2007ರ ವಿಶ್ವಕಪ್ ಕ್ರಿಕೆಟ್. ಕೆರಿಬಿಯನ್ ದ್ವೀಪಗಳ ಆತಿಥ್ಯದಲ್ಲಿ ನಡೆದ ಟೂರ್ನಿಗೆ ಭಾರತ ತಂಡ ಭಾರಿ ನಿರೀಕ್ಷೆಗಳೊಂದಿಗೆ ಕಾಲಿಟ್ಟಿತ್ತು. ರಾಹುಲ್ ದ್ರಾವಿಡ್ ನಾಯಕತ್ವ, ಅವರ ಬೆನ್ನಿಗೆ ಗಂಗೂಲಿ, ಕುಂಬ್ಳೆ, ಸಚಿನ್ರಂತಹ ಪಳಗಿದ ಹುಲಿಗಳ ದಂಡು. ನಿಸ್ಸಂಶಯವಾಗಿ ಭಾರತ ಪ್ರಶಸ್ತಿ ಗೆಲ್ಲಲು ನೆಚ್ಚಿನ ತಂಡವಾಗಿತ್ತು. 2003ರಲ್ಲಿ ಫೈನಲ್ನಲ್ಲಿ ಕೈಸುಟ್ಟುಕೊಂಡಿದ್ದ ತಂಡ ನಾಲ್ಕು ವರ್ಷಗಳ ನಂತರ ಒಡೆತನ ಸ್ಥಾಪಿಸುವ ಭರವಸೆ ಎಲ್ಲರಲ್ಲಿತ್ತು. ಆದರೆ ಆಗಿದ್ದೇ ಬೇರೆ. ಭಾರತ ತಂಡ ಲೀಗ್ ಹಂತದಲ್ಲಿಯೇ ಫೇಲ್ ಆಗಿ ತವರಿಗೆ ಮರಳಿತು. ಒಂದು ರೀತಿಯ ಹತಾಶ ಭಾವನೆ ಮಡುಗಟ್ಟಿತ್ತು. ಅದೇ ವರ್ಷದ ಕೊನೆಗೆ ದಕ್ಷಿಣ ಆಫ್ರಿಕಾದಲ್ಲಿ ಚೊಚ್ಚಲ ಟಿ-20 ವಿಶ್ವಕಪ್ ನಡೆಯುವುದಿತ್ತು. ರಾಹುಲ್ ದ್ರಾವಿಡ್ ಚುಟುಕು ಕ್ರಿಕೆಟ್ನಲ್ಲಿ ತಂಡವನ್ನು ಮುನ್ನಡೆಸುವುದಿಲ್ಲ ಎಂದು ಶಸ್ತ್ರತ್ಯಾಗ ಮಾಡಿದ್ದರು. ಆಯ್ಕೆದಾರರು ಹೊಸ ನಾಯಕನ ಹುಡುಕಾಟದಲ್ಲಿದ್ದರು. ಹಳೆಯ ಗಂಡನ ಪಾದವೇ ಗತಿ ಎಂದು ಅವರು ಸಚಿನ್ ತೆಂಡೂಲ್ಕರ್ ಮೊರೆ ಹೋದರು. ದಿಕ್ಕು ತಪ್ಪಿದ್ದ ಹಡಗಿಗೆ ಹುಟ್ಟು ಹಾಕು ಬಾ ಎಂದು ಕೇಳಿದರು. ಅದಾಗಲೇ ನಾಯಕತ್ವದ ಮುಳ್ಳಿನ ಕಿರೀಟ ಧರಿಸಿ ಅದರ ಒತ್ತಡ ತಾಳಲಾರದೇ ನಾನಾಯಿತು ನನ್ನ ಬ್ಯಾಟಾಯಿತು ಎಂದು ನಿರ್ಧರಿಸಿದ್ದ ಸಚಿನ್, ನಯವಾಗಿಯೇ ಆ ಮನವಿಯನ್ನು ತಿರಸ್ಕರಿಸಿದರು. ಆದರೆ ಅದಕ್ಕೆ ಪರ್ಯಾಯ ಸಲಹೆ ನೀಡಲು ಮರೆಯಲಿಲ್ಲ. ತಂಡದಲ್ಲಿ ಇನ್ನೂ ಕಿರಿಯನಾಗಿದ್ದರೂ ಆಟದ ತಂತ್ರಗಾರಿಕೆ ವಿಚಾರಕ್ಕೆ ಬಂದಾಗ ಹಿರಿಯರ ಜೊತೆ ದನಿಗೂಡಿಸುತ್ತಿದ್ದ, ತನಗೆ ಅನಿಸಿದ್ದನ್ನು ಮುಲಾಜಿಲ್ಲದೇ ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದ ಮತ್ತು ಜವಾಬ್ದಾರಿಯಿಂದ ನುಣುಚಿಕೊಳ್ಳದ ಮನೋಭಾವ ಹೊಂದಿದ್ದ ಆಟಗಾರರನ್ನು ಸಚಿನ್ ಅಂದು ಭಾರತ ಕ್ರಿಕೆಟ್ ತಂಡದ ನಾಯಕನ ಸ್ಥಾನಕ್ಕೆ ಸೂಚಿಸಿದರು. ದ್ರಾವಿಡ್ ಸಹ ಆ ಸಲಹೆಯನ್ನು ಅನುಮೋದಿಸಿದ್ದರು. ಆರು ವರ್ಷ, ಎರಡು ವಿಶ್ವಕಪ್ (ಟಿ-20 ಮತ್ತು ಏಕದಿನ) ಹಾಗೂ ಒಂದು ಚಾಂಪಿಯನ್ಸ್ ಟ್ರೋಫಿ ವಿಜಯದ ಬಳಿಕ ಆ ಸಲಹೆ ಮತ್ತು ಅದರ ಹಿಂದಿದ್ದ ವಿಶ್ವಾಸ ಋಜುವಾತಾಗಿದೆ. ಇವೆಲ್ಲದರ ನಡುವೆ ಟೆಸ್ಟ್ ಪಂದ್ಯಗಳಲ್ಲಿ ಸಹ ತಂಡ ಅಲ್ಪಕಾಲವಾದರೂ ಸರಿ ವಿಶ್ವದ ನಂಬರ್ ಒನ್ ಪಟ್ಟಕ್ಕೆ ಏರಿದ್ದಿದೆ. ಇದಕ್ಕೆಲ್ಲ ಕಾರಣ ಮಹೇಂದ್ರ ಸಿಂಗ್ ಧೋನಿ!
ರಾಂಚಿಯ ಗಲ್ಲಿಗಳಲ್ಲಿ, ಮನೆಯ ಓಣಿಯಲ್ಲಿ ವಿಕೆಟ್ನ ಅ, ಆ, ಇ, ಈ ಕಲಿತ ಈ ಹುಡುಗ ಭಾರತ ತಂಡಕ್ಕೆ ಕಾಲಿಟ್ಟಾಗ ವಯಸ್ಸು 24 ಆಗಿತ್ತು. 16 ರಿಂದ 19 ವರ್ಷದ ಒಳಗೆ ತನ್ನ ಪ್ರತಿಭೆಯ ಆಧಾರದ ಮೇಲೆ ತಂಡದಲ್ಲಿ ಎಂಟ್ರಿ ಗಿಟ್ಟಿಸಿಕೊಳ್ಳುವ ಹುಡುಗರ ಮಧ್ಯೆ ಧೋನಿ ವಯಸ್ಕನಂತಿದ್ದ. ಆದರೆ ಈತನಲ್ಲಿ ಮಧ್ಯಮ ವರ್ಗದ ಜನರ ಆಶೋತ್ತರ, ಅಸಹನೆ, ಯಾರಿಗೂ ಕ್ಯಾರೆ ಎನ್ನದ, ಆದರೆ ಹಿರಿತನಕ್ಕೆ ಅಗೌರವ ತೋರದ ಟಿಪಿಕಲ್ ಗುಣಗಳಿದ್ದವು. ಇದೇ ಗುಣಗಳೇ ಡ್ರೆಸ್ಸಿಂಗ್ ರೂಮಿನಲ್ಲಿ ಸಚಿನ್ಗೆ ಸಾಟಿಯಾಗಿ ನಿಂತು ತನಗನಿಸಿದ್ದನ್ನು ಹೇಳುವ, ವಾದ ಮಾಡುವ, ನೀವು ಮಾಡುತ್ತಿರುವುದು ತಪ್ಪು, ಅದು ಹೀಗಾದರೆ ಚೆನ್ನ ಎಂದು ಪಟ್ಟು ಹಿಡಿದು ಹೇಳಲು ಧೋನಿಗೆ ಪ್ರೇರಣೆಯಾದವು. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟಾಗ (2004) ಭಾರತ ಸಹ ಹೊಸ ಭರವಸೆಗಳ ಕಾಮನಬಿಲ್ಲು ಕಾಣುತ್ತಿತ್ತು. ಯುವಕರ ಜನಸಂಖ್ಯೆಯೂ ಹೆಚ್ಚಿತ್ತು. ಮಧ್ಯಮ ವರ್ಗವಂತೂ ಜಗತ್ತನ್ನೇ ಜಯಿಸುವ ತವಕದಲ್ಲಿತ್ತು. ಇಂತಹ ಸಂದರ್ಭದಲ್ಲಿಯೇ ಧೋನಿ ಪಾಕಿಸ್ತಾನದ ವಿರುದ್ಧ ಸಿಡಿಸಿದ ಶತಕ, ಆತನ ಕೇಶವಿನ್ಯಾಸ, ಬಿಡುಬೀಸು ಮನೋಭಾವ ಎಲ್ಲವೂ style statement ಎನ್ನುವಂತಾಗಿತ್ತು. ತಂಡಕ್ಕೆ ಕಾಲಿಟ್ಟು ಮೂರೇ ವರ್ಷಗಳಲ್ಲಿ ಧೋನಿ ನಾಯಕನಾಗಿದ್ದ. ಚೊಚ್ಚಲ ಟಿ-20 ವಿಶ್ವಕಪ್ ಎಲ್ಲ ತಂಡಗಳಿಗೂ ಹೊಸ ಸವಾಲಾಗಿತ್ತು. ಆಸ್ಟ್ರೇಲಿಯಾದಂತಹ ತಂಡ ರಿಕಿ ಪಾಟಿಂಗ್ ನೇತೃತ್ವದಲ್ಲಿ ಪೂರ್ಣ ಶಕ್ತಿಯೊಂದಿಗೆ ಸಹಿ ಹಾಕಿದರೆ ಭಾರತ ನವಯುವಕರ ತಂಡವನ್ನು ಪಣಕ್ಕಿಟ್ಟಿತ್ತು. ಧೋನಿ ಆ ಯುವಕರ ದಂಡಿಗೆ ನಾಯಕ. ಈ ತಂಡದಿಂದ ಹೆಚ್ಚಿನ ನಿರೀಕ್ಷೆಗಳು ಇರಲಿಲ್ಲ. ಆದರೂ ಧೋನಿ ಭಾರತಕ್ಕೆ ಎರಡನೇ ವಿಶ್ವಕಪ್ (ಅದಕ್ಕೆ ಮುನ್ನ ಭಾರತ 1983ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು) ತಂದ. ಪಾಕಿಸ್ತಾನದ ವಿರುದ್ಧ ಲೀಗ್ನ ಕಡೆ ಪಂದ್ಯದಲ್ಲಿ ಸೂಪರ್ ಓವರ್ ಬೌಲ್ ಮಾಡಿದ ರಾಬಿನ್ ಉತ್ತಪ್ಪ, ಪೂರ್ವಯೋಜಿತ ತಂತ್ರ ಎಂಬಂತೆ ಅನುಭವಿ ಬೌಲರ್ಗಳಿದ್ದರೂ ಪಾಕಿಸ್ತಾನದ ವಿರುದ್ಧ ಫೈನಲ್ ಪಂದ್ಯದ ಕಟ್ಟಕಡೆಯ ಓವರ್ ಎಸೆದು ಭಾರತಕ್ಕೆ ಜಯ ತಂದುಕೊಟ್ಟ ಜೋಗಿಂದರ್ ಶರ್ಮಾ ದಿಢೀರ್ ಹೀರೋಗಳಾದರು. ಈ ಅನಿರೀಕ್ಷಿತ ತಿರುವುಗಳು, ನಿರ್ಧಾರಗಳ ರೂವಾರಿ ಧೋನಿ ಸಹಜವಾಗಿಯೇ ಏಕದಿನ ಮತ್ತು ಟಿ-20ಗೆ ಖಾಯಂ ನಾಯಕನೂ ಆದ. ಆಗಲೇ ಧೋನಿ ಟೆಸ್ಟ್ ತಂಡದ ನಾಯಕನಾಗಬಹುದಾಗಿತ್ತು. ಆದರೆ, ಅನುಭವಿ ಅನಿಲ್ ಕುಂಬ್ಳೆ ಉಪಸ್ಥಿತಿ ಅದಕ್ಕೆ ಅಡ್ಡ ಬಂತು. ಹಾಗೆಂದು ಧೋನಿ ಕೊರಗಲಿಲ್ಲ, ಉಪನಾಯಕನಾಗಿ ತನ್ನ ಕರ್ತವ್ಯವನ್ನು ಅತ್ಯುತ್ತಮವಾಗಿಯೇ ನಿರ್ವಹಿಸಿದ.
"Earn your leadership everyday.' ಇದು ಬಾಸ್ಕೆಲ್ ಬಾಲ್ ದಂತಕಥೆ ಮೈಕೆಲ್ ಜೋರ್ಡನ್ ಪದೇ ಪದೆ ಹೇಳುತ್ತಿದ್ದ ಮಾತು. ನಾಯಕತ್ವ ಅಥವಾ ಒಂದು ಗುಂಪನ್ನು ಮುನ್ನಡೆಸುವ ಜವಾಬ್ದಾರಿ ಒಮ್ಮೆ ಸಿಕ್ಕಿದರೆ ಶಾಶ್ವತವಾಗಿ ತನ್ನಲ್ಲಿಯೇ ಉಳಿಯಬೇಕು ಎನ್ನುವ ಮನೋಭಾವ ತಪ್ಪು. ಈ ಹೊಣೆಗಾರಿಕೆಯನ್ನು ಪ್ರತಿ ದಿನ, ಪ್ರತಿ ಕ್ಷಣ ಗಳಿಸಬೇಕು. ಅಂದರೆ ಅದಕ್ಕೆ ತಕ್ಕ ಪರಿಶ್ರಮ ಪಡಬೇಕು. ಹಿಂದಿನ ವಿಶ್ವಾಸ ಗಳಿಸಬೇಕು. ಆ ಹೊಣೆಗಾರಿಕೆ ಬೇಡುವ ಬದಲಾವಣೆಗಳಿಗೆ ತೆರೆದುಕೊಳ್ಳಬೇಕು. ಆಗಷ್ಟೇ ಅದನ್ನು ಉಳಿಸಿಕೊಳ್ಳಲು ಸಾಧ್ಯ. ಧೋನಿ ವಿಷಯದಲ್ಲಿ ಹೇಳುವುದಾದರೆ ಇದು ಅಕ್ಷರಶಃ ಸತ್ಯ. ಆರಂಭದ ದಿನಗಳಲ್ಲಿ ಯಶಸ್ಸು ಧೋನಿಯನ್ನು ಬೆನ್ನತ್ತಿತ್ತು. ಕುಂಬ್ಳೆ ನಿರ್ಗಮನದ ನಂತರ ಪೂರ್ಣ ಪ್ರಮಾಣದ ನಾಯಕನಾದ ಮೇಲೆ ತಂಡ ವಿಶ್ವ ಟೆಸ್ಟ್ ರ್ಯಾಂಕಿಂಗ್ನಲ್ಲಿಯೂ ಅಗ್ರಜನಾಯಿತು. ಆಗೆಲ್ಲ ಧೋನಿಗೆ ತಂಡದಲ್ಲಿ ಸಚಿನ್, ದ್ರಾವಿಡ್, ಲಕ್ಷ್ಮಣ್ರ ಅನುಭವದ ಕುಶನ್ ಸಹ ಇತ್ತು. ಇದಾದ ಬಳಿಕ 2011ರ ಏಕದಿನ ವಿಶ್ವಕಪ್ನಲ್ಲಿ ಗೆಲುವು ರೊಟ್ಟಿಗೆ ತುಪ್ಪ ಸವರಿದಂತಾಯಿತು. ಇವೆಲ್ಲದರ ನಡುವೆಯೂ ಬೆನ್ನಿಗೆ ಬಿದ್ದಿದ್ದ ಯಶಸ್ಸು ಧೋನಿಯ ತಲೆಗೇರಲಿಲ್ಲ. ಈ ಅವಧಿಯಲ್ಲಿ ಧೋನಿ ಎಲ್ಲಿಯೂ ನಿಜವಾದ ಅರ್ಥದಲ್ಲಿ ಪರೀಕ್ಷೆಗೆ ಒಳಗಾಗಲಿಲ್ಲ. ಆದರೆ 2011 ಮತ್ತು 2012ರ ನಡುವೆ ಧೋನಿ ನಾಯಕತ್ವ ಹಲವಾರು ಪರೀಕ್ಷೆಗಳಿಗೆ ಗುರಿಯಾಯಿತು. ಅದರಲ್ಲಿಯೂ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಪ್ರವಾಸದಲ್ಲಿ ಅನುಭವಿಸಿದ ಮುಖಭಂಗ (ಸತತ ಎಂಟು ಟೆಸ್ಟ್ ಪಂದ್ಯಗಳ ಸೋಲು) ಧೋನಿಯನ್ನು ಮುಜುಗರಕ್ಕೆ ಈಡು ಮಾಡಿತ್ತು. ಇದಕ್ಕೆ ಪೂರಕವಾಗಿ ದಶಕಗಳ ನಂತರ ತವರಿನಲ್ಲಿ ಇಂಗ್ಲೆಂಡ್ಗೆ ತಲೆಬಾಗಿದ್ದು ಧೋನಿ ನಾಯಕತ್ವವನ್ನು ತೀವ್ರ ಟೀಕೆಗೆ ಗುರಿ ಮಾಡಿತ್ತು. ಆತನ ವಿರುದ್ಧ ಇಲ್ಲಸಲ್ಲದ ಕತೆಗಳು ಹುಟ್ಟಿಕೊಂಡವು. ಅದರಲ್ಲಿಯೂ ಇಂಗ್ಲೆಂಡ್ ವಿರುದ್ಧ ಹೈದರಾಬಾದ್ ಟೆಸ್ಟ್ ಪಂದ್ಯಕ್ಕೆ 48 ಗಂಟೆಗಳ ಮುನ್ನ ಲಕ್ಷ್ಮಣ್ ನಿವೃತ್ತಿ ಘೋಷಿಸಿದಾಗಲಂತೂ ಧೋನಿ ತಂಡದಲ್ಲಿ ಹಿರಿಯರನ್ನು ನಿರ್ಲಕ್ಷ್ಯ ಮಾಡುತ್ತಾನೆ ಎಂಬ ಪ್ರಚಾರ ಶುರುವಾಯಿತು. ಇದಕ್ಕೆ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ವೈಫಲ್ಯ ಮತ್ತು ಕಡೆಗಣನೆ ಉಪ್ಪು ಸವರಿತು. ಆದರೆ ಧೋನಿ ನಿಜಕ್ಕೂ ಕೃತಘ್ನ ವ್ಯಕ್ತಿಯಾ? 2008ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗಂಗೂಲಿ ಅದು ತನ್ನ ಕಡೆಯ ಟೆಸ್ಟ್ ಪಂದ್ಯ ಎಂದು ಘೋಷಿಸಿದಾಗ ನಾಯಕನ ಸ್ಥಾನದಲ್ಲಿದ್ದ ಧೋನಿ ಚಹಾ ನಂತರದ ಅಂತಿಮ ದಿನದಾಟದಲ್ಲಿ ನಾಯಕತ್ವ ವಹಿಸಿಕೊಳ್ಳುವಂತೆ ಗಂಗೂಲಿಯನ್ನು ಕೇಳುವ ಮೂಲಕ ವೈಶಾಲ್ಯತೆ ಮೆರೆದಿದ್ದ. ಮೇಲಾಗಿ ಮೂರನೇ ಟೆಸ್ಟ್ ಪಂದ್ಯದಲ್ಲಿಯೇ ನಿವೃತ್ತಿ ಘೋಷಿಸಿದ್ದ ಅನಿಲ್ ಕುಂಬ್ಳೆ ಅವರನ್ನು ನಾಗ್ಪುರಕ್ಕೆ ಬರುವಂತೆ ಒತ್ತಾಯಿಸಿ ಸರಣಿ ಜಯಕ್ಕೆ ಕೊಡುವ ಟ್ರೋಫಿಯನ್ನು ಅವರೇ ಸ್ವೀಕರಿಸುವಂತೆ ನೋಡಿಕೊಂಡ. ಇದು ಕೃತಘ್ನ ವ್ಯಕ್ತಿಯ ಲಕ್ಷಣವೇ? ಇನ್ನು ಯಾವುದೇ ಆಟಗಾರ, ಆತ ಎಷ್ಟೇ ಎತ್ತರದ ಆಟಗಾರನಾಗಿದ್ದರೂ ಸತತ ವೈಫಲ್ಯ ಎದುರಿಸಿದಾಗ, ತಂಡಕ್ಕೆ ಹೊರೆ ಎನಿಸಿದಾಗ ಯಾವ ನಾಯಕ ತಾನೇ ಆತನನ್ನು ರಕ್ಷಿಸಲು ಸಾಧ್ಯ. ಸೆಹ್ವಾಗ್ ಆಗಲಿ, ಗಂಭೀರ್ ಆಗಲಿ ಈ ಸತ್ಯವನ್ನು ಅರಿಯದಂತಹ ಮುಗ್ಧರಾದರೆ ಅದಕ್ಕೆ ಧೋನಿಯನ್ನು ದೂಷಿಸುವುದರಲ್ಲಿ ಅರ್ಥವಾದರೂ ಏನಿದೆ? ಅವರ ಪರವಾಗಿ ಧೋನಿ ಬ್ಯಾಟ್ ಮಾಡಲು ಸಾಧ್ಯವೆ? ಖಂಡಿತಾ ಧೋನಿ ಅಂತಹ ದುಸ್ಸಾಹಸಕ್ಕೆ ಕೈಹಾಕಲಿಲ್ಲ. ಆದರೆ ತಂಡದಿಂದ ಹೊರೆ ಇಳಿಸಲು ಆಯ್ಕೆದಾರರು ಮುಂದಾದಾಗ ಅದಕ್ಕೆ ಅಡ್ಡಿಪಡಿಸಲೂ ಇಲ್ಲ. ಇದೆಲ್ಲದರ ಪರಿಣಾಮ ತಂಡ ಬಹುತೇಕ ಯುವಕರ ಬಳಗವಾಗಿದೆ. ಇದರಿಂದ ಧೋನಿ ಮೇಲಿನ ಹೊಣೆಗಾರಿಕೆಯೂ ಹೆಚ್ಚಿದೆ. ಇದಕ್ಕೆ ತಕ್ಕಂತೆ ಧೋನಿ ಸಹ ಬದಲಾಗಿದ್ದಾನೆ. ವಿಕೆಟ್ ಹಿಂದೆ ನಿಂತು ನಿರ್ಲಿಪ್ತನಾಗಿ ಆಗು ಹೋಗುಗಳನ್ನು ವೀಕ್ಷಿಸುತ್ತಿದ್ದ. ಹೆಚ್ಚೆಂದರೆ ಸ್ಲಿಪ್ನಲ್ಲಿ ಇರುತ್ತಿದ್ದ ದ್ರಾವಿಡ್, ಸಚಿನ್ರಿಂದ ಅಗತ್ಯ ಬಿದ್ದಾಗ ಸಲಹೆ-ಸೂಚನೆ ಪಡೆಯುತ್ತಿದ್ದ, ಹೆಚ್ಚಾಗಿ ಭಾವನೆಗಳನ್ನು ಪ್ರಕಟಿಸಿದೆ ಅಡಕವಾಗಿರುತ್ತಿದ್ದ ಧೋನಿ ಇಂದು ಬದಲಾಗಿದ್ದಾನೆ. ಇಂದು ಅಶ್ವಿನ್ ಆಗಲಿ, ಜಡೇಜಾ ಆಗಲಿ ಫೀಲ್ಡ್ ಸ್ವರೂಪಕ್ಕೆ ತಕ್ಕಂತೆ ಚೆಂಡೆಸೆಯದಿದ್ದಾಗ ಅವರನ್ನು ಗದರುತ್ತಾನೆ, ತನಗೆ ಹೀಗೆ ಆಗಬೇಕು ಎಂದು ಮನದಟ್ಟು ಮಾಡಿಕೊಡುತ್ತಾನೆ, ಭಾವನೆಗಳನ್ನು ಅದುಮಿಟ್ಟುಕೊಳ್ಳುವ ಬದಲು ಹೊರ ಹಾಕುತ್ತಾನೆ. ಇಂದು ಧೋನಿ ಹಿಂದೆಂದಿಗಿಂತಲೂ aggressive ಆಗಿ ಕಾಣುತ್ತಿದ್ದಾನೆ. ಇನ್ನು ಧೋನಿ ತನಗೆ ಬೇಕಾದ, ತನಗೆ ಒಪ್ಪುವ ಆಟಗಾರರಿಗಷ್ಟೇ ಮಣೆ ಹಾಕುತ್ತಾನೆ ಎಂಬ ಗುಸುಗುಸು ಇದೆ. ಇದರಲ್ಲಿ ತಪ್ಪೇನು? ಧೋನಿ ಒತ್ತಾಸೆ ಮೇರೆಗೆ ಬಂದಿರುವ ಅಶ್ವಿನ್ ಅಥವಾ ಜಡೇಜಾ ತಂಡದ ಪ್ರತಿ ಜಯದಲ್ಲಿಯೂ ತಮ್ಮ ಕಾಣಿಕೆ ನೀಡುತ್ತಲೇ ಬಂದಿಲ್ಲವೇ? ಅಷ್ಟೇಕೆ ಆಟದ ಬಗ್ಗೆ ಯಾವುದೇ ಚಕಾರ ಇಲ್ಲದಿದ್ದರೂ ವ್ಯವಧಾನ ಮತ್ತು ಸಿಕ್ಕ ಅವಕಾಶಗಳ ಸದ್ಬಳಕೆಯಲ್ಲಿ ವಿಫಲನಾಗಿದ್ದ ರೋಹಿತ್ ಶರ್ಮಾ ಇಂದು ಇದೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಓರ್ವ ಸಮರ್ಥ ಆರಂಭಿಕನಾಗಿ ಹೊರಹೊಮ್ಮಿದ್ದಾದರೂ ಹೇಗೆ? ಮಧ್ಯಮ ಕ್ರಮಾಂಕದಲ್ಲೇ ತಿಣುಕಾಡುತ್ತಿದ್ದ, ವಿಶ್ವಾಸ ಕಳೆದುಕೊಂಡಿದ್ದ ರೋಹಿತ್ನನ್ನು ಹುರಿದುಂಬಿಸಿ ಆರಂಭಿಕನಾಗಿ ಕಣಕ್ಕಿಳಿಸಿದ್ದರ ಹಿಂದೆ ಧೋನಿ ಸದುದ್ದೇಶವಲ್ಲದೆ ಇನ್ನೇನಿರಲು ಸಾಧ್ಯ?
ಈ ಹಿಂದೆ ಅಜರುದ್ದೀನ್ ಕಾಲದಲ್ಲಿ ಶ್ರೀನಾಥ್, ಕುಂಬ್ಳೆ, ಗಂಗೂಲಿ ಯುಗದಲ್ಲಿ ಯುವರಾಜ್, ಹರ್ಭಜನ್, ಹೀಗೆ ನಾಯಕನ ಫೇವರಿಟ್ ಆಟಗಾರರಿರಲ್ಲವೇ? ಅದರಿಂದ ತಂಡದ ಪ್ರದರ್ಶನ ಕುಂಠಿತವಾಗಿತ್ತೆ? ಹಾಗಾದಾಗ ಧೋನಿ ವಿಷಯದಲ್ಲಷ್ಟೇ ಏಕೀ ಕ್ಯಾತೆ? ತಿಂಗಳ ಹಿಂದಷ್ಟೇ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣ ಬಯಲಾಗಿ ಕ್ರಿಕೆಟಿಗರನ್ನು ಜನ ಸಂಶಯದಿಂದ ನೋಡುತ್ತಿದ್ದಾಗ ಚಾಂಪಿಯನ್ಸ್ ಟ್ರೋಫಿ ಜಯ ಜೊಳ್ಳನ್ನು ಜರಡಿಯಾಡಿದೆ. ಈ ಹಿಂದೆಲ್ಲ ಭಾರತ ತಂಡ ಮೈದಾನಕ್ಕಿಳಿದಾಗ ಎಲ್ಲರ ದೃಷ್ಟಿ ತಂಡದಲ್ಲಿದ್ದ ಬೆರಳೆಣಿಕೆಯ ಮಂದಿ ಆಟಗಾರರ ಮೇಲಿರುತ್ತಿತ್ತು. ಅದು ಸಚಿನ್ ಇರಬಹುದು, ದ್ರಾವಿಡ್, ಲಕ್ಷ್ಮಣ್, ಗಂಗೂಲಿ, ಕುಂಬ್ಳೆ ಇರಬಹುದು ಅಥವಾ ಅದಕ್ಕೂ ಮುನ್ನ ವಿಶ್ವನಾಥ್, ಗವಾಸ್ಕರ್, ಕಪಿಲ್ದೇವ್, ವೆಂಗ್ಸರ್ಕಾರ್ ಇರಬಹುದು. ಇವರು ವಿಫಲರಾದರೆ ತಂಡದ ಕಥೆ ಮುಗಿಯಿತು ಎಂಬ ಭಾವನೆಯೇ ಇರುತ್ತಿತ್ತು. ಆದರೆ ಈಗಿನ ತಂಡ ನೋಡಿ. ಯಾರು ಬೇಕಾದರೂ ಆಡಿ ಗೆಲ್ಲಿಸಬಹುದು ಎನಿಸುವುದಿಲ್ಲವೇ? ಹಾಗಾದರೆ ಇದರ ಪೂರ್ಣ ಶ್ರೇಯ ಧೋನಿಗೆ ಸೇರುತ್ತದೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಜಯದ ಬಳಿಕ ಧೋನಿ "We believe in each other and we believe in the process. We will take each game in the right frame of mind' (ತಂಡದಲ್ಲಿ ಪ್ರತಿಯೊಬ್ಬರಿಗೂ ಪರಸ್ಪರರ ಶಕ್ತಿ-ಸಾಮರ್ಥ್ಯದ ಮೇಲೆ ನಂಬಿಕೆ ಇದೆ. ಅನುಸರಿಸಬೇಕಾದ ತಂತ್ರಗಳ ಬಗ್ಗೆ ನಂಬಿಕೆ ಇದೆ.) ಎಂದು ಹೇಳಿದ್ದರು. ನಾವು ಅವರಿಗೆ ಹೇಳಬೇಕಿದ್ದಿಷ್ಟೇ. We believe in you!
- ಕೆ.ಎಸ್.ಜಗನ್ನಾಥ್
jagannath.kudinoor@gmail.com