ಪಕ್ಷಾಂತರಿಗಳನ್ನು ಗೊಂದಲಕ್ಕೆ ದೂಡಿರುವ ಸ್ಥಳೀಯ ಸಮರ

ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದಿದ್ದು, ಎಲ್ಲರ ಚಿತ್ತ ಈಗ ಸಹಜವಾಗಿ...
Updated on: 

ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದಿದ್ದು, ಎಲ್ಲರ ಚಿತ್ತ ಈಗ ಸಹಜವಾಗಿಯೇ ವಿಧಾನಸಭೆ ಚುನಾವಣೆ ಕಡೆ  ನೆಟ್ಟಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ರಾಜಕೀಯ ಪಕ್ಷಗಳನ್ನು ನಾನಾ ಲೆಕ್ಕಾಚಾರಕ್ಕೆ ದೂಡಿರುವುದರ ಜೊತೆಗೆ ಒಂದಿಲ್ಲೊಂದು ಕಾರಣಕ್ಕೆ ತಣ್ಣಗಾಗಿದ್ದ ಪಕ್ಷಾಂತರ ರಾಜಕಾರಣವೆಂಬುದು ಈಗ ತನ್ನ ನಿಜವಾದ ಸ್ವರೂಪದೊಂದಿಗೆ ಆಚೆ ಬರುತ್ತಿದೆ.
ಆ ಮೂಲಕ ಎಲ್ಲರ ಪಕ್ಷ ನಿಷ್ಠೆ, ವ್ಯಕ್ತಿ ನಿಷ್ಠೆ, ಸ್ವಾರ್ಥ, ಸ್ವಹಿತಾಸಕ್ತಿ, ಭವಿಷ್ಯ ಡಾಳಾಗಿ ಕಾಣಿಸುತ್ತಿದೆ. ಅಧಿಕಾರ ರಾಜಕಾರಣದ ಬೆನ್ನು ಬಿದ್ದಿರುವವರಿಗೆ ಜನರ ಕಲ್ಯಾಣ, ರಾಜ್ಯದ ಅಭಿವೃದ್ಧಿ ಮುಖ್ಯವೋ ಅಲ್ಲವೋ ಎಂಬುದೂ ಸ್ಪಷ್ಟವಾಗುತ್ತಿದೆ. ನಮಗೆ ಅದ್ಯಾವುದೂ ಮುಖ್ಯವಲ್ಲ, ಸ್ವಾರ್ಥವೇ ಪ್ರಥಮ ಎಂಬ ಕೆಲ ರಾಜಕಾರಣಿಗಳ ಮನೋಭಾವ ನಿಧಾನವಾಗಿ ಸ್ಪಷ್ಟ ರೂಪ ಪಡೆದುಕೊಳ್ಳುತ್ತಿದೆ.
ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 2008ರಲ್ಲಿ ಅಧಿಕಾರಕ್ಕೆ ಬಂದಾಗ ಆಪರೇಷನ್ ಕಮಲದ ಹೆಸರಲ್ಲಿ ಶಾಸಕರ ರಾಜಿನಾಮೆ ಪರ್ವ ಆರಂಭವಾಗಿತ್ತು. ಸರ್ಕಾರ ಭದ್ರವಾಗುತ್ತಿದ್ದಂತೆ ಅಪರೇಷನ್‌ಗೆ ತೆರೆ ಬಿತ್ತು. ಸರ್ಕಾರವೇನೋ ಗಟ್ಟಿ ಆಯಿತು. ಆದರೆ, ನಾನಾ ಕಾರಣಗಳಿಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಅಷ್ಟೇ ಅಲ್ಲ, ಬಿಜೆಪಿಯಿಂದಲೂ ಹೊರ ಬಂದರು. ಬಳಿಕ ಆ ಪಕ್ಷದ ವಿರುದ್ಧ ಸೇಡು ತೀರಿಸಿಕೊಳ್ಳಲು ಕೆಜೆಪಿ ಕಟ್ಟುವ ಕೆಲಸಕ್ಕೆ ಕೈ ಹಾಕಿದರು. ಇದರೊಂದಿಗೆ ತಾವು ಅಧಿಕಾರ ಉಳಿಸಿಕೊಳ್ಳಲು ಆರಂಭಿಸಿದ ಆಪರೇಷನ್ ಅನ್ನು ಪುನಾರಂಭಿಸಿದರು.
ಈ ರೀತಿ ಯಡಿಯೂರಪ್ಪ ಅವರು ಬಿಜೆಪಿಗೆ ರಾಜಿನಾಮೆ ನೀಡಿ ಕೆಜೆಪಿ ಸೇರುತ್ತಿದ್ದಂತೆ ಮತ್ತೊಂದು ಸುತ್ತಿನ ಪಕ್ಷಾಂತರ ಪರ್ವ ಶುರವಾಯಿತು. ಅಂದು ಬಿಜೆಪಿ ಸರ್ಕಾರ ಉಳಿಸಿಕೊಳ್ಳಲು ಯಡಿಯೂರಪ್ಪ ಆರಂಭಿಸಿದ ಈ ಪಕ್ಷಾಂತರ ಎಂಬ ಆಪರೇಷನ್ ನಂತರದ ಅದೇ ಬಿಜೆಪಿ ಸರ್ಕಾರ ಉರುಳಿಸುವ ಪ್ರಯತ್ನಕ್ಕಾಯಿತು. ಯಡಿಯೂರಪ್ಪ ಅವರು ತಮ್ಮ ಈ ಪ್ರಯತ್ನದಲ್ಲಿ ಆರಂಭಿಕ ಯಶ ಕಂಡರೂ ಸರ್ಕಾರ ಉರುಳಿಸಲು ಸಾದ್ಯವಾಗಲಿಲ್ಲ. ಹೀಗಾಗಿ ಪಕ್ಷಾಂತರಕ್ಕೆ ತಾತ್ಕಾಲಿಕ ತೆರೆ ಬಿತ್ತು.
ಈ ಮಧ್ಯೆ ಕಾಂಗ್ರೆಸ್ ಸಹ ಆಪರೇಷನ್ ಹಸ್ತಕ್ಕೆ ನಾಂದಿ ಹಾಡುವ ಪ್ರಯತ್ನ ಮಾಡಿತು. ಅದರಂತೆ ಒಂದಿಬ್ಬರು ಶಾಸಕರು ರಾಜಿನಾಮೆಗೆ ಮುಂದಾದರು. ಆದರೆ, ಪಕ್ಷಾಂತರಿಗಳಿಗೆ ಟೆಕೆಟ್ ಸಿಗುವುದು ಖಾತರಿ ಇಲ್ಲ ಎನ್ನುತ್ತಿದ್ದಂತೆ ಪ್ರಕ್ರಿಯೆಗೆ ತೆರೆ ಬಿತ್ತು. ಇನ್ನೊಂದೆಡೆ ಬಯಸದೇ ಬಂದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯೂ ಪಕ್ಷದಿಂದ ಪಕ್ಷಕ್ಕೆ ಹಾರುವವರ ರೆಕ್ಕೆಗಳನ್ನು ಕಟ್ಟಿ ಹಾಕಿತು.
ಇದೀಗ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದಿದೆ. ಹೀಗಾಗಿ ಪಕ್ಷಾಂತರವೆಂಬ ರಗಳೆ ಮತ್ತೆ ಆರಂಭವಾಗುತ್ತಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆದ್ದು ಬೀಗುತ್ತಿದೆ. ಆದ್ದರಿಂದ ಪಕ್ಷಾಂತರಿಗಳ ಮನಸ್ಸು ಆ ಪಕ್ಷದ ಕಡೆ ಹೆಚ್ಚು ವಾಲುತ್ತಿದೆ. ಆದರೆ, ಪಕ್ಷಾಂತರಿಗಳಿಗೆ ಕಾಂಗ್ರೆಸ್ ಬಾಗಿಲು ಪೂರ್ಣಪ್ರಮಾಣದಲ್ಲಿ ತೆರೆದುಕೊಳ್ಳದ ಕಾರಣ ಅವರು ಕೇವಲ ಬಿಜೆಪಿ ಮತ್ತು ಕೆಜೆಪಿಗೆ ಮಾತ್ರ ಸೀಮಿತವಾಗುವಂತಾಗಿದೆ.
ಹಾಗೆಂದು ಪಕ್ಷಾಂತರ ಮತ್ತೊಂದು ಸುತ್ತಿನಲ್ಲಿ ಭಾರೀ ಪ್ರಮಾಣದಲ್ಲಿ ನಡೆಯುತ್ತದೆ. ಅರ್ಧ ಬಿಜೆಪಿಯೇ ಕೆಜೆಪಿಯಾಗಿ ಪರಿವರ್ತನೆಯಾಗುತ್ತದೆ ಎಂಬ ನಿರೀಕ್ಷೆಗಳು ಈಡೇರುವ ಹಾಗೆ ಕಾಣುತ್ತಿಲ್ಲ. ಏಕೆಂದರೆ, ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯ ಸಾಧನೆ ಕೆಜೆಪಿ ನಿರೀಕ್ಷಿಸಿದಷ್ಟು ಕೆಳ ಮಟ್ಟಕ್ಕೆ ತಲುಪಿಲ್ಲ. ಇನ್ನೊಂದೆಡೆ ಕೆಜೆಪಿಯೂ ಭಾರೀ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಉತ್ತಮ ಸಾಧನೆ ತೋರಿದ್ದೂ ಪಕ್ಷಾಂತರಕ್ಕಾಗಿ ತುದಿಗಾಲಲ್ಲಿ ನಿಂತವರು ಒಂದು ಬಾರಿ ಯೋಚಿಸುವಂತೆ ಮಾಡಿದೆ.
ಹಾಗೆಂದು ಯಾರೂ ಬಿಜೆಪಿ ತೊರೆದು ಕೆಜೆಪಿಗೆ ಹೋಗುವುದಿಲ್ಲ ಎನ್ನುವಂತಿಲ್ಲ. ಆದರೆ, ಏಕಾಏಕಿ ಕೆಜೆಪಿ ಸೇರುವ ಪರಿಸ್ಥಿತಿಯಲ್ಲೂ ಇಲ್ಲ. ಏಕೆಂದರೆ, ಪಕ್ಷಾಂತರಕ್ಕೆ ಮುಂದಾಗಿರುವವರಲ್ಲಿ ಬಹುತೇಕರು ಅಧಿಕಾರದ ಬೆನ್ನು ಬಿದ್ದವರು. ಲಾಭ ಇಲ್ಲದ ಕಡೆ ಇರುವ ಪರಿಸ್ಥಿತಿಯಲ್ಲಿ ಅವರಿಲ್ಲ. ಇದರಿಂದಾಗಿ ಇನ್ನೂ ಯೋಚಿಸಿ ತೀರ್ಮಾನ ಕೈಗೊಳ್ಳುವುದರಲ್ಲೇ ಕಾಲ ತಳ್ಳುತ್ತಿದ್ದಾರೆ. ಆದ್ದರಿಂದ ಪಕ್ಷಾಂತರವೆಂಬುದೂ ಅಧಿಕಾರ ಕೇಂದ್ರಿತವಾಗಿ ನಡೆಯುತ್ತಿದೆ.
ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಉಮೇಶ್ ಕತ್ತ್ತಿ, ಮುರುಗೇಶ್ ನಿರಾಣಿ, ಬಸವರಾಜ ಬೊಮ್ಮಾಯಿ, ರೇವೂನಾಯಕ ಬೆಳಮಗಿ, ಶಾಸಕರಾದ ಚಂದ್ರಕಾಂತ ಬೆಲ್ಲದ್, ಸಿ.ಸಿ. ಪಾಟೀಲ್, ಮಾಡಾಳು ವಿರೂಪಾಕ್ಷಪ್ಪ, ಶ್ರೀಶೈಲಪ್ಪ ಬಿದರೂರು, ಎಂ.ಕೆ. ಪಟ್ಟಣಶೆಟ್ಟಿ... ಹೀಗೆ ಒಂದು ತಂಡವೇ ಬಿಜೆಪಿ ತೊರೆದು ಕೆಜೆಪಿಗೆ ಸೇರುವ ಬಗ್ಗೆ ಯೋಚಿಸುತ್ತಿದೆ. ಹಾಗೆಂದು ಧೈರ್ಯ ಮಾಡಿ ನಿರ್ಧಾರ ಕೈಗೊಳ್ಳುವ ಪರಿಸ್ಥಿತಿಯಲ್ಲಿ ಇವರಾರೂ ಇಲ್ಲ. ಹೋಗುವುದಿದ್ದರೆ ಎಲ್ಲರೂ ಜೊತೆಗೇ ಹೋಗೋಣ, ಇಲ್ಲದೇ ಇದ್ದರೆ ಒಟ್ಟಾಗಿ ಇಲ್ಲಿಯೇ ಇರೋಣ ಎಂದು ಚಿಂತಿಸುತ್ತಿದ್ದಾರೆ. ಕೆಜೆಪಿ ಸೇರುವ ಬಗ್ಗೆ ಎಲ್ಲರೂ ಒಟ್ಟಾಗಿ ಒಂದು ಸುತ್ತಿನ ಮಾತುಕತೆ ನಡೆಸಿದರೂ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ.
ಬಿಜೆಪಿಯೋ ಕೆಜೆಪಿಯೋ ಎಂಬ ಗೊಂದಲ ಮುಂದುವರಿಯಲು ಪ್ರಮುಖ ಕಾರಣ ಕಾಂಗ್ರೆಸ್. ಏಕೆಂದರೆ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪರವಾಗಿಲ್ಲ ಎನ್ನುವ ಸಾಧನೆ ಮಾಡಿರುವ ಕಾಂಗ್ರೆಸ್  ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಅಧಿಕಾರಕ್ಕೆ ಬಂದರೆ ಎಂಬ ಪ್ರಶ್ನೆಯೇ ಪಕ್ಷಾಂತರಿಗಳಲ್ಲಿ ಗೊಂದಲ ಬಗೆಹರಿಯದಂತೆ ಮಾಡಿದೆ.
ವಿಧಾನಸಭೆ ಚುನಾವಣೆ ಬಳಿಕ ಅತಂತ್ರ ಪರಿಸ್ಥಿತಿ ಉಂಟಾದರೆ ಕಾಂಗ್ರೆಸ್ ಮತ್ತು ಕೆಜೆಪಿ ಸೇರಿ ಸರ್ಕಾರ ರಚಿಸಬಹುದು. ಇಲ್ಲವೇ ಬಿಜೆಪಿ ಮತ್ತು ಜೆಡಿಎಸ್ ನಡುವೆ ಒಪ್ಪಂದವೂ ಆಗಬಹುದು. ಈ ವಿಚಾರವೇ ಪಕ್ಷಾಂತರಿಗಳ ನಿದ್ದೆಗೆಡಿಸಿರುವುದು. ಅತಂತ್ರ ವಿಧಾನಸಭೆ ಸೃಷ್ಟಿಯಾಗಿ ಕಾಂಗ್ರೆಸ್ ಮತ್ತು ಕೆಜೆಪಿ ಸೇರಿ ಸರ್ಕಾರ ರಚಿಸಿದರೆ ಅಧಿಕಾರ ಹೊಂದಬಹುದು. ಒಂದು ವೇಳೆ ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬಂದರೆ ಕೆಜೆಪಿಯಿಂದ ಗೆದ್ದರೂ ಪ್ರತಿಪಕ್ಷವಾಗಿ ಕುಳಿತುಕೊಳ್ಳಬೇಕಾಗುತ್ತದೆ. ಅದರಲ್ಲೂ ಕಡಿಮೆ ಸ್ಥಾನ ಬಂದರೆ ಬೆಲೆ ಸಿಗುವುದಿಲ್ಲ. ಹೀಗಿರುವಾಗ ಹೊಸ ಪಕ್ಷವಾಗಿರುವ ಕೆಜೆಪಿ ಸೇರಿಕೊಂಡು ಒದ್ದಾಡುವ ಬದಲು ಬಿಜೆಪಿಯಲ್ಲೇ ಗೆದ್ದು ಪ್ರಮುಖ ಪ್ರತಿಪಕ್ಷದ ಸದಸ್ಯರಾಗಿಯಾದರ ಕೆಲಸ ಮಾಡಬಹುದು ಎಂಬ ಯೋಚನೆ ಕೆಲವರದ್ದು. ಇಲ್ಲವೇ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಉತ್ತಮ ಸಾಧನೆ ತೋರಿ ಅಧಿಕಾರಕ್ಕೆ ಬರುವಂತಾದರೆ ಆಗ ಬಿಜೆಪಿಯಲ್ಲಿದ್ದು ಅಧಿಕಾರ ಹೊಂದಬಹುದು. ಹೀಗಾಗಿ ಗಡಿಬಿಡಿಯಲ್ಲಿ ಒಬ್ಬೊಬ್ಬರೇ ನಿರ್ಧಾರ ಕೈಗೊಂಡು ತ್ರಿಶಂಕು ಪರಿಸ್ಥಿತಿ ಅನುಭವಿಸುವ ಬದಲು ಎಲ್ಲರೂ ಒಟ್ಟಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಪಕ್ಷಾಂತರಕ್ಕೆ ಮುಂದಾಗಿರುವ ಸಚಿವ, ಶಾಸಕರು ಯೋಚಿಸುತ್ತಿದ್ದಾರೆ.
ಇವರ ಗೊಂದಲ ಇನ್ನೂ ಮುಂದುವರಿಯಲು ಮತ್ತೊಂದು ಕಾರಣ ಇತ್ತೀಚೆಗೆ ನಡೆದ ಎರಡು ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿರುವ ನಿರ್ಧಾರಗಳು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ. ಬಡ ಕುಟುಂಬಗಳಿಗೆ 2 ರುಪಾಯಿಗೆ ಕೆ.ಜಿ. ಅಕ್ಕಿ, ಮಠ- ಮಂದಿರಗಳಿಗೆ ಭೂಮಿ ನೀಡಿಕೆ... ಹೀಗೆ ಹಲವು ಕಾರ್ಯಕ್ರಮಗಳ ಮೂಲಕ ವೋಟ್ ಬ್ಯಾಂಕ್‌ಗೆ ಕನ್ನ ಹಾಕುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಮಾಡಿದೆ. ಬಿಜೆಪಿಯ ಈ ಜನಪ್ರಿಯ ಯೋಜನೆಗಳು ಸ್ವಲ್ಪ ಮಟ್ಟಿಗೆ ವಿಧಾನಸಭೆ ಚುನಾವಣೆಯಲ್ಲಿ ಲಾಭ ತಂದುಕೊಡಬಹುದು ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಇನ್ನೊಂದೆಡೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಪ್ರದರ್ಶನ ನೀಡಿರುವುದು ಕರಾವಳಿ ಭಾಗದಲ್ಲಿ. ಇದಕ್ಕೆ ಸ್ಥಳೀಯ ಕೆಲವು ಕಾರಣಗಳ ಜತೆಗೆ ಡಿ.ವಿ. ಸದಾನಂದಗೌಡ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಅವರಿಗೆ ಸೂಕ್ತ ಸ್ಥಾನಮಾನ ನೀಡದೇ ಇರುವುದೂ ಸೇರಿಕೊಂಡಿದೆ. ಬಿಜೆಪಿ ಹೊಸ ರಾಜ್ಯಾಧ್ಯಕ್ಷರ ಆಯ್ಕೆ ಇನ್ನಷ್ಟೇ ಆಗಬೇಕಿದ್ದು, ಒಂದು ವೇಳೆ ಕರಾವಳಿಯವರಿಗೆ ಸ್ಥಾನ ಸಿಕ್ಕಿದರೆ ವಿಧಾನಸಭೆ ಚುನಾವಣೆ ವೇಳೆ ಮತ್ತೆ ಬಿಜೆಪಿ ಆ ಭಾಗದಲ್ಲಿ ಚೇತರಿಸಿಕೊಳ್ಳುವುದು ಖಚಿತ.
ಅದೇ ರೀತಿ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯೂ ಮತಗಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಹಲವು ಆಕಾಂಕ್ಷಿಗಳಿದ್ದಾರೆ. ಈ ಪೈಕಿ ಯಾರ ಹೆಸರು ಮುಂಚೂಣಿಗೆ ಬಂದರೂ ಇತರೆ ಜನಾಂಗದವರು ದೂರ ಸರಿಯುತ್ತಾರೆ. ಕಾಂಗ್ರೆಸ್ ಈ ಬಾರಿ ಹಳೇ ಮೈಸೂರು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಸ್ವಲ್ಪ ಪ್ರಾಬಲ್ಯ ಮೆರೆದಿದೆ. ವಿಧಾನಸಭೆ ಚುನಾವಣೆ ವೇಳೆ ಉತ್ತರ ಕರ್ನಾಟಕ ಭಾಗದವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪರೋಕ್ಷವಾಗಿ ಬಿಂಬಿಸಿದರೆ ಹಳೇ ಮೈಸೂರು ಭಾಗದಲ್ಲಿ ಪಕ್ಷ ಕಳೆಗುಂದಿ ಜೆಡಿಎಸ್‌ಗೆ ಲಾಭವಾಗುತ್ತದೆ. ಅದೇ ರೀತಿ ಹಳೇ ಮೈಸೂರು ಭಾಗದವರ ಹೆಸರು ಹೇಳಿದರೆ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಹಾನಿಯಾಗುತ್ತದೆ. ಇದರ ಲಾಭ ಬಿಜೆಪಿ ಮತ್ತು ಕೆಜೆಪಿಗೆ ಸಿಗುತ್ತದೆಯಾದರೂ ಪ್ರಮಾಣ ಮಾತ್ರ ಬಿಜೆಪಿಗೆ ಹೆಚ್ಚಾಗಿರುತ್ತದೆ. ಈ ರಾಜಕೀಯ ಲೆಕ್ಕಾಚಾರಗಳು ಕೆಲಸ ಮಾಡಿದರೆ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸೇರಿ ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಾಗಿ ಕಾಣಿಸುತ್ತದೆ. ಹಾಗೇನಾದರೂ ಆದರೆ ಬಿಜೆಪಿ ತೊರೆದು ಕೆಜೆಪಿ ಸೇರಿದರೆ ಅಧಿಕಾರಕ್ಕಾಗಿ ಮಾಡಿದ ಪ್ರಯತ್ನಗಳೆಲ್ಲವೂ ನದಿಯಲ್ಲಿ ಹುಣಸೆಹಣ್ಣು ಹಿಂಡಿದಂತಾಗುತ್ತದೆ.
ಸದ್ಯ ಬಿಜೆಪಿ ಅಥವಾ ಜೆಡಿಎಸ್, ಕೆಜೆಪಿ ಜತೆ ಸೇರಿ ಸರ್ಕಾರ ರಚಿಸುವ ಪರಿಸ್ಥಿತಿಯಲ್ಲಿ ಇಲ್ಲ. ಏಕೆಂದರೆ, ಕೆಜೆಪಿಗೆ ಬಿಜೆಪಿ ಮತ್ತು ಜೆಡಿಎಸ್ ಸಮಾನ ವೈರಿಗಳು. ಹೀಗಿರುವಾಗ ಕೆಜೆಪಿಗೆ ಉಳಿದಿರುವುದು ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸುವ ಒಂದು ಅವಕಾಶ ಮಾತ್ರ. ಸದ್ಯದ ಪ್ರಯತ್ನಗಳೂ ಆ ನಿಟ್ಟಿನಲ್ಲಿಯೇ ನಡೆಯುತ್ತಿದೆ. ಆದರೆ, ಈಗಿನ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ ಪರಿಸ್ಥಿತಿ ಗಮನಿಸಿದರೆ ವಿಧಾನಸಭೆ ಚುನಾವಣೆಯಲ್ಲಿ ಅದು ಏಕಾಂಗಿಯಾಗಿ ಅಧಿಕಾರಕ್ಕೆ ಬರುವ ಲಕ್ಷಣ ಕಾಣಿಸುತ್ತಿದೆ.
ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆದ ಉತ್ಸಾಹದಲ್ಲಿರುವ ಕಾಂಗ್ರೆಸ್ ಇದೇ ಹವಾ ಉಳಿಸಿಕೊಂಡು ವಿಧಾನಸಭೆ ಚುನಾವಣೆಗೂ ಹೋಗುವ ತಯಾರಿಯಲ್ಲಿದೆ. ಆ ನಿಟ್ಟಿನಲ್ಲಿ ಸತತ ಸಮಾಲೋಚನೆಗಳು ನಡೆಯುತ್ತಿವೆ. ಯಡಿಯೂರಪ್ಪ ಅವರೊಂದಿಗೆ ಕೆಜೆಪಿಗೆ ಸೇರಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಅಧಿಕಾರ ಹಂಚಿಕೊಳ್ಳುವ ಹವಣಿಕೆಯಲ್ಲಿರುವವರಿಗೆ ಬಿಸಿ ಮುಟ್ಟಿಸಿರುವುದು ಇದೇ ವಿಚಾರ. ಒಂದು ವೇಳೆ ಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಸಾಧಿಸಿದರೆ ಅಧಿಕಾರ ಹಿಡಿಯಬೇಕೆನ್ನುವ ನಮ್ಮ ಗುರಿ ಈಡೇರುವುದಿಲ್ಲ. ಮೇಲಾಗಿ ಅಧಿಕಾರಕ್ಕಾಗಿ ಪಕ್ಷಾಂತರವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರಿಗೆ ಅದುವೇ ಮಗ್ಗುಲ ಮುಳ್ಳಾಗಿ ಕಾಡುವ ಸಾಧ್ಯತೆಯೂ ಇದೆ. ಮುಂದಿನ ದಿನಗಳಲ್ಲಿ ಕೆಜೆಪಿ ಮತ್ತೆ ಬಿಜೆಪಿ ಜತೆ ಸೇರಿಕೊಂಡರೆ ಬಿಜೆಪಿಯಲ್ಲೂ ಅವರಿಗೆ ಪ್ರಾಮುಖ್ಯತೆ ಸಿಗುವುದಿಲ್ಲ. ಆಗ ಅವರ ಪರಿಸ್ಥಿತಿ ತ್ರಿಶಂಕುವಿನಂತಾಗುತ್ತದೆ.
ಈ ಕಾರಣಕ್ಕಾಗಿಯೇ ಸೇರುವುದಿದ್ದರೆ ಎಲ್ಲರೂ ಒಟ್ಟಾಗಿ ಕೆಜೆಪಿ ಸೇರುವ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕೆಜೆಪಿ ಸೇರುವ ಶಾಸಕರ ಸಂಖ್ಯೆ 10ರಿಂದ 15ರವರೆಗೆ ಇದ್ದರೆ ಆ ಪೈಕಿ ಕನಿಷ್ಠ 10 ಮಂದಿಯಾದರೂ ವೈಯಕ್ತಿಕ ವರ್ಚಸ್ಸಿನಿಂದ ಗೆಲ್ಲಬಲ್ಲವರಿರುತ್ತಾರೆ. ಈಗಾಗಲೇ 14 ಮಂದಿ ಮಾಜಿ ಶಾಸಕರು ಕೆಜೆಪಿ ಸೇರಿದ್ದಾರೆ. ಅದರೆ, ಬಿಜೆಪಿ ತೊರೆದು ಕೆಜೆಪಿ ಸೇರುವವರ ಸಂಖ್ಯೆ 25ರಿಂದ 30ರಷ್ಟಾಗುತ್ತದೆ. ಈ ಪೈಕಿ 20 ಮಂದಿ ಗೆಲ್ಲಬಹುದು. ಉಳಿದಂತೆ ಕೆಜೆಪಿ ಇನ್ನೂ ಒಂದಷ್ಟು ಕಡೆ ಗೆದ್ದು ಒಟ್ಟು 30 ಸ್ಥಾನ ಪಡೆಯಲು ಸಮರ್ಥವಾಗಬಹುದು. ಕೆಜೆಪಿ 30 ಸ್ಥಾನ ಗೆಲ್ಲಲು ಸಾಧ್ಯವಾದರೆ ಯಾವುದೇ ಒಂದು ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಉದ್ಭವಿಸುತ್ತದೆ. ಆಗ ಸರ್ಕಾರ ರಚಿಸಬೇಕಾದರೆ ಕೆಜೆಪಿ ನಿರ್ಣಾಯಕ ಸ್ಥಾನದಲ್ಲಿರುತ್ತದೆ. ಕಾಂಗ್ರೆಸ್ ಸರ್ಕಾರ ರಚಿಸಬೇಕಾದರೆ ತಮ್ಮ ಬೆಂಬಲ ಬೇಕೇ ಬೇಕು. ಹೀಗಾಗಿ ಬಿಜೆಪಿ ತೊರೆದು ಕೆಜೆಪಿಗೆ ಸೇರುವುದಿದ್ದರೂ ಎಲ್ಲರೂ ಒಟ್ಟಾಗಿಯೇ ಹೋಗೋಣ. ಆಗ ಅಧಿಕಾರವಾದರೂ ಸಿಗುತ್ತದೆ ಎಂಬ ನಿರೀಕ್ಷೆಯೊಂದಿಗೆ ದೊಡ್ಡ ಮಟ್ಟದಲ್ಲಿ ಪಕ್ಷಾಂತರ ಪರ್ವಕ್ಕೆ ಪ್ರಯತ್ನಗಳು ನಡೆಯುತ್ತಿದೆ.
ಲಗೋರಿ: ಸ್ವಂತ ಲಾಭದ ಬಗ್ಗೆ ಚಿಂತಿಸುವವರು ಬೇರೆಯವರಿಗೆ ಆಗುವ ನಷ್ಟದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com