ಅಪರೂಪದ ರಾಜಕಾರಣಿಯ ಜೊತೆಗಿನ ಅವಿಸ್ಮರಣೀಯ ಅನುಭವಗಳು
ಶಾಲಿನಿ: ಕಳೆದ ವಾರ ಭಾರತ ಸರ್ಕಾರದ ಕೃಷಿ ಇಲಾಖೆಯಲ್ಲಿನ ನನ್ನ ಅನುಭವಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೆ. ರಾಜ್ಯ ಕೃಷಿ ಮಂತ್ರಿಗಳು ಹೋದಲ್ಲೆಲ್ಲಾ ಸಾರ್ವಜನಿಕರು ಅವರಿಗೆ ಯಾವುದೇ ಇಲಾಖೆಗೆ ಸಂಭಂಧ ಪಟ್ಟ ಯಾವುದಾದರೂ ಒಂದು ಅಹವಾಲನ್ನು ಅರ್ಪಿಸಿದರೆ ಅದನ್ನು ತಕ್ಷಣ ನನ್ನ ಕೈಗೆ ಇಡುತ್ತಿದ್ದರು. ನಾನು ಅದನ್ನು ಕೂಡಲೇ ಸಂಭಂಧ ಪಟ್ಟ ಇಲಾಖೆಗೆ ಕಳುಹಿಸಿ ಕೊಡುತ್ತಿದ್ದೆ. ಇಲ್ಲಿ ಮುಖ್ಯವಾದ ವಿಷಯವೇನೆಂದರೆ ಮಾನ್ಯ ಮಂತ್ರಿಗಳು ಒಂದನ್ನೂ ಮರೆಯುತ್ತಿರಲಿಲ್ಲ. ಒಂದು ಅಥವಾ ಎರಡು ದಿನಗಳಲ್ಲಿ ಅವರಿಗೆ ಅವುಗಳ ಬಗ್ಗೆ ನಾನು ಮಾಹಿತಿ ನೀಡದಿದ್ದರೆ ಅವರಾಗಿಯೇ ಕರೆದು ಕೇಳುತ್ತಿದ್ದರು. ಜನಗಳನ್ನು ಭೇಟಿ ಮಾಡುವುದು, ಅವರ ದುಃಖ ದುಮ್ಮಾನಗಳನ್ನು ಆಲಿಸುವುದು, ಸಾರ್ವಜನಿಕರ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದರೆ, ತಮಗಾದ ಸಹಾಯವನ್ನು ಯಾವಾಗಲೂ ಮುಕ್ತ ಮನಸ್ಸಿನಿಂದ ಮಾಡುವುದು ಅವರ ಸಹಜ ಗುಣವಾಗಿತ್ತು. ಅವರು ಪ್ರತಿನಿಧಿಸುವ ತಮ್ಮ ಚುನಾವಣ ಕ್ಷೇತ್ರದ ಅಭಿವೃದ್ಧಿಗಾಗಿ ಹಲವಾರು ವಿನೂತನ ಯೋಜನೆಗಳನ್ನು ಹಮ್ಮಿಕೊಂಡು ಜನರ ಒಳಿತಿಗೆ ಸದಾ ಶ್ರಮಿಸುತ್ತಿದ್ದರು. ಅವರು ಪ್ರತಿನಿಧಿಸುತ್ತಿದ್ದ ಗೋವಾ ರಾಜ್ಯದಲ್ಲಿ ಪ್ರವಾಸಿಗರು ಝಛಛ್ಠಡಿಜ್ಠ ವಿಮಾನದಲ್ಲಿ ಪ್ರಯಾಣ ಮಾಡುವುದು ಸಾಕಷ್ಟಿತ್ತು. ಆದರೆ ಈ ವಿಮಾನಗಳು ಪ್ರವಾಸಿಗರನ್ನು ಗೋವಾದಲ್ಲಿ ಇಳಿಸಿ ಬಹಳಷ್ಟು ಸಮಯ ಖಾಲಿ ಹೋಗುತ್ತಿದ್ದವು. ಮಾನ್ಯ ಮಂತ್ರಿಗಳು ಇದರ ಬಗ್ಗೆ ಯೋಚನೆ ಮಾಡಿ ವಿಮಾನಗಳು ಖಾಲಿ ವಾಪಸ್ಸು ಹೋಗುವ ಬದಲು ಗೋವಾದ ರಫ್ತು ವಸ್ತುಗಳಾದ ಹೂವುಗಳು, ಆಲ್ಫೋನ್ಸೋ ಮಾವಿನ ಹಣ್ಣುಗಳು, ಸಾಂಬಾರ ಪದಾಟ್ಛಗಳು ಮುಂತಾದವುಗಳನ್ನು ಕೊಂಡೊಯ್ಯುವದರ ವ್ಯವಸ್ಥೆ ಮಾಡಿದರು. ಇದರಿಂದಾಗಿ ರೈತರಿಗೆ ಕಡಿಮೆ ದರದಲ್ಲಿ ರಫ್ತು ಮಾಡುವ ಅವಕಾಶ ದೊರೆತು ಅವರು ಹೆಚ್ಚು ಲಾಭ ಪಡೆಯುವಂತಾಯಿತು.
ಭಾರತೀಯ ಕೃಷಿ ಸಂಶೋಧನಾ ಮಂಡಳಿ(ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್)ಯಲ್ಲಿ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ಮಾನ್ಯ ಮಂತ್ರಿಯವರು ತೀವ್ರ ಆಸಕ್ತಿ ವಹಿಸಿದ್ದರು. ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಹೊಸ ತಂತ್ರಜ್ಞಾನದ ಬಳಕೆಯ ಬಗ್ಗೆ ಅಸ್ಥೆಯನ್ನು ತೋರಿಸಿ ಅವುಗಳನ್ನು ಪ್ರಾಯೋಗಿಕ ಯೋಜನೆಗಳಲ್ಲಿ(ಪೈಲೆಟ್ ಪ್ರಾಜೆಕ್ಟ್) ತೊಡಗಿಸುವಂತೆ ಬೇಡಿಕೆ ಇಡುತ್ತಿದ್ದರು. ಇದರಿಂದಾಗುವ ಪರಿಣಾಮ ಮಹತ್ತರವಾಗಿರುತ್ತಿತ್ತು ಮತ್ತು ಕಣ್ಣಿಗೆ ತಕ್ಷಣ ಕಾಣುವಂತಿತ್ತು. ಯಾವುದೇ ಹೊಸ ಅವಿಷ್ಕಾರವನ್ನು ಪರಿಚಯಿಸಿದಾಗ ಸಾಮಾನ್ಯವಾಗಿ ರೈತರಿಂದ ವಿರೋಧ ಮತ್ತು ಪ್ರತಿಭಟನೆ ಇರುತ್ತಿತ್ತು, ಅದನ್ನು ತಂತ್ರಜ್ಞಾನ ಇಲಾಖೆ ಎದುರಿಸಬೇಕಾಗುತ್ತಿತ್ತು.
ಇದರಂತೆಯೇ ಕೊಂಕಣ ರೇಲ್ವೆ ವಿಭಾಗವು ರೇಲ್ವೆ ಹಳಿಗಳ ಪಕ್ಕದಲ್ಲಿ ಭೂಮಿಯನ್ನು ಹೊಂದಿತ್ತು. ಆ ಬಂಜರು ಭೂಮಿಯಲ್ಲಿ ತೋಟಗಾರಿಕಾ ಇಲಾಖೆಯ ವತಿಯಿಂದ ಜೈವಿಕ ಮತ್ತು ಔಷಧೀಯ ಸಸ್ಯಗಳನ್ನು ಬೆಳೆಸುವ ಯೋಜನೆಯನ್ನು ಮಾನ್ಯ ಮಂತ್ರಿಗಳು ಜಾರಿಗೆ ತಂದರು. ಯಾವುದೇ ಒಂದು ಸಣ್ಣ ಸಲಹೆಯನ್ನು ಮಾನ್ಯ ಮಂತ್ರಿಗಳಿಗೆ ಕೊಟ್ಟರೂ ಸಾಕು. ಅದನ್ನು ಅರ್ಥ ಮಾಡಿಕೊಂಡು ಅವುಗಳ ಪ್ರಯೋಜನವನ್ನು ಮನಗಂಡು ತಮ್ಮ ಕ್ಷೇತ್ರದಲ್ಲಿ ಅದರ ಉಪಯೋಗ ಆಗುವಂತೆ ನಾಯಕತ್ವ ವಹಿಸುತ್ತಿದ್ದರು.
2001, ಜನವರಿ 26ರ ಗಣರಾಜ್ಯೋತ್ಸವ ದಿನದಂದು, ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಸಂಚಾರ ಪಥ ನಡೆಯುತ್ತಿದ್ದ ಸಂದರ್ಭದಲ್ಲಿ ಇಡೀ ದೇಶ ಒಂದು ಭೀಕರ ಭೂಕಂಪವನ್ನು ಎದುರಿಸಬೇಕಾಯಿತು. ಗುಜರಾತಿನ ಭುಜ್ ಜಿಲ್ಲೆಯಲ್ಲಿ ಭೂಕಂಪದ ದೆಸೆಯಿಂದಾಗಿ ವಿಪರೀತ ಹಾನಿಯುಂಟಾಯಿತು. ಆಗ ದುರ್ಘಟನೆಗಳ ನಿರ್ವಹಣೆ ಕೃಷಿ ಇಲಾಖೆಯ ಸುಪರ್ದಿನಲ್ಲಿತ್ತು. ಸಚಿವ ಸಂಪುಟದ ಕಾರ್ಯದರ್ಶಿಗಳು ಎಲ್ಲಾ ಇಲಾಖೆಯ ಕಾರ್ಯದರ್ಶಿಗಳ ತುರ್ತು ಸಭೆಯನ್ನು ಕರೆದರು. ಸಶಸ್ತ್ರ ಸೈನ್ಯ, ಗೃಹ ಮಂತ್ರಾಲಯ, ನಾಗರಿಕ ವಿಮಾನಯಾನ ಮುಂತಾದ ಇಲಾಖೆಗಳ ಸಹಾಯದೊಂದಿಗೆ ಭೂಕಂಪ ಪೀಡಿತರ ರಕ್ಷಣೆ ಮತ್ತು ಪರಿಹಾರ ಕಾಮಗಾರಿಗೆ ತಂತ್ರಗಳನ್ನು ರೂಪಿಸಲಾಯಿತು. ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಮೊದಲ ಅವಕಾಶ ನನಗೆ ಇದಾಗಿತ್ತು. ತಕ್ಷಣವೇ ನಿರ್ಧಾರ ತೆಗೆದುಕೊಳ್ಳುವುದು, ಸಂದರ್ಭಕ್ಕೆ ಅನುಸಾರವಾಗಿ ಪರಿಹಾರ ಕಾರ್ಯ ಏರ್ಪಡಿಸುವುದು, ಸರ್ಕಾರದ ಎಲ್ಲಾ ಇಲಾಖೆಗಳ, ಸರ್ಕಾರೇತರ ಸಂಸ್ಥೆಗಳ ಮತ್ತು ಮಾಧ್ಯಮ ಸಂಘಟನೆ ಇಂಥಹ ತುರ್ತು ಪರಿಸ್ಥಿತಿಯಲ್ಲಿ ಬಹಳ ಮುಖ್ಯವಾಗುತ್ತವೆ. ಇವೆಲ್ಲವುಗಳನ್ನೂ ಉತ್ತಮವಾಗಿ ಸಂಘಟಿಸಿ, ಪರಿಸ್ಥಿತಿಯನ್ನು ಎದುರಿಸಿದ ಅನುಭವ ನನ್ನ ಜೀವನದಲ್ಲಿ ಅತ್ಯಮೂಲ್ಯವಾದುದು.
ನಾನು ತಾತ್ಕಾಲಿಕವಾಗಿ ಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರೂ ಸಹ ನನ್ನ ಕಾರ್ಯವೈಖರಿ ಅವರಿಗೆ ಮೆಚ್ಚುಗೆಯಾಗಿ, ನನ್ನ ಉಪಯುಕ್ತತೆ ಅವರ ಅರಿವಿಗೆ ಬಂದು, ನಾನು ಅವರ ಆಪ್ತ ಕಾರ್ಯದರ್ಶಿಯಾಗಿಯೇ ಮುಂದುವರಿದೆ. ಸ್ವಲ್ಪ ದಿನಗಳಲ್ಲಿಯೇ ಅವರು ಹಡಗು ಮತ್ತು ಬಂದರು ಇಲಾಖೆಗೆ ರಾಜ್ಯ ಸಚಿವರಾಗಿ ವರ್ಗಾವಣೆಗೊಂಡರು. ಅಗ ಬಂಗಾರದ ಚತುಷ್ಕೋನ ಯೋಜನೆಯ (್ಜ್ಟಟಜಜಟಿ ಠ್ಡಿಛಜ್ಠ್ಝಟಛಡಿಜ್ಠಛಟ ಠ್ಠ್ಟಞಜ್ಛಡಿ) ಮೂಲಕ ದೇಶದ ನಾಲ್ಕು ದಿಕ್ಕುಗಳಲ್ಲಿ ಇರುವ ಮಹಾನಗರಗಳನ್ನು ಜೋಡಿಸುವ ಮಹತ್ವಾಕಾಂಕ್ಷೀ ಯೋಜನೆ ಕಾರ್ಯಗತವಾಗಿತ್ತು. ನಂತರ ಅವರು ನಾಗರಿಕ ವಿಮಾನಯಾನ ಇಲಾಖೆಗೆ ರಾಜ್ಯ ಸಚಿವರಾಗಿ ನೇಮಕಗೊಂಡರು. ನಾಗರಿಕ ವಿಮಾನಯಾನ ಇಲಾಖೆಯೆಂದರೆ ಅತ್ಯಂತ ಆಕರ್ಷಕ ಇಲಾಖೆಯಾಗಿತ್ತು. ಈ ಇಲಾಖೆಯಲ್ಲಿ ಹಲವು ವಿಚಾರಗಳು ನೆನೆಗುದಿಗೆ ಬಿದ್ದಿದ್ದವು. ಉದಾಹರಣೆಗೆ ಪವನಹನ್ಸ ಹೆಲಿಕಾಪ್ಟರ್ ಲಿಮಿಟೆಡ್ನ ಯೋಜನೆ. ಈ ಕಂಪೆನಿಗೆ ಮಾನ್ಯ ಮಂತ್ರಿಗಳೇ ಅಧ್ಯಕ್ಷರಾಗಿದ್ದರು. ಈ ಯೋಜನೆಯಲ್ಲಿ ಹೆಲಿಕಾಪ್ಟರ್ಗಳನ್ನು ಹತ್ತಿರದ ಜಾಗಗಳಿಗೆ ಹೋಗುವುದಕ್ಕೆ ಬಳಸಲಾಗುತ್ತಿತ್ತು. ಹೆಲಿಕಾಪ್ಟರನ್ನು ಮುಂಬ್ಯೆ ಮೇಲ್ಮಟ್ಟದ ಪ್ರದೇಶದಿಂದ ಮುಂಬೈ ನೆಲದ ಭಾಗಕ್ಕೆ ಕೇವಲ ಸರ್ಕಾರಿ ಕೆಲಸಗಳಿಗೆ ಮಾತ್ರ ಬಳಸಲಾಗುತ್ತಿತ್ತು. ಸ್ಥಳೀಯ ಜನರಿಂದ ಓಡಾಟಕ್ಕೆ ಬಹಳ ಬೇಡಿಕೆ ಕೂಡ ಇತ್ತು. ಸಾರ್ವಜನಿಕ ಸ್ಥಳಗಳಾದ ಶಿರಡಿ, ವೈಷ್ಣೋದೇವಿ ಮುಂತಾದ ಜಾಗಗಳಿಗೆ, ಸರಿಯಾದ ವಿಮಾನ ನಿಲ್ದಾಣ ಇಲ್ಲದಿರುವ ಜಾಗಗಳಲ್ಲಿ ಹೆಲಿಕಾಪ್ಟರ್ ಬಳಕೆಯನ್ನು ಸಾರ್ವಜನಿಕರು ಬಳಸಲು ಅನುವು ಮಾಡಿಕೊಟ್ಟರೆ ಬಹಳ ಅನುಕೂಲವಾಗುವಂತೆ ಇತ್ತು. ಹಾಗಾಗಿ ಪವನ್ಹನ್ಸಸಂಸ್ಥೆಯಿಂದ ಹೆಲಿಕಾಪ್ಟರ್ ಸೇವೆಯನ್ನು ಸಾರ್ವಜನಿಕರಿಗೆ ತೆರೆಯಲಾಯಿತು. ಕರ್ನಾಟಕದ ಕ್ಯಾಪ್ಟನ್ ಗೋಪೀನಾಥ್ರವರು ಆಗ ಡೆಕ್ಕನ್ ವಿಮಾನಯಾನ ಸಂಸ್ಥೆಯನ್ನು ನಡೆಸುತ್ತಿದ್ದರು. ಇನ್ನೊಂದು ವಿಷಯ ನಮ್ಮ ಗಮನಕ್ಕೆ ಬಂದಿದ್ದೇನೆಂದರೆ 124 ಸಣ್ಣ ವಿಮಾನ ನಿಲ್ದಾಣಗಳನ್ನು ಬಹಳ ಹಿಂದೆ ಸ್ಥಾಪಿಸಲಾಗಿತ್ತು. ಆದರೆ ಅವುಗಳನ್ನು ಉಪಯೋಗಿಸುತ್ತಿರಲಿಲ್ಲ. ಇವುಗಳನ್ನು ಉಪಯೋಗಿಸಲು ತೊಡಗಿದರೆ ಇದರಿಂದಾಗಿ ಆರ್ಥಿಕವಾಗಿ ಆದಾಯವೂ ಉಂಟಾಗುವುದರೊಂದಿಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ಕೊಟ್ಟ ಹಾಗೆ ಆಗುತ್ತದೆಂದು ಪರಿಗಣಿಸಿ ಎ.ಟಿ.ಆರ್. ಎಂಬ ಸಣ್ಣ ವಿಮಾನಗಳ ಸೇವೆಯನ್ನು ಬಲಪಡಿಸಲಾಯಿತು. ಉದಾಹರಣೆಗೆ ಸೂರತ್ನ ವಜ್ರ ವ್ಯಾಪಾರವನ್ನು ನಡೆಸಲು ಈ ವ್ಯವಸ್ಥೆ ಅನುಕೂಲಕರವಾಗಿದ್ದಿತು. ಹಿರಿಯ ಸಚಿವರುಗಳಾದ ಶಾ ನವಾಜ್ ಹುಸೇನ್ ಮತ್ತು ನಂತರದ ಪ್ರತಾಪ್ ಸಿಂಗ್ ರೂಢಿಯವರು ಕೂಡ ಈ ಯೋಜನೆಗಳಿಗೆ ತಮ್ಮ ಮೆಚ್ಚುಗೆ ಸೂಚಿಸಿದರು. ಆ ಸಮಯದಲ್ಲಿ ಹೊಸ ಹಸಿರು ಮೈದಾನದ (ಎ್ಠಜಜಟಿ-ಜ್ಝಿಜಟಜ) ವಿಮಾನ ನಿಲ್ದಾಣಗಳನ್ನು ಉತ್ತೇಜಿಸಲು ಸಾರ್ವಜನಿಕ ಹಾಗೂ ಸಾರ್ವಜನಿಕರ ಸಹಭಾಗಿತ್ವದ ಯೋಜನೆಗಳನ್ನು ತಯಾರು ಪಡಿಸಲಾಗಿತ್ತು. ಅದರಂತೆ ನಂತರ ಹೈದರಾಬಾದ್, ಬೆಂಗಳೂರು, ದೆಹಲಿ ವಿಮಾನ ನಿಲ್ದಾಣಗಳು ಖಾಸಗಿ ಸಹಭಾಗಿತ್ವದಿಂದ ಪ್ರಾರಂಭವಾಗಿವೆ.
ಮಾನ್ಯ ಮಂತ್ರಿಗಳು ನಂತರದ ದಿನಗಳಲ್ಲಿ ಹಣಕಾಸು ಇಲಾಖೆಗಳಲ್ಲಿ ರಾಜ್ಯ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು. ಅವರ ಕಾರ್ಯ ನಿರ್ವಹಣೆಯ ಮಧ್ಯದಲ್ಲಿಯೇ ಒಂದು ಚುನಾವಣೆಯನ್ನೂ ಸಹ ಎದುರಿಸಿದರು ಮತ್ತು ಗೆದ್ದರು. ಮಾನ್ಯ ಮಂತ್ರಿಗಳು ಯಾರ ಬಳಿಯೂ ಏನನ್ನೂ ಅಪೇಕ್ಷಿಸದೆ ನಿಸ್ಪ್ರುಹತೆಯಿಂದ ಕೆಲಸ ಮಾಡುತ್ತಿದ್ದರು. ಒಂದು ದಿನ ನಾನು ಅವರನ್ನು ಕೇಳಿದೆ, ನೀವು ರಾಜಕಾರಣಿಗಳಾಗಿದ್ದರೂ ಸಹ ಯಾರಿಂದಲೂ ದುಡ್ಡನ್ನು ಪಡೆಯದೆ ಕೆಲಸ ಮಾಡಿಕೊಡುತ್ತೀರಿ. ನೀವು ಹಣವಿಲ್ಲದೆ ಚುನಾವಣೆಯನ್ನು ಹೇಗೆ ಗೆಲ್ಲಲ್ಲು ಸಾಧ್ಯ ಎಂದು. ಅವರು ಈ ರೀತಿ ಉತ್ತರವಿತ್ತರು- 'ಬೇರೆಯವರಿಂದ ಕೆಲಸ ಮಾಡಿಕೊಡಲು ಹಣವನ್ನು ತೆಗೆದುಕೊಂಡು ನಾನ್ಯಾಕೆ ರಕ್ತದೊತ್ತಡ, ಮಧುಮೇಹ ಮುಂತಾದ ಖಾಯಿಲೆಗಳಿಗೆ ಆಹ್ವಾನ ನೀಡಲಿ? ನಾನು ಹಾಕುವ ಬಂಡವಾಳವೆಲ್ಲವೂ ಮನುಷ್ಯರ ಸದ್ಭಾವನೆಗಳ ಮೇಲೆ. ಜನರ ಸದ್ಭಾವನೆ ನನ್ನ ಮೇಲಿದ್ದರೆ ಸಾಕು, ಯಾವ ಚುನಾವಣೆಯನ್ನು ಬೇಕಾದರೂ ಗೆಲ್ಲಬಲ್ಲೆ. ಚುನಾವಣೆ ಬಂದಾಗ ಈ ಜನ ಸ್ವಇಚ್ಛೆಯಿಂದ ನನ್ನ ಪ್ರಚಾರದ ಕೆಲಸವನ್ನು ಮಾಡುತ್ತಾರೆ, ಮತದಾರರನ್ನು ತರುತ್ತಾರೆ. ಹೀಗಿರುವಾಗ ನನಗೆ ಹಣ ಏಕೆ ಬೇಕು ಎಂದು. ಈಗಲೂ ಮಾಜಿ ಮಂತ್ರಿಗಳಾದ ಶ್ರೀಪಾದ ನಾಯಕ್ರವರು ಲೊಕಸಭಾ ಸದಸ್ಯರಾಗಿ ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರದ್ದೇ ಆದ ಒಂದು ಮರದ ಮಿಲ್ಲನ್ನು ಹೊಂದಿದ್ದಾರೆ. ದೈವಭಕ್ತರಾಗಿ, ಸರಳ, ಶಿಸ್ತುಬದ್ಧಿನ ಜೀವನ ನಡೆಸುತ್ತಿದ್ದಾರೆ ಹಾಗೂ ರಾಜಕೀಯ ಜೀವನದಲ್ಲಿ ಸದಾ ಗೆಲ್ಲುತ್ತಾರೆ.
(ಮುಂದುವರೆಯುವುದು)
-ಶಾಲಿನಿ ರಜನೀಶ್, ಐಎಎಸ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

