ಎಲೆ ಉದುರೋ ಕಾಲದ ಲಹರಿ

ಅದೊಂದು ಸುಂದರ ದ್ವೀಪ. ಅಲ್ಲಿ ಒಂದು ಮರವಿತ್ತು. ಅದರ ತುಂಬಾ...
Updated on: 

ಹೀಗೆ ಗೊಬ್ಬರವಾಗಿ ಮತ್ತೆ ನಿನ್ನ ಬೇರುಗಳನ್ನೇ ಸೇರಿಕೊಂಡ ಎಲೆಗಳು, ಎಲ್ಲ ವಿಧದಲ್ಲೂ ನಿನ್ನನ್ನು ಮತ್ತಷ್ಟು ಶಕ್ತಿವಂತನನ್ನಾಗಿ ಮಾಡುತ್ತವೆ. ಬದುಕಲ್ಲಿ ಎದುರಾದ ಸಂಕಟಗಳು ನಮ್ಮ ಸ್ಮೃತಿ ಪಟಲದಲ್ಲಿ ಹಾಗೆಯೇ ಉಳಿದಿರುತ್ತವೆ. ನಂತರ...

ಅದೊಂದು ಸುಂದರ ದ್ವೀಪ. ಅಲ್ಲಿ ಒಂದು ಮರವಿತ್ತು. ಅದರ ತುಂಬಾ ಲೆಕ್ಕವಿಲ್ಲದಷ್ಟು ಹಚ್ಚ ಹಸುರಿನ ಎಲೆಗಳಿದ್ದವು. ಮರದ ಟೊಂಗೆಗಳು ಸಾಕಷ್ಟು ದೂರಕ್ಕೆ ಹರಡಿಕೊಂಡಿದ್ದವು. ಹಾಗಾಗಿ ಇಡೀ ಪ್ರದೇಶವೇ ಹಚ್ಚ ಹಸುರಿನ ತೋಟದಂತೆ ಕಾಣಿಸುತ್ತಿತ್ತು. ವಿಶೇಷವೆಂದರೆ, ಇಡೀ ದ್ವೀಪದಲ್ಲಿ ಬೇರೊಂದು ಮರವೇ ಇರಲಿಲ್ಲ. ಹಾಗಾಗಿ, ಇಡೀ ದ್ವೀಪಕ್ಕೆ ನಾನೇ ರಾಜ ಎಂಬ ಹಮ್ಮು ಈ ಮರಕ್ಕಿತ್ತು.
ಹೀಗಿರುವಾಗ ಏನಾಯಿತೆಂದರೆ, ಟೊಂಗೆಯಲ್ಲಿನ ಎಲೆಯೊಂದು ಹಳದಿ ಬಣ್ಣಕ್ಕೆ ತಿರುಗಿರುವುದು ಈ ಮರದ ಗಮನಕ್ಕೆ ಬಂತು. ಹಚ್ಚ ಹಸುರಿಂದ ಕಂಗೊಳಿಸುತ್ತಿದ್ದ ತನ್ನ ಎಲೆಗಳು ಹೀಗೆ ವಿರೂಪಗೊಂಡು ಹಳದಿ ಬಣ್ಣಕ್ಕೆ ತಿರುಗಬಹುದೆಂಬ ಕಲ್ಪನೆಯೇ ಈ ಮರಕ್ಕೆ ಇರಲಿಲ್ಲ. ಅಯ್ಯೋ, ಇದೇನಾಗಿ ಹೋಯ್ತು? ನನಗೆ ವಯಸ್ಸಾಯ್ತಾ? ನಾನು ಮುದುಕ ಆಗಿ ಹೋದೆನಾ ಎಂಬ ಸಂಕಟದಲ್ಲೇ ಮರ ಕಂಗಾಲಾಯಿತು. ಈ ನಡುವೆ ಇನ್ನೂ ಎಂಟು ಎಲೆಗಳು ಹಳದಿಗೆ ತಿರುಗಿ ನೆಲಕ್ಕೆ ಬಿದ್ದವು. ಒಂದು ವಾರದಲ್ಲಿ ಹೀಗೆ ನೆಲಕ್ಕೆ ಬಿದ್ದ ಎಲೆಗಳ ಸಂಖ್ಯೆ 18ನ್ನು ದಾಟಿತು. ಆನಂತರದಲ್ಲಿ ದಿನಕ್ಕೆ ಎರಡರ ಲೆಕ್ಕದಲ್ಲಿ ಒಂದೊಂದೇ ಕೊಂಬೆಯಿಂದ ಎಲೆಗಳು ಹಳದಿಯಾಗಿ ಬಿದ್ದು ಹೋಗುವುದು ಮಾಮೂಲಾಯಿತು. ಇದರಿಂದ ಮತ್ತಷ್ಟು ಕಂಗಾಲಾದ ಮರ, ಓಹ್, ನಾನು ಸತ್ತು ಹೋಗುವ ದಿನ ಹತ್ತಿರ ಬಂದಿದೆಯೇನೋ, ಅದಕ್ಕೇ ಹೀಗಾಗುತ್ತಿದೆ ಎಂದೇ ಲೆಕ್ಕ ಹಾಕಿತು. ಈ ಯೋಚನೆಯಲ್ಲೇ ಅದು ಒಳಗೊಳಗೆ ಕೊರಗುತ್ತಾ ಉಳಿದು ಬಿಟ್ಟಿತು.
 ಈ ಸಂದರ್ಭದಲ್ಲಿಯೇ ಪಕ್ಷಿಯೊಂದು ಅಲ್ಲಿಗೆ ಬಂತು. ಮರ ಸಪ್ಪಗಿರುವುದನ್ನು ಕಂಡು, ಗೆಳೆಯಾ, ಏನಾಗಿದೆ ನಿನಗೆ? ಯಾಕೆ ಮೌನವಾಗಿದ್ದೀ ಎಂದು ಪ್ರಶ್ನಿಸಿತು. ಇಂಥ ಮಾತಿಗೇ ಕಾಯುತ್ತಿದ್ದ ಮರ-'ನಾನು ಇಷ್ಟರಲ್ಲಿಯೇ ಸತ್ತು ಹೋಗ್ತೇನೆ ಅನ್ನಿಸಿ ಸಂಕಟವಾಗ್ತಾ ಇದೆ. ಈವರೆಗೂ ನೂರಕ್ಕೂ ಹೆಚ್ಚು ಎಲೆಗಳು ಉದುರಿ ಬಿದ್ದಿವೆ' ಎಂದಿತು.
ಈ ಮಾತು ಕೇಳಿ ಖಿಲ್ಲನೆ ನಕ್ಕ ಪಕ್ಷಿ, ಅಯ್ಯೋ ಪೆದ್ದಣ್ಣಾ, ಇದಕ್ಕೇನಾ ನೀನು ಮಂಕಾಗಿರೋದು? ನೀನು ಈವರೆಗೂ ಬೇರೊಂದು ಮರವನ್ನೇ ನೋಡಿಲ್ಲ. ಇಡೀ ದ್ವೀಪದಲ್ಲಿ ನೀನು ಒಬ್ಬನೇ ಇದೀಯ. ಅದೇ ಕಾರಣಕ್ಕೆ ನಿನಗೆ ಹೀಗೆಲ್ಲಾ ಅನ್ನಿಸಿದೆ. ಇರಲಿ, ಈಗ ನಾನು ಹೇಳಿದಂತೆ ಮಾಡು. ಈವರೆಗೂ ನೀನು ಕಳೆದುಕೊಂಡ ಎಲೆಗಳೆಷ್ಟು? ಎಂದು ಕೇಳಿತು. 'ಕಳೆದುಕೊಂಡ ಎಲೆಗಳ ಸಂಖ್ಯೆ 100ನ್ನು ದಾಟುತ್ತದೆ' ಎಂದಿತು ಮರ. 'ಸರಿ. ಈಗ ನಿನ್ನ ರೆಂಬೆಗಳಲ್ಲಿ ಉಳಿದಿರುವ ಹಸಿರು ಎಲೆಗಳನ್ನು ಲೆಕ್ಕ ಹಾಕು' ಎಂದಿತು ಪಕ್ಷಿ. 'ಒಂದು, ಎರಡು, ಮೂರು, ನಾಲ್ಕು ಎಂದು ಆರಂಭಿಸಿ ಮುನ್ನೂರು ಎಂದು ಹೇಳುವಷ್ಟರಲ್ಲಿ ಸುಸ್ತಾಗಿ ಹೋದ ಮರ, ನಾನು ಎಣಿಸದೇ ಬಿಟ್ಟಿರುವುದು 20ಕ್ಕೂ ಹೆಚ್ಚು ಕೊಂಬೆಗಳಿವೆ ಎಂದಿತು. ತಕ್ಷಣವೇ ಮುಗುಳ್ನಕ್ಕ ಪಕ್ಷಿ ಹೇಳಿತು: ಗುಡ್. ಈಗ ಉಳಿದುಕೊಂಡಿವೆಯಲ್ಲ, ಆ ಎಲೆಗಳನ್ನೇ ನೆಪ ಮಾಡಿಕೊಂಡು ನಿನ್ನ ಮನದ ಕೊರಗನ್ನು ದೂರ ಮಾಡುತ್ತೇನೆ. ಜೊತೆಗೆ ನೀನು ಬದುಕಿನಲ್ಲಿ ಪಾಲಿಸಬೇಕಾದ ಮೂರು ಪಾಠಗಳನ್ನು ಹೇಳ್ತೇನೆ. ಹುಷಾರಾಗಿ ಕೇಳಿಸಿಕೋ ಎಂದಿತು.
ಮೊದಲನೇ ಪಾಠ ಏನೆಂದರೆ-'ಉದುರಿ ಬಿದ್ದು ಹೋದ ಎಲೆಗಳು ಬದುಕಲ್ಲಿ ಎದುರಾಗುವ ಸಮಸ್ಯೆಗಳನ್ನೂ, ಕೊಂಬೆಗಳಲ್ಲಿ ಉಳಿದಿರುವ ಎಲೆಗಳು ನಮ್ಮ ಮೇಲಿರುವ ಹಲವರ ಹಾರೈಕೆಗಳನ್ನೂ ಸಂಕೇತಿಸುತ್ತವೆ. ನಾವು, ಯಾವ ಸಂದರ್ಭದಲ್ಲೂ ನಮ್ಮ ಮೇಲಿರಬಹುದಾದ ಹಾರೈಕೆಗಳ ಬಗ್ಗೆ ಯೋಚಿಸುವುದೇ ಇಲ್ಲ. ಅದರ ಬದಲಿಗೆ ಎದುರಾಗುವ ಸಮಸ್ಯೆಗಳನ್ನೇ ಮತ್ತೆ ಮತ್ತೆ ನೆನಪಿಸಿಕೊಂಡು ಕಂಗಾಲಾಗುತ್ತೇವೆ...'  ಹೌದಲ್ವ, ನಿನ್ನ ಮಾತುಗಳಲ್ಲಿ ಖಂಡಿತ ನನಗೊಂದು ಸಂದೇಶ ಇದೆ. ಎರಡನೇ ಸಂದೇಶ ಏನು ಅದನ್ನೂ ಬೇಗ ಹೇಳು ಎಂದು ಒತ್ತಾಯಿಸಿತು ಮರ.
ಖಂಡಿತ ಹೇಳ್ತೇನೆ. ಈಗಾಗಲೇ ಎಲೆಗಳು ಬಿದ್ದು ಹೋಗಿವೆಯಲ್ಲ; ಆ ಜಾಗವನ್ನೇ ಸೂಕ್ಷ್ಮವಾಗಿ ಗಮನಿಸಿ ಹೇಳು. ಅಲ್ಲಿ ಏನು ಕಾಣಿಸ್ತಿದೆ ಎಂದಿತು ಪಕ್ಷಿ. ಮೊದಲಿಗೆ, ಎಲೆಗಳಿದ್ದ ಜಾಗದಲ್ಲಿ ಏನೂ ಕಾಣಿಸ್ತಿಲ್ಲ. ಎಲ್ಲವೂ ಖಾಲಿಖಾಲಿ ಎಂದಿದ್ದ ಮರ, ಅರೆಕ್ಷಣದ ನಂತರ, 'ಈಗ ಹುಷಾರಾಗಿ ಗಮನಿಸಿದೆ. ಅಲ್ಲಿ ಹೊಸ ಚಿಗುರು ಕಾಣಿಸ್ತಾ ಇದೆಯಲ್ಲ' ಎಂದಿತು. 'ಹೌದು. ಈಗ ಕೇಳಿಸಿಕೋ. ಬಿದ್ದು ಹೋದ ಎಲೆಗಳು ಸಮಸ್ಯೆಯನ್ನು ಸಂಕೇತಿಸಿದರೆ, ಚಿಗುರುತ್ತಿರುವ ಎಲೆಗಳು ಹೊಸ ಆಸೆ, ನಿರೀಕ್ಷೆ ಹಾಗೂ ಭರವಸೆಗಳನ್ನು ಸಂಕೇತಿಸುತ್ತಿದೆ. ಸಂಕಟಗಳು ಕಣ್ಮರೆಯಾದ ಕೆಲವೇ ದಿನಗಳಲ್ಲಿ ಹೊಸ ಕನಸುಗಳೂ ಜೊತೆಯಾಗಿ ಬದುಕಿನ ಉತ್ಸಾಹ ಹೆಚ್ಚಿಸುತ್ತವೆ. ಹಾಗಾಗಿ ನಾವು ಸಂಕಟಗಳನ್ನು ಮರೆತು ಹೊಸ ಕನಸುಗಳತ್ತ ತಿರುಗಿ ನೋಡಬೇಕು. ಬದುಕಿನಲ್ಲಿ ಕೆಲವೊಂದನ್ನು ಪಡೆಯಬೇಕು ಎಂದಾದರೆ, ಒಂದಷ್ಟನ್ನು ಕಳೆದುಕೊಳ್ಳಲೂಬೇಕು...'
'ಗೆಳೆಯಾ, ನೀನು ಹೇಳಿದ್ದು ತುಂಬ ಚೆನ್ನಾಗಿ ಅರ್ಥವಾಯಿತು. ಮೂರನೇ ಪಾಠ ಏನೆಂಬುದನ್ನು ಬೇಗ ಹೇಳಿಬಿಡು' ಎಂದು ಒತ್ತಾಯಿಸಿತು ಮರ. 'ಸರಿ. ಈಗ ನೀನೇ ಹೇಳು. ಈಗಾಗಲೇ ಬಿದ್ದು ಹೋದ ಎಲೆಗಳಿವೆಯಲ್ಲ, ಅವು ಏನಾಗುತ್ತವೆ?' ಎಂದು ಪ್ರಶ್ನಿಸಿತು ಹಕ್ಕಿ. 'ಆ ಎಲೆಗಳು ಮೊದಲು ಒಣಗಿ, ಕ್ರಮೇಣ ಕೊಳೆತು ಗೊಬ್ಬರ ಆಗುತ್ತದೆ ಅಲ್ವಾ?' ಎಂದಿತು ಮರ.
ಹೌದು. ಹೀಗೆ ಗೊಬ್ಬರವಾಗಿ ಮತ್ತೆ ನಿನ್ನ ಬೇರುಗಳನ್ನೇ ಸೇರಿಕೊಂಡ ಎಲೆಗಳು, ಎಲ್ಲ ವಿಧದಲ್ಲೂ ನಿನ್ನನ್ನು ಮತ್ತಷ್ಟು ಶಕ್ತಿವಂತನನ್ನಾಗಿ ಮಾಡುತ್ತವೆ. ಅದರರ್ಥ ಇಷ್ಟೆ: ಬದುಕಲ್ಲಿ ಒಮ್ಮೆ ಎದುರಾಗಿ ಆನಂತರ ಕಾಲನ ತಿರುಗುಚಕ್ರಕ್ಕೆ ಸಿಲುಕಿ ಕಣ್ಮರೆಯಾಗುವ ಸಂಕಟಗಳು ನಮ್ಮ ಸ್ಮೃತಿ ಪಟಲದಲ್ಲಿ ಹಾಗೆಯೇ ಉಳಿದಿರುತ್ತವೆ. ಮುಂದೆಂದೋ ಅಂಥದೇ ಸಂಕಟ ಎದುರಾದಾಗ ಅದನ್ನು ಮೆಟ್ಟಿನಿಲ್ಲಲು ಸಹಾಯ ಮಾಡುತ್ತವೆ. ಇದು ನಾನು ಹೇಳಬೇಕಿದ್ದ ಮೂರನೇ ಮತ್ತು ಕೊನೆಯ ಪಾಠ ಎನ್ನುತ್ತಾ ತನ್ನ ಮಾತು ಮುಗಿಸಿತು ಪಕ್ಷಿ.
'ಧನ್ಯವಾದ ಮಿತ್ರಾ. ನಿನ್ನ ಮಾತುಗಳು ನನ್ನ ಬದುಕಿಗೆ ಹೊಸ ಹುರುಪು ತುಂಬಿವೆ' ಎಂದು ಕೃತಜ್ಞತೆ ಹೇಳಿತು ಮರ.
----
ಈಗ ಸೂಕ್ಷ್ಮವಾಗಿ ಯೋಚಿಸಿ: ಆ ಪಕ್ಷಿ ಹೇಳಿರುವ ಮೂರು ಪಾಠಗಳು ನಮ್ಮ ಬದುಕಿಗೂ ಅನ್ವಯವಾಗುವಂತಿದೆಯಲ್ಲವೆ?
ಆತನಲ್ಲಿ ಆಸಕ್ತಿ ಉಳಿಸುವುದು ಹೇಗೆ?
ಹಫಿಂಗ್‌ಟನ್ ಪೋಸ್ಟ್ ಪತ್ರಿಕೆಯಲ್ಲಿ ಇತ್ತೀಚೆಗೆ ಆಸಕ್ತಿಕರ ಲೇಖನವೊಂದನ್ನು ಓದಿದೆ. ಕೆಲ್ಲಿ ಫ್ಲಾಂಗನ್ ಎಂಬುವವರು ತಮ್ಮ ಚಿಕ್ಕ ಮಗಳಿಗೆ ಬರೆದಿರುವ ಪತ್ರ ಅದು. ಮಗಳನ್ನೇ ಉದ್ದೇಶವಾಗಿರಿಸಿಕೊಂಡು ಬರೆದಿರುವ ಲೇಖನ ಅದಾಗಿದ್ದರೂ ವಯಸ್ಕರಾಗಿ ರೂಪುಗೊಳ್ಳುತ್ತಿರುವ ಹುಡುಗರಿಗೆ ತಮ್ಮಲ್ಲಿರಬೇಕಾದದ್ದು ಏನು ಎಂದು ತಿಳಿದುಕೊಳ್ಳುವುದಕ್ಕೆ ಹಾಗೂ ತಮ್ಮ ಬಳಿ ಆಪ್ತ ಸಲಹೆ ಪಡೆದುಕೊಳ್ಳಲು ಬರುವ ಮಹಿಳೆಯರಿಗೆ ಇದು ಪ್ರಯೋಜನಕಾರಿ ಎಂಬ ನಂಬುಗೆಯಲ್ಲಿ ಅವರ ಕೆಲವು ಭಾವನೆಗಳನ್ನು ದಾಖಲಿಸಿದ್ದಾರೆ. ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿರುವ ಕೆಲ್ಲಿ ಫ್ಲಾಂಗನ್ ಅವರ ಆ ಪತ್ರ ಹೀಗಿದೆ...
ಪ್ರೀತಿಯ ಪುಟ್ಟಿ, ಇತ್ತೀಚೆಗೆ ನಾನು ಮತ್ತು ನಿನ್ನಮ್ಮ ಗೂಗಲ್‌ನಲ್ಲಿ ಯಾವುದೋ ಉತ್ತರವನ್ನು ಹುಡುಕುತ್ತಿದ್ದೆವು. ಅರ್ಧ ಪ್ರಶ್ನೆಯನ್ನು ಟೈಪಿಸುತ್ತಲೇ ಅದೇ ಜಾಡಿನಲ್ಲಿ ಜಗತ್ತಿನಾದ್ಯಂತ ಉತ್ತರಕ್ಕಾಗಿ ತಡಕುತ್ತಿರುವ ಪ್ರಶ್ನೆಗಳ ಪಟ್ಟಿಯನ್ನು ತೋರಿಸಿತು. ಆ ಪಟ್ಟಿಯ ಅಗ್ರಭಾಗದಲ್ಲೇ ರಾರಾಜಿಸಿದ ಪ್ರಶ್ನೆ- 'ಹೌ ಟು ಕೀಪ್ ಹಿಮ್ ಇಂಟರೆಸ್ಟೆಡ್‌', ಆತನನ್ನು ಆಸಕ್ತಿಯಿಂದಿರುವಂತೆ ನೋಡಿಕೊಳ್ಳುವುದು ಹೇಗೆ?
ಈ ತಲೆಬರೆಹದ ಅಡಿ ಇರುವ ಅನೇಕ ಲೇಖನಗಳು ಆತನ ಎದುರು ಸೆಕ್ಸಿ ಆಗಿ ಇರುವುದು ಹೇಗೆ ಎಂಬುದನ್ನೇ ಚರ್ಚಿಸುತ್ತಿದ್ದವು. ಆತನನ್ನು ಸ್ಮಾರ್ಟ್ ಮತ್ತು ಸುಪೀರಿಯರ್ ಆಗಿರಿಸಿ ಯಾವತ್ತೂ ನಿಮ್ಮಲ್ಲಿ ಆಸಕ್ತಿ ಉಳಿಯುವಂತೆ ನೋಡಿಕೊಳ್ಳುವ ಬಗೆಯನ್ನೇ ಅವು ಸಾರುತ್ತಿದ್ದವು. ಅವನ್ನೆಲ್ಲ ಓದುತ್ತ ನನಗೆ ಗಾಬರಿಯಾಯಿತು, ಸಿಟ್ಟು ಬಂತು.  ಪುಟ್ಟಿ... ಆತನನ್ನು ಈ ಬಗೆಯಲ್ಲಿ 'ಆಸಕ್ತಿ ಉಳಿಸಿಕೊಂಡವನಾಗಿ' ಇಟ್ಟುಕೊಳ್ಳುವುದು ನಿನ್ನ ಕೆಲಸವಾಗಿರಲೂ ಇಲ್ಲ, ಮುಂದೆಂದೂ ಆಗಲೂಬಾರದು. ಹೃದಯಾಂತರಾಳದಿಂದ ನೀನು ಆಸಕ್ತಿಗೆ ಯೋಗ್ಯಳು ಎಂದು ಎಷ್ಟರಮಟ್ಟಿಗೆ ನಂಬಿಕೊಳ್ಳುತ್ತೀಯಾ ಎಂಬುದೇ ತುಂಬ ಮುಖ್ಯವಾಗುತ್ತದೆ. ಇನ್ನು, ಪ್ರತಿಯೊಬ್ಬರೂ ಆಸಕ್ತಿಕರವಾಗಿಯೇ ಇರುತ್ತಾರೆ ಎಂದು ನಂಬುವುದು ನಿನಗೆ ಸಾಧ್ಯವಾದರೆ ಜೀವನ ಸಮರವನ್ನು ಅರ್ಧ ಗೆದ್ದಂತೆ, ಆ ಮಾತು ಬೇರೆ.  ಮಗಳೇ... ನೀನು ಆಸಕ್ತಿ ಹುಟ್ಟಿಸಿ ಜತೆಗಿರಬಹುದಾದ ಹುಡುಗನ ಬಗ್ಗೆ ಯೋಚಿಸಬೇಡ. ಏಕೆಂದರೆ ನಿನ್ನ ಹುಡುಗನಾದವನಿಗೆ ನೀನು ಇಂಟರೆಸ್ಟಿಂಗ್ ಅಂತ ಗೊತ್ತಿರುತ್ತದೆ, ಅದನ್ನು ನಿರೂಪಿಸಬೇಕಾಗಿಲ್ಲ. ಹಾಗಾದರೆ ಹುಡುಗ ಹೇಗಿದ್ದರೆ ಸಾಕು ಅಂತೀಯಾ? ಕೇಳಿಲ್ಲಿ...
ಆತ ಊಟದ ಮೇಜಿನ ಮೇಲೆ ಮೊಣಕೈ ಊರುವ ಅಭ್ಯಾಸವನ್ನು ಇಟ್ಟುಕೊಂಡಿದ್ದರೆ ನನಗೇನೂ ಆ ಬಗ್ಗೆ ಬೇಜಾರಿಲ್ಲ. ಆತನ ಗಮನ ನಿನ್ನ ನಗೆಯ ಮೇಲಿದೆ ಹಾಗೂ ನಕ್ಕಾಗ ನಿನ್ನ ಮುಖ ಅರಳಿದ್ದನ್ನೇ ಆಸ್ಥೆಯಿಂದ ನೋಡುತ್ತಿದ್ದಾನೆ ಎಂದಾದರೆ ಉಳಿದ ಮ್ಯಾನರ್ಸ್ ಬಗ್ಗೆ ತಕರಾರೇಕೆ? ಆತನಿಗೆ ಗಾಲ್ಫ್ ಆಡುವುದಕ್ಕೆ ಬರುವುದಿಲ್ಲ ಎಂಬುದು ಖಂಡಿತ ನನಗೆ ವಿಷಯವಾಗುವುದಿಲ್ಲ, ನೀನು ಹೆತ್ತ ಮಕ್ಕಳೊಂದಿಗೆ ಆತನಿಗೆ ಮಗುವಾಗಿ ಆಟವಾಡುವುದು ಸಾಧ್ಯವಾದರೆ... ಆತ ತನ್ನ ಹೃದಯವನ್ನು ಹಿಂಬಾಲಿಸುವವನಾದರೆ ಹಣವನ್ನು ಹಿಂಬಾಲಿಸುವಲ್ಲಿ ಎಷ್ಟು ಸಮರ್ಥ ಎಂಬುದು ಲೆಕ್ಕಕ್ಕೆ ಬರುವುದಿಲ್ಲ. ಆತ ಬಲಾಢ್ಯನೋ ಎಂದು ನಾನು ಯೋಚಿಸುವುದಿಲ್ಲ. ನಿನ್ನ ಬಲವನ್ನು, ಅಂದರೆ ಹೃದಯ ಹೇಳಿದ ಮಾತನ್ನು ಅನುಸರಿಸುವುದಕ್ಕೆ ಅವಕಾಶ ಮಾಡಿಕೊಡುವ ಗುಣ ಅವನಲ್ಲಿ ಇರಬೇಕಷ್ಟೆ. ಆತ ಯಾವುದಕ್ಕೆ ವೋಟ್ ಮಾಡುತ್ತಾನೆ, ಆತನ ರಾಜಕೀಯ ನಿಲವುಗಳೇನು ಎಂಬುದು ನಗಣ್ಯ. ಆದರೆ ಆತ ಮನೆಯಲ್ಲಿ ಗೌರವಕ್ಕೆ ಅರ್ಹಳಾಗುವಂತೆ ಪ್ರತಿ ಮುಂಜಾನೆಯೂ ನಿನ್ನನ್ನೇ ಚುನಾಯಿಸಬೇಕು ಹಾಗೂ ಆತನ ಹೃದಯ ಸಿಂಹಾಸನದಲ್ಲಿ ನಿನ್ನನ್ನೇ ಕೂರಿಸಬೇಕು. ಆತನ ಚರ್ಮದ ಬಣ್ಣ ಯಾವುದು ಎಂಬ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಸಹನೆ, ತ್ಯಾಗ, ಕಾಳಜಿಗಳ ಕುಂಚ ಚಲನೆಯಲ್ಲಿ ನಿನ್ನ ಜೀವನದ ಕ್ಯಾನ್‌ವಾಸ್ ಶೃಂಗರಿಸುವ ಆಸ್ಥೆ ಅವನದ್ದಾಗಿದ್ದರೆ... ಆತನ ಧರ್ಮ ಇದಾಗಿರಲಿ, ಇನ್ನೊಂದಾಗಿರಲಿ ಅಥವಾ ಧರ್ಮವೇ ಇಲ್ಲವಾಗಿರಲಿ ಆ ಬಗ್ಗೆ ನನಗೇನೂ ಅನ್ನಿಸುವುದಿಲ್ಲ. ಆತನಿಗೆ ಪಾವಿತ್ರ್ಯ ಹಾಗೂ ಮೌಲ್ಯಗಳ ಕಲ್ಪನೆ ಇದ್ದರೆ ಸಾಕು. ಬದುಕಿನ ಪ್ರತಿಕ್ಷಣ ಹಾಗೂ ನಿನ್ನೊಂದಿಗಿನ ಪ್ರತಿಹೆಜ್ಜೆ ಪವಿತ್ರವಾದದ್ದು ಎಂಬ ಅರಿವು ಆತನಲ್ಲಿರಬೇಕು.
ಇಂಥ ಹುಡುಗ ನಿನಗೆ ಸಿಕ್ಕಿದ ಪಕ್ಷದಲ್ಲಿ ತಂದೆಯಾದ ನನಗೂ ಆತನಿಗೂ ಇನ್ಯಾವುದೇ ವಿಷಯದಲ್ಲಿ ಸಾಮ್ಯವಿಲ್ಲದೇ ಹೋದರೂ ಒಂದು ವಿಷಯ ಕಾಮನ್ ಆಗಿರುತ್ತದೆ. ಅದೆಂದರೆ- 'ನೀನು'. ಪುಟ್ಟಿ... ಕೊನೆಗೂ ಆತನಲ್ಲಿ ಆಸಕ್ತಿ ಉಳಿದುಕೊಂಡಿರುವುದಕ್ಕೆ ಪ್ರೇರೇಪಿತ ಸಂಗತಿ ಎಂದರೆ ನೀನೇ ಆಗಿರುತ್ತೀಯ!
-ನಿನ್ನಲ್ಲಿ ಯಾವತ್ತೂ ಆಸಕ್ತನಾಗಿರುವ, ಡ್ಯಾಡಿ

-ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com