ಎಲ್ಲರೊಂದಿಗೆ ಹೊಂದಿಕೊಳ್ಳುವವರು ರಾಜು ಕ್ಷತ್ರಿಯರು

ರಸ್ತೆ, ಸೇತುವೆ, ಅಣೆಕಟ್ಟು, ಅಷ್ಟೇ ಅಲ್ಲ, ಪ್ರಮುಖ ಕಟ್ಟಡಗಳನ್ನು ಕಟ್ಟಿದವರು ಇವರು.
Updated on: 

ರಸ್ತೆ, ಸೇತುವೆ, ಅಣೆಕಟ್ಟು, ಅಷ್ಟೇ ಅಲ್ಲ, ಪ್ರಮುಖ ಕಟ್ಟಡಗಳನ್ನು ಕಟ್ಟಿದವರು ಇವರು. ಶಾಲೆ, ಕಾಲೇಜು ಸೇರಿದಂತೆ ನೂರಾರು ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಹಿಂದೆ ಈ ಸಮುದಾಯದವರ ಶ್ರಮವಿದೆ. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿಯೂ ಮುಂದಿದ್ದಾರೆ. ಆದರೆ, ಇವರ ಕೊರಗು ಮಾತ್ರ ಒಂದೇ. ಅದು ರಾಜಕೀಯ ಪ್ರಾತಿನಿಧ್ಯ ಇಲ್ಲ ಎಂಬುದು.
-ಇದು ರಾಜು ಕ್ಷತ್ರಿಯ ಸಮಾಜದ ವಿಶೇಷ.

ಜಾತಿಯ ಹೆಸರು ರಾಜು ಕ್ಷತ್ರಿಯ. ಅಂದರೆ ಕತ್ತಿ, ಗುರಾಣಿ ಹಿಡಿದು ಯುದ್ಧ ಮಾಡಿದವರು, ಸೈನಿಕರು, ರಾಜ, ಮಹಾರಾಜರ ಪಾಳಯದಲ್ಲಿದ್ದವರು. ಅವರಿಗೂ ರಸ್ತೆ, ಸೇತುವೆ, ಅಣೆಕಟ್ಟು, ಕಟ್ಟಡಗಳ ನಿರ್ಮಾಣಕ್ಕೂ ಏನು ಸಂಬಂಧ ? ಎಂಬ ಪ್ರಶ್ನೆ ಮೂಡಬಹುದು.
ಖಂಡಿತಾ ಸಂಬಂಧ ಇರಲಿಲ್ಲ. ರಾಜು ಕ್ಷತ್ರಿಯರ ಮೂಲ ಕಸುಬು ಯುದ್ಧದಲ್ಲಿ ಹೋರಾಟ ಹಾಗೂ ವ್ಯವಸಾಯ. ಆದರೆ, ರಾಜರ ಆಳ್ವಿಕೆ ಕೊನೆಯಾದ ಬಳಿಕ ಜೀವನೋಪಾಯಕ್ಕೆ ಮಾರ್ಗ ಬೇಕಲ್ಲ. ಆಗ ಅವರು ಮುಖ ಮಾಡಿದ್ದು ಗಾರೆ ಕೆಲಸ ಮತ್ತು ನಿರ್ಮಾಣ ಕಾಮಗಾರಿಗಳ ಕಡೆಗೆ. ಶ್ರಮವಹಿಸಿ ದುಡಿದ ಪರಿಣಾಮ ರಾಜು ಕ್ಷತ್ರಿಯರು ಗುತ್ತಿಗೆದಾರರಾಗಿ ಬೆಳೆದರು. ಈ ಮೂಲಕ ಇಡೀ ರಾಜ್ಯದಲ್ಲಿ ಹೆಸರು ಮಾಡಿದರು. ತಾವು ಬೆಳೆಯುವುದರ ಜೊತೆಗೆ ಸಮುದಾಯವನ್ನೂ ಕಟ್ಟಿ ಬೆಳೆಸಿದ್ದಾರೆ ರಾಜು ಕ್ಷತ್ರಿಯರು.

ರಾಜ ಮಹಾರಾಜರ ಒಡನಾಟ
ರಾಜು ಕ್ಷತ್ರಿಯ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಚಂದ್ರಶೇಖರ ರಾಜು ಅವರು ಹೇಳುವ ಪ್ರಕಾರ, ಈ ರಾಜು ಕ್ಷತ್ರಿಯರು ಮೂಲತ: ರಾಜಸ್ಥಾನದವರು. ಅಲ್ಲಿ ರಾಜರ ಆಸ್ಥಾನದಲ್ಲಿ ಸೇನೆ ಮತ್ತು ಅರಮನೆಗಳಲ್ಲಿ ಕೆಲಸ ಮಾಡಿಕೊಂಡಿದ್ದರಂತೆ. ರಾಜರ ಆಳ್ವಿಕೆ ಅಂತ್ಯವಾದ ಬಳಿಕ ಆ ಮರುಭೂಮಿಯಲ್ಲಿ ಅಲ್ಪಸ್ವಲ್ಪ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರಂತೆ.
ರಾಜಸ್ಥಾನಕ್ಕೆ ಒಮ್ಮೆ ಬರ ಅಪ್ಪಳಿಸಿದಾಗ ರಾಜು ಕ್ಷತ್ರಿಯರು ಅಲ್ಲಿಂದ ವಲಸೆ ಹೋಗಲು ನಿರ್ಧರಿಸಿದರು. ಅಲ್ಲಿಂದ ಅವರು ಬಂದಿದ್ದು ಆಂಧ್ರಪ್ರದೇಶ ಮತ್ತು ತಮಿಳುನಾಡು ಕಡೆಗೆ. ಅಲ್ಲಿಯೂ ಬರಗಾಲ ಕಾಣಿಸಿಕೊಂಡಾಗ ಕರ್ನಾಟಕಕ್ಕೆ ವಲಸೆ ಬಂದರು.
ಆರಂಭದಲ್ಲಿ ರಾಜು ಕ್ಷತ್ರಿಯರು ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿಕೊಂಡರು. ಗಾರೆ ಕೆಲಸ ಸೇರಿದಂತೆ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ಆ ಕಾರ್ಯದಲ್ಲಿ ಇಡೀ ಸಮುದಾಯ ಅದೃಷ್ಟ ಕಂಡುಕೊಂಡಿತು. ಸಣ್ಣ ಪ್ರಮಾಣದಲ್ಲಿ ಗುತ್ತಿಗೆದಾರರಾದ ಅವರು, ನೋಡ ನೋಡುತ್ತಿದ್ದಂತೆ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದರು.

ಖ್ಯಾತಿ ಗಳಿಸಿದ ಗುತ್ತಿಗೆದಾರರು
ಕುಪ್ಪರಾಜು, ಚಾಮರಾಜು, ಚಂಗಮರಾಜು, ರಾಮರಾಜು ಮತ್ತು ಚಿನ್ನಸ್ವಾಮಿ ರಾಜು ಎಂಬುವರು ಸಮುದಾಯದಲ್ಲಿ ಗುತ್ತಿಗೆದಾರರಾಗಿ ಖ್ಯಾತಿ ಗಳಿಸಿದರು. ಹೇಮಾವತಿ, ಯಗಚಿ ಸೇತುವೆ, ಕಬಿನಿ ಬಲದಂಡೆ ನಾಲೆ, ಹಾರಂಗಿ ಮತ್ತು ವಾಟೆಹೊಳೆ ಜಲಾಶಯಗಳಿಗೆ ಅಣೆಕಟ್ಟು ಕಟ್ಟಿದ್ದು ಇದೇ ರಾಜು ಕ್ಷತ್ರಿಯ ಸಮಾಜದವರು. ಸಮಾಜದ ಹಿರಿಯರಾದ ಚಾಮರಾಜು ಅವರು ಮೈಸೂರು ಸಂಸ್ಥಾನದ ಅರಸರಿಗೂ ಆಪ್ತರಾಗಿದ್ದರಂತೆ. ಹೀಗಾಗಿ ನಾಡಿನ ಪ್ರಮುಖ ನಿರ್ಮಾಣ ಕಾಮಗಾರಿಗಳ ಹಿಂದೆ ಅವರ ಹೆಸರಿದೆ. ರಾಜು ಕ್ಷತ್ರಿಯ ಸಂಘದ ಸೃಷ್ಟಿಕರ್ತರೂ ಅವರೇ. ಹಿಂದೂಸ್ಥಾನ್ ಮೆಷಿನ್ ಟೂಲ್ಸ್ (ಎಚ್ಎಂಟಿ), ಹಿಂದೂಸ್ಥಾನ್ ಏರ್ಕ್ರಾಫ್ಟ್ ಲಿಮಿಟೆಡ್ (ಎಚ್ಎಎಲ್), ಇಎಸ್ಐ ಆಸ್ಪತ್ರೆ, ಪಶುವೈದ್ಯ ಕಾಲೇಜಿನಲ್ಲಿ ಇವರು ನಿರ್ಮಾಣ ಕಾಮಗಾರಿ ಕೈಗೊಂಡಿದ್ದರು.
ಅಷ್ಟೇ ಅಲ್ಲ, ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಕೈಗೆತ್ತಿಕೊಂಡಾಗ ಆದರ ಕಾಮಗಾರಿ ನಿರ್ವಹಿಸಿದ್ದು ಇದೇ ಸಮಾಜದ ದಾಮೋದರ ರಾಜು ಅವರು. ರಾಜ್ಯದ ಭಾರಿ ನಿರ್ಮಾಣ ಯೋಜನೆಗಳಲ್ಲಿ ಈ ಜನಾಂಗದವರ ಹೆಸರಿದೆ.
ಪ್ರಮುಖ ರಸ್ತೆ, ಕಟ್ಟಡಗಳು ಮಾತ್ರವಲ್ಲದೇ ಭಾರಿ ಪ್ರಮಾಣದಲ್ಲಿ ವಿದ್ಯುತ್ ಯೋಜನೆ ಕಾಮಗಾರಿಗಳನ್ನೂ ಇವರು ನಿರ್ವಹಿಸಿದ್ದಾರೆ. ಕೇವಲ ಗುತ್ತಿಗೆದಾರರಾಗಿ ಉಳಿಯದೆ ಹೋಟೆಲ್ ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದ ಕಡೆಗೂ ರಾಜು ಕ್ಷತ್ರಿಯರು ಮುಖ ಮಾಡಿದರು. ಇದರ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ರಾಜು ಕ್ಷತ್ರಿಯರ ಶಾಲೆ, ಕಾಲೇಜುಗಳಿವೆ. ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್ಗಳಾದ ಏಟ್ರಿಯಾ, ಚಾಲುಕ್ಯ, ಚಾನ್ಸರಿ, ಮೌರ್ಯ, ಮೈಸೂರಿನ ಸಿದ್ಧಾರ್ಥ, ವೈಸರಾಯ್ ಮತ್ತಿತರ ಹೊಟೇಲ್ಗಳನ್ನು ಆರಂಭಿಸಿದ್ದೂ ಇವರೇ. ಇನ್ನು ಶಿಕ್ಷಣ ಸಂಸ್ಧೆಗಳೆಂದರೆ, ಎಂವಿಐಟಿ, ಎಟ್ರಿಯಾ, ರೇವಾ, ಆಕ್ಸ್ಫರ್ಡ್, ಎಂಎಸ್ ಇಂಜಿನಿಯರಿಂಗ್ ಕಾಲೇಜು, ಶ್ರೀ ಸಾಯಿ, ವಿಐಟಿ ಮತ್ತು ರಾಯಲ್ ಎಜುಕೇಷನ್. ಕಲ್ಯಾಣ ಮಂಟಪಗಳೂ ಪಟ್ಟಿಯಲ್ಲಿವೆ. ಈ ಸಮುದಾಯದಲ್ಲಿ ಗೌರವಯುತವಾಗಿ ಕೇಳಿ ಬರುವ ಮತ್ತೊಂದು ಹೆಸರು ಅಲ್ಲೂರಿ ಸೀತರಾಮ ರಾಜು. ಆಂಧ್ರದಲ್ಲಿ ಇವರ ಹೆಸರು ಕೇಳದವರೇ ಇಲ್ಲ. ಬ್ರಿಟಿಷರ ವಿರುದ್ಧ ಹೋರಾಟಮಾಡಿ ಹೆಸರು ಗಳಿಸಿದವರು ಇವರು.

ರಾಜಕೀಯದಲ್ಲಿ ಸದ್ದು ಇಲ್ಲ
ಬಲಿಷ್ಠ ಸಮುದಾಯವಾಗಿದ್ದರೂ ರಾಜಕೀಯ ರಂಗದಲ್ಲಿ ಮಾತ್ರ ಏಕೋ ಏನೋ ರಾಜು ಕ್ಷತ್ರಿಯರು ಸದ್ದು ಮಾಡಲು ಆಗಿಲ್ಲ. ಮಾಧವರಾಜು ಎಂಬುವರು ವಿಧಾನ ಪರಿಷತ್ ಸದಸ್ಯರಾಗಿದ್ದರು. ಕಾಂಗ್ರೆಸ್ ಮುಖಂಡರಾಗಿಯೂ ಕೆಲಸ ಮಾಡಿದ್ದರು. ಅವರ ಬಳಿಕ ಕೋಲಾರದ ಜಿ.ರಾಮರಾಜು ಅಲ್ಲಿಯ ನಗರಸಭೆ ಅಧ್ಯಕ್ಷರಾಗಿ, ಜೆ.ಎಚ್. ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗಗಳ ನಿಗಮ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇವರ ಬಳಿಕ ಸಮುದಾಯದವರಿಗೆ ರಾಜಕೀಯವಾಗಿ ಪ್ರಾತಿನಿಧ್ಯ ಸಿಕ್ಕಿಲ್ಲ.
ಆಚಾರ, ವಿಚಾರದ ಬಗ್ಗೆ ಹೇಳುವುದಾದರೆ ರಾಜು ಕ್ಷತ್ರಿಯರು ಬ್ರಾಹ್ಮಣ ಸಂಪ್ರದಾಯ ಪಾಲನೆ ಮಾಡುತ್ತಾರೆ. ಮಾಂಸಹಾರಿಗಳಾದರೂ ಜನಿವಾರ ಧರಿಸುತ್ತಾರೆ. ಜೊತೆಗೆ ಸಂಧ್ಯಾವಂದನೆಯನ್ನೂ ಮಾಡುತ್ತಾರೆ. ಏಕೆಂದರೆ ನಾವು ಸೂರ್ಯ ವಂಶಸ್ಥರು ಎನ್ನುತ್ತಾರೆ ಚಂದ್ರಶೇಖರ ರಾಜು ಅವರು. ಜೊತೆಗೆ ರಾಜು ಕ್ಷತ್ರಿಯರಲ್ಲಿ ಚಂದ್ರ ವಂಶಸ್ಥರೂ ಇದ್ದಾರಂತೆ. ಈ ಚಂದ್ರ ವಂಶಸ್ಥರ ಕುಟುಂಬಗಳು ಕರ್ನಾಟಕದಲ್ಲಿ ಹೆಚ್ಚೇನೂ ಇಲ್ಲ. ಆಂಧ್ರದ ವಿಶಾಖಪಟ್ಟಣ, ಪೂರ್ವ ಮತ್ತು ಪಶ್ಚಿಮ ಗೋದಾವರಿ ಭಾಗದಲ್ಲಿ ಜಾಸ್ತಿ ಇದ್ದಾರಂತೆ. ಇವರು ವೆಂಕಟರಮಣ ಮತ್ತು ಲಕ್ಷ್ಮೀನರಸಿಂಹಸ್ವಾಮಿಯ ಆರಾಧಕರು. ರಾಜು ಕ್ಷತ್ರಿಯರಲ್ಲಿ ಸಸ್ಯಹಾರಿಗಳೂ ಇದ್ದಾರೆ. ಆದರೆ, ಹೆಚ್ಚಿನ ಸಂಖ್ಯೆಯವರು ಮಾಂಸಹಾರಿಗಳು.
ಉಪ ಪಂಗಡಗಳಿವೆ
ಇನ್ನು ಈ ಸಮುದಾಯದಲ್ಲಿ ಅನೇಕ ಉಪ ಪಂಗಡಗಳೂ ಇವೆ. ಅರಸು, ಭಟ್ಟರಾಜು, ಒಡೆಯರ್, ಸೂರ್ಯವಂಶ ಮತ್ತು ಚಂದ್ರವಂಶ ಪ್ರಮುಖವಾದದ್ದು. ಎಲ್ಲರನ್ನೂ ಹೊಂದಿಕೊಂಡು ಹೋಗುವ ಇವರು ಮಹಾನ್ ದೈವ ಭಕ್ತರು. ಹೋರಾಟದ ಮನೋಭಾವ ಹೊಂದಿದವರು. ಹಿಂದಿನ ಕಾಲದಲ್ಲಿ ಇವರಲ್ಲಿ ವರದಕ್ಷಿಣೆ ಎಂಬ ಸಂಪ್ರದಾಯವೇ ಇರಲಿಲ್ಲವಂತೆ. ಗಂಡಿನ ಕಡೆಯವರೇ ಮದುವೆ ಖರ್ಚು ನೋಡಿಕೊಳ್ಳುತ್ತಿದ್ದರಂತೆ. ಕರ್ನಾಟಕದ ಬೆಂಗಳೂರು, ಬಳ್ಳಾರಿ, ಕೋಲಾರ, ತುಮಕೂರು ಮತ್ತಿತರ ಭಾಗದಲ್ಲಿ ಈ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ರಾಜು ಕ್ಷತ್ರಿಯರ ಮಾತೃ ಭಾಷೆ ತೆಲುಗು. ಸಂಕ್ರಾಂತಿ ಮತ್ತು ಯುಗಾದಿ ಹಬ್ಬವನ್ನು ಇವರು ವಿಶಿಷ್ಠವಾಗಿ ಆಚರಿಸುತ್ತಾರೆ. ಸಂಕ್ರಾಂತಿ ವೇಳೆ ಗೋವುಗಳನ್ನು ಅಲಂಕರಿಸಿ ಪೂಜಿಸುತ್ತಾರೆ. ಬಂಧು, ಬಳಗ ಒಂದೆಡೆ ಸೇರಿ ಮೂರು ದಿನಗಳ ಕಾಲ ಹಬ್ಬ ಆಚರಿಸುತ್ತಾರಂತೆ. ರಾಜು ಕ್ಷತ್ರಿಯರು ಯಾರ ಜೊತೆ ಬೇಕಾದರೂ ಹೊಂದಿಕೊಳ್ಳುತ್ತಾರೆ. ನಿಷ್ಠೆಗೆ ಹೆಸರಾದ ಸಮುದಾಯ ಇದು. ಶ್ರಮದಿಂದ ಮೇಲೆ ಬಂದವರು ನಾವು ಎನ್ನುತ್ತಾರೆ ಚಂದ್ರಶೇಖರ ರಾಜು. ಬೆಂಗಳೂರಿನಲ್ಲಿ ಸಂಘ ಸಕ್ರಿಯವಾಗಿದೆ. ಜನಪರ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದೆ ಎಂಬುದು ಅವರ ಅಭಿಪ್ರಾಯ.

- ಕೆ.ವಿ.ಪ್ರಭಾಕರ
prabhukolar@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com