ದಿಲ್ಲಿ ನಾಯಕರೇ, ಬಣ್ಣವನ್ನೆಲ್ಲಾ ಮಸಿ ನುಂಗಿತು ಅನ್ನೋಹಾಗೆ ನಿಮ್ಮ ಗದ್ದುಗೆ ಆಸೆ ಬಿಜೆಪಿಯನ್ನೇ ನುಂಗೀತು, ಜೋಕೆ!

ಒಂದು ಘಟನೆ ನೆನಪಿಗೆ ಬರುತ್ತಿದೆ. ಅದನ್ನು ಮಾಜಿ ಕಾನೂನು ಸಚಿವ ಹಾಗೂ ವಕೀಲ...
ದಿಲ್ಲಿ ನಾಯಕರೇ, ಬಣ್ಣವನ್ನೆಲ್ಲಾ ಮಸಿ ನುಂಗಿತು ಅನ್ನೋಹಾಗೆ ನಿಮ್ಮ ಗದ್ದುಗೆ ಆಸೆ ಬಿಜೆಪಿಯನ್ನೇ ನುಂಗೀತು, ಜೋಕೆ!
Updated on: 

ಒಂದು ಘಟನೆ ನೆನಪಿಗೆ ಬರುತ್ತಿದೆ. ಅದನ್ನು ಮಾಜಿ ಕಾನೂನು ಸಚಿವ ಹಾಗೂ ಖ್ಯಾತ ವಕೀಲ ತಮ್ಮ ಆತ್ಮಚರಿತ್ರೆ ""Courting Destiny'' ಯಲ್ಲಿ ದಾಖಲಿಸಿದ್ದಾರೆ. ಅದು ನಡೆದಿದ್ದು 1978ರಲ್ಲಿ.  ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾಗಿ ವರ್ಷವಷ್ಟೇ ಕಳೆದಿತ್ತು. ಅದಾಗಲೇ ಪ್ರಧಾನಿ ಸ್ಥಾನಕ್ಕೆ ಕಂಟಕ ಎದುರಾಗಿತ್ತು. ಮತ್ತೊಬ್ಬ ಪ್ರಭಾವಿ ಜನತಾ ನಾಯಕ ಹಾಗೂ ಗೃಹ ಸಚಿವ ಚೌಧರಿ ಚರಣ್ ಸಿಂಗ್ ಮೊದಲಿಂದಲೂ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು. ಜತೆಗೆ ಬಾಬು ಜಗಜೀವನ್ ರಾಮ್ ಕೂಡ ಪ್ರಧಾನಿ ಸ್ಥಾನದ ಆಕಾಂಕ್ಷಿಯಾಗಿದ್ದರು. ಹಾಗಾಗಿ ಬಂಡಾಯದ ಹೊಗೆಯಾಡುತ್ತಿತ್ತು. ಚರಣ್ ಸಿಂಗ್ ಅವರು ಮೊರಾರ್ಜಿ ವಿರುದ್ಧ ಕ್ಷಿಪ್ರಕ್ರಾಂತಿ ನಡೆಸಿ ಪ್ರಧಾನಿ ಸ್ಥಾನವನ್ನೇ ಕಿತ್ತುಕೊಳ್ಳಬಹುದು ಎಂಬ ಗುಸು ಗುಸು ಕೇಳಿ ಬರುತ್ತಿತ್ತು. ಅದೇ ಸಂದರ್ಭದಲ್ಲಿ ಚುನಾವಣಾ ಸುಧಾರಣೆಗಳ ಬಗ್ಗೆ ಪರಾಮರ್ಶೆ ನಡೆಸಲು ನಾಲ್ವರು ಸಚಿವರನ್ನೊಳಗೊಂಡ ಕೇಂದ್ರ ಸಂಪುಟದ ಸಮಿತಿಯೊಂದು ರಚನೆಯಾಗಿತ್ತು. ಗೃಹ ಸಚಿವ ಚರಣ್‌ಸಿಂಗ್, ಕಾನೂನು ಸಚಿವ ಶಾಂತಿ ಭೂಷಣ್, ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಲಾಲಕೃಷ್ಣ ಆಡ್ವಾಣಿ ಹಾಗೂ ಮತ್ತೊಬ್ಬ ಸಚಿವರಾದ ಡಾ. ಪಿ.ಸಿ. ಚಂದರ್ ಸಮಿತಿಯಲ್ಲಿದ್ದರು. ಅದರ ಸಭೆಯೊಂದು ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಬೇಕಿತ್ತು. ಎಲ್ಲರೂ ಸರಿಯಾದ ಸಮಯಕ್ಕೆ ಆಗಮಿಸಿದರು. ಆದರೆ ಚರಣ್ ಸಿಂಗ್ ಇನ್ನೂ ಬಂದಿರಲಿಲ್ಲ. ಅವರನ್ನು ಬಿಟ್ಟು ಸಭೆ ನಡೆಸೋಣವೆಂದರೆ ಚರಣ್ ಸಿಂಗ್ ಹಿರಿಯ ನಾಯಕರು. ಅವರಿಗೆ ಮುಜುಗರವುಂಟುಮಾಡುವುದು ಉಚಿತವಲ್ಲ ಎಂದೆಣಿಸಿ ಎಲ್ಲರೂ ದಾರಿ ಕಾಯುತ್ತಾ ಕುಳಿತರು. ಅಷ್ಟರಲ್ಲಿ ಚರಣ್‌ಸಿಂಗ್ ಆಗಮಿಸಿದರು. ಎಲ್ಲರೂ ತಮಗಾಗಿ ಕಾಯುತ್ತಿರುವುದನ್ನು ಕಂಡು ಅವರಿಗೇ ಮುಜುಗರವುಂಟಾಯಿತು. ಹಾಗಾಗಿ ಕುರ್ಚಿಯ ಹಿಂದೆ ನಿಂತುಕೊಂಡ ಚರಣ್‌ಸಿಂಗ್, 'ದಯವಿಟ್ಟು ನನ್ನನ್ನು ಕ್ಷಮಿಸಿ' ಎಂದರು. ಇದನ್ನು ಕಂಡ ಇತರ ಸಚಿವರು, ಚರಣ್‌ಸಿಂಗ್ ಅವರ ಹಿರಿತನಕ್ಕೆ ಮಾರುಹೋಗಿ, ಪರವಾಗಿಲ್ಲ ಕುಳಿತುಕೊಳ್ಳಿ ಎಂದರು.
ಆದರೆ  ಚರಣ್‌ಸಿಂಗ್ ಕುಳಿತುಕೊಳ್ಳಲಿಲ್ಲ.
'ನೀವು ಕ್ಷಮಿಸುವವರೆಗೂ ನಾನು ಕುಳಿತುಕೊಳ್ಳುವುದಿಲ್ಲ' ಎಂದು ಹಠ ಹಿಡಿದು ನಿಂತರು. ಅಷ್ಟೇ ಅಲ್ಲ, ತಾವೇಕೆ ತಡವಾಗಿ ಬಂದನೆಂದು ಸಮಜಾಯಿಷಿ ನೀಡಲು ಆರಂಭಿಸಿದರು. 'ನಾನು ಬಹಳ ಮುಂಗಡವಾಗಿಯೇ ಮನೆಯಿಂದ ಹೊರಟೆ. ಆದರೆ ಕಾರೊಳಗೆ ಕುಳಿತುಕೊಳ್ಳುವಷ್ಟರಲ್ಲಿ ಪತ್ರಕರ್ತನೊಬ್ಬ ಎದುರಾದ. ಪ್ರಧಾನಿಯಾಗಲು ನೀವು ಬಹಳ ಉತ್ಸುಕರಾಗಿದ್ದೀರಾ? ಎಂದು ಕೇಳಿದ. ನನಗೆ ಕೋಪ ಬಂತು. ಇಷ್ಟಕ್ಕೂ ಪ್ರಧಾನಿಯಾಗಬೇಕೆಂಬ ಮಹತ್ವಾಕಾಂಕ್ಷೆ ಇಟ್ಟುಕೊಳ್ಳುವುದರಲ್ಲಿ ಯಾವ ತಪ್ಪಿದೆ? ನಿನಗೆ ಒಂದು ದೊಡ್ಡ ಪತ್ರಿಕೆಯ ಸಂಪಾದಕನಾಗಬೇಕೆಂಬ ಆಸೆಯಿಲ್ಲವೆ, ಇಲ್ಲದೇ ಹೋದರೆ ನಿನ್ನ ಜೀವನವೇ ವ್ಯರ್ಥ' ಎಂದು ಆತನಿಗೆ ಜಾಡಿಸಿದೆ ಎಂದರು ಚರಣ್‌ಸಿಂಗ್. ಜತೆಗೆ ತಮ್ಮ ಮಾತಿನ ಒಳಾರ್ಥವನ್ನು ವಿವರಿಸಲೂ ನಿಂತುಬಿಟ್ಟರು. 'ಒಂದಲ್ಲ ಒಂದು ದಿನ ಪ್ರಧಾನಿಯಾಗಬೇಕೆಂಬ ಮಹತ್ವಾಕಾಂಕ್ಷೆ ಖಂಡಿತ ನನಗಿದೆ. ಹಾಗಂತ ಮೊರಾರ್ಜಿಯವರ ವಿರುದ್ಧ ನಾನು ಪಿತೂರಿ ನಡೆಸುತ್ತಿಲ್ಲ. ಮೊರಾರ್ಜಿಗೆ ವಯಸ್ಸಾಗಿದೆ. ಮುಂದೊಂದು ದಿನ ಅವರು ಸಾಯುತ್ತಾರೆ, ನಾನೂ ಪ್ರಧಾನಿ ಆಗಿಯೇ ಆಗುತ್ತೇನೆ' ಎಂದರು.
ಹಾಗೆ ಹೇಳಿ ಚರಣ್‌ಸಿಂಗ್ ಕುಳಿತುಕೊಂಡರು.
ಅದೇ ದಿನ ಮಧ್ಯಾಹ್ನ ಕಾನೂನು ಸಚಿವ ಶಾಂತಿ ಭೂಷಣ್ ಪ್ರಧಾನಿಯವರನ್ನು ಭೇಟಿಯಾಗುವ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಹಾಗೆ ಹೋದಾಗ, ನಿಮ್ಮನ್ನು ಪದಚ್ಯುತಗೊಳಿಸುವ ಇಚ್ಛೆ ಚರಣ್‌ಸಿಂಗ್‌ಗೆ ಇಲ್ಲವಂತೆ  ಎಂಬ ಸಂದೇಶವನ್ನು ಮೊರಾರ್ಜಿಯವರಿಗೆ ಮುಟ್ಟಿಸಿ, ಸಮಾಧಾನಪಡಿಸಲು ಮುಂದಾದರು. ಬೆಳಗ್ಗೆ ನಡೆದ ಘಟನೆಯನ್ನು ವಿವರಿಸಿದರು. ಆದರೆ ಮೊರಾರ್ಜಿ ಮನಸ್ಸಿಗೆ ಬೇಸರವಾಗಬಾರದು ಎಂಬ ಕಾರಣಕ್ಕೆ,  'ಮುಂದೊಂದು ದಿನ ಮೊರಾರ್ಜಿ ಸಾಯುತ್ತಾರೆ' ಎಂಬ ಚರಣ್‌ಸಿಂಗ್ ಮಾತನ್ನು ಯಥಾವತ್ತಾಗಿ ಹೇಳದೆ, 'ಪ್ರಧಾನಿ ಸ್ಥಾನ ಖಾಲಿಯಾದಾಗ ನನ್ನ ಮಹತ್ವಾಕಾಂಕ್ಷೆ ಈಡೇರುತ್ತದೆ' ಎಂದು ಬದಲಿಸಿ ಹೇಳಿದರು. ಮೊರಾರ್ಜಿ ಮಹಾಬುದ್ಧಿವಂತರು. ಚರಣ್‌ಸಿಂಗ್ ಹೇಗೆ ಹೇಳಿರಬಹುದು ಎಂಬುದನ್ನು ಅಂದಾಜು ಮಾಡಿಕೊಂಡ ಅವರು, 'ನನಗಿಂತ ಚರಣ್‌ಸಿಂಗ್ ಅವರೇ ಮೊದಲು ಸಾಯುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿಯೇನು? ನನಗೆ ವಯಸ್ಸಾಗಿದ್ದರೂ ಅವರೆಲ್ಲರಿಗಿಂತಲೂ ಆರೋಗ್ಯದಿಂದಿದ್ದೇನೆ. ಅದೂ ಅಲ್ಲದೆ ಇನ್ನು ಒಂದು ವರ್ಷದೊಳಗೆ ನಿಮ್ಮ ಇಬ್ಬರು ಸಂಪುಟ ಸಚಿವರನ್ನು ಕಳೆದುಕೊಳ್ಳುತ್ತೀರಿ ಎಂದು ಜ್ಯೋತಿಷಿಯೊಬ್ಬರು ನನಗೂ ಹೇಳಿದ್ದಾರೆ' ಎಂದರು ಮೊರಾರ್ಜಿ! ಅಂದರೆ ಚರಣ್‌ಸಿಂಗ್ ಹಾಗೂ ಜಗಜೀವನ್ ರಾಮ್ ಸಾಯುತ್ತಾರೆ ಎಂಬುದು ಅವರ ಮಾತಿನ ಅರ್ಥವಾಗಿತ್ತು!!
ಹೀಗೆ ಪರಸ್ಪರ ದ್ವೇಷಕ್ಕೆ ನಿಂತರೆ, ಕುರ್ಚಿಗಾಗಿ ಇನ್ನೊಬ್ಬರ ಸಾವು, ಅವನತಿಯನ್ನು ಬಯಸಲಾರಂಭಿಸಿದರೆ, ಕಾಲೆಳೆಯಲು ಮುಂದಾದರೆ ಯಾವ ಪಕ್ಷ, ಸರ್ಕಾರ ತಾನೇ ಉಳಿದೀತು? ಜನತಾ ಪರಿವಾರದ ಕಥೆ ಹಾಗೆಯೇ ಆಯಿತು. ಪ್ರಸ್ತುತ ಬಿಜೆಪಿಯ ಕೇಂದ್ರ ನಾಯಕತ್ವವನ್ನು ನೋಡಿದರೆ ಈ ಘಟನೆ ನೆನಪಿಗೆ ಬಾರದೇ ಇರದು!
ಏಕೆ ಅಂತೀರಾ?
2014 ಚುನಾವಣೆಗೆ ಇನ್ನು ಕೇವಲ 9-10 ತಿಂಗಳಷ್ಟೇ ಬಾಕಿ ಇವೆ. ಹಗರಣಗಳ ಸುಳಿಯಲ್ಲಿ ಸಿಕ್ಕಿ ದೇಶವಾಸಿಗಳ ಮುಂದೆ ಕಳಂಕಿತವಾಗಿ ನಿಂತಿರುವ ಹಾಗೂ ದಿನಕ್ಕೊಂದು ಹಗರಣಗಳನ್ನು ಹೊರಹಾಕುತ್ತಿರುವ ಈ ಯುಪಿಎ ಸರ್ಕಾರವನ್ನು ಕಿತ್ತೊಗೆಯಲು ಇದಕ್ಕಿಂತ ಸದವಕಾಶ ಬರಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಮುಂಬರುವ ಚುನಾವಣೆಯಲ್ಲಿ ಮತದಾರನ ಮುಂದೆ ಹೋಗಿ ಮುಖ ತೋರಿಸುವ ಸ್ಥಿತಿಯಲ್ಲೂ ಕಾಂಗ್ರೆಸ್ ಇಲ್ಲ. ಹಾಗಂತ ಇವಿಷ್ಟೇ ಕಾರಣಗಳು ಬಿಜೆಪಿಯನ್ನು ಹೊತ್ತುಕೊಂಡು ಬಂದು ಅಧಿಕಾರದ ಗದ್ದುಗೆ ಮೇಲೆ ಕೂರಿಸಿ ಬಿಡುತ್ತವೆಯೇ? 1975ರಲ್ಲಿ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದಾಗ ಕಾಂಗ್ರೆಸ್ ಇದಕ್ಕಿಂತಲೂ ಕೆಟ್ಟ ಹೆಸರು ಪಡೆದುಕೊಂಡಿತ್ತು. ಆದರೂ ಯಾವ ಆರೆಸ್ಸೆಸ್ಸನ್ನು ಗಾಂಧಿ ಹತ್ಯೆ ಮಾಡಿದವರೆಂದು ಅದುವರೆಗೂ ದೂರುತ್ತಿದ್ದರೋ ಅಂಥ ಸಂಘದ ಹೊಕ್ಕುಳಬಳ್ಳಿಯಾಗಿದ್ದ ಜನಸಂಘವನ್ನೂ ಸೇರಿಸಿಕೊಂಡು ಬಹುತೇಕ ಎಲ್ಲ ವಿರೋಧ ಪಕ್ಷಗಳ ಸಾಮಾನ್ಯ ಸೂರಾದ ಜನತಾ ಪರಿವಾರವನ್ನು ಕಟ್ಟಿಕೊಂಡು 1977ರ ಚುನಾವಣಾ ಕಣಕ್ಕಿಳಿಯಲಾಯಿತು. ಕಾರಣ, ಕಾಂಗ್ರೆಸ್ ವಿರೋಧಿ ಅಲೆಯೊಂದರಿಂದಲೇ ಅಧಿಕಾರಕ್ಕೇರಲು ಸಾಧ್ಯವಿಲ್ಲ, ಪ್ರತಿಪಕ್ಷಗಳ ನಡುವೆ ಒಗ್ಗಟ್ಟು ಹಾಗೂ ಸಾಂಘಿಕ ಹೋರಾಟ ಬೇಕು ಎಂಬುದು ವಿರೋಧ ಪಕ್ಷಗಳ ನಾಯಕರಿಗೆ ಅರಿವಾಗಿತ್ತು. ಅದರ ಪರಿಣಾಮವಾಗಿಯೇ ಗೆಲುವು ಸಾಧಿಸಲು ಸಾಧ್ಯವಾಯಿತು.   
ಇಂಥ ಉದಾಹರಣೆ ಕಣ್ಣಮುಂದಿದ್ದರೂ, ಎಲ್ಲರೂ ಪ್ರಧಾನಿಯಾಗುವ ಆಕಾಂಕ್ಷೆ ಇಟ್ಟುಕೊಂಡರೆ ಏನಾಗುತ್ತದೆ ಎಂಬುದಕ್ಕೆ ಜನತಾ ಸರ್ಕಾರ ಸಾಕ್ಷೀಭೂತವಾಗಿದ್ದರೂ ಕೇಂದ್ರ ಬಿಜೆಪಿ ನಾಯಕತ್ವ ನಡೆದುಕೊಳ್ಳುತ್ತಿರುವುದಾದರೂ ಹೇಗಿದೆ ಹೇಳಿ?
ಉಮಾಭಾರತಿಯವರಂಥ ನೌಟಂಕಿ ನಾಯಕಿ 'ಟೈಮ್ಸ್ ನೌ' ಚಾನಲ್‌ಗೆ ಬುಧವಾರ ನೀಡಿರುವ ಸಂದರ್ಶನದಲ್ಲಿ "Being a crowd puller does not make anyone a prime ministerial candidate'ಜನಾಕರ್ಷಣೆ ಶಕ್ತಿಯೊಂದರಿಂದಲೇ ಯಾರೂ ಪ್ರಧಾನಿ ಅಭ್ಯರ್ಥಿಯಾಗಿ ಬಿಡುವುದಿಲ್ಲ ಎಂದಿದ್ದಾರೆ. 2010ರ ಬಿಹಾರ ಚುನಾವಣೆ ಸಂದರ್ಭದಲ್ಲಿ ಮೋದಿ ಪ್ರಚಾರಕ್ಕೆ ಬರುವುದಿಲ್ಲವೆ? ಎಂದು ಕೇಳಿದಾಗ 'ಮೋದಿ ವರ್ಚಸ್ಸು ಎಲ್ಲೆಡೆಯೂ ಪ್ರಭಾವ ಬೀರಬೇಕೆಂದೇನೂ ಇಲ್ಲ' ಎಂದು ಸುಷ್ಮಾ ಸ್ವರಾಜ್ ಕುಟುಕಿದ್ದರು. ಕಳೆದ ವರ್ಷದ ಕೊನೆಯ ಭಾಗದಲ್ಲಿ ನಿತಿನ್ ಗಡ್ಕರಿಯವರು ಡೊಳ್ಳೊಟ್ಟೆಯ ಒಳಗಿರುವ ಸತ್ಯ ಹೊರಬಿದ್ದಾಗ ಆರೆಸ್ಸೆಸ್‌ನ ಮುದಿ ಸಿದ್ಧಾಂತವಾದಿ ಎಂ.ಜಿ. ವೈದ್ಯ, 'ಗಡ್ಕರಿ ಮೇಲಿನ ದೋಷಾರೋಪಣೆ ಹಿಂದೆ ಮೋದಿ ಕೈವಾಡವಿದೆ' ಎಂದು ಕ್ಷುಲ್ಲಕ ಟೀಕೆ ಮಾಡಿದ್ದರು. ಈ ಮಧ್ಯೆ, ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವುದರಿಂದ ವಿರೋಧ ಪಕ್ಷಗಳಿಗೇ ಲಾಭ ಎಂದಿದ್ದಾರೆ. ಇನ್ನು ಅಂತಹ ಮಹಾನ್ ನಾಯಕ ಅಟಲ್ ಬಿಹಾರಿ ವಾಜಪೇಯಿಯವರನ್ನೇ 'ಮುಖವಾಡ' ಎಂದಿದ್ದ ಕೆ.ಎನ್. ಗೋವಿಂದಾಚಾರ್ಯ ಅವರಂತೂ ಬಾಯಿ ಬಿಟ್ಟರೆ ಮೋದಿ ದೂಷಣೆಯನ್ನೇ ಕಕ್ಕುತ್ತಾರೆ. ಈ ನಡುವೆ 35 ವರ್ಷ ವಯೋವಾನದವರೇ 65 ಪರ್ಸೆಂಟ್ ಇರುವ ದೇಶಕ್ಕೆ 86ರ ಯುವಕ ಲಾಲಕೃಷ್ಣ ಆಡ್ವಾಣಿಯವರೇ ಪ್ರಧಾನಿಯಾಗಲು ಸೂಕ್ತ ವ್ಯಕ್ತಿ ಎಂಬ ಧ್ವನಿ ಮೊಳಗಲಾರಂಭಿಸಿದೆ. ಮೊನ್ನೆ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಒಂದೆರಡು ಸಾವಿರ ಜನರನ್ನು ಆಕರ್ಷಿಸುವ ತಾಕತ್ತಿರದಿದ್ದರೂ 'ಆಡ್ವಾಣಿಯವರು ಪ್ರಧಾನಿಯಾಗುವುದಕ್ಕೆ ಇನ್ನೂ ಕಾಲಾವಕಾಶವಿದೆ' ಎಂದು ಸುಷ್ಮಾ ಸ್ವರಾಜ್ ಹೇಳಿದರೆ, 'ಸುಷ್ಮಾ ಮಾತಿಗೆ ನಿಂತರೆ ನನಗೆ ವಾಜಪೇಯಿ ನೆನಪಾಗುತ್ತಾರೆ' ಎನ್ನುತ್ತಿರುವ ಆಡ್ವಾಣಿ ಪರಸ್ಪರ ಬೆನ್ನು ತುರಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ತಲೆದೂಗಿ ಶತ್ರುಘ್ನ ಸಿನ್ಹಾ ಹಾಗೂ ಯಶವಂತ್ ಸಿನ್ಹಾ ಕೂಡ ಆಡ್ವಾಣಿ ಹೆಸರನ್ನು ಭಜಿಸುತ್ತಿದ್ದಾರೆ.
ಅಲ್ಲಾ, ಇವರು ಯಾರ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ?
ಇವರ ಮಾತುಗಳು ಹಾಗೂ ಹೇಳಿಕೆಗಳ ಹಿಂದಿರುವ ಉದ್ದೇಶ, ಗುರಿ ಯಾವುದು? ಕಾಂಗ್ರೆಸ್ ಅನ್ನು ಕೆಳಗಿಳಿಸಬೇಕು ಎನ್ನುವುದಕ್ಕಿಂತ ನರೇಂದ್ರ ಮೋದಿಯವರು ಪ್ರಧಾನಿ ಅಭ್ಯರ್ಥಿಯಾಗದಂತೆ ತಡೆಯುವುದೇ ಇವರ ಜೀವನದ ಧ್ಯೇಯವಾಗಿ ಬಿಟ್ಟಿದೆಯೇ? ಇದರಿಂದ ಹೊರಗಿನವರಿಗೆ, ಅದರಲ್ಲೂ ವಿರೋಧಿಗಳಿಗೆ ಯಾವ ಸಂದೇಶ ರವಾನೆಯಾಗುತ್ತಿದೆ?
ಕಾಂಗ್ರೆಸ್ ಅನ್ನು ಕಿತ್ತೊಗೆಯಬೇಕು ಎನ್ನುವುದಕ್ಕಿಂತ ಪಕ್ಷದೊಳಗೇ ಇರುವ ಪ್ರತಿಸ್ಪರ್ಧಿಗಳನ್ನು ಮೊದಲು ಮಟ್ಟಹಾಕಬೇಕು, ಕೆಳಹಾಕಬೇಕು ಅನ್ನುವ ಉದ್ದೇಶ ಗೋಚರವಾಗುತ್ತಿಲ್ಲವೆ? ಎಲ್ಲರೂ ಸೇವಾ ಮನೋಭಾವನೆಯಿಂದ ರಾಜಕೀಯಕ್ಕೆ ಬರುತ್ತಾರೆ, ಬರಬೇಕು ಎನ್ನುವ ಕಾಲ ಖಂಡಿತ ಹೋಗಿದೆ. ಹಾಗಂತ ಒಂದು ದೊಡ್ಡ ಸ್ಥಾನದ ಮೇಲೆ ಯಾರು ಬೇಕಾದರೂ ಕಣ್ಣಿಡಬಹುದೇ? ಪ್ರಧಾನಿ ಸ್ಥಾನದ ಮೇಲೆ ಆಸೆ ಇಟ್ಟುಕೊಳ್ಳುವ ಮೊದಲು ಬಿಜೆಪಿ ರಾಷ್ಟ್ರೀಯ ನಾಯಕರುಗಳು ತಮ್ಮ ಯೋಗ್ಯಾಯೋಗ್ಯತೆ ಏನು, ಎಷ್ಟು ಎಂಬುದನ್ನು ಮೊದಲು ಅಳೆದು ತೂಗಿಕೊಂಡಿದ್ದಾರೆಯೇ? ಖ್ಯಾತ ಪತ್ರಕರ್ತ ಆರ್. ಜಗನ್ನಾಥನ್ ಅವರು ಮೂರು ದಿನಗಳ ಹಿಂದಷ್ಟೇ ಬರೆದ ಲೇಖನದಲ್ಲಿ ಬಿಜೆಪಿಯ ಸಪ್ತ ಪಾಪಗಳನ್ನು ಪಟ್ಟಿ ಮಾಡುತ್ತಾ ಕೇಂದ್ರ ನಾಯಕತ್ವದ ಬಗ್ಗೆ ಏನಂದಿದ್ದಾರೆ ಗೊತ್ತಾ? 'ಬಿಜೆಪಿಯಲ್ಲಿ ರಾಷ್ಟ್ರೀಯ ನಾಯಕತ್ವ ಅನ್ನುವುದೇ ಇಲ್ಲ. ಅದರ ನೈಜ ನಾಯಕರಿರುವುದು ರಾಜ್ಯಗಳಲ್ಲಿ. ನರೇಂದ್ರ ಮೋದಿ, ಶಿವರಾಜ್‌ಸಿಂಗ್ ಚೌಹಾಣ್, ಸುಶೀಲ್ ಮೋದಿ, ವಸುಂದರಾ ರಾಜೆ, ರಮಣ್ ಸಿಂಗ್ ಹಾಗೂ ಮನೋಹರ್ ಪರಿಕ್ಕರ್. ಪ್ರಾಮುಖ್ಯತೆ ಮತ್ತು ಸಾಮರ್ಥ್ಯದ ಆಧಾರದಲ್ಲೂ ಇವರು ಇದೇ ಕ್ರಮಾಂಕದಲ್ಲಿ ಬರುತ್ತಾರೆ. ಬಿಜೆಪಿ ಹೆಡ್‌ಕ್ವಾರ್ಟರ್‌ನಲ್ಲಿರುವ ರಾಷ್ಟ್ರೀಯ ನಾಯಕರೆನಿಸಿಕೊಂಡವವರು ಪೊಳ್ಳು ಅಹಮಿಕೆಗಳ ಡೋಲು ಬಡಿದುಕೊಂಡಿರುವವರಷ್ಟೇ. ಇವರು ಟಿವಿ ಮಾಧ್ಯಮಗಳ ಕ್ಯಾಮೆರಾಗಳ ಮುಂದೆ ಬೊಬ್ಬೆಹಾಕಬಲ್ಲವರೇ ಹೊರತು ಸ್ವಂತ ಬಲದಲ್ಲಿ ಒಂದು ಸೀಟನ್ನೂ ಗೆಲ್ಲುವ ತಾಕತ್ತು ಇವರಿಗಿಲ್ಲ. ಇದು ಲಾಲಕೃಷ್ಣ ಆಡ್ವಾಣಿಯವರಿಂದ ಸುಷ್ಮಾ ಸ್ವರಾಜ್-ಜೇಟ್ಲಿವರೆಗೂ ಕಟುಸತ್ಯ' ಎಂದು ಬರೆದಿದ್ದಾರೆ.
ನಿಮಗೂ ಹಾಗನಿಸುವುದಿಲ್ಲವೆ?
ಪ್ರಧಾನಿಯಾಗಬೇಕೆಂದು ಒಳಂಗಿದೊಳಗೇ ಹವಣಿಸುತ್ತಿರುವ, ಪ್ರತಿಸ್ಪರ್ಧಿಗಳನ್ನು ಹಣಿಯಲು ಪ್ರಯತ್ನಿಸುತ್ತಿರುವ ಸುಷ್ಮಾ ಸ್ವರಾಜ್‌ರನ್ನೇ ತೆಗೆದುಕೊಳ್ಳಿ. ಈಕೆಯ ಅರ್ಹತೆ, ಯೋಗ್ಯಾಯೋಗ್ಯತೆ ಏನು? ರಾಜಧಾನಿ ದಿಲ್ಲಿಯಲ್ಲಿ ಸ್ಥಾಪನೆಯಾಗಿದ್ದ ಮೊದಲ ಬಿಜೆಪಿ ಸರ್ಕಾರ ಮದನ್ ಲಾಲ್ ಖುರಾನ-ಸಾಹಿಬ್ ಸಿಂಗ್ ವರ್ಮಾ ಕಿತ್ತಾಟದಿಂದಾಗಿ ಪುನರಾಯ್ಕೆಯಾಗುವುದು ಕಷ್ಟ ಎಂದರಿತ ಬಿಜೆಪಿ ಕೇಂದ್ರ ನಾಯಕತ್ವ ಜನತಾ ಪರಿವಾರದಿಂದ ಬಿಜೆಪಿಗೆ ಬಂದ ಸುಷ್ಮಾ ಸ್ವರಾಜ್ ಅವರನ್ನು ಮುಖ್ಯಮಂತ್ರಿ ಮಾಡಿ ಆಕೆಯ ವರ್ಚಸ್ಸಿನೊಂದಿಗೆ ಮತ್ತೆ ಅಧಿಕಾರಕ್ಕೇರಲು 1998ರ ವಿಧಾನಸಭೆ ಚುನಾವಣೆಗಿಳಿಯಿತು. ಪರಿಣಾಮ ಏನಾಯಿತು? ಅಂದಿನಿಂದ ಇಂದಿನವರೆಗೂ ದಿಲ್ಲಿ ಮತ್ತೆ ಬಿಜೆಪಿ ತೆಕ್ಕೆಗೆ ಬರಲಿಲ್ಲ, ಇಂಥದ್ದೊಂದು ಉದಾಹರಣೆಯನ್ನು ಬಿಜೆಪಿ ಅಧಿಕಾರದಲ್ಲಿದ್ದ ಯಾವೊಂದು ರಾಜ್ಯದಲ್ಲೂ ಕಾಣಲು ಸಾಧ್ಯವಿಲ್ಲ. ಇತ್ತೀಚೆಗೆ ಉತ್ತರಾಂಚಲದಲ್ಲೂ ಬಿ.ಸಿ. ಖಂಡೂರಿಯವರನ್ನು ಕೊನೆ ಕ್ಷಣದಲ್ಲಿ ಮುಖ್ಯಮಂತ್ರಿ ಮಾಡಿ ಬಿಜೆಪಿ ಚುನಾವಣೆಗಿಳಿಯಿತು. ಬಿಜೆಪಿ ಅಲ್ಲೂ ಸೋತಿರಬಹುದು. ಆದರೆ ಅಧಿಕಾರ ಹಿಡಿದ ಕಾಂಗ್ರೆಸ್‌ಗೂ ಬಿಜೆಪಿಗೂ ಇದ್ದ ಸ್ಥಾನಗಳ ವ್ಯತ್ಯಾಸ ಕೇವಲ 2. ಆದರೆ ದಿಲ್ಲಿಯಲ್ಲಿ ಸುಷ್ಮಾ ಅಡಿ ಬಿಜೆಪಿ ಹೀನಾಯ ಸೋಲು ಖಂಡಿತು. ಜತೆಗೆ ದಕ್ಷಿಣ ದಿಲ್ಲಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಸುಷ್ಮಾ ಸ್ವರಾಜ್, 1998ರಲ್ಲೇ ದಿಲ್ಲಿಯನ್ನೂ ಬಿಟ್ಟರು. 1999ರಲ್ಲಿ ಕರ್ನಾಟಕದ ಬಳ್ಳಾರಿಯಿಂದ ಸೋನಿಯಾ ಗಾಂಧಿಯವರ ವಿರುದ್ಧ ಸ್ಪರ್ಧಿಗಿಳಿದರು. ಇವತ್ತು ಜೈಲು ಸೇರಿರುವ ಜನಾರ್ದನ ರೆಡ್ಡಿ-ಶ್ರೀರಾಮುಲು ಈಕೆಗೆ ಪರಿಚಯವಾಗಿ, ವ್ಯವಹಾರ ಆರಂಭವಾಗಿದ್ದೇ ಅಲ್ಲಿಂದ. ಬಳ್ಳಾರಿಯಲ್ಲಿ ಸೋತ ನಂತರ 2000ದಲ್ಲಿ ರಾಜ್ಯಸಭೆಗೆ ಹೋಗಿ ಕೇಂದ್ರ ಸಂಪುಟ ಸೇರಿದರು. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆಯಾಗಿ, ಆರೋಗ್ಯ ಸಚಿವೆಯಾಗಿ ಈಕೆ ಮಾಡಿದ ಸಾಧನೆಗಳೇನು ಹೇಳಿ? ಇವತ್ತಿಗೂ ವಾಜಪೇಯಿ ಸಂಪುಟದಲ್ಲಿದ್ದ ಜನಾನುರಾಗಿ ಹಾಗೂ ಜನಪ್ರಿಯ ಸಚಿವರು ಯಾರೆಂದರೆ ಖಂಡೂರಿ, ಸುರೇಶ್‌ಪ್ರಭು, ರಾಮಾನಾಯ್ಕ್. ಅರುಣ್‌ಶೌರಿ, ಜಸ್ವಂತ್‌ಸಿಂಗ್ ಎನ್ನುತ್ತಾರೆಯೇ ಹೊರತು ಸುಷ್ಮಾ ಹೆಸರನ್ನು ಯಾರೂ ಹೇಳುವುದಿಲ್ಲ. ಈಕೆ ಮತ್ತೆ ಲೋಕಸಭೆಗೆ ಕಾಲಿಡಬೇಕೆಂದುಕೊಂಡಾಗಲೂ ಬಯಸಿದ್ದು ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ನಿಯುಕ್ತಿಗೊಂಡ ಬಳಿಕ ಶಿವರಾಜ್ ಸಿಂಗ್ ಚೌಹಾಣ್ ತೆರವು ಮಾಡಿದ್ದ ಬಿಜೆಪಿ ಭದ್ರಕೋಟೆ ವಿಧಿಶಾ. ಏಕೆ? ಈಕೆ 2009ರಲ್ಲಿ ದಕ್ಷಿಣ ದಿಲ್ಲಿ ಕ್ಷೇತ್ರದಿಂದಲೇ ಸ್ಪರ್ಧಿಸಲಿಲ್ಲ? ದೇಶದ ಪ್ರಧಾನಿಯಾಗಲು ಬಯಸುವವರೂ ಸುರಕ್ಷಿತ ಸೀಟುಗಳನ್ನೇ ಹುಡುಕಿಕೊಂಡು ಹೋದರೆ ಅದು ಏನನ್ನು ಸೂಚಿಸುತ್ತದೆ? ಒಂದು ವೇಳೆ ಶಿವರಾಜ್‌ಸಿಂಗ್ ಚೌಹಾಣ್ ಒಳ್ಳೆಯ ಆಡಳಿತ ಕೊಡದೇ ಹೋಗಿದ್ದರೆ, ಕಾಂಗ್ರೆಸ್‌ನ ದಿಗ್ವಿಜಯ್‌ಸಿಂಗ್ 2003ರಲ್ಲಿ ಸೋತ ನಂತರ 10 ವರ್ಷ ರಾಜ್ಯದಿಂದ ದೂರವುಳಿಯುವ ಪ್ರಮಾಣ ಮಾಡದಿದ್ದರೆ ಈ ವೇಳೆಗಾಗಲೇ ಸುಷ್ಮಾ ಸ್ವರಾಜ್ ಮತ್ತೊಂದು ಸೇಫ್ ಸೀಟಿನ ಹುಡುಕಾಟದಲ್ಲಿ ತೊಡಗಿರಬೇಕಿತ್ತು! 'ಮನೆ ಗೆದ್ದು ಮಾರು ಗೆಲ್ಲು' ಎಂಬ ಮಾತಿದೆ. ಈಕೆಯ ಸ್ವಂತ ರಾಜ್ಯ ಹರ್ಯಾಣವಲ್ಲವೆ? ಅಲ್ಲಿ ಸುಷ್ಮಾ ಸ್ವರಾಜ್ ಅವರಿಗೆ ಯಾವ ಬೆಲೆ ಇದೆ ಹೇಳಿ? ಕನಿಷ್ಠ ನೆಲೆ ಮಾಡಿಕೊಂಡಿದ್ದ ದಿಲ್ಲಿಯಲ್ಲಿ ನಿಂತು ಗೆಲ್ಲುವ ಧೈರ್ಯವಾದರೂ ಇದೆಯೇ? ಹಾಗಿರುವಾಗ ಆರ್. ಜಗನ್ನಾಥನ್ ಹೇಳಿದ್ದರಲ್ಲಿ ತಪ್ಪೇನಿದೆ ಹೇಳಿ? ಇನ್ನು ಈಕೆ ಪ್ರಭುದ್ಧತೆ ತೋರಿದ ಉದಾಹರಣೆಯಾದರೂ ಇದೆಯೇ? 2004ರಲ್ಲಿ ಕಾಂಗ್ರೆಸ್ ಗೆದ್ದು ಸೋನಿಯಾ ಗಾಂಧಿಯವರು ಪ್ರಧಾನಿಯಾಗಲು ಮುಂದಾದಾಗ, 'ಆಕೆ ಪ್ರಧಾನಿಯಾಗಿದ್ದೇ ಆದರೆ ತಾನು ತಲೆ ಬೋಳಿಸಿಕೊಂಡು, ಬಿಳಿ ಸೀರೆ ತೊಟ್ಟು, ಕಾಳು-ಕಡ್ಡಿ ತಿಂದು ನೆಲದ ಮೇಲೆ ಮಲಗುತ್ತೇನೆ' ಎಂದು ಘೋಷಿಸಿದ್ದರು! ಇದು ಒಬ್ಬ ರಾಜಕೀಯ ಹೋರಾಟಗಾರ ಹೇಳುವ ಮಾತೇ?
ಇನ್ನು ಆಡ್ವಾಣಿಯವರ ವಿಚಾರಕ್ಕೆ ಬರುವುದಾದರೆ, ಖಂಡಿತ ಆಡ್ವಾಣಿಯವರ ಶಕ್ತಿ ಸಾಮರ್ಥ್ಯದ ಬಗ್ಗೆ ಯಾರೂ ಚಕಾರವೆತ್ತಲು ಸಾಧ್ಯವಿಲ್ಲ. 1984ರಲ್ಲಿ ಕೇವಲ ಎರಡು ಸೀಟಿಗಿಳಿದಿದ್ದ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಬಗ್ಗೆ, ಅಧಿಕಾರಕ್ಕೆ ತಂದ ಬಗ್ಗೆ ಯಾರಾದರೂ ಅಪಸ್ವರ ಎತ್ತಿದರೆ ಅವರನ್ನು ಕೃತಘ್ನರು ಎನ್ನಲೇಬೇಕಾಗುತ್ತದೆ. ಹಾಗಂತ ಕಟ್ಟಿ ಬೆಳೆಸಿದರು ಎಂಬ ಒಂದೇ ಕಾರಣಕ್ಕೆ ಪಕ್ಷಕ್ಕೇ ಮಾರಕವಾಗುತ್ತಿರುವ ಅವರ ಪ್ರಧಾನಿಯಾಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಸಹಿಸಿಕೊಳ್ಳಬೇಕೆ? ರಾಷ್ಟ್ರ ನಾಯಕರಾಗಿದ್ದವರು ಪಕ್ಷದೊಳಗೇ ಒಂದು ಬಣ ಕಟ್ಟಿಕೊಂಡು ಹೇಳಿಕೆ ಕೊಡಿಸುತ್ತಿರುವುದನ್ನು ಮನ್ನಿಸಬೇಕೆ? ಒಂದು ವೇಳೆ, ಪ್ರಧಾನಿಯಾಗಲು ತನಗಿನ್ನೂ ವಯಸ್ಸು, ಅರ್ಹತೆ ಇದೆ ಎನ್ನುವುದಾದರೆ ಅದಕ್ಕೆ ಪೂರಕವಾಗಿ ಆಡ್ವಾಣಿಯವರು ಮಾಡುತ್ತಿರುವುದೇನು? ಒಬ್ಬ ನಾಯಕನಾದವನು ತನಗೆಷ್ಟೇ ಅಳುಕುಗಳಿದ್ದರೂ ಯುದ್ಧವನ್ನು ಗೆದ್ದೇ ತೀರುತ್ತೇನೆಂದು ಕಣಕ್ಕಿಳಿಯಬೇಕಲ್ಲವೆ? ತನ್ನ ಜತೆಗಿರುವವರಲ್ಲೂ ಗೆಲುವು ನಮ್ಮದೇ ಎಂಬ ಭಾವನೆಯನ್ನು ಸೃಷ್ಟಿಸಿ ಹೋರಾಡಬೇಕಲ್ಲವೆ? ಆದರೆ 2009ರ ಚುನಾವಣೆಗಿಂತ ಸ್ವಲ್ಪ ಮೊದಲು ಬ್ಲಾಗ್ ಬರೆಯಲು ಆರಂಭಿಸಿದ ಆಡ್ವಾಣಿಯವರ ಕಳೆದೊಂದು ವರ್ಷದ ಲೇಖನಗಳನ್ನೆಲ್ಲ ಓದಿದರೆ ಅದರಿಂದ ವ್ಯಕ್ತವಾಗುವುದೇನು? ಈಗ್ಗೆ ಕೆಲವು ತಿಂಗಳ ಹಿಂದಷ್ಟೇ ಬಿಜೆಪಿ ಹಾಗೂ ಕಾಂಗ್ರೆಸೇತರ ಸರ್ಕಾರ ಬರುವ ಸಾಧ್ಯತೆ ಇದೆ ಎಂದು ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದರು. ಮೊನ್ನೆ ಏಪ್ರಿಲ್ 3 ರಂದು ಮಧ್ಯಪ್ರದೇಶದ ಚಿತ್ರಕೂಟದಲ್ಲಿ ಮಾತನಾಡುತ್ತಾ ಕಾಂಗ್ರೆಸ್-ಬಿಜೆಪಿ ಬೆಂಬಲವಿಲ್ಲದೆ ಯಾರೂ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದರರ್ಥವೇನು? 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಒಪ್ಪಿಕೊಂಡಂತಾಗಲಿಲ್ಲವೆ? ಅಂದಮೇಲೆ ತಮ್ಮ ಪ್ರಧಾನಿ ಆಕಾಂಕ್ಷೆಯನ್ನು ಬಿಟ್ಟು, ಬಿಜೆಪಿಯನ್ನು ಗೆಲ್ಲಿಸುತ್ತೇನೆ ಎಂದು ಯಾವ ನಾಯಕರಾದರೂ ಮುಂದೆ ಬಂದರೆ ದಾರಿ ಬಿಟ್ಟುಕೊಡಬಹುದಲ್ಲಾ? ನಾನು ಅಂಥ ಅಸೆಯನ್ನು ಇಟ್ಟುಕೊಂಡಿಲ್ಲ ಅಂಥ ಹೇಳಿ ಬಿಡಬಹುದಲ್ಲಾ? ಈ ಆಡ್ವಾಣಿಯವರು ಒಂದೋ ಪತ್ರಕರ್ತರಾಗಬೇಕು, ಇಲ್ಲವೆ ರಾಜಕಾರಣಿಯಾಗಬೇಕು. ಎರಡೂ ಆಗಲು ಹೊರಟರೆ ಇದೇ ಕಥೆ. ಕರ್ನಾಟಕವನ್ನಿಟ್ಟುಕೊಂಡು ಭ್ರಷ್ಟಾಚಾರದ ಬಗ್ಗೆಯೂ ಆಡ್ವಾಣಿ ಬೋಧನೆ ಕೊಡುತ್ತಿರುತ್ತಾರೆ. ಅವರ ಮಾತು ಒಪ್ಪುವಂಥದ್ದೇ. ಅದಕ್ಕಾಗಿ ಯಡಿಯೂರಪ್ಪನವರ ತಲೆದಂಡವನ್ನೂ ತೆಗೆದುಕೊಂಡಿದ್ದಾಯಿತು. ಆದರೆ ಭ್ರಷ್ಟಾಚಾರದ ಬ್ರಹ್ಮಾಂಡವಾದ ಕೇಂದ್ರದ ಕಾಂಗ್ರೆಸ್ ಅನ್ನು ಕೆಳಗಿಳಿಸಲು ಆಡ್ವಾಣಿಯವರು ಏನು ಮಾಡುತ್ತಿದ್ದಾರೆ? ಆಹಾರಕ್ಕಾಗಿ ತೈಲ ಹಗರಣದಿಂದ 2ಜಿ, ಕಲ್ಲಿದ್ದಲು ಹಾಗೂ ಬನ್ಸಲ್ ಲಂಚ, ಸಿಂಘ್ವಿ ಮಂಚದವರೆಗೂ 20ಕ್ಕೂ ಹೆಚ್ಚು ಹಗರಣಗಳು ಸಂಭವಿಸಿದ್ದರೂ ಯುಪಿಎ ಸರ್ಕಾರವನ್ನು ಪೇಚಿಗೆ ಸಿಲುಕಿಸುವಂಥ, ಅಲುಗಾಡಿಸುವಂಥ ಯಾವ ಕೆಲಸವನ್ನು ಆಡ್ವಾಣಿಯವರಾಗಲಿ, ಅವರ ಅನುಯಾಯಿ ಸುಷ್ಮಾ ಸ್ವರಾಜ್, ಅನಂತ್ ಕುಮಾರ್ ಅವರಾಗಲಿ ಮಾಡಿದ್ದಾರೆ? ಅರುಣ್ ಶೌರಿಯವರ ಒಂದು ವರದಿ ಅಂಟುಳೆಯವರನ್ನು ಗದ್ದುಗೆಯಿಂದ ಕೆಳಕ್ಕೆ ಹಾಕಿದ ಉದಾಹರಣೆಯನ್ನು ನಾವು ನೋಡಿದ್ದೇವೆ. ಪಿರೋಝ್ ಗಾಂಧಿ ಮಾವ ನೆಹರು ಅವರನ್ನೇ ಸಂಸತ್ತಿನಲ್ಲಿ ಅಲುಗಾಡಿಸಿದ್ದನ್ನು ಕೇಳಿದ್ದೇವೆ, ವಾಜಪೇಯಿ ಮಾತಿಗಿಳಿದಾಗ ಸಂಸತ್ತೇ ಮೂಕವಿಸ್ಮಿತವಾಗಿ ಕೇಳಿದ್ದನ್ನೂ ನೋಡಿದ್ದೇವೆ, ನೊಂದು ರಾಜಿನಾಮೆ ನೀಡಿದಾಗ ಜನ ಮತ್ತೆ ಪುನರಾಯ್ಕೆ ಮಾಡಿದ್ದನ್ನು ಕಂಡಿದ್ದೇವೆ. ಭ್ರಷ್ಟಾಚಾರದ ಬಗ್ಗೆ ಬ್ಲಾಗ್‌ಗಳಲ್ಲಿ ಭಾರೀ ಭಾರೀ ಬರೆಯುವ ಆಡ್ವಾಣಿಯವರು ಕೇಂದ್ರದ ಭ್ರಷ್ಟಾಚಾರದ ವಿಷಯದಲ್ಲಿ ಮಾಡಿದ್ದೇನು? ಈ ಬಿಜೆಪಿ, ಒಮ್ಮೆಯಾದರೂ ಕೇಂದ್ರ ಸರ್ಕಾರವನ್ನು ಅಲುಗಾಡಿಸಿತೇ? ಭ್ರಷ್ಟಾಚಾರದ ವಿರುದ್ಧ ದೇಶಾದ್ಯಂತ ಜನಾಂದೋಲನ ಹಾಗೂ ಜನಾಭಿಪ್ರಾಯ ರೂಪಿಸಿದ್ದು ಅಣ್ಣಾ ಹಝಾರೆ ಹಾಗೂ ಅವರ ತಂಡದವರೇ ಹೊರತು ಬಿಜೆಪಿ ಕೇಂದ್ರ ನಾಯಕತ್ವವಾಗಲಿ, ಸಂಸದರಾಗಲಿ ಅಲ್ಲ. ಆಗ ಬಿಜೆಪಿ ಹೇಗೆ ಮಲಗಿತ್ತು ಎಂದರೆ ಅದರ ಸಂಸದ ವರುಣ್‌ಗಾಂಧಿ ಜಂತರ್ ಮಂಥರ್‌ಗೆ ಬಂದು ಜನರ ಮಧ್ಯೆ ಕೂತು ಅಣ್ಣಾ ಹೋರಾಟಕ್ಕೆ ಬೆಂಬಲ ಸೂಚಿಸಿ ಹೋಗಬೇಕಾಯಿತು. ಅದಿರಲಿ, 2009ರಲ್ಲಿ ಹೀನಾಯವಾಗಿ ಸೋತ ನಂತರ ಊಗಂಗಳನ್ನು 'ಎಲೆಕ್ಷನ್ ವಿನ್ನಿಂಗ್ ಮಷೀನ್ಸ್‌' ಎಂದು ಹೇಳಿದ್ದ ಬಿಜೆಪಿ, ನಂತರ ಆ ಬಗ್ಗೆ ಮಾಡಿದ್ದೇನು? 2ಜಿ ಹಗರಣದಿಂದ, EVMವರೆಗೂ ಹೋರಾಡುತ್ತಿರುವುದು ಸುಬ್ರಹ್ಮಣ್ಯಂ ಸ್ವಾಮಿ. ಒಬ್ಬ ಸುಬ್ರಹ್ಮಣ್ಯಂ ಸ್ವಾಮಿಯಲ್ಲಿರುವ ತಾಕತ್ತು ಇಡೀ ಬಿಜೆಪಿ ಕೇಂದ್ರ ನಾಯಕತ್ವದಲ್ಲಿಲ್ಲವೇಕೆ? ಈ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಸಂಸತ್ತಿನಲ್ಲಿ ಮಾಡುವ ದೊಡ್ಡ ದೊಡ್ಡ ಭಾಷಣಗಳೂ Stage Managed  ಹಾಗೂ ಜನರ ಕಣ್ಣೊರೆಸುವ ತಂತ್ರ ಎನಿಸುತ್ತವೆ. ಇಲ್ಲವಾದರೆ ಆ ದಿನದ ಇಂಗ್ಲಿಷ್ ಟೀವಿ ಚರ್ಚೆಯ ಆಚೆಗೆ ಅವರ ಭಾಷಣಗಳೇನೂ ಪರಿಣಾಮ ಬೀರುವುದಿಲ್ಲ. ಏಕೆ? ಸರ್ಕಾರವನ್ನು ಹಣಿಯಲು, ನಡುಗಿಸಲು 2ಜಿ, ಕಲ್ಲಿದ್ದಲು ಹಗರಣಗಳಿಂತ ದೊಡ್ಡ ವಿಷಯಗಳು ಬೇಕಿದ್ದವೇ? ಇತ್ತೀಚೆಗೆ ಸ್ನೇಹಿತ ಸಂದೀಪ್ ಬಾಲಕೃಷ್ಣ ಅವರು ಅರುಣ್ ಶೌರಿಯವರನ್ನು ಸಂದರ್ಶನಕ್ಕೆಂದು ಭೇಟಿಯಾದಾಗ "Parliament has become a stage for drama' ಎಂದಿದ್ದಾರೆ. ಅವರ ಮಾತಲ್ಲಿ ಎಷ್ಟು ಸತ್ಯವಿದೆ ಎಂಬುದಕ್ಕೆ ಉದಾಹರಣೆ ಬೇಕಾ? ಕಳೆದ ಆಗಸ್ಟ್‌ನಲ್ಲಿ ನಡೆದ ಅಧಿವೇಶನದ ಸಂದರ್ಭದಲ್ಲಿ ಲಾಲಕೃಷ್ಣ ಆಡ್ವಾಣಿಯವರು ಕಾಂಗ್ರೆಸ್ ಮೇಲೆ ಟೀಕಾಪ್ರಹಾರ ಮಾಡುತ್ತಾ, 'ಯುಪಿಎ-2 ಇದೆಯಲ್ಲಾ ಅದೊಂದು ಅಕ್ರಮ ಸರ್ಕಾರ' ಎಂದುಬಿಟ್ಟರು. ಕೂಡಲೇ ಕಾಂಗ್ರೆಸ್‌ನ 'ಮದರ್ ಇಂಡಿಯಾ' ಸೋನಿಯಾ ಗಾಂಧಿಯವರು ಸಿಟ್ಟಿಗೆದ್ದರು. ಸಂಸತ್ತಿನಲ್ಲಿ ಕೋಲಾಹಲವೇ ನಡೆಯಿತು. ಟೀವಿಗಳಲ್ಲಿ ಅದೇ ಚರ್ಚೆ  ನಡೆಯಿತು, ಅದರ ಬೆನ್ನಲ್ಲೇ ಆಡ್ವಾಣಿಯವರು ಕ್ಷಮೆಯಾಚಿಸಿದರು. ಈ ನಡುವೆ ಸಂಸತ್ತಿನಲ್ಲಿ ಚರ್ಚೆಯಾಗಬೇಕಿದ್ದ ಅಸ್ಸಾಂ ಹಿಂಸಾಚಾರ ಮರೆತೇ ಹೋಯಿತು! ಹೇಗಿದೆ ನೋಡಿ ಪರಸ್ಪರರನ್ನು ರಕ್ಷಿಸಿಕೊಳ್ಳುವ ಡ್ರಾಮಾ? ಅಸ್ಸಾಂ ಹಿಂಸಾಚಾರದ ಮೇಲಿನ ಚರ್ಚೆಯನ್ನು ಸಂಸತ್ತಿನಲ್ಲಿ ಆರಂಭಿಸಲು ನಿಂತಿದ್ದ ಆಡ್ವಾಣಿಯವರು ಯುಪಿಎ-2ನ್ನು 'ಅಕ್ರಮ ಸರ್ಕಾರ' ಎನ್ನುವ ಅಗತ್ಯವೇನಿತ್ತು ಹೇಳಿ? ಅದನ್ನೇ ಶೌರಿಯವರು "Homoginisation of Indian political class'ಎನ್ನುವುದು. ಆಡಳಿತದಲ್ಲಿರುವವರಿರಲಿ, ವಿರೋಧಪಕ್ಷದಲ್ಲಿರುವವರಿರಲಿ ಎಲ್ಲರೂ ಒಳಗೊಳಗೇ ಒಂದಾಗಿ ಬಿಟ್ಟಿದ್ದಾರೆ.
ಆಡ್ವಾಣಿ, ಸುಷ್ಮಾ, ಜೇಟ್ಲಿಯವರೇ, ಇವತ್ತು ದೇಶಾದ್ಯಂತ ಮೋದಿ ಪ್ರಧಾನಿಯಾಗಬೇಕೆಂಬ ಕೂಗೆದ್ದಿರುವುದು ಇದೇ ಕಾರಣಕ್ಕೆ ಸ್ವಾಮಿ!
ಇತ್ತ ಹೆಚ್ಚಿನ ರಾಜಕಾರಣಿಗಳೆಲ್ಲರೂ ಏಕೆ ಮೋದಿ ವಿರುದ್ಧವಾಗಿದ್ದಾರೆಂದರೆ, ಅವರು ಪ್ರಧಾನಿಯಾದರೆ ಎಲ್ಲರ ಬಣ್ಣಗಳೂ ಬಯಲಾಗುತ್ತವೆ, ಪಟ್ಟಭದ್ರ ಹಿತಾಸಕ್ತಿಗಳು ಬೆಳಕಿಗೆ ಬರುತ್ತವೆ ಅಂತ. ಮೋದಿಯನ್ನು ಗುಜರಾತ್ ಹಿಂಸಾಚಾರದ ಸಲುವಾಗಿ ಕೆಲವರು ತೆಗಳಬಹುದು. ಆದರೆ ಈ ದೇಶದಲ್ಲಿ ಕಾಣುತ್ತಿರುವ ಏಕೈಕ ಆಶಾಕಿರಣ ಅವರೆನ್ನುವುದನ್ನು ಯಾರೂ ತಳಿಹಾಕಲು ಸಾಧ್ಯವಿಲ್ಲ. "Being a crowd puller does not make anyone a prime ministerial candidate'ಎನ್ನುತ್ತಿರುವ ಉಮಾಭಾರತಿ ಎಂಬ ಪೆದ್ದಿಗೆ ಹೇಳಿ, 1990ರ ದಶಕದಲ್ಲಿ ನಮ್ಮ ಪ್ರಧಾನಿ ಆಯ್ಕೆಗೆ ಅಮೆರಿಕದಲ್ಲಿ ನಡೆಯುವ ಅಧ್ಯಕ್ಷೀಯ ಮಾದರಿಯ ಚುನಾವಣಾ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಹೇಳುತ್ತಿದ್ದುದು ಇದೇ ಬಿಜೆಪಿಯೇ. ಏಕೆ ಅಂದುಕೊಂಡಿರಿ? ಆಗ ಇಡೀ ದೇಶದಲ್ಲೇ ಅತ್ಯಂತ ಜನಪ್ರಿಯ ನೇತಾರರಾಗಿದ್ದವರು ಹಾಗೂ ಲಕ್ಷಾಂತರ ಜನರನ್ನು ತಮ್ಮ ಭಾಷಣಗಳಿಗೆ ಸೆಳೆಯುತ್ತಿದ್ದವರು ಅಟಲ್‌ಬಿಹಾರಿ ವಾಜಪೇಯಿ ಹಾಗೂ ಲಾಲಕೃಷ್ಣ ಆಡ್ವಾಣಿಯವರಾಗಿದ್ದರು. ಜತೆಗೆ ಅಯೋಧ್ಯೆಯೆಂಬ ಬಿರುಗಾಳಿಯ ಹೊರತಾಗಿಯೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸೀಟುಗಳು 85(1989) 120(1991) ದಾಟಿರಲಿಲ್ಲ. ಹಾಗಾಗಿ ಅಧ್ಯಕ್ಷೀಯ ಮಾದರಿಯ ಚುನಾವಣೆಯ ಬಗ್ಗೆ ಬಿಜೆಪಿ ಧ್ವನಿಯೆತ್ತಿತು, ವಾಜಪೇಯಿ-ಆಡ್ವಾಣಿ ಹೆಸರಿನಲ್ಲಿ ಪ್ರಧಾನಿ ಸ್ಥಾನ ಪಡೆದುಕೊಳ್ಳಬೇಕೆಂಬ ಉದ್ದೇಶ ಅಲ್ಲಿತ್ತು. ಅಂದು ಬಿಜೆಪಿ ಅಂಥದ್ದೊಂದು ವ್ಯವಸ್ಥೆ ತನ್ನಿ ಎಂದು ಒತ್ತಾಯಿಸಿದ್ದು ವಾಜಪೇಯಿಯವರ ಜನಾಕರ್ಷಣೆಯ ತಾಕತ್ತಿನ ಭರವಸೆಯಿಂದಲೇ ಅಲ್ಲವೆ? ಇಂದು ಬಿಜೆಪಿಗೆ 180-200 ಸೀಟು ಗಳಿಸಿಕೊಡುವ ತಾಕತ್ತು ಯಾರಿಗಾದರೂ ಇದ್ದರೆ ಅದು ನರೇಂದ್ರ ದಾಮೋದರದಾಸ್ ಮೋದಿಯವರಿಗೆ ಮಾತ್ರ. ಇವತ್ತು ಜನ ಪಕ್ಷವನ್ನು ಮಾತ್ರವಲ್ಲ, ಆ ಪಕ್ಷದ ನೇತಾರ ಎಂಥವನು ಎಂಬುದನ್ನು ನೋಡಿ ವೋಟು ಕೊಡುತ್ತಾರೆ. ಪಕ್ಷದ ಮುಖ್ಯಮಂತ್ರಿ, ಪ್ರಧಾನಿ ಅಭ್ಯರ್ಥಿ ಅತ್ಯಂತ ಯೋಗ್ಯನಾಗಿದ್ದರೆ ಶಾಸಕ, ಸಂಸದ ಸ್ಥಾನಕ್ಕೆ ನಿಂತಿರುವವನು ಅಯೋಗ್ಯನಾಗಿದ್ದರೂ ಮತ ಹಾಕುತ್ತಾರೆ. ಅಂದರೆ ಒಬ್ಬ ನಾಯಕ ಒಂದು ವಿಚಾರ, ಹೋರಾಟ ಹಾಗೂ ಪಕ್ಷದ 'ರ್ಯಾಲಿಯಿಂಗ್ ಪಾಯಿಂಟ್‌' ಆಗುತ್ತಾನೆ. ಅಂತಹ ಸಾಮರ್ಥ್ಯ ಮೋದಿಯಲ್ಲಲ್ಲದೆ ಬಿಜೆಪಿಯಲ್ಲಿ ಮತ್ಯಾರಲ್ಲಿದೆ? ಆಡ್ವಾಣಿಯವರೇ, ಒಮ್ಮೆ ನಿಮ್ಮನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿ, ನೋಡಿದ್ದಾಗಿದೆ. ಸಾಕು ಬಿಡಿ. 'ಬಣ್ಣವನ್ನೆಲ್ಲ ಮಸಿ ನುಂಗಿತು' ಅನ್ನೋಹಾಗೆ ನಿಮ್ಮ ಹಾಗೂ ನಿಮ್ಮ ಬಾಲಬಡುಕರ ಗದ್ದುಗೆ ಆಸೆ ಬಿಜೆಪಿಯನ್ನೇ ನುಂಗೀತು, ಜೋಕೆ...!

- ಪ್ರತಾಪ್ ಸಿಂಹ
mepratap@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com