ಅಂಕಣಗಳು

ಇದಕ್ಕೂ ಮೀರಿದ ಅಸಹ್ಯ ಬೇರೊಂದಿದೆಯೇ?

Published On :

'ಪ್ರಧಾನಿ ಕಾರ್ಯಾಲಯ, ಕಲ್ಲಿದ್ದಲು ಸಚಿವಾಲಯದ ಅಧಿಕಾರಿಗಳ ಆದೇಶದಂತೆ, ಸಿಬಿಐ ತನ್ನ ವರದಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಆ ಮೂಲಕ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ತನಿಖಾ ವರದಿಯ ಹೃದಯವನ್ನೇ ಬದಲಾಯಿಸಲಾಗಿದೆ' -ಮೇ 8ರಂದು ಸಿಬಿಐ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಾಗ ಸುಪ್ರೀಂಕೋರ್ಟ್ ಹೇಳಿದ ಮಾತುಗಳಿವು.
ಈ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮೂರು ಪ್ರಶ್ನೆಗಳು ಎದ್ದು ನಿಲ್ಲುತ್ತವೆ. ಮೊದಲನೇ ಪ್ರಶ್ನೆ: ತನಿಖಾ ವರದಿಯ 'ಹೃದಯವನ್ನೇ' ತೆಗೆಯಲಾಗಿದೆ ಎಂದರೆ ಮೇಜರ್ ಸರ್ಜರಿಯೇ ನಡೆದಿದೆ ಎಂದು ಅರ್ಥ. ಅಂದಹಾಗೆ, ಹೀಗೆ ಮೇಜರ್ ಸರ್ಜರಿ ಮಾಡಿದ ಸರ್ಜನ್ ಯಾರು? ಈ ಶಸ್ತ್ರ ಚಿಕಿತ್ಸೆ ಯಾವ ಆಸ್ಪತ್ರೆಯಲ್ಲಿ (ಅಂದರೆ, ಯಾವ ಕಚೇರಿಯಲ್ಲಿ ನಡೆಯಿತು? ಈ ಆಪರೇಷನ್ ನಡೆದ ತಿಂಗಳು ಹಾಗೂ ದಿನಾಂಕ ಯಾವುದು? ಈ ಆಪರೇಷನ್‌ಗೆ ತೆಗೆದುಕೊಂಡ ಸಮಯ ಎಷ್ಟು?
ವಾರದ ಹಿಂದಷ್ಟೇ ಕಾನೂನು ಸಚಿವರ ಹುದ್ದೆಗೆ ರಾಜಿನಾಮೆ ನೀಡಿರುವ ಅಶ್ವಿನಿಕುಮಾರ್ ಅವರ ನಿರ್ದೇಶನವೇ ಈ ಎಲ್ಲ ರಗಳೆಗೂ ಮೂಲ. ಸಿಬಿಐನ ಮೂಲ ವರದಿಯನ್ನು ತಿದ್ದುವ ಕೆಲಸ ಅಶ್ವಿನಿಕುಮಾರ್ ಅವರ ನಿರ್ದೇಶನದಂತೆಯೇ ನಡೆದಿದೆ ಎಂದು ತಕ್ಷಣವೇ ಹೇಳಿಬಿಡಬಹುದು. ಆದರೆ, ಅದೇ ಸಂಪೂರ್ಣ ಸತ್ಯವಲ್ಲ. ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರು ಮೇ6ರಂದು ಅಪೆಕ್ಸ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ ಗಮನಿಸಿದರೆ, ಈ ಕೋಲ್‌ಗೇಟ್ ವರದಿಯನ್ನು ತಿದ್ದಿರುವುದರ ಹಿಂದೆ ಐದಾರು ಅಥವಾ ಅದಕ್ಕೂ ಹೆಚ್ಚು ಕೈಗಳಿವೆ ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ.
ಈಗ ಮೂಲ ವರದಿಯ ಹೃದಯವನ್ನೇ ಬದಲಿಸಿರುವ 'ಸರ್ಜನ್‌' ಯಾರಾಗಿರಬಹುದು ಎಂಬುದರ ಸಾಧ್ಯಾಸಾಧ್ಯತೆಗಳನ್ನು ಗಮನಿಸೋಣ. ಈಗಾಗಲೇ ಸುಪ್ರಿಂಕೋರ್ಟ್‌ಗೆ ನೀಡಿರುವ ಹೇಳಿಕೆಯಂತೆ, ಮೇ 6ರಂದು, ಆಗ ಕಾನೂನು ಸಚಿವರಾಗಿದ್ದ ಅಶ್ವಿನಿಕುಮಾರ್ ಸಾಹೇಬರು, ಅಟಾರ್ನಿ ಜನರಲ್ ಜಿ.ಇ. ವಾಹನ್ವತಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಹರೀನ್ ರಾವಲ್ ಮತ್ತು ಪ್ರಧಾನಿಗಳ ಕಾರ್ಯಾಲಯದ ಜಂಟಿ ಕಾರ್ಯದರ್ಶಿ ಶತ್ರುಘ್ನ ಸಿಂಗ್ ಹಾಗೂ ಕಲ್ಲಿದ್ದಲು ಸಚಿವಾಲಯದ ಜಂಟಿ ಕಾರ್ಯದರ್ಶಿ ಎ.ಕೆ. ಭಲ್ಲಾರನ್ನು ಭೇಟಿ ಮಾಡುತ್ತಾರೆ. ಈ ಸಂದರ್ಭದಲ್ಲಿ ವರದಿಯನ್ನು ಬದಲಾಯಿಸಲಾಗಿದೆ ಎನ್ನುವುದಾದರೆ ಮೊದಲ ಅನುಮಾನದ ಪ್ರಕಾರ 'ವರದಿಯ ಹೃದಯವನ್ನೇ ಬದಲಿಸುವ' ಕೆಲಸದ ನೇತೃತ್ವವನ್ನು ಅಶ್ವಿನಿಕುಮಾರ್ ಅವರೇ ವಹಿಸಿಕೊಂಡಿದ್ದಾರೆ. ಎರಡನೇ ಅನುಮಾನದ ಪ್ರಕಾರ, ಅಟಾರ್ನಿ ಜನರಲ್ ವಾಹನ್ವತಿ ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಹರೀನ್ ರಾವೆಲ್‌ರ ನಿರ್ದೇಶನದ ಕಾರಣಕ್ಕೆ ಬದಲಾಗಿರಬಹುದು. ಮೂರನೇ ಅನುಮಾನವೆಂದರೆ-ಸಿಬಿಐ, ತನ್ನ ಸ್ವಂತ ಆಸಕ್ತಿಯಿಂದಲೇ ಇಂಥದೊಂದು ಬದಲಾವಣೆಗೆ ಮುಂದಾಗಿರಬಹುದು. ನಾಲ್ಕನೆಯ ಅನುಮಾನವೆಂದರೆ- ಪ್ರಧಾನಿ ಕಾರ್ಯಾಲಯದ ಜಂಟಿ ಕಾರ್ಯದರ್ಶಿಗಳ ಹಸ್ತಕ್ಷೇಪದ ಕಾರಣದಿಂದಾಗಿ ಕೋಲ್‌ಗೇಟ್ ಹಗರಣದ ತನಿಖೆಯ ಮೂಲ ವರದಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿರಬಹುದು.
ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದ ಸಂದರ್ಭದಲ್ಲಿ -'ಕಾನೂನು ಸಚಿವರ ನಿರ್ದೇಶನದಂತೆ ನಾವು ಸಿದ್ಧಪಡಿಸಿದ್ದ ಕೋಲ್‌ಗೇಟ್ ವರದಿಯ ಪ್ರತಿಯನ್ನು ಅವರ ಮುಂದಿಟ್ಟೆವು. ನಂತರ ಅವರ ಸಲಹೆಯಂತೆ 2006ರಿಂದ 2009ರ ಅವಧಿಯಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದ ವರದಿಯಲ್ಲಿ ಕೆಲವೊಂದು ತಿದ್ದುಪಡಿಗಳನ್ನು ತಂದೆವು' ಎಂದು ಸಿಬಿಐ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಇವಿಷ್ಟೇ ಸತ್ಯ ಎಂದು ಯಾರಾದರೂ ಭಾವಿಸಿದರೆ, ಆಗ ಇಡೀ ವರದಿಯ 'ಹೃದಯ'ವನ್ನು ಬದಲಿಸಲು ಅಶ್ವಿನಿಕುಮಾರ್ ಅವರೇ, ಅವರೊಬ್ಬರೇ ಕಾರಣ ಎಂಬ ನಿರ್ಧಾರಕ್ಕೆ ಬರುವಂತಾಗುತ್ತದೆ. ಆದರೆ, ನಿಜವಾಗಿ ನಡೆದಿರುವುದು ಅದಷ್ಟೇ ಅಲ್ಲ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ. ಅದೆಲ್ಲದರ ವಿವರಣೆ ಹೀಗೆ: ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸಿಬಿಐ ನಿರ್ದೇಶಕರು ಹೀಗೆ ಬರೆದಿದ್ದಾರೆ: 'ಮಾರ್ಚ್ 6ರಂದು  ಸಿಬಿಐ, ಅಧಿಕಾರಿ ಇತರೆ ಇಲಾಖೆಯ ಅಧಿಕಾರಿಗಳೊಂದಿಗೆ ಮೂರು ಸಂದರ್ಶನಗಳನ್ನು ಮಾಡಬೇಕಾಗಿ ಬಂತು. ಮಧ್ಯಾಹ್ನ ಸಿಬಿಐನ ಜಂಟಿ ನಿರ್ದೇಶಕ ಗಲ್ಹೋತ್ರಾ, ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ವಾಹನ್ವತಿಯವರನ್ನು ಭೇಟಿ ಮಾಡಲಾಯಿತು. ಈ ಸಂದರ್ಭದಲ್ಲಿಯೇ ಸಿಬಿಐ ಸಿದ್ಧಪಡಿಸಿರುವ ವರದಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವಂತೆ ವಾಹನ್ವತಿಯವರು ಸೂಚಿಸಿದರು. ಆದರೆ, ಹೀಗೆ ಬದಲಿಸಲಾದ ವರದಿಯ ಪ್ರತಿಯನ್ನು ನನಗೊಮ್ಮೆ ತೋರಿಸಿ ಎಂದು ವಾಹನ್ವತಿಯವರು ಸೂಚಿಸಲಿಲ್ಲ'. ವಾಹನ್ವತಿಯವರು, ಹೊಸದಾಗಿ ಸಿದ್ಧಪಡಿಸಲಾದ ವರದಿಯ ಪ್ರತಿಯನ್ನು ಕೇಳಲಿಲ್ಲ ಎಂದು ರಂಜಿತ್ ಸಿನ್ಹಾ ಹೇಳಿರುವುದರ ಉದ್ದೇಶವೇನು? ಆ ಪ್ರತಿಯನ್ನು ಬೇರೊಬ್ಬರಿಗೆ ತೋರಿಸಿ ಎಂದು ಪರೋಕ್ಷವಾಗಿ ಸೂಚಿಸಿದ್ದರು ಎಂದಿರಬಹುದೇ?
ಮೇ 6ರಂದು ಸಂಜೆ ಪ್ರಧಾನಿ ಕಾರ್ಯಾಲಯ ಹಾಗೂ ಕಲ್ಲಿದ್ದಲು ಸಚಿವಾಲಯದ ಜಂಟಿ ಕಾರ್ಯದರ್ಶಿಗಳಾದ ಶತ್ರುಘ್ನಸಿಂಗ್ ಮತ್ತು ಎ.ಕೆ. ಭಲ್ಲಾ ಅವರನ್ನು, ಸಿಬಿಐನ ಜಂಟಿ ನಿರ್ದೇಶಕರಾದ ಗಲ್ಹೋತ್ರಾ ಅವರ ಕಾರ್ಯಾಲಯದಲ್ಲಿಯೇ ಭೇಟಿ ಮಾಡಲಾಗಿತ್ತು. ತಮ್ಮನ್ನು ಭೇಟಿ ಮಾಡುವಂತೆ ಶತ್ರುಘ್ನ ಅವರೇ ಮುಂಚಿತವಾಗಿ ತಿಳಿಸಿದ್ದರು. ಈ ಭೇಟಿಯ ಸಂದರ್ಭದಲ್ಲಿ, ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ತನಿಖೆ ನಡೆಸಿ ಸಿಬಿಐ ಸಿದ್ಧಪಡಿಸಿರುವ ವರದಿಯನ್ನು ಇಬ್ಬರೂ ಅಧಿಕಾರಿಗಳು ಗಮನಿಸಿದರು. ಮರುದಿನ, ಅಂದರೆ ಮೇ7ರಂದು, ವರದಿಯಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡುವಂತೆ ಈ ಅಧಿಕಾರಿಗಳೇ ಸೂಚಿಸಿದರು. ಮುಖ್ಯವಾಗಿ, 2006ರಿಂದ 2009ರವರೆಗಿನ ಅವಧಿಯಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿ ಪ್ರಾಥಮಿಕ ವಿಚಾರಣೆ ನಡೆಸಿ ಸಿದ್ಧಪಡಿಸಿದ ವರದಿಯಿಂದ ಕೆಲವು ಪ್ಯಾರಾಗಳನ್ನೇ ತೆಗೆದು ಹಾಕುವಂತೆ ಸೂಚನೆ ನೀಡಿದರು...' ಸಿಬಿಐಗೆ ನೀಡಲಾದ 9 ಪುಟಗಳ ಸುದೀರ್ಘ ವಿವರಣೆಯ ಅಫಿಡವಿಟ್‌ನಲ್ಲಿ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹ ಸ್ಪಷ್ಟವಾಗಿ ಹೇಳಿದ ಮಾತುಗಳಿವು.   
ಸಿಬಿಐ ಅಧಿಕಾರಿಗಳನ್ನು ಸುಪ್ರೀಂಕೋರ್ಟು ತರಾಟೆಗೆ ತೆಗೆದುಕೊಳ್ಳದೇ ಹೋಗಿದ್ದರೆ, ಈ ವಿಷಯ ಯಾರಿಗೂ ಗೊತ್ತಾಗುತ್ತಲೇ ಇರಲಿಲ್ಲ. ವಾಸ್ತವವಾಗಿ ಮೇ6ರ ನಂತರ ಏನೆಲ್ಲಾ ಬೆಳವಣಿಗೆಗಳು ನಡೆದಿವೆಯೋ ಗಮನಿಸಿ. ಮೊದಲಿಗೆ ಪ್ರಧಾನಿ ಹಾಗೂ ಕಲ್ಲಿದ್ದಲು ಸಚಿವಾಲಯದ ಜಂಟಿ ಕಾರ್ಯದರ್ಶಿಗಳು ಸಿಬಿಐ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಅಲ್ಲಿಯೇ, ಕೋಲ್‌ಗೇಟ್ ಹಗರಣಕ್ಕೆ ಸಂಬಂಧಿಸಿದ ಸಿಬಿಐ ವರದಿಯನ್ನು ಪರಿಶೀಲಿಸಿದ್ದಾರೆ. ಅಂದು ಮನೆಗೆ ವಾಪಸಾಗಿ, ವರದಿಯಲ್ಲಿ ಏನೇನು ಬದಲಾವಣೆಗಳನ್ನು ಮಾಡಬೇಕೆಂದು ಲೆಕ್ಕಾಚಾರ ಮಾಡಿಕೊಂಡು, ತಮ್ಮ ಮೇಲಧಿಕಾರಿಗಳ ಸಲಹೆ ಪಡೆದು, ಮರುದಿನ ಮತ್ತೆ ಸಿಬಿಐ ಅಧಿಕಾರಿಗಳನ್ನು ಭೇಟಿಯಾಗಿ ಇಡೀ ವರದಿಯನ್ನು ತಮ್ಮ ಇಷ್ಟದಂತೆ ಬದಲಿಸಿದ್ದಾರೆ. ಇದಿಷ್ಟನ್ನು ಗಮನಿಸಿದರೆ ಒಂದು ಪ್ರಶ್ನೆಯನ್ನು ಕೇಳಲೇಬೇಕು ಅನಿಸುತ್ತದೆ. ಕೇಂದ್ರ ಸರ್ಕಾರದಲ್ಲಿ, ಜಂಟಿ ಕಾರ್ಯದರ್ಶಿ ಮಟ್ಟದ ಹುದ್ದೆಯಲ್ಲಿರುವ ಈ ಅಧಿಕಾರಿಗಳು ಸಿಬಿಐ ಕಚೇರಿಗೆ ಹೋಗಿದ್ದಾದರೂ ಏಕೆ? ಈ ಇಬ್ಬರು ಅಧಿಕಾರಿಗಳನ್ನು ಭೇಟಿ ಮಾಡಿದಷ್ಟೇ ಉತ್ಸಾಹದಿಂದ ಇತರರನ್ನು ಸಿಬಿಐ ಅಧಿಕಾರಿಗಳು ಭೇಟಿಯಾಗುತ್ತಾರಾ? ಒಂದು ಹಗರಣದ ತನಿಖಾ ವರದಿಯನ್ನು ಹಾಗೆ ಭೇಟಿಯಾದವರ ಮುಂದೆ ಹಿಡಿದು, ಇದರಲ್ಲಿ ಏನಾದರೂ ಸ್ವಲ್ಪ ಬದಲಿಸಬೇಕೇ ನೋಡಿ ಎಂದು ಕೇಳುತ್ತಾರಾ?
ಭಾರತ ಸರ್ಕಾರ ರೂಪಿಸಿರುವ ಕಾನೂನಿನಂತೆ, ಒಂದು ಇಲಾಖೆಯ ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿ, ಮತ್ತೊಂದು ಇಲಾಖೆಯ ಜಂಟಿ ಕಾರ್ಯದರ್ಶಿ ಅಥವಾ ಅಧಿಕಾರಿ ಮಟ್ಟದಲ್ಲಿರುವವರನ್ನು ಭೇಟಿಯಾಗುವಂತಿಲ್ಲ. ನಿಯಮ ಹೀಗಿದ್ದರೂ, ಪ್ರಧಾನಿಗಳ ಕಾರ್ಯಾಲಯದ ಜಂಟಿ ಕಾರ್ಯದರ್ಶಿ ಶತ್ರುಘ್ನ ಸಿಂಗ್, ಸಿಬಿಐ ಅಧಿಕಾರಿಗಳನ್ನು ಸ್ವಂತ ಆಸಕ್ತಿಯಿಂದಲೇ ಭೇಟಿಯಾಗುತ್ತಾರೆ. ಈ ಭೇಟಿಯ ವಿಷಯ ಪ್ರಧಾನಿಗಳ ಕಾರ್ಯಾಲಯದ ಮುಖ್ಯ ಕಾರ್ಯದರ್ಶಿಯಾದ ಪುಲ್ಲೋಕ್ ಚಟರ್ಜಿ ಅವರಿಗೂ ತಿಳಿದಿತ್ತು. ಸರ್ಕಾರ ರೂಪಿಸಿರುವ ನಿಯಮಾವಳಿಯನ್ನು ಮೀರಿ ತನ್ನ ಕಿರಿಯ ಅಧಿಕಾರಿ ವರ್ತಿಸಿದರೂ ಅದಕ್ಕೆ ಸಣ್ಣದೊಂದು ಆಕ್ಷೇಪವನ್ನೂ ಚಟರ್ಜಿ ಸಾಹೇಬರು ವ್ಯಕ್ತಪಡಿಸುವುದಿಲ್ಲ!
ಕೋಲ್‌ಗೇಟ್ ವರದಿಯ 'ಹೃದಯ'ವೇ ಬದಲಾಗಿದ್ದರ ಹಿಂದೆ ಇರುವ ಮುಖಗಳು, ಕೈಗಳು ಯಾವುವು? ಅವುಗಳ ಉದ್ದೇಶವಾದರೂ ಏನು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗುವುದೇ ಈ ಸಂದರ್ಭದಲ್ಲಿ. 'ಅಟಾರ್ನಿ ಜನರಲ್ ವಾಹನ್ವತಿ ಅವರಿಗೆ ನಾವು ವರದಿಯ ಪ್ರತಿಯನ್ನು ತೋರಿಸಲಿಲ್ಲ. ಆದರೆ, ಪ್ರಧಾನಿ ಹಾಗೂ ಕಲ್ಲಿದ್ದಲು ಸಚಿವಾಲಯದ ಜಂಟಿ ಕಾರ್ಯದರ್ಶಿಗಳಾದ ಶತ್ರುಘ್ನ ಸಿಂಗ್ ಹಾಗೂ ಎ.ಕೆ. ಭಲ್ಲಾ ಅವರು ವರದಿಯ ಪ್ರತಿಯನ್ನು ಗಮನಿಸಿದ್ದು ಮಾತ್ರವಲ್ಲ, ಮರುದಿನ ಮತ್ತೆ ನಮ್ಮನ್ನು ಭೇಟಿ ಮಾಡಿ ಇಡೀ ವರದಿಯನ್ನು ತಮಗೆ ಬೇಕಾದಂತೆ ಬದಲಿಸಿದರು ಎಂದು ಹೇಳಿದ್ದಾರಲ್ಲ: ಅದೇ ಬಹು ಮುಖ್ಯವಾದ ಪಾಯಿಂಟ್. ಈ ಇಬ್ಬರೂ ಅಧಿಕಾರಿಗಳು ಬದಲಿಸುವಂತೆ ಸೂಚಿಸಿದ್ದು 2006ರಿಂದ 2009ರವರೆಗಿನ ಅವಧಿಯಲ್ಲಿ ನಡೆದ ಹಗರಣದ ತನಿಖಾ ಹೇಳಿಕೆಗಳನ್ನು, ಕಾರಣವಿಷ್ಟೆ: ಈ ಸಂದರ್ಭದಲ್ಲಿ ಕಲ್ಲಿದ್ದಲು ಖಾತೆಯನ್ನು ಹೊಂದಿದ್ದ ಪುಣ್ಯಪುರುಷ ಬೇರ್ಯಾರೂ ಅಲ್ಲ: ಸಾಕ್ಷಾತ್ ಮನಮೋಹನಸಿಂಗ್!
ಅದರರ್ಥ ಇಷ್ಟೆ: ಮನಮೋಹನಸಿಂಗ್ ಅವರನ್ನು ನಿರಪರಾಧಿ ಪಟ್ಟದಿಂದ ಬಚಾವ್ ಮಾಡಲು, ಅದೇ ಪ್ರಧಾನಿಗಳ ಮುಖ್ಯ ಕಾರ್ಯದರ್ಶಿಯಾಗಿರುವ ಪುಲ್ಲೋಕ್ ಚಟರ್ಜಿ ತೆರೆಮರೆಯಲ್ಲಿ ನಿಂತು ಕೆಲಸ ಮಾಡಿದರು. ತನ್ನ ಕೈ ಕೆಳಗಿನ ಅಧಿಕಾರಿಯನ್ನು ಮುಂದೆ ಬಿಟ್ಟು ಸಿಬಿಐ ವರದಿಯ 'ಹೃದಯವನ್ನೇ' ಬದಲಿಸಿದರು. ಆದರೆ, ಎಲ್ಲ ಆಪಾದಿನೆಯೂ ಕಾನೂನು ಸಚಿವ ಅಶ್ವಿನಿಕುಮಾರ್ ಮೇಲೆ ಬರುವಂತೆ ನೋಡಿಕೊಂಡರು. ಇದನ್ನು ಮೀರಿದ ಅಸಹ್ಯ ಬೇರೊಂದಿದೆಯೇ?

- ಟಿ.ವಿ.ಆರ್. ಶೆಣೈ
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.