ಅಕ್ಕಿ ಮೇಲೆ ಆಸೆ, ಓಟಿನ ಮೇಲೆ ಪ್ರೀತಿ
ಮೊನ್ನೆ ಚುನಾವಣಾ ಸಮಯದಲ್ಲಿ ಯಾರೋ ಪುಣ್ಯಾತ್ಮ ರೈಸ್ ಕುಕ್ಕರ್ ಹಂಚಿದ್ದಾನೆ. ಸಿದ್ದರಾಮಯ್ಯನವರು 1 ರುಪಾಯಿಗೆ 1 ಕೆಜಿ ಅಕ್ಕಿ ಕೊಡ್ತೀನಿ ಅಂತ ಹೇಳಿದ್ದಾರೆ. ಹಲವರಿಗೆ ಈಗಾಗಲೆ ನರೇಗಾದಿಂದ ದಿನಕ್ಕೆ 155 ರುಪಾಯಿ ಸಿಗುತ್ತಿದೆ. ಇನ್ನು ಕೇಂದ್ರ ಸರ್ಕಾರ ನೇರ ಹಣ ವರ್ಗಾವಣೆ ಎನ್ನುವ ಯೋಜನೆಯನ್ನೂ ತಂದಿದೆಯಂತೆ. ಸಿದ್ಧರಾಮಣ್ಣನವರು ಅಗ್ಗದ ದರದಲ್ಲಿ ಮದ್ಯ ಕೊಡ್ತೀವಿ ಅಂತ ಬೇರೆ ಹೇಳಿದ್ದಾರೆ. 1 ರುಪಾಯಿಗೆ 1 ಕ್ವಾರ್ಟರ್ ಮದ್ಯ, 1 ಕೆ.ಜಿ ಅಕ್ಕಿ, 1 ಕೆಜಿ ಮಾಂಸ ಕೊಟ್ಟರೆ ನಿಸ್ಸಂಶವಾಗಿಯೂ ಜನ ಕಾಂಗ್ರೆಸ್ ಬಿಟ್ಟು ಈ ಜನ್ಮದಲ್ಲಿ ಬೇರ್ಯಾರಿಗೂ ಓಟ್ ಹಾಕಲ್ಲ ಸ್ವಾಮಿ. ಭೇಷ್ ಸಿದ್ದರಾಮಣ್ಣನವರೇ! ಒಪ್ಪಬೇಕು ನಿಮ್ಮ ಪಕ್ಷದ ಓಟು ಬ್ಯಾಂಕ್ ರಾಜಕಾರಣವನ್ನು. ನಿಮ್ಮ ಪಕ್ಷದವರಿಗೆ ಬಡವರನ್ನು ಶ್ರೀಮಂತರನ್ನಾಗಿ ಮಾಡಲು ಇಷ್ಟ ಇಲ್ಲ ಅಂತ ಕಾಣುತ್ತೆ. ಬಡವರನ್ನು ಬಡವರನ್ನಾಗೇ ಇಟ್ಟು ನಿಮ್ಮ ಪಕ್ಷದ ಓಟು ಬ್ಯಾಂಕ್ ವೃದ್ಧಿಸಲು ಹೊರಟಿದ್ದೀರಾ? ನೀವು 1 ರುಪಾಯಿಗೆ 1 ಕೆಜಿ ಅಕ್ಕಿ ಅಂತ ಘೋಷಿಸಿದ ಮೇಲೆ ರಾತ್ರೋರಾತ್ರಿ ಲಕ್ಷಾಂತರ ಕುಟುಂಬಗಳು ಬಡಕುಟುಂಬಗಳಾಗಿ ಪರಿವರ್ತನೆಯಾಗಿವೆ! ಹೀಗೆ ಬಡವರಾದ(?) ಲಕ್ಷಾಂತರ ಮಂದಿ ತಾಲ್ಲೂಕು ಕಚೇರಿಯನ್ನು ಜೇನುನೊಣದ ರೀತಿ ಮುತ್ತಿಗೆ ಹಾಕಿದ್ದಾರೆ. ಯಾರಿಗೋ ಮಂಜೂರಾಗಿರೋ ಬಿ.ಪಿಎಲ್. ನಂಬರನ್ನು ಇನ್ನಾರಿಗೋ ಹಾಕಿ ಬಿ.ಪಿ.ಎಲ್ ಕಾರ್ಡುಗಳನ್ನು ಮಾರಾಟ ಮಾಡ್ತಾ ಇದ್ದಾರೆ. 2011ರ ಜನಗಣತಿ ಪ್ರಕಾರ 1.32 ಕೋಟಿ ಕುಟುಂಬಗಳು ಕರ್ನಾಟಕದಲ್ಲಿದ್ದರೆ, 1.34 ಕೋಟಿ ರೇಷನ್ ಕಾರ್ಡುಗಳು ವಿತರಣೆಯಾಗಿವೆ. ಈ 1.32 ಕೋಟಿ ಕುಟುಂಬಗಳಲ್ಲಿ 98 ಲಕ್ಷ ಕುಟುಂಬಗಳು ಬಿಪಿಎಲ್ ಕುಟುಂಬಗಳೆಂದು ನೊಂದಾಯಿಸಲ್ಪಟ್ಟಿವೆ. ತಾಲೂಕು ಕಚೇರಿಗಳ ಬಳಿ ಇರುವ ನೂಕುನುಗ್ಗುಲನ್ನು ಗಮನಿಸಿದರೆ ಕೆಲವೇ ತಿಂಗಳಲ್ಲಿ ಶೇ.100ರಷ್ಟು ಕುಟುಂಬಗಳು ಬಿಪಿಎಲ್ ಕುಟುಂಬಗಳಾದರೆ ಆಶ್ಚರ್ಯಪಡಬೇಕಿಲ್ಲ.
ಮುಖ್ಯಮಂತ್ರಿಗಳು ತಮ್ಮ ಭರವಸೆಯನ್ನು ಈಡೇರಿಸಬೇಕಾದರೆ ಸರಾಸರಿ 1 ಕೋಟಿ ಕುಟುಂಬಗಳಿಗೆ ಪ್ರತಿ ದಿವಸ 1 ರುಪಾಯಿಗೆ 1 ಕೆಜಿಯಂತೆ, ಅಂದರೆ 30 ಕೋಟಿ ಕೆಜಿ ಅಕ್ಕಿಯನ್ನು ಪ್ರತಿ ತಿಂಗಳು ರಾಜ್ಯ ಸರ್ಕಾರ ವಿತರಿಸಬೇಕಾಗಿದೆ. ಇದನ್ನು ಪೂರೈಸಲು 1.8 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ಅಕ್ಕಿಯನ್ನು ಎಫ್.ಸಿ.ಐ.ನಿಂದ ಪ್ರತಿ ತಿಂಗಳು ಪಡೆಯಬೇಕಾಗುತ್ತದೆ. ಎಫ್.ಸಿ.ಐ. ಈಗಾಗಲೇ ಅಗ್ಗದ ದರದಲ್ಲಿ 1.48 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಪ್ರತಿ ತಿಂಗಳು ರಾಜ್ಯಕ್ಕೆ ನೀಡುತ್ತಿದೆ. ಪ್ರತಿ ತಿಂಗಳಿಗೆ ಬೇಕಾಗುವ ಹೆಚ್ಚುವರಿ 1.8 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು 1 ಕೆಜಿಗೆ 26.43 ರುಪಾಯಿಗಳಂತೆ ನೀಡಲು ಎಫ್.ಸಿ.ಐ. ಸಿದ್ಧವಿದೆ. ಅಂದರೆ ನಮ್ಮ ರಾಜ್ಯದ ಬೊಕ್ಕಸಕ್ಕೆ ಸುಮಾರು 6500 ಕೋಟಿ ರುಪಾಯಿ ಪ್ರತಿ ವರ್ಷ ಹೊರೆಯಾಗಲಿದೆ.
ಇದಕ್ಕಿಂತ ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಪ್ರತಿ ತಿಂಗಳು 1.8 ಲಕ್ಷ ಮೆಟ್ರಿಕ್ ಟನ್ (ವಾರ್ಷಿಕ 21 ದಶಲಕ್ಷ ಮೆಟ್ರಿಕ್ ಟನ್) ಅಕ್ಕಿಯನ್ನು ಉತ್ಪಾದಿಸಲು ಎಷ್ಟು ನೀರು ಬೇಕಾಗುತ್ತದೆ ಲೆಕ್ಕಹಾಕಬೇಕು. ಪ್ರತಿ ಕೆ.ಜಿ. ಅಕ್ಕಿಯನ್ನು ಉತ್ಪಾದಿಸಲು 2500 ಲೀಟರುಗಳಷ್ಟು ನೀರು ಬೇಕಾಗುತ್ತದೆ ಅಂದರೆ ಆ ಪ್ರಮಾಣದ ಅಕ್ಕಿಯನ್ನು ಉತ್ಪಾದಿಸಲು 190 ಟಿಎಂಸಿಯಷ್ಟು ವರ್ಚುವಲ್ ವಾಟರ್ (ನೈಜ ಜಲಸಂಪನ್ಮೂಲ) ಬೇಕಾಗುತ್ತದೆ. ಅಂದರೆ ಸಿದ್ಧರಾಮಣ್ಣನವರ ಈ ಯೋಜನೆಗೆ ನಮ್ಮ ರಾಜ್ಯದ ಬೊಕ್ಕಸದಿಂದ 6500 ಕೋಟಿ ವ್ಯಯಮಾಡಿ 190 ಟಿಎಂಸಿಯಷ್ಟು ವರ್ಚುವಲ್ ನೀರನ್ನು ಖರೀದಿ ಮಾಡಬೇಕಾಗುತ್ತದೆ. ಅಂಕಿ ಅಂಶಗಳ ಪ್ರಕಾರ ಆಂಧ್ರ ಪ್ರದೇಶದಲ್ಲಿ ಪ್ರತಿ ವ್ಯಕ್ತಿಯ ವಾರ್ಷಿಕ ಅಕ್ಕಿ ಬಳಕೆ 112 ಕೆ.ಜಿ.ಯಷ್ಟಿದ್ದರೆ, ತಮಿಳುನಾಡಿನಲ್ಲಿ 102 ಕೆಜಿಯಷ್ಟಿದೆ. ಆದರೆ ಕರ್ನಾಟಕದಲ್ಲಿ ನಾವು ರಾಗಿ ಮುದ್ದೆ ಅಥವಾ ಜೋಳದ ರೊಟ್ಟಿಯನ್ನು ಮುಖ್ಯವಾಗಿ ಸೇವಿಸುವುದರಿಂದ ಅಕ್ಕಿಯನ್ನು ಪ್ರತಿ ವ್ಯಕ್ತಿ ವಾರ್ಷಿಕ 72 ಕೆ.ಜಿ. ಸೇವಿಸುತ್ತಾನೆ. ನಮ್ಮ ರಾಜ್ಯದಲ್ಲಿರುವ 1.32 ಕೋಟಿ ಕುಟುಂಬಗಳಲ್ಲಿ 1 ಕೋಟಿ ಕುಟುಂಬಗಳು ಅಗ್ಗದ ದರದಲ್ಲಿ ಸರ್ಕಾರದಿಂದ ಅಕ್ಕಿ ಪಡೆದರೆ, ಉಳಿದ 32 ಲಕ್ಷ ಕುಟುಂಬಗಳು ಪ್ರತಿ ಕೆ.ಜಿ.ಗೆ ಸರಾಸರಿ 40 ರುಪಾಯಿ ಪಾವತಿಸಿ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿ ಮಾಡಬೇಕು. ಅಂದರೆ ಕನಿಷ್ಟ 10 ದಶಲಕ್ಷ ಮೆಟ್ರಿಕ್ ಟನ್ ಅಕ್ಕಿ, ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ. 40 ರುಪಾಯಿಯಂತೆ ಮಾರಾಟವಾದರೆ 4000 ಕೋಟಿ ರುಪಾಯಿ ಅಕ್ಕಿ ವ್ಯಾಪಾರ ನಡೆಯುತ್ತದೆ. 10 ದಶಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಬೆಳೆಯಬೇಕಾದರೆ ಸುಮಾರು 88 ಟಿಎಂಸಿಯಷ್ಟು ನೀರು ಬೇಕಾಗುತ್ತದೆ. ಅಂದರೆ ಸರ್ಕಾರ 6500 ಕೋಟಿ ಹೊರೆ ಹೊತ್ತು 190 ಟಿಎಂಸಿಯಷ್ಟು ವರ್ಚುವಲ್ ವಾಟರ್ ಖರೀದಿಸಿದರೆ, ಮುಕ್ತ ಮಾರುಕಟ್ಟೆ ಮೂಲಕ ಪ್ರಜೆಗಳು 4000 ಕೋಟಿ ಕೊಟ್ಟು 88 ಟಿಎಂಸಿಯಷ್ಟು ನೀರನ್ನು ಅಕ್ಕಿ ಮೂಲಕ ಖರೀದಿಸುತ್ತಿದ್ದಾರೆ. ಎಫ್.ಸಿ.ಐ.ನಲ್ಲಿ ಖರೀದಿಸಿ ಅಥವಾ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿ, ಸಾರಿಗೆ ವೆಚ್ಚ ದುಬಾರಿಯಿರುವುದರಿಂದ ನಾವು ಖರೀದಿಸುವ ಶೇ.90ರಷ್ಟು ಅಕ್ಕಿ ನೆರೆ ರಾಜ್ಯಗಳಾದ ಆಂಧ್ರ ಹಾಗು ತಮಿಳುನಾಡಿನಿಂದಲೇ ಬರಬೇಕು.
940 ಮಿ.ಮೀ. ವಾರ್ಷಿಕ ಮಳೆಯಾಗುವ ಆಂಧ್ರಪ್ರದೇಶ ಅಕ್ಕಿ ಉತ್ಪಾದನೆಯಲ್ಲಿ ರಾಷ್ಟ್ರದಲ್ಲಿ ಎರಡನೇ ಸ್ಥಾನದಲ್ಲಿದ್ದರೆ, 945 ಮಿ.ಮೀ. ವಾರ್ಷಿಕ ಮಳೆಯಾಗುವ ತಮಿಳುನಾಡು 6ನೇ ಸ್ಥಾನದಲ್ಲಿದೆ ಹಾಗೂ 1248 ಮಿ.ಮೀ. ವಾರ್ಷಿಕ ಮಳೆಯಾಗುವ ಕರ್ನಾಟಕ ಅಕ್ಕಿ ಉತ್ಪಾದನೆಯಲ್ಲಿ 10ನೇ ಸ್ಥಾನದಲ್ಲಿದೆ! ಕರ್ನಾಟಕದಲ್ಲಿ ಕಾವೇರಿ ಜಲಾನಯನದ ಶೇ.65ರಷ್ಟು ಪ್ರದೇಶ ಬರಪೀಡಿತವಾಗಿದ್ದರೆ, ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಶೇ.40ರಷ್ಟು ಪ್ರದೇಶ ಬರಪೀಡಿತವಾಗಿದೆ. ಕಾವೇರಿ ನ್ಯಾಯಮಂಡಳಿ ತೀರ್ಪಿನಲ್ಲಿ ಕೇವಲ ತಾಂತ್ರಿಕ ದೋಷಗಳಿಂದ ನಮ್ಮ ರಾಜ್ಯಕ್ಕೆ 50 ಟಿಎಂಸಿ ನಷ್ಟವಾಗಿದೆ ಹಾಗು ಪ್ರತಿವರ್ಷ 96 ಟಿಎಂಸಿಯಷ್ಟು ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ. ಕೃಷ್ಣಾ ಬಿ-ಯೋಜನೆಯಲ್ಲಿ ನಮ್ಮ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಿದ್ದ 105 ಟಿಎಂಸಿಯಷ್ಟು ನೀರನ್ನು ಕಳೆದುಕೊಂಡಿದ್ದೇವೆ. ನ್ಯಾಯಯುತವಾಗಿ ನಮ್ಮ ರೈತರಿಗೆ ದಕ್ಕಬೇಕಾಗಿದ್ದ 251 ಟಿಎಂಸಿಯಷ್ಟು ನೀರು ಆಂಧ್ರ ಹಾಗು ತಮಿಳುನಾಡಿಗೆ ಹರಿದು ಹೋಗಿದೆ. ವಿಪರ್ಯಾಸವೇನೆಂದರೆ ನಮ್ಮ ರಾಜ್ಯ, ಪ್ರತಿವರ್ಷ 10,500 ಕೋಟಿ ವ್ಯಯಮಾಡಿ ನಮ್ಮ ಪಾಲಿನ ನೀರನ್ನು ಆಂಧ್ರ ಹಾಗು ತಮಿಳುನಾಡಿನ ರೈತರಿಂದ ಅಕ್ಕಿ ಮೂಲಕ ಕೊಂಡುಕೊಳ್ಳಬೇಕಾಗಿದೆ! ಇದೇ ನೀರನ್ನು ನಮ್ಮ ರೈತರಿಗೆ ಕೊಟ್ಟಿದ್ದರೆ 3.5 ಲಕ್ಷ ರೈತ ಕುಟುಂಬಗಳು ಪ್ರತಿವರ್ಷ 3 ಲಕ್ಷ ರುಪಾಯಿಗಳ ವರಮಾನ ಪಡೆಯಬಹುದಿತ್ತು. ಸಾಲಮನ್ನಾ ಅಥವಾ 1 ಕೆ.ಜಿ.ಗೆ 1 ರುಪಾಯಿಯಂತೆ ಅಕ್ಕಿ ನೀಡುವಂತಹ ಸೋಮಾರಿ ಯೋಜನೆಗಳ ಬದಲು ವರ್ಷಕ್ಕೆ ಅದೇ 6500 ಕೋಟಿ ವ್ಯಯ ಮಾಡಿ ಬಯಲು ಸೀಮೆಯ 72 ಬರಪೀಡಿತ ತಾಲೂಕುಗಳಿಗೆ ಶಾಶ್ವತ ನೀರಾವರಿ ಯೋಜನೆಯನ್ನು ಕಲ್ಪಿಸಬಹುದು ಎನ್ನುವುದನ್ನು ಮರೆಯಬೇಡಿ.
- ಡಾ.ಮಧು ಸೀತಪ್ಪ
madhu.seethappa@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

