ಅಂಕಣಗಳು

ಮಿತ್ರಪಕ್ಷಗಳ ಬಗ್ಗೆ ಚಿಂತೆ, ಸದ್ಯಕ್ಕೆ ಬಿಜೆಪಿಗಿಲ್ಲವಂತೆ

Published On :

ನನ್ನ ಕಾಲೇಜು ದಿನಗಳವು. ಚರ್ಚಾ ಸ್ಪರ್ಧೆಯ ನೇತೃತ್ವ ವಹಿಸಿರುತ್ತಿದ್ದ ನನ್ನ ಸೀನಿಯರ್, ಒಂದು ವೇಳೆ ಚರ್ಚೆಗೆ ಸರಿಯಾದ ವಿಷಯವನ್ನು ಆಯ್ಕೆಮಾಡುವಲ್ಲಿ ವಿಫಲನಾದನೆಂದರೆ, ಕೊನೆಗೆ ನಿರ್ವಾಹವಿಲ್ಲದೆ 'ಮದುವೆಯಾದ ನಂತರ ಪ್ರೀತಿಸುವುದಕ್ಕಿಂತ ಪ್ರೀತಿಸಿ ಮದುವೆಯಾಗುವುದು ಒಳ್ಳೆಯದು' ಎನ್ನುವ ವಿಷಯ ಹಿಡಿದುಕೊಂಡು ಇಂಗ್ಲಿಷ್ ಅಧ್ಯಾಪಕರುಗಳ ಹತ್ತಿರ ದೌಡಾಯಿಸುತ್ತಿದ್ದ.  ಹಿಂದಿನ ಅನೇಕ ವರ್ಷಗಳು ಇದೇ ವಿಷಯದ ಮೇಲೆ ಚರ್ಚೆಗಳಾಗಿ ಅವೆಲ್ಲ ಯಶಸ್ವಿಯಾಗಿವೆ ಎನ್ನುವುದನ್ನು ಅರಿತಿದ್ದ ಇಂಗ್ಲಿಷ್ ಅಧ್ಯಾಪಕರು ಆ ವಿಷಯಕ್ಕೆ ಸಮ್ಮತಿ ನೀಡಿಬಿಡುತ್ತಿದ್ದರು.
ಸದ್ಯಕ್ಕೆ ಅದೇ ಧಾಟಿಯ ವಿಷಯವೊಂದು ಭಾರತೀಯ ಜನತಾ ಪಾರ್ಟಿಯಲ್ಲಿ ಚರ್ಚೆಯಾಗುತ್ತಿದೆ. ಈ ಚರ್ಚೆಯಲ್ಲಿ ಲಾಲ್ ಕೃಷ್ಣ ಆಡ್ವಾಣಿ ಸೇರಿದಂತೆ ನರೇಂದ್ರ ಮೋದಿಯವರ ಬೆಂಬಲಿಗರೂ ಇದ್ದಾರೆ. ಅವರ ಚರ್ಚಾ ವಿಷಯ: 'ಮುಂದೆ ಮಿತ್ರಪಕ್ಷಗಳನ್ನು ಹುಡುಕುವುದು ಕಷ್ಟವಾದ್ದರಿಂದ ಈಗಲೇ ಅವುಗಳನ್ನು ಕಲೆಹಾಕುವುದು ಒಳ್ಳೆಯದಾ?' ಎಂಬುದು.
ಮರಾಠಿ ದಿನಪತ್ರಿಕೆ 'ಪುಢಾರಿ'ಯ ಮಾಲೀಕ ಪ್ರತಾಪ್ಸಿಂಹ ಜಾಧವ್ರೊಂದಿಗೆ ಮಾತನಾಡುತ್ತಾ ಮೋದಿ, 'ಪಕ್ಷ ತನ್ನ ಬಲದಿಂದ ಉತ್ತಮ ಸಾಧನೆ ಮಾಡಿದರೆ, ಅದಕ್ಕೆ ಸರ್ಕಾರ ರಚಿಸುವಾಗ ಸ್ನೇಹಿತರು ಸಿಕ್ಕೇ ಸಿಗುತ್ತಾರೆ' ಎಂದು ಹೇಳಿದ್ದರು.
ಇದಕ್ಕವರು, 1996ರಲ್ಲಿ ಏಕಾಂಗಿಯಾಗಿದ್ದ ಬಿಜೆಪಿಗೆ ಮುಂದಿನ ಕೆಲವೇ ದಿನಗಳಲ್ಲಿ 23 ಪಕ್ಷಗಳಿಂದ ಬೆಂಬಲ ದೊರೆತು, ಎನ್ಡಿಎ ಒಕ್ಕೂಟದ ಸ್ಫಾಪನೆಯಾಗಿದ್ದರ ಉದಾಹರಣೆ ನೀಡಿದರು. ಬಿಜೆಪಿಗೆ ನಿರ್ಣಾಯಕ ಗೆಲುವು ಸಾಧಿಸಲಾಗದಿದ್ದರೂ ಕೊನೆಪಕ್ಷ ಪ್ರಬಲ ಗೆಲವನ್ನಾದರೂ ಅದು ಗಳಿಸಬೇಕು ಎಂದು ಮೋದಿ ಭಾವಿಸುತ್ತಾರೆ. ಸದ್ಯದ ಬಿಜೆಪಿ ಪರಿಸ್ಥಿತಿಯನ್ನು ನೋಡಿದಾಗ, ಅದು ಆಡ್ವಾಣಿ ಅವರ ನಾಯಕತ್ವದಲ್ಲಿಯೇ ಮುಂದುವರಿದಿದ್ದರೆ ಆ ಹಂತವನ್ನು ತಲುಪಲು ಸಾಧ್ಯವಾಗುವುದಿಲ್ಲ ಎಂದನಿಸದೇ ಇರದು.
ಬಿಜೆಪಿ ಹಿಂದಕ್ಕೆ ತಿರುಗಿ ಮಿತ್ರಪಕ್ಷಗಳನ್ನು ಜೊತೆಮಾಡಿಕೊಳ್ಳಬಾರದು ಎಂದು ಮೋದಿ ಬಯಸುತ್ತಿದ್ದಾರೆ ಎನ್ನುವುದಂತೂ ನಿಶ್ಚಿತ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, 'ಪ್ರೀತಿಯೇನಿದ್ದರೂ ನಂತರ, ಅವಶ್ಯಕತೆ ಬಿದ್ದರೆ ಮುಂದೆ ಮುಂದೊಂದು ದಿನ ಮದುವೆ.'
ನರೇಂದ್ರ ಮೋದಿಯವರಿಗೆ ಹೋಲಿಸಿದಾಗ ಆಡ್ವಾಣಿ ಸಾಧಾರಣ ನಾಯಕನಾಗಿ ಕಾಣಿಸತೊಡಗಿದ್ದಾರೆ. ಕಾಂಗ್ರೆಸ್ನಂತಹ ಶಕ್ತಿಶಾಲಿ ಪಕ್ಷವನ್ನು ಸೋಲಿಸಬೇಕಾದರೆ ಮಿತ್ರಪಕ್ಷಗಳು ಬೇಕು ಎಂದು ಅಂದು ಜನ ಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಹೇಳಿದ್ದ ಮಾತನ್ನೇ ಈಗ ಆಡ್ವಾಣಿ ಪುನರಾವರ್ತಿಸುತ್ತಿದ್ದಾರೆ. ಆದರೆ ಮೋದಿಯವರ ಯೋಚನೆ ಬೇರೆಯ ರೀತಿಯಲ್ಲಿದೆ. ಅದನ್ನವರು ಬಹುತೇಕ ಸಂದರ್ಭದಲ್ಲಿ ಹೇಳಿದ್ದಾರೆ ಕೂಡ.
ಚುನಾವಣೆಗಳು ಹತ್ತಿರವಾದಾಗ ಒಬ್ಬಂಟಿಯಾಗಿ ಇಕ್ಕಟ್ಟಿಗೇ ಸಿಲುಕುವ ಕೆಲಸವನ್ನು ಬಿಜೆಪಿ ಮಾಡಬಾರದು. ತೃಣಮೂಲ ಕಾಂಗ್ರೆಸ್, ಜೆಡಿಯು ಮತ್ತು ಮಧ್ಯದಲ್ಲಿ ನ್ಯಾಷನಲ್ ಕಾನ್ಫರೆನ್ಸ್ನಂತಹ ಹಲವಾರು ಸ್ನೇಹಿತರನ್ನು ಕಳೆದುಕೊಂಡಿದ್ದರಿಂದ ಪಕ್ಷ ಈಗ ದುರ್ಬಲವಾಗಿದೆ ಎಂದು ಆಡ್ವಾಣಿ ಹೇಳುತ್ತಿದ್ದಾರೆ.
ಆಡ್ವಾಣಿಯವರ ಪ್ರಮುಖ ವಾದ, ನನ್ನ ಕಾಲೇಜಿನಲ್ಲಿ ನಡೆಯುತ್ತಿದ್ದ ಚರ್ಚೆಗೆ ಹತ್ತಿರವಾಗಿದೆ. ಈಗಲೇ ಪ್ರೀತಿಸಿ, ಈಗಲೇ ಮದುವೆಯಾಗಿ! ಹಾಗೆ ಮಾಡಿದರೆ ಮತದಾರರಿಗೆ ಸ್ಪಷ್ಟ ಸಂದೇಶ ಕಳುಹಿಸಿದಂತಾಗುತ್ತದೆ. ಸದ್ಯ ದೇಶದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಪ್ರಬಲವಾಗೇ ಇರುವುದರಿಂದ ಎನ್ಡಿಎ ಮತ್ತೆ ಅಧಿಕಾರಕ್ಕೆ ಬರುವುದು ಸುಲಭವಾಗುತ್ತದೆ ಎನ್ನುವುದು ಆಡ್ವಾಣಿಯವರ ಲೆಕ್ಕಾಚಾರ.
ಕಾಂಗ್ರೆಸ್ಗೆ ಸವಾಲು ಎಸೆಯಲು ಹೊಸ ಗೆಳೆಯರನ್ನು ಹುಡುಕುವುದು ಮತ್ತು ಈಗಿರುವ ಗೆಳೆಯರೊಡನೆ ಸಂಬಂಧಗಟ್ಟಿಗೊಳಿಸಿಕೊಳ್ಳುವ ಅವಶ್ಯಕತೆಯ ಬಗ್ಗೆ ಆಡ್ವಾಣಿಯವರು ಮಾತನಾಡಿದಾಗ, ಹಿರಿಯ ನಾಯಕರಾದ ರಾಜ್ನಾಥ್ ಸಿಂಗ್ ಮತ್ತು ವೆಂಕಯ್ಯ ನಾಯ್ಡು ಅವರು ಸ್ಥಳದಲ್ಲಿ ಉಪಸ್ಥಿತರಿದ್ದರು. ಆದರೆ ವರದಿಗಳ ಪ್ರಕಾರ, ರಾಜ್ನಾಥ್ ಸಿಂಗ್ ಆಡ್ವಾಣಿಯವರ ಹೇಳಿಕೆಯನ್ನು ಕಡೆಗಣಿಸಿದರೆ, ಮೋದಿಯವರ ಆಯ್ಕೆಯ ಬಗ್ಗೆ ಪಕ್ಷದಲ್ಲಿ 'ಅಗಾಧ ಒಮ್ಮತವಿದೆ' ಎಂದು ನಾಯ್ಡು ಹೇಳಿದ್ದಾರೆ.
'ಮೋದಿ' ವಿಚಾರದಲ್ಲಿ ಬಿಜೆಪಿ ದೃಢ ನಿಲುವು ತಾಳಿದೆ ಎನ್ನುವುದಂತೂ ಸ್ಪಷ್ಟ. ಹಾಗಾಗೆ ನಾಯ್ಡು ಅವರು ಎಲ್ಲರಲ್ಲೂ ಒಮ್ಮತವಿದೆ ಎನ್ನುವ ಮೂಲಕ, ಸ್ಪಷ್ಟ ಸಂದೇಶವನ್ನು ಪಕ್ಷದ ಹಿರಿಯ ನಾಯಕನಿಗೆ ಕಳುಹಿಸಿದ್ದಾರೆ. ಇನ್ನು ಅದೇ ದಿನದಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋದಿ, ಅವಶ್ಯಕತೆ ಬಿದ್ದಾಗ ಮುಂದೊಂದು ದಿನ ಗೆಳೆಯರು ಬಂದೇ ಬರುತ್ತಾರೆ ಎಂದು ಹೇಳಿದ್ದಾರೆ. 'ಪುಢಾರಿ'ಯಲ್ಲಿ ಬಂದ ವರದಿಯನ್ನು ನೋಡಿದಾಗ, ಬಿಜೆಪಿ ತನ್ನ ಬಲದ ಮೇಲೆಯೇ ಅಧಿಕಾರಕ್ಕೆ ಬರುತ್ತದೆ ಎಂದು ಮೋದಿ ಹೇಳಿದ್ದರೂ, ಮಿತ್ರಪಕ್ಷಗಳ ಅಗತ್ಯವನ್ನೂ ಅವರು ತಳ್ಳಿಹಾಕಿಲ್ಲ ಎನ್ನುವುದೂ ಸ್ಪಷ್ಟವಾಗುತ್ತದೆ.
ಆಡ್ವಾಣಿ ಮತ್ತು ಜೆಡಿಯು ನಂತಹ ಇತರ ಮಿತ್ರಪಕ್ಷಗಳು, ಗುಜರಾತ್ ಮಾದರಿ ಅಭಿವೃದ್ಧಿಯನ್ನು ಇಡೀ ರಾಷ್ಟ್ರಕ್ಕೆ ಅಳವಡಿಸುವುದು ಸಾಧ್ಯವಿಲ್ಲ ಎನ್ನುತ್ತವೆ. ರಾಷ್ಟ್ರೀಯ ಮಟ್ಟದ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನತ್ತ ಕೊಂಡೊಯ್ಯುವ ಸಾಮರ್ಥ್ಯ ಮೋದಿಗೆ ಇಲ್ಲವೆಂದೇ ಅವುಗಳು ಭಾವಿಸುತ್ತವೆ.
2004ರ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿದಾಗ, ಶಿವಸೇನಾ ನಾಯಕ ಬಾಳ ಠಾಕ್ರೆ, ಈಗ ಮೋದಿಯವರು ಹೇಳಿದಂತಹ ಮಾತನ್ನೇ ಹೇಳಿದ್ದರು: 'ಕಳೆದ ಕೆಲವು ದಶಕಗಳಲ್ಲಿ ಕಾಂಗ್ರೆಸ್ಗೆ ಸರಿಸಮನಾಗಿ ನಿಲ್ಲಬಲ್ಲ ಸಾಮರ್ಥ್ಯವಿದೆಯೆಂದು ತೋರಿಸಿಕೊಂಡ ಏಕೈಕ ಪಕ್ಷ ಬಿಜೆಪಿ ಮಾತ್ರ. ಒಂದು ವೇಳೆ ಇದು ಅಧಿಕಾರ ಕಳೆದುಕೊಂಡರೆ, ಎನ್ಡಿಎ ಒಕ್ಕೂಟ ದುರ್ಬಲವಾಗುತ್ತದೆ ಮತ್ತು ಚಿಕ್ಕ ಪುಟ್ಟ ಪಕ್ಷಗಳು ತಮ್ಮ ಅಜೆಂಡಾದ ಬೆನ್ಹತ್ತಿ ಹೋಗುತ್ತವೆ. ಒಮ್ಮೆ ಅದು ಅಧಿಕಾರಕ್ಕೆ ಹತ್ತಿರ ಬಂದು ನಿಂತಿತೆಂದರೆ ದೂರವಾದ ಪಕ್ಷಗಳೆಲ್ಲ ಮತ್ತೆ ತಿರುಗಿ ಬಿಜೆಪಿಯ ಬಳಿ ಓಡಿಬರುತ್ತವೆ.'
ಭಾರತದಲ್ಲಿ ರಾಜಕೀಯ ಹೇಗಿದೆ ಎನ್ನುವುದರ ಬಗ್ಗೆ ಠಾಕ್ರೆ ಮುಖ್ಯವಾಗಿ ಹೇಳುತ್ತಿದ್ದರು. ಅಧಿಕಾರವೆಂಬುದು ನೊಣ ಕಾಗದವಿದ್ದಂತೆ(ಫ್ಲೈ ಪೇಪರ್) ಚಿಕ್ಕ ಪಕ್ಷಗಳು ಅದಕ್ಕೆ ಆಕರ್ಷಿತವಾಗಿ ಅದರ ಬಳಿ ಹೋಗುತ್ತವೆ, ಕೊನೆಗೆ ಬೆಲೆಯನ್ನೂ ತೆರುತ್ತವೆ. ಇದರಿಂದಾಗಿ ಕೆಲವೊಂದು ಬಾರಿ ಪ್ರಮುಖ ಪಕ್ಷಗಳೂ ಅಧಿಕಾರ ಕಳೆದುಕೊಂಡದ್ದೂ ಇದೆ. ರಾಜಕೀಯ ಪಕ್ಷಗಳ ಬದಲಾಗುವ ನಿರ್ಧಾರಗಳು, ದ್ವಂದ್ವ ದೃಷ್ಟಿಕೋನಗಳನ್ನೆಲ್ಲ ನೋಡಿದಾಗ ಹೇಗೆ ಅವುಗಳಿಗೂ ಮತ್ತು ಅವು ನೆಚ್ಚಿಕೊಂಡ ಸಿದ್ಧಾಂತಕ್ಕೂ ತಾಳೆಯಾಗುವುದಿಲ್ಲ ಎನ್ನುವುದು ಗೊತ್ತಾಗುತ್ತದೆ.
ಬಿಜೆಪಿಯೊಂದಿಗೆ ಮದುವೆಯಾದ ಬಹುತೇಕ ಪಕ್ಷಗಳು ಅದಾಗಲೇ ಹೊರನಡೆದಿವೆ(ಶಿರೋಮಣಿ ಅಕಾಲಿ ದಳ ಮತ್ತು ಶಿವಸೇನೆಯನ್ನು ಹೊರತುಪಡಿಸಿ), ಈಗ ಜೆಡಿಯು ಕೂಡ ಬಿಜೆಪಿಗೆ ಕೈಕೊಟ್ಟಿದೆ. ಬಿಜೆಪಿ ಅಧಿಕಾರಕ್ಕೆ ಬರಬೇಕೆಂದರೆ ಅದು ಶಕ್ತಿಯುತ ನಾಯಕನಾಗಬೇಕು ಎಂದು ಅಂದು ಬಾಳ ಠಾಕ್ರೆ ಹೇಳಿದ ಮಾತನ್ನು ಈಗಲಾದರೂ ಅರ್ಥಮಾಡಿಕೊಳ್ಳಬೇಕಿದೆ. ಆ ಕೆಲಸವನ್ನು ಮೋದಿ ಸಮರ್ಥವಾಗಿ ನಿಭಾಯಿಸಬಲ್ಲರು ಎಂಬುದು ಬಿಜೆಪಿಯ ಭಾವನೆ. ಒಂದು ವೇಳೆ ಅದು ಅಂಕಿಸಂಖ್ಯೆಯಲ್ಲಿ ಹಿಂದೆ ಬಿತ್ತೆಂದರೆ ಮಿತ್ರಪಕ್ಷಗಳನ್ನು ಕಲೆಹಾಕುವಲ್ಲೂ ಇಕ್ಕಟ್ಟಿಗೆ ಸಿಲುಕಲಿದೆ.

- ಮಹೇಶ್ ವಿಜಾಪುರ್ಕರ್
ಅಂಕಣಕಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.