ಹೈಕಮಾಂಡ್ ಎಂಬ ನಿಗೂಢ, ಅಗೋಚರ ಶಕ್ತಿ!

ನಮ್ಮ ದೇಶದಲ್ಲಿ ಯಾವುದೇ ದಾಖಲೆಗಳಿಲ್ಲದೇ ಕೇವಲ ನಂಬಿಕೆಯ ಮೇಲೆ ನಡೆಯುವಂತಹ...
Updated on: 

ನಮ್ಮ ದೇಶದಲ್ಲಿ ಯಾವುದೇ ದಾಖಲೆಗಳಿಲ್ಲದೇ ಕೇವಲ ನಂಬಿಕೆಯ ಮೇಲೆ ನಡೆಯುವಂತಹ ವ್ಯವಸ್ಥೆಯೆಂದರೆ ಓಸಿ. ಅಂಗಡಿಯಾತ ಗೀಚಿಕೊಟ್ಟ ಚೀಟಿಯೇ ದಾಖಲೆ. ಓಸಿ ಎಂಬುದನ್ನು ಯಾರು ನಡೆಸುತ್ತಾರೆ? ದೇಶಾದ್ಯಂತ ಇರುವ ವ್ಯವಸ್ಥೆಯನ್ನು ನಿಯಂತ್ರಿಸುವವರು ಯಾರು? ಅದೇನು ಕಂಪನಿಯೇ? ವ್ಯಕ್ತಿಯೇ? ಆ ದುಡ್ಡು ಯಾರಿಗೆ ಹೋಗುತ್ತದೆ? ಇದ್ಯಾವುದಕ್ಕೂ ಉತ್ತರವಿಲ್ಲ. ಯಾವ ದಾಖಲೆಯೂ ಇಲ್ಲ. ಆದರೂ ಓಸಿಗೆ ದುಡ್ಡು ಕಟ್ಟಿದವವರು ಮತ್ತು ದುಡ್ಡು ಕೊಡುವವರು ತಪ್ಪುವುದಿಲ್ಲ.
ಪೇಟೆಯಿಂದ ಬಸ್ಸಿನ ಮೇಲೆ ಗೀಚಿಸಿಕೊಂಡು ಬರುವ ಮತ್ತು ಊರಿನ ಕರೆಂಟ್ ಕಂಬದಲ್ಲಿ ಮೂಡುವ ನಂಬರ್ರಿಗೆ ಬಹುಮಾನ ಗ್ಯಾರಂಟಿ! ನಿಮ್ಮೂರಿಗೆ ಆ ನಂಬರ್ ಹೇಗೆ ಬಂತು? ಆ ನಂಬರ್ ಬಸ್ಸಿನ ಮೇಲೆ ಗೀಚಿದ್ದು ಯಾರು ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಇದು ನಿಯತ್ತಾಗಿ ದಿನವೂ ನಡೆಯುತ್ತಿತ್ತು.
ಇದೊಂದು ನಿಗೂಢ, ಕುತೂಹಲಕಾರಿಯಾದ, ಆಗೋಚರವಾದ ಆದರೆ ಅಷ್ಟೇ ಪರಿಣಾಮಕಾರಿಯಾದ ವ್ಯವಸ್ಥೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಅಷ್ಟೇ ನಿಗೂಢವಾದ, ಕುತೂಹಲಕಾರಿ ಮತ್ತು ಅಷ್ಟೇ ಆಸಕ್ತಿಕರವಾದ ಅದ್ಭುತ ವ್ಯವಸ್ಥೆ.
ಕೆಲವರು ಇದನ್ನು ಜೀತ ಅನ್ನಬಹುದು. ಪ್ರಜಾಪ್ರಭುತ್ವ ವಿರೋಧಿ ಎಂದು ಟೀಕಿಸಬಹುದು. ಸರ್ವಾಧಿಕಾರಿ ಧೋರಣೆ ಎಂದು ಜರೆಯಬಹುದು. ರಾಜ್ಯದ ನಾಯಕರನ್ನು ಸಾಮಂತರು ಎಂದು ಕರೆಯಬಹುದು. ಆದರೆ ಕಾಂಗ್ರೆಸ್ ಎಂಬ ದೊಡ್ಡ ಪಕ್ಷವನ್ನು ಹೈಕಮಾಂಡ್ ಎಂಬ ಶಕ್ತಿಯೊಂದು ಅಗೋಚರವಾಗಿ ಆದರೆ ಅತ್ಯಂತ ಸಮರ್ಥವಾಗಿ ನಿಯಂತ್ರಿಸುತ್ತಿರುವುದನ್ನು ಟೀಕಾಕಾರರು ಕೂಡ ಒಪ್ಪಿಕೊಳ್ಳುತ್ತಾರೆ.
ಭರ್ಜರಿ ಬಹುಮತದಿಂದ ಆಯ್ಕೆಯಾದ ಪ್ರಭಾವಿ ನಾಯಕರು ಕೂಡ 'ಹೈಕಮಾಂಡ್ ನಿರ್ಧಾರಕ್ಕೆ ಬದ್ಧ' ಎಂದು ಹೇಳುವುದನ್ನು ಮರೆಯುವುದಿಲ್ಲ. ಹೈದರಾಬಾದ್‌ನ ಅತ್ಯಂತ ಪ್ರಭಾವಿ ನಾಯಕ ಮತ್ತು ಮುಖ್ಯಮಂತ್ರಿಯಾಗಿದ್ದ ರಾಜಶೇಖರ ರೆಡ್ಡಿ ಅವರು ಕೂಡ ಹೈಕಮಾಂಡ್‌ಗೆ ಸೆಡ್ಡು ಹೊಡೆಯುತ್ತಿರಲಿಲ್ಲ. ಸೆಡ್ಡು ಹೊಡೆದ ಅವರ ಮಗನನ್ನು ಹೈಕಮಾಂಡ್ ಹೇಗೆ ಹೊರಹಾಕಿತು ಎಂಬುದು ನಿಮಗೆಲ್ಲ ಗೊತ್ತು. ಯಾರಿಗೂ ಸಲಾಮು ಹೊಡೆಯದ, ನೇರ ಮಾತಿನ ಸಿದ್ದರಾಮಯ್ಯ ಅವರಂತಹ ವ್ಯಕ್ತಿ ಕೂಡ ಸೋನಿಯಾ-ರಾಹುಲ್ ಹೆಸರಿನೊಂದಿಗೇ ಮಾತನಾಡುವುದನ್ನು ರೂಢಿಸಿಕೊಂಡಿದ್ದಾರೆ. ಶಾಸಕರ ಬೆಂಬಲವಿದೆ, ನನ್ನನ್ನು ಮುಖ್ಯಮಂತ್ರಿ ಮಾಡಿದ್ದಾರೆ, ನಾನು ಸ್ವತಂತ್ರವಾಗಿ ತೀರ್ಮಾನ ಕೈಗೊಳ್ಳುತ್ತೇನೆ ಎಂದರೆ ಸಾಧ್ಯವಿಲ್ಲ. ಹೈಕಮಾಂಡ್ ಅನುಮತಿ ಪಡೆಯಲೇ ಬೇಕು.
ಪ್ರಧಾನಿಯಂತಹ ಉನ್ನತ ಹುದ್ದೆಯಿಂದ ಆರಂಭಿಸಿ ಬ್ಲಾಕ್ ಕಾಂಗ್ರೆಸ್, ತಾಲೂಕು ಪಂಚಾಯತಿ ಅಧ್ಯಕ್ಷರವರೆಗೆ ಪ್ರತಿಯೊಬ್ಬರ ನೇಮಕವೂ ಹೈಕಮಾಂಡ್ ಅನುಮತಿಯಂತೆ ಆಗಬೇಕು. ಹೈಕಮಾಂಡೇ ನಿರ್ಧರಿಸುತ್ತದೋ ಇಲ್ಲವೋ, ಆ ಹೆಸರಂತೂ ಇರುತ್ತದೆ. ದೇಶದಲ್ಲಿ ಎಲ್ಲೇ ಆಗಲಿ ಕಾಂಗ್ರೆಸ್‌ನಲ್ಲಿ ಒಬ್ಬ ಒಂದು ಹುದ್ದೆಗೆ ನೇಮಕಗೊಳ್ಳಬೇಕೆಂದರೆ ಹೈಕಮಾಂಡ್ ಅನುಮತಿ ಬೇಕು. ಹೈಕಮಾಂಡ್‌ಗೆ ಯಾದಗಿರಿ ಎಂಬ ಜಿಲ್ಲೆ ಯಾವ ರಾಜ್ಯದಲ್ಲಿದೆ ಎಂಬುದೇ ಗೊತ್ತಿಲ್ಲದೇ ಇರಬಹುದು. ಆದರೆ ಯಾದಗಿರಿ ಜಿಲ್ಲಾಧ್ಯಕ್ಷರ ಆಯ್ಕೆ ಹೈಕಮಾಂಡ್ ಅನುಮತಿಯ ನಂತರ ಮಾತ್ರ ಸಾಧ್ಯ. ಕುಮಟ-ಹೊನ್ನಾವರ ಎಂಬ ಹೆಸರನ್ನೇ ಕೇಳಿರದಿದ್ದರೂ, ಅಲ್ಲಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಹೈಕಮಾಂಡೇ ನಿರ್ಧರಿಸಬೇಕು. ಶ್ಯಾಮನೂರು ಶಿವಶಂಕರಪ್ಪ ಎಂದಾಕ್ಷಣ ಅವರ ಮುಖ ಹೇಗಿದೆ ಎಂಬುದು ಹೈಕಮಾಂಡ್ ಕಣ್ಣಮುಂದೆ ಬಾರದಿರಬಹುದು. ಆದರೆ ಅವರು ಸಚಿವರಾಗಬೇಕೆ ಬೇಡವೆ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ.
ನಾನು ಒಬ್ಬ ಸಂಪಾದಕನಾಗಿ ರಾಜ್ಯಾದ್ಯಂತ ಇರುವ ನಮ್ಮ ವರದಿಗಾರರೊಂದಿಗೆ ಸಂಪರ್ಕ ಇರಿಸಿಕೊಳ್ಳುವುದು ಕಷ್ಟ. ಚಿಂಚೋಳಿಯಲ್ಲಿ 'ಕನ್ನಡಪ್ರಭ' ವರದಿಗಾರರು ಯಾರು ಎಂದು ಕೇಳಿದರೆ ಥಟ್ಟನೆ ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಎಲ್ಲೋ ನೋಡಿದ ಮುಖ ನೆನಪಾಗಬಹುದೇ ಹೊರತು ಹೆಸರು ಹೊಳೆಯುವುದಿಲ್ಲ. ಹೀಗಿರುವಾಗ ದೇಶಾದ್ಯಂತ ಕಾಂಗ್ರೆಸ್ ಪಕ್ಷವನ್ನು ನಿಯಂತ್ರಿಸುತ್ತಿರುವ ಹೈಕಮಾಂಡ್ ಶಕ್ತಿ ಎಂಥದ್ದಿರಬಹುದು?
ಕಾಂಗ್ರೆಸ್‌ನಲ್ಲಿರಬೇಕೆಂದರೆ, ಇದ್ದು ಜಯಿಸಬೇಕೆಂದರೆ ಹೈಕಮಾಂಡ್ ಹೆಸರು ಹೇಳಬೇಕು. ಇದು ಕಾಂಗ್ರೆಸ್‌ನ ಅಲಿಖಿತ ನಿಯಮ.
ಹೈಕಮಾಂಡ್ ಅನುಮತಿಯಿಲ್ಲದೇ 'ಕೈ'ನ ಒಂದು ಬೆರಳು ಕೂಡ ಹಂದಾಡುವಂತಿಲ್ಲ!
ಹೈಕಮಾಂಡ್ ವಿರುದ್ಧ ಮಾತನಾಡಿ ಕಾಂಗ್ರೆಸ್‌ನಲ್ಲಿರಲು ಸಾಧ್ಯವಿಲ್ಲ. ಕಾಂಗ್ರೆಸ್‌ನ ಯಾವುದೇ ತೀರ್ಮಾನ, ನೀತಿ ಅಲ್ಲಿರುವವರಿಗೆ ಇಷ್ಟವಿಲ್ಲದಿದ್ದರೂ, ಅದನ್ನು ಹೇಳುವಂತಿಲ್ಲ. ಮನಸಿನಲ್ಲಿ ಹೈಕಮಾಂಡ್ ಬಗ್ಗೆ ಏನು ಬೇಕಾದರೂ ಅಂದುಕೊಳ್ಳಬಹುದು.ಅದನ್ನು ಯಾರ ಬಳಿಯೂ ಹಂಚಿಕೊಳ್ಳುವಂತಿಲ್ಲ. ಒಂದೊಮ್ಮೆ ಹಂಚಿಕೊಂಡರೋ, ಕತೆ ಮುಗಿದಂತೆ. ಬಯಸಿದ ಸ್ಥಾನ ಸಿಗಲಿಲ್ಲ ಎಂದಾದರೆ, 'ಹೈಕಮಾಂಡ್ ನಿರ್ಧಾರಕ್ಕೆ ಬದ್ಧ' ಎಂದಷ್ಟೇ ಹೇಳಬೇಕು.
ಹಾಗಾದರೆ ಹೈಕಮಾಂಡ್ ಅಂದರೆ ಯಾರು? ಸೋನಿಯಾ ಗಾಂಧಿಯೇ? ರಾಹುಲ್ ಗಾಂಧಿಯೇ? ಅಥವಾ ಇಬ್ಬರೂ ಸೇರಿಯೇ? ಅಥವಾ ಕಾಂಗ್ರೆಸ್‌ಅಧ್ಯಕ್ಷರೇ? ಸೋನಿಯಾ-ರಾಹುಲ್ ಅಥವಾ ಕಾಂಗ್ರೆಸ್ ಅಧ್ಯಕ್ಷರು ಅಂದಾಕ್ಷಣ ಅವರು ಗೋಚರವಾಗುವಂತಹ ವ್ಯಕ್ತಿಗಳು. ಈ ವ್ಯಕ್ತಿಗಳು ವೈಯಕ್ತಿಕವಾಗಿ ಬ್ಲಾಕ್ ಕಾಂಗ್ರೆಸ್, ತಾಲೂಕು, ಜಿಲ್ಲೆ, ರಾಜ್ಯ ಇವುಗಳೆಲ್ಲದರ ಮೇಲೆ ಕಣ್ಣಿಡಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಎಲ್ಲರನ್ನೂ ಭೇಟಿ ಮಾಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ಆಯ್ಕೆಯಾದ 121 ಕಾಂಗ್ರೆಸ್  ಶಾಸಕರಲ್ಲಿ ಹಲವರನ್ನು ಸೋನಿಯಾ ಗಾಂಧಿ ನೋಡೇ ಇಲ್ಲ. ಎಲ್ಲ ರಾಜ್ಯದ ಕಾಂಗ್ರೆಸ್ ಶಾಸಕರನ್ನು ನೋಡಲು, ಭೇಟಿ ಮಾಡಲು ಸಾಧ್ಯವೇ ಇಲ್ಲ. ಆದರೂ ಈ ಹೈಕಮಾಂಡ್‌ಗೆ ಯಾರು ಹೇಗೆ, ಅವರ ಹಿನ್ನೆಲೆ, ಸಾಮರ್ಥ್ಯ, ಅವರ ಮೇಲಿರುವ ಪ್ರಕರಣಗಳು, ಅವರಿಗೆ ಹೈಕಮಾಂಡ್ ಮೇಲಿರುವ ನಿಷ್ಠೆ ಎಲ್ಲವೂ ಗೊತ್ತು!
ಹೀಗಾಗಿ ನನ್ನ ಪ್ರಕಾರ ಹೈಕಮಾಂಡ್ ಎಂಬುದೊಂದು ಅಗೋಚರ ಶಕ್ತಿ.
ಹೀಗೆ ಹೇಳಲು ಇನ್ನೊಂದು ಕಾರಣವೂ ಇದೆ. ಸೀತಾರಾಮ ಕೇಸರಿ ಅವರನ್ನು ಓಡಿಸಿ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆಯಾದಾಗ ಅವರಿಗೆ ಭಾರತದ ಬಗ್ಗೆ, ಭಾರತದ ರಾಜಕೀಯದ ಬಗ್ಗೆ ಯಾವ ಜ್ಞಾನವಿತ್ತು? ಭಾರತದಲ್ಲಿರುವ ಎಲ್ಲ ರಾಜ್ಯಗಳ ಹೆಸರು ಕೂಡ ಗೊತ್ತಿರಲಿಲ್ಲವೇನೊ. ದೇಶದ ಎಷ್ಟೋ ಭಾಗಗಳನ್ನು ಅವರು ನಕಾಶೆಯಲ್ಲೂ ನೋಡಿರಲಿಕ್ಕಿಲ್ಲ. ಭಾರತದ ಭೌಗೋಳಿಕ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಜ್ಞಾನ ಅವರಿಗಿರಲಿಲ್ಲ. ಭಾರತದ ಅಗಾಧತೆಯ ಸಣ್ಣ ಕಲ್ಪನೆ ಕೂಡ ಅವರಿಗೆ ಇರಲಿಲ್ಲವೇನೊ.
ರಾಜೀವ್ ಗಾಂಧಿ ಬದುಕಿದ್ದಾಗ ಮತ್ತು ಅವರ ನಿಧನದ ನಂತರ ಸೋನಿಯಾ ಗಾಂಧಿ ಎಲ್ಲಿಯೂ ರಾಜಕೀಯವಾಗಿ ಕಾಣಿಸಿಕೊಂಡಿದ್ದೇ ಇಲ್ಲ. ಅವರಿಗೆ ರಾಜಕೀಯದಲ್ಲಿ ಯಾವ ಆಸಕ್ತಿಯೂ ಇರಲಿಲ್ಲ. ದೇಶದ ಯಾವ ಕ್ಷೇತ್ರದ ಬಗ್ಗೆಯೂ ಸಮಗ್ರ ಎನ್ನಬಹುದಾದ ಜ್ಞಾನ ಅವರಿಗೆ ಖಂಡಿತ ಇರಲಿಲ್ಲ. ಸಾರ್ವಜನಿಕವಾಗಿಯೂ ಅದು ಹಲವು ಕಡೆ ಗೋಚರಿಸಿತ್ತು.
ರಾಜಕೀಯದ ಪಟ್ಟುಗಳು ಗೊತ್ತಿರುವ, ದೇಶಾದ್ಯಂತ ತಿರುಗಾಡಿರುವ, ದೇಶದ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳನ್ನು ತಿಳಿದುಕೊಂಡಿರುವ ಲಾಲಕೃಷ್ಣ ಆಡ್ವಾಣಿ ಅಂತಹ ವ್ಯಕ್ತಿಗಳಿಗೆ ರಾಜ್ಯದ ಬಿಜೆಪಿ ಶಾಸಕರನ್ನು ನಿಯಂತ್ರಿಸುವುದು ಕಷ್ಟವಾಯಿತು. ಹೀಗಿರುವಾಗ ಸೋನಿಯಾ ಗಾಂಧಿ ಅವರು ಅಧ್ಯಕ್ಷರಾದಾಗ ಇಲ್ಲಿನ ಶಾಸಕರನ್ನು ಮೀರಿಸುವ ನೂರಾರು ನಾಯಕರು ಕಾಂಗ್ರೆಸ್‌ನಲ್ಲಿದ್ದರು. ದಿಲ್ಲಿಯಲ್ಲೇ ಇದ್ದರು. 10 ಜನ್‌ಪಥ್‌ನಲ್ಲೇ ಇದ್ದರು.
ಆಶ್ಚರ್ಯವೆಂದರೆ ಆಗಲೂ ಕಾಂಗ್ರೆಸ್‌ಪಕ್ಷವನ್ನು ಹೈಕಮಾಂಡ್ ಸಮರ್ಥವಾಗಿ ನಿಯಂತ್ರಿಸುತ್ತಿತ್ತು! ಆದರೆ ಆಗ ಕಾಂಗ್ರೆಸ್‌ಪಕ್ಷವನ್ನು ಅಷ್ಟು ಸಮರ್ಥವಾಗಿ ನಿಯಂತ್ರಿಸುವುದು ಸೋನಿಯಾರಿಂದ ಖಂಡಿತ ಸಾಧ್ಯವಿರಲಿಲ್ಲ. ಈಗಲೂ ಅದು ಸಂಪೂರ್ಣ ಸಾಧ್ಯವಿದೆ ಎಂದು ಅನಿಸುವುದಿಲ್ಲ.
ಆದರೆ ಹೈಕಮಾಂಡ್ ಮಾತ್ರ ಅಂದಿಗೂ, ಇಂದಿಗೂ, ಎಂದೆಂದಿಗೂ ಅಷ್ಟೇಸಮರ್ಥವಾಗಿದೆ. ಈಗಷ್ಟೇ ಭರ್ಜರಿ ಗೆಲುವಿನೊಂದಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಿದ್ದರಾಮಯ್ಯ ಇರಲಿ, ಎರಡನೇ ಅವಧಿಗೆ ಪ್ರಧಾನಿಯಾಗಿರುವ ಮನಮೋಹನ ಸಿಂಗ್ ಇರಲಿ ಹೈಕಮಾಂಡ್ ಭೇಟಿಗೆ ಕಾಯಬೇಕು. ಹೈಕಮಾಂಡ್ ಕರೆದಾಗಲೇ ಹೋಗಬೇಕು. ಅಂಥದ್ದೊಂದು ಅದ್ಭುತವಾದ, ಸಮರ್ಥವಾದ ವ್ಯವಸ್ಥೆ ಕಾಂಗ್ರೆಸ್‌ನಲ್ಲಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹೈಕಮಾಂಡ್ ಹೇಳಿದರೆ ಮೊಲಕ್ಕೊಂದೇ ಅಲ್ಲ ಮಂಚಕ್ಕೂ ಮೂರೇ ಕಾಲು. ನಾಲ್ಕು ಅಂದರೆ ಕತೆ ಮುಗೀತು ಅಂತಾನೇ ಅರ್ಥ!  
ನೀವು ಈ ವ್ಯವಸ್ಥೆಯನ್ನು ಒಪ್ಪಬಹುದು ಅಥವಾ ವಿರೋಧಿಸಬಹುದು. ಈ ವ್ಯವಸ್ಥೆಯಲ್ಲಿ ಕೆಟ್ಟದ್ದು ಮತ್ತು ಒಳ್ಳೆಯದು ಎರಡೂ ಇರಬಹುದು. ಆದರೆ ಇಂತಹ ಅಗೋಚರವಾದ, ನಿಗೂಢವಾದ ಆದರೆ ಸಮರ್ಥವಾದ ವ್ಯವಸ್ಥೆಯೊಂದನ್ನು ಅನಾದಿಕಾಲದಿಂದ ಅನೂಚಾನಾಗಿ ಜಾರಿಯಲ್ಲಿದೆ. ರಾಜ್ಯಶಾಸ್ತ್ರದ ಒಬ್ಬ ವಿದ್ಯಾರ್ಥಿಗೆ ಅಧ್ಯಯನ ಮಾಡಲು ಇದಕ್ಕಿಂತ ಆಸಕ್ತಿಕರ ಸಂಗತಿ ಇನ್ನೊಂದಿರಲಾರದು ಅಲ್ಲವೇ? ಎಂದು ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದರೆ...
'ಹೈಕಮಾಂಡ್ ನಿರ್ಧಾರಕ್ಕೆ ಬದ್ಧ' ಅಥವಾ 'ಹೈಕಮಾಂಡ್ ತೀರ್ಮಾನವೇ ಅಂತಿಮ'ಎಂದು ಹೇಳಬಹುದು!

- ವಿಶ್ವೇಶ್ವರ ಭಟ್
vbhat@me.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com