ಅಂಕಣಗಳು

ಬಿಜೆಪಿಯಲ್ಲಿ ಮೋದಿ ಮಾತೇ ಪ್ರಧಾನವಾಗುವ ದಿನ ಬಂದಾಗ ಯಡಿಯೂರಪ್ಪ ಹಿಂತಿರುಗುತ್ತಾರೆ

Published On :

ಬಿಜೆಪಿ ಕರ್ನಾಟಕದ ಮಾಜಿ ಖಚಾಂಚಿ ಲೆಹೆರ್ ಸಿಂಗ್ ಸಿರೊಯಾ ಅವರು ಆಡ್ವಾಣಿಯವರಿಗೆ ಖಾರವಾದ ಪತ್ರ ಬರೆಯುವುದರ ಮೂಲಕ ಸುದ್ದಿಯಾಗಿದ್ದರು. ವಿಧಾನ ಪರಿಷತ್ ಸದಸ್ಯರಾಗಿರುವ ಲೆಹೆರ್ ಸಿಂಗ್ ಅವರು, ಆಡ್ವಾಣಿಯವರು ಭ್ರಷ್ಟಾಚಾರದ ಬಗ್ಗೆ ಇಬ್ಬಗೆ ನೀತಿ ಹೊಂದಿರುವುದಾಗಿ ಆರೋಪಿಸಿದ್ದರು. ಯಡಿಯೂರಪ್ಪನವರನ್ನು ಪಕ್ಷದಿಂದ ಹೊರಹಾಕಿದ್ದೇ ಚುನಾವಣೆಯಲ್ಲಿ ಬಿಜೆಪಿ ಸೋಲುವುದಕ್ಕೆ ಕಾರಣ ಎಂಬ ನಿಲುವು ಅವರದ್ದು. ಅವರ ಈ ಧೋರಣೆಗೆ ಬಿಜೆಪಿ ಅದಾಗಲೇ ಅವರನ್ನು ಉಚ್ಚಾಟಿಸಿದೆ. ಆದರೂ ತಾವು ಬಿಜೆಪಿಗಾಗಿಯೇ ಕೆಲಸ ಮಾಡುವುದಾಗಿ ಹೇಳಿರುವ ಲೆಹರ್ ಸಿಂಗ್, ಔಟ್‌ಲುಕ್ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಅಸಮಾಧಾನಗಳನ್ನು ವಿವರವಾಗಿ ತೆರೆದಿಟ್ಟಿದ್ದಾರೆ.

ಆಡ್ವಾಣಿ ಅವರೊಂದಿಗೆ ನೀವು ಕೋಪ ಮಾಡಿಕೊಂಡಿದ್ದೇಕೆ?

ಈ ದೇಶದ ರಾಜಕೀಯವನ್ನು ಸರಿದಾರಿಗೆ ತರಬಲ್ಲ ವ್ಯಕ್ತಿ ಅವರು. ಆದರೆ ಗುಂಪುಗಾರಿಕೆಯ ಕಚ್ಚಾಟಗಳನ್ನು ಮುನ್ನಡೆಸುವಲ್ಲಿ ತೊಡಗಿಕೊಂಡಿದ್ದಾರೆ. ಆಡ್ವಾಣಿಯವರಿಗೆ ನಾನು ಕೆಲ ಪ್ರಶ್ನೆಗಳನ್ನು ಕೇಳಿದ್ದೆ. ಆ ಕಾರಣಕ್ಕಾಗಿಯೇ ನನ್ನನ್ನು ಪಕ್ಷದಿಂದ ಉಚ್ಚಾಟಿಸಲಾಗುತ್ತದೆ ಎಂದರೆ ಇದೇನು ಇಂದಿರಾ ಗಾಂಧಿ ಅಥವಾ ಸೋನಿಯಾ ಗಾಂಧಿಯವರ ಪಕ್ಷವೇ? ಇಲ್ಲಿ ನಾಯಕತ್ವವನ್ನು ಪ್ರಶ್ನಿಸುವಂತೆಯೇ ಇಲ್ಲವೇ? ನನ್ನನ್ನು ಉಚ್ಚಾಟಿಸಲಾಗಿದೆಯಾದರೂ ನಾನು ಬಿಜೆಪಿಗಾಗಿಯೇ ಕೆಲಸ ಮಾಡುತ್ತೇನೆ ಹಾಗೂ ಸಿದ್ಧಾಂತಕ್ಕೆ ಬದ್ಧನಾಗಿರುತ್ತೇನೆ.
ಟಿ ನರೇಂದ್ರ ಮೋದಿಯವರ ಬಲವೇನಾದರೂ ಹೆಚ್ಚಾದರೆ ಯಡಿಯೂರಪ್ಪನವರು ಪಕ್ಷಕ್ಕೆ ಮರಳುತ್ತಾರೆ ಹಾಗೂ ಅದರೊಂದಿಗೆ ನಿಮ್ಮ ಸಮಸ್ಯೆಯೂ ಕೊನೆಗಾಣುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ...
ಬಿಜೆಪಿಯನ್ನು ನರೇಂದ್ರ ಮೋದಿಯವರೇ ಮುನ್ನಡೆಸಲು ಆರಂಭವಾಗಿದ್ದೇ ಆದರೆ ಯಡಿಯೂರಪ್ಪನವರು ಬಿಜೆಪಿಗೆ ಹಿಂತಿರುಗುವುದು ಕೆಲವೇ ತಾಸುಗಳ ವಿಷಯವಾಗುತ್ತದೆ. ಬಿಜೆಪಿಯ ಸಮಸ್ಯೆ ಏನೆಂದರೆ ಜನಪ್ರಿಯ ಬುನಾದಿಯನ್ನೇ ಹೊಂದಿರದ ದೆಹಲಿ ನಾಯಕರು.

ಆಡ್ವಾಣಿ ಹೊರತುಪಡಿಸಿದರೆ ಮತ್ತೆ ಯಾರ ಬಗ್ಗೆ ನಿಮಗೆ ಅಸಮಾಧಾನವಿದೆ?
ಸುಷ್ಮಾಜಿ ಅವರು ಬಹುದೊಡ್ಡ ಭ್ರಮನಿರಸನ. 1996ರ ಸಂದರ್ಭದಲ್ಲಿ ಸಂಸತ್ತಿನಲ್ಲಿ ವಿಶ್ವಾಸಮತ ಯಾಚನೆ ವೇಳೆ ಅವರು ಮಾತನಾಡಿದ್ದು ನೋಡಿ ನಮಗೆ ಭಾರಿ ನಿರೀಕ್ಷೆಗಳು ಗರಿಗೆದರಿದ್ದವು. ಆದರೆ ಅವರಿಗೆ ಗೌರವ ನೀಡುವುದಕ್ಕೆ ಇಂದು ಕಾರಣಗಳೇ ಉಳಿದಿಲ್ಲ. ಕರ್ನಾಟಕದಲ್ಲಿ ಆಕೆ ರೆಡ್ಡಿ ಸಹೋದರರನ್ನು ಬೆಳೆಸಿದ ಬಗೆಗೆ ಪ್ರಶ್ನೆಗಳು ಎದ್ದಿವೆ. ರೆಡ್ಡಿ ಸಹೋದರರೊಂದಿಗೆ ತಮ್ಮ ಕುತ್ತಿಗೆಗೂ ಹಗರಣಗಳು ಸುತ್ತಿಕೊಳ್ಳುತ್ತವೇ ಎಂದು ಅರಿವಾಗುತ್ತಲೇ ಸೋನಿಯಾ ಗಾಂಧಿ ಅವರೊಂದಿಗೆ ಸಂಧಾನಸ್ಥಿತಿಗೆ ಹೋದರು. ಈ ಸಂಬಂಧದ ಚಟುವಟಿಕೆಗಳಲ್ಲಿ ಸುಷ್ಮಾ ಸ್ವರಾಜ್ ಅವರ ಒಟ್ಟಾರೆ ಪಾತ್ರ ಏನು ಎಂಬುದರ ಬಗ್ಗೆ ಪಕ್ಷದಲ್ಲಿ ಚರ್ಚೆಯಾಗಬೇಕು.

ಇವೆಲ್ಲ ಬಹಳ ಗಂಭೀರ ಆರೋಪಗಳು. ಏಕೆ ನೀವು ಅವರ ವಿರುದ್ಧ ಮಾತ್ರವೇ ಆರೋಪಗಳ ಮಳೆ ಸುರಿಸುತ್ತಿದ್ದೀರಿ. ದೆಹಲಿಯ ಇತರ ನಾಯಕರ ಬಗ್ಗೆ ಏಕಿಲ್ಲ?

ಹಾಗೇನೂ ಇಲ್ಲ. ಬಿಜೆಪಿಯ ಸಂಸದೀಯ ಸಮಿತಿಯಲ್ಲಿ ಕೆಲ ವ್ಯಕ್ತಿಗಳು ಇರುವುದೇಕೆ ಎಂಬ ಬಗ್ಗೆ ವಿಸ್ತೃತ ಚರ್ಚೆಯೇ ನಡೆಯಬೇಕು ಎಂದು ನಾನು ಬಯಸುತ್ತೇನೆ. ಬಿಜೆಪಿ ಪಾರ್ಲಿಮೆಂಟರಿ ಬೋರ್ಡ್‌ನಲ್ಲಿ ಮುರುಳಿ ಮನೋಹರ ಜೋಶಿ ಏಕಿರಬೇಕು, ಅವರ ಕೊಡುಗೆಯಾದರೂ ಏನು? ಇವತ್ತು ವೆಂಕಯ್ಯ ನಾಯ್ಡು ಮಾಡುತ್ತಿರುವುದಾದರೂ ಏನು? ಅನಂತ್ ಕುಮಾರ್ ಅವರ ಪಾತ್ರವೇನು, ಅವರ ಚಟುವಟಿಕೆಗಳೇನು? ಈಗ ನಮ್ಮ ಪಕ್ಷ ಪರಿಶುದ್ಧವಾಯಿತು ಎಂದು ಆಡ್ವಾಣಿಯವರು ಹೇಳಿಕೊಂಡಿದ್ದಾರೆ. ಯಾವ್ಯಾವುದೋ ನಿಷ್ಠೆಗಳಿದ್ದವರೆಲ್ಲ ಪಕ್ಷದಲ್ಲಿದ್ದಾರಲ್ಲ? ಇದೇಕೆ ಎಂಬುದು ನನ್ನ ಪ್ರಶ್ನೆ.

ಆರೆಸ್ಸೆಸ್, ರಾಜನಾಥ ಸಿಂಗ್ ಹಾಗೂ ಅರುಣ್ ಜೇಟ್ಲಿ ಅವರ ಬಗ್ಗೆ ನೀವೇನೂ ಮಾತನಾಡುತ್ತಿಲ್ಲವಲ್ಲ, ಏಕೆ?
ದೆಹಲಿಯಲ್ಲಿರುವ ಬಿಜೆಪಿಯ ಯಾವ ನಾಯಕರಿಗೂ ಜನಪ್ರಿಯತೆಯ ಬಲವಿಲ್ಲ. ಈ ಬಗ್ಗೆ ಪಕ್ಷದ ಅಧ್ಯಕ್ಷರಿಗೆ ಬರೆದಿರುವುದರಿಂದ ಆ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ. ಅರುಣ್ ಜೇಟ್ಲಿ ಅವರು ಆರಾಮಿನಿಂದಿರುವ ವರ್ಗಕ್ಕೆ ಸೇರಿದವರು. ಅವರಿಗೆ ಜನ ಸಂಪರ್ಕವೇನೂ ಇಲ್ಲ.

ಹಾಗಾದರೆ ನಿಮ್ಮ ಪ್ರಕಾರ ಬಿಜೆಪಿಯಲ್ಲಿರುವ ಮಾಸ್ ನಾಯಕರು ಅಂದರೆ ಯಾರು?
ದೆಹಲಿಯಲ್ಲಿರುವ ನಾಯಕರೆಲ್ಲ ಜನರಿಂದ ದೂರವಾದವರೇ. ನರೇಂದ್ರ ಮೋದಿ, ವಸುಂಧರಾ ರಾಜೆ, ಗೋಪಿನಾಥ ಮುಂಡೆ, ಮನೋಹರ್ ಪಾರಿಕ್ಕರ್, ಶಿವರಾಜ್ ಸಿಂಗ್ ಚೌಹಾಣ್ ಇವರೆಲ್ಲ ಬಿಜೆಪಿಯ ನಾಯಕರು. ನಿಜವಾದ ನಾಯಕತ್ವ ಇರುವುದು ರಾಜ್ಯಗಳಲ್ಲಿ. ಕಾಂಗ್ರೆಸ್ ಎಂಥ ಪರಿಸ್ಥಿತಿಯಲ್ಲಿದೆ ಎಂಬುದನ್ನು ಗಮನಿಸಿ. ಬಿಜೆಪಿ ಅದನ್ನು ಹೊಸಕಿಹಾಕಿ ಬಿಡಬಹುದಿತ್ತು. ಅದನ್ನುಬಿಟ್ಟು ದೆಹಲಿ ನಾಯಕತ್ವವು ಕ್ಷುಲ್ಲಕ ಜಗಳಗಳಲ್ಲಿ ತೊಡಗಿಸಿಕೊಂಡಿದೆ.

ನಿಮ್ಮ ಪತ್ರದಲ್ಲಿ ಬಹಳ ಮುಖ್ಯವಾಗಿ ನೀವು ಆಡ್ವಾಣಿಯವರು ಭ್ರಷ್ಟಾಚಾರಕ್ಕೆ ಕುರುಡುಗಣ್ಣು ತೋರಿದರು ಎಂಬುದಾಗಿ ಆರೋಪಿಸುತ್ತೀರಿ...
ಭ್ರಷ್ಟಾಚಾರದ ವಿಷಯದಲ್ಲಿ ಬಿಜೆಪಿಗೂ ಬೇರೆ ಪಕ್ಷಗಳಿಗೂ ವ್ಯತ್ಯಾಸವೇನೂ ಉಳಿದಿಲ್ಲ. ರಾಜ್ಯಗಳಲ್ಲಿನ ಕೆಲವು ನಾಯಕರನ್ನು ಮಾತ್ರ ದೆಹಲಿಯಲ್ಲಿದ್ದವರು ಕೆಟ್ಟದಾಗಿ ನಡೆಸಿಕೊಂಡಿರುವುದು ಹಾಗೂ ತಾವು ಬೆಳೆಸುತ್ತಿರುವ ವ್ಯಕ್ತಿಗಳು ಎಷ್ಟೇ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದರೂ ಅದನ್ನು ಸಹಿಸಿಕೊಂಡಿರುವುದು ಬಿಜೆಪಿಯ ಸಮಸ್ಯೆಯಾಗಿದೆ. ಹೀಗೆ ಬೆಳೆಯುತ್ತಿರುವವರು ಮಾಧ್ಯಮದಲ್ಲಿ ಹಾಗೂ ಜನಮಾನಸದಲ್ಲಿ ತಮ್ಮ ವರ್ಚಸ್ಸು ಕಳೆಗುಂದುತ್ತಿರುವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ. ಹೇಗಿದ್ದರೂ ತಮಗೆ ದೆಹಲಿ ನಾಯಕರ ಅಭಯವಿದೆ ಎಂಬ ನಿರಾಳತೆ ಅವರದ್ದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.