ಬಾನೆತ್ತರದಲ್ಲಿ ಸೂಸೂ ಸಹ ಸಂಸ್ಕರಣೆಗೊಳ್ಳುತ್ತೆ; ಅಲ್ಲಿ ನೀರಿಲ್ಲ, ಇಲ್ಲಿ?

ಅದೊಂದು ಬೆಳಗಿನಲ್ಲಿ ಮಗಳು ಕುಳಿತಲ್ಲಿಯೇ ಮುಸಿಮುಸಿ ನಗುತ್ತಿದ್ದಳು.
Updated on: 

ವರ್ಷದ ಹಿಂದಿನ ಮಾತು. ಅದೊಂದು ಬೆಳಗಿನಲ್ಲಿ ಮಗಳು ಕುಳಿತಲ್ಲಿಯೇ ಮುಸಿಮುಸಿ ನಗುತ್ತಿದ್ದಳು. ಮುಂಜಾನೆಯ ಬೈಟುಕಾಫಿ ಹಿಡಿದು ಪೇಪರ್‌ನಲ್ಲಿ ಮುಳುಗಿ ಹೋಗಿದ್ದ ನನಗೆ ಒರಗಿ ಪಕ್ಕದಲ್ಲಿ ಕುಳಿತ ಅವಳ ಈ ನಗುವಿಗೆ ಕಾರಣ ತಿಳಿಯಲಿಲ್ಲ. ಹಾಗೆ ಅವಳತ್ತ ಓರೆಗಣ್ಣು ಬೀರಿದೆ. ಪತ್ರಿಕೆಯ ಮತ್ತೊಂದು ಪುಟದಲ್ಲಿ ಅವಳ ಕುತೂಹಲ, ನಗುವಿಗೆ ಕಾರಣ ಅಡಗಿದಂತಿತ್ತು. ಸಹಜವಾಗಿ ಗಮನ ಅತ್ತ ಹರಿಯಿತು. ಬಾಹ್ಯಾಕಾಶ ನೆಲೆಯಲ್ಲಿ ನಮ್ಮ ನೆಲಮೂಲದ ಸುನೀತಾ ವಿಲಿಯಮ್ಸ್ ಏನೋ ಚಟುವಟಿಕೆಯಲ್ಲಿ ತೊಡಗಿದ್ದ ಚಿತ್ರದೊಂದಿಗೆ ಪ್ರಕಟವಾಗಿದ್ದ ವರದಿಯದು. ಆಕೆಯ ತಲೆಗೂದಲು ಮೆಲಕ್ಕೆ ಹಾರುತ್ತಿತ್ತು. ಅಲ್ಲಿ ಎಲ್ಲವೂ ಹಗುರ. ನಮ್ಮ ದೇಹವೂ ಸೇರಿದಂತೆ ಎಲ್ಲವೂ ತೇಲುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ನಾವು ತೇಲುತ್ತ ಮೇಲಕ್ಕೆ ಸಾಗಿಬಿಡುತ್ತೇವೆ. ಏನನ್ನಾದರೂ ಗಟ್ಟಿಯಾಗಿ ಹಿಡಕೊಳ್ಳದಿದ್ದರೆ ಆ ಆಗಸದ ಬಸ್ಸಿನ ಚಾವಣಿಗೆ ನಮ್ಮ ತಲೆ ಹೋಗಿ ಘಟ್ಟಿಸುತ್ತದೆ. ಬಾನಂಗಳದಲ್ಲಿ ಒಂದು ಪರಿಧಿಯನ್ನು ದಾಟಿ ಹೋದ ಮೇಲೆ ಭೂಮಿಯ ಗುರುತ್ವಾಕರ್ಷಣೆ ಕೆಲಸ ಮಾಡುವುದಿಲ್ಲ. ಇಂಥ ಎಲ್ಲ ಅವಾಂತರಗಳು ಜರುಗುವುದು ಇದರಿಂದಾಗಿಯೇ. ಹೀಗಾಗಿಯೇ ಸುನೀತಾಳ ಕೂದಲು ಸಹ ನಿಗುರಿ ನಿಂತಂತೆ ಮೇಲ್ಮುಖವಾಗಿ ಹಾರುತ್ತಿದೆ. ಮಗಳಿಗೆ ವಿವರಿಸಿದೆ.
ಅವಳು ಸುನೀತಾಳ ತಲೆಗೂದಲು ಟೀವಿಯಲ್ಲಿ ಬರುವ ವಿದ್ಯುತ್ ಉಪಕರಣವೊಂದರ ಕಂಪನಿಯ ಜಾಹೀರಾತಿನಂತೆ ಹಾರುತ್ತಿರುವುದನ್ನೇ ನೋಡಿ ನಗುತ್ತಿರಬಹುದು ಎಂಬುದು ನನ್ನ ಊಹೆ. ಮಗಳು ನಗುತ್ತಿದ್ದುದು ಆದಕ್ಕಲ್ಲವೇ ಅಲ್ಲ ಎಂಬುದು ಅರ್ಥವಾಗುವಷ್ಟರಲ್ಲಿ ನನಗೂ ನಗು ತಡೆಯಲಾಗಲಿಲ್ಲ. ಬಾಹ್ಯಾಕಾಶದಲ್ಲಿ ಭೂಮಿಯ ಗುರುತ್ವಾಕರ್ಷಣೆ ಇರುವುದಿಲ್ಲ. ಹೀಗಾಗಿ ಯಾವುದೇ ವಸ್ತು ಅಲ್ಲಿ ಆಧಾರ ಕಳಕೊಂಡರೆ ತೇಲಲಾರಂಭಿಸುತ್ತದೆ. ಇದಕ್ಕೆ ಮಾನವ ತ್ಯಾಜ್ಯವೂ ಹೊರತಲ್ಲ. ಹಾಗಿದ್ದರೆ ಅಲ್ಲಿ ಸೂಸು ಮಾಡೋದು ಹೇಗೆ? ಆಸ್ಟ್ರೋನಟ್ಸ್ ಕಕ್ಕಾ ಮಾಡೋಕ್ಕೆ ಹೋಗೋದೇ ಇಲ್ವಾ? ಹೋಗೋದಾದರೆ ಹೇಗೆ? ಚಿಕ್ಕ ತಲೆಯಲ್ಲಿ ಇಂಥ ಕುತೂಹಲ ಹೊಕ್ಕು, ಅದು ಏನೇನೋ ಕಲ್ಪನೆಗಳಲ್ಲಿ ಬೆಸೆದು ತಡೆಯಲಾರದೆ ನಗು ಉಕ್ಕಿಸುತ್ತಿತ್ತು. ನಗು ತರಿಸುವ ವಿಷಯವೇ ಆಗಿದ್ದರೂ ಗಂಭೀರವಾಗಿತ್ತು. ತಕ್ಷಣಕ್ಕೆ ಉತ್ತರಿಸಲು ನನ್ನಲ್ಲಿ ಮಾಹಿತಿ ಇರಲಿಲ್ಲ. ತ್ಯಾಜ್ಯ ನಿರ್ವಹಣೆ ಅಲ್ಲಿ ಸುಲಭದ ಮಾತಂತೂ ಅಲ್ಲ ಎಂಬುದು ಸ್ಪಷ್ಟವಾಗಿತ್ತು. ಇಂಟರ್‌ನೆಟ್ ಜಾಲಾಡುತ್ತಿದ್ದಾಗಲೇ ಒಂದಷ್ಟು ಮಾಹಿತಿ ನಮ್ಮ ಸುದ್ದಿಮನೆಗೆ ಬಂದು ಬಿದ್ದಿತ್ತು. ಅಲ್ಲಿನ ಶೌಚಾಲಯ ಅತ್ಯಂತ ವಿಶಿಷ್ಟ. ತೀರಾ ಕಿರಿದಾದ ಎರಡು ಪ್ರತ್ಯೇಕ ವಿಸರ್ಜನಾ ಕೊಠಡಿಯ ಮೂಲಕ ಅದನ್ನು ಬಾಹ್ಯಾಕಾಶ ಯಾನಿಗಳೇ ಬಹು ಎಚ್ಚರಿಕೆಯಿಂದ ನಿರ್ವಹಿಸಿಕೊಳ್ಳುತ್ತಾರೆ. ಮೂತ್ರಕ್ಕಿರುವ ಅತ್ಯಂತ ಕಿರಿದಾದ ರಂಧ್ರದಲ್ಲೇ ಸಾಗುವ ತ್ಯಾಜ್ಯ ನಂತರ ಮತ್ತೆ ಪರಿಷ್ಕರಣೆಗೊಳಗಾಗಿ ಪುನರ್ಬಳಕೆಗೂ ಸಲ್ಲುತ್ತದೆ. ಕೆಲ ವಿಶೇಷ ಸಂದರ್ಭಗಳಲ್ಲಿ ಈ ಭೂಮಿಯ ಮೇಲೂ ಮೂತ್ರವನ್ನು ಸಂಸ್ಕರಿಸುವ ತಂತ್ರಜ್ಞಾನ ಬಳಕೆಯಲ್ಲಿದೆ. ಯುದ್ಧಭೂಮಿ, ಭೂಮಿಯ ಅತ್ಯಂತ ಆಳದಲ್ಲಿರುವ ಗಣಿಪ್ರದೇಶಗಳಂಥವುಗಳಲ್ಲಿ ಹೀಗೆ ಮೂತ್ರ ಸಂಸ್ಕರಣೆ ಅನಿವಾರ್ಯ.
ಹೌದು, ನೀರಿನ ಸಮಸ್ಯೆಯ ಅತ್ಯಂತ ಕರಾಳರೂಪ ತೆರೆದುಕೊಳ್ಳುವುದು ಅದರ ಅಲಭ್ಯತೆಯಲ್ಲಿ. ಇವತ್ತು ಭೂಮಿಯಿಂದ ಬಹು ಎತ್ತರಕ್ಕೆ, ಗುರುತ್ವವನ್ನು ದಾಟಿ ಎಲ್ಲೆಯಾಚೆಯ ಬಾಹ್ಯಾಕಾಶದಲ್ಲಿ, ನೀರೇ ಇಲ್ಲದ ಸ್ಥಿತಿಯಲ್ಲಿ ಮನುಷ್ಯನ ಮೂತ್ರವೇ ಮತ್ತೆ ಬಳಕೆಗೆ ಒದಗುತ್ತದೆ. ಹಾಗೆಯೇ ಭೂಮಿಯ ತೀರಾ ಆಳಕ್ಕೆ, ಒಡಲೊಳಗೆ ಇಳಿದು ನಿಂತಿದ್ದಾಗಲೂ ನೀರಿನ ಸಮಸ್ಯೆ ಕಾಡುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಕೇವಲ ವಿಶೇಷ ಸಂದರ್ಭಗಳಲ್ಲಿ ನಡೆಯುತ್ತಿರುವ ಮೂತ್ರದ ಸಂಸ್ಕರಣೆ, ಪುನರ್ಬಳಕೆ ಮುಂದೊಂದು ದಿನ ಭೂಮಿಯ ಮೇಲಿನ ಅನಿವಾರ್ಯ ಸ್ಥಿತಿಯಾಗಿ ಮಾರ್ಪಟ್ಟರೂ ಅಚ್ಚರಿಯಿಲ್ಲ. ತೀರಾ ಇಂದಿನ ಸನ್ನಿವೇಶದಲ್ಲಿ ಇದು ಅತಿಶಯೋಕ್ತಿ ಎಂದೆನ್ನಿಸಿದರೂ ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿದಾಗ ಖಂಡಿತಾ ಅದನ್ನು ತಳ್ಳಿಹಾಕುವಂತಿಲ್ಲ.
ಒಮ್ಮೆ ಯೋಚಿಸಿ ನೋಡಿ, ಈ ಭೂಮಿಯ ಮೇಲೆ ಅದೆಷ್ಟು ವರ್ಷಗಳಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸುತ್ತಲೇ ಬರುತ್ತಿದ್ದೇವೆ. ಅವೆಲ್ಲವನ್ನೂ ಬಗೆದು ತೆಗೆದದ್ದು ಭೂಮಿಯೊಡಲಿನಿಂದಲೇ. ಅದು ನಮಗೆ ತೀರಾ ಅಪಾಯಕಾರಿಯೆಂದು ಅನ್ನಿಸಲೇ ಇಲ್ಲವೇಕೆ? ಭೂಮಿಯ ಒಡಲು ಹಲವು ಅಮೂಲ್ಯ ವಸ್ತುಗಳ ಆಗರ ಎನ್ನವುದರಲ್ಲಿ ಅನುಮಾನವೇ ಇಲ್ಲ. ಅಂಥವುಗಳೆಲ್ಲ ಭೂಮಿಯ ಮೇಲೇ ಸುಲಭದಲ್ಲಿ ಏಕೆ ಲಭ್ಯವಿಲ್ಲ? ನಮಗೆ ಅಮೂಲ್ಯವೆನಿಸುವ ಎಲ್ಲ ಖನಿಜ, ಇಂಧನ ಇತ್ಯಾದಿ ಒಂದಲ್ಲ ಒಂದು ರೀತಿಯಲ್ಲಿ ಅಪಾಯಕಾರಿಯೇ. ಆ ಕಾರಣಕ್ಕೆ ನಿಸರ್ಗ ವ್ಯವಸ್ಥೆ ಅದನ್ನು ಒಳಗೊಳಗೆ ಹುದುಗಿಸಿಟ್ಟಿದೆ. ಆದರೆ ನಮ್ಮ ರಕ್ಕಸ ಬುದ್ಧಿ ಅವನ್ನು ಹಾಗೆ ಇರಗೊಟ್ಟೇ ಇಲ್ಲ. ಬಗೆದು ತೆಗೆದು ಬರಿದು ಮಾಡಿದ ಹೊರತೂ ನಮಗೆ ಸಮಾಧಾನವೇ ಇಲ್ಲ. ಖನಿಜಗಳ ಮಾತು ಹಾಗಿರಲಿ, ನೀರೂ ಆಳದಲ್ಲಿದ್ದಾಗ ಅಪಾಯಕಾರಿಯೇ. ಎಲ್ಲ ಸಂಪತ್ತಿನಂತೆಯೇ ಭೂಮಿಯ ಮೇಲ್ಭಾಗದಲ್ಲಿದ್ದಾಗ ಅದು ಹಿತಕಾರಿಯೇ ಆಗಿದ್ದರೂ ಆಳಕ್ಕೆ ಹೋದಂತೆಲ್ಲ ವಿಷವಾಗಿ ವರ್ತಿಸುತ್ತದೆ. ಮನುಷ್ಯನಿಗೆ ಅಗತ್ಯ ನೀರನ್ನು ಭೂಮಿ ತನ್ನ ಮೇಲೆಯೇ ಹೊತ್ತು ನಿಂತಿತ್ತು. ಅದು ಮುಗಿದು ಹೋಗದ ಹಾಗೆ ವಿಚಿತ್ರವಾದ ರೀ ಸೈಕಲಿಂಗ್ ವ್ಯವಸ್ಥೆಯನ್ನೂ ನಿಸರ್ಗ ನಮಗಾಗಿ ನಿರ್ಮಿಸಿಟ್ಟಿತ್ತು. ಈ ಚಕ್ರವನ್ನು ಏರುಪೇರುಗೊಳಿಸಿಕೊಂಡ ನಾವು ವಿಚಿತ್ರ ದಾಹಕ್ಕೆ ಬಿದ್ದೆವು. ಹೀಗಾಗಿ ನೀರಿಗಾಗಿ ಮೇಲೆ (ಆಗಸ) ನೋಡುವುದನ್ನು ನಿಲ್ಲಿಸಿ, ಕೆಳಕ್ಕೆ ಹುಡುಕಾಡತೊಡಗಿದೆವು. ಅಲ್ಲಿಗೆ ಆರಂಭವಾಯಿತು ನಮ್ಮ ಸಂಕಷ್ಟಗಳು.
ಮೊದಲಿಂದಲೂ ನಮ್ಮ ನಂಬಿಕೆ ದೇವತೆಗಳ ವಾಸಸ್ಥಾನ ಆಗಸದ ಮೇಲಿನ ಲೋಕದಲ್ಲಿ ಅಂತಲೇ. ಭೂಮಿಯ ಕೆಳಗಿರುವ ಅತಳ, ವಿತಳ, ಪಾತಾಳ, ರಸಾತಳಗಳಲ್ಲಿ ಇರುವವರೆಲ್ಲ ರಕ್ಕಸರು. ರಕ್ಕಸರು ನಿಜಕ್ಕೂ ಇದ್ದಾರೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಭೂಮಿಯಾಳದಲ್ಲಿರುವ ಯುರೇನಿಯಂ, ರೇಡಿಯಂ, ಥೋರಿಯಂ ಮೀಥೈಲ್ ಮುಂತಾದವುಗಳೆಲ್ಲವೂ ರಕ್ಕಸ ಸದೃಶವೇ ಎನ್ನುವುದರಲ್ಲಿ ಅನುಮಾನವಿಲ್ಲ.  ಭೂಮಿಯಾಳದಲ್ಲಿ ಕುದಿಯುತ್ತಲೇ ಇರುತ್ತವೆ. ಅವನ್ನು ಮೇಲೆತ್ತಿದಾಕ್ಷಣ ತಣ್ಣಗಾಗಲು ಹೇಗೆ ಸಾಧ್ಯ? ಇಲ್ಲಿ ಇವು ಇನ್ನಷ್ಟು ಬಿಸಿಯಾಗುತ್ತವೆ. ಪರಿಣಾಮ ವಾತಾವರಣ ಬಿಸಿಯೇರಿ ನಿಲ್ಲುತ್ತದೆ. ಭೂಮಿ ಬಿಸಿಗೋಲವಾಗುತ್ತಿದೆ ಎಂಬ ವಾದಕ್ಕೆ ಇದೂ ಒಂದು ಕಾರಣ. ಈ ಬಿಸಿಗೆ ಹಿಮಖಂಡಗಳು, ಧ್ರವ ಪ್ರದೇಶಗಳು ಕರಗಿ ಹರಿಯಲಾರಂಭಿಸಬಹುದು. ನದಿಗಳು ಉಕ್ಕೇರಬಹುದು. ಸಮುದ್ರದ ಕೆನ್ನಾಲಗೆ ಚಾಚಿ ಲಾಸ್ಯವಾಡಲಾರಂಭಿಸಬಹುದು. ಇನ್ನೂ ಆತಂಕಕಾರಿಯೆಂದರೆ ಈವರೆಗೆ ನೆಲದಾಳ ಬಗೆದು ತೆಗೆಯುತ್ತಿದ್ದ ಇಂಧನ ಮುಗಿದು ಹೋಗುತ್ತಿದೆ ಎನ್ನುವಾಗ ಮನುಷ್ಯನಿಗೆ ಗೋಚರಿಸಿದ್ದು ಸಮುದ್ರದಾಳದ ಮಿಥೈಲ್. ಈ ಅನಿಲ ಸಾವಿರಾರು ವರ್ಷಕ್ಕಾಗುತ್ತದಂತೆ. ಏನೇ ಇರಲಿ, ಉರಿದು ಹೋಗುವ ಇಂಧನ ಸುಮ್ಮನೇ ಅಂತೂ ಹೋಗದು. ವಾತಾವರಣಕ್ಕೆ ಅದು ತನ್ನ ದರಿದ್ರ ಗುಣವನ್ನು ಸೇರಿಸಿಯೇ ಹೋಗುತ್ತದೆ. ಈವರೆಗಿನ ಪೆಟ್ರೋಲಿಯಂ ಉತ್ಪನ್ನಗಳಿಂದ ಹೊಮ್ಮಿದ ಇಂಗಾಲ ನಮ್ಮ ಮುಖಕ್ಕಷ್ಟೇ ಕಪ್ಪಿಟ್ಟಿಲ್ಲ. ನೀರು ಸೇರಿದಂತೆ ಎಲ್ಲ ಸಂಪನ್ಮೂಲವನ್ನೂ ಮಲಿನಗೊಳಿಸಿ ಬದುಕನ್ನೇ ಕಪ್ಪಾಗಿಸುತ್ತಿದೆ. ಇನ್ನು ಅದರೊಂದಿಗೆ ಮಿಥೈಲ್ ಸಹ ಸೇರಿಬಿಟ್ಟರೆ ದೇವರೇ ಬಂದರೂ ನಮ್ಮನ್ನು ಕಾಪಾಡಲು ಆಗಲಿಕ್ಕಿಲ್ಲ ಈ ಆಧುನಿಕ ಭಸ್ಮಾಸುರನಿಂದ.
ನಮ್ಮದೇ ವಿಷಯಕ್ಕೆ ಬಂದರೆ, 1947ರಲ್ಲಿ ಭಾರತದ ಜನಸಂಖ್ಯೆ ಸರಿಸುಮಾರು 35 ಕೋಟಿಯಷ್ಟಿತ್ತು. ಇಂದು ಅದರ ಮೂರೂವರೆ ಪಟ್ಟು ಹೆಚ್ಚಳವಾಗಿದೆ ಎಂದಿಟ್ಟುಕೊಳ್ಳೋಣ. ಆದರೆ ನೀರಿನಂಥ ಅಗತ್ಯ ಸೇವೆಯ ಬಳಕೆ ಪ್ರಮಾಣ ಐವತ್ತು ವರ್ಷಗಳಲ್ಲಿ ಏನಿಲ್ಲವೆಂದರೂ ಆಗಿನದ್ದಕ್ಕಿಂತ ಹತ್ತು ಪಟ್ಟು ಹೆಚ್ಚಿದೆ. ಸಂಪನ್ಮೂಲ ಮಾತ್ರ ಹಿಮ್ಮುಖವಾಗಿ ಸಾಗಿದೆ. ಜಾಗತಿಕ ತಾಪಮಾನದ ಅಪಾಯದ ಮೊದಲ ಮುನ್ಸೂಚನೆ ಕೊಡುವುದೇ ನೀರು ಎಂಬುದನ್ನಂತೂ ಒಪ್ಪಿಕೊಳ್ಳಲೇ ಬೇಕು. ಅದು ಕಡಲಿನಲ್ಲಾಗುವ ತಳಮಳದಲ್ಲೂ ಗೊತ್ತಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಹಿಮಾಲಯದ ತಪ್ಪಲಲ್ಲಿರುವ ನದಿ ಸರೋವರಗಳ ನೀರಿನ ಮಟ್ಟ ಹೆಚ್ಚಾಗುತ್ತದೆ, ಪ್ರವಾಹ ಬರುತ್ತದೆ. ಮುಂದೊಂದು ದಿನ ನದಿಗಳ ಅಸ್ತಿತ್ವಕ್ಕೇ ಸಂಚಕಾರ. ಇದಕ್ಕೆ ಕಾರಣ- ಹಿಮವತ್ಪರ್ವತಗಳ ಮಂಜುಗಡ್ಡೆ ಕರಗುವುದೇ ಆಗಿದೆ. 
ಇದು ಎಷ್ಟರ ಮಟ್ಟಿಗೆ ಸತ್ಯ ನೋಡೋಣ. ವಿಶ್ವದ ಅತಿ ಎತ್ತರದ ಪರ್ವತವಾದ ಎವರೆಸ್ಟನ್ನು ಏರಲು ಪ್ರತಿವರ್ಷ ನೂರಾರು ಮಂದಿ ಜಗತ್ತಿನ ನಾನಾ ಕಡೆಗಳಿಂದ ಬರುತ್ತಾರೆ. ಪರ್ವತಾರೋಹಿಗಳಿಗೆ ನೆರವು ನೀಡುವ ಶೆರ್ಪಾಗಳಿದ್ದಾರೆ ಇಲ್ಲಿ. ಆರೋಹಿಗಳ ಜತೆಗೆ ಅವರ ಲಗ್ಗೇಜ್ ಹೊತ್ತು ಇವರೂ ಹತ್ತಿಳಿಯುತ್ತಾರೆ. ಹೀಗೆ 20 ಬಾರಿ ಪರ್ವತದ ತುದಿ ಮೆಟ್ಟಿ ದಾಖಲೆ ಬರೆದ ಅಪಾ ಎಂಬ ಶೆರ್ಪಾ ಇದ್ದಾನೆ. ಪರ್ವತದ ಸ್ಥಿತ್ಯಂತರದ ಬಗ್ಗೆ ಚೆನ್ನಾಗಿ ಅರಿತವರು ಈತನಿಗಿಂತಲೂ ಬೇರ್ಯಾರೂ ಸಿಕ್ಕಲಾರರು.
'ಇತ್ತೀಚೆಗೆ ಪರ್ವತದ ಮೇಲೆ ಚಳಿ ಕಡಿಮೆಯಾಗಿದೆ. ಬಿಸಿ ಹೆಚ್ಚಾಗಿದೆ. ಅನೇಕ ಬಾರಿ ತುದಿಯಲ್ಲಿರುವ ಐಸ್ ಕರಗಿ ಬೃಹತ್ಪ್ರ್‌ಮಾಣದ ಹಿಮಪಾತವಾಗುತ್ತದೆ. ಒಮ್ಮೊಮ್ಮೆ ನಮ್ಮ ಕೊಕ್ಕೆಗಳನ್ನು ಊರಲೂ ಹಿಮ ನೆಲ ಸಿಕ್ಕುವುದಿಲ್ಲ' ಎಂದು ಅಪಾ ಹೇಳಿದ್ದ. 1989ರಲ್ಲಿ ಅಪಾ ಮೊದಲ ಬಾರಿ ಪರ್ವತ ಹತ್ತಿದಾಗ ಶೃಂಗದ ಬಂಡೆಗಳು ಕಾಣಸಿಗುತ್ತಿರಲಿಲ್ಲ. ಅವೆಲ್ಲ ಹಿಮದಲ್ಲಿ ಮುಚ್ಚಿರುತ್ತಿದ್ದವು. ಈಗಂತೂ ನೆತ್ತಿಯ ಬಳಿ ಬಂಡೆ ಅಂಚುಗಳೇ ಕಾಣಿಸುತ್ತವಂತೆ.
ಲಂಡನ್‌ನ ಯೂನಿವರ್ಸಿಟಿ ಕಾಲೇಜ್ ಕೂಡ, ಎವರೆಸ್ಟ್ ಅಪಾಯಕಾರಿ ಅಂತ ಹೇಳಿದೆ. ಹಿಮಾಲಯದ ಗ್ಲೇಸಿಯರ್‌ಗಳು ತೀವ್ರ ವೇಗದಲ್ಲಿ ಕರಗುತ್ತಿವೆಯಂತೆ. ವಿಶ್ವದ ಇತರೆಡೆಗಳಲ್ಲೂ ಹಿಮಪರ್ವತಗಳು ಕರಗುತ್ತಿವೆ. ಆದರೆ ಹಿಮಾಲಯದ ಹಿಮನದಿಗಳು ವರ್ಷಕ್ಕೆ 10ರಿಂದ 60 ಮೀಟರ್ ವೇಗದಲ್ಲಿ ಕರಗುತ್ತಿವೆ. ಇದು ಇತರೆಡೆಗಿಂತ ತುಂಬಾ ಅಧಿಕ. ಇದು ಪರ್ವತಾರೋಹಿಗಳ ಮಟ್ಟಿಗೆ ಅಪಾಯದ ಸಂಕೇತ ಅಂತ 'ವಾಟರ್ಸ್ ಅಫ್ ದಿ ಥರ್ಡ್ ಪೋಲ್‌' ಎಂಬ ಈ ವರದಿ ಸಿದ್ಧಪಡಿಸಿದ ಪ್ರೊ.ಸ್ಟೀವ್ ಎಡ್ವರ್ಡ್ಸ್ ಹೇಳಿದ್ದಾರೆ.
ಬೇಸಿಗೆ ಬಂದಾಗ ಇದು ಗೊತ್ತಾಗುತ್ತದೆ. ಚಳಿಗಾಲದಲ್ಲಿ ತಣ್ಣಗೆ ಮಲಗಿರುವ ಹಿಮನದಿ, ಬೇಸಿಗೆಯಲ್ಲಿ ಇದ್ದಕ್ಕಿದ್ದಂತೆ ತೀವ್ರವೇಗದಲ್ಲಿ ಕರಗಲಾರಂಭಿಸುತ್ತದೆ. ಪರ್ವತದ ಕೆಳಕೆಳಗೆ ಹರಿದಂತೆ ಅಬ್ಬರಿಸಿ ಹರಿಯಲಾರಂಭಿಸುತ್ತದೆ. ತಪ್ಪಲಿನ ನದಿಗಳು ಇದರಿಂದ ತುಂಬಿ ತುಳುಕುತ್ತವೆ. ಮೇರೆಯನ್ನು ಮೀರಿ ದಂಡೆಯಲ್ಲಿರುವುದನ್ನೆಲ್ಲ ಕೊಚ್ಚುತ್ತವೆ. ಒಮ್ಮೊಮ್ಮೆ ಎಲ್ಲವೂ ಸರಿಯಾಗಿದೆ ಎಂಬಂತಿರುವ ಹಿಮರಾಶಿ ಅವಲಾಂಚೆಯಾಗಿ ಅಪ್ಪಳಿಸಿ, ಹಿಮನದಿಯನ್ನೂ ತುಂಬಿ, ಕಣಿವೆಯನ್ನೆಲ್ಲ ತುಂಬಿಬಿಡುವುದುಂಟು.
ಪರಿಸ್ಥಿತಿ ಹೀಗೇ ಮುಂದುವರಿದರೆ ಹಿಮಾಲಯದ ಗ್ಲೇಸಿಯರ್‌ಗಳು 2035ರ ವೇಳೆಗೆ ಸಂಪೂರ್ಣ ನಾಪತ್ತೆಯಾಗಬಹುದು ಎಂದು ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯ ಸಮಿತಿ 2007ರಲ್ಲೇ ಹೇಳಿತ್ತು. ಈ ಹೇಳಿಕೆ ಕೊಂಚ ಉತ್ಪ್ರೇಕ್ಷೆ ಆದರೂ ಸನ್ನಿವೇಶದ ಅಪಾಯ  ದಿಟ.
ಸಮುದ್ರದ ತಾಪಮಾನದಲ್ಲಿ ಕ್ಷಿಪ್ರ ಹೆಚ್ಚಳವಾಗುತ್ತಿದೆ ಎಂಬುದು ಹಳೆಯ ಮಾತಾಯಿತು. ಈಗ ಅದು ತೊರೆ ಮತ್ತು ನದಿವರೆಗೂ ಬಂದು ನಿಂತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಮ್ಮೂರಿನ ಕೆರೆ, ಹಳ್ಳಗಳ ಏರಿ ಮೇಲೆ ನಡೆದಾಡುವಾಗ ಬಿಸಿ ಗಾಳಿ ಸೋಕಿಸಿಕೊಳ್ಳಬೇಕಾದೀತು. ತೊರೆ, ನದಿಗಳ ತಾಪಮಾನ ಆತಂಕಕಾರಿ ಪ್ರಮಾಣದಲ್ಲಿ ಏರುತ್ತಿದೆ ಎಂಬುದನ್ನು ಪಾಶ್ಚಾತ್ಯ ಸಂಶೋಧನೆಗಳು ದೃಢಪಡಿಸಿವೆ.
ಸೊಲೋಮನ್‌ನ ಮೇರಿಲ್ಯಾಂಡ್ ವಿವಿಯ ಪರಿಸರ ವಿಜ್ಞಾನ ಅಧ್ಯಯನ ಕೇಂದ್ರದ ತಜ್ಞರು ಅಮೆರಿಕದ 20 ಪ್ರಮುಖ ತೊರೆ, ನದಿಗಳ ತಾಪಮಾನದ ಬಗ್ಗೆ ಅಧ್ಯಯನ ಕೈಗೊಂಡರು. ಐದಾರು ದಶಕದ ಹಿಂದಿನ ಸ್ಥಿತಿಗೂ, ಈಗಿನ ಪರಿಸ್ಥಿತಿಗೂ ತುಲನೆ ಮಾಡಿದಾಗ ಬೆಚ್ಚಿಬಿದ್ದರು. ಮೇರಿಲ್ಯಾಂಡನ ಪೆಟಾಕ್ಸೆಂಟ್ ಸೇರಿದಂತೆ ಕೆಲವು ನದಿಗಳ ತಾಪಮಾನ ಐದಾರು ದಶಕದಲ್ಲಿ ಮೂರು ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚಾಗಿರುವುದು ಗಮನಕ್ಕೆ ಬಂದಿದ್ದೇ ಅದಕ್ಕೆ ಕಾರಣ.
ವರ್ಷಕ್ಕೆ 0.01ರಿಂದ 0.08 ಡಿಗ್ರಿ ಸೆಲ್ಶಿಯಸ್ ಪ್ರಮಾಣದಲ್ಲಿ ನದಿಗಳ ತಾಪಮಾನ ಹೆಚ್ಚುತ್ತಿದೆ ಎನ್ನುವುದು ಎಂದೋ ಸಾಬೀತಾಗಿದೆ. ಸಾವಿರಾರು ನದಿಗಳನ್ನು ಒಡಲಲ್ಲಿ ಸೇರಿಸಿಕೊಳ್ಳುವ ಸಮುದ್ರದ ಮಾತಿರಲಿ, ಒಂದೊಂದು ನದಿಗಳ ತಾಪಮಾನವೇ ಈ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಕಳವಳದ ಸಂಗತಿಯಲ್ಲವೆ?
ಕಥೆ ಅಲ್ಲಿಗೇ ಮುಗಿಯುವುದಿಲ್ಲ. ತಾಪಮಾನ ಹೆಚ್ಚಳ ನದಿ ಪಾತ್ರದಲ್ಲಿನ ಜೀವವೈವಿಧ್ಯ ಮತ್ತು ಜನಜೀವನದ ಮೇಲೆಯೂ ಪರಿಣಾಮ ಬೀರುತ್ತಿದೆ. ಆಹಾರ ಪದ್ಧತಿ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತದೆ. ಕುಡಿಯುವ ನೀರಿನ ಗುಣಮಟ್ಟ ಕುಸಿಯುತ್ತದೆ. ಇನ್ನು ನದಿ ದಂಡೆಯಲ್ಲಿನ ಪಟ್ಟಣಗಳ ಪರಿಸ್ಥಿತಿಯಂತೂ ಗಂಭೀರ. ಉಷ್ಣತೆಯಲ್ಲಿ ಅತ್ಯಲ್ಪ ಏರಿಕೆ ಕಂಡುಬಂದರೂ ಜೀವವೈವಿಧ್ಯ ಅಪಾಯಕ್ಕೆ ಸಿಲುಕುತ್ತದೆ ಎನ್ನುತ್ತಾರೆ ತಜ್ಞರು.
ಸಮುದ್ರದ ತಾಪಮಾನ ಏರಿದಂತೆಲ್ಲ ಜಲಚರಗಳ ವಿನಾಶ ಪ್ರಕ್ರಿಯೆಯೂ ತೀವ್ರಗೊಳ್ಳುತ್ತದೆ. ಜಲಚರಗಳ ಇಳಿಮುಖದ ಪ್ರಮಾಣ ಮತ್ತು ತಾಪಮಾನ ಏರಿಕೆ ಅನುಪಾತ 21ಃ1 ಎಂಬುದನ್ನು ಕೆಲ ಸಮಯದ ಹಿಂದೆ ಬ್ರಿಟಿಷ್ ತಜ್ಞರು ಪ್ರಕಟಿಸಿದ್ದರು. ನದಿ ತೀರದ ಪಟ್ಟಣಗಳಲ್ಲಿ ತಾಪಮಾನ ಅತ್ಯಂತ ವೇಗವಾಗಿ ಹೆಚ್ಚುತ್ತಿರುವುದು ಸಹಜವಾಗಿಯೇ ಪರಿಸರವಾದಿಗಳ ನಿದ್ದೆಗೆಡಿಸಿದೆ. ನದಿಯೂ ಬಿಸಿಯಾಗುತ್ತಿದೆ ಎನ್ನುವಾಗಲೂ ನಾವು ಅವುಗಳ ಹರಿವಿನ ಪ್ರದೇಶದ ಮರಗಿಡಗಳನ್ನು ಕಡಿಯುವುದನ್ನು ನಿಲ್ಲಿಸಿಲ್ಲ. ನಮ್ಮ ಹೊಲಗಳಿಗೆ ರಾಸಾಯನಿಕ ಗೊಬ್ಬರ, ಕೀಟನಾಶಕ ತುಂಬಿ ಆ ಮೂಲಕ ನೀರನ್ನು ಕಲುಷಿತಗೊಳಿಸುವುದನ್ನು ನಿಲ್ಲಿಸಿಲ್ಲ. ಅಂತರ್ಜಲವನ್ನು ಬಗೆದು ಅಲ್ಲಿನ ವಿಷವನ್ನು ಮೇಲೆತ್ತುವುದನ್ನು ನಿಲ್ಲಿಸಿಲ್ಲ. ಮತ್ತೆಲ್ಲಿ ನಮಗೆ ನೀರುಳಿದೀತು? ಬಾಹ್ಯಾಕಾಶದಲ್ಲಿಯಂತೆ ಮೂತ್ರ ಸಂಸ್ಕರಣೆಗಿಳಿಯುವ ಕಾಲ ಹತ್ತಿರದಲ್ಲಿರುವಂತೆ ಭಾಸವಾಗುವುದಿಲ್ಲವೇ? ಇಂದು ಮತ್ತೊಂದು ವಿಶ್ವಜಲ ದಿನ (ಮಾರ್ಚ್ 22)ವನ್ನು ಆಚರಿಸುತ್ತಿದ್ದೇವೆ. ನೀರಿನ ಬಗ್ಗೆ ಆಶಾದಾಯಕವಾದ ಯಾವೊಂದು ಸಂಗತಿಗಳೂ ಗೋಚರಿಸದಿರುವುದು ದುರದೃಷ್ಟಕರ.

- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com