ಸೈಕಲ್ ಹತ್ತುವಂತಿಲ್ಲ, ಸೇಂಧಿ, ಸಾರಾಯಿ ಕುಡಿಯುವಂತಿಲ್ಲ, ತಲೆಗೂದಲು ಕ್ರಾಪ್ ಬಿಡುವಂತಿಲ್ಲ, ಬೇರೆಯವರ ಮನೆಯಲ್ಲಿ ಕೆಲಸ, ಊಟ ಮಾಡುವಂತಿಲ್ಲ. ಅಷ್ಟೇ ಏಕೆ, ತಮ್ಮದೇ ಮನೆಯ ಗೊಬ್ಬರವನ್ನಾಗಲಿ ಹಂಚನ್ನಾಗಲಿ ಹೊರುವಂತಿಲ್ಲ...
ಇದು 'ಗೊಂಡ' ಎಂಬ ಸಮುದಾಯದಲ್ಲಿ ಬಹು ವರ್ಷಗಳ ಹಿಂದೆ ಜಾರಿಯಲ್ಲಿದ್ದ ಕಟ್ಟಳೆಗಳು. ಇನ್ನು ವಿವಾಹ ಸಂಬಂಧ ಬೆಳೆಸುವಾಗ ಇವರದೇ ಸಮುದಾಯದ 'ತೋಳ' ಬೆಡಗಿನವರಿಗೆ ಬೇರೆ ಬೆಡಗಿನವರು ಹೆಣ್ಣು ಕೊಡುವಂತಿರಲಿಲ್ಲ. ಕೊಟ್ಟರೆ ಸಂತತಿಯೇ ತೊಳೆದು ಹೋಗುತ್ತದೆ ಎಂಬ ನಂಬಿಕೆಯೂ ಗೊಂಡರಲ್ಲಿ ಇತ್ತು.
ಈ ಹಿಂದೆ ಹಿರಿಯರು ಏನೇ ರೀತಿ ರಿವಾಜುಗಳನ್ನು ಜಾರಿಗೆ ತಂದಿದ್ದರೂ ಅದರ ಹಿಂದೆ ಒಂದು ಅರ್ಥ ಇತ್ತು. ಅದರಲ್ಲಿ ವೈಜ್ಞಾನಿಕ ಕಾರಣಗಳು ಅಡಗಿರುತ್ತಿದ್ದವು ಎಂಬುದು ಸುಳ್ಳಲ್ಲ. ಆದರೆ, ನಾಗರಿಕತೆ ಬೆಳೆದಂತೆ ಕಟ್ಟಳೆಗಳು ಬಿಟ್ಟು ಹೋಗುತ್ತಿವೆ.
ಆಚಾರ, ವಿಚಾರಗಳೇನು?: ಉದಾಹರಣೆಗೆ ಗೊಂಡ ಸಮುದಾಯದ ಕಟ್ಟಳೆಗಳಾವವೂ ಸಮಾಜಕ್ಕೆ ಮಾರಕ ಆಗಿರಲಿಲ್ಲ. ಸಮುದಾಯವನ್ನು ಎಚ್ಚರಿಸುವ ಸಂದೇಶಗಳೂ ಆದರಲ್ಲಿತ್ತು ಎಂಬುದು ಸುಳ್ಳಲ್ಲ. ಅಂದಹಾಗೆ ಈ ಗೊಂಡ ಸಮುದಾಯದ ಜನ ಎಲ್ಲಿಯವರು, ಅವರ ಆಚಾರ ವಿಚಾರಗಳೇನು ಎಂಬುದನ್ನು ಡಾ.ಎಲ್.ಆರ್.ಹೆಗಡೆ ಅವರು ವಿವರಿಸಿದ್ದಾರೆ.
ಸಮುದಾಯದ ಮುಖಂಡರ ಪ್ರಕಾರ ಗೊಂಡರು ಮೂಲತ: ನೂರಾರು ವರ್ಷಗಳ ಹಿಂದೆ ಮಧ್ಯಪ್ರದೇಶದಿಂದ ಕರ್ನಾಟಕಕ್ಕೆ ವಲಸೆ ಬಂದಿರುವ ಸಾಧ್ಯತೆ ಇದೆ. ಇಲ್ಲಿಂದ ಅವರು ಆಂಧ್ರ ಮತ್ತಿತರ ನೆರೆಯ ರಾಜ್ಯಗಳಿಗೂ ಹೋಗಿ ನೆಲೆ ಕಂಡುಕೊಂಡಿರಬಹುದು.
ಕರ್ನಾಟಕದಲ್ಲಿ ಗೊಂಡ, ರಾಜಗೊಂಡ, ರಾಜಕೊಂಡ ಹೆಸರಲ್ಲಿ ಈ ಸಮುದಾಯದವರು ನೆಲೆಸಿದ್ದಾರೆ. ಗೊಂಡರು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ರಾಜಗೊಂಡರು ಬೀದರ್ ಪ್ರದೇಶದಲ್ಲಿದ್ದಾರೆ. ಇನ್ನು ರಾಜಕೊಂಡರು ಆಂಧ್ರದಲ್ಲಿದ್ದಾರೆ.
ಉತ್ತರ ಕನ್ನಡದ ಗೊಂಡರು ಹೊನ್ನಾವರ, ಕುಮುಟಾ ಮತ್ತಿತರ ತಾಲೂಕುಗಳಲ್ಲಿ ವಾಸವಿದ್ದಾರೆ. ಧರಿಸುವ ಬಟ್ಟೆಬರೆಯಲ್ಲೇ ಗೊಂಡರನ್ನು ಗುರುತಿಸಬಹುದು. ಪುರುಷರು ಮೊಳಕಾಲವರೆಗೆ ಪಂಚೆ, ತಲೆಗೆ ಮುಂಡಾಸು, ನಿಲುವಂಗಿ, ಕಪ್ಪು ಬಣ್ಣದ ಕೋಟು, ಕಿವಿಗೆ ಓಲೆ, ಕೈಗೆ ಬೆಳ್ಳಿಯ ಬಳೆ ಹಾಕುತ್ತಾರೆ. ಸ್ತ್ರೀಯರು ಸೀರೆ, ಮಣಿಸರ, ಗಾಜಿನ ಬಳೆ, ದೊಡ್ಡಗಾತ್ರದ ಓಲೆ ಹಾಕುತ್ತಾರೆ. ರವಿಕೆ ಧರಿಸದೆ ಸೀರೆಯನ್ನು ಸರಕ್ಕೆ ಸಿಕ್ಕಿಸಿಕೊಳ್ಳುವುದು ಇವರ ಮತ್ತೊಂದು ವೈಶಿಷ್ಟ್ಯ.
ದಿನಗೂಲಿಯಾಗಿ ಬೇಳೆಕಾಳು: ಗೊಂಡರ ಮೂಲ ಕಸುಬು ವ್ಯವಸಾಯ. ತಾವೇ ಬೇಸಾಯ ಮಾಡುವುದರ ಜೊತೆಗೆ ಬೇರೆಯವರ ಹೊಲ, ಗದ್ದೆಗಳಲ್ಲಿಯೂ ಕೂಲಿ ಕೆಲಸ ಮಾಡುತ್ತಾರೆ. ಈ ಹಿಂದೆ ಗೊಂಡರು ದಿನಗೂಲಿ ರೂಪದಲ್ಲಿ ಬೇಳೆಕಾಳುಗಳನ್ನು ಪಡೆದುಕೊಳ್ಳುತ್ತಿದ್ದರಂತೆ. ಗೊಂಡರು ಈ ಹಿಂದೆ ಯುದ್ಧದಲ್ಲಿಯೂ ಭಾಗಿಯಾಗಿದ್ದಿರಬಹುದು ಎನ್ನುತ್ತಾರೆ ಹಿರಿಯರು. ಏಕೆಂದರೆ, ಅವರು ಕತ್ತಿ, ಈಟಿಗಳನ್ನು ಹೆಚ್ಚಾಗಿ ಬಳಸುತ್ತಿದ್ದರಂತೆ. ಬಂದೂಕು ಬರುವವರೆಗೆ ಆ ಆಯುಧಗಳನ್ನೇ ಬಳಸಿ ಬೇಟೆಗೂ ಹೋಗುತ್ತಿದ್ದರು. ಬಂದೂಕಿನ ಬಳಕೆ ಆರಂಭವಾದ ಮೇಲೆ ಆಯುಧಗಳು ನೇಪಥ್ಯಕ್ಕೆ ಸರಿಯಿತು.
ಗೊಂಡರು ಗುಂಪುಗುಂಪಾಗಿ ಭೇಟೆಗೆ ಹೋಗುತ್ತಿದ್ದರು. ಕಾಡಿನೊಳಗೆ ಹೋಗಿ ಅವರು ಭೇಟೆಗೆ ಕಾಯುತ್ತಿದ್ದರು. ಒಬ್ಬರಿಗೊಬ್ಬರು ಅಂತರ ಕಾಯ್ದುಕೊಂಡು, ಬಂದೂಕು ಹಿಡಿದು ಅರಣ್ಯದಲ್ಲಿ ಕೂರುತ್ತಾರೆ. ಕೆಲವರು ಕಿರುಚಾಡಿಕೊಂಡು ಓಡೋಡಿ ಬರುತ್ತಾರೆ. ಪ್ರಾಣಿಗಳನ್ನು ಅವು ಇರುವ ಸ್ಥಳದಿಂದ ಎಬ್ಬಿಸಿ ಓಡಿಸುವುದು ಇದರ ಉದ್ದೇಶ. ಕಿರುಚಾಟಕ್ಕೆ ಹೆದರಿ ಪ್ರಾಣಿಗಳು ಪೊದೆಗಳ ಮಧ್ಯೆಯಿಂದ ಹೊರಕ್ಕೆ ಓಡಿ ಬರುತ್ತವೆ. ಆಗ ಬೇಟೆಗಾರರು ಅವುಗಳಿಗೆ ಗುಂಡಿಕ್ಕುತ್ತಾರೆ. ಗೊಂಡರು ಸಾಲಿನಲ್ಲಿ ಬಂದೂಕು ಹಿಡಿದು ಕೂರುತ್ತಿದ್ದುದರಿಂದ ಬೇಟೆ ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಏಕೆಂದರೆ ಒಬ್ಬರ ಗುಂಡೇಟು ಮಿಸ್ ಆದರೂ ಮತ್ತೊಬ್ಬರ ಗುಂಡೇಟಿಗೆ ಬಲಿ ಆಗುತ್ತಿತ್ತು. ಕಾಡುಕೋಳಿ, ಕಾಡುಕುರಿ, ಕಾಡುಬೆಕ್ಕು, ಕಡ, ಮಿಕ, ಬರ್ಕ, ಮುಳ್ಳುಹಂದಿ ಮತ್ತಿತರ ಪ್ರಾಣಿಗಳನ್ನು ಗೊಂಡರು ಬೇಟೆಯಾಡುತ್ತಿದ್ದರು.
ಬೇಟೆಗೆ ಮುನ್ನ ದೇವರಿಗೆ ಹರಕೆ: ಬೇಟೆಗೆ ಹೊರಡುವ ಮುನ್ನ ದೇವರಿಗೆ ಹರಕೆ ಹೊರುವ ಸಂಪ್ರದಾಯವೂ ಇತ್ತು. ಒಂದು ವೇಳೆ ಹರಕೆ ಹೊತ್ತು ಹೋದಾಗ ಯಾವುದಾದರೂ ಪ್ರಾಣಿ ಸಿಕ್ಕರೆ ಅದರ ಮಾಂಸವನ್ನು ದೇವರಿಗೆ ನೈವೇದ್ಯವಾಗಿ ಇಡುತ್ತಿದ್ದರಂತೆ. ಬೇಟೆ ವಿಚಾರದಲ್ಲಿ ಗೊಂಡರಲ್ಲಿ ಒಂದು ನಿರ್ಬಂಧ ಇತ್ತಂತೆ. ಅದೇನೆಂದರೆ, ಅವರು ಬಲೆ ಅಥವಾ ಗಾಳ ಹಾಕಿ ಮೀನು ಹಿಡಿಯುತ್ತಿರಲಿಲ್ಲ. ಆದರೆ, ಮೀನು ತಿನ್ನದೇ ಇರುತ್ತಿರಲಿಲ್ಲ.
ಮದುವೆ ವಿಚಾರದಲ್ಲಿಯೂ ಗೊಂಡರಲ್ಲಿ ವಿಶೇಷವಾದ ಸಂಪ್ರದಾಯ ಇತ್ತು. ಹೆಣ್ಣಿನ ಕಡೆಯವರು ಗಂಡು ಹುಡುಕುವಂತಿರಲಿಲ್ಲ. ವರನ ಕಡೆಯವರೇ ವಧು ಹುಡುಕಬೇಕು. ವಿವಾಹ ನಿಶ್ಚಯವಾದರೂ ಆದಕ್ಕೆ ಸಮುದಾಯದ ಮುಖಂಡನ ಒಪ್ಪಿಗೆ ಬೇಕಿತ್ತು. ಕನ್ಯೆ ನೋಡುವ ಕಾರ್ಯಕ್ರಮಕ್ಕೂ ಆತನದ್ದೇ ಸಾರಥ್ಯ. ಈ ಮೊದಲು ಹೆಣ್ಣು ಮಗಳಿಗೆ ವಯಸ್ಸು 12 ಆಗುತ್ತಿದ್ದಂತೆ ಮದುವೆಮಾಡಿಬಿಡುತ್ತಿದ್ದರು. ವಿವಾಹ ಕಾರ್ಯಕ್ರಮಗಳು ಹೆಚ್ಚಾಗಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುತ್ತಿತ್ತಂತೆ.
ತಿರುಪತಿಗೆ ಹೋಗಿ ಬಂದರೆ ಗೌರವ: ಗೊಂಡರಲ್ಲಿ ಯಾರಾದರೂ ತಿರುಪತಿಗೆ ಹೋಗಿ ಬಂದರೆ ಅವರಿಗೆ ಹೆಚ್ಚು ಮರ್ಯಾದೆ. ಹೋಗುವಾಗ ಬೀಳ್ಕೊಡುಗೆ ಕಾರ್ಯಕ್ರಮ ನಡೆಯುತ್ತದೆ. ಬಂದ ಮೇಲೂ ಅಷ್ಟೇ ಗೌರವ ದೊರೆಯುತ್ತದೆ. ತಿರುಪತಿಗೆ ಹೋಗಿ ಬಂದವರು ಮನೆಯಲ್ಲಿ ಭಾರಿ ಪೂಜೆ ಏರ್ಪಾಡು ಮಾಡಿ ಸಾವಿರಾರು ಜನರಿಗೆ ಊಟ ಹಾಕಿಸುತ್ತಿದ್ದರು.ಅದಕ್ಕೆ ಹರಿದಿನ ಎಂದು ಕರೆಯುತ್ತಿದ್ದರು. ತಮ್ಮ ಊರು ಮಾತ್ರವಲ್ಲ, ಊಟಕ್ಕೆ ಬರುವಂತೆ ಅಕ್ಕಪಕ್ಕದ ಊರಿನವರಿಗೂ ಕರೆ ಕಳುಹಿಸುತ್ತಿದ್ದರು. ಒಟ್ಟು ಐದು ದಿನ ಹರಿದಿನ ನಡೆಯುತ್ತಿತ್ತು. ತಿರುಪತಿಗೆ ಹೋಗಿ ಬಂದ ವ್ಯಕ್ತಿ ಏನಾದರೂ ಸತ್ತರೆ ಮೃತ ದೇಹವನ್ನು ಮೆರವಣಿಗೆಯಲ್ಲಿ ಸ್ಮಶಾನಕ್ಕೆ ಕೊಂಡೊಯ್ಯುತಿದ್ದರಂತೆ.
ದೆವ್ವ, ಭೂತದ ವಿಚಾರದಲ್ಲೂ ಗೊಂಡರಿಗೆ ಭಾರಿ ನಂಬಿಕೆ ಇತ್ತು. ಹೀಗಾಗಿ ದೆವ್ವ, ಭೂತಗಳಿಗೆ ಆಗಾಗ ಕೋಳಿ ಬಲಿ ಕೊಡುತ್ತಿದ್ದರು. ದೆವ್ವ ಇಂಥ ಜಾಗದಲ್ಲಿದೆ, ಇಂಥ ಸ್ಥಳದಲ್ಲಿ ತಿರುಗುತ್ತಿದೆ ಎಂದು ಮಾಂತ್ರಿಕರು ಹೇಳುತ್ತಿದ್ದರಂತೆ. ಅಲ್ಲದೆ, ಈ ದೆವ್ವ, ಭೂತದ ವಿಚಾರದಲ್ಲಿ ಗೊಂಡರು ಹಲವಾರು ಕಥೆಗಳನ್ನು ಹೇಳುತ್ತಿದ್ದರು. ಇದಲ್ಲದೆ ದೆವ್ವಗಳು ಮತ್ತು ದೇವರುಗಳಿಗಾಗಿ ಮಂಡಲ ಪೂಜೆ ಮಾಡುವ ಸಂಪ್ರದಾಯವೂ ಇತ್ತು. ಈ ಪೂಜೆಯ ಸಂದರ್ಭದಲ್ಲಿ ಅವರು ಡಮರುಗ ಬಾರಿಸುತ್ತಾ ಪದಗಳನ್ನು ಹೇಳುತ್ತಿದ್ದರು. ಇದು ದೆವ್ವಗಳನ್ನು ಕರೆಯುವ ವಿಧಾನವೂ ಆಗಿತ್ತು.
ಶಿವರಾತ್ರಿಯ ಸುಗ್ಗಿ ಕುಣಿತ: ಇನ್ನು ಗೊಂಡರ ಸುಗ್ಗಿ ಕುಣಿತವೂ ವಿಶಿಷ್ಟವಾದದ್ದು. ಅದು ಶಿವರಾತ್ರಿಯಂದು ಆರಂಭವಾಗುತ್ತದೆ. ಇದರಲ್ಲಿ ಗಂಡಸರು ಮಾತ್ರ ಪಾಲ್ಗೊಳ್ಳುತ್ತಾರೆ. ದೀಪಾವಳಿ, ಶಿವರಾತ್ರಿ, ಸುಗ್ಗಿ, ಆಷಾಡ, ಶ್ರಾವಣ, ಇವು ಗೊಂಡರು ಆಚರಿಸುವ ಪ್ರಮುಖವಾದ ಹಬ್ಬಗಳು.
ನ್ಯಾಯ, ಪಂಚಾಯ್ತಿ ವ್ಯವಸ್ಥೆ: ಸಮುದಾಯ ಯಾವುದೇ ಆದರೂ ಈ ಹಿಂದೆ ನ್ಯಾಯ ಪಂಚಾಯಿತಿ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತಿತ್ತು. ಗೊಂಡರೂ ಇದರಿಂದ ಹೊರತಾಗಿರಲಿಲ್ಲ. ಅವರಲ್ಲಿ ಪ್ರತಿ ಊರಿಗೂ ಒಬ್ಬ ಮುಖಂಡ ಇರುತ್ತಿದ್ದ. ಜಾತಿ ಜನರಲ್ಲಿ ಏನೇ ಸಮಸ್ಯೆ ಬಂದರೂ, ಜಗಳವಾದರೂ ಆದನ್ನು ಬಗೆಹರಿಸುವ ಕೆಲಸ ಆ ಮುಖಂಡನದ್ದು. ಒಂದು ವೇಳೆ ಯಾರಾದರೂ ಕಟ್ಟಳೆಗಳನ್ನು ಮೀರಿ ನಡೆದರೆ ಅವರನ್ನು ಸಮುದಾಯದಿಂದ ಅಥವಾ ಊರಿನಿಂದಲೇ ಹೊರಗೆ ಹಾಕುವ ಅಧಿಕಾರವೂ ಮುಖಂಡನಿಗೆ ಇತ್ತು. ಒಟ್ಟಾರೆ ಗೊಂಡ ಎಂಬುದು ವಿಶಿಷ್ಟ ಮತ್ತು ವಿಚಿತ್ರವಾದ ಆಚರಣೆಗಳಿಗೆ ಹೆಸರಾದ ಸಮುದಾಯ.
- ಕೆ.ವಿ.ಪ್ರಭಾಕರ
prabhukolar@yahoo.com