ಕರ್ನಾಟಕ ಫಲಿತಾಂಶದ ಕುರಿತ ಆಡ್ವಾಣಿ ಟೀಕೆ ನುಣುಚಿಕೊಳ್ಳುವಿಕೆಯಲ್ಲವೇ?
ಬಿಜೆಪಿಯ ಅಗ್ರನಾಯಕ ಎಲ್. ಕೆ. ಆಡ್ವಾಣಿ ಅವರು ಯಡಿಯೂರಪ್ಪನವರ ಮೇಲೆ ಅಭಿಮಾನ ಇರಿಸಿಕೊಂಡಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವೈಫಲ್ಯ ತಮಗೇನೂ ಅಚ್ಚರಿ ತಂದಿಲ್ಲ ಎಂದು ಅವರು ತಮ್ಮ ಬ್ಲಾಗ್ ಬರಹದಲ್ಲಿ ದಾಖಲಿಸಿದ್ದಾರೆ. ಹೀಗೆ ಟೀಕೆ ಮಾಡುವ ಸಂದರ್ಭದಲ್ಲಿ ಅವರು ಯಡಿಯೂರಪ್ಪ ಅವರನ್ನು ಯಡ್ಡಿ ಎಂದೇ ಸಂಬೋಧಿಸುವಷ್ಟರ ಮಟ್ಟಿಗೆ ಮೃದುತ್ವ ತೊರೆದಿದ್ದಾರೆ.
ಅನಂತ್ ಕುಮಾರ್ ಅವರೊಂದಿಗಿನ ಜುಗಲ್ಬಂದಿಯಲ್ಲಿ ಯಡಿಯೂರಪ್ಪನವರಿಗೆ ಬಾಗಿಲು ತೋರಿಸಿದ್ದೇ ದಕ್ಷಿಣ ಭಾರತದ ಪ್ರಥಮ ಬಿಜೆಪಿ ಸರ್ಕಾರವನ್ನು ಕಳೆದುಕೊಳ್ಳುವುದಕ್ಕೆ ಕಾರಣವಾಯಿತು ಎಂಬ ಕೆಲ ಪತ್ರಕರ್ತರ ವಿಶ್ಲೇಷಣೆಗೆ ಅವರೊಂದು ದುರ್ಬಲ ಪ್ರತಿವಾದವನ್ನು ಮಂಡಿಸಿದ್ದಾರೆ. ಕೆಜೆಪಿಯನ್ನು ಸ್ಥಾಪಿಸುವುದಕ್ಕಾಗಿ ಯಡಿಯೂರಪ್ಪನವರೇ ಬಿಜೆಪಿಯನ್ನು ತೊರೆದರು ಎಂಬ ತಾಂತ್ರಿಕ ವಿವರಗಳನ್ನಿಟ್ಟುಕೊಂಡು ಅವರು ರಕ್ಷಣಾತ್ಮಕ ಮಾತುಗಳನ್ನು ಆಡುತ್ತಾರೆ. ಮಾಜಿ ಮುಖ್ಯಮಂತ್ರಿ 'ಅತಿಯಾದ ಭ್ರಷ್ಟಾಚಾರ'ದಲ್ಲಿ ತೊಡಗಿಕೊಂಡಿದ್ದಾಗಲೂ ಅವರ ವಿರುದ್ಧ ಕ್ರಮ ಜರುಗಿಸುವುದಕ್ಕೆ ನಿಧಾನಿಸಿದ ಪಕ್ಷದ ಸಹೋದ್ಯೋಗಿಗಳನ್ನು ಅವರು ಟೀಕಿಸಿದ್ದಾರೆ. ಹಲವಾರು ತಿಂಗಳುಗಳ ಕಾಲ ಯಡಿಯೂರಪ್ಪ ಅವರನ್ನು ಸಂತುಷ್ಟಗೊಳಿಸುವುದಕ್ಕೆ ನಡೆದ ಪ್ರಯತ್ನಗಳಿಗೆ ತಮ್ಮ ವಿರೋಧ ಇತ್ತೆಂಬುದು ಅವರ ಅಂಬೋಣ. ಬಿಜೆಪಿಯು ಕರ್ನಾಟಕದ ವಿದ್ಯಮಾನಗಳನ್ನು ನಿರ್ವಹಿಸಿದ ರೀತಿ ಸಂಪೂರ್ಣ 'ಅವಕಾಶವಾದಿತನ'ದಿಂದ ಕೂಡಿತ್ತು ಎಂಬುದು ಅವರ ಅಭಿಪ್ರಾಯ. ಕರ್ನಾಟಕದ ಪರಿಸ್ಥಿತಿಗೆ ಪಕ್ಷವು ನೀಡಿದ ಪ್ರತಿಸ್ಪಂದನವನ್ನು ಸಣ್ಣದೊಂದು ತಪ್ಪು ನಿರ್ಧಾರ ಎನ್ನುವುದಕ್ಕೆ ಸಾಧ್ಯವಾಗದು ಎಂಬುದು ಆಡ್ವಾಣಿ ನಿಲವು.
ಪ್ರಾಮಾಣಿಕತೆಯಲ್ಲಿ ರಾಜಿ ಮಾಡಿಕೊಳ್ಳುವುದಕ್ಕಿಂತ ಸರ್ಕಾರವನ್ನು ಕಳೆದುಕೊಳ್ಳುವುದೇ ಮೇಲು ಎನ್ನುವ ಧ್ವನಿ ಹೊರಡಿಸುವ ಮೂಲಕ ಕರ್ನಾಟಕದ ವಿಷಯದಲ್ಲಿ ಎಲ್. ಕೆ. ಆಡ್ವಾಣಿಯವರು ನೈತಿಕ ಮೇಲ್ಮಟ್ಟವನ್ನು ಕಾಪಾಡಿಕೊಳ್ಳುವುದಕ್ಕೆ ಮಾಡುತ್ತಿರುವ ಸ್ಪಷ್ಟ ಪ್ರಯತ್ನ ಇದಾಗಿದೆ. ಅದಕ್ಕಾಗಿ ಅವರನ್ನು ಗೌರವಿಸೋಣ, ಅಭಿನಂದಿಸೋಣ. ಆದರೆ 2008ಕ್ಕೆ ಮರಳಿ ಮೆಲುಕು ಹಾಕುವ ಪ್ರಯತ್ನವನ್ನು ಮಾಡಿದ್ದೇ ಆದಲ್ಲಿ ಆಡ್ವಾಣಿಯವರ ಈ ಬ್ಲಾಗ್ ಬರಹವು ತಮ್ಮ ಪಕ್ಷದ ರಾಜಕೀಯ ದುರಂತದಲ್ಲಿ ವೈಯಕ್ತಿಕ ಮೈಲೇಜ್ ಗಿಟ್ಟಿಸಿಕೊಳ್ಳುವ ಯತ್ನವಾಗಿ ಕಾಣುತ್ತದೆ ಅಷ್ಟೆ.
2008ರಲ್ಲಿ ಪಕ್ಷದ ಹೈಕಮಾಂಡ್ ಸಮ್ಮತಿಯೊಂದಿಗೇ 'ಆಪರೇಷನ್ ಕಮಲ' ಶುರುವಾದಾಗ ಆಡ್ವಾಣಿ ಎಲ್ಲಿದ್ದರು? ಹಾಗೆ ರಾಜಕೀಯ ಬಣ್ಣ ಬದಲಿಸಿದ್ದು ಧರ್ಮಾರ್ಥ ಕಾರಣಕ್ಕಂತೂ ಅಲ್ಲವಲ್ಲ? 110 ಶಾಸಕರನ್ನು ಹೊಂದಿ ಸರಳ ಬಹುಮತಕ್ಕೆ ಕೆಲವೇ ಸ್ಥಾನಗಳ ಕೊರತೆ ಎದುರಿಸಿದಾಗ ಆಗಿನ ಬಿಜೆಪಿ ಸರ್ಕಾರ ರಚನೆಗೆ ಒತ್ತಾಸೆಯಾಗಿ ಬಂದವರು ರೆಡ್ಡಿ ಸಹೋದರರು. ಬಳ್ಳಾರಿ ಸಹೋದರರಲ್ಲಿ ಎರಡನೆಯವರಾಗಿರುವ ಗಾಲಿ ಸೋಮಶೇಖರ ರೆಡ್ಡಿ ಅದನ್ನು ಸ್ಪಷ್ಟವಾಗಿಯೇ ಹೇಳುತ್ತಾರೆ. ಗಾಲಿ ಜನಾರ್ದನ ರೆಡ್ಡಿಯವರ ಹಣಕಾಸು ಬಲವಿಲ್ಲದಿದ್ದರೆ ಕರ್ನಾಟಕದಲ್ಲಿ ಕಮಲ ಅರಳುತ್ತಲೇ ಇರಲಿಲ್ಲ ಎಂದು. ಬಿಜೆಪಿ ಸರ್ಕಾರದ ರಚನೆಗೆ ಇಂಬು ಕೊಟ್ಟಿದ್ದು ರೆಡ್ಡಿ ಸಹೋದರರ ಕಳಂಕಿತ ಹಣ ಎಂಬುದು ಆಡ್ವಾಣಿಯವರಿಗೆ ಆಗ ಗೊತ್ತಿರಲಿಲ್ಲವೇ? ಆಗವರು ಈ ಬಗ್ಗೆ ಪ್ರತಿಭಟಿಸಿದರೇ? ಇಲ್ಲವೆಂದಾದರೆ ಏಕೆ?
ಹೀಗಾಗಿಯೇ ಆಡ್ವಾಣಿಯವರ ಬ್ಲಾಗ್ ಬರಹ ಒಂದು ಬೂಟಾಟಿಕೆ ಎಂದು ಹೇಳಬೇಕಾಗುತ್ತದೆ. ರೆಡ್ಡಿ ಸಹೋದರರ ಆಟಾಟೋಪಗಳಿಗೆ ಇದೇ ಪಕ್ಷ ಕುರುಡುಗಣ್ಣು ತೋರಿತು. ಏಕೆಂದರೆ ಆಗದಕ್ಕೆ ಅವರ ಹಣಬಲ ಬೇಕಾಗಿತ್ತು. ಇದಕ್ಕಿಂತ ಹೆಚ್ಚಾಗಿ, ಜನಾರ್ದನ ರೆಡ್ಡಿ ಹಾಗೂ ಕರುಣಾಕರ ರೆಡ್ಡಿ ಅವರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಂಡಿತು. ಹಾಗಾದರೆ ಆಡ್ವಾಣಿಯವರೇ... ರೆಡ್ಡಿ ಭ್ರಷ್ಟಾಚಾರ ಒಕೆ, ಆದರೆ ಯಡಿಯೂರಪ್ಪ ಭ್ರಷ್ಟಾಚಾರ ಸಮ್ಮತವಲ್ಲ ಎಂಬುದು ತಮ್ಮ ನಿಲವೇ? ಪಾರ್ಟಿ ವಿತ್ ಡಿಫರೆನ್ಸ್ ಎಂದು ಕರೆದುಕೊಳ್ಳುವ ನಿಮ್ಮ ಪಕ್ಷ ಅದರ ಅರ್ಥವನ್ನು ಬೇರೆ ಬೇರೆ ಭ್ರಷ್ಟಾಚಾರಗಳಿಗೆ ವಿಭಿನ್ನ ಮಾನದಂಡ ಎಂಬುದಕ್ಕೆ ಸೀಮಿತವಾಗಿರಿಸಿಲ್ಲ ತಾನೇ?
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಪದವಿ ತೊರೆಯುವಂತೆ ಬಲವಂತದ ವಾತಾವರಣ ಹೇಗೆ ನಿರ್ಮಿಸಲಾಯಿತೋ ಅಂತೆಯೇ ಅಕ್ರಮ ಗಣಿಗಾರಿಕೆಯಲ್ಲಿ ಸಿಬಿಐ ಬಂಧನಕ್ಕೊಳಗಾದ ಜನಾರ್ದನ ರೆಡ್ಡಿ ಹೈದರಾಬಾದ್ ಕಾರಾಗೃಹ ಸೇರುತ್ತಿದ್ದಂತೆಯೇ ಪಕ್ಷ ರೆಡ್ಡಿ ಸಹೋದರರಿಂದಲೂ ದೂರ ಸರಿಯಿತು. ಆಡ್ವಾಣಿಯವರ ಅಚ್ಚುಮೆಚ್ಚಿನ ಸಹೋದ್ಯೋಗಿ ಸುಷ್ಮಾ ಸ್ವರಾಜ್ ಒಂದೊಮ್ಮೆ ರೆಡ್ಡಿ ಸಹೋದರರ ಬಳ್ಳಾರಿ ಮನೆಗೆ ಕಾಯಂ ಸಂದರ್ಶಕಿ ಆಗಿದ್ದರು. ದೆಹಲಿಯಲ್ಲಿ ಕುಳಿತು ರೆಡ್ಡಿ ಸಹೋದರರಿಗೆ ಗಾಡ್ಮದರ್ ಆಗಿ ಕಾರ್ಯನಿರ್ವಹಿಸಿದ ತಾಯಿ ಸುಷ್ಮ, ಯಾವಾಗ ಜನಾರ್ದನರೆಡ್ಡಿ ವಿಚಾರಣಾಧೀನ ಕೈದಿ ಆದರೋ ಆಗ ತಮ್ಮ ಆಶೀರ್ವಾದ ಹಿಂತೆಗೆದುಕೊಂಡರು. ನಿಜ, ಬಳ್ಳಾರಿಯನ್ನು ದೋಚಿರುವ ಪ್ರಮಾಣ ಗಣನೆಗೆ ತೆಗೆದುಕೊಂಡಾಗ ಅವರಿಗೆ ಅಂಥ ಸನ್ನಿವೇಶ ಒದಗಿದ್ದರಲ್ಲಿ ವಿಷಾದವೇನಿಲ್ಲ. ಆದರೆ ಆಡ್ವಾಣಿಯವರ ಬಿಜೆಪಿಯೂ ಈ ಒಟ್ಟಾರೆ ವಿದ್ಯಮಾನದಲ್ಲಿ 'ಬಳಸಿ ಬಿಸಾಕುವ' ನೀತಿಯನ್ನು ಅನುಸರಿಸಿದೆ ಎಂಬುದರಲ್ಲಿ ಅನುಮಾನವಿಲ್ಲ. ರೆಡ್ಡಿ ಸಹೋದರರ ಅಂಗಿಗೆ ಗಣಿಧೂಳು ಮೆತ್ತಿಕೊಂಡಿದೆ ಎಂದಾದರೆ ಆ ಮಣ್ಣಿನ ಸ್ವಲ್ಪ ಪ್ರಮಾಣ ಅವರನ್ನು ಅಪ್ಪಿಕೊಂಡ ನಿಮ್ಮ ಕುರ್ತಾಕ್ಕೂ ತಾಗಿಯೇ ಇರುತ್ತದಲ್ಲವೇ ಆಡ್ವಾಣಿಜೀ?
ಬಿಜೆಪಿಯಿಂದ ಕರ್ನಾಟಕ ಜನತೆ ಬೃಹತ್ ನಿರೀಕ್ಷೆ ಇಟ್ಟುಕೊಂಡಿದ್ದರು ಎಂಬ ಆಡ್ವಾಣಿಯವರ ಮಾತು ಒಪ್ಪುವಂಥದ್ದು. ಭರವಸೆಗಳ ಬೆಟ್ಟ ಎದುರಿಗೆ ಇರಿಸಿಕೊಂಡು 2008ರಲ್ಲಿ ಜನರು ನಿಮ್ಮ ಪಕ್ಷವನ್ನು ಆರಿಸಿದ್ದರು. ಈ ಬಾರಿ ಬಿಜೆಪಿ ಸೋತಿದೆ ಎಂದಾದರೆ ಅದು ಯಡಿಯೂರಪ್ಪ ಅವರಿಂದಷ್ಟೇ ಅಲ್ಲ. ಕರ್ನಾಟಕದಲ್ಲಿ ಮ್ಯಾಚ್ ಫಿಕ್ಸಿಂಗ್ನೊಂದಿಗೇ ನೀವು ಇನ್ನಿಂಗ್ಸ್ ಆರಂಭಿಸಿದಿರಿ ಎಂಬುದೂ ಸೋಲಿಗೆ ಕಾರಣ. ದಕ್ಷತೆಯಿಂದ ಆಡಳಿತ ನಿರ್ವಹಿಸುವ ಸರ್ಕಾರವನ್ನು ನೀಡುವುದಕ್ಕೆ ಬಿಜೆಪಿ ಸೋತಿತು ಎಂಬುದೂ ಸೋಲಿಗೆ ಕಾರಣವಾಗುತ್ತದೆ. ಬಿಜೆಪಿಯ ಒಳಜಗಳಗಳು, ರೆಸಾರ್ಟ್ ರಾಜಕಾರಣ, ರಾಜಕೀಯ ಅಸ್ಥಿರತೆ ಇವೆಲ್ಲವಕ್ಕೂ ನೀಡಿದ ಉತ್ತರ ಇದು. ಗುಜರಾತ್ ಹಾಗೂ ಛತ್ತೀಸ್ಗಢ ರಾಜ್ಯಗಳಲ್ಲಿರುವಂತೆ ಅಭಿವೃದ್ಧಿ ವ್ಯಾಖ್ಯಾನದೊಂದಿಗೆ ಮೇಳೈಸಿಕೊಂಡ ಸರ್ಕಾರವನ್ನು ಕರ್ನಾಟಕದಲ್ಲಿ ನೀಡುವುದಕ್ಕೆ ಬಿಜೆಪಿಗೆ ಸಾಧ್ಯವಾಗದೇ ಹೋಗಿದ್ದು ಸೋಲಿಗೆ ಕಾರಣಗಳಲ್ಲಿ ಒಂದು.
ರಾಜಕೀಯ ನಿರ್ವಹಣೆಯಲ್ಲಿ ಬಿಜೆಪಿ ದಯನೀಯವಾಗಿ ಸೋತುಬಿಟ್ಟಿತು. ಪ್ರಾದೇಶಿಕವಾಗಿ ತುಂಬ ಬಲಾಢ್ಯರಾಗಿರುವ ಯಡಿಯೂರಪ್ಪ ಅಂಥವರನ್ನು ಹೇಗೆ ನಾಜೂಕಿನಿಂದ ನಡೆಸಿಕೊಳ್ಳಬೇಕು ಎಂಬುದು ಉನ್ನತ ಸ್ಥರದಲ್ಲಿರುವವರಿಗೆ ತಿಳಿಯಲೇ ಇಲ್ಲ. ಅವರು ಯಾವ ಮಟ್ಟಕ್ಕೆ ಬೆಳೆದರೆಂದರೆ ಯಡಿಯೂರಪ್ಪ ಇಲ್ಲದೇ ಬಿಜೆಪಿ ಜೀರೊ ಆಗಿಬಿಡುವುದು ಎಂದು ನಂಬುವಷ್ಟರಮಟ್ಟಿಗೆ. ನೇಪಥ್ಯದಲ್ಲಿ ನಿಂತು ಅನಂತ್ಕುಮಾರ್ ಅಂಥವರಿಗೆರಾಜಕೀಯ ಮಾಡುವುದಕ್ಕೆ ಬಿಟ್ಟಿದ್ದು ಯಡಿಯೂರಪ್ಪನವರಿಗೆ ಕೆಂಪುವಸ್ತ್ರ ತೋರಿಸಿ ಪಿತ್ತ ಕೆಣಕಿಸಿದಂತೆ ಆಯಿತು. ಇದರಿಂದಾಗಿ ಯಡಿಯೂರಪ್ಪನವರಂಥ ಬಿಜೆಪಿ ನಿಷ್ಠಾವಂತ ವೈರಿಯಾಗಿ ಮಾರ್ಪಾಟಾಗಿ ಚುನಾವಣೆಯಲ್ಲಿ ತಮ್ಮ ಹಾಗೂ ಬಿಜೆಪಿ ಎರಡರ ನಾಶಕ್ಕೂ ಕಾರಣವಾಗಿದ್ದರಲ್ಲಿ ಆಶ್ಚರ್ಯವೇನಿದೆ?
ಬಹುಶಃ ಆಡ್ವಾಣಿ ಅವರು ತಮ್ಮ ಬ್ಲಾಗ್ ಬರಹದಲ್ಲಿ ಯಡಿಯೂರಪ್ಪ ಅವರನ್ನು ತೀಕ್ಷ್ಣವಾಗಿ ಟೀಕಿಸಿರುವುದರಲ್ಲಿ ಇನ್ನೊಂದು ಕಾರ್ಯತಂತ್ರವೂ ಇದ್ದಿರಬಹುದು. ಭಾರೀ ಸೋಲಿನ ನಂತರ ಯಡಿಯೂರಪ್ಪ ಮತ್ತೆ ಬಿಜೆಪಿ ತೆಕ್ಕೆ ಸೇರಲಿದ್ದಾರೆ ಎಂಬ ಗುಸುಗುಸು ಹಬ್ಬುತ್ತಿರುವಾಗ ಆ ಧ್ವನಿ ಮತ್ತಷ್ಟು ಗಟ್ಟಿಯಾಗದಂತೆ ತಡೆಯುವ ಯತ್ನವೂ ಅವರದ್ದಾಗಿರಬಹುದು.
ಇನ್ನು, ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ಯಾವೆಲ್ಲ ಅಂಶಗಳು ಕೆಲಸ ನಿರ್ವಹಿಸಿದವೋ ಅದು ಕೇಂದ್ರದ ಮಟ್ಟದಲ್ಲಿ ಯುಪಿಎ ಸರ್ಕಾರದ ವಿರುದ್ಧವೂ ಆಗುತ್ತದೆ ಎಂಬುದು ಆಡ್ವಾಣಿ ಪ್ರತಿಪಾದನೆ. ಸಾಧ್ಯತೆಯೇನೋ ಇದೆ. ಏಕೆಂದರೆ ಕರ್ನಾಟಕದಲ್ಲಿ ಬಿಜೆಪಿ ಎಸಗಿದ ಪ್ರಮಾದಗಳನ್ನೇ ಕಾಂಗ್ರೆಸ್ ಎಸಗುತ್ತದೆ. ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಇರಬೇಕು ಎಂದು ಪ್ರತಿಪಾದಿಸುವ ಆಡ್ವಾಣಿಯಂಥವರು ನಮಗೆ ಇನ್ನಷ್ಟು ಮಂದಿ ಸಿಗಲಿ. ಆದರೆ ಆ ಪ್ರತಿಪಾದನೆ ಕಾಲ ಕಾಲಕ್ಕೆ ಆಗುತ್ತಿರಬೇಕು ಹಾಗೂ ಅದರಲ್ಲಿ ಸ್ಥಿರತೆ ಇರಬೇಕು. ಇಲ್ಲದಿದ್ದರೆ ಇಂಡಿಯನ್ ಪೊಲಿಟಿಕಲ್ ಲೀಗ್ನಲ್ಲಿ ಅಂಪೈರ್ಗಳನ್ನು (ಜನತೆ) ಖುಷಿಪಡಿಸಲಾಗದು.
- ಟಿ ಎಸ್ ಸುಧೀರ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

