'ನಿನ್ನ ಮರಕೋತಿ ಆಟಕೆ ಕರ್ಯಾಕೆ ಬಂದೆ ಪೂಜಕ್ಕ, ನೀನು ಪಕ್ಸದಿಂದ ಪಕ್ಸುಕ್ಕೆ ಹಾರೋದು ಯಾತಕ್ಕ' ಅಂತೇಳಿ ಹಾಡ್ಕಂಡು ನಮ್ ಮೈಲಾರಿ ಮಳೆ ಮೇಡಮ್ಮು ಪೂಜಾಗಾಂಧಿಯೋರು ಮನೆತವ ವೋದ.
ಬಾಗ್ಲುತವ ವೋತಾಯಿದ್ದಂಗೆ ಮೇಡಮ್ಮು ವೋಡೋಡಿ ಬಂದು 'ನಿಮ್ದು ಯಾವ್ ಪಕ್ಸ ?' ಅಂತೇಳಿ ಕೇಳುದ್ರು. 'ನಾವು ಆಲ್ ಪಾರ್ಟಿ ಲೀಡ್ರು ಕಣೇಳಿ' ಅಂದ ಮೈಲಾರಿ.
'ಹಂಗರೆ, ನೀವೂ ನಮ್ಮೋರೆಯಾ ಬನ್ನಿ ವೊಳಿಕ್ಕೆ' ಅಂತೇಳಿ ಮೇಡಮ್ಮು ಮೈಲಾರಿನ ಕರ್ಕಂಡು ವೋದ್ರು. 'ಅಲ್ಲ ಕಣಕ್ಕ, ನೀವು ಬ್ಯಾರೆ ರಾಜ್ಯದೋರು. ನಾನು ನಿಮ್ಮೋನು ಹೆಂಗಾಯ್ತದೆ ?' ಅಂತ ಮೈಲಾರಿ ಕೇಳ್ದ. 'ನಮ್ಮೋರು ಅಂದ್ರೆ ನನ್ನಂಗೆ ಎಲ್ಲಾ ಪಾರ್ಟಿ ಸುತ್ತಾಕ್ಕಂಡು ಬಂದಿರೋರು ಅಂತ, ಮಿಸ್ಟೀಕು ಮಾಡ್ಕಬ್ಯಾಡಿ' ಅಂದ್ರು ಮೇಡಮ್ಮು. 'ಅಯ್ಯೋ ಸುಮ್ಕಿರಕ್ಕ, ಏನೋ ಮಾತ್ಗೆ ಹಂಗಂದೆ. ನೀವು ಸಿನ್ಮಾದೋರೇ ಹಿಂಗೆ. ಡೂಪ್ಲಿಕೇಟು ಡೈಲಾಗ್ನ ವೋರಿಜಿನಲ್ಲು ಮಾಡ್ಕಂಬುಡ್ತೀರ' ಅಂತಂದ ಮೈಲಾರಿ.
'ಹಂಗರೆ ನಿಮ್ದು ಯಾವ್ದೂ ಪಾರ್ಟಿನಾಗೇ ಇಲ್ವಾ ?' ಅಂತ ಕೇಳುದ್ರು ಪೂಜಾ ಮೇಡಮ್ಮು. 'ಯಾಕೇಳಿ, ತಿರ್ಗ ಪಾರ್ಟಿ ಚೇಂಜು ಮಾಡೋ ಐಡಿಯಾ ಏನರ ಐತಾ ?' ಅಂತ ಮೈಲಾರಿ ಕೇಳ್ದ. 'ನಾವು ಹಂಗೇಯಾ. ಯಾಕಂದ್ರೆ ಸಿನ್ಮಾ ಮಾಡ್ವಾಗ ಲೋಕೇಸನ್ನು ಚೇಂಜು ಮಾಡ್ತಾ ಇರ್ತರೆ. ನಂಗೂವೆ ಅದೇ ಆಭ್ಯಾಸ ಆಬುಟ್ಟದೆ' ಅಂದ್ರು ಮೇಡಮ್ಮು.
'ಸರಿವೋಯ್ತು ಸಿನ್ಮಾದಾಗೆ ಮಾಡಂಗೆ ಎಲ್ಲಾನೂವೆ ಚೇಂಜು ಮಾಡಕ್ಕೆ ಆಯ್ತದಾ ?' ಅಂತೇಳಿ ಮೈಲಾರಿ ಕೇಳ್ದ. 'ಅಲ್ಲ ಮೈಲಾರಿ ನಾನು ಪಕ್ಸ ಬದ್ಲಾಯಿಸುದ್ರೆ ಜನ್ರುಗೆ ಏನು ಕಷ್ಟ ಅಂತ ? ಪೇಪರ್ನೋರು, ಟೀವಿದೋರಂತೂ ರುಬ್ಬಾಕ್ಬುಟ್ರು ನನ್ನುನ್ನ' ಅಂದ್ರು ಮೇಡಮ್ಮು. 'ಇನ್ನೇನಕ್ಕ ಮತ್ತೆ, ಪಕ್ಸ ಸೇರಾದು, ಬುಡಾದು, ಸೇರಾದು ಬುಡಾದು, ಅದ್ರಾಗೆ ನೀವು ರೆಕಾರ್ಡು ಮಾಡ್ಬುಟ್ರಿ. ಈ ಬಾಗ್ಲಾಗೆ ವೋಳಿಕ್ಕೆ ವೋಯ್ತಿರ, ಆ ಬಾಗ್ಲಾಗೆ ಆಚ್ಗೆ ಬತ್ತೀರ ? ಇದುನ್ನು ಯಾರರ ರಾಜ್ಕೀಯ ಅಂತಾರೇನು ? ನಂಗೇ ಸರಿ ಕಾಣ್ಲಿಲ್ಲ ಅಂತೀನಿ' ಅಂದ ಮೈಲಾರಿ.
'ವೋಗ್ಲಿ ಬುಟ್ಟಾಕಪ್ಪ ಬಂದಿರೋ ಇಸ್ಯ ಯೋಳು. ನಂಗೆ ಸ್ಯಾನೆ ಕೆಲ್ಸ ಅದೆ. ಇನ್ನಾ ಯಾವ ಪಕ್ಸ ಬಾಕಿ ಅದೆ, ಅದ್ರು ಆಪೀಸು ಎಲ್ಲದೆ ಅಂತ ವುಡುಕ್ತಾಯಿವ್ನಿ' ಅಂದ್ರು ಮೇಡಮ್ಮು.
'ವೋ ತಿರ್ಗ ಲೊಕೇಸನ್ನು ಚೇಂಜು ಅಂತನ್ನಿ. ನಾನು ನಿಮ್ಮುನ್ನ ವುಡಿಕ್ಕಂಡು ಬಂದಿರಾದು ಯಾಕಂದ್ರೆ ನಮ್ಮೂರ್ನಾಗೆ ಮರಕೋತಿ ಆಟ ಆಡುಸ್ತಾಯಿದ್ದೀವಿ. ನೀವೇ ಗೆಸ್ಟು' ಅಂದ ಮೈಲಾರಿ. 'ಮರಕೋತಿ ಆಟುಕ್ಕೂ ನಂಗೂ ಏನಲಾ ಸಂಬಂಧ ?' ಅಂತೇಳಿ ಮೇಡಮ್ಮು ಕೇಳುದ್ರು.
'ಇದೇನು ಹಿಂಗೆ ಕೇಳ್ತೀರಿ ? ಮರಕೋತಿ ಆಟ ಅಂತಂದ್ರೆ ಕೊಂಬೆಯಿಂದ ಕೊಂಬೆಗೆ ಹಾರೋದು. ನೀವು ಪಕ್ಸದಿಂದ ಪಕ್ಸುಕ್ಕೆ ಹಾರಾಕಿಲ್ವಾ ಹಂಗೆ. ಅದುಕ್ಕೆ ಕರ್ಯಾಕೆ ಬಂದೆ ಕಣೇಳಿ' ಅಂದ ಮೈಲಾರಿ. 'ನನ್ನುನ್ನ ಕೋತಿ ಅಂತ ಕರೀತಾಯಿದ್ದೀಯ. ಐತೆ ಇರು ನಿಂಗೆ, ಸೀರಾಮ್ಲು ಅವ್ರುಗೇಳಿ ಸರ್ಯಾಗಿ ಮಾಡುಸ್ತೀನಿ' ಅಂದ್ರು ಮೇಡಮ್ಮು. 'ವೋಗ್ಲಿ ಬುಡಿ ಅದುಕ್ಕೆ ಯಾಕೆ ವುರ್ಕತಾಯಿದ್ದೀರ, ಇದುನ್ನೆಲ್ಲ ಯಾಕೋಗಿ ವೋಗಿ ಸೀರಾಮ್ಲು ಅವ್ರುಗೆ ಯೋಳ್ತೀರ. ಅವ್ರುಗೆ ಪಾಪ ನೂರಾ ಎರಡು ತಾಪತ್ರ ಐತೆ' ಅಂತೇಳ್ದ ಮೈಲಾರಿ.
'ಅದೇನು ನೂರಾ ಎರಡು, ನೂರೊಂದು ಅಲ್ವಾ ?' ಅಂತ ಮೇಡಮ್ಮು ಕೇಳುದ್ರು. 'ನೂರಾ ಒಂದೇಯ ಇದ್ದಿದ್ದು. ನೀವು ಅವ್ರು ಪಕ್ಸುಕ್ಕೆ ವೋದ್ಮೇಕೆ ನೂರಾ ಎರಡು ಆಗೋಯ್ತು ಅಂತನ್ನಿ. ಅಲ್ಲ, ನೀವು ರಾಮ್ಲು ಪಕ್ಸುಕ್ಕೆ ವೋದ್ಮೇಕೆ ರಕ್ಸಿತಕ್ಕ ಬ್ಯಾಸ್ರ ಮಾಡ್ಕಂಬುಟ್ಟವ್ರಂತೆ. ಸುಂಟರಗಾಳಿ ಸುಂಟರಗಾಳಿ ಅಂತ ಹಾಡ್ತಾಯಿದ್ದೋರು ಸೈಲೆಂಟು ಆಬುಟ್ಟವ್ರಂತೆ. ಹೌದಾ ?' ಅಂತೇಳಿ ಮೈಲಾರಿ ಕೇಳ್ದ. 'ವೋಗಲೇ ಮಂಗ, ಅವ್ರು ಯಾಕಲಾ ಬ್ಯಾಸ್ರ ಮಾಡ್ಕತರೆ, ನಾನೇನರ ಅವ್ರು ಆಸ್ತಿನಾಗೆ ಭಾಗ ಕೇಳಕ್ಕೆ ವೋಗಿದ್ದೀನಾ ? ಅವ್ರಂಗೆ ನಾನೂವೆ ಪಕ್ಸ ಸೇರ್ಕಂಡಿದ್ದೀನಿ' ಅಂದ್ರು ಮೇಡಮ್ಮು.
'ಏನೋ ಬುಡಕ್ಕ ಆಯಕ್ಕ ಬ್ಯಾಸ್ರ ಮಾಡ್ಕಂಡಿರಾದು ದಿಟ. ಯಾಕೇಳಿ, ನೀವು ವೋದ್ಮೇಕೆ ಅವ್ರುಗೆ ಡಿಮ್ಯಾಂಡು ಕಮ್ಮಿ ಆಗೋಗದೆ. ವೊಟ್ನಾಗೆ ರಾಮ್ಲು ಪಾರ್ಟಿನಾಗೆ ಇನ್ನಾಗಂಟ ಸುಂಟ್ರುಗಾಳಿ ಇತ್ತು. ಈವಾಗ ಮಳೆನೂ ಸುರು ಆಗೋಗದೆ' ಅಂದ ಮೈಲಾರಿ.
ಕೆ.ವಿ.ಪ್ರಭಾಕರ್
prabhukolar@yahoo.com