ಬಿಜೆಪಿ ಈಗ ಹಿಡಿಯಲೇಬೇಕು ಮೋದಿ ಹಾದಿ
ರಾಷ್ಟ್ರೀಯ ರಾಜಕಾರಣದತ್ತ ಜನರ ಇರಾದೆ ಹೇಗೆ ಬದಲಾಗಿದೆ ಎನ್ನುವುದರ ಬಗ್ಗೆ ನಡೆದ ಮೂರು ಸಮೀಕ್ಷೆಗಳ ಒಡಲಲ್ಲಿ ಮೂರು ಸಂದೇಶಗಳು ಬೆಚ್ಚಗೆ ಕುಳಿತಿವೆ. ಅದರಲ್ಲಿ ಎರಡು ಸಂದೇಶಗಳು ಬಿಜೆಪಿಗೆ ಸಂಬಂಧಿಸಿದವು, ಇನ್ನುಳಿದ ಒಂದು ಕಾಂಗ್ರೆಸ್ಗೆ ಪಾಲಿಗೆ.
ಎಬಿಪಿ-ನ್ಯೂಸ್ಗಾಗಿ ಎ.ಸಿ. ನೀಲ್ಸನ್, ಹೆಡ್ಲೈನ್ಸ್ ಟುಡೆಗಾಗಿ ಸಿ-ವೋಟರ್ ಮತ್ತು ಸಿಎನ್ಎನ್ ಐಬಿಎನ್ಗಾಗಿ ಜಿಎಫ್ಕೆ ನಡೆಸಿದ ಅಭಿಪ್ರಾಯ ಸಂಗ್ರಹದಿಂದ, 'ಕಾಂಗ್ರೆಸ್ನ ಬುಡ ಅಲ್ಲಾಡುತ್ತಿದೆ ಮತ್ತದು ದೇಶಾದ್ಯಂತ ತನ್ನ ನೆಲೆಕಳೆದುಕೊಳ್ಳಲಿದೆ' ಎನ್ನುವ ಸಂಗತಿ ಹೊರಬಿದ್ದಿದೆ. ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲು ಅದಕ್ಕೆ ಬಂದೆರಗಬಹುದು ಎನ್ನಲಾಗಿದೆ. ಸಂದೇಶ: ಕಾಂಗ್ರೆಸ್ 2014ರವರೆಗೂ ಸರ್ಕಾರವನ್ನು ಹೇಗಾದರೂ ಉಳಿಸಿಕೊಂಡು ಹೋಗಬೇಕು. ಅವಧಿಗೆ ಮುನ್ನ ಚುನಾವಣೆ ಆದರೆ, ಹೀನಾಯ ಸೋಲು ಎಂದರ್ಥ.
ಆದರೆ ಅದಕ್ಕಿಂತಲೂ ಮುಖ್ಯವಾದ ಸಂದೇಶವೊಂದು ಬಿಜೆಪಿಗೆ ಎದುರಾಗಿದೆ. ದೇಶದಾದ್ಯಂತ ಹೆಚ್ಚುತ್ತಿರುವ ಕಾಂಗ್ರೆಸ್ ವಿರೋಧಿ ಅಲೆಯಿಂದಾಗಿ ತಾನು ಆಸಾನಾಗಿ ಗದ್ದುಗೆಗೆ ಏರಿಬಿಡುತ್ತೇನೆ ಎಂದದು ಭಾವಿಸುತ್ತಿದೆ. ಸಮೀಕ್ಷೆಗಳಿಂದ ತಿಳಿದು ಬಂದದ್ದೇನೆಂದರೆ: ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಸೋತರೂ, ಬಿಜೆಪಿಗೆ ಸರ್ಕಾರ ರಚಿಸುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಗೆಲುವು ತಂದುಕೊಡುವುದಕ್ಕೆ ಮೋದಿ ಅವರಿಂದ ಮಾತ್ರ ಸಾಧ್ಯ.
ಒಂದು ವೇಳೆ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿಸದೆ ಚುನಾವಣೆಗಿಳಿದರೆ ಎನ್ಡಿಎ 206 ಸ್ಥಾನಗಳನ್ನು ಪಡೆಯಬಹುದು ಎನ್ನುತ್ತದೆ ಎಬಿಪಿ ನ್ಯೂಸ್ನ ಸಮೀಕ್ಷೆ. ಇನ್ನು ಸಿ-ವೋಟರ್ ಸಮೀಕ್ಷೆ ಎನ್ಡಿಎ 179 ಸೀಟುಗಳಷ್ಟೇ ಗಳಿಸಲು ಶಕ್ತವಾಗುತ್ತದೆ ಮತ್ತು ಬಿಜೆಪಿ ಕೇವಲ 137 ಸೀಟುಗಳನ್ನಷ್ಟೇ ಗಳಿಸಬಹುದು ಎಂದು ಹೇಳುತ್ತದೆ.
ಒಳಜಗಳಗಳ ರಗಳೆಯಲ್ಲೇ ಹುದುಗಿ ಹೋಗಿ, ಸಾಧ್ಯವಾದಷ್ಟೂ ತನ್ನ ಗೊಂದಲಮಯ ಚಹರೆಯನ್ನೇ ಮತದಾರರಿಗೆ ತೋರಿಸುತ್ತಿರುವ ಕೇಂದ್ರ ಬಿಜೆಪಿ ನಾಯಕತ್ವಕ್ಕೆ ಈ ಸಂದೇಶಗಳು ಚಾಟಿಯೇಟಿನಂತಿವೆ.
ಸಿ-ವೋಟರ್ ಸಮೀಕ್ಷೆಯನ್ನು ನೋಡಿದರೆ ಮತದಾರ ಕಾಂಗ್ರೆಸ್ನಿಂದ ವಿಮುಖನಾಗುತ್ತಿದ್ದರೂ, ಬಿಜೆಪಿಗೆ ಹತ್ತಿರವಂತೂ ಆಗುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅಧಿಕಾರ ವಿರೋಧಿ ಅಲೆಯಿಂದಾಗಿ ತನಗೆ ಲಾಭವಾಗುತ್ತದೆ ಎಂದು ಬಿಜೆಪಿ ಭಾವಿಸುವಂತಿಲ್ಲ, ಏಕೆಂದರೆ ಆ ಲಾಭವೆಲ್ಲವೂ ಪ್ರಾದೇಶಿಕ ಪಕ್ಷಗಳಿಗೇ ಆಗುವ ಸಾಧ್ಯತೆಯಿದೆ. ಆ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಯೇತರ ರಂಗಗಳೇ ಸರ್ಕಾರ ರಚಿಸಲಿವೆ ಎಂದು ಸಿ-ವೋಟರ್ ಸಮೀಕ್ಷೆ ಹೇಳುತ್ತದೆ. ಆದರೆ ಅದು ಅಷ್ಟು ಸುಲಭದ ಕೆಲಸವೇ? ಎಸ್ಪಿ ಇದ್ದಲ್ಲಿ ಮಾಯಾವತಿ ಇರುವುದಿಲ್ಲ, ಟಿಎಮ್ಸಿ ಹೋದಲ್ಲಿ ಎಡ ರಂಗಗಳು ಕಾಲಿಡುವುದಿಲ್ಲ!
ಆದರೆ ಈ ಮೂರೂ ಸಮೀಕ್ಷೆಗಳಲ್ಲಿ ಸಾಮ್ಯತೆಯೊಂದಿದೆ. ಮೋದಿ. ಮೋದಿ ಬಿಜೆಪಿಯ ಗೆಲುವಿನ ಸರದಾರರಾಗಲಿದ್ದಾರೆ ಎಂದೇ ಇವೆಲ್ಲವೂ ಹೇಳುತ್ತಿವೆ. ಒಂದು ವೇಳೆ 2014ರಲ್ಲಿ ಮೋದಿಯನ್ನು ಬಿಜೆಪಿಯ ಚಹರೆಯನ್ನಾಗಿ ಮಾಡದಿದ್ದರೆ, ಆ ಪಕ್ಷ ದೊಡ್ಡ ದುರಂತಕ್ಕೆ ಸಾಕ್ಷಿಯಾಗುತ್ತದೆ ಎನ್ನುತ್ತವವು.
ಸಿಎನ್ಎನ್-ಐಬಿಎನ್ ಸಮೀಕ್ಷೆಯ ಪ್ರಕಾರ ನಗರಪ್ರದೇಶಗಳ ಸುಮಾರು 38 ಪ್ರತಿಶತದಷ್ಟು ಜನರು ಮೋದಿಗೆ ಜೈ ಅನ್ನುತ್ತಿದ್ದರೆ, ಮನಮೋಹನ್ ಸಿಂಗ್, ರಾಹುಲ್ ಗಾಂಧಿ ಅವರಿಗೆ ಬೆಂಬಲ ನೀಡುವವರ ಸಂಖ್ಯೆ ಕ್ರಮವಾಗಿ 13, 14 ಪ್ರತಿಶತದಷ್ಟು ಮಾತ್ರವಿದೆ. ಇನ್ನು ಆಡ್ವಾಣಿ ಅವರು ಪ್ರಧಾನಿ ಆಗಬೇಕೆಂದು ಬಯಸುವವರ ಸಂಖ್ಯೆ ಕೇವಲ 5 ಪ್ರತಿಶತದಷ್ಟು ಮಾತ್ರ. 80 ಮತ್ತು 90ರ ದಶಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ವ್ಯಕ್ತಿ ಈ ಬಾರಿ ಜನರಿಗೆ ಬೇಕಿಲ್ಲ. ನರೇಂದ್ರ ಮೋದಿಯವರಿಂದ ಭಾರತಕ್ಕೆ ಉತ್ತಮ ಭವಿಷ್ಯ ಎದುರಾಗಲಿದೆ ಎಂದು ಭಾವಿಸುವವರ ಸಂಖ್ಯೆ 60 ಪ್ರತಿಶತವಿದ್ದರೆ, ಈ ವಿಷಯದಲ್ಲಿ ಆಡ್ವಾಣಿಯವರನ್ನು ಬೆಂಬಲಿಸಿದವರ ಸಂಖ್ಯ ಕೇವಲ 10 ಪ್ರತಿಶತದಷ್ಟು.
ಇನ್ನು ನಗರ ಪ್ರದೇಶಗಳ ಕುರಿತು ಎಬಿಪಿ ನ್ಯೂಸ್-ಎಸಿ ನೀಲ್ಸನ್ ಸಮೀಕ್ಷೆಯೂ ಅಷ್ಟೇನೂ ಭಿನ್ನವಾಗಿಲ್ಲ. 36 ಪ್ರತಿಶತ ಜನ ಮೋದಿಗೆ ಮಣೆ ಹಾಕಿದರೆ, ಮನಮೋಹನ್ ಮತ್ತು ರಾಹುಲ್ರನ್ನು ಬೆಂಬಲಿಸುವವರ ಸಂಖ್ಯೆ ಕ್ರಮವಾಗಿ 13 ಮತ್ತು 12 ಪ್ರತಿಶತದಷ್ಟಿದೆ. ಆದರೆ ಈ ವಿಚಾರದಲ್ಲಿ ಅತ್ಯಂತ ಕುತೂಹಲಪೂರ್ಣವಾಗಿರುವುದು ಸಿ-ವೋಟರ್ ಸಮೀಕ್ಷೆ. ಒಂದು ವೇಳೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಮೋದಿಯವರನ್ನು ಪ್ರದಾನಿ ಅಭ್ಯರ್ಥಿ ಎಂದು ಬಿಂಬಿಸಿದರೆ ಏನಾಗಬಹುದು, ಬಿಂಬಿಸದಿದ್ದರೆ ಏನಾಗಬಹುದು ಎನ್ನುವುದರ ಲೆಕ್ಕಾಚಾರ ಅದರಲ್ಲಿದೆ.
ಮೋದಿಯಿಲ್ಲದೆ, ಎನ್ಡಿಎಗೆ ಒಟ್ಟಾರೆ 179 ಸ್ಥಾನಗಳು ದೊರೆತರೆ, ಅದರಲ್ಲಿ ಬಿಜೆಪಿಯ ಪಾಲು 137ರಷ್ಟಿರಲಿದೆ. ಮೋದಿಯನ್ನೇ ಮುಂಚೂಣಿಯಲ್ಲಿ ನಿಲ್ಲಿಸಿದರೆ, ಬಿಜೆಪಿ ನೇತೃತ್ವದ ಎನ್ಡಿಎಗೆ ಬಹಳಷ್ಟು ಲಾಭವಾಗಲಿದೆ.
ಎನ್ಡಿಎದ ವೋಟ್ ಶೇರ್ 31 ಪ್ರತಿಶತದಿಂದ 36 ಪ್ರತಿಶತಕ್ಕೆ ಏರುತ್ತದೆ(ಅಂದರೆ ಮೋದಿಯವರಿಂದಾಗಿ 5ಪ್ರತಿಶತ ಹೆಚ್ಚಳ) ಮತ್ತು ಒಟ್ಟಾರೆ ಸೀಟುಗಳ ಸಂಖ್ಯೆ 220 ಕ್ಕೆ ಮುಟ್ಟುತ್ತದೆ. ಅಂದರೆ ಬಹುಮತ ಪಡೆಯಲು ಕೇವಲ 52 ಸೀಟುಗಳಷ್ಟೇ ಕಡಿಮೆ ಬೀಳುತ್ತವೆ. ಅಂದರೆ ಮೋದಿಯಿದ್ದರೆ 41 ಹೆಚ್ಚು ಸೀಟುಗಳು ಗಿಟ್ಟುತ್ತವೆ ಎಂದು ಇದರರ್ಥ.
ಈಗ ಬಹುದೊಡ್ಡ ಪ್ರಶ್ನೆಯೊಂದನ್ನು ಕೇಳಿಕೊಳ್ಳಬೇಕಿದೆ: 'ಈ ಅಂಕಿ ಸಂಖ್ಯೆಗಳನ್ನು ನಂಬಬಹುದಾ?'. ಕರ್ನಾಟಕದಲ್ಲಿ ಮೋದಿಯವರ ಆಟ ಅಷ್ಟೇನೂ ನಡೆಯಲಿಲ್ಲ ಎಂದು 'ಸಂದೇಹವಾದಿಗಳು' ಮತ್ತೆ ಸಂದೇಹ ಪಡಬಹುದು.
ಕರ್ನಾಟಕ ಚುನಾವಣೆಯಲ್ಲಿ ಸ್ಥಳೀಯ ಅಂಶಗಳೇ ಹೆಚ್ಚು ಪ್ರಾಮುಖ್ಯ ವಹಿಸಿದ್ದವು. ಇನ್ನು ಪ್ರಚಾರದ ವೇಳೆ ಮೋದಿ ತಮ್ಮ ಹೆಸರನ್ನೇನೂ ಪಣಕ್ಕಿಟ್ಟಿರಲಿಲ್ಲ. ರಾಷ್ಟ್ರೀಯ ಚುನಾವಣೆಯೇ ಬೇರೆ, ರಾಜ್ಯ ಚುನಾವಣೆಗಳ ಸ್ವರೂಪವೇ ಬೇರೆ. ಹಾಗಾಗೇ ಮೋದಿ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಪ್ರಮುಖರಾಗುತ್ತಾರೆ.
ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರ ಮೇಲೆ ನಡೆಸಿದ ಸಿ-ವೋಟರ್ ಸಮೀಕ್ಷೆಯಲ್ಲಿ, 'ಒಂದು ವೇಳೆ ಬಿಜೆಪಿಯ ನೇತೃತ್ವವನ್ನು ಮೋದಿ ವಹಿಸಿಕೊಂಡರೆ ಆ ಪಕ್ಷಕ್ಕೆ ಮತ ನೀಡುತ್ತೀರಾ? ಮೋದಿ ಇಲ್ಲದಿದ್ದರೂ ಮತ ನೀಡುತ್ತೀರಾ?' ಎನ್ನುವ ಪ್ರಶ್ನೆಯನ್ನು ಕೇಳಲಾಗಿತ್ತು. ಮೋದಿಯವರ ಮತ ಧ್ರುವೀಕರಿಸುವ ಗುಣದಿಂದ ಎರಡು ಮಹತ್ತರ ಪರಿಣಾಮಗಳು ಉಂಟಾಗಲಿವೆ: ಒಂದು ಬಿಜೆಪಿಗೆ ಲಾಭ ಮತ್ತು ಎರಡನೆಯದು ಮುಸ್ಲಿಂ ಮತಗಳಿಂದಾಗಿ ಬಿಜೆಪಿಯ ಸ್ಥಳೀಯ ಎದುರಾಳಿಗಳಿಗೆ ಲಾಭ.
ಅತಿ ದೊಡ್ಡ ಬದಲಾವಣೆಗಳನ್ನು ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕಾಣಬಹುದು. ಮೋದಿ ಮೆರವಣಿಗೆಯಿಂದಾಗಿ 2009ರಲ್ಲಿ 10 ರಷ್ಟಿದ್ದ ಬಿಜೆಪಿಯ ಸ್ಥಾನಗಳು 2014ರಲ್ಲಿ 29ಕ್ಕೇ ಏರಲಿದ್ದು, ಬಿಎಸ್ಪಿ ಮತ್ತು ಕಾಂಗ್ರೆಸ್ನ ಸ್ಥಾನಗಳಿಗ ಕುತ್ತು ಬರಲಿದೆ.
ಬಿಹಾರದಲ್ಲಂತೂ ಅಚ್ಚರಿ ಕಾದಿದೆ: ನಿತೀಶ್ ಕುಮಾರ್ ಅವರಿಗೆ ಮೋದಿಯವರ ಮೇಲಿನ ವೈರತ್ವ ಗೊತ್ತಿರುವಂಥದ್ದೇ. ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿತವಾದರೆ, ಕೂಡಲೇ ಎನ್ಡಿಎದಿಂದ ನಿತೀಶ್ ಸಂಬಂಧ ಕಡಿದುಕೊಳ್ಳುತ್ತಾರೆ. ಹಾಗಾದರೆ ಲಾಭವಾಗುವುದು ಬಿಜೆಪಿಗೇ! ಏಕೆಂದರೆ, ಆಗ ಮೇಲ್ವರ್ಗದ ಮತ್ತು ಓಬಿಸಿಗಳ ಓಟುಗಳ ಬಿಜೆಪಿಯ ಜೋಳಿಗೆಯಲ್ಲಿ ಬಂದುಬೀಳುತ್ತವೆ. 2009ರಲ್ಲಿ 12 ರಷ್ಟಿದ್ದ ಬಿಜೆಪಿಯ ಸೀಟುಗಳು ಮುಂದಿನ ಚುನಾವಣೆಯಲ್ಲಿ 18ಕ್ಕೇರಬಹುದು ಎಂದು ಸಿ-ವೋಟರ್ ಹೇಳುತ್ತಿದೆ. ಇನ್ನು ನಿತೀಶ್ ಕುಮಾರ್ಗೆ ಹೆಚ್ಚು ನಷ್ಟವಾದರೆ, ಅಲ್ಪಸಂಖ್ಯಾತರ ಮತಗಳಿಂದಾಗಿ ಲಾಲೂ ಪ್ರಸಾದ್ ಲಾಭ ಮಾಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ನಿತೀಶ್ ಕುಮಾರ್ ಅವರಿಗೆ ಸ್ಪಷ್ಟ ಸಂದೇಶವೊಂದು ದೊರಕಿದೆ: 'ಮೋದಿಯವರನ್ನು ದ್ವೇಷಿಸುತ್ತಾ ಕುಳಿತುಕೊಳ್ಳುವುದರಿಂದ ಲಾಭವಿಲ್ಲ!'
ಒಟ್ಟಿನಲ್ಲಿ ಬಿಜೆಪಿಗೆ ಮೋದಿಯಲ್ಲದೆ ಬೇರೆ ಹಾದಿ ಇಲ್ಲ. ಬಿಜೆಪಿಯ ಲಿಲಿಪುಟ್ಗಳಲ್ಲಿ ಅವರು ಗಲಿವರ್! ಅವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರೆ ಮಾತ್ರ 2014ರ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಬಹುದು. ಒಂದು ವೇಳೆ ಬಿಜೆಪಿಯ ಹಿರಿಯ ಜೀವ ಆಡ್ವಾಣಿ, ತಮ್ಮ ಕೊನೆಯ ರಾಜಕೀಯ ಮಹಾತ್ಕಾರ್ಯವನ್ನು ಮಾಡಬಯಸುತ್ತಾರಾದರೆ, ಅದು ಮೋದಿಯವರನ್ನು ಮುಂಚೂಣಿಯಲ್ಲಿ ನಿಲ್ಲಿಸುವ ರೂಪದಲ್ಲಾಗಬೇಕು. ಹಾಗೂ ಈ ಕೆಲಸದಲ್ಲಿ ಅಡ್ಡಗಾಲು ಹಾಕುವ ಕೇಂದ್ರ ನಾಯಕರನ್ನು ಸುಮ್ಮನಾಗಿಸಿ ಪಕ್ಷವನ್ನು ಗೆಲ್ಲಿಸುವ ಕೆಲಸ ಮಾಡಬೇಕು.
ಆಡ್ವಾಣಿಯವರು ಪಕ್ಷಕ್ಕಾಗಿ ಮಾಡಬಹುದಾದ ಅತ್ಯಂತ ದೊಡ್ಡ ಕೆಲಸವಿದು. ಇನ್ನು ಮೋದಿಯವರ ವಿಷಯಕ್ಕೆ ಬಂದರೆ, ಅವರಿಗೆ ಪರ್ಯಾಯ ಮಾರ್ಗವೇ ಇಲ್ಲ.
- ಆರ್.ಜಗನ್ನಾಥನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

