ಅಂಕಣಗಳು

ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅಭಿವೃದ್ಧಿಯ ಮೊದಲ ಹೆಜ್ಜೆ

Published On :

ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸಬೇಕಾದರೆ ಸರ್ಕಾರದ ವತಿಯಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಬಹಳ ಅಗತ್ಯವಾಗುತ್ತದೆ. ಬೆಳಗಾವಿ ನಗರ ಪ್ರದೇಶದಲ್ಲಿ ಒಂದೆರಡು ಮುಖ್ಯ ರಸ್ತೆಗಳನ್ನು ಬಿಟ್ಟರೆ, ಉಳಿದ ಕಿರಿದಾದ ರಸ್ತೆಗಳು ದಿನನಿತ್ಯದ ಸಂಚಾರಕ್ಕೆ ತುಂಬಾ ತೊಂದರೆ ಉಂಟು ಮಾಡುತ್ತಿದ್ದವು. ಹಳೆಯ ಕಟ್ಟಡಗಳು ರಸ್ತೆ ಬದಿಗಿದ್ದಾಗ ರಸ್ತೆ ಅಗಲೀಕರಣ ಮಾಡುವುದು ತುಂಬಾ ಕಷ್ಟಕರ. ಇದ್ದ ರಸ್ತೆಗಳಲ್ಲಿಯೂ ಸಹ ಪ್ರತೀ ವರ್ಷ ಮಳೆಗಾಲದಲ್ಲಿ ದೊಡ್ಡ ಗುಂಡಿಗಳು ಬೀಳುತ್ತಿದ್ದವು.  ನಗರದಿಂದ ಹೊರಗಡೆ ಹೋದರೆ ತಾಲೂಕು ಕೇಂದ್ರ ಸ್ಥಾನಗಳಿಗೆ ಸಹ ಉತ್ತಮ ಸಂಪರ್ಕ ರಸ್ತೆಗಳು ಇರಲಿಲ್ಲ.  ಸುಮಾರು ಅರವತ್ತು ಕಿ.ಮೀ. ದೂರ ಇರುವ ತಾಲೂಕಿಗೆ ಹೋಗಿ ತಲುಪಲು ಎರಡು ಗಂಟೆ ಸಮಯ ಬೇಕಾಗುತ್ತಿತ್ತು.  ಕೆಟ್ಟ ರಸ್ತೆಯಿಂದಾಗಿ ಬಸ್ ಸಂಚಾರ ಕೂಡ ಬಹಳಷ್ಟು ಕಡೆ ನಿಂತು ಹೋಗಿತ್ತು. ಮಕ್ಕಳಿಗೆ ಶಾಲೆಗೆ ಹೋಗಲು, ನಿರುದ್ಯೋಗಿಗಳು ದಿನಗೂಲಿಗಾಗಿ ಹಳ್ಳಿಯಿಂದ ನಗರಕ್ಕೆ ಬರಲು ಅಥವಾ ರೋಗಿಗಳು ಆಸ್ಪತ್ರೆಗೆ ಹೋಗಲು, ಇವೆಲ್ಲಕ್ಕೂ ಉತ್ತಮ ರಸ್ತೆಗಳ ಅತಿ ಅವಶ್ಯಕವಾಗಿರುತ್ತವೆ. ವಿಶ್ವಬ್ಯಾಂಕ್‌ನ ಒಂದು ಅಧ್ಯಯನ ವರದಿಯಂತೆ ಪ್ರತೀ ಹತ್ತು ಲಕ್ಷ ರುಪಾಯಿಗಳನ್ನು ರಸ್ತೆಗಳ ಅಭಿವೃದ್ಧಿಗಾಗಿ ಖರ್ಚು ಮಾಡುವುದರಿಂದ ನೂರ ಅರವತ್ತಮೂರು ಜನರು ಬಡತನದಿಂದ ಹೊರಬರಲು ಸಾಧ್ಯ. ಅಂದರೆ ಒಂದು ಹಳ್ಳಿ ಅಥವಾ ಊರಿನಲ್ಲಿ ಸರ್ಕಾರ ಉತ್ತಮ ರಸ್ತೆ ಸಂಪರ್ಕ ನೀಡಿದರೆ ಜನರ ಆದಾಯ ತಾನಾಗೇ ಹೆಚ್ಚು ಆಗುವ ಅವಕಾಶಗಳು ಬೆಳೆಯುತ್ತವೆ.   
ಸತತವಾಗಿ ಎರಡು ವರ್ಷಗಳ ಕಾಲ ಭಾರೀ ಮಳೆಯಿಂದಾಗಿ ಜಿಲ್ಲೆಯ ಎಲ್ಲಾ ರಸ್ತೆಗಳೂ ತೀರಾ ಹಾಳಾದ ಪರಿಸ್ಥಿತಿಯಲ್ಲಿದ್ದವು.  ದಿನನಿತ್ಯ ಜನರ ಪ್ರತಿಭಟನೆ ನಡೆದೇ ಇರುತ್ತಿತ್ತು. ಸ್ವಲ್ಪ ಮಳೆ ಬಂದರೂ ಸಾಕು, ಮನೆಗಳ ಒಳಗೆ ನೀರು ನುಗ್ಗುತ್ತಿತ್ತು. ಚರಂಡಿಗಳಲ್ಲಿ ನೀರು ತುಂಬಿ ರಸ್ತೆಯ ಮೇಲೆ ಹರಿಯುತ್ತಿತ್ತು. ಆಗ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಲಭ್ಯವಿರುವ ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ನಗರ ಪ್ರದೇಶ ಹಾಗೂ ನೆರೆ ಹಾವಳಿಯಲ್ಲಿ ಮುಳುಗಿರುವ ಹಳ್ಳಿ ಪ್ರದೇಶದ ಸಂಪರ್ಕ ರಸ್ತೆಗಳ ಶಾಶ್ವತ ಸುಧಾರಣೆಗೆ ಒಂದು ಕ್ರಿಯಾ ಯೋಜನೆಯನ್ನು ತಯಾರಿಸಲಾಯಿತು. ಈ ಯೋಜನೆಯ ಪ್ರಕಾರ ಕೆಳಮಟ್ಟದಲ್ಲಿ ಇರುವ ರಸ್ತೆಗಳನ್ನು ಏರಿಸಿ ಅದಕ್ಕೆ ಎರಡೂ ಕಡೆ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಮತ್ತು ಮೂರು ವರ್ಷಗಳ ಕಾಲ ಆ ರಸ್ತೆಯನ್ನು ಗುತ್ತಿಗೆದಾರರು ನಿರ್ವಹಣೆ ಮಾಡಬೇಕೆಂದು ನಿರ್ಧರಿಸಲಾಯಿತು. ಉತ್ತಮ ಗುತ್ತಿಗೆದಾರರ ಆಯ್ಕೆಯನ್ನು ಮಾಡಿ ಒಪ್ಪಂದವನ್ನು ಕಾರ್ಯಗತಗೊಳಿಸಿ ಸಮಯಬದ್ಧವಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವ ಕ್ರಮ ಜರುಗಿಸಲಾಯಿತು. ಸ್ಥಳೀಯ ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲವು ಕಡೆ ಪರಸ್ಪರ ಸಹಕಾರದಿಂದ ರಸ್ತೆ ಸಾಲು ಹೊಂದಿಕೆ ಸಹ ಬದಲಾವಣೆ ಮಾಡಲಾಯಿತು. ಕಟ್ಟುನಿಟ್ಟಿನ ಮೇಲ್ವಿಚಾರಣೆ ಇರುವುದರಿಂದ ಗುಣಮಟ್ಟದ ಕಾಮಗಾರಿಗಳು ನಿರ್ದಿಷ್ಟ ಸಮಯದ ಒಳಗಡೆ ಆದವು.
ಬೆಳಗಾವಿ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಳಾಗಿದ್ದರಿಂದ ನಾನು ನಗರದ ಸುತ್ತು ಒಂದು ವರ್ತುಲ ರಸ್ತೆ ಸ್ಥಾಪನೆಯ ಬಗ್ಗೆ ಪ್ರಸ್ತಾಪ ಸಲ್ಲಿಸಿದೆ. ಕೆಲಸ ಪ್ರಾರಂಭಿಸಲಾಯಿತು. ಮುಂದಿನ ಹತ್ತರಿಂದ ಇಪ್ಪತ್ತು ವರ್ಷದಲ್ಲಿ ಹೆಚ್ಚುವ ವಾಣಿಜ್ಯ ಸಂಚಾರಕ್ಕೆ ಅನುಕೂಲವಾಗುವಂತೆ, ನಗರದಲ್ಲಿ ಸಂಚಾರ ಅವ್ಯವಸ್ಥೆ ಉಂಟಾಗದಂತೆ ಮಾಡುವ ಉದ್ದೇಶ ಈ ಯೋಜನೆಯ ಹಿಂದಿತ್ತು. ಇನ್ನು ಪ್ರಾಧಿಕಾರದಿಂದ ಹೊಸಹೊಸ ಬಡಾವಣೆಗಳು ನಿರ್ಮಿಸಿದಾಗ ಬಹಳಷ್ಟು ನಿವೇಶನಗಳು ಖಾಲಿ ಬಿದ್ದಿದ್ದವು. ಅವುಗಳನ್ನು ಹರಾಜಿನ ಮೂಲಕ ಮಾರಾಟ ಮಾಡಿ ಪ್ರಾಧಿಕಾರಕ್ಕೆ ಹಣ ಹಾಗೂ ಜನರಿಗೆ ನಿವೇಶನವನ್ನು ಒದಗಿಸಲಾಯಿತು. ಬಹಳಷ್ಟು ಸಂಘ-ಸಂಸ್ಥೆಗಳು ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ನಡೆಸಲು ಇಚ್ಛಿಸಿದ್ದರೂ ಸಹ ಸ್ಥಳಾ ವಕಾಶ ಇರಲಿಲ್ಲ.  ಅಂತಹವರಿಗೆ ಪೌರರ ಸೌಕರ್ಯ ನಿವೇಶನಗಳನ್ನು ಶೇಖಡ ಐವತ್ತರ ರಿಯಾಯಿತಿಯಲ್ಲಿ ನೀಡಿ ಸಾಮಾಜಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಯಿತು. ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಯಾಗಿ ನಾನು ನಗರದಲ್ಲಿ ಸುತ್ತಾಡುತ್ತಿರುವಾಗ ಜನರು ತಮ್ಮ ಬಡಾವಣೆಗಳಲ್ಲಿ ಸರಿಯಾದ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲ ಎಂದು ದೂರುತ್ತಿದ್ದರು. ಈ ಕುರಿತು ಪ್ರಾಧಿಕಾರ ಹಾಗೂ ಪಾಲಿಕೆಯ ದಾಖಲೆಗಳನ್ನು ವಿಶ್ಲೇಷಿಸಿದಾಗ ಸದರಿ ಬಡಾವಣೆಗಳು ಖಾಸಗೀ ವ್ಯಕ್ತಿಗಳಿಂದ ಮಾರಾಟ ಮಾಡಲಾಗಿದ್ದು, ಸರ್ಕಾರದ ನಿಯಮಗಳಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿರಲಿಲ್ಲ ಎನ್ನುವ ವಿಷಯ ತಿಳಿಯಿತು. ಈ ಬಗ್ಗೆ ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ ಇದ್ದುದರಿಂದ ಖರೀದಿದಾರರು ಸಮಸ್ಯೆ  ಅನುಭವಿಸಬೇಕಾಗಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಎಲ್ಲಾ ಹಳೇ ಬಡಾವಣೆಗಳ ಮಾಲೀಕರಿಗೆ ಹಾಗೂ ನಿವಾಸಿಗಳಿಗೆ ಅಭಿವೃದ್ಧಿ ಶುಲ್ಕವನ್ನು ಭರಿಸಲು ನೋಟಿಸ್ ನೀಡಲಾಯಿತು. ಅಲ್ಲದೇ ವಾರ್ಷಿಕ ಅಭಿವೃದ್ಧಿ ಯೋಜನೆಯಲ್ಲಿ ಇಂತಹ ಬಡಾವಣೆಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಿಯಾ ಯೋಜನೆ ತಯಾರಿಸಲಾಯಿತು.  
ಬೆಳಗಾವಿಯಲ್ಲಿ ಸುಮಾರು ತಾಂತ್ರಿಕ ಕಾಲೇಜುಗಳು ಇದ್ದು, ವಿದ್ಯಾರ್ಥಿಗಳು ಪದವಿ ಪಡೆದು ಮುಂಬೈ ಮತ್ತು ಬೆಂಗಳೂರಿನಲ್ಲಿನ ಐ.ಟಿ.ಕಂಪೆನಿಗಳಲ್ಲಿ ನೌಕರಿ ಹುಡುಕಿಕೊಂಡು ಹೋಗುತ್ತಿದ್ದರು. ಆಗ ಬೆಳಗಾವಿಯಲ್ಲಿಯೂ ಏಕೆ ಒಂದು ಐಟಿ-ಬಿಟಿ ಪಾರ್ಕನ್ನು ಮಾಡಬಾರದೆಂದು ಯೋಚನೆ ಬಂದಿತು.  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಮೀಪ ನೂರೈವತ್ತು ಎಕರೆ ಸರ್ಕಾರಿ ಭೂಮಿಯನ್ನು ಗಮನಿಸಿ ಕೈಗಾರಿಕಾ ಇಲಾಖೆಗೆ ಅದನ್ನು ಹಸ್ತಾಂತರಿಸಿದೆ. ಬಹಳ ವರ್ಷಗಳಿಂದ ಸರ್ಕಾರಿ ಭೂಮಿ ಬಗ್ಗೆ ಯಾವುದೇ ರಕ್ಷಣೆ ಇಲ್ಲದಿದ್ದುದರಿಂದ ಅಕ್ಕಪಕ್ಕದ ಜನರು ಮಳೆಗಾಲದಲ್ಲಿ ಸಾಗುವಳಿ ಮಾಡಲು ಪ್ರಾರಂಭಿಸಿದ್ದರು. ಕೈಗಾರಿಕೆ ಇಲಾಖೆ ಸ್ವಾಧೀನಕ್ಕೆ ಮುಂದಾದಾಗ ಅವರು ಪ್ರತಿಭಟಿಸಿದರು. ಆದರೆ ಕಾನೂನು ಬಾಹಿರ ಅತಿಕ್ರಮಣವನ್ನು ಯಾವುದೇ ಕಾರಣದಿಂದಲೂ ಒಪ್ಪುವುದಿಲ್ಲವೆಂದು ತಿಳಿಸಿ, ಅವರಿಗೆ ಬೇರೆ ರೀತಿಯಿಂದ ಸರ್ಕಾರದ ಯೋಜನೆಗಳ ಅಡಿಯಲ್ಲಿ ಸಹಾಯ ಮಾಡಲಾಗುವುದೆಂದು ಸಮಾಧಾನ ಮಾಡಲಾಯಿತು.  
ರಾಜ್ಯ ರಾಜಧಾನಿ ಬೆಂಗಳೂರು, ಬೆಳಗಾವಿಯಿಂದ ಸುಮಾರು ಆರು ನೂರು ಕಿ.ಮೀ. ದೂರದಲ್ಲಿದ್ದು, ಕೇವಲ ರಸ್ತೆ ಹಾಗೂ ರೈಲು ಸಂಪರ್ಕದ ಮೇಲೆ ಅವಲಂಬಿತವಾಗಿತ್ತು. ಐಟಿಬಿಟಿ ಉದ್ಯಮಿಗಳು ಈ ಕೈಗಾರಿಕಾ ಪ್ರದೇಶವನ್ನು ಬಳಸಬೇಕಾದರೆ ಅವರಿಗೆ ವಿಮಾನ ಸಂಪರ್ಕದ ಅತೀ ಅಗತ್ಯವಿರುತ್ತದೆ. ಬಹಳ ವರ್ಷಗಳಿಂದ ವಿಮಾನ ನಿಲ್ದಾಣ ಬೆಳಗಾವಿಯಲ್ಲಿದ್ದರೂ ಸಹ ವಿಮಾನಗಳು ನಿರಂತರವಾಗಿ ಸಂಚಾರ ಮಾಡುವ ಸೌಲಭ್ಯ ಇರಲಿಲ್ಲ. ಈ ಹಿಂದೆ ಕೇಂದ್ರದ ವಿಮಾನಯಾನ ಮಂತ್ರಾಲಯದಲ್ಲಿ ಕೆಲಸ ಮಾಡಿದ್ದುದರಿಂದ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ನನ್ನ ಸಂಪರ್ಕಗಳು ಹಾಗೂ ಜ್ಞಾನದ ಪ್ರಯೋಜನ ಪಡೆದೆ. ಆದರೆ ಮುಂದಿನ ದಿನಗಳಲ್ಲಿ ಬೋಯಿಂಗ್ 320 ಏರ್‌ಬಸ್ ಓಡಿಸುವ ಸಾಮಾರ್ಥ್ಯ ಹೊಂದಿರುವ ವಿಮಾನ ನಿಲ್ದಾಣವನ್ನು ನಿರ್ಮಿಸಬೇಕಾದರೆ ವಿಮಾನ ಇಳಿದು ನಿಲ್ಲುವ ದಾರಿಯನ್ನು ಸುಮಾರು ಏಳು ಸಾವಿರ ಮೀಟರ್ ಉದ್ದಕ್ಕೆ ನಿರ್ಮಿಸಬೇಕಾಗಿತ್ತು. ಇದಕ್ಕಾಗಿ ಸುಮಾರು ಮುನ್ನೂರು ಎಕರೆ ಜಮೀನು ಭೂ ಸ್ವಾಧೀನಪಡಿಸಿಕೊಳ್ಳಬೇಕಿತ್ತು. ಈ ಹಿಂದೆ ಮಂಗಳೂರಿನ ವಿಮಾನ ನಿಲ್ದಾಣಕ್ಕಾಗಿ ಭೂ ಸ್ವಾಧೀನ ನಡೆಸಿದ್ದುದರಿಂದ ಈ ಕೆಲಸವನ್ನು ತ್ವರಿತಗತಿಯಿಂದ ಮಾಡಿದೆ. ಆದಷ್ಟುಮಟ್ಟಿಗೆ ಖಾಲಿಯಿರುವ ಭೂಮಿಯನ್ನು ಸ್ವಾಧೀನ ಪಡಿಸುವ ಪ್ರಕ್ರಿಯೆಗೆ ಒಳಪಡಿಸಲಾಯಿತು. ಮಧ್ಯದಲ್ಲಿ ಕೆಲವು ಜನ ತಮ್ಮ ಮನೆಗಳನ್ನು ಕಟ್ಟಿರುವುದು ಕಂಡುಬಂತು. ವಿಮಾನ ನಿಲ್ದಾಣದ ಸುರಕ್ಷತೆ ಮಾರ್ಗಸೂಚಿ ಅನ್ವಯ ಸಾಧ್ಯವಾದಷ್ಟು ಮಟ್ಟಿಗೆ ಅಂತಹ ಕಟ್ಟಡಗಳನ್ನು ಬಿಟ್ಟು ಗುರುತು ಮಾಡಲಾಯಿತು. ಸ್ಥಳೀಯರನ್ನು ಆಹ್ವಾನಿಸಿ ಅವರು ಕಳೆದುಕೊಂಡಿರುವ ಭೂಮಿಯ ಬದಲಿಗೆ ಅವರಿಗೆ ಬೇಕಾದ ಪರಿಹಾರ ಧನ ಹಾಗೂ ಪರ್ಯಾಯ ಕಸುಬುಗಳನ್ನು ಒದಗಿಸುವ ಯೋಜನೆಗಳನ್ನು ಸಹ ಕೈಗೊಳ್ಳಲಾಯಿತು. ಪ್ರಾರಂಭದಲ್ಲಿ ಭೂ ಸ್ವಾಧೀನದಿಂದ ಆಗಲಿರುವ ಸಮಸ್ಯೆಗಳನ್ನು ಯೋಚಿಸಿ ಸಾರ್ವಜನಿಕರು ಪ್ರತಿಭಟನೆ ಮಾಡಿದರು. ಆದರೆ  ಪ್ರತಿಯೊಂದು ತೊಂದರೆಗೀಡಾದ ಕುಟುಂಬವನ್ನು ನಾವು ನೇರವಾಗಿ ಸಂಪರ್ಕಿಸಿ ಮಾತನಾಡಿದ್ದರಿಂದ, ಪರಿಹಾರಗಳನ್ನು ಸೂಚಿಸಿದ್ದರಿಂದ ಈ ಕೆಲಸ ಸುಲಭವಾಗಿ ನಡೆಯಿತು. ಸರ್ಕಾರದಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಿದಲ್ಲಿ ನಮ್ಮ ರಾಜ್ಯದ ನಾಗರಿಕರು ಖಂಡಿತವಾಗಿ ತಮ್ಮ ಸರ್ವಾಂಗೀಣ ಬೆಳವಣಿಗೆಗೆ ಕಾರಣೀಭೂತರಾಗುತ್ತಾರೆ, ಭಾಗವಾಗುತ್ತಾರೆ ಎನ್ನುವುದು ನನ್ನ ಸದೃಢ ನಂಬಿಕೆ.
(ಮುಂದುವರೆಯುವುದು)

- ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.