ಜಾತಿಯ ಹೆಸರನ್ನು ನಮೂದು ಮಾಡುವಾಗ ಕೊಂಚ ಎಡವಟ್ಟಾದರೂ ಸಮಸ್ಯೆಗಳಿಗೆ ದಾರಿಯಾಗುತ್ತದೆ. ಅದರಲ್ಲೂ ಒಂದು ಅಕ್ಷರ ತಪ್ಪಾದರೂ ಅದರಿಂದಾಗುವ ಪರಿಣಾಮ ಮಾತ್ರ ತೀವ್ರವಾಗಿರುತ್ತದೆ. ಅದಕ್ಕೆ 'ಪದಾರ್ಥಿ' ಎಂಬ ಸಮುದಾಯವೇ ಸಾಕ್ಷಿ.
ಯಾರೋ ಮಾಡಿದ ತಪ್ಪಿನಿಂದಾಗಿ ಇಂದು ಆ ಸಮುದಾಯ ಶಿಕ್ಷೆ ಅನುಭವಿಸುತ್ತಿದೆ. ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳಲು ಪರದಾಡುತ್ತಿದೆ. ಇದಕ್ಕಾಗಿ ಹಿಂದುಳಿದ ವರ್ಗಗಳ ಆಯೋಗದ ಕಚೇರಿಗೂ ಪದೇಪದೇ ಅಲೆದಾಡುವಂತಾಗಿದೆ.
ಪದಾರ್ಥಿ ಎಂಬುದು ಒಂದು ಸಣ್ಣ ಸಮುದಾಯ. ಈ ಜಾತಿಯ ಜನಸಂಖ್ಯೆ ಎಷ್ಟೇ ಲೆಕ್ಕ ಮಾಡಿದರೂ 1200 ದಾಟುವುದೂ ಇಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಈ ಸಮಾಜದ ಜನರಿಲ್ಲ. 200ರಿಂದ 300 ಕುಟುಂಬಗಳು ಬೆರಳೆಣಿಕೆಯಷ್ಟು ಜಿಲ್ಲೆಗಳಲ್ಲಿ ನೆಲೆಸಿವೆ.
ಹಾಗೆಂದ ಮಾತ್ರಕ್ಕೆ ಸರ್ಕಾರದ ಸೌಲಭ್ಯಗಳನ್ನು ಕಳೆದುಕೊಳ್ಳಬೇಕು ಎಂಬ ನಿಯಮವೇನೂ ಇಲ್ಲವಲ್ಲ. ಆದರೆ, ಸವಲತ್ತುಗಳನ್ನು ಪಡೆದುಕೊಳ್ಳಲು ಸಮುದಾಯದ ಮುಖಂಡರು ಕಳೆದ 12 ವರ್ಷಗಳಿಂದ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಸರ್ಕಾರಕ್ಕೂ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಯಾವುದರಿಂದಲೂ ಪ್ರಯೋಜನವಾಗಿಲ್ಲ.
ಪದಾರ್ಥಿ ಪದ ಪಡಿತಿ ಆಗಿದೆ: ಸಮಸ್ಯೆ ಆಗಿರುವುದು ಇಷ್ಟೇ. ಪದಾರ್ಥಿ ಎಂಬ ಜಾಗದಲ್ಲಿ ಪಡಿತಿ ಎಂದು ಬರೆದಿದ್ದು. ಅದನ್ನೀಗ ಪದಾರ್ಥಿ ಎಂದು ತಿದ್ದುಪಡಿ ಮಾಡಿಸಲು ಸಮುದಾಯದವರು ಭಾರಿ ಕಸರತ್ತು ನಡೆಸುತ್ತಿದ್ದಾರೆ. ಪದಾರ್ಥಿ ಎಂಬುದು ಪಡಿತಿ ಎಂದು ಹೇಗೆ ಬದಲಾಯಿತೋ ಗೊತ್ತಿಲ್ಲ. ಆದರೆ, ಆದರಿಂದ ಕಷ್ಟ ಅನುಭವಿಸುತ್ತಿರುವವರು ಮಾತ್ರ ಈ ಸಮಾಜದ ಜನ.
ದೇವಾಲಯಗಳಲ್ಲಿ ಚಂಡೆ, ಭೃಂಗಿ, ಉಡುಕ, ಪತಹ ಮತ್ತಿತರ ವಾದನಗಳನ್ನು ನುಡಿಸುವುದು ಈ ಪದಾರ್ಥಿ ಸಮುದಾಯದ ಜನರ ಕುಲ ಕಸುಬು. ಬೆಳಗ್ಗೆ ದೇವರನ್ನು ಎಬ್ಬಿಸುವ ಮತ್ತು ಸಂಜೆ ಮಲಗಿಸುವ ಕೆಲಸ ನಮ್ಮದೇ. ನಾವಿಲ್ಲದೆ ದೇವಸ್ಥಾನಗಳಲ್ಲಿ ಪೂಜೆಯೇ ಶುರುವಾಗದು ಎನ್ನುತ್ತಾರೆ ಇವರು. ಈ ಕಾರಣಕ್ಕಾಗಿಯೇ ದೇವಾಲಯಗಳಲ್ಲಿ ಸಮುದಾಯದ ಜನರಿಗೆ ವಿಶೇಷ ಗೌರವ ಇದೆ. ಕೊಡಗು, ಮಂಗಳೂರಿನಲ್ಲಿ ಸಮುದಾಯದ ಕುಟುಂಬಗಳಿವೆ. ಇವರು ಕೇರಳದಿಂದ ವಲಸೆ ಬಂದಿರುವ ಸಾಧ್ಯತೆ ಇದೆ. ಈಗಿನವರಿಗೆ ಸಮಾಜದ ಹಿನ್ನೆಲೆ ಅಷ್ಟಾಗಿ ಗೊತ್ತಿಲ್ಲ. ಹೆಚ್ಚೆಂದರೆ 200 ವರ್ಷದ ಇತಿಹಾಸವಷ್ಟೇ ಗೊತ್ತು.
ಶಿವನಿಗೆ ಪ್ರಿಯವಾದದ್ದು : ಡಮರುಗ ಶಿವನ ವಾದ್ಯ. ಅದು ಆತನಿಗೆ ಪ್ರಿಯವೂ ಹೌದು. ಶಿವನನ್ನು ಖುಷಿಪಡಿಸಲು ಡಮರುಗ ಬಾರಿಸಬೇಕು. ಆಗ ಆತ ನರ್ತಿಸುತ್ತಾನೆ. ಅದುವೇ ನರ್ತನ ಸೇವೆ. ಡಮರುಗವನ್ನೇ ಹೋಲುವಂತದ್ದು ಉಡುಕ ಎಂಬ ವಾದನ. ಪೂಜೆ, ಪುನಸ್ಕಾರದ ಸಂದರ್ಭದಲ್ಲಿ ಆ ವಾದನವನ್ನು ಒಂದು ಸುತ್ತು ನುಡಿಸಲೇಬೇಕು ಎಂಬ ನಿಯಮವಿದೆ. ಭೃಂಗಿ ಎಂಬುದು ಕುದುರೆಮುಖ ಮತ್ತು ಮನುಷ್ಯನ ದೇಹವನ್ನು ಹೋಲುವ ವಾದನ. ಶಿವನ ತಾಂಡವ ನೃತ್ಯಕ್ಕೆ ಅದು ಬೇಕೇ ಬೇಕು. ದೇವಾನು ದೇವತೆಗಳ ಕಾಲದಿಂದಲೂ ಈ ವಾದನ ಬಳಕೆಯಲ್ಲಿದೆ. ಅದನ್ನು ದನದ ಚರ್ಮದಿಂದಲೇ ತಯಾರು ಮಾಡಲಾಗುತ್ತದೆ ಎನ್ನುತ್ತಾರೆ ಶ್ರೀಕ್ಷೇತ್ರ ಧರ್ಮಸ್ಥಳದಶ್ರೀ ಮಂಜುನಾಥ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಂಭು ಭಟ್ಟ ಅವರು.
ಇನ್ನು ದೇವಾಲಯದ ಹೊರಗೆ ಮೂಲೆ ಮೂಲೆಯಲ್ಲೂ ಕಲ್ಲುಗಳಿರುತ್ತವೆ. ಅವು ಶಿವಗಣಗಳ ಕುರುಹು. ಉದಾಹರಣೆಗೆ ಕೌಮಾರ್ಯ, ಕೌಂಡಿನ್ಯ. ದೇವಾಲಯದ ಪ್ರಾಂಗಣದಲ್ಲಿ ದೇವರ ಉತ್ಸವ ಮಾಡುವ ಉದ್ದೇಶವೇ ಶಿವಗಣಗಳಿಗೆ ದೇವರ ದರ್ಶನ ಮಾಡಿಸುವುದು. ಈ ಸಂದರ್ಭದಲ್ಲಿ ವಾದ್ಯಗಳನ್ನು ಬಳಕೆ ಮಾಡುವುದು ಆ ಗಣಗಳನ್ನು ಹುರಿದುಂಬಿಸಲು ಮತ್ತು ಈ ಮೂಲಕ ಅವುಗಳಲ್ಲಿ ಜೀವಕಳೆ ತರುವುದು ಎನ್ನುತ್ತಾರೆ ಶಂಭು ಭಟ್ಟ ಅವರು. ಪದಾರ್ಥಿಗಳು ಭೃಂಗಿ ವಂಶದವರು ಎಂದು ಹೇಳಲಾಗುತ್ತದೆ. ಆದರೆ, ಸಣ್ಣಪುಟ್ಟ ದೇವಾಲಯಗಳಲ್ಲಿ ಈಗ ಚಂಡೆ ಬಾರಿಸುವ ಪದ್ಧತಿ ಕಡಿಮೆಯಾಗುತ್ತಿದೆ. ಕಾರಣ, ದೇವಾಲಯಗಳಲ್ಲಿ ಉತ್ಪತ್ತಿ ಕಡಿಮೆಯಾಗಿರುವುದು ಎನ್ನುತ್ತಾರೆ ಅವರು.
ಹೀಗಾಗಿ ಕೊಡಗು, ಮಂಗಳೂರು ಮತ್ತಿತರ ಕಡೆ ದೇವಾಲಗಳಲ್ಲಿ ಚಂಡೆ ಮತ್ತಿತರ ವಾದನಗಳನ್ನು ನುಡಿಸಲು ಪದಾರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಜೊತೆಗೆ ದೇವಾಲಯವನ್ನು ಸ್ವಚ್ಛವಾಗಿಡುವ ಕೆಲಸವೂ ಇವರದ್ದೇ. ಪದಾರ್ಥಿಗಳು ಹೋಗಲಿಲ್ಲವೆಂದರೆ ಕೆಲವೆಡೆ ದೇವಾಲಯಗಳ ಬಾಗಿಲು ತೆರೆಯುದಿಲ್ಲವಂತೆ. ಧರ್ಮಸ್ಥಳ, ಮಂಗಳೂರು ಸಮೀಪದ ಪುತ್ತೂರಿನ ಮಹಾಲಿಂಗೇಶ್ವರ, ಕೊಡಗಿನ ಪಾಡಿ ಗುತ್ತಪ್ಪ, ಓಂಕಾರೇಶ್ವರ, ನಾಗರಹೊಳೆ ಬಳಿ ಇರುವ ಇರ್ಪು ದೇವಾಲಯಗಳಲ್ಲಂತೂ ಪದಾರ್ಥಿಗಳಿಗೆ ವಿಶೇಷವಾದ ಸ್ಥಾನಮಾನವಿದೆ.
ಚಂಡೆ ಬಾರಿಸುವ ಬಗ್ಗೆ ಗುರುಗಳು ತರಬೇತಿ ನೀಡುತ್ತಾರೆ. ಅದಕ್ಕೆ ನಿಬಂಧನೆಗಳೇನೂ ಇಲ್ಲ. ಚಿಕ್ಕ ಮಗುವಿನಿಂದ ಹಿರಿಯರವರೆಗೆ ಯಾರು ಬೇಕಾದರೂ ಆಭ್ಯಾಸ ಮಾಡಬಹುದು. ಇತ್ತೀಚೆಗೆ ಯಕ್ಷಗಾನದಲ್ಲೂ ಇವರೇ ಚಂಡೆ ಬಾರಿಸುವುದುಂಟು. ಅಂದಹಾಗೆ ಈ ಚಂಡೆ ವಾದನವನ್ನು ಸಮುದಾಯದ ಜನರೇ ತಯಾರು ಮಾಡಿಕೊಳ್ಳುತ್ತಾರಂತೆ. ಕೇರಳದಲ್ಲಿ ಇತ್ತೀಚೆಗೆ ಯುವತಿಯರು ಮತ್ತು ಮಹಿಳೆಯರೂ ಚಂಡೆ ಬಾರಿಸುವುದನ್ನು ಕಲಿತಿದ್ದಾರಂತೆ. ಅಲ್ಲಿ ಮತ್ತು ಮಂಗಳೂರಿನ ಕೆಲವೆಡೆಗಳಲ್ಲಿ ಚಂಡೆ ಬಾರಿಸುವುದರಲ್ಲಿ ವಿಶೇಷ ಪ್ರಯೋಗಗಳು ನಡೆಯುತ್ತಿವೆಯಾದರೂ ಕಲಿಯುವ ಆಸಕ್ತಿ ಕಡಿಮೆಯಾಗುತ್ತಿದೆ.
1994ರಿಂದ ಸಮಸ್ಯೆ ಶುರು : ಮೈಸೂರಿನ ಮಹಾರಾಜರು ಮಿಲ್ಲರ್ಸ್ ಆಯೋಗ ರಚನೆ ಮಾಡಿದಾಗ ಆ ಆಯೋಗ ನೀಡಿದ್ದ ವರದಿಯಲ್ಲಿ ಪದಾರ್ಥಿ ಸಮುದಾಯದ ಬಗ್ಗೆ ಉಲ್ಲೇಖವಿತ್ತು. 1960ರಲ್ಲಿ ನಾಗನಗೌಡ ಆಯೋಗದ ವರದಿಯಲ್ಲೂ ಹೆಸರಿತ್ತು. ಆದರೆ, ಕಳೆದ ಎರಡು ಆಯೋಗಗಳ ಅವಧಿಯಿಂದ ಜಾತಿ ಹೆಸರು ಬಿಟ್ಟು ಹೋಗಿದೆ ಎನ್ನುತ್ತಾರೆ ಸಮುದಾಯದ ಮುಖಂಡರು ಮತ್ತು ವೃತ್ತಿಯಲ್ಲಿ ಶಿಕ್ಷಕರೂ ಆಗಿರುವ ಪಿ.ಎಸ್.ಗೋಪಾಲಕೃಷ್ಣ ಅವರು. ಪದಾರ್ಥಿ ಹೆಸರನ್ನು ಜಾತಿ ಪಟ್ಟಿಗೆ ಸೇರಿಸಲು ಕಳೆದ 12 ವರ್ಷದಿಂದ ಪ್ರಯತ್ನ ಮಾಡುತ್ತಿದ್ದೇನೆ ಎನ್ನುತ್ತಾರೆ ಅವರು.
ಪ್ರಸ್ತುತ ಜಾರಿಯಲ್ಲಿರುವ ಜಾತಿ ಪಟ್ಟಿಯಲ್ಲಿ ಪ್ರವರ್ಗ-1ರಲ್ಲಿ ಪಡಿತಿ ಎಂದಿದ್ದು ಅದನ್ನು ಪದಾರ್ಥಿ ಎಂಬುದಾಗಿ ಬದಲಾವಣೆ ಮಾಡಬೇಕು. ಜಾತಿ ಹೆಸರು ತಿದ್ದುಪಡಿಗೆ 2003ರಿಂದ ಮನವಿ ಸಲ್ಲಿಸುತ್ತಿದ್ದೇವೆ. 2004ರಲ್ಲಿ ಕೊಡಗು ಜಿಲ್ಲಾಧಿಕಾರಿಗಳಿಗೆ ಸಮುದಾಯದ ಹಿನ್ನೆಲೆ ಬಗ್ಗೆ ದಾಖಲೆಗಳನ್ನೂ ಸಲ್ಲಿಸಿದ್ದೇವೆ ಎಂಬುದು ಅವರ ವಿವರಣೆ. 1986ರವರೆಗೆ ಜಾತಿ ಪಟ್ಟಿಯಲ್ಲಿ ಹೆಸರು ಸರಿಯಾಗೇ ಇತ್ತು. 1994ರಲ್ಲಿ ಬಿಟ್ಟು ಹೋಗಿದೆ ಎಂಬುದು ಗೋಪಾಲಕೃಷ್ಣ ಅವರ ವಿವರಣೆ.
ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿಯೂ ಪದಾರ್ಥಿಗಳು ಅಷ್ಟೇನೂ ಮುಂದುವರಿದಿಲ್ಲ. ಒಂದಿಬ್ಬರು ವೈದ್ಯರು, ಐದಾರು ಮಂದಿ ಎಂಜಿನಿಯರುಗಳು, ಅಲ್ಲೊಬ್ಬರು, ಇಲ್ಲೊಬ್ಬರು ಎಂಬಂತೆ ಅಧಿಕಾರಿಗಳು ಆಗಿದ್ದಾರೆ. 12ರಿಂದ 15 ಮಂದಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸ್ನಾತಕೋತ್ತರ ಪದವೀಧರರು 8ರಿಂದ 10 ಮಂದಿ ಇದ್ದರೆ, ಸಾಮಾನ್ಯ ಪದವೀಧರರ ಸಂಖ್ಯೆ 20-25. ಶೇ.20ರಷ್ಟು ಮಂದಿ ಎಸ್ಎಸ್ಎಲ್ಸಿ ವರೆಗೆ ಓದಿಕೊಂಡಿದ್ದಾರೆ. ವಿಶೇಷ ಎಂದರೆ ಪದಾರ್ಥಿ ಸಮುದಾಯದಲ್ಲಿ ಅನಕ್ಷರಸ್ಥ ಎನ್ನುವವರೇ ಇಲ್ಲ. ಜನಸಂಖ್ಯೆಯೇ ಕಡಿಮೆ ಇರುವಾಗ ಇನ್ನು ರಾಜಕೀಯ ಪ್ರಾತಿನಿಧ್ಯ ಕೇಳುವುದುಂಟೇ ? ಅದು ಇವರ ಪಾಲಿಗೆ ಗಗನ ಕುಸುಮ.
-ಕೆ.ವಿ.ಪ್ರಭಾಕರ
-prabhukolar@yahoo.com