ಪಾಲಿಟಿಕ್ಸ್ ಬದಲು 'ಪಾನಿ'ಟಿಕ್ಸ್ ಮಾಡಿದರೆ ಪಾಟೀಲರಾಗುತ್ತೀರಿ!

ತಮ್ಮ ನಿರೀಕ್ಷೆಗಳಿಗೆ 'ನೀರೆರದ' ನಾಯಕತ್ವದ ಬೆನ್ನಿಗೆ ಜನ ನಿಲ್ಲುತ್ತಾರೆಂಬುದು ಮತ್ತೊಮ್ಮೆ...
Updated on: 

ತಮ್ಮ ನಿರೀಕ್ಷೆಗಳಿಗೆ 'ನೀರೆರದ' ನಾಯಕತ್ವದ ಬೆನ್ನಿಗೆ ಜನ ನಿಲ್ಲುತ್ತಾರೆಂಬುದು ಮತ್ತೊಮ್ಮೆ ಸಾಬೀತಾಗಿದೆ. ಪ್ರತೀ ಬಾರಿ ಯಾವುದೇ ಸರಕಾರ ಅಧಿಕಾರದ ಹೊಸ್ತಿಲಿಗೆ ಬಂದು ನಿಲ್ಲುವುದಿದ್ದರೆ ಅದು ಅಲ್ಲಿನ ಜನರ ನೀರಿನ ಬಗೆಗಿನ ನಿರೀಕ್ಷಾಪೂರ್ವಕ ಬೆಂಬಲದಿಂದ ಮಾತ್ರ ಎಂಬ ನಂಬಿಕೆ ಹುಸಿಯಾಗಿಲ್ಲ. ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬಹುಮತ ಬಂತು, ಯಾವ ಪಕ್ಷ ಮಣ್ಣು ಮುಕ್ಕಿತು ಎಂಬುದಕ್ಕಿಂತ ಪಕ್ಷ ರಾಜಕೀಯವನ್ನೂ ಮೀರಿ ವೈಯಕ್ತಿಕವಾಗಿ ಕೈಗೊಂಡ ಅಭಿವೃದ್ಧಿಕಾರ್ಯಗಳಿಂದಲೇ ಕೆಲವು ಸಜ್ಜನ ರಾಜಕಾರಣಿಗಳು ಗೆದ್ದು ರಾಜಕೀಯದ ಬಗ್ಗೆ ಇನ್ನೂ ಆಶಾಭಾವವನ್ನು ಉಳಿಸಿದ್ದಾರೆ.
ಗದಗದಿಂದ ಆರಿಸಿ ಬಂದ ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಕೆ. ಪಾಟೀಲ್, ಬಬಲೇಶ್ವರದ ಎಂ.ಬಿ. ಪಾಟೀಲ್, ಉಲ್ಲಾಳದ ಯು.ಟಿ. ಖಾದರ್, ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದ ಮುನಿರಾಜು, ಯಲಹಂಕ ಕ್ಷೇತ್ರದ ವಿಶ್ವನಾಥ್, ಬಸವನ ಬಾಗೇವಾಡಿಯ ಶಿವಾನಂದ ಪಾಟೀಲ್ ಇವರುಗಳ ಗೆಲುವಿನಲ್ಲಿ ಹಿರಿದಾದ ಪಾತ್ರ ವಹಿಸಿರುವುದು ಎಲ್ಲಕ್ಕಿಂತ ಹೆಚ್ಚಾಗಿ ನೀರು. ನೀರಿನ ಕೆಲಸ ಮಾಡಿದವರಿಗೆ ಪುಣ್ಯ ಲಭಿಸುತ್ತದೆ ಎಂಬುದು ಭಾರತೀಯ ನಂಬಿಕೆ. ಇಂಥ 'ಪುಣ್ಯ'ವೇ ರಾಜಕಾರಣಿಗಳಿಗೆ ಅಧಿಕಾರದ ಮೆಟ್ಟಿಲಾಗಿದ್ದರೆ ಅದು ಕೇವಲ ಕಾಕತಾಳೀಯವಲ್ಲ. ಜವಾಬ್ದಾರಿಯುತ ಜನಪ್ರತಿನಿಧಿಯೊಬ್ಬ ಅಧಿಕಾರದ ಹಂತದಲ್ಲಿ ತಾನು ಪ್ರತಿನಿಧಿಸುವ ಜನರ ಮೂಲಭೂತ ಅಗತ್ಯಗಳನ್ನು ಪೂರೈಸುವ ಕಳಕಳಿಯನ್ನು ಹೊಂದಿರದಿದ್ದರೆ ಅಂಥ ನಾಯಕತ್ವಕ್ಕೆ ಅರ್ಥವಿಲ್ಲ. ಅಂಥ ಅರ್ಥಪೂರ್ಣ ನಾಯಕತ್ವಕ್ಕೆ ವ್ಯಾಖ್ಯಾನ ಬರೆದವರ ಸಾಲಿನಲ್ಲಿ ಎಚ್ಕೆ ಮತ್ತಿತರು ನಿಲ್ಲುತ್ತಾರೆ.
ಸರಿ ಸುಮಾರು ಇಪ್ಪತ್ತು ವರ್ಷಗಳ ಅಧಿಕಾರದ ವಿವಿಧ ಮಜಲುಗಳನ್ನು ಅನುಭವಿಸಿ, ರಾಜ್ಯದ ರಾಜಕೀಯ ಅಧ್ಯಾಯದಲ್ಲಿ ತಮ್ಮದೇ ಪುಟಗಳನ್ನು ದಾಖಲಿಸಿರುವವರು ಎಚ್.ಕೆ. ಪಾಟೀಲ್. ಜವಳಿ ಖಾತೆ ರಾಜ್ಯ ಸಚಿವರಾಗಿ ಸಚಿವರಾದವರು ಅವರು. ನಂತರ ರಾಜಕೀಯವಾಗಿ ಹಲವು ಸ್ಥಾನಮಾನಗಳನ್ನು ಅನುಭವಿಸಿದವರು. ಅದರಲ್ಲೂ ಜಲಸಂಪನ್ಮೂಲ ಸಚಿವರಾಗಿ ನೀರಾವರಿ ಕ್ಷೇತ್ರದಲ್ಲಿ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಗಣನೀಯ. ಅವರ ಅವಧಿಯಲ್ಲಿಯೇ ಆಲಮಟ್ಟಿಯಲ್ಲಿ ನೀರು ಸಂಗ್ರಹ ಆರಂಭವಾದದ್ದು. ಮೋಡಬಿತ್ತನೆಯ ಅಪರೂಪದ ತಂತ್ರಜ್ಞಾನವನ್ನು ರಾಜ್ಯಕ್ಕೆ ತಂದು ಪರಿಚಯಿಸಿ ಸಾಹಸ ಮೆರೆದವರು ಎಚ್ಕೆ. ಅವರ ಅವಧಿಯಲ್ಲಿ ಮಹದಾಯಿ, ಕೃಷ್ಣಾ ಸೇರಿದಂತೆ ಪ್ರಮುಖ ನೀರಾವರಿ ವಿವಾದಗಳು ಮಹತ್ವದ ತಿರುವುಗಳನ್ನು ಪಡೆದಿದ್ದವು. ಒಟ್ಟಾರೆ ಅವರು ಜಲಸಂಪನ್ಮೂಲ ಸಚಿವರಾಗಿದ್ದ ಅವಧಿ ನಿಜಕ್ಕೂ ರಾಜ್ಯದ ನೀರಾವರಿಯ ಪಾಲಿಗೆ ಸುವರ್ಣಕಾಲ. ವಿಚಿತ್ರ ರಾಜಕೀಯ ಸನ್ನಿವೇಶದಲ್ಲಿ ಕಳೆದ ಬಾರಿ ಚುನಾವಣಾ ರಾಜಕಾರಣದಲ್ಲಿ ಅವರು ಸೋಲನ್ನನುಭವಿಸಿದ್ದು ಇದೀಗ ಇತಿಹಾಸ. ಆದರೆ ಈ ಸೋಲನ್ನು ಸಹ ಅವರು ಜನಸ್ನೇಹಿ ಕಾರ್ಯಕ್ಕೆ, ತಮ್ಮ ಸುತ್ತಲಿನ ಜನರ ಸಮಸ್ಯೆಗಳ ಬಗೆಗಿನ ಸ್ಪಂದನಕ್ಕೆ ಸಿಕ್ಕ ಅವಕಾಶವಾಗಿ ಪರಿವರ್ತಿಸಿಕೊಂಡು ಗದಗ ಸುತ್ತಮುತ್ತಲಿನ ಪ್ರದೇಶದಲ್ಲಿ ಕೆ.ಎಚ್. ಪಾಟೀಲ್ ಪ್ರತಿಷ್ಠಾನದ ಆಶ್ರಯದಲ್ಲಿ ಕೇವಲ ಒಂದು ರುಪಾಯಿಗೆ 'ಶುದ್ಧ ಕುಡಿಯುವ ನೀರಿನ' ಯೋಜನೆ ಅನುಷ್ಠಾನಗೊಳಿಸಿದ್ದು ಸಣ್ಣ ಸಾಧನೆಯೇನಲ್ಲ.
ನೀರಿನ ಅತ್ಯಂತ ಕರಾಳ ಸಮಸ್ಯೆಯನ್ನೆದುರಿಸುತ್ತಿದ್ದ 150 ಹಳ್ಳಿಗಳನ್ನು ಗುರುತಿಸಿದ್ದರು ಎಚ್ಕೆ. ಕೆರೆ ಆಧಾರಿತ ಈ ಗ್ರಾಮಗಳಿಗೆ ಕೇವಲ ಒಂದು ರು.ಗೆ ಹತ್ತು ಲೀಟರ್ ನೀರೊದಗಿಸುವ ತಮ್ಮ ಯೋಜನೆಯನ್ನು ಅನುಷ್ಠಾನಗೊಳಿಸುವ ಗುರಿಯನ್ನು ಹಾಕಿಕೊಂಡು ಅದರಲ್ಲಿ ಯಶಸ್ವಿಯಾಗಿದ್ದರು. ಕಳೆದ ಇಪ್ಪತ್ತು ತಿಂಗಳಿನಿಂದ ನಡೆಸಿಕೊಂಡು ಬಂದ ಶುದ್ಧ ಕುಡಿಯುವ ನೀರಿನ ಬಗ್ಗೆ ಅರಿವು ಮೂಡಿಸುವ ತಮ್ಮ ಆಂದೋಲನವನ್ನು ವ್ರತದಂತೆ ಪಾಲಿಸಿದ್ದರು ಅವರು. ಬೆಳಗೆದ್ದರೆ ಒಂದಲ್ಲಾ ಒಂದು ಗ್ರಾಮದಲ್ಲಿ ಸೋದರ ಡಿ.ಆರ್. ಪಾಟೀಲ್ ಜತೆ ಅವರು ಶುದ್ಧ ಕುಡಿಯುವ ನೀರಿನ ಅಗತ್ಯದ ಬಗೆಗೆ ಭಾಷಣ ಮಾಡುತ್ತಿದ್ದರು. ಇದು ಅವರ ಸಾಮಾಜಿಕ ಕಳಕಳಿಯ ಪ್ರತೀಕ. ನೀರಿನ ಕೆಲಸದ ಪುಣ್ಯ ನಿರೀಕ್ಷೆಯಂತೆಯೇ ಅವರ ಕೈಹಿಡಿದಿದೆ. ಎಚ್ಕೆಯವರಂಥ ಪ್ರಜ್ಞಾವಂತ ನಾಯಕನೊಬ್ಬ ನಾಡಿಗೆ ದೊರಕಿದ್ದಾನೆ. ಉನ್ನತ, ಆಯಕಟ್ಟಿನ ಅಧಿಕಾರ ಸ್ಥಾನದಲ್ಲಂತೂ ಎಚ್ಕೆಯವರನ್ನು ನೋಡುವುದರಲ್ಲಿ ಅನುಮಾನವಿಲ್ಲ. ಹಾಗೆಯೇ ರಾಜ್ಯದ ನೀರಾವರಿ ಕ್ಷೇತ್ರಕ್ಕೆ ಮತ್ತೆ ಶುಭದೆಸೆ ಆರಂಭವಾಗಿರುವುದರಲ್ಲೂ ಸಹ.
ಹಾಗೆಯೇ ಬಬಲೇಶ್ವರದಿಂದ ಆಯ್ಕೆಯಾಗಿರುವ ಎಂ.ಬಿ. ಪಾಟೀಲ್ ಸಹ. ವಿಜಾಪುರದಲ್ಲಿ ಕೆರೆತುಂಬುವ ಹೋರಾಟದಂಥ ಅತ್ಯಂತ ಮೌಲ್ಯಯುತ ಚಳವಳಿಯನ್ನು ಆರಂಭಿಸಿ, ಸುತ್ತಮುತ್ತಲಿನ ದ್ರಾಕ್ಷಿ ಬೆಳೆಗಾರರ ಬದುಕನ್ನು ಸಿಹಿಯಾಗಿಸಲು ಯತ್ನಿಸಿದವರು ಎಂ.ಬಿ. ಪಾಟೀಲ್. ಅವರ ಕನಸಿನ ಕೆರೆ ತುಂಬುವ ಯೋಜನೆಗೆ ಇದೀಗ ಅಧಿಕಾರದ ಕಸುವೂ ಸಿಕ್ಕಂತಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಅಂಥ ಯೋಜನೆಗಳು ಪೂರ್ಣಸಾಕಾರವಾಗಲೇಬೇಕೆಂಬುದು ಹಕ್ಕೊತ್ತಾಯ. ಶಿವಾನಂದ ಪಾಟೀಲ್ ಸಹ ನೀರಿನ ವಿಚಾರದಲ್ಲಿ ಅತ್ಯಂತ ಸುಶಿಕ್ಷಿತ ರಾಜಕಾರಣಿ.
ಇನ್ನು ದಾಸರಹಳ್ಳಿಯ ಮುನಿರಾಜು ಅಭಿವೃದ್ಧಿಯಿಂದಲೇ ಗುರುತಿಸಿಕೊಂಡವರು. ಬೆಂಗಳೂರು ಹೊರವಲಯದಲ್ಲಿನ ಕ್ಷೇತ್ರವೊಂದರ ಸರ್ವತೋಮುಖ ಅಭಿವೃದ್ಧಿಗೆ ಮಾದರಿ ತೋರಿಸಿಕೊಟ್ಟ ಮುನಿರಾಜು ನೀರು ಪೂರೈಕೆಯ ಯೋಜನೆಯಲ್ಲಿ ಮಹತ್ವದ ಮೈಲುಗಲ್ಲು ತಲುಪಿದ್ದಾರೆ. ಹಾಗೆಯೇ ಯಲಹಂಕ ಶಾಸಕರಾಗಿ ಪುನರಾಯ್ಕೆಗೊಂಡ ವಿಶ್ವನಾಥ್ ಸಹ. ಎಲ್ಲಕ್ಕಿಂತ ಹೆಚ್ಚಾಗಿ ಇವರಿಬ್ಬರೂ ರಾಜಧಾನಿಯ ಪ್ರಮುಖ ನದಿ ಅರ್ಕಾವತಿ ಪುನಶ್ಚೇತನ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ್ದವರು. ಇವರಿಬ್ಬರ ಪುನರಾಯ್ಕೆಯಿಂದ ಅರ್ಕಾವತಿಯ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ. ಆ ಬದ್ಧತೆಯನ್ನವರು ತೋರಲಿ.
 ಎಲ್ಲ ಚುನಾವಣೆಯಲ್ಲೂ ಎಲ್ಲ ಪಕ್ಷಗಳೂ ತಮ್ಮದೇ ಅಜೆಂಡಾ ಇರಿಸಿಕೊಂಡು ಕಣಕ್ಕಿಳಿಯುತ್ತವೆ. ಆದರೆ, ನೀರು, ಕಾಡು ಮತ್ತಿತರ ಸಂಪನ್ಮೂಲಗಳ ಸಂರಕ್ಷಣೆಯ ನೈಜ ಅಭಿವೃದ್ಧಿ ಯಾರಿಗೂ ತೋರುವುದೇ ಇಲ್ಲ. ರಾಜಕೀಯ ಪಕ್ಷಗಳದ್ದೇನಿದ್ದರೂ ಅಗ್ಗದ ಆಮಿಷಗಳನ್ನೊಳಗೊಂಡ ಪ್ರಣಾಳಿಕೆಗಳೇ. ಮಂದಿಯ ಋಣಭಾರದೊಂದಿಗೆ ಅಧಿಕಾರಕ್ಕೇರುತ್ತಿರುವ ಸರಕಾರಗಳು ಅವರಿಗಾಗಿ ಮಾಡಬೇಕಾದ ಕೆಲಸಗಳ ಬಗ್ಗೆ, ಅಭಿವೃದ್ಧಿಯ ಬಗ್ಗೆ ಮರೆತೇ ಬಿಡುತ್ತವೆ. ಅಭಿವೃದ್ಧಿಯ ಮಾತನಾಡುತ್ತಲೇ ಅಧಿಕಾರ ಮೇಲಾಟ ನಡೆಸುವುದು ಎಷ್ಟರಮಟ್ಟಿಗೆ ಸಹಜವಾಗಿಬಿಟ್ಟಿದೆ ಎಂದರೆ ರಾಜಕಾರಣಿಗಳ ಬಾಯಲ್ಲಿ ಆ ಪದ ಬಳಕೆಯಾದರೆ ನಗು ಬರುತ್ತದೆ. ಹತಾಶರಾಗಿ ಕುಳಿತಿರುವ ಆ ಮುಗ್ಧ ಕೆಳವರ್ಗದ, ಗ್ರಾಮೀಣ ಜನರ ಬಗ್ಗೆ, ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಕನಿಷ್ಠ ಕಾಳಜಿ ಎಂಬುದೇನಾದರೂ ಇರುವುದೇ ಹೌದಾದರೆ ಕಾದ ನೆಲದ ಮೇಲೊಂದಿಷ್ಟು ನೀರು ಹರಿಸಬೇಕು. ಇದು ಕೃತಜ್ಞತೆಯ ಭಾಗ. ಏಕೆಂದರೆ ಪ್ರತೀ ಬಾರಿ ಯಾವುದೇ ಸರಕಾರ ಅಧಿಕಾರದ ಹೊಸ್ತಿಲಿಗೆ ಬಂದು ನಿಲ್ಲುವುದಿದ್ದರೆ ಅದು ಇಂಥ ಬಡವರ್ಗದ ಜನರ ನಿರೀಕ್ಷಾಪೂರ್ವಕ ಬೆಂಬಲದಿಂದ ಮಾತ್ರ. ಯಾವತ್ತಿಗೂ ಸುಶಿಕ್ಷಿತರು ಮತದಾನದಿಂದ ದೂರವೇ. ಹೀಗಾಗಿ ಅವರು ಎಂದಿಗೂ ನಿರ್ಣಾಯಕರಾಗಿಯೇ ಇಲ್ಲ.
ಇನ್ನು ಉತ್ತರ ಕರ್ನಾಟಕದ ಮಂದಿ ದಶಕಗಳಿಂದ ನಂಬಿಕೊಂಡು ಬಂದಿದ್ದವರೆಲ್ಲರೂ ಅಭಿವೃದ್ಧಿಯ ಕತೆ ಹೇಳಿಯೇ ನಂಬಿಸಿದ್ದಾರೆ. ಆಡಳಿತದ ಬದಲಾವಣೆಯಿಂದಾದರೂ ತಮ್ಮ ಬದುಕು ಬದಲಾಗಲಿ ಎಂಬುದು ಬರನಾಡಿನವರ ಬಯಕೆ. ಅಂಥ ಕೊನೆಯ ನಿರೀಕ್ಷೆಗಳ ಪಸೆ ಆರುವ ಮೊದಲು ನೈಜ ನೀರಾವರಿ (ಭಾರಿ ಯೋಜನೆಗಳಲ್ಲ)ಯ ಪರಿಚಯವನ್ನು ಆ ಭಾಗಕ್ಕೆ ಮಾಡಿಕೊಡಬೇಕಾದದ್ದು ಅಗತ್ಯ. ಅಭಿವೃದ್ಧಿಯ ನಿರ್ಣಾಯಕ ಮಾನದಂಡ ನೀರು ಎಂಬುದನ್ನು ಒಪ್ಪಬಹುದಾದರೆ ಅದರ ಲಭ್ಯತೆ ಒಂದು ಆಡಳಿತಕ್ಕೊಳಪಟ್ಟ ಎಲ್ಲ ಪ್ರದೇಶಗಳಿಗೂ ಸಮಾನವಾಗಿರಬೇಕು. ಆದರೆ ಕರ್ನಾಟಕದ ಮಟ್ಟಿಗೆ ಹಾಗಾಗಿಲ್ಲ. ನೀರಾವರಿ ಯೋಜನೆಯ ವಿಷಯದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದರೂ ಸಂಪನ್ಮೂಲದ ಅಭಿವೃದ್ಧಿಯಲ್ಲಿನ ಇತ್ತೀಚಿನ ಅಂತರದಿಂದಾಗಿ ಇತರ ರಾಜ್ಯಗಳಿಗಿಂತ ನಾವು ಹಿಂದಿದ್ದೇವೆ. ನೀರಾವರಿಯಲ್ಲಿನ ಕೊರತೆ ಕೃಷಿ ಹಿನ್ನಡೆಗೆ ಕಾರಣವಾಗಿ ಪ್ರಾದೇಶಿಕ ಅಸಮತೋಲನಕ್ಕೆ ಅವಕಾಶ ಕಲ್ಪಿಸಿದೆ. ಐದು ಪ್ರಮುಖ ನದಿ ಜಲಾನಯನ ಪ್ರದೇಶಗಳಲ್ಲಿ ಸುಮಾರು 98.406 ಎಂಸಿಯುಎಂನಷ್ಟು ಮಳೆ ನೀರಿನ ಲಭ್ಯತೆ ಇದೆ. ಇದು ಕೃಷ್ಣಾ, ಕಾವೇರಿ, ಗೋದಾವರಿ, ಪಶ್ಚಿಮಕ್ಕೆ ಹರಿಯುವ ಹಲವು ನದಿಗಳ ಮತ್ತು ಉತ್ತರ ಮತ್ತು ದಕ್ಷಿಣ ಪೆನ್ನಾರ್‌ಗಳಲ್ಲಿ ಹಂಚಿ ಹೊರಗೆ ಹರಿದು ಹೋಗುತ್ತಿದೆ. ಇಂಥ ಸುಮಾರು 48.000 ಎಂಸಿಯುಎಂನಷ್ಟು ನೀರನ್ನು ರಾಜ್ಯದೊಳಗೆ ಉಪಯೋಗಿಸಬಹುದು. ರಾಜ್ಯದಲ್ಲಿ ಇದು ನೀರಾವರಿಯ ಪ್ರಮುಖ ಮೂಲ.
ವಿಶೇಷವೆಂದರೆ ನಾವು 300 ರಿಂದ 1400 ಚದರ ಕಿ.ಮೀ. ಅಂತರದಲ್ಲಿ ಸುಮಾರು 380 ಜಲಾನಯನ ಪ್ರದೇಶಗಳನ್ನು ಹೊಂದಿದ್ದೇವೆ. ಇದರಡಿ ಅಪಾರ ಅಂತರ್ಜಲ ಸಂಪತ್ತು ಸಹ ಇದೆ. ಪ್ರತಿ ಮಳೆಗಾಲದಲ್ಲಿ 1.40 ದಶಲಕ್ಷ ಹೆಕ್ಟೇರ್ ಮೀಟರ್‌ನಷ್ಟು ಪುನಶ್ಚೇತನಗೊಳ್ಳುತ್ತದೆ. ದುರಂತವೆಂದರೆ ಈ ಪೈಕಿ ನಾವು ಬಳಸಿಕೊಳ್ಳುತ್ತಿರುವುದು ಸುಮಾರು 0.50 ದಶಲಕ್ಷ ಹೆಕ್ಟೇರ್ ಮೀಟರ್‌ನಷ್ಟನ್ನು ಮಾತ್ರ. ಉಳಿದದ್ದು ವ್ಯರ್ಥವಾಗುತ್ತಿದೆ. ಇದನ್ನು ಹಿಡಿದಿಟ್ಟುಕೊಳ್ಳಲು ಮುಂದಾದರೂ ಸಾಕು, ಸಾಕು ಸಾಕೆನಿಸುವಷ್ಟು ನೀರು ದೊರೆಯುತ್ತದೆ.
ಇನ್ನೊಂದು ಗಮನಾರ್ಹ ಸಂಗತಿಯೆಂದರೆ ರಾಜ್ಯದ ಒಟ್ಟು ಬಿತ್ತನೆ ಪ್ರದೇಶದಲ್ಲಿ ಕೇವಲ ಶೇ.25ರಷ್ಟು ನೀರಾವರಿಯಾಗುತ್ತಿದೆ. ಕೃಷ್ಣಾ ಮತ್ತು ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಪ್ರಗತಿಯಲ್ಲಿರುವ ಮಧ್ಯಮ ನೀರಾವರಿ ಯೋಜನೆಗಳು ಕ್ರಮವಾಗಿ ಶೇ. 71 ಮತ್ತು 50ರಷ್ಟು ಪ್ರದೇಶದಲ್ಲಿ ನೀರಾವರಿ ಒದಗಿಸಬೇಕಾಗಿದೆ. ಒಮ್ಮೆ ಈ ಯೋಜನೆಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಿದರೆ, ರಾಜ್ಯದ 13 ಜಿಲ್ಲೆಗಳಿಗೆ ನೀರು ಇನ್ನೆಂದಿಗೂ ಸಮಸ್ಯೆಯಾಗಿ ಕಾಡುವುದಿಲ್ಲ. ಇದು ಹೊಸ ಸರಕಾರಕ್ಕೆ ಅರ್ಥವಾಗಬೇಕಿದೆ.
ಇನ್ನು ಮೊದಲೇ ಹೇಳಿದಂತೆ ಕರ್ನಾಟಕದಲ್ಲಿ ಅಂತರ್ಜಲ ರಕ್ಷಿಸಿಕೊಂಡು ಬಳಸಲು ಭಾರಿ ಅವಕಾಶವಿದೆ. ಅಂತರ್ಜಲ ಬಳಕೆಯಾಗುತ್ತಿರುವ ಹೆಚ್ಚು ಅಭಿವೃದ್ಧಿ ಹೊಂದಿದ ಒಟ್ಟು ತಾಲೂಕಿನ ಪೈಕಿ ಶೇ.98 ಹೆಚ್ಚು ತಾಲೂಕುಗಳು ದಕ್ಷಿಣ ಕರ್ನಾಟಕದಲ್ಲೇ ಇವೆ. ಉತ್ತರ ಕರ್ನಾಟಕದ ಅಂತರ್ಜಲ ವೃದ್ಧಿಯ ಕಡೆಗೆ ಗಮನ ಹರಿಸಲು ಇದು ಸೂಕ್ತ ಸಮಯ. ಅಂತರ್ಜಲ ಬಳಕೆಯನ್ನು ಸಮತೋಲನಗೊಳಿಸುವ ದೃಷ್ಟಿಯಿಂದ ರಾಜ್ಯಾದ್ಯಂತ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಪುನರ್ ಬಳಕೆ ವ್ಯವಸ್ಥೆಯನ್ನು ಹೆಚ್ಚಿಸುವುದು ಅತ್ಯಂತ ಅವಶ್ಯಕ. ಕೆರೆ ತುಂಬುವ ಯೋಜನೆಯಂಥ ಕ್ರಮಗಳು ಹೆಚ್ಚು ಹೆಚ್ಚು ಅನುಷ್ಠಾನಗೊಂಡಲ್ಲಿ ಸಹಜವಾಗಿಯೇ ಅಲ್ಲಿನ ಪರಿಸ್ಥಿತಿ ಸುಧಾರಣೆಯಾಗುತ್ತದೆ.
ಇದಕ್ಕೆ ಪೂರಕವಾಗಿ ನೀರಾವರಿ ಕೊರತೆ ಪ್ರದೇಶಗಳಲ್ಲಿ ಏತ ನೀರಾವರಿ, ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು. ನೀರು ವಿತರಣೆಯಲ್ಲಿ ಪ್ರಾದೇಶಿಕ ಸಮತೋಲನವನ್ನು ಸಾಧಿಸುವ ಮೂಲಕ ಭವಿಷ್ಯಕ್ಕೆ ಮಾಗದರ್ಶನವಾಗುವಂತೆ ಅವುಗಳ ಕಾರ್ಯ ನಿರ್ವಹಣೆಯ ಬಗೆಗೆ ಗಮನ ಹರಿಸುವುದು ಅಗತ್ಯ. ಅಂತರ್ಜಲ ಬಳಕೆ, ಕೊಳವೆ ಬಾವಿಗಳ ನಿರ್ಮಾಣ ಮತ್ತು ಅಭಿವೃದ್ಧಿ ಮತ್ತು ಕಾಲುವೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಬಳಕೆದಾರರ ಶುಲ್ಕ ವಿಧಿಸುವ ಬಗ್ಗೆ ಗಂಭೀರವಾಗಿ ಯೋಚಿಸುವುದೊಳಿತು. ಇದರಿಂದ ಅನಗತ್ಯ ಬಳಕೆ ಮೇಲೆ ನಿಯಂತ್ರಣ ಸಾಧಿಸಿದಂತೆಯೂ ಆಗುತ್ತದೆ. ಹೊಸ ಯೋಜನೆಗಳಿಗೆ ಬಂಡವಾಳ ಕ್ರೋಢೀಕರಣವೂ ಆದಂತಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಆರ್ಥಿಕ ಕೊರತೆಯಿಂದಾಗಿ ಜಲಾನಯನ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಗಳ (ಕಾಡಾಗಳ) ಎಲ್ಲ ಕಾರ್ಯಕ್ರಮಗಳು ಹೆಚ್ಚು ಕಡಿಮೆ ಸ್ಥಗಿತಗೊಂಡಿವೆ. ಇದಕ್ಕೂ ಮತ್ತೆ ಚಾಲನೆ ದೊರೆಯಬೇಕಿದೆ. ಕಳೆದ ಸರಕಾರದ ಅವಧಿಯಲ್ಲಿ ನೆಪಕ್ಕೆಂಬಂತೆ ಅಸ್ತಿತ್ವಕ್ಕೆ ಬಂದಿರುವ ಅಂತರ್ಜಲ ಅಭಿವೃದ್ಧಿ ಪ್ರಾಧಿಕಾರಕ್ಕೆ ನೈಜ ಹಲ್ಲು ಮೂಡಿಸಿ ನೀರು ನೀತಿ ರೂಪಿಸುವ ಕೆಲಸ ಆಗಬೇಕು. ಬೋರ್ವೆಲ್‌ಗಳ ವಿಚಾರದಲ್ಲಿ ಕಡ್ಡಾಯ ಕಾನೂನು ರೂಪುಗೊಳ್ಳಬೇಕು. ಮಳೆಕೊಯ್ಲು ಯೋಜನೆ ಸಬಲವಾಗಿ ಅನುಷ್ಠಾನಗೊಳ್ಳಬೇಕು. ನೀರಿನ ವಿಚಾರದಲ್ಲಿ ಆಗಬೇಕಾದುದು ಸಾಕಷ್ಟಿದೆ. ಒಟ್ಟಾರೆ ಅಧಿಕಾರದ ಆಸೆಗೆ ನೀರೆರೆದು ಶಕ್ತಿ ಕೇಂದ್ರದ ಮೆಟ್ಟಿಲು ಹತ್ತಿಸುವ ಜನರ ನಿರೀಕ್ಷೆಗಳಿಗೆ ತಣ್ಣೀರೆರಚದಿದ್ದಲ್ಲಿ ಆಳುವವರ ಹೊಟ್ಟೆಯೂ ತಣ್ಣಗಿದ್ದೀತು.

- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com