ತಪ್ಪಿತಸ್ಥರಿಗೆ ಶಿಕ್ಷೆಯಾದಾಗ ಮಾತ್ರ, ಪ್ರೀತಿ ಅರಳಬಲ್ಲದು!
ಹೈದರಾಬಾದ್ ಬಾಂಬ್ ಸ್ಫೋಟದ ಘಟನೆಯನ್ನು ಉದಾಹರಣೆಯನ್ನಾಗಿ ತೆಗೆದುಕೊಂಡು, ಕೋಮು ಸಾಮರಸ್ಯದ ಬಗ್ಗೆ ನಜೀಬ್ಜಂಗ್ ಅವರು ಬರೆದಿರುವ ಲೇಖನ ಸಮಯೋಚಿತವಾಗಿದೆ.
ಆದರೆ ಇಡೀ ಲೇಖನವು 'ಸದ್ಭುದ್ಧಿ ಪ್ರಚೋದಕ ಪ್ರವಚನ'ದಂತೆ ಭಾಸವಾಗುತ್ತಿದೆ. ಸಾಮಾನ್ಯವಾಗಿ ರಾಜಕೀಯ ವ್ಯಕ್ತಿಗಳ ಲೇಖನದಂತೆಯೇ ಇದು ಇದ್ದರೂ, ಅಲ್ಲಲ್ಲಿ ಕೆಲವು ರಚನಾತ್ಮಕ ಸಲಹೆಗಳೂ ಬಂದಿವೆ. ಉದಾಹರಣೆಗೆ 'ಭಾರತದಲ್ಲಿರುವ ಮುಸ್ಲಿಮರಿಗೆ ಹಿಂಸೆ ಬೇಕಾಗಿಲ್ಲ. ಆದರೆ ಅವರನ್ನು ಮುಸ್ಲಿಂ ಮೂಲಭೂತವಾದಿಗಳು ಸುಮ್ಮನಿರಲು ಬಿಡುತ್ತಿಲ್ಲ', 'ಶಾ ಬಾನು ಪ್ರಕರಣದಲ್ಲಿ ಮೂಲಭೂತವಾದಿ ಮುಸ್ಲಿಂ ನಾಯಕರು ವಿನಾಕಾರಣ ಮೂಗು ತೂರಿಸಿದರು' ಇತ್ಯಾದಿ ವಾಕ್ಯಗಳು ವಾಸ್ತವವನ್ನು ಹೇಳುತ್ತಿವೆ. ಆದರೆ ಇಷ್ಟು ಮಾತ್ರದಿಂದ ಸಮಸ್ಯೆಯನ್ನು ಬಿಡಿಸಿದಂತೆ ಆಗುವುದಿಲ್ಲ. ಸಮಸ್ಯೆಯ ಬೇರು ಎಲ್ಲಿದೆ ಎಂದು ನೋಡಿದರೆ ಎಲ್ಲವೂ ಸ್ಪಷ್ಟವಾಗುತ್ತದೆ. ಆದರೆ ಈ ಕೆಲಸವನ್ನು ತಥಾಕಥಿತ ನಾಯಕರಾಗಲೀ, ಸ್ವಹಿತಾಸಕ್ತ ಚಿಂತಕ/ಲೇಖಕರಾಗಲೀ ಮಾಡುತ್ತಿಲ್ಲ.
ಸಮಸ್ಯೆಯ ಬೇರು ಇರುವುದು ನಮ್ಮ ಸಂವಿಧಾನದಲ್ಲಿಯೇ. ಬಹುಸಂಖ್ಯಾತರು, ಅಲ್ಪಸಂಖ್ಯಾತರು ಎಂದು ವಿಭಾಗ ಮಾಡುವುದೇ ನಾನಾ ತೊಂದರೆಗಳಿಗೆ ಆಹ್ವಾನ ಕೊಟ್ಟಂತೆ. ಅದರ ಬದಲು ಇಡೀ ದೇಶಕ್ಕೆ ಏಕರೂಪ ನಾಗರಿಕ ಸಂಹಿತೆಯನ್ನು ತಂದರೆ ಸಮಸ್ಯೆ ಅರ್ಧದಷ್ಟು ತಂತಾನೆ ಪರಿಹರಿಸಲ್ಪಡುತ್ತದೆ.
ಅಂತೆಯೇ ಸಮಸ್ಯೆಯ ಇನ್ನೊಂದು ಬೇರು ಇರುವುದು ಜಿಹಾದ್ ಹಾಗೂ ಮತಾಂತರಗಳಲ್ಲಿ. ಎಲ್ಲ ಪ್ರಜ್ಞಾವಂತರೂ ಇದನ್ನು ಕುರಿತು ಚರ್ಚಿಸಬೇಕಿದೆ. ಜಿಹಾದ್ ಮತ್ತು ಮತಾಂತರವನ್ನು ನಿಷೇಧಿಸಿದರೆ ಸಮಸ್ಯೆಯ ಬಹುಭಾಗ ನಿವಾರಣೆಯಾದಂತೆಯೇ. ಇವೆರೆಡರ ಬಗ್ಗೆ ಜಂಗ್ ಅವರು ಏಕೋ ಏನನ್ನೂ ಹೇಳಿಲ್ಲ. ಅಷ್ಟೇ ಅಲ್ಲ. ಈಗಲೂ ಬಹಳಷ್ಟು ರಾಷ್ಟ್ರವಿರೋಧಿ ವ್ಯಕ್ತಿಗಳ ಮನಸ್ಸಿನಲ್ಲಿ ನಗುತ್ತಾ ಪಾಕಿಸ್ತಾನವನ್ನು ಪಡೆದೆವು, ಹೋರಾಡುತ್ತಾ ಹಿಂದುಸ್ಥಾನವನ್ನು ಪಡೆಯೋಣ ಎಂಬ ವಾಕ್ಯ ಮನೆಮಾಡಿದೆ. ಅದನ್ನು ಸಾಕಾರಗೊಳಿಸುವ ಪ್ರಯತ್ನಗಳೂ ನಡೆಯುತ್ತಿವೆ. ಇಲ್ಲಿ ಒಂದು ಮಾತು. ದೇಶವಿಭಜನೆಯ ನಿಕಟಪೂರ್ವದಲ್ಲಿ ಲಕ್ಷಾಂತರ ಅಮಾಯಕ ಹಿಂದುಗಳನ್ನು ಕೊಚ್ಚಿ ಪಾಕಿಸ್ತಾನವನ್ನು ನಿರ್ಮಾಣ ಮಾಡಲಾಯಿತು. ಪಾಕಿಸ್ತಾನದ ರಚನೆಯಾದ ಮೇಲೆ ಅಲ್ಲಿ ಏನಾದರೂ ಶ್ಲಾಘ್ಯವಾದ ಸರ್ಕಾರವು ಬಂದಿದೆಯೇ? ಜನರು ನೆಮ್ಮದಿಯಿಂದ ಇದ್ದಾರೆಯೇ? ಜಗತ್ತಿನ ಉಪಯೋಗಕ್ಕಾಗಿ ಪಾಕಿಸ್ತಾನದಿಂದ ಏನಾದರೂ ಕೊಡುಗೆ ಬಂದಿದೆಯೇ? ಇಡೀ ಜಗತ್ತಿಗೆ ಗೊತ್ತಿರುವ ವಿದ್ಯಮಾನಗಳಿಗೆ ಯಾರೂ ಕನ್ನಡಿ ಹಿಡಿಯಬೇಕಾಗಿಲ್ಲ.
ಇನ್ನು ಜಂಗ್, ಸೀತಾರಾಮ್ ಯಚೂರಿ ಅವರನ್ನು ಹೆಸರಾಂತ ಕಮ್ಯೂನಿಸ್ಟ್ ನಾಯಕರೆಂದು ಉಲ್ಲೇಖಿಸಿ ಅವರ ಲೇಖನದ ಸಾರಾಂಶವನ್ನು ತಿಳಿಸಿದ್ದಾರೆ. ಯಚೂರಿಯವರು ಸೇರಿದಂತೆ ಭಾರತದಲ್ಲಿ ಎಷ್ಟು ಜನ ಕಮ್ಯುನಿಸ್ಟರಿಗೆ ಈ ದೇಶದ ಮೇಲೆ ನಿಷ್ಠೆಯಿದೆಯೋ ನನಗೆ ಗೊತ್ತಿಲ್ಲ. ಆ ಪಕ್ಷದ ನಾಯಕರಿಗೆ ಈ ದೇಶದ ಹಿತಕ್ಕಾಗಿ ಏನು ವಿಚಾರಗಳಿವೆ ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ. ಪಶ್ಚಿಮ ಬಂಗಾಳದಲ್ಲಿ 25 ವರ್ಷಗಳ ಕಾಲ ಸಿಪಿಎಂ ಸರ್ಕಾರವಿದ್ದಾಗ ಕೋಮು ಸಾಮರಸ್ಯ ಹೇಗಿತ್ತು ಎಂಬುದನ್ನು ಯಾರಾದರೂ ತಿಳಿಸಿಕೊಟ್ಟರೆ ನಾನು ಋಣಿ.
ಕೊನೆಯದಾಗಿ ಜಂಗ್ ಅವರು ತಿಳಿಸಿರುವಂತೆ ಹಿಂದೂಗಳು ಮತ್ತು ಮುಸ್ಲಿಮರ ಮಧ್ಯೆ ಪ್ರೀತಿಯ ಹೂ ಅರಳಬೇಕಾಗಿದೆ ಎಂಬುದು ಒಳ್ಳೆಯ ವಿಚಾರವೇ. ಸಂದೇಹವಿಲ್ಲ. ಆದರೆ ಎಲ್ಲಿಯವರೆಗೆ ಸಮಾಜಘಾತುಕ ಚಟುವಟಿಕೆಗಳು ನಡೆಯುತ್ತವೋ, ತಪ್ಪಿತಸ್ಥರಿಗೆ ನಿರ್ದಾಕ್ಷಿಣ್ಯವಾಗಿ ಶಿಕ್ಷೆಯಾಗುವುದಿಲ್ಲವೋ ಅಲ್ಲಿಯವರೆಗೆ ಶಾಂತಿ-ಪ್ರೀತಿಯ ಮಾತುಗಳು ವ್ಯರ್ಥಾಲಾಪವಾಗುತ್ತದಷ್ಟೆ.
- ಕೆ.ಎಸ್. ಶ್ರೀಧರ್, ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

