ ತಲೆಮಾರಿನ ಸಂಶೋಧಕರು ಈ ವಿಷಯವನ್ನು ಪತ್ತೆಹಚ್ಚಲಿ ಎನ್ನುವ ಉದ್ದೇಶದಿಂದ ಅವರು ಅಂದಿನ ಘಟನೆಗಳನ್ನೆಲ್ಲ ದಾಖಲಿಸಿಟ್ಟಿರಬಹುದು.
ಇದೇ ರೀತಿ ಆತ್ಮಸಾಕ್ಷಿಗೆ ಓಗೊಟ್ಟ ಕೆಲವು ಅಮೆರಿಕನ್ನರು, ವಿಯೆಟ್ನಾಂ ಯುದ್ಧದಲ್ಲಿ ತಮ್ಮ ದೇಶ ನಡೆಸಿದ ಹಳವಂಡಗಳನ್ನೆಲ್ಲ ಹಾಳೆಗಳಲ್ಲಿ ಹರವಿಟ್ಟಿದ್ದರು. ಮುಂದೆ 'ಪೆಂಟಗನ್ ಪೇಪರ್ಸ್' ಎಂದು ಕರೆಸಿಕೊಂಡ ಆ ದಾಖಲೆಗಳು ಅಮೆರಿಕದೆಡೆಗಿನ ಜಗತ್ತಿನ ದೃಷ್ಟಿಯನ್ನೇ ಬದಲಿಸಿಬಿಟ್ಟಿತು. ವಿಕಿಲೀಕ್ಸ್ ಮತ್ತು ಇತ್ತೀಚೆಗೆ ಅಮೆರಿಕದ ಅಂತರ್ಜಾಲ ಮರ್ಮವನ್ನು ಹೊರಗೆಡವಿದ 'ಕೆಚ್ಚೆದೆಯ' ಎಡ್ವರ್ಡ್ ಸ್ನೋಡನ್ ಮಾಡಿದ್ದೂ ಇದನ್ನೇ ಅಲ್ಲವೇ? ಅಸಹನೆಯ ಮೂರ್ತರೂಪವಾದ ಅಮೆರಿಕದ ವ್ಯವಸ್ಥೆ ಈಗ ಎಡ್ವರ್ಡ್‌ನ ಹಿಂದೆ ಬಿದ್ದಿದೆ! ಗ್ವಾಂಟನಾಮೊ ಪ್ರಿಸನ್ ಕ್ಯಾಂಪಿನಲ್ಲಿ ಹಿಂಸೆಯನ್ನೇ ಅವಿಭಾಜ್ಯ ಅಂಗವಾಗಿಸಿತ್ತು ಅಮೆರಿಕ. ಸಿಐಎ ಅಂತೂ "Extraordinary reendtion ಎನ್ನುವ ವ್ಯವಸ್ಥೆಯನ್ನೇ ಹುಟ್ಟುಹಾಕಿತು. ಇದರರ್ಥ, ಹಿಂಸೆಯ ಹೊರಗುತ್ತಿಗೆ! ಅಮೆರಿಕದ ನೆಲದಲ್ಲಿ ಕೊಡಲಾಗಲಾರದಂಥ ಹಿಂಸೆಯನ್ನು ಬೇರೇ ದೇಶಗಳಲ್ಲಿ ಕೊಡುವುದು. ಅಮೆರಿಕ ತನ್ನ ವಿರೋಧಿಗಳಿಗೆ ಬೇರೆಯವರ ಕೈಯಿಂದ ಶಿಕ್ಷೆ ಕೊಡಿಸಿತು. ಈ ಕುಕೃತ್ಯದಲ್ಲಿ ಸುಮಾರು 54 ದೇಶಗಳು ಭಾಗಿಯಾಗಿದ್ದವು ಎಂದು ಒಂದು ಅಂದಾಜು. ಲಂಡನ್ ನ್ಯಾಯಾಲಯ ಎತ್ತಿಹಿಡಿದ ಕಾನೂನನ್ನೇ ಎಲ್ಲೆಡೆಯೂ ಅನ್ವಯಿಸುವುದೇ ಆದರೆ, ತಟಸ್ಥ ರಾಷ್ಟ್ರ ಕಾಂಬೋಡಿಯಾದ ಮೇಲೆ ದಾಳಿ ನಡೆಸಿದ ಹೆನ್ರಿ ಕಿಸಿಂಜರ್ ಮತ್ತು ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳನ್ನು ಹೊಂದಿದೆ ಎಂದು ಸುಳ್ಳು ನೆಪ ನೀಡಿ ಇರಾನ್‌ನ ಮೇಲೆ ದಾಳಿ ಮಾಡಿದ ಜಾರ್ಜ್ ಬುಷ್‌ಗೂ ಕೂಡ ಇದೇ ರೀತಿಯ ಶಿಕ್ಷೆಯಾಗಬೇಕು. ಆದರೆ ಈ ಪ್ರಪಂಚವೇ ವಿಚಿತ್ರವಾಗಿದೆ. ಕೆಲವು ರಾಷ್ಟ್ರಗಳು ಎಷ್ಟೇ ತಪ್ಪೆಸಗಿದರೂ ಅವು ಕಾನೂನಿಗಿಂತ ಮೇಲ್ಮಟ್ಟದಲ್ಲೇ ಇರುತ್ತವೆ!
ಬ್ರಿಟಿಷರು ಕೇವಲ ಕೀನ್ಯಾದ ನಾಗರಿಕರ ಮೇಲಷ್ಟೆ ಇಂಥ ದೌರ್ಜನ್ಯ ಎಸಗಿದ್ದಾರೆ ಎನ್ನುವುದು ಮೂರ್ಖತನವಾದೀತು. ಸ್ವಾತಂತ್ರ ಹೋರಾಟಗಾರರ ಮೇಲೆ ಅವರು ನಡೆಸಿದ ಕ್ರೌರ್ಯಗಳ ಪಟ್ಟಿ ದೊಡ್ಡದೇ ಇದೆ. 1948ರಲ್ಲಿ ಮಲಯ್‌ನಲ್ಲಿನ ಹತ್ಯಾಕಾಂಡ ಮತ್ತು 1965ರಲ್ಲಿ ಅಡೆನ್‌ನಲ್ಲಿ ಯಮೆನ್ ನಾಗರಿಕರನ್ನು ಕೊಚ್ಚಿಹಾಕಿದ್ದು....ಒಂದೇ, ಎರಡೇ? ಇಂಥ ಹೊರಬಾರದ ಅನೇಕ ಘಟನೆಗಳು ಭಾರತದಲ್ಲೂ ನಡೆದಿರಬಹುದು. ಮೋಫ್ಲಾ ದಂಗೆ ನೆನಪಿದೆ ತಾನೆ? ಸೈನಿಕರು ಸ್ಥಳೀಯರನ್ನು ರೇಲ್ವೇ ಬೋಗಿಗಳಲ್ಲಿ ತುರುಕಿ ಉಸಿರುಗಟ್ಟಿಸಿ ಸಾಯಿಸಿದ್ದು? ಆದರೆ ಇದುವರೆಗೂ ಯಾರು ಆ ಘಟನೆಯ ವಿರುದ್ಧ ಕೇಸು ಹಾಕಿಲ್ಲ. ಯಾವ ಇತಿಹಾಸಕಾರನೂ ಅದಕ್ಕೆ ಸಂಬಂಧಿಸಿರಬಹುದಾದ ರಹಸ್ಯ ದಾಖಲೆಗಳನ್ನು ಹುಡುಕುವ ಪ್ರಯತ್ನ ಮಾಡಿಲ್ಲ. ಕೆಲವು ತಿಂಗಳ ಹಿಂದೆ ಬ್ರಿಟನ್ ಪ್ರಧಾನಿ ಕೆಮರೂನ್, ಜಲಿಯನ್ ವಾಲಾಬಾಘ್‌ಗೆ ಭೇಟಿ ಕೊಟ್ಟದ್ದು ಮೆಚ್ಚುವಂತಹ ನಡೆಯೇ. ಆದರೆ ಪರಿಹಾರ ಸಿಕ್ಕಿತೆ? ಪರಿಹಾರದ ವಿಷಯ ಒತ್ತಟ್ಟಿಗಿರಲಿ, ಆ ವ್ಯಕ್ತಿ ಕ್ಷಮಾಪಣೆಯನ್ನೂ ಕೇಳಲಿಲ್ಲ! 'ಮಡಿದವರಿಗಾಗಿ ನನ್ನ ಮನ ಮಿಡಿಯುತ್ತಿದೆ' ಎಂದಷ್ಟೇ ಹೇಳಿ ನುಣುಚಿಕೊಂಡು ಬಿಟ್ಟರು. ಬಹುಶಃ ನೈತಿಕತೆಯನ್ನು ವಿರೋಧಿಸುವುದೇ ವಸಾಹತುಶಾಹಿಗಳ ಹುಟ್ಟುಗುಣವಾಗಿರಬಹುದೇನೋ?!
-ಟಿಜೆಎಸ್ ಜಾರ್ಜ್