ಅಂಕಣಗಳು

ನಾನೊಬ್ಬ ಭಾರತೀಯಆ ಬಗ್ಗೆ ನನಗೆ ಹೆಮ್ಮೆಯಿದೆ

Published On :

'ಒಂದು ಸಮುದಾಯ ತನ್ನ ಜಾತ್ಯತೀತ ಮತ್ತು ಸಾಂಸ್ಕೃತಿಕ ರುಜುವಾತುಗಳನ್ನು ಪ್ರದರ್ಶಿಸುವುದು ಅದು ಬಹುಸಂಖ್ಯಾತವಾಗಿರುವಾಗ ಮಾತ್ರ. ಇನ್ನು ಮೈನಾರಿಟಿಗಳ ವಿಷಯಕ್ಕೆ ಬಂದರೆ, ಎಲ್ಲಾ ಅಲ್ಪಸಂಖ್ಯಾತರೂ 'ಸಹನೆ'ಯ ಬಗ್ಗೆ ಮಾತನಾಡುತ್ತಾರೆ, ಹಾಗೆ ಅವರು ಮಾತನಾಡುವುದು ತಮ್ಮ ಸ್ವಹಿತಾಸಕ್ತಿಗಾಗಿ(ಉಳಿವಿಗಾಗಿ)'
ಬೆಳಗ್ಗೆ ಟ್ವಿಟರ್ ತೆರೆದಾಗ ನನ್ನ ಕಣ್ಣುಕುಕ್ಕಿದ ಟ್ವೀಟ್ ಇದು. ಅಂಕಣಕಾರ ಆಕಾರ್ ಪಟೇಲ್ ಬರೆದ ಈ ಸಾಲುಗಳು ಸರಳವಾಗಿದ್ದರೂ, ಅರ್ಥಪೂರ್ಣವಾಗಿದ್ದವು. "When sovereignity belongs to god' ಎನ್ನುವ ಶೀರ್ಷಿಕೆ ಕೊಟ್ಟಿದ್ದರಿಂದ ಆ ಸಾಲುಗಳು ಇನ್ನಷ್ಟು ಗಾಢ ಅರ್ಥವನ್ನು ಪಡೆದಿದ್ದವು.
ಈ ಮಾತಿನಲ್ಲಿ ತಪ್ಪು ಅನ್ನುವಂಥದ್ದೇನೂ ಇಲ್ಲ. ಆದರೆ, 100 ಕೋಟಿ ಹಿಂದುಗಳ ಭಯದಿಂದಾಗಿ ನಾನು 'ಸಹನೆ' ಮತ್ತು 'ಸೌಹಾರ್ದ' ಎನ್ನುವ ಗುಣವನ್ನು ಅಳವಡಿಸಿಕೊಂಡಿದ್ದೇನೆಯೇ, ಇದು ಅಭದ್ರತೆಯ ಇನ್ನೊಂದು ರೂಪವೇ? ಎಂದು ಆತ್ಮಾವಲೋಕನಕ್ಕೆ ಇಳಿಯುವಂತೆ ಈ ಸಾಲುಗಳು ನನಗೆ ಆಜ್ಞೆ ಮಾಡುತ್ತಿದ್ದವು. ಆದರೆ ನಾನು ಈ ಪ್ರಶ್ನೆಯನ್ನು ಎಂದಿಗೂ ಕೇಳಿಕೊಳ್ಳುವುದಿಲ್ಲ. ಏಕೆಂದರೆ ಆ ರೀತಿಯ ಭಯ, ಅಭದ್ರತೆ ಇದುವರೆಗೂ ನನ್ನನ್ನು ಕಾಡಿಲ್ಲ.
ಹೌದು, ಆಗಾಗ ನಮ್ಮ ಕಿವಿಗೆ ಕೋಮು ಗಲಭೆ ಮತ್ತು ಹತ್ಯಾಕಾಂಡಗಳ ಸುದ್ದಿ ಬೀಳುತ್ತಿರುತ್ತವೆ. ಆದರೆ ಭಾರತದ ಮುಸಲ್ಮಾನರನ್ನೆಲ್ಲ ಮುಗಿಸಿಹಾಕಲು ಬಹುಸಂಖ್ಯಾತ ಹಿಂದುಗಳು ಹಿಟ್ಲರ್‌ನನ್ನೂ ಮೀರಿಸುವಂಥ ಕ್ರೂರಿಗಳಾಗಿರಬೇಕು. ಹಾಗಾಗುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಸಮಾಧಾನ ನನಗಿದೆ. ಸುದೈವವಶಾತ್ ಇದುವರೆಗೂ ನಾನು ಅಂಥ ಯಾವ ಕೊಲೆಯನ್ನೂ ನೋಡಿಲ್ಲ. ಅಲ್ಲದೆ ನನ್ನ ಹಿಂದು ಸ್ನೇಹಿತರು ಮತ್ತು ಬಾಸ್‌ಗಳಿಗೆ ನನ್ನ ಮೇಲೆ ದ್ವೇಷವಿರುವುದನ್ನೂ ನೋಡಿಲ್ಲ. ಆಕಾರ್ ಪಟೇಲ್, ನನ್ನ ಈ ಮಾತು ನಿಮಗೆ ಇಂಪಾದ ಸಂಗೀತದಂತೆ ಕೇಳಿಸುತ್ತಿರಬಹುದಲ್ಲವೇ? ನಾನು ಈ ಧಾಟಿಯಲ್ಲೇ ಮಾತನಾಡಬೇಕು ಎಂದು ನೀವು ಬಯಸಿರಬಹುದು ಅಲ್ಲವೆ!?
ನಾನೇನು ನಿಮ್ಮನ್ನು ಚುಚ್ಚಲು ಈ ಮಾತನಾಡುತ್ತಿಲ್ಲ. ಒಂದುವೇಳೆ ಅದು ಚುಚ್ಚುವಂತಹ ಮಾತೇ ಆಗಿದ್ದರೂ ಅದು ನಿಮಗೇ ತಾಗಲಿ, ಆದರೆ ಪ್ರಾಮಾಣಿಕರಾದ ನನ್ನ ಹಿಂದು ಗೆಳೆಯರಿಗಲ್ಲ ಎಂಬ ಒಳ ಉದ್ದೇಶ ನನಗಿದೆ!
ಕೆಲವು ಸಮಯದ ಹಿಂದೆ ನಾನು ಸಿಂಧಿ ಕುಟುಂಬವೊಂದರ ಒಡತೆನದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಪ್ರತಿ ದಿನ ಬೆಳಗ್ಗೆ ಅರ್ಚಕರೊಬ್ಬರು ಬಂದು ಅಲ್ಲಿನ ಎಲ್ಲಾ ಕೆಲಸಗಾರರಿಗೂ ಪ್ರಸಾದ ಕೊಟ್ಟು ಕುಂಕುಮ ಹಚ್ಚುತ್ತಿದ್ದರು. ನಾನೇನು ವಂದೇ ಮಾತರಂ ಹಾಡು ಕೇಳಿ ಸಭೆಯಿಂದ ಎದ್ದು ಹೋದ 'ಶಫಿಕುರ್ ರೆಹಮಾನ್ ಬರ್ಕ್‌'ನಂಥ ಕಟ್ಟರ್‌ಪಂಥಿ ಅಲ್ಲವಲ್ಲ? ಹಾಗಾಗೇ ನನ್ನ ಜಾಗದಲ್ಲೇ ಕುಳಿತಿರುತ್ತಿದ್ದೆ, ಅರ್ಚಕರು ಬಂದು ನನ್ನೆದುರು ನಿಲ್ಲುತ್ತಿದ್ದರು. ನಾನು ಕೈ ಚಾಚುತ್ತಿದ್ದೆ, ಅವರು ಕುಂಕುಮ ಹಚ್ಚಿ ಹೋಗುತ್ತಿದ್ದರು. ಕುಂಕುಮ ಹಚ್ಚಿಸಿಕೊಳ್ಳಲೇಬೇಕು ಎಂದು ಯಾರೂ ನನ್ನನ್ನು ಒತ್ತಾಯಿಸಿರಲಿಲ್ಲ. ಆದರೆ 'ಎಲ್ಲರಿಗಿಂತಲೂ ನಾನು ಭಿನ್ನ' ಎಂದು ತೋರಿಸಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ. ಪರಸ್ಪರ ನಂಬಿಕೆಗಳನ್ನು, ಭಾವನೆಗಳನ್ನು ಗೌರವಿಸಬೇಕು ಎಂದೇ ನಂಬಿದವನು ನಾನು.
ಇಷ್ಟೆಲ್ಲ ವಿವರ ನೀಡುವುದರ ಹಿಂದೆ ಯಾವುದೋ 'ಹಿಡನ್ ಅಜೆಂಡಾ' ಇಲ್ಲ ಅಥವಾ ಮಹಾರಾಷ್ಟ್ರದ ನನ್ನ  ಗೆಳತಿಯ(ಆಕೆಯ ತಾಯಿ ಮಾಡುತ್ತಿದ್ದ ಕೋತಂಬರಿ ವಡೆಯನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿದ್ದೆ) ಮುಂದೆ 'ಪ್ರಗತಿಪರ' ಎಂದು ಪೋಸು ಕೊಡುವ ಹಪಾಹಪಿಯೂ ನನಗಿಲ್ಲ. ಹಾಗೆ ನೋಡಿದರೆ ನಾನು ಧಾರ್ಮಿಕ ಕುಟುಂಬದಿಂದಲೇ ಬಂದವ. ಆದರೆ ನಿಯಮಿತವಾಗಿ ಪ್ರಾರ್ಥನೆ ಮಾಡದೆ ಮನೆಯವರ ಕೆಂಗಣ್ಣಿಗಂತೂ ಗುರಿಯಾಗಿದ್ದೇನೆ. ಈಗ ನಿಮಗೆ ಅರ್ಥವಾಗಿರಬಹುದಲ್ಲ, ನಾನು ಯಾವ ರೀತಿಯ ಮುಸಲ್ಮಾನನೆಂದು?
ಮಾರ್ಚ್ 30, 2011ರಂದು ಭಾರತ ಪಾಕಿಸ್ತಾನ ತಂಡವನ್ನು ಸೋಲಿಸಿ ವಿಶ್ವಕಪ್ ಫೈನಲ್‌ಗೆ ಲಗ್ಗೆಯಿಟ್ಟಿತು.  ನಾನು ಮತ್ತು ನನ್ನ ಕೆಲವು ಗೆಳೆಯರು ಅಂದು ಪಟ್ಟ ಸಂತೋಷ ಅಷ್ಟಿಷ್ಟಲ್ಲ. ದುಬೈನ ಬೀದಿಗಳಲ್ಲೆಲ್ಲ ಹುಚ್ಚರಂತೆ ನರ್ತಿಸಿದ್ದೆವು. ಪೋಲೀಸರು ಬಂದು ಗದರಿಸದೇ ಇದ್ದರೆ ರಾತ್ರಿಯಿಡೀ ಹಾಗೆ ಕುಣಿಯುತ್ತಿದ್ದೆವೇನೋ! ಆ ದಿನ ಹಿಂದೆಂದಿಗಿಂತಲೂ ಬಹಳ ಭಿನ್ನವಾಗಿತ್ತು. ಭಾರತೀಯರೆಲ್ಲರೂ ಹಸ್ತಲಾಘವ ಮಾಡಿಕೊಂಡರು, ತಬ್ಬಿಕೊಂಡರು, ಕಾರ್‌ಗಳ ಬೊನೆಟ್ ಮೇಲೆ ಹತ್ತಿ ಭಾರತದ ಧ್ವಜವನ್ನು ಬೀಸುತ್ತಾ ಕುಣಿದಾಡಿದರು. 'ಭಾರತದ ಮುಸ್ಲಿಂ ಆಗಿ ಪಾಕಿಸ್ತಾನವನ್ನೇಕೆ ಸರ್ಪೋರ್ಟ್ ಮಾಡುತ್ತಿಲ್ಲ' ಎಂದು ಯಾರೂ ಅಂದು ನನ್ನನ್ನು ಕೇಳಲಿಲ್ಲ. ಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಭಾರತಕ್ಕೆ ಟ್ರೋಫಿ ತಂದುಕೊಟ್ಟಾಗಲಂತೂ ಹಿಂದಿಗಿಂತ ಹೆಚ್ಚು ಸಂಭ್ರಮಪಟ್ಟಿದ್ದೆವು. ಆಕಾರ್ ಪಟೇಲ್, ಈಗ ಹೇಳಿ- ನಾನಂದು ಸಂಭ್ರಮಿಸಿದ್ದು, ಕ್ರಿಕೆಟ್ ತಂಡವೊಂದು ವಿಶ್ವಕಪ್ ಗೆದ್ದಿತು ಎನ್ನುವ ಕಾರಣದಿಂದಲೋ ಅಥವಾ ಭಾರತೀಯನೆಂಬ ಕಾರಣದಿಂದಲೋ?
ಅದು ಕೇವಲ ಧೋನಿ ತಂಡದ ಗೆಲುವಾಗಿರಲಿಲ್ಲ; ನಮ್ಮ ರಾಷ್ಟ್ರದ ಗೆಲುವಾಗಿತ್ತು. ನಾನೇನು ಭಾರತದೆಡೆಗಿನ ನನ್ನ ನಿಷ್ಠೆಯನ್ನೋ, ಪಾಕಿಸ್ತಾನದ ಬಗೆಗಿನ ಭಾವನೆಯನ್ನೋ ಅಥವಾ ನನ್ನ ಧಾರ್ಮಿಕ ದೃಷ್ಟಿಕೋನವನ್ನೋ ರುಜುವಾತು ಮಾಡಲು ಪ್ರಯತ್ನಿಸುತ್ತಿಲ್ಲ. ಒಬ್ಬ ಮನುಷ್ಯನಾಗಿ, ಒಬ್ಬ ಭಾರತೀಯನಾಗಿ ನನಗೆ ಹೇಗನ್ನಿಸಿತು ಎನ್ನುವುದನ್ನಷ್ಟೇ ಹೇಳುತ್ತಿದ್ದೇನೆ.
ಬಾಯಿಮುಚ್ಚಿಕೊಂಡು ನಿಮ್ಮ ಕೆಲಸ ನೋಡಿಕೊಳ್ಳಿ ಎಂದು ನಿಮಗೆ ಹೇಳಲಾರೆ. ಹಾಗೆ ಮಾಡಿದರೂ ನನ್ನ 'ಭಾರತೀಯತೆ'ಯ ಬಗ್ಗೆ ನಿಮ್ಮಲ್ಲಿರುವ ದ್ವಂದ್ವ ಕಡಿಮೆಯಾಗುವುದಿಲ್ಲವೇನೋ? ಭಾರತದಂತಹ ವಾಕ್ ಸ್ವಾತಂತ್ರ್ಯವಿರುವ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿರುವುದಕ್ಕೆ ನಾವು ಪುಣ್ಯ ಮಾಡಿದ್ದೇವೆ ಆಕಾರ್. ನಮ್ಮದು ಪಾಕಿಸ್ತಾನದಂತಹ ದೇಶವಲ್ಲ. ಹೆಸರಿಗಷ್ಟೇ ಅದು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದರೂ ಅದೂ ವ್ಯಾಟಿಕನ್‌ನಂತೆಯೇ ಧಾರ್ಮಿಕ ರಾಜಕೀಯವನ್ನೇ ನೆಚ್ಚಿಕೊಂಡಿದೆ. ಹಾಗಾಗೇ ಭಾರತ ಮತ್ತು ಪಾಕಿಸ್ತಾನವನ್ನು ಹೋಲಿಸುವುದು ಮೂರ್ಖತನವೇ ಸರಿ. ನೀವು ಹೇಳಿದಂತೆ 'ಬಹುಸಂಖ್ಯಾತರಿಗೆ ಹೆದರಿ ಬದುಕುವವರು' ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರು(ಹಿಂದು, ಕ್ರಿಶ್ಚಿಯನ್ನರು), ಭಾರತದಲ್ಲಿನ ಅಲ್ಪಸಂಖ್ಯಾತರಲ್ಲ(ಮುಸಲ್ಮಾನರು). ಭಾರತದ ಮುಸಲ್ಮಾನರಿಗೆ 'ಪಾಕಿಸ್ತಾನಕ್ಕೆ ಹೋಗಿ' ಎಂದು ಕೆಲವರು ಹೇಳುತ್ತಾರೆ. ಆದರೆ ಅವರ ಮಾತನ್ನು ನಾನು ಎಂದಿಗೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಏಕೆಂದರೆ ಆ ಮಾತೇ ಅರ್ಥಹೀನ. ಯಾರೂ ಎಲ್ಲಿಗೂ ಹೋಗುವುದಿಲ್ಲ! ಹಾಗಿದ್ದರೆ ಎಲ್ಲರೂ ಪರಸ್ಪರ ಪ್ರೀತಿ, ಸೌಹಾರ್ದದಿಂದ ಬದುಕುವ ಕೆಲಸ ಮಾಡಬಹುದಲ್ಲವೇ? ನಾನೇನು Insecure ಆಗಿ ಈ ಮಾತು ಹೇಳುತ್ತಿಲ್ಲ ಆಕಾರ್. ಇರುವ ವಿಷಯವನ್ನು ಹೇಳುತ್ತಿದ್ದೇನಷ್ಟೆ.
ಈ ಲೇಖನದಿಂದ ನಾನು 'ಜಾತ್ಯತೀತ', 'ಸಿಕ್ಯುಲರ್‌' ಮತ್ತು 'ಷರಿಯಾ'ದಂತಹ ಪದಗಳನ್ನು ಉದ್ದೇಶಪೂರ್ವಕವಾಗಿಯೇ ಹೊರಗಿಟ್ಟಿದ್ದೇನೆ. ಆ ರೀತಿಯ ಪದಗಳನ್ನು ಉದುರಿಸಲು ಹೆಚ್ಚು ಜ್ಞಾನ ಬೇಕು, ವಿಷಯದ ಅರಿವೂ ಹೆಚ್ಚು ವಿಶಾಲವಾಗಿರಬೇಕು. ಅದು ನಮ್ಮಲ್ಲಿಲ್ಲವಾದ್ದರಿಂದ ಈ ಚರ್ಚೆ ಎಲ್ಲಿಗೂ ಹೋಗಿ ತಲುಪುವುದಿಲ್ಲ ಎಂದು ನನಗೆ ಗೊತ್ತು.  ನನ್ನ ಮಾತಿನಲ್ಲಿ ನಿಮಗೆ ಅಹಂಕಾರ ಕಾಣಿಸಬಹುದು, ಆದರೆ ಆ ಅಹಂಕಾರ ನಾನೂ ಈ ದೇಶದ ಪ್ರಜೆ ಎಂಬ ಬಲಿಷ್ಠ ನಂಬಿಕೆಯಿಂದಲೇ ಉದ್ಭವವಾದದ್ದು. ಪಾಕಿಸ್ತಾನ ಮಾಡಿದ ಪಾಪಕ್ಕೆ ನಾನು ಕ್ಷಮಾಪಣೆ ಕೇಳುವುದಿಲ್ಲ ಮತ್ತು 'ನೀವು ಭಾರತ ಮುಸ್ಲಿಮರ ಬಗ್ಗೆ ತೋರಿಸುತ್ತಿರುವ ಪ್ರೀತಿ(?)ಗೆ' ನಾನು ಧನ್ಯವಾದವನ್ನೂ ಅರ್ಪಿಸುವುದಿಲ್ಲ.
'ಇಕ್ ತಬಸ್ಸುಂ ಹಜಾರ್ ಶಿಖವೋಂ ಕಾ, ಕಿತ್ನಾ ಪ್ಯಾರಾ ಜವಾಬ್ ಹೋತಾ ಹೈ' ಎನ್ನುವ ಮಾತಿದೆ. ಅಂದರೆ ಒಂದು ಪುಟ್ಟ ಮಂದಹಾಸ ಸಾವಿರಾರು ದೂರುಗಳಿಗೆ ಉತ್ತರವಾಗಬಲ್ಲದಂತೆ!
ಅರ್ಥಮಾಡಿಕೊಂಡದ್ದಕ್ಕೆ ಧನ್ಯವಾದಗಳು ಆಕಾರ. ನಿಮಗೆ ಅರ್ಥವಾಗಲೆಂದೇ ನಾನು ಕೊನೆಯ ಸಾಲನ್ನು ಹೇಳಿದ್ದು!

- ಸರ್ಫ್ರಾಜ್ ಖಾತಿಬ್
sarfrazhaan@yahoo.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.