ಅಂಕಣಗಳು

ಮಾನವೀಯ ಕಳಕಳಿಯಿಂದ ಮಾಡಿದ ಕೆಲಸಕ್ಕೂ ಅಪಸ್ವರವೇಕೆ?

Published On :

ಉತ್ತರಾಖಂಡದ ಸಿಎಂ ಆ ಜಲಪ್ರಳಯದ ಅಬ್ಬರ ಕಂಡು ದಿಕ್ಕು ತೋಚದೆ ಕೂತುಬಿಟ್ಟರು. ರಾಹುಲ್ ಗಾಂಧಿಅವರ 'ಯುವ ಕಾಂಗ್ರೆಸ್ ಪಡೆ'ಗೆ ಜಲ ಪ್ರಳಯದ ದಿಕ್ಕು ಯಾವುದೆಂದು ಕಂಡು ಹಿಡಿಯುವುದಕ್ಕೂ ಆಗಲಿಲ್ಲ.
ಉತ್ತರಾಖಂಡದ ಜಲಪ್ರಳಯದ ಮಧ್ಯೆ  ಸಿಕ್ಕಿಕೊಂಡಿರುವ ಯಾತ್ರಾರ್ಥಿಗಳ ಪರಿಸ್ಥಿತಿಯನ್ನು ತಿಳಿಯಲು ಹಾಗೂ ಅಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯವನ್ನು ಖುದ್ದಾಗಿ ವೀಕ್ಷಿಸಲು ನರೇಂದ್ರ ಮೋದಿಯವರು ಉತ್ತರಾಖಂಡಕ್ಕೆ ತೆರಳಲಿದ್ದಾರೆ ಎಂದು ನಾಲ್ಕು ದಿನಗಳ ಹಿಂದೆ ಟಿ.ವಿ. ಚಾನೆಲ್‌ಗಳಲ್ಲಿ ಸುದ್ದಿ ಪ್ರಕಟವಾಯಿತಲ್ಲ? ಅದಾದ ಕೆಲವೇ ಹೊತ್ತಿಗೆ ರಾಜಕೀಯ ವಲಯಗಳಲ್ಲಿ ಸಂಚಲನವೇ ನಡೆದುಹೋಯಿತು. ಮೋದಿಯವರು ಪ್ರಚಾರದ ಹುಚ್ಚಿನಿಂದಲೇ ಈ ಯಾತ್ರೆ ಕೈಗೊಂಡಿದ್ದಾರೆ ಎಂದು ಅವರ ವಿರೋಧಿಗಳೆಲ್ಲ ಒಕ್ಕೊರಲಿನಿಂದ ಹೇಳಿಬಿಟ್ಟರು. ಈ ಸಂದರ್ಭದಲ್ಲಿ ಮೋದಿಯವರು ನಿಜವಾಗಿಯೂ ಪ್ರಚಾರದ ಉದ್ದೇಶದಿಂದಲೇ ಉತ್ತರಾಖಂಡಕ್ಕೆ ತೇರಳುತ್ತಿದ್ದಾರೋ ಅಥವಾ ಅವರ ಜನಪ್ರಿಯತೆಯನ್ನು ಸಹಿಸಲಾಗದ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಮುಖಂಡರು ಸುಮ್ಮನೇ ಬಡಬಡಿಸುತ್ತಿದ್ದಾರೆಯೇ ಎಂಬುದನ್ನು ಪ್ರತ್ಯಕ್ಷ ನೋಡಿಯೇ ತಿಳಿಯಬೇಕು ಎಂದು ನಾನು ನಿರ್ಧರಿಸಿದೆ.
ಒಂದು ವಿಷಯವನ್ನು ಮೊದಲೇ ಸ್ಪಷ್ಟಪಡಿಸುತ್ತೇನೆ: ಮೋದಿಯವರನ್ನು ಅಗ್ಗದ ಪ್ರಚಾರಕ್ಕಾಗಿ ಹಾತೊರೆಯುವ ಮನುಷ್ಯ, ಹಿಂಬಾಲಕರುಗಳಿಂದ ರ್ಯಾಂಬೊ, ಸೂಪರ್ ಮ್ಯಾನ್ ಎಂದೆಲ್ಲಾ ಕರೆಸಿಕೊಳ್ಳುವ ಆಸಾಮಿ ಎಂದೆಲ್ಲಾ ಟೀಕಿಸುವವರುಂಟು. ಆದರೆ, ಅವರ ಮಾತುಗಳಿಗೆ ಯಾವುದೇ ಆಧಾರವು ಇಲ್ಲ ಎಂಬುದು ಬಹಿರಂಗ ಸತ್ಯ. ಇವತ್ತು ದೇಶದ ಉಳಿದೆಲ್ಲ ರಾಜ್ಯಗಳಿಗಿಂತ ಪ್ರಗತಿಯ ವಿಷಯದಲ್ಲಿ ಗುಜರಾತ್ ಮುಂಚೂಣಿಯಲ್ಲಿದೆ. ಆದರೆ ಅದಕ್ಕೆ ನರೇಂದ್ರ ಮೋದಿಯವರ ಸಮರ್ಥ, ದೂರದೃಷ್ಟಿ ಹೊಂದಿದ ರಾಜಕೀಯ ನಿಲುವೇ ಕಾರಣ. ವಾಸ್ತವ ಹೀಗಿರುವಾಗ, ನರೇಂದ್ರ ಮೋದಿಯವರನ್ನು ಅವರ ಅಭಿಮಾನಿಗಳು 'ಸೂಪರ್ ಮ್ಯಾನ್, ರ್ಯಾಂಬೊ ಎಂದು ಕರೆದರೆ ತಪ್ಪೇನಿದೆ?'
ಗುಜರಾತ್‌ನ ವಿಪತ್ತು ನಿರ್ವಹಣಾ ಸಮಿತಿಯು ಒಂದು ವೃತ್ತಿಪರ ಸಂಸ್ಥೆಗಿಂತ ಹೆಚ್ಚು ಮುತುವರ್ಜಿಯಿಂದ ದಿನದ 24 ಗಂಟೆಯು ಕಾರ್ಯನಿರ್ವಹಿಸುತ್ತದೆ. ಪ್ರಕೃತಿಯ ಮುನಿಸಿನಿಂದ ಅಥವಾ ಮನುಷ್ಯನ ತಪ್ಪಿನಿಂದಾಗಿ ಆಗುವ ಅನಾಹುತಗಳಿಂದ ಜನರನ್ನು ರಕ್ಷಿಸಲು ಗುಜರಾತ್ ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯರು ಸದಾ ಸನ್ನದ್ಧರಾಗಿ ನಿಂತಿರುತ್ತಾರೆ. ಗುಜರಾತಿನಲ್ಲಿ ಇರುವವರಿಗೆ ಮಾತ್ರವಲ್ಲ, ಹೊರ ದೇಶಗಳಲ್ಲಿರುವ ಗುಜರಾತ್‌ನ ಮಂದಿಗೂ ವಿಪತ್ತು ನಿರ್ವಹಣಾ ಸಮಿತಿಯ ಹೆಲ್ಪ್‌ಲೈನ್‌ನ ದೂರವಾಣಿ ಸಂಖ್ಯೆಗಳನ್ನು ತಿಳಿಸುವ ಸೌಜನ್ಯ ಅವರಿಗಿದೆ. ವಿಶ್ವದ ಯಾವುದೇ ಮೂಲೆಯಲ್ಲಿ ಪ್ರಕೃತಿ ವಿಕೋಪದಂಥ ಘಟನೆಗಳು ಜರುಗಿದರೂ ಆ ಸಂದರ್ಭದಲ್ಲಿ ತೊಂದರೆಗೆ ಸಿಕ್ಕಿಕೊಂಡ ಗುಜರಾತ್‌ನ ಜನತೆ ತಕ್ಷಣವೇ ಮುಖ್ಯಮಂತ್ರಿಗಳ ಕಛೇರಿಯನ್ನು ಸಂಪರ್ಕಿಸಿ ವಿಷಯ ತಿಳಿಸಲು, ನೆರವಿಗಾಗಿ ಪ್ರಾರ್ಥಿಸಲು ಸಾಧ್ಯವಾಗುವುದು ಈ ಕಾರಣದಿಂದಲೇ.
ಈಗ ಹೇಳುವ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ಆಲಿಸಿ; ಏನೆಂದರೆ, ಯೋಜನಾ ಆಯೋಗದ ಸಭೆಯಲ್ಲಿ ಪಾಲ್ಕೊಳ್ಳುವ ಉದ್ದೇಶದಿಂದ ಜೂನ್ 17 ರಂದು ನರೇಂದ್ರ ಮೋದಿಯವರು ದೆಹಲಿಗೆ ಆಗಮಿಸಿದರು. ಅದರ ಮರು ದಿನವೇ ಅಂದರೆ ಜೂನ್ 18 ರಂದು ಉತ್ತರಾಖಂಡದಲ್ಲಿ ಅಲ್ಲಲ್ಲಿ ರಸ್ತೆಗಳು ಕುಸಿಯುತ್ತಿರುವ ಬಗ್ಗೆ, ನದಿಗಳಲ್ಲಿ ಪ್ರವಾಹ ಹೆಚ್ಚಿ ಕೇದಾರನಾಥಕ್ಕೆ ಹೊರಟ ಯಾತ್ರಾರ್ಥಿಗಳು ಅಪಾಯಕ್ಕೆ ಸಿಕ್ಕಿಕೊಂಡಿರುವ ಸಂಗತಿ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಯಿತು. ತಕ್ಷಣವೇ ತುರ್ತು ಸಭೆ ಕರೆದ ಮೋದಿಯವರು ಪರಿಸ್ಥಿತಿ ಹೇಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕೇದಾರನಾಥ ದರ್ಶನಕ್ಕೆ ಸಾವಿರಾರು ಗುಜರಾತಿಗಳು ಹೊರಟಿರುವುದರಿಂದ ಅವರು ತೊಂದರೆಯಲ್ಲಿ ಸಿಲುಕಿರಬಹುದೆಂದೂ, ಅವರನ್ನು ರಕ್ಷಿಸುವುದೇ ಪ್ರಮುಖ ಗುರಿಯಾಗಬೇಕೆಂದೂ ಆದೇಶಿಸಿದರು. ಅದೇ ದಿನವೇ ದಿಲ್ಲಿಯಲ್ಲಿರುವ ಗುಜರಾತ್ ಭವನದಲ್ಲಿ ಮಾಹಿತಿ ಕೇಂದ್ರ ಆರಂಭಿಸಿದರು. ಗುಜರಾತ್‌ನ ಯಾತ್ರಾರ್ತಿಗಳ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳ ಒಂದು ತಂಡವನ್ನು ನಿಯೋಜಿಸಿದರು.
 ವಿಶ್ವ ಗಾಯತ್ರಿ ಪರಿವಾರದ ಮುಖ್ಯಸ್ಥ ಡಾ. ಪ್ರತಾವ್ ಪಾಂಡ್ಯ ಅವರನ್ನು ಜೂನ್ 18ರ ಬೆಳಿಗ್ಗೆ ಭೇಟಿಯಾದ ಮೋದಿ, ಜಲಪ್ರಳಯದಿಂದ ತಪ್ಪಿಸಿಕೊಂಡು ಬಂದವರಿಗಾಗಿ ಗುಜರಾತ್ ಸರ್ಕಾರದ ವತಿಯಿಂದ ಗಂಜಿ ಕೇಂದ್ರ ಆರಂಭಿಸುವುದಾಗಿಯೂ, ಅದಕ್ಕಾಗಿ ಶಾಂತಿ ಕುಂಜ್ ಕ್ಯಾಂಪಸ್‌ನಲ್ಲಿ ಸ್ಥಳಾವಕಾಶ ಕಲ್ಪಿಸುವಂತೆ ವಿನಂತಿಸಿದರು. ಈ ಕ್ಯಾಂಪಿನಲ್ಲಿ 2000ಕ್ಕೂ ಹೆಚ್ಚು ಸ್ವಯಂ ಸೇವಕರಿದ್ದರು. ಜೊತೆಗೆ, 3000ಕ್ಕೂ ದೇವ ಸಂಸ್ಕೃತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿದ್ದರು. ಈ ಕ್ಯಾಂಪಸ್‌ನಲ್ಲಿ ಆಸ್ಪತ್ರೆಯೂ ಇತ್ತು. ಇಂಥ ಜಾಗದಲ್ಲಿ ಪರಿಹಾರ ಕೇಂದ್ರ 1 ಗಂಜಿ ಕೇಂದ್ರವನ್ನು ಆರಂಭಿಸಿದರೆ ಒಂದು ಕಡೆಯಲ್ಲಿ ಊಟೋಪಚಾರ, ಮತ್ತೊಂದು ಕಡೆಯಲ್ಲಿ ಜಲಪ್ರಳಯದಿಂದ ಬಗೆಬಗೆಯ ಪಟ್ಟುಗಳಿಗೆ ತುತ್ತಾಗಿದ್ದವರಿಗೆ ಔಷಧೋಪಚಾರದ ಸೇವೆಯನ್ನು ಒದಗಿಸಿದಂತಾಗುತ್ತದೆ ಎಂಬುದು ಮೋದಿಯವರ ಲೆಕ್ಕಾಚಾರವಾಗಿತ್ತು.
 ಅವತ್ತೇ ಸಂಜೆ ಶಾಂತಿಕುಂಜ್‌ನಲ್ಲಿ ಆರಂಭವಾದ ಸಲಹಾ ಕೇಂದ್ರದಲ್ಲಿ ಇಂಟರ್‌ನೆಟ್ ಸಂಪರ್ಕ ಹೊಂದಿದ ಕಂಪ್ಯೂಟರ್‌ಗಳು, ದೂರವಾಣಿ ಸಂಪರ್ಕದ ವಿನೂತನ ಸಾಧನಗಳೂ ಬಂದವು. ಅದರ ಹಿಂದೆಯೇ ಐ.ಎ.ಎಸ್., ಐಪಿಎಸ್ ದರ್ಜೆಯ ಅಧಿಕಾರಿಗಳು ಶಾಂತಿ ಕುಂಜ್‌ಗೆ ಬಂದು ನಿಂತರು. ಉಳಿದ ರಾಜ್ಯದ ಮುಖ್ಯಮಂತ್ರಿಗಳೆಲ್ಲಾ ಮುಂದೇನು ಮಾಡಬೇಕೆಂದು ತೋಚದೆ ಕಂಗಾಲಾಗಿದ್ದಾಗಲೇ ಮೋದಿ ಇಷ್ಟೆಲ್ಲಾ ಕೆಲಸ ಮಾಡಿಸಿದ್ದರು.ಉತ್ತರಾಖಂಡ ಮೂಲದವರೇ ಆಗಿದ್ದ ಐಪಿಎಸ್ ಅಧಿಕಾರಿ ಬಿಶ್ತ್ ಹಾಗೂ ಐಪಿಎಸ್ ಅಧಿಕಾರಿ ಎಸ್.ಸಿ. ಪಂತ್ ಅವರು ಗುಜರಾತ್‌ನ ತಂಡದಲ್ಲಿದ್ದರು. ಈ ಇಬ್ಬರಿಗೂ ಕೇದಾರನಾಥಕ್ಕೆ ಹೋಗುವ ಹಾದಿ ಹಾಗೂ ದುರ್ಗಮ ಅನ್ನಿಸಿದ ಪ್ರವೇಶದ ಪರಿಚಯವಿತ್ತು. ಇಷ್ಟಲ್ಲದೆ ಏಳು ಮಂದಿ ತಜ್ಞ ವೈದ್ಯರ ತಂಡವೂ ತರಾತುರಿಯಲ್ಲಿ ಬಂದಿಳಿಯಿತು. ಈ ವೈದ್ಯರು, ಗಾಯಗೊಂಡಿದ್ದ ನೂರಾರು ಮಂದಿಗೆ ಚಿಕಿತ್ಸೆ ನೀಡಿದ್ದನ್ನು, ಹೆದರದಂತೆ ಸಮಾಧಾನ ಹೇಳಿದ್ದನ್ನು ನಾನು ಹಲವು ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ಶಾಂತಿಕುಂಜ್‌ದ ಸಲಹಾ ಕೇಂದ್ರದಲ್ಲಿ ಪ್ರತ್ಯಕ್ಷ ಕಂಡೆ. ಹೀಗೆ ಚಿಕಿತ್ಸೆ ಪಡೆದವರಲ್ಲಿ ಹಲವು ರಾಜ್ಯದ ಜನರಿದ್ದರು. ಚಿಕಿತ್ಸೆ ನೀಡುವ ಸಂದರ್ಭದಲ್ಲಿಯೇ ಅಲ್ಲಿದ್ದ ರೈಲ್ವೆ ವಿಭಾಗದ ಅಧಿಕಾರಿಗಳಿಗೆ ಈ ವೈದ್ಯರು ಹೇಳುತ್ತಿದ್ದರು; 'ಜನರು ತುಂಬಾ ಹೆದರಿದ್ದಾರೆ. ಅವರುಗಳನ್ನು ಅವರವರ ಊರಿಗೆ ಹೋಗಲು ವ್ಯವಸ್ಥೆ ಮಾಡಿ. ಜನ ಹೆಚ್ಚಿದ್ದಾರೆ ಎಂದು ಯೋಚಿಸಬೇಡಿ, ಅಗತ್ಯ ಕಂಡರೆ ನಾಲ್ಕು ಹೆಚ್ಚುವರಿ ಬೋಗಿಗಳನ್ನು ವ್ಯವಸ್ಥೆ ಮಾಡಿ...'
 ಮತ್ತೊಂದು ವಿಶೇಷವೆಂದರೆ, ಸಲಹಾ ಕೇಂದ್ರಗಳಲ್ಲಿದ್ದ ಅಧಿಕಾರಿಗಳಿಗೆ ಆ ಕ್ಷಣಕ್ಕೆ ಅಗತ್ಯವಿದ್ದ ತುರ್ತು ನಿರ್ಧಾರವನ್ನು ಕೈಗೊಳ್ಳುವ ಪರಮಾಧಿಕಾರವನ್ನು ನೀಡಲಾಗಿತ್ತು. ಯಾತ್ರಾರ್ಥಿಗಳನ್ನು ರಕ್ಷಿಸಲು ಎಷ್ಟು ಬಸ್ಸುಗಳನ್ನು ಕಳಿಸಬೇಕು, ರೈಲು ನಿಲ್ದಾಣ, ಬಸ್ ನಿಲ್ದಾಣಗಳಿಗೆ ಅವರನ್ನು ತಲುಪಿಸಲು ಅಥವಾ ಅಲ್ಲಿಂದ ಸಲಹಾ ಕೇಂದ್ರೆಕ್ಕೆ ಕರೆತರಲು ಎಷ್ಟು ಟ್ಯಾಕ್ಸಿಗಳನ್ನು ಕಳಿಸಬೇಕು? ಪಾರಾಗಿ ಬಂದ ಯಾತ್ರಾರ್ಥಿಗಳನ್ನು ವಿಮಾನದಲ್ಲಿ ಕಳಿಸಬೇಕೋ ಅಥವಾ ಅವರಿಗೆ ರೈಲಿನ ಟಿಕೆಟ್‌ಗೆ ವ್ಯವಸ್ಥೆ ಮಾಡಬೇಕೊ ಎಂಬಂಥ ನಿರ್ಧಾರಗಳನ್ನು ಅಲ್ಲಿದ್ದ ಅಧಿಕಾರಿಗಳೂ ಕೈಗೊಳ್ಳುತ್ತಿದ್ದರು. ಗುಜರಾತ್‌ನ ವೈದ್ಯರು ಹಾಗೂ ಅಧಿಕಾರಿಗಳ ತಂಡ ಅದೆಷ್ಟು ಶ್ರದ್ಧೆ ಹಾಗೂ ವೇಗದಿಂದ ಕೆಲಸ ಮಾಡಿತ್ತು ಎಂದರೆ, ಮೋದಿಯವರು ಡೆಹ್ರಾಡೂನ್‌ಗೆ ಬಂದಿಳಿದಾಗ ಹೆದರಬೇಕಾದ, ಗಾಬರಿಯಾಗಬೇಕಾದ ಅಗತ್ಯವೇ ಇಲ್ಲ. ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ ಎಂಬ ಸಂದೇಶ ಅವರನ್ನು ತಲುಪಿತು.
 ನಿಜ ಹೇಳಬೇಕೆಂದರೆ, ಉತ್ತರಾಖಂಡದಲ್ಲಿ ಜಲಪ್ರಳಯ ಸಂಭವಿಸಿತು ಎಂದು ಗೊತ್ತಾದ ತಕ್ಷಣ, ಅಗತ್ಯವಿರುವ ಎಲ್ಲ ಸಂಪನ್ಮೂಲಗಳ ಸದ್ಬಳಕೆಗೆ ಮೋದಿ ಕರೆ ನೀಡಿದರು. ಸಂಕಟಕ್ಕೆ ಸಿಕ್ಕಿಕೊಂಡವರಿಗೆ ನಿಮ್ಮಿಂದ ಹೇಗೆ ಸಾಧ್ಯವೋ ಹಾಗೆ ನೆರವು ನೀಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು. ಯಾತ್ರಾರ್ಥಿಗಳ ರಕ್ಷಣೆಯ ಹೊಣೆ ಹೊತ್ತ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಉತ್ತರಾಖಂಡ ಹಾಗೂ ಗುಜರಾತ್‌ನ ಬಿಜೆಪಿ ಘಟಕದ ಪ್ರತಿಯೊಂದು ಕಚೇರಿಗೂ ತಲುಪಿಸಿದರು. ಪರಿಹಾರ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುವಂತೆ ನೋಡಿಕೊಂಡರು.
 ಆದರೆ, ಈ ಕಡೆ ಕಾಂಗ್ರೆಸ್ ಪಕ್ಷದ ಸ್ಥಿತಿ ಹೇಗಿತ್ತೋ ನೋಡಿ: ಉತ್ತರಾಖಂಡದ ಮುಖ್ಯಮಂತ್ರಿ ಆ ಜಲಪ್ರಳಯದ ಅಬ್ಬರ ಕಂಡು ದಿಕ್ಕು ತೋಚದೆ ಕೂತುಬಿಟ್ಟರು. ರಾಹುಲ್ ಗಾಂಧಿಯವರ 'ಯುವ ಕಾಂಗ್ರೆಸ್ ಪಡೆ'ಗೆ ಜಲ ಪ್ರಳಯದ ದಿಕ್ಕು ಯಾವುದೆಂದು ಕಂಡು ಹಿಡಿಯುವುದಕ್ಕೂ ಆಗಲಿಲ್ಲ. ಅವರುಗಳು ಮಾಡದ ಕೆಲಸವನ್ನು ಮೋದಿಯರು ತುಂಬಾ ಲೆಕ್ಕಾಚಾರದಿಂದ ಮಾಡಿ ಮುಗಿಸಿದ್ದರು. ಮಾನವೀಯ ಕಳಕಳಿಯ ಸದಾಶಯದಿಂದ ಅವರು ಕೆಲಸ ಮಾಡಿದ್ದಾರೆ.
ಆದರೆ, ಏನೂ ಮಾಡಲಾಗದ ಕಾಂಗ್ರೆಸ್‌ನ ಮಂದಿ- ಪ್ರಚಾರದ ಹುಚ್ಚಿನಿಂದಲೇ ಮೋದಿಯವರು ಉತ್ತರಾಖಂಡಕ್ಕೆ ಬಂದು ಹೋದರು ಎಂದು ವೃಥಾ ಚೀರಾಡುತ್ತಿದ್ದಾರೆ. ಅವರ ಅವಿವೇಕಕ್ಕೆ ಏನೆನ್ನಬೇಕು?

- ಮಧು ಕಿಶ್ವರ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.