'ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು, ಆಚೆ ಹಾಕವ್ಳೆ ವೈಫು' ಅಂತೇಳಿ ಮೈಲಾರಿ ಹಾಡ್ಕಂಡು ವೋಯ್ತಾಯಿದ್ನ. ಎದ್ರುಗಡೆ ಟೆಂಗಿನಕಾಯಿ ಪಕ್ಸದ ಲೀಡ್ರು ಯೂಡೂರಪ್ನೋರು ಸಿಕ್ಬುಟ್ರು.
'ವೋ, ಇದೇನು ಕಾಯಿ ಪಕ್ಸದ ನಾಯಕ್ರು, ಎಲೆಕ್ಸನ್ ಆದ್ಮೇಕೆ ಕಣ್ಗೆ ಮಿಂಚಾಕಿಲ್ಲ ಅಂತೀರಪ್ಪ. ಸಿವಾ ಅಂತ ಸುಮ್ಕೆ ಇದ್ದೋಗಿದ್ದೀರಾ ಅಂತನ್ನಿ' ಅಂದ ಮೈಲಾರಿ.
'ಅದ್ಯಾಕಲೆ ಕಪ್ಪೆ ಕುಲದೋನೆ, ವಟವಟಾಂತ ವೊಯ್ಕತೀಯ. ಯಾವ್ದೋ ಹಾಡು ಯೋಳ್ತಾ ಇದ್ಯಲ್ಲ. ಸಂದಾಕಿತ್ತು ಕಲಾ, ರಾಜ್ಕೀಯಾನೂ ಹಂಗೇ ಆಬುಟ್ಟದೆ, ಖಾಲಿ ಕ್ವಾಟ್ರು ಬಾಟ್ಲಿ ಥರುಕ್ಕೆ, ಕಿಕ್ಕು ವೊಡ್ಯಕ್ಕೆ ಮೊದ್ಲೇ ಎಣ್ಣೆ ಖಾಲಿ ಆದಂಗಾಗದೆ' ನೋಡಲೇ ಅಂದ್ರು ಯಡೂರಪ್ನೋರು. 'ವೋ, ಹಿಂಗಾಬುಟ್ಟದಾ? ವೋಗ್ಲಿ ಬನ್ನಿ, ವಸಿ ಬುಟ್ಕಳವ ಅಂತೇಳ್ದ ಮೈಲಾರಿ. ಜಾಡ್ಸಿ ವೊದ್ದ ಅಂತಂದ್ರೆ ಬಸ್ ಟಿಕೆಟ್ಟು ಇಲ್ದೇ ವೂರು ಸೇರ್ಕಬೇಕು ಮುಂಡೇದೆ. ಏನೋ ಮಾತ್ಗೆ ಹಂಗಂದ್ರೆ ನನ್ನುನ್ನೇ ಗುಂಡಾಕಕ್ಕೆ ಕರೀತೀಯೇನ್ಲಾ ಬಡ್ಡೆತ್ತದೆ. ಮಡುಗ್ದ ಅಂದ್ರೆ ಮಖ ಮುಂಗುಸಿ ಥರ ಆಗೋಬೇಕು' ಅಂತೇಳಿ ಯಡೂರಪ್ನೋರು ರೇಗಾಡ್ಬುಟ್ರು. 'ಆಯ್ಯೋ ಬುಟ್ಟಾಕಿ, ಅದುಕ್ಕೆ ಯಾಕೆ ಮುಖ ಸಿಂಡ್ರಿಸ್ಕತೀರ. ವುರ್ ಅಂತ ವುರ್ಕತೀರ. ಇಸ್ಯ ಏನಂತ ಯೋಳಿ ಪುಣ್ಯ ಕಟ್ಕಳಿ' ಅಂದ ಮೈಲಾರಿ. 'ನಿಂತಾವ ಯೋಳುದ್ರೆ ಸುಂಕದೋರು ಮುಂದೆ ಸುಖದು:ಖ ಯೋಳ್ಕಂಡಂಗೆ, ವೋಗೋಗಿ ಕ್ಯಾಮೆ ನೋಡಲೇ' ಅಂದ್ರು ಯಡೂರಪ್ನೋರು. 'ಇತ್ಲಾಗೆ ತೊಟ್ಲು ತೂಗಿ, ಆತ್ಲಾಗೆ ಮಗೂನ ಚಿವುಟ್ದಂಗೆ ಆಯ್ತು ಇದು. ಬ್ಯಾಡ ಅಂದ್ರೆ ಬುಟ್ಟಾಕಿ. ನನ್ ಮನೆ ಮ್ಯಾಲೆ ಏನರ ರೈಲು ವೋಬೇಕಾ?' ಅಂತಂದ ಮೈಲಾರಿ.
'ಏನಿಲ್ಲ ಕಲಾ, ಏನೋ ಎಲೆಕ್ಸನ್ನಾಗೆ ಜನ ಹಂಗೇ ವೋಟಾಕಿ ಹಂಗಂಗೇ ವಿಧಾನಸೌಧುಕ್ಕೆ ಕುಳುಸ್ತರೆ ಅನ್ಕಂಡಿದ್ದೆ. ಯಡ್ವಟ್ಟು ಆಗೋಯ್ತು. ಈವಾಗ ಕಮ್ಲ ಪಕ್ಸುದೋರು ಟೆಂಗಿನ ಕಾಯಿ, ಕಾಯಿ ಅಂತ ಯಾಕೆ ವೊದ್ದಾಡ್ಕತೀರಿ. ನಮ್ ಪೊಜಿಸನ್ನೂ ನಿಮ್ಮಂಗೆ ಆಬುಟ್ಟದೆ. ವಾಪ್ಸು ಪಕ್ಸುಕ್ಕೆ ಬಂದ್ಬುಡಿ. ಆಗಿರಾದ್ನ ಮರ್ತು ಸಂಸಾರ ಮಾಡ್ಕಂಡು ಇದ್ದೋಗವ ಅಂತಾವ್ರೆ. ಏನ್ಲಾ ಮಾಡಾದು' ಅಂದ್ರು ಯಡೂರಪ್ನೋರು.
'ಮೊದ್ಲು ವೋಗಿ ಸೇರ್ಕಳಿ, ಇಲ್ಲಾಂದ್ರೆ ಕೆಜೆಪಿ ಕೆಜೆಪಿ ಅಂತ ಜಪ ಮಾಡ್ಕಂಡು, ಕಾಯಿ ಮಾರ್ಕಂಡು ಇದ್ದೋಬೇಕಾಯ್ತದೆ. ಹಂಗೆ ಮಾಡುದ್ರೆ ಪಾರ್ಲಿಮೆಂಟು ಎಲೆಕ್ಸನ್ಗೆ ವಸಿ ವರ್ಕೌಟು ಆಬೋದು' ಅಂತಂದ ಮೈಲಾರಿ. 'ಭಲೇ ಐನಾತಿ ಇದ್ದೀಯ ಕಲಾ ನೀನು, ಆವಾಗಾವಾಗ ವೊಳ್ಳೆ ಐಡಿಯಾ ಕೊಡ್ತೀಯ ಮುಂಡೇದು' ಅಂತೇಳಿ ಯಡೂರಪ್ನೋರು ಕಮ್ಲ ಪಕ್ಸದ ಲೀಡ್ರುಸು ಮನೆತವ ವೊಂಟ್ರು.
'ಏನ್ಲಾ ಅದು, ರೈಲು ರೈಲು ಅಂತ ಬಡ್ಕತಾಯಿದ್ದೆ. ನಿನ್ ಮನೆ ಮ್ಯಾಲೆ ಯಾಕ್ಲಾ ವೋಯ್ತದೆ ರೈಲು' ಅಂತ ಬುಸುಗುಟ್ಟಿದ್ರು ಸೆಂಟ್ರಲ್ ಮಂತ್ರಿ ಖರ್ಗೆ ಸಾಹೇಬ್ರು. 'ವೋ, ಬನ್ನಿ ಸಾ, ಯಾವಾಗ ಬಂದ್ರಿ ಡೆಲ್ಲಿಯಿಂದ, ರೈಲ್ನಾಗೆ ಬಂದ್ರ ? ಎಲ್ಲಾರ ವೋಗಕ್ಕೆ ರೈಲು ಟಿಕೆಟ್ಟು ರಿಜರ್ವು ಆಗಿಲ್ಲಾಂದ್ರೆ ನಿಮ್ಗೇ ಪೋನಾಕೋದು, ವಸಿ ಯೋಳ್ಬುಡಿ ಆವಾಗ' ಅಂದ ಮೈಲಾರಿ. 'ವೂ ಕಣಲೇ, ನಿಂಗೆ ರೈಲ್ನಾಗೆ ಸೀಟು ಬುಡ್ಸಕ್ಕೆ ನಾನು ಮಂತ್ರಿ ಆಗಿರಾದು? ವೋಗಾಚೆ' ಅಂದ್ರು ಖರ್ಗೆ ಸಾಹೇಬ್ರು. 'ಸಿಎಂ ಮಾಡಿಲ್ಲ ಅನ್ನೋ ಕ್ವಾಪ ಇನ್ನ ವೋಗಿಲ್ಲ ಅಂತ ಕಾಣ್ತದೆ. ಅದುಕ್ಕೆ ನನ್‌ಮ್ಯಾಲೆ ಶಿಟ್ಟು ಮಾಡ್ಕಂಡ್ರೆ ಹೆಂಗೆ ಧಣಿ. ರೈಲು ಖಾತೆ ಅಂದ್ರೆ ಸುಮ್ಕನಾ? ಜಬರ್ದಸ್ತಾಗಿ ಐತಲ್ಲ' ಅಂತೇಳ್ದ ಮೈಲಾರಿ.
'ಐತೆ, ಐತೆ, ವುಪ್ಪು, ಖಾರ ಹಾಕಿ ನೆಕ್ಬೇಕು ಅಷ್ಟೇಯ. ಇದು ಸುಮ್‌ಸುಮ್ಕೆ ಕಣ್ಲಾ. ಮಂತ್ರಿ ಆಬುಟ್ಟು ನಾನು ಏನಲಾ ಮಾಡಂಗದೆ. ನೀವೇ ರೈಲು ಬಜೆಟ್ಟು ಮಾಡಾದು ಅಂತ ಎಲ್ರೂವೆ ರೈಲು ಹತ್ತುಸ್ತಾವ್ರೆ. ಅಲ್ಲಲೇ ಪಾರ್ಲಿಮೆಂಟ್ಗೆ ಏನರ ಆಕ್ಬೋಬರ್, ನವೆಂಬರ್ ತಿಂಗಳ್ನಾಗೆ ಎಲೆಕ್ಸನ್ ಅಬುಟ್ರೆ ಹೆಂಗಲಾ ಬಜೆಟ್ಟು ಮಾಡಾದು. ಎಲೆಕ್ಸನ್ ಬಂದ್ರೆ ಸುಮ್ಕೆ ರೈಲು ಹತ್ಕಂಡು ಬೆಂಗ್ಳೂರ್ಗೆ ಬರೋದೇಯಾ' ಅಂದ್ರು ಖರ್ಗೆ ಸಾಹೇಬ್ರು. 'ವೊಟ್ನಾಗೆ ನಿಮ್ದು ಕಂಬಿ ಇಲ್ದೇಯಿರೋ ರೈಲು ಅಂತನ್ನಿ. ಹೆಂಗೋ ವಸಿ ಅಜ್ಜಸ್ಟು ಮಾಡ್ಕಂಬುಡಿ. ಸೆಂಟ್ರಲ್ನಾಗೆ ತಿರ್ಗ ಏನರ ಕೈ ಪಕ್ಸ ಪವರ್ಗೆ ಬಂತು ಅಂದ್ರೆ ಸಂದಾಕಿರೋ ಖಾತೆನೇ ನಿಮ್ ಕೈನಾಗೆ ಮಡುಗ್ತರೆ' ಅಂತೇಳಿ ಮೈಲಾರಿ ಸಮಾಧಾನ ಮಾಡಿ ಮನೆಗೊಂಟ.
-ಕೆ.ವಿ.ಪ್ರಭಾಕರ್
prabhukolar@yahoo.com