ಚಿಲಕವಿಲ್ಲದ ಶೌಚಾಲಯ, ಬೆಳಕಿಲ್ಲದ ಬಲ್ಬುಗಳು ಚುನಾವಣಾ ಕರ್ತವ್ಯನಿರತ ಸಿಬ್ಬಂದಿ ಪಾಡೇನು?
'ಮತದಾನ ಪ್ರಕ್ರಿಯೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, 200 ಕೋಟಿಯಷ್ಟು ರುಪಾಯಿ ಚುನಾವಣಾ ವೆಚ್ಚಕ್ಕೆ ಬಿಡುಗಡೆಯಾಗಿದೆ' ಎಂದು ಚುನಾವಣೆಗೆ ಮೊದಲು ವರದಿಯಾಗಿತ್ತು. "ಚುನಾವಣಾ ಮತಗಟ್ಟೆಗಳು (ಬೂತ್ಗಳು) ಸಮರ್ಪಕವಾಗಿರುತ್ತವೆ. ಚುನಾವಣಾ ಕರ್ತವ್ಯನಿರತ ಸಿಬ್ಬಂದಿಗೆ ಮೂಲಭೂತ ಸೌಕರ್ಯಗಳು ಸಿಗುವ ವ್ಯವಸ್ಥೆ ಎಲ್ಲೆಡೆಯಲ್ಲಿಯೂ ಮಾಡಲಾಗಿದೆ" ಎಂದು ಚುನಾವಣಾ ಆಯೋಗ ಢಾಣಾಢಂಗುರವಾಗಿ ಸಾರಿತ್ತು. ಕುಡಿಯವ ನೀರು ಮುಂತಾದ ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದಾರೆ ಎಂದು ನಮಗೆ ಚುನಾವಣಾ ಕರ್ತವ್ಯ ತರಬೇತಿಯಲ್ಲೂ ತಿಳಿಸಿದ್ದರು. ಪತ್ರಿಕೆಗಳಲ್ಲೂ ಪ್ರಚಾರ ಮಾಡಿದ್ದರು. ಆದರೆ ನಾನು ಹೋದ ಸ್ಥಳದಲ್ಲಿನ ಮತಗಟ್ಟೆಯ ವ್ಯವಸ್ಥೆ ನೋಡಿ ಗರಬಡಿದ ಸ್ಥಿತಿ ನಮ್ಮೆಲ್ಲರದು.
ಗೋಡೆಗಳಲ್ಲಿ ಜೊಂಪೆ-ಜೊಂಪೆಯಾಗಿ ನೇತಾಡುತ್ತಿದ್ದ ಜೇಡರ ಬಲೆಗಳು, ಧೂಳು, ಕಸ-ಕಡ್ಡಿಗಳಿಂದ ತುಂಬಿದ ನೆಲ. ಮೂರಿಂಚು ದಪ್ಪಕ್ಕೆ ಆವರಿಸಿದ ಕುರ್ಚಿ-ಮೇಜುಗಳು, ಡೆಸ್ಕು -ಬೆಂಚುಗಳು. ತಮ್ಮ ತಮ್ಮ ಬಟ್ಟೆಬರೆಯ ಲಗೇಜ್ ಚುನಾವಣಾ ಪೆಟ್ಟಿಗೆಗಳೆಲ್ಲವನ್ನೂ ಹೊತ್ತು ಸಹಾಯಕ್ಕೆ ಡಿಗ್ರೂಪ್ ನೌಕರನೂ ಇಲ್ಲದ ಇಬ್ಬರು ಮಹಿಳೆಯರೂ ಸೇರಿದಂತೆ, ನಾಲ್ಕು ಮಂದಿ ಚುನಾವಣಾಧಿಕಾರಿಗಳ ತಂಡಕ್ಕೆ (ಕರ್ತವ್ಯನಿರತ ಸಿಬ್ಬಂದಿಗಳು) ಬೆಪ್ಪುಬಡಿದು ಹೋಯಿತು. ಬೆಳ್ಳಂಬೆಳಗ್ಗೆ ಹೊರಟು, ದೂರದೂರುಗಳಿಂದ ಪಯಣಿಸಿ, ಮಸ್ಟರಿಂಗ್ ಕೇಂದ್ರದಲ್ಲಿ ಹತ್ತಾರು ಸಾಮಗ್ರಿಗಳನ್ನು ಪರಿಶೀಲಿಸಿ ಲಗೇಜ್ ಹೊತ್ತು ಉರಿಬಿಸಿಲಿನ ಮಧ್ಯಾಹ್ನ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಮ್ಮ ಪಾಲಿನ ಚುನಾವಣಾ ಕರ್ತವ್ಯದ ಮತಗಟ್ಟೆಯಾಗಿ ಲಭಿಸಿದ ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಅಜ್ಜಾವರ ಇಲ್ಲಿ ತಲುಪಲಾಗಿ ನಮಗೆ ಕೂರಲೂ ಒಂದೆಡೆ ಸ್ವಚ್ಛ ಸ್ಥಳವೂ ಸಿಗದೇ, ಕುಡಿಯಲು ಶುದ್ಧ ನೀರೂ ಇಲ್ಲದೇ ಪರದಾಡಬೇಕಾದ ಸ್ಥಿತಿ.
ಆ ಮತಗಟ್ಟೆಯ ಶಾಲಾ ಮುಖ್ಯೋಪಾಧ್ಯಾಯರನ್ನು ಈ ಬಗ್ಗೆ ಕೇಳಲಾಗಿ, "ನಾನಿದಕ್ಕೆ ಜವಾಬ್ದಾರನಲ್ಲ. ನನ್ನ ಪ್ರಾಯ ನೋಡಿ ಮಾತನಾಡಿ" (ನಿವೃತ್ತಿಗೆ ಸಮೀಪ) ಎನ್ನುವ ಉತ್ತರ. ಬಿಎಲ್ಓಗೆ ಫೋನ್ ಮಾಡಿದರೆ ಎಷ್ಟೋ ಗಂಟೆಗಳ ನಂತರ ಬಂದು "ಮತದಾರರ ಗುರುತು ಪತ್ರ ಹಂಚುವ ಕೆಲಸವೇ ಮುಗಿದಿಲ್ಲ. ನಿನ್ನೆಯಿಂದ ನನ್ನ ಮನೆಗೂ ಹೋಗಿಲ್ಲ. ಬಟ್ಟೇನೂ ಬದಲಾಯಿಸಿಲ್ಲ. ನಾನೆಷ್ಟೆಂದು ನೋಡಿಕೊಳ್ಳಲಿ?" ಎಂದು ತಮ್ಮದೇ ಸಮಸ್ಯೆಗಳ ಪುಕಾರು. ಸೆಕ್ಟರ್ ಆಫೀಸರನ್ನು ಕೇಳಿದರೆ, ಸ್ಥಳೀಯ ನೌಕರನನ್ನು ನೇಮಿಸಿ, ಸುಧಾರಿಸಿಕೊಳ್ಳಿರೆನ್ನವ ಸಲಹೆ. ದೂರದ ಅಪರಿಚಿತ ಊರಿನಲ್ಲಿ ನಾವು ಯಾರನ್ನು ಕೇಳೋಣ? ಏನನ್ನು ಮಾಡೋಣ? ಯಾರಿದಕ್ಕೆಲ್ಲ ಉತ್ತರದಾಯಿತ್ವ?
ಚುನಾವಣಾ ಕರ್ತವ್ಯನಿರತ ಮತಗಟ್ಟೆ ಅಧಿಕಾರಿಗಳೇ ಪೊರಕೆ ಕೈಗೆತ್ತಿಕೊಂಡು, ಮೂಗುಮುಚ್ಚಿ, ಹಲ್ಲುಕಚ್ಚಿ ಒಂದಿಷ್ಟು ವ್ಯವಸ್ಥೆಗೊಳಿಸಿದರೆನ್ನಿ! ಮತ್ತೆ ತಲೆಯೆತ್ತಿ ನೋಡಿದರೆ ತಿರುಗದ ಫ್ಯಾನ್ಗಳು, ಒಂದೇ ಒಂದು ಬಲ್ಬು. ಅದೂ ಧೂಳು ಮೆತ್ತಿಕೊಂಡ ಕಡಿಮೆ ವೋಲ್ಟಿನ ಬಲ್ಬ್. ಮತಗಟ್ಟೆಯ ಸಿಬ್ಬಂದಿಗಳು ತಮ್ಮ ದೈಹಿಕ ಬಾಧೆಗಳು, ಬಾಯಾರಿಕೆ, ಹಸಿವು ಏನನ್ನೂ ಗಮನಿಸದೇ, ಸೂರ್ಯ ಮುಳುಗಿ ಕತ್ತಲಾಗುವ ಮುನ್ನ ಹತ್ತಾರು ಫಾರ್ಮು, ಕವರುಗಳನ್ನು ಬರೆದು ಮರುದಿನಕ್ಕೆ ಮತಗಟ್ಟೆಯನ್ನು ಅಣಿಗೊಳಿಸಬೇಕಾದ ಧಾವಂತ. ಇಷ್ಟರ ಬಳಿಕ ಸ್ನಾನಕ್ಕೆಂದು ನೀರು ಸಿಕ್ಕಿದರೆ ಪುಣ್ಯವೆಂದುಕೊಂಡಿದ್ದೆವು. ನೋಡಿದರೆ ಶೌಚಾಲಯಕ್ಕೆ ಚಿಲಕವಿಲ್ಲ. ಸ್ನಾನಕ್ಕೆ ಬಕೇಟಿಲ್ಲ. ಶೌಚಾಲಯಕ್ಕೆ ಬಣ್ಣ ಬಳಿದು ಉಳಿದ ಡಬ್ಬವೊಂದು ನೀರು ತುಂಬಲು ಸಿಕ್ಕಿದ್ದು ನಮ್ಮ ಅದೃಷ್ಟವೇ ಎನ್ನಬೇಕು.
ಮಲಗಲಾದೀತು ಎಂದು ಮಹಿಳಾ ಸಿಬ್ಬಂದಿ ಶಾಲಾ ಆಫೀಸ್ ರೂಮಿನ ಬಾಗಿಲು ತೆರೆದರೆ, ಅಲ್ಲೂ ಚಿಲಕವಿಲ್ಲದ ಬಾಗಿಲು, ಕಸ ತುಂಬಿ ತುಳುಕುವ ಬುಟ್ಟಿ. ಪತ್ರಿಕೆಗಳು, ಪುಸ್ತಕಗಳು ಹರಡಿದ ಮೇಜುಗಳು. ಮಾಡು ತುಂಬಿದ ಜೇಡರ ಬಲೆಗಳು. ಇದೇನು ಮುಚ್ಚಲ್ಪಟ್ಟ ಸರ್ಕಾರಿ ಶಾಲೆಯೇ ಎಂದು ಅನುಮಾನ ಬಂದು ಊರಿನವರನ್ನು ಕೇಳಿದರೆ, 1ರಿಂದ 7ನೇ ತರಗತಿ ತನಕ ಒಟ್ಟು 210 ಮಂದಿ ವಿದ್ಯಾರ್ಥಿಗಳಿರುವ ದೈಹಿಕ ಶಿಕ್ಷಕರೂ ಸೇರಿ ಏಳು ಮಂದಿ ಶಿಕ್ಷಕರಿರುವ ಮತ್ತೋರ್ವ ಭಡ್ತಿ ಹೊಂದಿದ ಮುಖ್ಯ ಶಿಕ್ಷಕರೂ ಇರುವ 80 ವರ್ಷಗಳ ಇತಿಹಾಸವಿರುವ ಶಾಲೆ!
ಹೀಗೆ ಒಂದೂ ವ್ಯವಸ್ಥೆಯೂ ಇಲ್ಲದ ಕಡೆ ಹೋಗಿ, ಮತಗಟ್ಟೆಯ ಚುನಾವಣಾ ಅಧಿಕಾರಿಗಳು ಅರ್ಧ ದಿನದೊಳಗೆ ಮತಗಟ್ಟೆಯನ್ನು ಸಿದ್ಧಪಡಿಸುವುದಾದರೂ ಹೇಗೆ? ನಾವೇನು ಪಂಚತಾರಾ ಹೋಟೆಲ್ನ ಸೌಲಭ್ಯ ಬೇಕೆಂದು ಕೇಳುತ್ತಿಲ್ಲ. ಕನಿಷ್ಟ ಮನುಷ್ಯ ವಾಸಯೋಗ್ಯ ಪರಿಸರವಿರಬೇಕಲ್ಲವೇ? ಎರಡು ದಿನಗಳ ಕಾಲ ಕುಡಿಯಲು ಯೋಗ್ಯ ನೀರು, ಉಣ್ಣಲು ಅಗತ್ಯದನುಸಾರ ಆಹಾರ ಸಿಗಬೇಕಲ್ಲವೇ? ಆರೋಗ್ಯ ಸಮಸ್ಯೆ ಇರುವವರಿಗೆ ಹಾಗೂ ಗರ್ಭಿಣಿಯರಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ಇದೆಯೆಂದು ಪತ್ರಿಕೆಗಳಲ್ಲಿ ಪ್ರಕಟಿಸಿದ್ದರೂ, ಅದು ಬಹುತೇಕ ಘೋಷಣೆಗೆ ಮಾತ್ರ ಸೀಮಿತವಾಗಿರುತ್ತದೆ. ಗಂಭೀರ ಕಾಯಿಲೆ ಮತ್ತು ತುಂಬು ಗರ್ಭಿಣಿಯರನ್ನು ಹೊರತುಪಡಿಸಿ ಉಳಿದಂತೆ, ಅಸ್ತಮಾ, ರಕ್ತದೊತ್ತಡ, ಮಧುಮೇಹ, ಗಂಟುನೋವುಗಳಿಂದ ಬಾಧಿಸಲ್ಪಡುವವರೆಲ್ಲ ತಮಗೊದಗಿದ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಲೇ ಬೇಕಾಗುತ್ತದೆ. ನಾಲ್ಕೈದು ತಿಂಗಳಾದ ಗರ್ಭಿಣಿಯರೂ, ಮುಟ್ಟಾದ ಮಹಿಳೆಯರೂ ಇರುತ್ತಾರೆ. ಈಗಂತೂ ಮಹಿಳಾ ಶಿಕ್ಷಕಿಯರೇ ಹೆಚ್ಚಿನ ಸಂಖ್ಯೆಯಲ್ಲಿರುವವರು. ಹೀಗಿರುವಾಗ ಶೌಚಾಲಯದಂತಹ ಕನಿಷ್ಟ ಮೂಲಭೂತ ಅವಶ್ಯಕತೆಯೂ ಸಮರ್ಪಕವಾಗಿಲ್ಲದಿದ್ದರೆ ಚುನಾವಣಾ ಸಿಬ್ಬಂದಿಗಳ ಪಾಡೇನು? ನಮ್ಮ ಪಾಡನ್ನು ಯಾರಲ್ಲಿ ಹೇಳಿಕೊಳ್ಳೋಣ?
ಮತದಾನದ ಪ್ರಮಾಣ ಹೆಚ್ಚಲು ಸ್ವೀಪ್ನಂತಹ ಆಂದೋಲನ ಹಮ್ಮಿಕೊಂಡಂತೆ ಚುನಾವಣಾ ಪ್ರಕ್ರಿಯೆಯ ಮುಖ್ಯ ಕೇಂದ್ರವಾದ ಮತಗಟ್ಟೆಗಳ ಸಮರ್ಪಕ ವ್ಯವಸ್ಥೆಗೆ ಕ್ರಮಗಳು ಜಾರಿ ಬಂದಾವೇ? ಅದು ಅಸಾಧ್ಯವಾದಲ್ಲಿ ಮಾಧ್ಯಮಗಳು ಮುಂದುವರಿದಿರುವ ಈ ಕಾಲದಲ್ಲಿ ಅಂಚೆಮತಗಳನ್ನಾದರೂ ಹೆಚ್ಚಿಸಿ ಸಾಧುವಲ್ಲದ ಈ ಬಹುಸಂಖ್ಯೆಯ ನೌಕರರ ಶೋಷಣೆಯನ್ನಾದರೂ ಕಡಿಮೆ ಮಾಡುವರೇ? ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡ ಸಿಬ್ಬಂದಿಗಳು ಒಂದು ತಿಂಗಳ ಮೊದಲೇ, ತಮ್ಮ ಕರ್ತವ್ಯ ನಿರ್ವಹಣೆಯ ದಯನೀಯ, ಶೋಚನೀಯ ಪರಿಸ್ಥಿತಿ ಬಗ್ಗೆ ಯೋಚಿಸಿ ನಿದ್ದೆಗೆಡದಂತೆ ಮುಂಬರುವ ಚುನಾವಣೆಗಳಲ್ಲಿಯಾದರೂ, ಮತಗಟ್ಟೆಗಳನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸಲಾಗುತ್ತದೆಯೆಂದು ಆಶಿಸೋಣವೇ? ಇಲ್ಲದೇ ಹೋದಲ್ಲಿ, ಮತದಾನಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಚುನಾವಣಾ ಆಯೋಗ ಹೇಳುವುದರ ಅರ್ಥವೇನು?
- ವಿದ್ಯಾ, ಕಾರ್ಕಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

