ಗುರುವಾರ ರಾಜ್ಯದ ಎಲ್ಲ ಕಡೆ ನಡೆಯುವ (ಬೆಂಗಳೂರನ್ನು ಬಿಟ್ಟು) ಪೌರ ಸಂಸ್ಥೆಗಳ ಚುನಾವಣೆಯ ಮತದಾನ ಹಾಗೂ ಭಾನುವಾರದ ಎಣಿಕೆಯ ಅನಂತರ, ಈಗ ಅಸ್ಪಷ್ಟವಾಗಿರುವ ಕರ್ನಾಟಕದ ರಾಜಕಾರಣ ತನ್ನ ಅಂತಿಮ ಸ್ವರೂಪದ ನಗ್ನದರ್ಶನ ನೀಡಲೇಬೇಕು. ಅಲ್ಲಿಯವರೆಗೆ ರಾಜಕಾರಣಿಗಳೆಲ್ಲ ಈಗಿನಂತೆಯೇ ಮನಸ್ಸಿಗೆ ಬಂದಂತೆ ವರ್ತಿಸಬಹುದು- ಅದಕ್ಕೆ ಯಾರ ಅಡ್ಡಿಯೂ ಇಲ್ಲ.
ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಯಾವ ರೀತಿಯಲ್ಲಿ ಪ್ರಕಟವಾದರೂ ಅದು ಜಗದೀಶ ಶೆಟ್ಟರರ ನೇತೃತ್ವದ ಬಿಜೆಪಿ ಸರ್ಕಾರದ ಅಸ್ತಿತ್ವದ ಮೇಲೆ ಹಾಗೂ ರಾಜಕೀಯವಾಗಿ, ಬಿಜೆಪಿ ಪಕ್ಷದಲ್ಲಿ ನಿರ್ಣಾಯಕವಾದ ರೀತಿಯಲ್ಲಿ ಪರಿಣಾಮ ಬೀರಿ, ಬದಲಾವಣೆಯನ್ನು ತರುವುದು ಖಚಿತ.
ಇಲ್ಲಿ ತುಂಬಾ ಕುತೂಹಲ ಕೆರಳಿಸಿರುವ ವಿಚಾರ ಎಂದರೆ, ಬಿಜೆಪಿಯಿಂದ ಸಿಡಿದು ಬಂದು, ಮಾತೃಪಕ್ಷಕ್ಕೇ ಸೆಡ್ಡು ಹೊಡೆದು ನಿಂತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷ ಹಾಗೂ ಜೈಲಿನಲ್ಲಿರುವ ಗಣಿಧಣಿ, ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಅವರ ಸಂಗಾತಿ ಬಂಡಾಯಗಾರ ಶ್ರೀರಾಮುಲು ಅವರು ರೂಪಿಸಿರುವ ಬಿಎಸ್ಸಾರ್ ಕಾಂಗ್ರೆಸ್‌ನ ಶಕ್ತಿಯ ಪ್ರದರ್ಶನ.
ಬುಧವಾರ ಸಂಜೆಯವರೆಗೂ ರಾಜಧಾನಿಯಲ್ಲಿ ಆ ಪಕ್ಷಗಳ ಓಟು ಪಡೆಯುವ ಶಕ್ತಿ ಕುರಿತಂತೆ ಬಲ್ಲ ಮೂಲಗಳು ತಮ್ಮ ಅನುಭವ ಆಧರಿತ ಅಂದಾಜುಗಳನ್ನು ಸಾರ್ವಜನಿಕರ ಜತೆ ಪ್ರಾಮಾಣಿಕವಾಗಿ ಹಂಚಿಕೊಳ್ಳುವುದಕ್ಕೆ ಸಿದ್ಧವಿರಲಿಲ್ಲ. ಯಡಿಯೂರಪ್ಪ ನೇತೃತ್ವದ ಪಕ್ಷ ಒಂದು ಪ್ರಣಾಳಿಕೆಯನ್ನೂ ಸಿದ್ದಪಡಿಸಲಿಲ್ಲ. ಆ ಪಕ್ಷಕ್ಕೆ ಯಡಿಯೂರಪ್ಪ ಅವರ ಹೆಸರು, ಜೀವನ ಹಾಗೂ ಸಾಧನೆ- ಸೋಲುಗಳೇ ಪ್ರಣಾಳಿಕೆ. ಒಂದು ರಾಜಕೀಯ ಪಕ್ಷಕ್ಕೆ ಇದು ವಿಚಿತ್ರವಾದ ವರ್ತನೆಯೇ.
ಯಡಿಯೂರಪ್ಪ- ಶ್ರೀನಿವಾಸಲು ಅವರು ಬಿಜೆಪಿಯ ಮತ ಬುಟ್ಟಿಗಳ ಮೇಲೆ ನಡೆಸಬಹುದಾದ ದಾಳಿಯ ಪರಿಣಾಮ ಏನು ಬೇಕಾದರೂ ಆಗಬಹುದು. ಕೆಲವು ಪ್ರದೇಶಗಳಲ್ಲಿ ಜಾತಿಯ ಆಧಾರದ ಮೇಲೇ ನಿಂತಿದ್ದ ಬಿಜೆಪಿಯ ಮತ ಬ್ಯಾಂಕ್‌ನಲ್ಲಿ ಒಡಕು ಉಂಟಾಗಿರುವುದು ಮೇಲ್ನೋಟಕ್ಕೇ ಗೊತ್ತಾಗುತ್ತಿದೆ. ಈ ಪ್ರಕ್ರಿಯೆ ಪ್ರಕಟವಾಗಿರುವುದು ವೀರಶೈವ ಪ್ರಧಾನ ಜಿಲ್ಲೆಗಳಲ್ಲಿ. ಶ್ರೀರಾಮುಲು ಅವರ ಪಕ್ಷ ಬಳ್ಳಾರಿ ಸೀಮೆಯಲ್ಲಿ ಬಿಜೆಪಿಯ ಮಗ್ಗುಲನ್ನು ಮುರಿದರೂ, ಇತರ ಕಡೆಗಳಲ್ಲಿ ಅದರ ಆಘಾತಕ್ಕೆ ಕಾಂಗ್ರೆಸ್ಸೇ ಗುರಿ. ಕಳೆದ ಸುಮಾರು ಸಾವಿರ ದಿನಗಳಲ್ಲಿ ಬಿಜೆಪಿಗೆ ರಾಜ್ಯದ ಕೆಲವು ಭಾಗಗಳಲ್ಲಿ ಯಾವ ಶ್ರಮವೂ ಇಲ್ಲದೇ ದೊರಕಿದ ಓಟು ಬ್ಯಾಂಕ್‌ಗಳು ಈಗಲೂ ಭದ್ರವಾಗಿರಲಿಕ್ಕಿಲ್ಲ. ಆದರೆ ಅದರಲ್ಲಿ ಒಂದಂಶವಾದರೂ ಉಳಿದಿರಲೇಬೇಕಲ್ಲ. ಆ ಲೆಕ್ಕ ಸರಿಯಾಗಿ ಸಿಗುತ್ತಿಲ್ಲ.
ಳಿದಂತೆ ಕಾಂಗ್ರೆಸ್, ಜೆಡಿಎಸ್‌ಗಳ ಓಟು ಬ್ಯಾಂಕ್‌ಗಳಲ್ಲಿ ಹೆಚ್ಚಿನ ವ್ಯತ್ಯಾಸ ಆದಂತಿಲ್ಲ. ಆದರೆ ಒಂದು ಮಾತಂತೂ ನಿಜ. ಸಿದ್ಧಾಂತಬದ್ಧ ರಾಜಕೀಯದ ಚರಮಗೀತೆಯನ್ನು ಹಾಡಿದ್ದಾಗಿದೆ. ಕಾಂಗ್ರೆಸ್ ಸಮಾಜವಾದದ ಅಸ್ತಿತ್ವವನ್ನೇ ಮರೆತಿದೆ. ಬಿಜೆಪಿ ಹಿಂದುತ್ವದ ಪ್ರಾಮುಖ್ಯವನ್ನು ಕೈ ಬಿಟ್ಟಿದೆ. ಆದರೆ ಬಿಜೆಪಿಯ ಸೆಕ್ಯುಲರ್ ಹೊದಿಕೆಯನ್ನು ಇತರರು ನಂಬುತ್ತಿಲ್ಲ. ಅದೇ ರೀತಿ ಸೆಕ್ಯುಲರ್ ಪಕ್ಷಗಳೆಂದು ಹೇಳಿಕೊಳ್ಳುತ್ತಿರುವ, ವಾಸ್ತವದಲ್ಲಿ ಜಾತಿಯ ಬುನಾದಿಯನ್ನೇ ಭದ್ರವಾಗಿ ನಂಬಿಕೊಂಡಿರುವ, ಪಕ್ಷಗಳನ್ನು ಆಯಾ ಜಾತಿಗಳ ಜನ ಬಿಟ್ಟು ಬೇರೆ ಯಾರೂ ಓಲೈಸಲು ಸಿದ್ಧವಾಗಿಲ್ಲ. ಅಂತಹ ಪಕ್ಷದಲ್ಲಿ ಪ್ರಧಾನವಾದ ಜಾತಿಗಳಿಗೆ ಸೇರದೇ ಇರುವವರು ಅಲ್ಲಿ ಎರಡನೇ ದರ್ಜೆಯ ಸದಸ್ಯರೇ. ಈ ಚುನಾವಣೆ, ನಗರ ಕೇಂದ್ರಿತ ಚುನಾವಣೆಯಾದ್ದರಿಂದ ಸೆಕ್ಯುಲರ್ ಸಿದ್ಧಾಂತದ ಘೋಷಣೆಯ ಹಿಂದೆ ಅಲ್ಪಸಂಖ್ಯಾತರ ಪ್ರಾಮುಖ್ಯವನ್ನೇ ಪ್ರತಿಪಾದಿಸುವ ಪಕ್ಷಗಳೂ ಅನೇಕ ಕಡೆಗಳಲ್ಲಿ ನಿರ್ಣಾಯಕ. ಆದರೆ ರಾಜ್ಯ ಮಟ್ಟದ ವಿಶಾಲ ಭೂಮಿಕೆಯಲ್ಲಿ ಅದು ನಗಣ್ಯವಾಗಬಹುದು. ಬಿಜೆಪಿಯ ಬೇರುಗಳಿರುವುದು ಜನಸಂಘದಲ್ಲಿ. ಭಾರತೀಯ ಜನಸಂಘ, ಹಿಂದೂ ಮಹಾಸಭೆಯ ಒಂದು ಅವತಾರ ಅಷ್ಟೇ. ಆದರೆ ವಾಸ್ತವದಲ್ಲಿ ಈಗ ಬಿಜೆಪಿಯನ್ನು ಸಮಸ್ತ ಹಿಂದೂ ಸಮುದಾಯಗಳ ಹಿತರಕ್ಷಣೆಯ ಪಕ್ಷವೆಂದು ಅನೇಕ ಜನ ವರ್ಗಗಳು ನಂಬುವುದಿಲ್ಲ.
ಹಾಗೆಂದರೆ ಚುನಾವಣೆಯ ಲೆಕ್ಕಾಚಾರದಲ್ಲಿ ಮತದ ಜತೆಯಲ್ಲೇ ಜಾತಿಯ ಲೆಕ್ಕವೇ ಹೆಚ್ಚು ಪ್ರಾಮುಖ್ಯವಾಗುತ್ತದೆ. ರಾಜ್ಯದ ರಾಜಕೀಯದಲ್ಲಿ ಯಾವ ಪಕ್ಷದಲ್ಲಿ ಯಾವ ಜಾತಿಯ ಹಿತ ಜಾಸ್ತಿ ಎನ್ನುವುದು ಈಗ ತೀರ್ಮಾನವಾಗಬಹುದು. ಕನಿಷ್ಠ ಪಕ್ಷ ಆ ಸೂಚನೆಯಾದರೂ ಸಿಗಬಹುದು. ಕಾಯಿದೆಯ ಚೌಕಟ್ಟಿನಲ್ಲಿ, ಎಲ್ಲ ಪಕ್ಷಗಳೂ ಸಂವಿಧಾನಕ್ಕೆ ನಿಷ್ಠೆಯನ್ನು ಪ್ರಕಟಿಸಲೇ ಬೇಕಾಗಿರುವುದರಿಂದ ಎಲ್ಲವೂ ಸೆಕ್ಯುಲರ್ ಪಕ್ಷಗಳೇ. ಜಾತಿ ಆಧರಿತ ಪಕ್ಷಗಳಲ್ಲೂ ಇತರೆ ಜಾತಿಗಳ ಕೆಲವರಿಗೆ ಸ್ಥಾನ ಸಿಕ್ಕಿರಬಹುದು. ಅದನ್ನು ಅವರು ಪಡೆದಿದ್ದಲ್ಲ. ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದು ಅಷ್ಠೆ.
ಜಾತಿ ಜಾತಿಗಳ ಒಡಂಬಡಿಕೆ: ರಾಜ್ಯದ ಎಲ್ಲ ಕಡೆ ವ್ಯಾಪಕವಾಗಿ ಹಬ್ಬಿರುವ ಯಾವ ಒಂದು ಜಾತಿಯೂ ಕರ್ನಾಟಕದಲ್ಲಿ ಇಲ್ಲ. ಕೆಲವು ಕಡೆಗಳಲ್ಲಿ ಕೆಲವು ಜಾತಿಗಳ ಪ್ರಾಬಲ್ಯವಿದೆ, ಅಷ್ಟೇ. ಆ ಪರಿಸ್ಥಿತಿಯೇ, ಒಂದು ರೀತಿಯಲ್ಲಿ ಸೆಕ್ಯುಲರ್ ವ್ಯವಸ್ಥೆಯ ಭದ್ರತೆಯ ಬುನಾದಿ. ರಾಜಕೀಯವಾಗಿ ಜಾತಿ- ಜಾತಿಗಳ ನಡುವೆ ಕೊಡು-ಕೊಳ್ಳುವ ವ್ಯವಹಾರವನ್ನೇ ಸೆಕ್ಯೂಲರ್ ವ್ಯವಹಾರ ಎನ್ನುವವರೂ ಇದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ರಾಜಕೀಯದ ಅಂಗಳವನ್ನು ದಾಟಿ ಹೋದರೆ ಸಿಗುವ ಒಳಕೋಣೆ ಗಳಲ್ಲಿ ಭವಿಷ್ಯದ ಸಂಭವನೀಯ ಹೊಂದಾಣಿಕೆ, ಒಡಂಬಡಿಕೆ, ಹಂಚಿಕೆಯ ಮಾತುಕತೆಯೂ ಪಿಸು-ಪಿಸು ಧ್ವನಿಯಲ್ಲಿ ಆರಂಭವಾಗಿರುವುದೂ ನಿಜ. ಇವೆಲ್ಲದರ ಉದ್ದೇಶ ಒಂದೇ; ಅಧಿಕಾರ ಗ್ರಹಣ ಹಾಗೂ ಸಾಕು-ಬೇಕಾದಷ್ಟು ಸಂಪತ್ತಿನ ಗಳಿಕೆ.
ನಾಯಕತ್ವದ ವೈಫಲ್ಯ: ದೆಹಲಿಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಸಮಿತಿಯ ಅಧಿವೇಶನದಲ್ಲಿ ಪಕ್ಷದ ಹಿರಿಯ ತಲೆಯಾಳು, ಹಲವು ಹತ್ತು ಹೋರಾಟಗಳ ಕಲಿ, ಲಾಲ್‌ಕೃಷ್ಣ ಆಡ್ವಾಣಿ ಅವರು ಬಿಜೆಪಿ, ಪಕ್ಷದ ಹಲವಾರು ರಾಷ್ಟ್ರೀಯ ಸಮಸ್ಯೆಗಳನ್ನು ನಿಭಾಯಿಸುವುದರಲ್ಲಿ ವಿಫಲವಾಗಿದ್ದನ್ನು ಪ್ರಸ್ತಾಪಿಸಿರುವುದು ಗಮನಾರ್ಹ. ಅದರಲ್ಲಿ ಅವರು ಪ್ರಮುಖವಾಗಿ ಪ್ರಸ್ತಾಪಿಸಿದ್ದು ಕರ್ನಾಟಕದಲ್ಲಿ ಪಕ್ಷದ ಸರ್ಕಾರದ ಪ್ರಮುಖ ಸಚಿವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳಿಂದ ಉದ್ಭವವಾಗಿದ್ದ ವಾತಾವರಣವನ್ನು.
ಇಲ್ಲಿ ಈಗಿನ ಚುನಾವಣೆಯ ಹಿನ್ನೆಲೆಯಲ್ಲಿ, ಯಡಿಯೂರಪ್ಪ ಅವರನ್ನು ಪಕ್ಷದ ನಾಯಕರು ಅಧಿಕಾರ ಸ್ಥಾನವನ್ನು ಬಿಡಿ ಎಂದು ಹೇಳಿದ್ದರೇ ವಿನಾ ಪಕ್ಷ ಬಿಟ್ಟು ಹೋಗಿ ಎಂದಿರಲಿಲ್ಲ ಎನ್ನುವುದನ್ನು ಗಮನದಲ್ಲಿಡಲೇ ಬೇಕು. ಯಡಿಯೂರಪ್ಪ ಅವರೇ ಪಕ್ಷ ತ್ಯಾಗಮಾಡಿ, ತಮ್ಮ ವ್ಯಕ್ತಿತ್ವ ಆಧರಿತ ಪ್ರತ್ಯೇಕ ಪಕ್ಷದ ರಚನೆಯ ತೀರ್ಮಾನವನ್ನು ಕೈಗೊಂಡಿದ್ದು. ಅದರಿಂದ ಬಿಜೆಪಿಯ ಶಕ್ತಿ ಕಡಿಮೆಯಾಗಿದೆ. ಯಡಿಯೂರಪ್ಪ ಅವರಿಗೆ ಈಗಲೂ ರಾಜ್ಯದಲ್ಲಿ ಜನಪ್ರಿಯತೆ ಇದ್ದೇ ಇದೆ ಎನ್ನುವುದನ್ನು ರಾಜ್ಯಸಭೆಯಲ್ಲಿ ಪಕ್ಷದ ನಾಯಕರಾದ ಅರುಣ್ ಜೈಟ್ಲಿ ಅವರೇ ಒಂದು ಟಿವಿ ವಾಹಿನಿಯ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ.
ಯಡಿಯೂರಪ್ಪ ಅವರ ನೂತನ ಪಾರ್ಟಿ - ಕರ್ನಾಟಕ ಜನತಾ ಪಕ್ಷ- ಸ್ಥಾಪನೆಯಾದ ಅನಂತರ ವಿಧಾನಸಭೆಯಲ್ಲಿ ಬಿಜೆಪಿಯ ಬಹುಮತ ನಿಜವಾಗಲೂ ಕುಸಿದು ಬಿತ್ತು. ಆದರೂ ಸರ್ಕಾರ ಬೀಳಲಿಲ್ಲ. ಅದನ್ನು ಉಳಿಸಿದ್ದು ಪ್ರತಿಪಕ್ಷಗಳ ಸಾಲಿನಲ್ಲಿ ಕೂತವರು ಹಾಗೂ ಈಗಲೂ ಮಂತ್ರಿಮಂಡಲದಲ್ಲೇ ವಿರಾಜಮಾನವಾಗಿರುವ ಯಡಿಯೂರಪ್ಪ ಹಿಂಬಾಲಕರು.
ಜನತಂತ್ರದ ದುರಂತ: ಇವರಿಗೆಲ್ಲ ಜಗದೀಶ ಶೆಟ್ಟರ್ ಅವರ ಸರ್ಕಾರವನ್ನು ಉಳಿಸುವುದರಲ್ಲಿ ಇಷ್ಟೊಂದು ಆಸಕ್ತಿ ಯಾಕೆ? ತಮಗೆ ಬೇಕಾದ ಕೆಲಸಗಳನ್ನು (ಕ್ಷೇತ್ರದ ಅಭಿವೃದ್ಧಿ ಇರಬಹುದು, ಸಾಂಸಾರಿಕ ಹಿತರಕ್ಷಣೆಯದ್ದೇ ಆಗಿರಬಹುದು) ಮಾಡಿಸಿಕೊಳ್ಳಲು ಇಂತಹ ಪರ್ವಕಾಲದಲ್ಲೇ ಸಕಾಲ ಎನ್ನುವುದು ಅನುಭವಸ್ಥ ರಾಜಕಾರಣಿಗಳಿಗೆಲ್ಲ ಗೊತ್ತು. ಇಲ್ಲಿ ಆಳುವ ಪಕ್ಷದ ಪ್ರಬಲ ಗುಂಪು ಬಲಹೀನ ಗುಂಪು, ಪ್ರತಿಪಕ್ಷಗಳು ಎನ್ನುವ ಭೇದಭಾವ ಇಲ್ಲವೇ ಇಲ್ಲ. ವೈಯಕ್ತಿಕ ಹಿತರಕ್ಷಣೆಯ ಪ್ರಶ್ನೆ ಬಂದಾಗ ಉಳಿದೆಲ್ಲವೂ ಗೌಣ.
ಈಗಿನ ವಿಚಿತ್ರ ಪರಿಸ್ಥಿತಿಯನ್ನು ಗಮನಿಸಿ. ಕೆಲವು ಮಂತ್ರಿಗಳ ನಿಷ್ಠೆ ವೈಯಕ್ತಿಕವಾಗಿ ಯಡಿಯೂರಪ್ಪ ಅವರಿಗೇ. ಅವರಲ್ಲಿ ಯಾರಿಗೂ ಈಗ ಜಗದೀಶ ಶೆಟ್ಟರ್ ತಲೆ ಕಂಡರಾಗುವುದಿಲ್ಲ. ಆದರೂ ಅವರು ಶೆಟ್ಟರ್ ಸರ್ಕಾರದಲ್ಲಿ ಮಂತ್ರಿಗಳು, ಮಂತ್ರಿಗಳಾಗಿ ಸರ್ಕಾರದ ಪರವಾಗಿ ನಿರ್ಧಾರಗಳನ್ನು ಮಾಡುತ್ತಿದ್ದಾರೆ. ಆದೇಶಗಳನ್ನು ಪ್ರಕಟಿಸುತ್ತಿದ್ದಾರೆ. ಅವರಿಗೆ ಯಾವ ಸರ್ಕಾರದಲ್ಲಿ ವಿಶ್ವಾಸವಿಲ್ಲವೋ ಆ ಸರ್ಕಾರದ ಪರವಾಗಿಯೇ ಆದೇಶಗಳನ್ನು ಪ್ರಕಟಿಸುವುದಕ್ಕೆ ಏನು ಹೇಳಬೇಕು? ಏಪ್ರಿಲ್‌ವರೆಗೂ ಇದು ಹೀಗೇ ನಡೆಯಬೇಕೇನು?
ಕರ್ನಾಟಕದಲ್ಲಿ ಜನತಂತ್ರದ ಈ ದುರಂತಕ್ಕೆ ಹಿಂದಿನ- ಈಗಿನ ಬಿಜೆಪಿ ಶಾಸಕರೇ ಕಾರಣ. ಅವರೇ ಆ ಜವಾಬ್ದಾರಿಯನ್ನು ಹೊರಬೇಕು. ಒಂದಲ್ಲ ಒಂದು ದಿನ ಜನತೆಗೆ ಈ ವಿಚಾರದಲ್ಲಿ ವಿವರಣೆಯನ್ನು ಕೊಡಲೇಬೇಕು.
ತೆರೆದ ಬಾಗಿಲು: ಇದರ ನಡುವೆಯೇ ಕಾಂಗ್ರೆಸ್ ಕಳೆದ ತಿಂಗಳಷ್ಟೇ ಪ್ರಕಟಿಸಿದ ವಿಧಾನಸಭೆ ಟಿಕೆಟ್ ಹಂಚಿಕೆಯ ನೀತಿಯಲ್ಲಿ ರೂಪಿಸಿದ್ದ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ಗೆಲ್ಲುವವರಿಗೆಲ್ಲ ಕಾಂಗ್ರೆಸ್ ಟಿಕೆಟ್ ಸಿಗುತ್ತದೆ ಎನ್ನುವ ಪ್ರಚಾರದ ಜತೆಗೇ ಪಕ್ಷ ಪ್ರವೇಶದ ಬಾಗಿಲುಗಳನ್ನು ಅಗಲವಾಗಿ ತೆರೆದಿದೆ. ಸದ್ಯದಲ್ಲಿ ಕಾಂಗ್ರೆಸ್, ಯಾವುದೇ ರೀತಿಯ ಷರತ್ತುಗಳನ್ನು ಹೊರಗಿನಿಂದ ಬರುವ ಟಿಕೆಟ್ ಆಕಾಂಕ್ಷಿಗಳ ಮೇಲೆ ಹೇರಿಲ್ಲ. ಈಗಾಗಲೇ, ಇನ್ನೂ ಬೇರೆ ಬೇರೆ ಪಕ್ಷಗಳಲ್ಲಿರುವ, ಚುನಾವಣೆಯ ತಂತ್ರಗಳನ್ನು ಕರತಲಾಮಲಕವಾಗಿ ತಿಳಿದುಕೊಂಡಿರುವ ಅವಕಾಶವಾದಿ ವ್ಯಕ್ತಿಗಳು, ತಮ್ಮ ಹಳೆಯ ಚಿಹ್ನೆಗಳನ್ನು ಬದಿಗಿಟ್ಟು ಹಸ್ತದ ಸಂಕೇತದ ಪ್ರದರ್ಶನಕ್ಕೆ ನಿಂತಿದ್ದಾರೆ. ಅಂತಹವರಲ್ಲಿ ಬಿಜೆಪಿಯ ಸಹವಾಸವನ್ನೂ ಮಾಡಿದವರಿದ್ದಾರೆ. ಕಾಂಗ್ರೆಸ್ ವರಿಷ್ಠರು ಈ ವಿಚಾರದಲ್ಲಿ ತೆಪ್ಪಗಿದ್ದಾರೆ. ಅವರಿಗೆ ಈಗ ಹೇಗಾದರೂ ಮಾಡಿ ಕರ್ನಾಟಕದಲ್ಲಿ ಅಧಿಕಾರವನ್ನು ಹಿಡಿದುಕೊಳ್ಳಲೇ ಬೇಕೆನ್ನುವ ಬಯಕೆ ಉತ್ಕಟವಾಗಿದೆ.
ಎರಡು ವರ್ಷಗಳ ಹಿಂದೆ, ರಾಜ್ಯದಲ್ಲಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಬಿಜೆಪಿ ವರಿಷ್ಠರು ಭ್ರಷ್ಟಾಚಾರ ವಿರೋಧಿ ಹೋರಾಟದ ಪ್ರತಿಜ್ಞೆಗೆ ತಿಲಾಂಜಲಿ ಕೊಟ್ಟಂತೆ, ಈಗ ಕಾಂಗ್ರೆಸ್ ವರಿಷ್ಠರು ಸೆಕ್ಯುಲರ್ ಸಿದ್ಧಾಂತಕ್ಕೆ ತಾತ್ಕಾಲಿಕವಾಗಿ ವಿದಾಯವನ್ನು ಹೇಳಿರುವಂತಿದೆ. ಜಾತ್ಯತೀತ ಜನತಾದಳದ ನಾಯಕರು ತಮ್ಮ ಪಕ್ಷದ ಸೀಮಿತ ಆದರೆ ನಿಶ್ಚಿತವಾದ ಶಕ್ತಿಯಲ್ಲಿ ನಂಬಿಕೆ ಇಟ್ಟು ಆಸಕ್ತಿಯಿಂದ ರಾಜಕೀಯ ಬದಲಾವಣೆಗಳನ್ನು ಗಂಭೀರವಾಗಿ ಗಮನಿಸುತ್ತಿದ್ದಾರೆ. ಬಹಿರಂಗವಾಗಿ ಕಾಂಗ್ರೆಸ್ - ಬಿಜೆಪಿಗಳನ್ನು ವಾಚಾಮಗೋಚರವಾಗಿ ತೆಗಳಿದರೂ (ಯಡಿಯೂರಪ್ಪ - ಶ್ರೀರಾಮುಲು ಹೆಸರು ಹೇಳಿಲ್ಲ) ಅಂತರಂಗದಲ್ಲಿ ಅಧಿಕಾರದಲ್ಲಿ ಪಾಲು ಸಿಗುವುದಾದರೆ ಯಾರ ಜತೆಗಾದರೂ ಹೊಂದಾಣಿಕೆಗೆ ಸಿದ್ದ ಎನ್ನುವ ಸಂಕೇತವನ್ನು ತಮ್ಮದೇ ಆದ ರೀತಿಯಲ್ಲಿ ಟಿವಿ ಚರ್ಚೆಗಳಲ್ಲಿ ರವಾನಿಸುತ್ತಿದ್ದಾರೆ.
ನಿಜ ಹೇಳಬೇಕೆಂದರೆ, ಯಾವ ಪಕ್ಷದ ರಾಜ್ಯ ಮಟ್ಟದ ನಾಯಕತ್ವಕ್ಕೂ ಪೌರಸಂಸ್ಥೆಗಳ ಚುನಾವಣೆಗಳಲ್ಲಿ ಆಸಕ್ತಿ ಇರಲಿಲ್ಲ. ಅವರ ಪಾಲಿಗೆ ಈ ಚುನಾವಣೆಯ ಮೂಲಕ ಭವಿಷ್ಯದ ವಿಧಾನ ಸಭೆ ಚುನಾವಣೆಗೆ ಸೂಕ್ತ ತಂತ್ರವನ್ನು ರೂಪಿಸುವುದೇ ಪ್ರಮುಖವಾದ ಉದ್ದೇಶವಾಗಿತ್ತು. ಪೌರ ಸಂಸ್ಥೆಗಳ ಚುನಾವಣೆಯಲ್ಲಿ ರೈತಸಂಘಟನೆಗಳು, ದಲಿತ, ಶ್ರಮಿಕ, ಸುಧಾರಣೆವಾದಿ ಚಿಂತಕರು, ಭ್ರಷ್ಟಾಚಾರ ವಿರೋಧಿ ಹೋರಾಟಗಾರರು, ಇವರ್ಯಾರಿಗೂ ಆಸಕ್ತಿಯೇ ಇದಂತಿರಲಿಲ್ಲ.
ಚುನಾವಣೆಯ ಅನಂತರ ಈ ಸಂಘಟನೆಗಳ ನಾಯಕರೆಲ್ಲ ಹೊರಗಡೆ ಬಂದಾಗ, ಏನೇನು ಸಬೂಬುಗಳನ್ನು ಹೇಳುತ್ತಾರೋ ನೋಡಬೇಕು. ಅದನ್ನು ಊಹಿಸುವುದೂ ಬೇರೆಯವರಿಗೆ ಕಷ್ಟ. ಒಟ್ಟಿನಲ್ಲಿ ಕರ್ನಾಟಕ ರಾಜ್ಯದ ರಾಜಕಾರಣ ಅರಾಜಕತೆ, ಅನೈತಿಕತೆಯತ್ತ ದಾಪುಗಾಲು ಹಾಕುತ್ತಿರುವಂತಿದೆ. ರಾಜಕೀಯವನ್ನು ವೃತ್ತಿ ರಾಜಕಾರಣಿಗಳಿಗೇ ಧಾರೆ ಎರೆದುಕೊಟ್ಟರೆ ಆಗುವುದೇ ಹೀಗೆ.
ಕಿಡಿಗೇಡಿತನ: ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರುವಾಗ ರಾಜಕಾರಣದ ಹೊಚ್ಚಹೊಸ ಭ್ರಷ್ಟ ತಂತ್ರವಾದ ಆಪರೇಷನ್ ಕಮಲದ ಪ್ರಯೋಗವಾಗಿತ್ತು, ಸುಮಾರು ಐದು ವರ್ಷಗಳ ಅನಂತರ ಅದೇ ಬಿಜೆಪಿ ಜನ ರಾಜಕೀಯ ನಿಷ್ಠೆಗೂ ಮಂತ್ರಿಸ್ಥಾನಕ್ಕೂ ಸಂಬಂಧವೇ ಇಲ್ಲವೆನ್ನುವ ರಾಜಕೀಯ ವ್ಯಭಿಚಾರದ ಸೂತ್ರವನ್ನು ಬಿಟ್ಟು ಹೋಗಲಿದೆ.
- ಸತ್ಯ
anisikeprabha@gmail.com