'ನೀನೇನರ ಯೋಳು ಆ ಕಮ್ಲ ಪಕ್ಸುದೋರು ತಿರ್ಗಾ ಪವರ್ಗೆ ಬರ್ಬೇಕಾಯಿತ್ತು. ಎಂಥಾ ಎಡ್ವಟ್ಟು ಆಗೋಯ್ತು ಕಣ್ಲಾ' ಅಂತೇಳಿ ಅಮಾಸೆನ ಕೂರಿಸ್ಕಂಡು ಮೈಲಾರಿ ಕೈ ಕೈ ಹಿಸುಕ್ಕಂಡು ಯೋಳ್ದ.
'ಯಾಕ್ಲಾ ಮೂದೇವಿ, ಕಮ್ಲ ಪಕ್ಸುದೋರು ಅಂದ್ರೆ ವುರ್ಕಂಡು ಬೀಳ್ತಾಯಿದ್ದೆ. ಈವಾಗ ನೋಡುದ್ರೆ ಅವ್ರೇ ಪವರ್ಗೆ ಬರ್ಬೇಕಾಯಿತ್ತು ಅಂತಾಯಿದ್ದೀಯ. ಎಲೆಕ್ಸನ್ನಾಗೆ ಏನರ ಕಾಸುಗೀಸು ಗೋರ್ಕಂಡಿದ್ದ ಅವ್ರುತವ' ಅಂದ ಅಮಾಸೆ.
'ಅಲ್ಲಲೇ, ಐದು ವರ್ಸ ಸುಮ್ಕೆ ಇದ್ದು ಸರ್ಕಾರ ವೋಗೋ ವೊತ್ನಾಗೆ ಎದ್ದೋಗೋ ಮಾತು ಬಿದ್ದೋಗ್ಲಿ ಅಂತ ವೊಳ್ಳೇ ಮಾತು ಯೋಳ್ಬುಟ್ಟಿದ್ರು. ಆ ಮಾತು ಏನರ ನಿಜ ಆಬುಟ್ಟಿದ್ರೆ ಹೆಂಗೆ ಇರ್ತಾಯಿತ್ತು ಅಂತೀಯ' ಅಂತೇಳ್ದ ಮೈಲಾರಿ.
'ಏನಪ್ಪಾ ಅವ್ರು ಯೋಳಿದ್ದು ಅಂತಾದ್ದು ?' ಅಂದ ಅಮಾಸೆ. 'ಅಲ್ಲಲೇ, ಕಮ್ಲ ಪಕ್ಸ ತಿರ್ಗಿ ಪವರ್ಗೆ ಬಂದ್ರೆ ಬಾರು, ರೆಸ್ಟೋರೆಂಟು ರಾತ್ರಿ ವೊಂದು ಗಂಟೇಗಂಟ ತೆಗೀತೀವಿ ಅಂತ ಅನೌನ್ಸು ಮಾಡಿದ್ರು ಕಣ್ಲಾ ನಮ್ ಅನಂತಪ್ಪ. ಹಂಗಾಗ್ಬುಟ್ಟಿದ್ರೆ ಕುಣ್ಕಂಡು, ಕುಡ್ಕಂಡು ಆಕಾಸ್ದಾಗೆ ತೇಲಾಡ್ಕಂಡು ಅಲ್ಲೇ ಮಲಿಕ್ಕಂಬುಡ್ತಾಯಿದ್ದೆ. ಮಗಂದು ಚಾನ್ಸು ಮಿಸ್ಸು ಆಗೋಯ್ತಲ್ಲೋ. ಆ ಎಣ್ಣೆ ಮಂತ್ರಿ ರೇಣ್ಕಪ್ನೂವೆ ಎಲೆಕ್ಸನ್ನಾಗೆ ವೊಗೆ ಹಾಕ್ಕಂಬುಟ್ಟ. ಬ್ಯಾಡ ಸಿವಾ ಎಲೆಕ್ಸನ್ ದಿನ ಕುಡ್ಯಕ್ಕೆ ಕೊಡ್ಬೇಡಿ ಎಡ್ವಟ್ಟು ಆಗೋಯ್ತದೆ ಅಂತ ಯೋಳ್ದೆ'.
'ಅದ್ರೂವೆ ಅವಯ್ಯ ನನ್ ಮಾತು ಕಿವಿನಾಗೆ ಹಾಕ್ಕಳ್ಳಿಲ್ಲ. ನಾನು ಎಣ್ಣೆ ಮಂತ್ರಿ ಆಬುಟ್ಟು ಜನ್ರುಗೆ ನಶೆ ತೋರುಸ್ದೇಯಿರಾದು ಹೆಂಗೆ ಅಂತಂದ್ರು. ಎಲ್ಲಾರ್ಗೂ ಎಣ್ಣೆನಾಗೇ ಸ್ನಾನ ಮಾಡ್ಸುದ್ರು. ಕುಡ್ದೋರು ನಿಶೆ ಹತ್ಬುಟ್ಟು ಮಲ್ಲಿಕ್ಕಂಬುಟ್ರು. ಎದ್ದು ನೋಡೋ ವೋತ್ಗೆ ವೋಟಾಕೋ ಟೇಮು ಮುಗ್ದೋಗಿತ್ತು. ಹಿಂಗಾಗ್ಬುಟ್ಟು ರೇಣ್ಕಪ್ಪ ವೊಗೆ ಹಾಕ್ಕಂಬುಟ್ರು ನೋಡಪ್ಪ. ಎಲ್ಲಾರ ಹಾಳಾಗೋಗ್ಲಿ, ನನ್ ನೋವು ಯಾರ್ತವ ಯೋಳ್ಕಳಾದೋ ಮೂದೇವಿ' ಅಂತೇಳ್ದ ಮೈಲಾರಿ. 'ಥೂ ನಿನ್ ಜನ್ಮುಕ್ಕೆ ಇಷ್ಟು ಬೆಂಕಿ ಹಾಕ, ಏನೋ ಯೋಳ್ತನೆ ಅಂದ್ರೆ ಇದುನ್ನ ಯೋಳ್ತಾಯಿದ್ದೀಯ. ನಿನ್ ಮಾತು ಕೇಳ್ಕಂಡು ನಾನು ಕೂತಿದ್ದೀನಲ್ಲ. ನಾನು ಬತ್ತೀನಿ ಕಣಪ್ಪ, ಮನ್ಯಾಗೆ ಮಖ ತೊಳ್ಕಂಡ್ರು ವೊರುಸ್ಕಳಕ್ಕೆ ಟವಲ್ಲು ಇಲ್ಲ, ಪ್ಯಾಟೆಗೋಗಿ ತಕ್ಕಂಡು ಬತ್ತೀನಿ'ಅಂತೇಳಿ ಅಮಾಸೆ ಎದ್ದ.
'ಲೇ ದಡ್ ನನ್ ಮಗ್ನೇ ಪ್ಯಾಟೆನಾಗಿರೋ ಬಟ್ಟೆ ಅಂಗ್ಡಿನಾಗೆ ವೊಂದೇ ವೊಂದು ಟವಲ್ಲೂ ಸಿಗಂಗಿಲ್ಲ ನಿಂಗೆ. ಎಲ್ಲಾನೂವೆ ಕೈ ಪಕ್ಸುದೋರು ವೊತ್ಕಂಡು ವೋಬುಟ್ಟವ್ರೆ' ಅಂದ ಮೈಲಾರಿ.
'ಅವ್ರುಗೆ ಯಾಕಲೇ ಟವಲ್ಲು?' ಅಂತೇಳಿ ಅಮಾಸೆ ಕೇಳ್ದ. 'ಇದೇನಲೇ ಹಿಂಗೆ ಕೇಳ್ತಾಯಿದ್ದೀಯ. ಕೈ ಪಕ್ಸುದ್ದೇ ಅಲ್ವೇನ್ಲಾ ಈವಾಗ ಸರ್ಕಾರ ಬತ್ತಾಯಿರಾದು. ಅಲ್ಲಿರೋದು 33 ಮಂತ್ರಿ ಪೋಸ್ಟು, ಗೆದ್ದಿರೋ 120 ಸಾಸ್ಕರೂ ಅದುಕ್ಕೆ ಟ್ರೈ ಮಾಡ್ತಾವ್ರೆ. ಅದುಕ್ಕೆ ಅಂತೇಳಿ ಎಲ್ಲಾರೂ ವೋಗಿ ವೋಗಿ ಮಂತ್ರಿ ಸೀಟ್ಗೆ ಟವಲ್ಲು ಹಾಕ್ತಾವ್ರಂತೆ. ಅದುಕ್ಕೆ ಕಣ್ಲಾ ಟವಲ್ಲು ಖಾಲಿ ಆಗೋಗಿರಾದು' ಅಂತೇಳ್ದ ಮೈಲಾರಿ.
'ಅಲ್ಲ ಮೈಲಾರಿ ಬಸ್ನಾಗೆ ಕೂತ್ಕಳಕ್ಕೆ ಸೀಟು ಬೇಕು ಅಂದ್ರೆ ಟವಲ್ಲು ಹಾಕ್ತಾರೆ. ಅದೇನ್ಲಾ ಮಂತ್ರಿ ಪೋಸ್ಟ್ಗೂ ಟವಲ್ಲು ಹಾಕಾದು' ಅಂತಂದ ಅಮಾಸೆ. 'ಅದು ಹಂಗೇ ಕಣ್ಲಾ, ಯಾರು ಮೊದ್ಲು ವೋಗಿ ಟವಲ್ಲು ಹಾಕ್ತಾರೋ ಅವ್ರುಗೇಯಾ ಸೀಟು ತಿಳೀತಾ?' ಅಂತೇಳ್ದ ಮೈಲಾರಿ.
'ಹಂಗರೆ ಸಿಎಂ ಪೋಸ್ಟ್ಗೆ ಖರ್ಗೆಯೋರು ಟವಲ್ಲು ಹಾಕಿರ್ಲಿಲ್ವಾ ಅವ್ರುಗೆ ಯಾಕೆ ಸೀಟು ಸಿಕ್ಕಿಲ್ಲ ?'ಅಂತ ಅಮಾಸೆ ಕೇಳ್ದ. 'ಸಿಎಂ ಪೋಸ್ಟು ಯಾರ್ಗೆ ಬೇಕೋ ಅವ್ರು ಟವಲ್ಲು ತಂದಾಕ್ಕಳಿ' ಅಂತ ಲೀಡ್ರುಸು ಯೋಳಿದ್ರಂತೆ. ಖರ್ಗೆಯೋರು ಟವಲ್ಲು ತಂದು ಹಾಕೋವೊತ್ಗೆ ಸಿದ್ದಣ್ಣ ಮಡ್ಗಿದ್ರಂತೆ' ಅಂದ ಮೈಲಾರಿ. 'ಹೌದಾ? ಅವ್ರುಗೆ ಟವಲ್ಲು ಎಲ್ಲಿಂದ ಸಿಕ್ತು ಅಷ್ಟು ಅರ್ಜೆಂಟಾಗಿ?' ಅಂತ ಅಮಾಸೆ ಕೇಳ್ದ. 'ಅವ್ರು ಹೆಗ್ಲುಮ್ಯಾಲೆ ಯಾವಾಗ್ಲೂ ಟವಲ್ಲು ಹಾಕ್ಕಂಡಿರಲ್ವಾ? ಅದುನ್ನೇ ತಗ್ದು ಸೀಟು ಮ್ಯಾಲೆ ಮಡ್ಗಿದ್ರು ತಿಳೀತಾ?' ಅಂದ ಮೈಲಾರಿ.
'ವೋಗ್ಲಿ ಬುಡ್ಲಾ, ಕೈ ಪಕ್ಸುದೋರಿಂದ ಟವಲ್ಲು ಮಾರೋರು ವುದ್ಧಾರ ಆಯ್ತರೆ. ನಡೀಲಾ ಮನೆಗೋಗವ ವೊಟ್ಟೆ ಹಸೀತಾದೆ. ವುಂಡ್ಬುಟ್ಟು ದಬ್ಬಾಕ್ಕಳಾವ' ಅಂತೇಳಿ ಮೈಲಾರಿನ ಕರ್ಕಂಡು ಅಮಾಸೆ ವೊಂಟ.
-ಕೆ.ವಿ.ಪ್ರಭಾಕರ್
prabhukolar@yahoo.com