ಪಾರ್ಲಿಮೆಂಟರಿ ಚುನಾವಣೆಗಳು ಇನ್ನೊಂದು ವರ್ಷದಲ್ಲಿ ಎದುರಾಗಲಿವೆ. ಈ ಕಾರಣಕ್ಕೆ ಪ್ರಾದೇಶಿಕ ಪಕ್ಷಗಳು ಮೈಕೊಡವಿಕೊಂಡು ಸಜ್ಜಾಗಿವೆ. ನಿಜ ಹೇಳಬೇಕೆಂದರೆ ಅವು ಹೆಚ್ಚು ಮಹತ್ವಾಕಾಂಕ್ಷಿಯಾಗುತ್ತಿವೆ. ತಮ್ಮ ಸಹಾಯವಿಲ್ಲದೆ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಗೆ ಸರ್ಕಾರ ರಚಿಸಲು ಸಾಧ್ಯವಿಲ್ಲ ಎನ್ನುವುದು ಅವಕ್ಕೆ ಗೊತ್ತಿದೆ. ತಮ್ಮ ಡಿಮ್ಯಾಂಡ್ಗಳನ್ನು ಪೂರೈಸದಿದ್ದರೆ ಬಿಜೆಪಿ ಅಥವಾ ಕಾಂಗ್ರೆಸ್ನಿಂದ ಕಾಲ್ಕಿತ್ತುವುದಾಗಿ ಅವು ಹೆದರಿಸುತ್ತಲೇ ಇವೆ. ಬಹುತೇಕ ಬಾರಿ ಈ ರಾಷ್ಟ್ರೀಯ ಪಕ್ಷಗಳು ಈ ಪಕ್ಷಗಳ ಆದೇಶಗಳಿಗೆಲ್ಲ ಹೂಂಗುಟ್ಟುವುದನ್ನು ನೊಡಿದ್ದೇವೆ. ಹಾಗೆ ಮಾಡಿದಿದ್ದರೆ ತಮಗೆ ಉಳಿಗಾಲವಿಲ್ಲ ಎಂದು ಬಿಜೆಪಿ ಮತ್ತು ಕಾಂಗ್ರೆಸ್ಗೆ ತಿಳಿಯದೇ ಇಲ್ಲ. ಹಾಗಾಗೇ ಪ್ರಾದೇಶಿಕ ಪಕ್ಷಗಳ ತಮಟೆ ಸದ್ದಿಗೆ ಇವು ಹೆಜ್ಜೆಹಾಕುತ್ತಲೇ ಇವೆ.
ಕಾಂಗ್ರೆಸ್ನ ವಿಷಯವನ್ನೇ ತೆಗೆದುಕೊಳ್ಳಿ. ಆಡಳಿತ ಯುಪಿಎದೊಂದಿಗೆ ಬೆಸುಗೆ ಹಾಕಿಕೊಂಡಿರುವ ಕೆಲವು ಪ್ರಾದೇಶಿಕ ಪಕ್ಷಗಳು ಕಾಲಕಾಲಕ್ಕೆ ಒಂದಲ್ಲ ಒಂದು ವಿಷಯದಲ್ಲಿ ಕಿರಿಕ್ಕು ಮಾಡುತ್ತಲೇ ಬಂದಿವೆ. 19 ಎಂಪಿಗಳನ್ನು ಹೊಂದಿರುವ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಅಂತೂ ಕಾಂಗ್ರೆಸ್ನ ನೀತಿಗಳ ಮೇಲೆ ವಿರೋಧ ಪಕ್ಷಗಳಿಗಿಂತಲೂ ಹೆಚ್ಚಾಗಿ ಗುಡುಗತೊಡಗಿತ್ತು. ಒಂದು ದಿನ ಕಾಂಗ್ರೆಸ್ನ ನಂಟು ಕಡಿದುಕೊಂಡು ಯುಪಿಎ ಅಲ್ಪಸಂಖ್ಯಾತವಾಗುವಂತೆ ಮಾಡಿತು. ಮುಲಾಯಂ ಸಿಂಗ್ ಅವರ ಸಮಾಜವಾದಿ ಪಕ್ಷ ಮತ್ತು ಮಾಯಾವತಿಯವರ ಬಹುಜನ ಸಮಾಜವಾದಿ ಪಕ್ಷ ಭುಜಕೊಟ್ಟು ಸರ್ಕಾರವನ್ನು ಬದುಕುಳಿಸಿದವು. ಹಾಗಂತ ಅವರೇನು ಮುಫತ್ತಾಗಿ ಯುಪಿಎದ ಸಹಾಯಕ್ಕೆ ಬಂದವರಲ್ಲ. ಅವರ ಹಲವು ಬೇಡಿಕೆಗಳನ್ನು ಈಡೇರಿಸಲೇಬೇಕಾಯಿತು.
ಕಾಂಗ್ರೆಸ್ ಅನ್ನು ಇದೇ ರೀತಿ ಸಂಕಷ್ಟದಲ್ಲಿ ಸಿಲುಕಿಸಿದ ಇನ್ನೊಂದು ಮಿತ್ರ ಪಕ್ಷವೆಂದರೆ 18 ಎಂಪಿಗಳನ್ನು ಹೊಂದಿರುವ ತಮಿಳುನಾಡಿನ ಡಿಎಮ್ಕೆ ಪಕ್ಷ. ತಮ್ಮ ಮಂತ್ರಿಗಳ ಭ್ರಷ್ಟಾಚಾರದ ವಿಷಯ ಅಥವಾ ಶ್ರೀಲಂಕಾದಲ್ಲಿನ ಸಮಸ್ಯೆಗಳ ವಿಷಯವಾಗಿ ಅದು ಇಟ್ಟ ಬೇಡಿಕೆಗಳನ್ನು ಕಾಂಗ್ರೆಸ್ಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲವಾದರೂ, ಅಸ್ತಿತ್ವದಲ್ಲಿರಲು ಒಪ್ಪಿಕೊಳ್ಳಲೇಬೇಕಾಯಿತು. ತನ್ನ ಪಾಲಿನ ಮಾಂಸವನ್ನು ಪಡೆದುಕೊಳ್ಳಲು ಡಿಎಮ್ಕೆ ಆಗಾಗ ಕಾಂಗ್ರೆಸ್ನ ಕುತ್ತಿಗೆ ಹಿಡಿಯುತ್ತಿತ್ತಾದರೂ, ಈಗಂತೂ ಅದು ಕಾಂಗ್ರೆಸ್ನ ಹಡಗನ್ನು ತೊರೆಯಲು ನಿರ್ಧರಿಸಿದಂತಿದೆ. ಮುನ್ನೆಚ್ಚರಿಕೆ ವಹಿಸಿರುವ ಕಾಂಗ್ರೆಸ್ ಯಾವುದಕ್ಕೂ ಇರಲಿ ಎಂದು ಎಸ್ಪಿ ಮತ್ತು ಬಿಎಸ್ಪಿಯನ್ನು ಮುದ್ದು ಮಾಡುತ್ತಿದೆ. ಅವು ಪುಕ್ಕಟೆಯಾಗಿ ಬೆಂಬಲ ಕೊಡುವುದಿಲ್ಲ ಎನ್ನುವುದು ಗೊತ್ತಿದ್ದರೂ.
ಕಾಂಗ್ರೆಸ್ ಈ ರೀತಿಯಾಗಿ ಒಂದೊಂದಾಗಿ ತನ್ನ ಮಿತ್ರ ಪಕ್ಷಗಳನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆ ಕಾರಣವೂ ಬಹಳಷ್ಟಿದೆ. ಮೊದಲನೆಯದಾಗಿ, ಕಾಂಗ್ರೆಸ್ನ ಹಡಗು ಮುಳುಗಲಿದೆ ಎಂದು ಮಿತ್ರಪಕ್ಷಗಳಿಗೆ ಅನ್ನಿಸತೊಡಗಿದೆ, ಹಾಗಾಗೆ ಅದರೊಟ್ಟಿಗೆ ಮುಳುಗಿಹೋದರೆ ಏನು ಗತಿ ಎಂಬ ಭಯ. ಲೋಕಸಭಾ ಚುನಾವಣೆಯ ಫಲಿತಾಂಶವನ್ನು ನೋಡಿ, ಹೆಚ್ಚು ಮತ ಪಡೆದ ಪಕ್ಷಕ್ಕೆ ಮಣೆ ಹಾಕಬೇಕೆಂಬುದು. ಮೂರನೆಯದಾಗಿ, ಪ್ರಮುಖ 2 ರಾಷ್ಟ್ರೀಯ ಪಕ್ಷಗಳನ್ನು ಪಕ್ಕಕ್ಕೆ ತಳ್ಳಿ ಉಳಿದ ಪ್ರಾದೇಶಿಕ ಪಕ್ಷಗಳೊಂದಿಗೆ ಕೈಜೋಡಿಸಿ ತೃತೀಯ ರಂಗವನ್ನು ಸ್ಥಾಪಿಸಿ ಅಧಿಕಾರ ಸವಿಯಬಹುದೆಂಬ ಕಾರಣಕ್ಕೆ.
ಬಿಜೆಪಿಯೂ ಇಂಥದ್ದೇ ಹಡಗಿನಲ್ಲಿ ಸಾಗುತ್ತಿದೆ. ನರೇಂದ್ರ ಮೋದಿಯವರ ವಿಷಯವಾಗಿ ಜೆಡಿಯು ಪಕ್ಷ ಎನ್ಡಿಎ ಮೆಲ್ಲಗೆ ದೂರಸರಿಯತೊಡಗಿದೆ. ಬಿಹಾರದ ಮುಖ್ಯಮಂತ್ರಿ ಮತ್ತು ಹಿರಿಯ ಜೆಡಿ(ಯು) ನಾಯಕ ನಿತೀಶ್ ಕುಮಾರ್ ಅವರು, ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿಸುತ್ತಿರುವುದನ್ನು ಕೆಲ ಕಾಲದಿಂದ ವಿರೋಧಿಸುತ್ತಲೇ ಬಂದಿದ್ದಾರೆ. ಖುದ್ಧು ತಮ್ಮನ್ನೇ ಪ್ರಧಾನಿ ಅಭ್ಯರ್ಥಿಯೆಂದು ಹೇಳಿಕೊಳ್ಳತೊಡಗಿದ್ದಾರೆ. ಮೋದಿಯವರಿಗಿಂತ ತಮ್ಮ ಆಡಳಿತ ವೈಖರಿ ಅತ್ಯುತ್ತಮವಾದದ್ದು ಎಂಬ ನಂಬಿಕೆ ನಿತೀಶ್ ಕುಮಾರ್ ಅವರದ್ದು. ಈಗ ಜೆಡಿ(ಯು) ತನ್ನ ಮುಂದೆ ನಾಲ್ಕು ಆಯ್ಕೆಗಳನ್ನು ಹರವಿಕೊಂಡು ಕುಳಿತಿದೆ. 1) ತನ್ನ ಜಾತ್ಯತೀತ ರುಜುವಾತುಗಳನ್ನು ಸ್ಪಷ್ಟವಾಗಿ ತೋರಿಸಲು ಬಿಜೆಪಿಯಿಂದ ಹೊರಬರುವುದು. 2) 2014ರ ಚುನಾವಣೆಯ ನಂತರ ಅಥವಾ ಅದಕ್ಕಿಂತ ಮೊದಲೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಜೊತೆ ಕೈಜೋಡಿಸುವುದು. 3) ತೃತೀಯ ರಂಗವನ್ನು ಸ್ಥಾಪಿಸಿ ನಿತೀಶ್ ಕುಮಾರ್ ಅವರನ್ನೇ ಪ್ರಧಾನಿ ಅಭ್ಯರ್ಥಿಯೆಂದು ನಿಲ್ಲಿಸಿ ಚುನಾವಣೆಯನ್ನು ಎದುರಿಸುವುದು. 4) ಏಕಾಂಗಿಯಾಗಿ ಚುನಾವಣೆಗಳಿಗೆ ತೆರಳುವುದು ಮತ್ತು ಫಲಿತಾಂಶದ ಆಧಾರದ ಮೇಲೆ ಯಾರೊಂದಿಗೆ ಸೇರಿಕೊಳ್ಳಬೇಕು ಎಂದು ನಿರ್ಧರಿಸುವುದು.
ಪ್ರಾದೇಶಿಕ ಪಕ್ಷಗಳಲ್ಲೇ ಇಷ್ಟೊಂದು ಜನ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳಿರುವುದರಿಂದ, ತೃತೀಯ ರಂಗವೆನ್ನುವುದು ಗರ್ಭದಲ್ಲೇ ಸಾಯುವ ಸಾಧ್ಯತೆಗಳಿವೆ. ನರೇಂದ್ರ ಮೋದಿ, ನಿತೀಶ್ ಕುಮಾರ್, ಮುಲಾಯಂ ಸಿಂಗ್ ಯಾದವ್, ಮಾಯಾವತಿ, ಮಮತಾ ಬ್ಯಾನರ್ಜಿ, ಜಯಲಲಿತ...ಇವರೆಲ್ಲರೂ ತಮ್ಮನ್ನು ತಾವು ದೇಶವನ್ನು ಮುನ್ನಡೆಸುವ ಶಕ್ತಿಯುಳ್ಳವರೆಂದು ಭಾವಿಸುತ್ತಾರೆ. ಒಂದು ವೇಳೆ ತೃತೀಯ ರಂಗವೇನಾದರೂ ಸ್ಥಾಪನೆಯಾದರೂ ಇದೇ ಕಾರಣಕ್ಕಾಗಿ ಅದು ಹೆಚ್ಚು ಕಾಲ ಉಳಿಯಲಾರದು. ಹಿಂದೆ ಕೂಡ ಹೀಗೆಯೇ ಆಗಿದೆಯಲ್ಲವೇ? ಒಂದು ವೇಳೆ ನಾಯಕರು ತಮ್ಮ ಅಹಂ ಮತ್ತು ಅಧಿಕಾರ ದಾಹವನ್ನು ಬಿಟ್ಟರೆ ಏನಾದರೂ ಬದಲಾವಣೆ ಆಗಬಹುದೇನೋ, ಆದರೆ ಹಾಗಾಗುವುದೇ? ಏನಾದರೂ ಆಗಬಹುದು. ಹೆಚ್.ಡಿ. ದೇವೇಗೌಡರು ಸಿಎಂ ಕುರ್ಚಿಯಿಂದ ಪಿಎಂ ಕುರ್ಚಿಗೆ ಹೋಗಿ ಕೂಡಲಿದ್ದಾರೆ ಎಂದು ಯಾರಿಗಾದರೂ ಗೊತ್ತಿತ್ತೇ? ಆದರೆ ಅವರು 10 ತಿಂಗಳಿಗಿಂತಲೂ ಹೆಚ್ಚು ಕಾಲ ಆ ಸ್ಥಾನದಲ್ಲಿರಲಿಲ್ಲ ಎನ್ನುವುದು ಬೇರೆ ಮಾತು.
ರಾಷ್ಟ್ರೀಯ ರಂಗಸ್ಥಳದಲ್ಲಿ ಪ್ರಾದೇಶಿಕ ಪಕ್ಷಗಳು ಮಿಂಚಬಲ್ಲವೇ? ಆದರೆ ರಾಜ್ಯವನ್ನು ಮುನ್ನಡೆಸುವುದು ರಾಷ್ಟ್ರವನ್ನು ಮುನ್ನಡೆಸುವುದಕ್ಕಿಂತ ಭಿನ್ನವಲ್ಲವೇ? ಮೋದಿ ಮತ್ತು ನಿತೀಶ್ ಕುಮಾರ್ ತಮ್ಮ ರಾಜ್ಯಗಳಲ್ಲಿ ಯಶಸ್ವಿಯಾಗಿರಬಹುದು. ಆದರೆ ಅದೇ ಯಶಸ್ಸನ್ನು ಅವರು ಇಡೀ ದೇಶಕ್ಕೆ ತಂದುಕೊಡಬಲ್ಲರೇ? ಇಂಥವೇ ಹತ್ತಾರು ಪ್ರಶ್ನೆಗಳು ದೇಶದಲ್ಲಿ ಗಿರಕಿ ಹೊಡೆಯುತ್ತಿವೆ. ಎಲ್ಲರ ಅಭಿಪ್ರಾಯ ಒಂದೇ ತೆರನಾಗಿಲ್ಲ. ಮತದಾರರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರು ತಮ್ಮ ನಿಲುವಿನಲ್ಲಿ ಸ್ಪಷ್ಟತೆ ತೋರಿಸಲಿದ್ದಾರೆಯೇ? ಯುಪಿಎಗೇ ಮತ್ತೆ ಮಮತೆ ತೋರುವರೇ ಅಥವಾ ಎನ್ಡಿಎಗೆ ಮತ್ತೆ ಅಧಿಕಾರ ತಂದುಕೊಡುವರೇ? ಅಥವಾ ಎರಡೂ ಪಕ್ಷಗಳಿಗೂ ಕೈಕೊಟ್ಟು ತೃತೀಯ ರಂಗ ಅಸ್ತಿತ್ವದಲ್ಲಿ ಬಂದು ಆಡಳಿತ ನಡೆಸಲು ಕಾರಣರಾಗುವರೇ? ಯಾವ ಪಕ್ಷ ಅಥವಾ ಮೈತ್ರಿಕೂಟಗಳಿಗೂ ಬಹುಮತ ಕೊಡದಂತಹ ಗೊಂದಲದಿಂದಾಗಿ, ಕುದುರೆ ವ್ಯಾಪಾರ,ಅಧಿಕಾರ ದಾಹ, ಅಭದ್ರ ಸರ್ಕಾರಗಳಿಗೆ ಸಾಕ್ಷಿಯಾಗುವರೇ? ಚುನಾವಣೆಯ ವರೆಗಿನ ಸಮಯ ನಿಜಕ್ಕೂ ಪ್ರಮುಖವಾಗಲಿದೆ.
ಕೊನೆ ಗುಟುಕು: ಮುಂಬರುವ ಚುನಾವಣೆಗಳಲ್ಲಿ ಯಾರನ್ನು ಖಜಟಜ್ಛಡಿ ಮಾಡಬೇಕೆಂಬುದು ನಿಮಗೆ ತಿಳಿಯದಿದ್ದರೆ, ಯಾರನ್ನು ಖಜಞಜ್ಛಡಿ ಮಾಡಬೇಕು ಎಂಬುದಕ್ಕಾಗಿ ನಿಮ್ಮ ಮತಗಳನ್ನು ಬಳಸಿ -ಅಣ್ಣಾ ಹಜಾರೆ.
- ಎಚ್.ಎಸ್. ಬಲರಾಮ್
hsbalram@gmail.com