ಉಚಿತ ಅಕ್ಕಿ, ಹಸು, ಟಿವಿ... ಸಮೀಪಿಸುತ್ತಿದೆ ಅರಾಜಕತೆ!

Updated on: 

ಚುನಾವಣೆಯ ಗಂಟೆ ಮೊಳಗತೊಡಗಿದೆ. ರಾಜಕಾರಣಿಗಳು ಅತ್ತ ಇತ್ತ ಆತಂಕದಿಂದ ಓಡಾಡತೊಡಗಿದ್ದಾರೆ. ಆದರೆ, ಅವರು ಮತ್ತೆ ವಿಜಯೋತ್ಸಾಹದ ನಗೆ ಬೀರುವುದು ಖಚಿತ. ಏಕೆಂದರೆ, ಮುಂದಿನ ಅತಂತ್ರ ಸಂಸತ್ತಿನಲ್ಲೂ  ಕುದುರೆ ವ್ಯಾಪಾರಿಗಳು, ಚೌಕಾಶಿದಾರರು, ಬ್ಲ್ಯಾಕ್‌ಮೇಲರ್‌ಗಳು, ಸೂಟ್‌ಕೇಸ್ ಒಡೆಯರು- ಹೀಗೆ ಎಲ್ಲರೂ ಕಾಣಿಸಿಕೊಳ್ಳಲಿದ್ದಾರೆ. ಈಗಿನ ಮೈತ್ರಿಕೂಟದಷ್ಟೇ ಅಸಹ್ಯವಾದ ಇನ್ನೊಂದು ಮೈತ್ರಿಕೂಟ ಅಸ್ತಿತ್ವಕ್ಕೆ ಬರಲಿದೆ. ಇಂಥ ಲೂಟಿಕೋರರ ವರ್ಗದಿಂದ ನಮ್ಮನ್ನು ರಕ್ಷಿಸಲು ಹಾಗೂ ನೈಜ ಪ್ರಜಾಪ್ರಭುತ್ವಕ್ಕೆ ಅವಕಾಶ ನೀಡಲು ಭಾರತದಲ್ಲೂ ಮುಂದೊಂದು ದಿನ ಜನಾಕ್ರೋಶ, ಅಶಾಂತಿ ಭುಗಿಲೇಳಬಹುದು. ಆದರೆ, ಅದಕ್ಕೆ ಇನ್ನಷ್ಟು ಸಮಯ ಬೇಕಾಗಬಹುದು.
ಕುತೂಹಲಕಾರಿ ವಿಷಯವೆಂದರೆ, ವಿಧಾನಸಭೆ ಚುನಾವಣೆಯ ಮೊದಲ ರಣಕಹಳೆ ಕರ್ನಾಟಕದಿಂದಲೇ ಮೊಳಗಿರುವುದು. ಕೆಲವೇ ಕೆಲ ದಿನಗಳ ಹಿಂದಷ್ಟೇ ಇಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿದೆ. ಆ ಸುತ್ತಿನಲ್ಲಿ ಬಿಜೆಪಿಯು ಹೀನಾಯ ಸೋಲು ಕಂಡಿದೆ. ಕರಾವಳಿ ಪ್ರದೇಶದ ತನ್ನ ಸಾಂಪ್ರದಾಯಿಕ ಬಲಿಷ್ಠ ಕೋಟೆಯಲ್ಲೂ ಅದು ಪರಾಭವ ಅನುಭವಿಸಿದೆ. ಆ ಪಕ್ಷದ ಭ್ರಷ್ಟಾಚಾರದ ವಿರುದ್ಧ ಜನ ಎಷ್ಟು ಸಿಟ್ಟಿಗೆದ್ದಿದ್ದಾರೆ ಎಂಬುದು ಬಹಿರಂಗವಾಗಿದೆ. ಬಿಜೆಪಿ ಮುಖ್ಯಮಂತ್ರಿಯೊಬ್ಬರು ಹಾಗೂ ಪಕ್ಷದ ಬಳ್ಳಾರಿ ಫೈನಾನ್ಷಿಯರ್‌ರೊಬ್ಬರು ಸೆರೆವಾಸ ಅನುಭವಿಸುವಷ್ಟರವರೆಗೆ ಭ್ರಷ್ಟಾಚಾರ ಪರಾಕಾಷ್ಠೆಗೆ ತಲುಪಿತ್ತು.
ಕಾಂಗ್ರೆಸ್ ಪಾಲಿಗೆ ಇದೊಂದು ಸದವಕಾಶ. ಆದರೆ, ಅದು ಈ ಅವಕಾಶವನ್ನು ಬಳಸಿಕೊಳ್ಳುವ ಲಕ್ಷಣಗಳೇನೂ ಕಾಣಿಸುತ್ತಿಲ್ಲ. ಪಕ್ಷದ ಹಿರಿಯರು ಒಗ್ಗಟ್ಟಿನಿಂದ ಪ್ರಚಾರಕ್ಕಿಳಿದರೆ, ಕಳಂಕಿತ ವ್ಯಕ್ತಿಗಳನ್ನು ಪ್ರಚಾರದಿಂದ ದೂರ ತಳ್ಳಿದರೆ, ಯುವ ನಾಯಕರನ್ನು ಮುಂಚೂಣಿಯಲ್ಲಿ ಇರಿಸಿದರೆ ಕಾಂಗ್ರೆಸ್ ಖಂಡಿತವಾಗಿಯೂ ಜನರ ವಿಶ್ವಾಸವನ್ನು ಮರಳಿ ಗೆದ್ದುಕೊಳ್ಳಬಲ್ಲದು. ಆದರೆ, ಇಂಥ ಲೆಕ್ಕಾಚಾರಗಳು ಪಕ್ಷದಲ್ಲಿ ಕಾಣಿಸುತ್ತಿಲ್ಲ. ಹೈಕಮಾಂಡ್ ಮಟ್ಟದಲ್ಲೂ ಇಂಥ ಚಿಂತನೆ ಕಾಣಿಸುತ್ತಿಲ್ಲ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿನ ಪಕ್ಷದ ಜಯಭೇರಿಯ ಎಲ್ಲ ಗೌರವ ರಾಹುಲ್ ಗಾಂಧಿ ಅವರಿಗೇ ಸಲ್ಲಬೇಕು ಎಂದು ಪ್ರಚಾರ ಮಾಡುವಲ್ಲಿ ನಾಯಕರು ಪೈಪೋಟಿ ನಡೆಸಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.
ಚುನಾವಣೆ ಪರ್ವ ಸಮೀಪಿಸುತ್ತಿದ್ದಂತೆಯೇ ಉಚಿತ ಕೊಡುಗೆಗಳ ಸಂಸ್ಕೃತಿ ವಿಜೃಂಭಿಸಲಾರಂಭಿಸಿದೆ. ಎನ್.ಟಿ. ರಾಮರಾವ್ ಅವರು ಚುನಾವಣೆಯ ಅಸ್ತ್ರವಾಗಿ ಒಂದು ರುಪಾಯಿಗೆ ಕೆಜಿ ಅಕ್ಕಿ  ಯೋಜನೆಯನ್ನು ಪ್ರಾರಂಭಿಸಿದಂದಿನಿಂದ ಈ ಐಡಿಯಾವನ್ನು ಎಲ್ಲರೂ ಅನುಸರಿಸತೊಡಗಿದ್ದಾರೆ. ಬೇಕಾದರೆ ತಮಿಳುನಾಡನ್ನೇ ನೋಡಿ. ಪರಸ್ಪರ ಪೈಪೋಟಿ ನಡೆಸುವ ಪಕ್ಷಗಳು ಉಚಿತ ಅಕ್ಕಿ, ಉಚಿತ ಲ್ಯಾಪ್‌ಟಾಪ್, ಉಚಿತ ಮಂಗಲಸೂತ್ರ, ಅಷ್ಟೇ ಅಲ್ಲ, ಉಚಿತ ಹಸುಗಳನ್ನೂ ನೀಡುತ್ತಿವೆ!
ಇಂಥ “ಗಿಫ್ಟ್ ರಾಜಕೀಯ’ದ ಪ್ರಯೋಜನವನ್ನು ಒಡಿಶಾ ಈಗಾಗಲೇ ಕಂಡುಕೊಂಡಿದೆ. 2009ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ, ನವೀನ್ ಪಟ್ನಾಯಕ್ ಸರ್ಕಾರ 2 ರುಪಾಯಿಗೆ ಕಿಲೋ ಅಕ್ಕಿಯ ಕೊಡುಗೆ ನೀಡಿತು.  ಚುನಾವಣೆಯಲ್ಲಿ ಸರ್ಕಾರ ಭಾರಿ ಜಯ ಗಳಿಸಿತು. ಹಾಗಾಗಿ, ಈ ಬಾರಿ 1 ರುಪಾಯಿಗೆ ಕಿಲೋ ಅಕ್ಕಿ ಭರವಸೆ ನೀಡಲಾಗಿದೆ. ಮುಂದಿನ ಬಾರಿ ಬಹುಶಃ ಉಚಿತವಾಗಿ ಅಕ್ಕಿ ಒದಗಿಸುವ ಘೋಷಣೆ ಮಾಡುತ್ತಾರೇನೋ! ಆ ಸರ್ಕಾರ ಇನ್ನೂ ಹಲವು ಗಿಫ್ಟ್ ಪ್ರಕಟಿಸಿದೆ. 20,000 ರೈತರಿಗೆ ಉಚಿತ ಮೊಬೈಲ್ ನೀಡಲಾಗುತ್ತಿದೆ, ಒಂದು ಲಕ್ಷ ಮೀನುಗಾರರಿಗೆ ಉಚಿತ ಸಿಮ್‌ಕಾರ್ಡ್ ಒದಗಿಸಲಾಗುತ್ತಿದೆ. 10ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್‌ಗಳನ್ನು, ಗರ್ಭಿಣಿಯರಿಗೆ 5000 ರುಪಾಯಿಗಳನ್ನು ನೀಡಲಾಗುತ್ತಿದೆ. ಈ ಕೊಡುಗೆಗಳಿಗಾಗಿ ಸರ್ಕಾರ 60,000 ಕೋಟಿ ರು. ವೆಚ್ಚ ಮಾಡಲಿದೆ. ಈ ಮೊತ್ತ ಉಳಿದ ರಾಜ್ಯಗಳಿಗಿಂತ ತುಸು ಹೆಚ್ಚು ಎಂದೇ ಹೇಳಬಹುದು. ಏಕೆಂದರೆ, ತಮಿಳುನಾಡಿನಲ್ಲಿರುವಂತೆ ಇದನ್ನೆಲ್ಲ ಪ್ರಶ್ನಿಸುವಂಥ ಬಲಿಷ್ಠ ವಿರೋಧಪಕ್ಷ ಒಡಿಶಾದಲ್ಲಿ ಇಲ್ಲ.
ಅದೇನೇ ಇದ್ದರೂ, ಈ ವರ್ಷದ ರಾಜ್ಯ ಚುನಾವಣೆಗಳು ಹೆಚ್ಚಿನ ಮಹತ್ವ ಹೊಂದಿವೆ. ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಅವು ಪರಿಣಾಮ ಬೀರುವ ಸಾಧ್ಯತೆಯೂ ಇಲ್ಲದಿಲ್ಲ. ಪ್ರತಿಯೊಂದು ಪ್ರಾದೇಶಿಕ ಪಕ್ಷದ ನಾಯಕನೂ “ಕಿಂಗ್ ಮೇಕರ್’ ಆಗಲು ಬಯಸುತ್ತಿದ್ದಾನೆ. ಲೋಕಸಭಾ ಚುನಾವಣೆಯು ನಿರೀಕ್ಷೆಯಂತೆ ಯಾವ ಪಕ್ಷಕ್ಕೂ ಬಹುಮತವನ್ನು ನೀಡದೇಹೋದರೆ, ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಬೇಕೆಂಬುದೇ ಪ್ರಾದೇಶಿಕ ನಾಯಕರ ಗುರಿ. ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಒಡಿಶಾ, ತಮಿಳುನಾಡು, ಮಹಾರಾಷ್ಟ್ರ- ಇವೆಲ್ಲ ರಾಜ್ಯಗಳ ನಾಯಕರ ಅಂತಿಮ ಗುರಿಯೆಂದರೆ ದೆಹಲಿ. ಮುಲಾಯಂ ಸಿಂಗ್ ಮತ್ತು ಶರದ್ ಪವಾರ್‌ರಂಥವರು ಈಗಾಗಲೇ ಯಾವುದೋ ಮೈತ್ರಿಕೂಟದ ಮುಖ್ಯಸ್ಥರಂತೆ ವರ್ತಿಸಲಾರಂಭಿಸಿದ್ದಾರೆ.
ಮೈತ್ರಿಕೂಟ ಸರ್ಕಾರಗಳು ಭಾರತದ ಪಾಲಿಗೆ ಶಾಪವೇ ಸರಿ. ಯಾವುದೋ ಪುಟ್ಟ ಪಕ್ಷ ಇಡೀ ಸರ್ಕಾರವನ್ನು ಇಲ್ಲಿ ಒತ್ತೆಸೆರೆಯಲ್ಲಿರಿಸಬಹುದು. ಡಿಎಂಕೆಯು ಹೊರ ನಡೆದ ಬಳಿಕ, ಮನಮೋಹನ್ ಸಿಂಗ್ ಸರ್ಕಾರವು ಮುಲಾಯಂ ಸಿಂಗ್ ಮತ್ತು ಮಾಯಾವತಿಯ ಕೃಪೆಯಿಂದಲೇ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾಗಿದೆ. ನಮ್ಮ ಹಗರಣಗಳ ಯುಗದಲ್ಲಿನ ಬೃಹತ್ ಹಗರಣಗಳಲ್ಲೊಂದು ಮಹಾರಾಷ್ಟ್ರದ ನೀರಾವರಿ ನೆರವಿಗೆ ಸಂಬಂಧಿಸಿದ್ದು. ಅದರ ಅಂಕಿಅಂಶಗಳು ಈಗಾಗಲೇ ಬಹಿರಂಗವಾಗಿವೆ. ಆದರೆ, ಇದಕ್ಕೆ ಸಂಬಂಧಿಸಿದ ಖಾತೆಯು ಪವಾರ್ ಅವರ ಪಕ್ಷದ ವಶದಲ್ಲಿರುವ ಕಾರಣ, ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕೃತವಾಗಿ ಕ್ಲೀನ್‌ಚಿಟ್ ನೀಡಲೇ ಬೇಕಾಯಿತು. ಅತ್ತ ಕೇರಳವನ್ನು ನೋಡಿ. ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಲ್ಪ ಬಹುಮತವನ್ನಷ್ಟೇ ಹೊಂದಿರುವುದರಿಂದ ಮುಖ್ಯಮಂತ್ರಿ ರಬ್ಬರ್‌ಸ್ಟ್ಯಾಂಪ್ ಆಗಬೇಕಾಯಿತು. ಮುಸ್ಲಿಂ ಲೀಗ್ ಮತ್ತು ಇತರ ಪಾಲುದಾರ ಪಕ್ಷಗಳು ಎಸಗಿದ ಗಂಭೀರ ಅವ್ಯವಹಾರಗಳನ್ನೆಲ್ಲ ಸುಮ್ಮನೆ ನೋಡುತ್ತಾ ಕೂರಬೇಕಾಯಿತು. ಕೇಂದ್ರದಲ್ಲಿ ಮಾತ್ರವಲ್ಲದೆ ರಾಜ್ಯಗಳಲ್ಲಿ ಕೂಡಾ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಭ್ರಷ್ಟಾಚಾರ ಮತ್ತು ಅಪರಾಧಗಳನ್ನು ಪ್ರಜಾಪ್ರಭುತ್ವದ “ವಿಶೇಷ ಹಕ್ಕು’ ಎಂಬಂತೆ ಪರಿಗಣಿಸಲಾಗುತ್ತಿದೆ.
ಪ್ರೌಢ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಮೈತ್ರಿಕೂಟ ಸರ್ಕಾರಗಳು ಶಾಪ ಎನ್ನಿಸಿಕೊಳ್ಳುವುದಿಲ್ಲ. ಇಂದಿನ ಬ್ರಿಟಿಷ್ ಸರ್ಕಾರ ಟೋರಿ- ಲಿಬರಲ್ ಪಾರ್ಟಿ ಮೈತ್ರಿಕೂಟದ್ದು. ಇತರ ಐರೋಪ್ಯ ರಾಷ್ಟ್ರಗಳಲ್ಲೂ ಮೈತ್ರಿಕೂಟ ಸರ್ಕಾರಗಳು ಸಮರ್ಥವಾಗಿ ಕಾರ್ಯನಿರ್ವಹಿಸಿವೆ. ಮಲೇಷ್ಯಾ ಕೂಡಾ ಸುದೀರ್ಘ ಕಾಲ ಮೈತ್ರಿಕೂಟ ವ್ಯವಸ್ಥೆಯನ್ನು ಕಂಡಿದೆ, ಪ್ರಗತಿಯನ್ನೂ ಸಾಧಿಸಿದೆ.  ದೋಷವಿರುವುದು ವ್ಯವಸ್ಥೆಯಲ್ಲಿ ಅಲ್ಲ, ಜನರೇ ವ್ಯವಸ್ಥೆಯನ್ನು ದುರ್ಬಳಕೆ ಮಾಡುತ್ತಾರೆ. ನಮ್ಮ ರಾಜಕೀಯ ವರ್ಗ ಎಷ್ಟು ಕೆಟ್ಟುಹೋಗಿದೆಯೆಂದರೆ, ಅದು ಮುಟ್ಟಿದ್ದೆಲ್ಲವೂ ಕಲುಷಿತವಾಗುತ್ತದೆ. ಮುಂದೆ ನಡೆಯಲಿರುವ ಚುನಾವಣೆ ಕೂಡಾ ಇಂಥ ಸೋಂಕನ್ನಾಗಲೀ ಮಾಲಿನ್ಯವನ್ನಾಗಲೀ ತೊಲಗಿಸುತ್ತದೆ ಎಂದು ನಿರೀಕ್ಷಿಸುವಂತಿಲ್ಲ.

-ಟಿ.ಜೆ.ಎಸ್.ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com