ಒಂದು ದಶಕಕ್ಕೂ ಹೆಚ್ಚಿನ ಅವಧಿಗೆ ಭಾರತೀಯ ಜನತಾ ಪಾರ್ಟಿಯ ಕರ್ನಾಟಕ ಪ್ರದೇಶ ಶಾಖೆ ತನ್ನ ಸರ್ವಸ್ವವನ್ನೂ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರ ನಾಯಕತ್ವಕ್ಕೆ ಒತ್ತೆ ಇಟ್ಟು ಬಿಟ್ಟಿತ್ತು. ಈ ಕಾಲಘಟ್ಟದಲ್ಲಿ ಕರ್ನಾಟಕ ಬಿಜೆಪಿಯಲ್ಲಿ ಏನಾಗಬೇಕಾದರೂ ಅದಕ್ಕೆ ಯಡಿಯೂರಪ್ಪ ಬೇಕಾಗಿತ್ತು. ಅವರ ಅನುಮತಿ ಇಲ್ಲದೆ ಅಲ್ಲಿ ಒಂದು ಹುಲ್ಲುಕಡ್ಡಿಯೂ ಅಲ್ಲಾಡುವಂತಿರಲಿಲ್ಲ.
ಅದಕ್ಕೆ ಪ್ರತಿಯಾಗಿ, ಯಡಿಯೂರಪ್ಪ ಅವರು ತಮ್ಮ ಚೈತನ್ಯಪೂರ್ಣ ನಾಯಕತ್ವ ಹಾಗೂ ದೈತ್ಯ ದುಡಿಮೆಯ ಶಕ್ತಿಯನ್ನು ಪಕ್ಷಕ್ಕೇ ಮೀಸಲಾಗಿಟ್ಟರು. 2008 ರ ವಿಧಾನಸಭೆ ಚುನಾವಣೆ ಸಮಯದಲ್ಲಂತೂ ಅಕ್ಷರಶಃ ಯಡಿಯೂರಪ್ಪ ಎರಡು ರಾತ್ರಿಗಳನ್ನು ಒಂದೇ ಹಾಸಿಗೆಯಲ್ಲಿ ನಿದ್ದೆ ಮಾಡಿ ಕಳೆಯಲಿಲ್ಲ. ನಿರಂತರ ಪ್ರವಾಸ.
ರಾಜ್ಯ ರಾಜಕೀಯದಲ್ಲಿ ಇತರ ಬದಲಾವಣೆಗಳ ಜತೆಯಲ್ಲಿ ಯಡಿಯೂರಪ್ಪ ಅವರ ನಾಯಕತ್ವ, ಮುನ್ನುಗ್ಗಿ ಹೋರಾಡುವ ಸ್ವಭಾವವೂ ಸೇರಿಕೊಂಡು ಬಿಜೆಪಿಯನ್ನು ವಿಧಾನಸಭೆಯ ಚುನಾವಣೆಯಲ್ಲಿ ಗಳಿಸಿದ ಸ್ಥಾನಗಳ ಲೆಕ್ಕದಲ್ಲಿ ನಂಬರ್ ಒನ್ ಸ್ಥಾನಕ್ಕೆ ತರಿಸಿದ್ದು ನಿಜ. ಆದರೆ ಬಿಜೆಪಿ ನಾಯಕರು ಇದೇ ಪರಿಸ್ಥಿತಿ ಶಾಶ್ವತವಾಗಿ ಉಳಿಯಬಹುದೆಂದು ತಿಳಿದು, ರಾಜ್ಯದ ಆಡಳಿತ, ರಾಜಕೀಯಗಳೆರಡೂ ಯಡಿಯೂರಪ್ಪ ಅವರು ತೋರು ಬೆರಳಿನಲ್ಲಿ ತೋರಿಸಿದಂತೆಯೇ, ಅವರ ಸುತ್ತಲೂ ಗಿರಕಿ ಹೊಡೆಯುವಂತಾಗಿದ್ದನ್ನು ಕಂಡರು, ಪಕ್ಷದ ಸ್ಥಳೀಯ ನಾಯಕರೂ ಅದನ್ನು ಗಮನಿಸಲಿಲ್ಲ, ಕೇಂದ್ರದ ನಾಯಕರಂತೂ ಆ ಕಾಲದಲ್ಲಿ ಯಡಿಯೂರಪ್ಪ ಅವರನ್ನು ಬಿಟ್ಟರೆ ರಾಜ್ಯದಲ್ಲಿ ಬೇರೆ ಯಾವ ಬಿಜೆಪಿ ನಾಯಕರ ಮುಖವನ್ನು ನೋಡುತ್ತಿರಲಿಲ್ಲ, ಪ್ರಾಯಶಃ ಈ ಮಾತಿಗೆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಎಚ್.ಎನ್. ಅನಂತಕುಮಾರ್ ಅವರೊಂದು ಅಪವಾದವಾಗಿರಲೂ ಬಹುದು.
ಆ ಅವಧಿಯಲ್ಲೇ, ಯಡಿಯೂರಪ್ಪ ಅವರ ಪ್ರಕಾರವೇ ಮೂರು ಬಾರಿ ಅವರ ಸರ್ಕಾರದ ಪತನಕ್ಕೆ ಪ್ರಯತ್ನ ನಡೆಯಿತು. ಆಂತರಿಕ ವಿರೋಧಿಗಳ ಆಟ ನಡೆಯಲಿಲ್ಲ. ಯಡಿಯೂರಪ್ಪ ಅವರ ಹಾಗೂ ಅವರ ಕೆಲವು ಆತ್ಮೀಯ ಸಂಗಾತಿಗಳ, ಕುಟುಂಬದ ಸದಸ್ಯರು ವೈಯಕ್ತಿಕ ವ್ಯವಹಾರಗಳು ಬೆಳಕಿಗೆ ಬಂದಿದ್ದು. ಅದು ಪಕ್ಷದಲ್ಲೇ ಇದ್ದ ಕಾವಲುಗಾರ ಕಡೆಯಿಂದ ಬೆಳಕಿಗೆ ಬರಲಿಲ್ಲ. ಕೆಲವು ಸಾರ್ವಜನಿಕ ಹಿತರಕ್ಷಣೆಗೆ ಬದ್ಧವಾಗಿ ಸಂಘಟನೆಗಳು, ಶಿವಮೊಗ್ಗದ ಇಬ್ಬರು ವಕೀಲರು ಲೋಕಾಯುಕ್ತರ ಮುಂದೆ, ಅಕ್ರಮ ಗಣಿಗಾರಿಕೆ ಕುರಿತಂತೆ, 'ಜಿ-ಕ್ಯಾಟಗರಿ' ನಿವೇಶನಗಳ ಹಂಚಿಕೆಯ ವೈಖರಿಯನ್ನು ಕುರಿತಂತೆ, ಸರ್ಕಾರದ ಹಣವನ್ನು ಸ್ವಂತ ಹಣದ ರೂಪದಲ್ಲಿ ಬಳಕೆ ಮಾಡಿದ ಪ್ರಕರಣಗಳ ವಿವರಗಳನ್ನು ಖಾಸಗಿ ದೂರುಗಳ ಮೂಲಕ ಪ್ರಕಟಿಸಿದಾಗಲೇ ಪಕ್ಷದ ಶಾಸಕರಿಗೆ ನಿಜವಾದ ಪರಿಸ್ಥಿತಿಯ ಅರಿವಾಗಿದ್ದು. ಭೂ ಆಕ್ರಮಣದ ಪ್ರಕರಣಗಳೂ ಬೆಳಕಿಗೆ ಬಂದವು. ಈ ಅವಧಿಯಲ್ಲಿ ಬಿಜೆಪಿ ವಿರೋಧಿ ಶಕ್ತಿಗಳು ಬಹುಮಟ್ಟಿಗೆ ತಮ್ಮ ವಿರೋಧವನ್ನು ಕೆಳಸ್ತರದಲ್ಲೇ ಮಂಡಿಸಿದ್ದರು. ಹಿಂದುತ್ವದ ಪ್ರಸ್ತಾಪ ಮೇಲ್ದರ್ಜೆಯ ವರ್ಗಗಳಿಗೆ ಒದಗಿಸಿದ ಅನುಕೂಲಗಳತ್ತಲೇ ಗಮನಹರಿಸಿ, ಬ್ರಹ್ಮಾಂಡ ಭ್ರಷ್ಟಾಚಾರದ ವಿಷಯದಲ್ಲಿ ಜಾಣ ಕುರುಡನ್ನು ಪ್ರದರ್ಶಿಸಿದವು. ಆ ಶಕ್ತಿಗಳಲ್ಲಿನ ಕೆಲವು ವ್ಯಕ್ತಿಗಳು ಯಡಿಯೂರಪ್ಪ ಅವರ ಕೃಪಾಕಟಾಕ್ಷಕ್ಕೆ ಪಾತ್ರವಾಗಿದ್ದೂ ನಿಜ.
ಮಂಕಾಗಿದ್ದ ಕಾಂಗ್ರೆಸ್: ಕಾಂಗ್ರೆಸ್ ತನ್ನ ಆಳ್ವಿಕೆಯಲ್ಲಿ ಅದೇ ರೀತಿಯ ಅವ್ಯವಸ್ಥೆ, ಅನಾಚಾರಗಳನ್ನು ಅನುಸರಿಸಿದ್ದರಿಂದ, ಆ ಪಕ್ಷದ ನಾಯಕರು ಬಿಜೆಪಿಯ ಖಂಡನೆ ಮಾಡಬೇಕಾದಾಗ ಮಂಕಾದರು. ಅಲ್ಲೂ ಬಿಜೆಪಿ ಸರ್ಕಾರದ ಹವಿಸ್ಸನ್ನು ಪಡೆದವರೂ ಇದ್ದಾರೆ. ಆದರೆ ಇವೆಲ್ಲವನ್ನು ಮೆಟ್ಟಿನಿಂತ ಕೆಲವು ವ್ಯಕ್ತಿಗಳ ಕಾನೂನು ಬದ್ಧ ಹೋರಾಟ ಯಡಿಯೂರಪ್ಪ ಅವರ ಧವಳ ಕೀರ್ತಿಯ ಪತಾಕೆ ಕತ್ತರಿಸಿ ಬೀಳುವಂತೆ ಮಾಡಿತ್ತು. ಆದರೂ ರಾಜ್ಯದ ಪ್ರಬಲ ರಾಜಕೀಯ ಸಮಾಜ ಎನಿಸಿಕೊಂಡ ವೀರಶೈವ ಸಮಾಜದ ಬೆಂಬಲದಿಂದ ಬಿಜೆಪಿ ಸರ್ಕಾರದ ನಾಯಕರಲ್ಲಿ ತಾವೇನು ಮಾಡಿದರೂ ಅದನ್ನು ಜೀರ್ಣಿಸಿಕೊಳ್ಳುವ ಭರವಸೆ ಮೂಡಿತ್ತು.
ಇದರಲ್ಲಿ ಯಾವುದೂ ಹೊಸದಲ್ಲ, ಆದರೆ ಯಡಿಯೂರಪ್ಪ ಬಿಜೆಪಿಯ ಸಂಬಂಧವನ್ನೇ ಕಡಿದುಕೊಂಡು, ಅದನ್ನು ಮಣ್ಣುಗೂಡಿಸುವ ದೀಕ್ಷೆ ತೊಟ್ಟು, ಹೊಸದೊಂದು ಪಕ್ಷವನ್ನು ರಚಿಸಿ (ಹಳೆಯ ಪಕ್ಷವನ್ನು ವಹಿಸಿಕೊಂಡು) ಅವರು ನಂಬಿರುವ ಸಮುದಾಯಗಳ ಬೆಂಬಲವನ್ನು ಗಟ್ಟಿ ಮಾಡಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದಾಗ ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವ ಎನ್ನುವುದೇ ಇರಲಿಲ್ಲ. ಯಡಿಯೂರಪ್ಪ ಅವರ ಆಶೀರ್ವಾದದಿಂದಲೇ ಸದಾನಂದಗೌಡ, ಜಗದೀಶ ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದು. ಯಡಿಯೂರಪ್ಪ ಅವರು ತಮ್ಮ ಎಂದಿನ ಶೈಲಿಯಲ್ಲಿ ರಾಜಕೀಯ ಡಂಗುರವನ್ನು ಬಾರಿಸುತ್ತ ಹೊರಟಾಗ, ಬಿಜೆಪಿಯಲ್ಲಿ ಅವರನ್ನು ಎದುರಿಸುವ ಸಮರ್ಥ ನಾಯಕರೇ ಇರಲಿಲ್ಲ, ಈ ಹಿನ್ನೆಲೆಯಲ್ಲಿ ನಿರ್ಣಾಯಕವಾದ ವಿಧಾನ ಸಭೆ ಚುನಾವಣೆಯನ್ನು ಎದುರಿಸಬೇಕಾಗಿ ಬಂದಿದೆ. ಬಿಜೆಪಿ ಅಕ್ಷರಶಃ ಕಂಗಾಲಾಗಿದೆ. ಪಕ್ಷದ ರಾಜ್ಯ ಸಮಿತಿಯ ಅಧ್ಯಕ್ಷರಾಗಿ ವರಿಷ್ಠರು ಹುಬ್ಬಳ್ಳಿ-ಧಾರವಾಡದ ಸ್ಥಳೀಯ ನಾಯಕ, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ (ರಾಷ್ಟ್ರ) ಧ್ವಜಾರೋಹಣವೇ ಹೋರಾಟದ ಅಂತಿಮ ಹಂತವೆಂದು ಭಾವಿಸಿದ್ದರೆನ್ನುವ ಅಭಿಪ್ರಾಯವನ್ನು ಮೂಡಿಸುವ ಧಾರವಾಡದ ಸಂಸದ ಪ್ರಹ್ಲಾದ ಜೋಷಿ ಆರಿಸಿದಾಗಲೇ ಪಕ್ಷದ ರಾಜಕೀಯ ಪರಿಸ್ಥಿತಿಯ ಅರಿವು ರಾಜಕೀಯದ ಅ ಆ ಇ ಈ ಗೊತ್ತಿರುವವರಿಗೆಲ್ಲರಿಗೂ ಮೂಡಿರಲೇ ಬೇಕು.
ಬಿಜೆಪಿ: ಕುಗ್ಗಿದ ಶಕ್ತಿ: ಈಗ ರಾಜ್ಯದಲ್ಲಿ ಬಿಜೆಪಿಯ ಚುನಾವಣೆ ಶಕ್ತಿ ಕಡಿಮೆಯಾಗಿದೆ. ಯಡಿಯೂರಪ್ಪ ಬೆಂಬಲಿಗರು ತಮ್ಮ ಜಾತಿಯ ಸಂಕೇತಗಳ ಸಮೇತ ದೂರವಾಗಿದ್ದಾರೆ. ಬಳ್ಳಾರಿ - ಸುತ್ತಮುತ್ತಲ ಸೀಮೆಯಲ್ಲಿ ಕಾಂಗ್ರೆಸ್ಸನ್ನು ಹೇಳಹೆಸರಿಲ್ಲದಂತೆ ಮಾಡಿದ್ದ ಗಣಿಧಣಿಗಳ ಪಡೆ ಈಗ ಇಲ್ಲ. ಪಕ್ಷದಲ್ಲೇ ಆಂತರಿಕವಾಗಿ ವಿಶ್ವಾಸ ಕಡಿಮೆಯಾಗಿದೆ. ಅದೇ ಈಗಿನ ಚುನಾವಣೆ ಪ್ರಚಾರ ಸಮರದ ಮುನ್ನಾದಿನದ ದೊಡ್ಡ ಸುದ್ದಿ ಹಾಗೂ ನಿಜವಾದ ಚಿತ್ರ.
ಕಾಂಗ್ರೆಸ್; ಸ್ವರ್ಗಕ್ಕೆ ಮೂರೇಗೇಣು: ರಾಜ್ಯದಲ್ಲಿ ಪ್ರಬಲ ರಾಜಕೀಯ ಪಕ್ಷವಾಗಿದ್ದರೂ, ನಾಲ್ಕು ವರ್ಷಗಳ ಕಾಲ ಒಂದು ರೀತಿಯ ರಾಜಕೀಯ ಸನ್ಯಾಸ ಪಡೆದಂತಿದ್ದ ಕಾಂಗ್ರೆಸ್ಸಿಗೆ ಜೀವ ಬಂದಿದ್ದೇ ಯಡಿಯೂರಪ್ಪ ಬಂಡಾಯದಿಂದ. ನಗರಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಗೆಲವು ಪಕ್ಷದಲ್ಲಿ ಇನ್ನಷ್ಟು ಉತ್ಸಾಹವನ್ನು ಮೂಡಿಸಿರುವುದೂ ನಿಜ.
ಕಾಂಗ್ರೆಸ್ಸಿನಲ್ಲಿ ಈಗ ಅನೇಕರು ಪಕ್ಷ ಅಧಿಕಾರಕ್ಕೆ ಬಂದ ಅನಂತರ ಯಾವ ರೀತಿ ಅದನ್ನು ಹಂಚಿಕೊಳ್ಳಬೇಕೆನ್ನುವ ಯೋಚನೆಯಲ್ಲಿ ಮುಳುಗಿದ್ದಾರೆ. ಆದರೂ ಅದ್ಯಾಕೋ ಪಕ್ಷದ ನಾಯಕರಲ್ಲೇ ವಿಶ್ವಾಸ ಕಡಿಮೆಯಾಗಿರುವಂತಿದೆ. ಈಗಾಗಲೇ ಆರಂಭವಾಗಿರುವ ಜಾತ್ರೆ, ಪ್ರದೇಶ, ವ್ಯಕ್ತಿ ಆಧಾರಿತ ಜಗಳಗಳು ರಹಸ್ಯವಾಗಿ ಉಳಿದಿಲ್ಲ. ಎಸ್.ಎಮ್. ಕೃಷ್ಣ ಅವರು ಮರ್ಯಾದೆಯಿಂದ ಮೂಲೆ ಗುಂಪಾಗಿರುವಂತಿದೆ. ಆದರೂ ಅವರೂ ಚುನಾವಣೆಯಲ್ಲಿ ಸ್ಪರ್ಧಿಸುವ ಮಾತೂ ಇದೆ. ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷೆ ಹಾಗೂ ಸ್ಪರ್ಧಿಯಾಗಿರುವ ಸಿದ್ದರಾಮಯ್ಯ ಮುಚ್ಚುಮರೆ ಇಲ್ಲದೇ ರಾಜಕೀಯ ಮಾಡುತ್ತಿದ್ದಾರೆ, ಅವರ ಸಂಗಾತಿ, ಒಂದಾನೊಂದು ಕಾಲದಲ್ಲಿ ಮೊದಲು ಗುಂಡೂರಾಯರು, ಅನಂತರ ದೇವೇಗೌಡರ ಶಿಬಿರದಲ್ಲಿದ್ದ ಸಿ.ಎಂ. ಇಬ್ರಾಹಿಂ, ಕೇಂದ್ರದಲ್ಲಿ ನಾಗರಿಕ ವಿಮಾನಯಾನ ಮಂತ್ರಿಯೂ ಆಗಿದ್ದರು. ಅದೇನೂ ಸಾಮಾನ್ಯವಾದ ಸ್ಥಾನವಲ್ಲ, ಈಗ ಅವರಿಗೆ ಪ್ರದೇಶ ಕಾಂಗ್ರೆಸ್ಸಿನಲ್ಲಿ ಯಾವುದೇ ಪ್ರಾತಿನಿಧಿಕ ಸ್ಥಾನವೂ ಸಿಗದೇ ಇದ್ದಾಗಲೂ, ಚುನಾವಣೆ ತಂತ್ರ ರೂಪಿಸುವ ಸಮಿತಿಯ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಅಂತಹ ಸಮಿತಿಯ ಹೆಸರನ್ನು ಇದುವರೆಗೆ ಯಾವ ರಾಜ್ಯದಲ್ಲೂ, ಯಾವ ಪಕ್ಷದಲ್ಲೂ ಯಾರೂ ಕೇಳಿರಲಿಲ್ಲ, ಇದು ಸಿದ್ದರಾಮಯ್ಯ ಅವರ ಕಾಣಿಕೆ.
ಕಾಂಗ್ರೆಸ್ ವಿಜಯದಲ್ಲಿ ನಂಬಿಕೆ ಇದ್ದರೆ, ಪಕ್ಷದ ಧುರೀಣರು ಪಕ್ಷೇತರರಿಗೆ ಅಗ್ರ ತಾಂಬೂಲ ಕೊಟ್ಟಿದ್ದೇಕೆ? ಅದಕ್ಕೆ ಪಕ್ಷದ ನಾಯಕರು ಕಾರ್ಯಕರ್ತರಿಗೆ ಏನು ವಿವರಣೆ ಕೊಡುತ್ತಾರೋ ಗೊತ್ತಿಲ್ಲ.
ಯಡಿಯೂರಪ್ಪ - ಕಾಂಗ್ರೆಸ್: ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷದ ಏಕೈಕ ಗುರಿ, ಈ ಚುನಾವಣೆಯಲ್ಲಿ ಬಿಜೆಪಿಯನ್ನು ಮಣ್ಣು ಮುಕ್ಕುವಂತೆ ಮಾಡುವುದು, ಕೆಜೆಪಿ ನಾಯಕರು ಈಗ ಕಾಂಗ್ರೆಸ್ಸನ್ನೂ ಮರೆತಿದ್ದಾರೆ, ಜಾತ್ಯತೀತ ಜನತಾದಳ ತಂಟೆಗೂ ಹೋಗುತ್ತಿಲ್ಲ.
ಯಡಿಯೂರಪ್ಪ ಅವರ ಪಾರ್ಟಿಯಿಂದ, ಬಿಜೆಪಿಯನ್ನು ಸೋಲಿಸುವುದು ಕಷ್ಟ ಎನ್ನುವುದು ನಿಜ. ಬಿಜೆಪಿಯನ್ನು ಸೋಲಿಸುವುದರಲ್ಲಿ ದೊಡ್ಡ ಪಾತ್ರವನ್ನು ವಹಿಸಬೇಕಾಗಿರುವುದು ಕಾಂಗ್ರೆಸ್ಸೇ. ಕೆಜೆಪಿ ಕಾಂಗ್ರೆಸ್ಸಿಗೆ ನೇರವಾಗಿ ನೆರವು ನೀಡದೇ ಹೋದರೂ ಪರೋಕ್ಷವಾಗಿ ಬಿಜೆಪಿ ಓಟುಗಳ ವಿಭಜನೆಯ ಮೂಲಕ, ಅಂತಹ ಅಭ್ಯರ್ಥಿಗಳನ್ನು ಆರಿಸುವುದರ ಮೂಲಕ ನೀಡಬಹುದು. ಈಗಲೂ ದಕ್ಷಿಣ ಕರ್ನಾಟಕ, ಮಲೆನಾಡು, ಕರಾವಳಿ ಸೀಮೆಯಲ್ಲಿ ಕಾಂಗ್ರೆಸ್ - ಬಿಜೆಪಿಗಳೇ ಪರಸ್ಪರ ಎದುರಾಳಿಗಳು. ಅಲ್ಲಿ ಇತರ ಪಕ್ಷಗಳ ಅಭ್ಯರ್ಥಿಗಳ ಪಾತ್ರ ಎದುರಾಳಿಗಳ ಓಟಿನ ಬುಟ್ಟಿಗಳನ್ನು ಕೊರೆಯುವುದಷ್ಟೇ. ಜಾತ್ಯತೀತ ಜನತಾದಳದ ಅಗ್ರಗಣ್ಯ ನಾಯಕ ದೇವೇಗೌಡರು ತಮ್ಮ ದೀರ್ಘ ಅನುಭವದಿದ ಬೇರು ಮಟ್ಟದ ಪರಿಸ್ಥಿತಿಯನ್ನು ಗಮನಿಸಿ ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.
ರಾಜ್ಯದ ಯಾವ ಪ್ರದೇಶದಲ್ಲಿ ಯಾವ ವಿಷಯವನ್ನು ಪ್ರಧಾನವಾಗಿ ಪ್ರಸ್ತಾಪಿಸ ಬೇಕೆನ್ನುವುದನ್ನೂ ನಿರ್ಧರಿಸಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಕಾವೇರಿಯೇ ಅವರ ಪಾಲಿಗೆ ಮತಗಳನ್ನು ಕೂಡಿಸುವ ದೇವತೆ.
ಕೆಜೆಪಿಗಳ ಜಾತ್ಯತೀತ ಜನತಾದಳ ಜತೆ ಕಾಂಗ್ರೆಸ್ ಬಿಜೆಪಿ, ಹೊಂದಾಣಿಕೆಯ ಸಂಭವ ತೀರ ಕಡಿಮೆ. ಆದರೆ ಈಗ ಶ್ರೀರಾಮುಲು ಜೆಡಿಎಸ್ನ ಬಾಂಧವ್ಯಕ್ಕೆ ಹಾತೊರೆಯುತ್ತಿರುವಂತಿದೆ. ಬಳ್ಳಾರಿ, ರಾಯಚೂರು, ಕೊಪ್ಪಳ, ಗದಗ್, ಹಾವೇರಿ, ಬಾಗಲಕೋಟೆಗಳನ್ನು ಶ್ರೀರಾಮುಲು ಅವರಿಗೆ ಬಿಟ್ಟು ಕೊಟ್ಟಿದೆ, ಇತರ ಕಡೆಗಳಲ್ಲಿ ಅವರು ದೇವೇಗೌಡರಿಗೆ ನೆರವು ನೀಡುವ ಒಡಂಬಡಿಕೆ ಕಾಗದದ ಮೇಲೆ ಒಳ್ಳೆಯ ಯೋಜನೆ, ಆದರೆ ಶ್ರೀರಾಮುಲು ಅವರನ್ನು ರೆಡ್ಡಿ ಗಣಿಧಣಿಗಳಿಂದ ಪ್ರತ್ಯೇಕಿಸಿ ನೋಡುವಂತಿಲ್ಲ. ಶ್ರೀರಾಮುಲು ಅವರ ಬಿಎಸ್ಆರ್ ಕಾಂಗ್ರೆಸ್ ಜೆಡಿಎಸ್ ನಡುವೆ ಸಂಬಂಧವಿದೆ ಎನ್ನುವುದಕ್ಕೆ ಪ್ರಚಾರ ಸಿಕ್ಕಿದರೆ ಸಾಕು, ಜೆಡಿಎಸ್ಗೂ ಗಣಿಗಾರಿಕೆಯ ಕಳ್ಳ ಹಣದ ಸಂಬಂಧವನ್ನು ಕಲ್ಪಿಸುವುದು ಕಷ್ಟವೇನೂ ಅಲ್ಲ. ಸಾಮಾನ್ಯವಾಗಿ ಚುನಾವಣೆಯಲ್ಲಿ ಸಮಾನ ಮನಸ್ಕ ಅಥವಾ ಅನುಕೂಲ ಸಿಂಧು - ಅವಕಾಶವಾದಿ ಒಪ್ಪಂದಗಳು ರೂಪಗೊಳ್ಳುವುದು ಪಕ್ಷಗಳ ಅಭ್ಯರ್ಥಿಗಳ ಆಯ್ಕೆಗೆ ಮುಂಚೆ. ರಾಜ್ಯದಲ್ಲಿ ಇನ್ನೂ ಅಂತಹ ಪ್ರವೃತ್ತಿಯ ಸುಳಿವು ಸಿಕ್ಕಿಲ್ಲ. ಪ್ರಾಯಶಃ ಪಕ್ಷಗಳ ಅಭ್ಯರ್ಥಿಗಳ ಆಯ್ಕೆಯಾದ ಅನಂತರ ನಿಜವಾದ ರಾಜಕೀಯ ವ್ಯವಹಾರ ನಡೆದರೂ ನಡೆಯಬಹುದು, ಅದಕ್ಕೆ ಹೋಳಿ ಹಬ್ಬ ಕಳೆಯಬೇಕು.
ಕಿಡಿಗೇಡಿತನ: ವಿಧಾನಸಭೆ ಚುನಾವಣೆಯ ಪ್ರಚಾರ ಸಮರದಲ್ಲಿ, ಭ್ರಷ್ಟಾಚಾರದ ಪ್ರಕರಣಗಳಿಗೇ ಹೆಚ್ಚು ಪ್ರಾಮುಖ್ಯ ಸಿಗಬಹುದೆನ್ನುವ ನಿರೀಕ್ಷೆ ಹುಸಿಯಾಗುವ ಸಂಭವವೇ ಹೆಚ್ಚಾಗಿರುವಂತಿದೆ. ಕಾಂಗ್ರೆಸ್ ಕರ್ನಾಟಕದಲ್ಲಿನ ಭ್ರಷ್ಟಾಚಾರದ ವಿವರಗಳನ್ನು ಪ್ರಸ್ತಾಪಿಸಿದರೆ, ಬಿಜೆಪಿ ಕೇಂದ್ರ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಪ್ರಸ್ತಾಪಗಳನ್ನು ಹೇಳಬಹುದು. ಜಾತ್ಯತೀತ ಜನತಾದಳ, ಶ್ರೀರಾಮುಲು ಭ್ಕಷ್ಟಾಚಾರದ ಪ್ರಸ್ತಾಪದ ತಂಟೆಗೇ ಹೋಗಲಿಕ್ಕಿಲ್ಲ.
- ಸತ್ಯ
anisikeprabha@gmail.com