ಮುಷ್ಟಿ ಕಾಳಗದಲ್ಲಿ ಗಟ್ಟಿಗರಾದ ಜಟ್ಟಿಗಳಿಗೆ ಕುಸ್ತಿಯೇ ಕುಲಕಸುಬು

ಮೈಸೂರು ದಸರಾ ಉತ್ಸವದಂತೆ ಈ ಮುಷ್ಟಿ ಕಾಳಗವೂ ವಿಶ್ವಖ್ಯಾತ.
Updated on: 

ವಿಶ್ವಖ್ಯಾತ ಮೈಸೂರು ದಸರಾ ಉತ್ಸವ ಸಂದರ್ಭದಲ್ಲಿ ಅರಮನೆಯ ಅವರಣದಲ್ಲಿ ಕುಸ್ತಿ ಪಂದ್ಯಾವಳಿಗಳು ನಡೆಯುತ್ತವೆ. ಅದು ಅಂತಿಂಥ ಪಂದ್ಯಗಳಲ್ಲ. ನೋಡುಗರು ಬೆಚ್ಚಿ ಬೀಳುವಂಥದ್ದು.
ಅದರಲ್ಲೂ ಮುಷ್ಟಿ ಕಾಳಗ ನೋಡುತ್ತಿದ್ದರೆ ಮೈ ಜುಂ ಎನಿಸುತ್ತದೆ. ಏಕೆಂದರೆ, ಈ ಪಂದ್ಯದಲ್ಲಿ ಭಾಗವಹಿಸಿದವರ ತಲೆಯಿಂದ ನೆತ್ತರು ಧಾರಕಾರವಾಗಿ ಸುರಿಯುತ್ತಿರುತ್ತದೆ. ಅದರೂ ಅದನ್ನು ಲೆಕ್ಕಿಸದೆ ಅವರು ಕುಸ್ತಿಯಲ್ಲಿ ತಲ್ಲೀನರಾಗಿರುತ್ತಾರೆ.
ಬೋಳಿಸಿದ ತಲೆಯೊಂದಿಗೆ ಲಂಗೋಟಿ ಧರಿಸಿ, ಹಣೆಯ ತುಂಬಾ ಮೂರು ನಾಮ ಬಳಿದುಕೊಂಡು ಬಲ ಕೈಗೆ ಆಯುಧ ಸುತ್ತಿಕೊಂಡು ಕಣಕ್ಕಿಳಿಯುವ ಈ ಕುಸ್ತಿ ಪಟುಗಳು ಕಣಕ್ಕಿಳಿದರೆ ನೆರೆದವರ ಜೈಕಾರ, ಹರ್ಷೋದ್ಗಾರ ಮುಗಿಲು ಮುಟ್ಟುತ್ತದೆ. ಕೆಂಪು ಮಣ್ಣಿನಲ್ಲಿ ಕುಸ್ತಿಗಿಳಿಯುವ ಪಟುಗಳು ತಮಗೆ ಬೀಳುವ ಪೆಟ್ಟು, ತಲೆಯಿಂದ ಸುರಿಯುವ ನೆತ್ತರು ಲೆಕ್ಕಿಸದೆ ಗೆಲ್ಲಲೇಬೇಕು ಎಂಬ ಹಠದೊಂದಿಗೆ ಪಟ್ಟುಗಳನ್ನು ಹಾಕುತ್ತಾ ಸೆಣೆಸುತ್ತಾರೆ. ರಕ್ತ ಸುರಿದ ತಕ್ಷಣ ಪಂದ್ಯ ನಿಲ್ಲುತ್ತದೆ. ಮೊದಲು ಇಬ್ಬರಲ್ಲಿ ಒಬ್ಬರು ಸಾಯುವ ವರೆಗೆ ಪಂದ್ಯ ನಡೆಯುತ್ತಿತ್ತಂತೆ.
ಮೈಸೂರು ದಸರಾ ಉತ್ಸವದಂತೆ ಈ ಮುಷ್ಟಿ ಕಾಳಗವೂ ವಿಶ್ವಖ್ಯಾತ. ಮೊದಲು ಕುಸ್ತಿಪಟುಗಳ ಕೈಗೆ ಕಬ್ಬಿಣದ ಆಯುಧವನ್ನು ಕಟ್ಟಲಾಗುತ್ತಿತ್ತು. ಬಳಿಕ ಆನೆದಂತದಿಂದ ಮಾಡಿದ ಆಯುಧ ಬಳಸಲಾಗುತ್ತಿತ್ತು. ಈಗ ಮರದ ಆಯುಧ ಉಪಯೋಗಿಸಲಾಗುತ್ತಿದೆ.

ಕುಸ್ತಿಯೇ ಕುಲಕಸುಬು: ಅಂದಹಾಗೆ ಈ ಮುಷ್ಟಿ ಕಾಳಗ ಜಾತಿಯೊಂದರ ಕುಲ ಕಸುಬು. ಅದೇ ಜಟ್ಟಿ ಸಮುದಾಯ. ಕುಸ್ತಿಯಾಡುವುದು ಕುಲ ಕಸುಬು ಆಗಲಿಕ್ಕೆ ಕಾರಣವೂ ಇದೆ. ಅದರ ಹಿಂದೆ ಪೌರಾಣಿಕ ಹಿನ್ನೆಲೆಯೂ ಅಡಗಿದೆ. ಈ ಜಟ್ಟಿ ಜನಾಂಗದ ಮೂಲ ಪುರುಷ ದೇವಮಲ್ಲಾಚಾರ್ಯ. ಆತ ಬ್ರಹ್ಮ ಮಾನಸ ಪುತ್ರ. ದೇವತೆಗಳಿಗೆ ಕಾಟ ಕೊಡುತ್ತಿದ್ದ ವಜ್ರದಂತ ಎಂಬ ರಾಕ್ಷಸನ ಸಂಹಾರಕ್ಕೆ ಬ್ರಹ್ಮದೇವ ಈ ದೇವಮಲ್ಲಾಚಾರ್ಯರನ್ನು ಸೃಷ್ಟಿ ಮಾಡಿ ಕಳುಹಿಸಿದ ಎನ್ನುತ್ತದೆ ಪುರಾಣ ಕಥೆ. ಆ ರಾಕ್ಷಸನ ಹಲ್ಲುಗಳು ವಜ್ರದ್ದಾಗಿರುತ್ತದೆ. ಆತನನ್ನು ದೇವಮಲ್ಲಾಚಾರ್ಯರು ಬರಿಗೈಲಿ ಅಂದರೆ ಮುಷ್ಟಿಯಲ್ಲಿ ಕೊಂದು ಹಾಕಿದರಂತೆ.
ಇನ್ನು ದ್ವಾಪರಯುಗಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಕೃಷ್ಣ ಮತ್ತು ಕಂಸನ ನಡುವೆ ಎಂಥಹ ದ್ವೇಷವಿತ್ತು ಎಂಬುದನ್ನು ನಾವು ಮಹಾಭಾರದಲ್ಲಿ ಓದಿದ್ದೇವೆ. ಕೃಷ್ಣನನ್ನು ಕೊಲ್ಲಲಿಕ್ಕೆಂದು ಕಂಸ ಇಬ್ಬರು ಜಟ್ಟಿಗಳನ್ನು ಕಳುಹಿಸುತ್ತಾನೆ. ಆ ಜಟ್ಟಿಗಳು ಕೃಷ್ಣ ಪರಮಾತ್ಮ ಎಂಬುದನ್ನೂ ಲೆಕ್ಕಿಸದೆ ಕಾಳಗಕ್ಕೆ ನಿಂತು ಸ್ವಾಮಿ ನಿಷ್ಠೆ ಪ್ರದರ್ಶಿಸುತ್ತಾರೆ. ಕೃಷ್ಣ-ಬಲರಾಮ ಇಬ್ಬರೂ ಸೇರಿ ಈ ಜಟ್ಟಿಗಳನ್ನು ಸೋಲಿಸುತ್ತಾರೆ. ಜೊತೆಗೆ ನೀವು ಒಳ ಜಗಳದಿಂದ ಹಾಳಾಗುತ್ತೀರಿ ಎಂದು ಶಪಿಸುತ್ತಾರೆ. ಆದ್ದರಿಂದಲೇ ನಮ್ಮ ಸಮುದಾಯ ಮುಂದೆ ಅವನತಿಯ ಹಾದಿ ಹಿಡಿಯಿತು ಎನ್ನುತ್ತಾರೆ ಜಟ್ಟಿ ಸಮುದಾಯದ ಸಂಘಟನೆಯಲ್ಲಿ ನಿರತರಾಗಿರುವ ಚಾಮರಾಜ ನಗರದ ಜಿ. ಮೋಹನ ಕುಮಾರ್. ದೇವಮಲ್ಲಾಚಾರ್ಯರ ಮೂಲದವರಾದ್ದರಿಂದ ನಮಗೆ ಕುಸ್ತಿ ಮೂಲ ಕಸುಬು ಆಯಿತು ಎನ್ನುವುದು ಅವರ ಅಭಿಪ್ರಾಯ.

ಯುದ್ಧ ಕಲೆ ಗೊತ್ತು : ಯುದ್ಧಕ್ಕೆ ಸಂಬಂಧಿಸಿದ ಎಲ್ಲ ಕಲೆಗಳೂ ಜಟ್ಟಿ ಸಮುದಾಯದವರಿಗೆ ಗೊತ್ತು. ಪೈಲ್ವಾನರು ಎಂದೇ ಇವರು ಹೆಸರುವಾಸಿ. ಜಟ್ಟಿಗಳು ಮೂಲತ: ಗುಜರಾತ್‌ನವರಂತೆ. ಅಲ್ಲಿಂದ ವಲಸೆ ಹೋಗಿ ದೇಶದ ನಾನಾ ಭಾಗಗಳಲ್ಲಿ ನೆಲೆಸಿದ್ದಾರಂತೆ. ಗುಜರಾತ್‌ನ ದೇಲ್‌ಮಲ್ ಎಂಬ ಪ್ರದೇಶದಲ್ಲಿ ಜಟ್ಟಿಗಳು ಆರಾಧಿಸುವ ಲಿಂಬುಜಾ ದೇವಿಯ ದೇವಸ್ಥಾನ ಈಗಲೂ ಇದೆ. ಗುಜರಾತ್‌ನಲ್ಲಿ ಲಿಂಬುಜಾ ಎಂದರೆ ಬೇವಿನ ಮರ. ಅಧು ದೇವರು ಹುಟ್ಟಿದ ಸ್ಥಳ ಎಂಬ ನಂಬಿಕೆ ಇದೆ.
ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಜಟ್ಟಿಗಳು ಮೈಸೂರು ಪ್ರಾಂತ್ಯದ ಕಡೆ ವಲಸೆ ಬಂದರು. ಕೆಲವರು ತಮಿಳುನಾಡು, ಆಂಧ್ರಕ್ಕೆ ಹೋಗಿ ನೆಲೆಸಿದರು. ಮೈಸೂರಿಗೆ ಬಂದವರು ಮಹಾರಾಜರ ಆಸ್ಥಾನದಲ್ಲಿ ಆಶ್ರಯ ಪಡೆದು ಕುಸ್ತಿ ಪಂದ್ಯಾವಳಿಗಳಲ್ಲಿ ನಿರತರಾದರು. ದಸರಾ ಉತ್ಸವಕ್ಕೆ ಚಾಲನೆ ಸಿಕ್ಕಾಗ ಈ ವಜ್ರಮುಷ್ಟಿ ಕಾಳಗ ಬಹಿರಂಗವಾಗಿ ನಡೆಯುತ್ತಿತ್ತು. ಈಗ ಖಾಸಗಿ ದರ್ಬಾರ್‌ಗೆ ಸೀಮಿತವಾಗಿದೆ.
ಕರ್ನಾಟಕದಲ್ಲಿ ಚಾಮರಾಜನಗರ, ಮೈಸೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ ಮತ್ತಿತರ ಜಿಲ್ಲೆಗಳಲ್ಲಿ ಜಟ್ಟಿ ಸಮುದಾಯದ ಜನರಿದ್ದಾರೆ. ತುಮಕೂರಿನಲ್ಲಿ ಜಟ್ಟಿ ಅಗ್ರಹಾರ ಎಂಬ ಹೆಸರಿನ ಬಡಾವಣೆ ಇದೆ.

ವಿಗ್ರಹ ಪ್ರತಿಷ್ಠಾಪನೆ : ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹುಂಡಿಗನಾಳ ಗ್ರಾಮದಲ್ಲಿಯೂ ಲಿಂಬುಜಾ ದೇವಿ ದೇವಸ್ಥಾನ ಇದೆ. ಜಟ್ಟಿಗಳು ಗುಜರಾತ್‌ನಿಂದ ವಲಸೆ ಬಂದಾಗ ಅಲೆಮಾರಿಗಳು ಎಂದು ತಿಳಿದು ಕೆಳದಿಯಲ್ಲಿ ಅವರನ್ನು ದೋಚಲಾಗುತ್ತದೆ. ಈ ಸಂದರ್ಭದಲ್ಲಿ ಲಿಂಬುಜಾ ದೇವಿ ವಿಗ್ರಹವನ್ನು ತಲೆಯ ಮೇಲೆ ಹೊತ್ತು ಬರುವ ಜಟ್ಟಿಗಳು ಹುಂಡಿಗನಾಳ ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ಆದರೀಗ ದೇವಾಲಯ ಶಿಥಿಲಾವಸ್ಥೆಯಲ್ಲಿದೆ.
ಜಟ್ಟಿಗಳು ಗುಜರಾತ್‌ನಲ್ಲಿ ಶುದ್ಧ ಸಸ್ಯಹಾರಿಗಳು. ಆದರೆ, ಕರ್ನಾಟಕದಲ್ಲಿ ಮಾಂಸ ಆಹಾರ ಸೇವನೆ ಮಾಡುವವರು ಇದ್ದಾರೆ. ಇವರು ಹೆಚ್ಚೂ ಕಡಿಮೆ ಬ್ರಾಹ್ಮಣ ಸಂಪ್ರದಾಯವನ್ನು ಅನುಸರಿಸುತ್ತಾರೆ. ಏನೇ ಆದರೂ ಕುಸ್ತಿಯನ್ನು ಮಾತ್ರ ಇವರು ಬಿಡುವವರಲ್ಲ. ಹೀಗಾಗಿಯೇ ಜಿಮ್‌ಗಳ ಹಾವಳಿ ನಡುವೆಯೂ ರಾಜ್ಯದ ನಾನಾ ಭಾಗದಲ್ಲಿ ಗರಡಿ ಮನೆಗಳು ಇಂದಿಗೂ ಉಳಿದುಕೊಂಡಿವೆ. ಜೇಷ್ಠ ಮಾಸದ ಹುಣ್ಣಿಮೆ ದಿನ ಕುಸ್ತಿ ಕಲೆ ಹೇಳಿಕೊಡುವ ಗರಡಿ ಮನೆಗಳಲ್ಲಿ ಜಟ್ಟಿಗಳು ಕೆಂಪು ಮಣ್ಣನ್ನು ರಾಶಿ ಹಾಕಿ ಅದರ ಮೇಲೆ ಕಲಶ ಸ್ಥಾಪನೆ ಮಾಡುತ್ತಾರೆ. ಬಳಿಕ 11 ದಿನ ಆ ಕಲಶವನ್ನು ಪೂಜಿಸುತ್ತಾರೆ. ಕೊನೆಯ ದಿನ ಕಲಶ ತೆಗೆದು ಮಣ್ಣನ್ನು ಮಟ್ಟ ಮಾಡುತ್ತಾರೆ. ಬಳಿಕ ಕುಸ್ತಿ ಶುರು.
ಈ ಸಮುದಾಯದಲ್ಲಿ ಹಿಂದೆ ಗಂಡು ಮಗುವಿನ ಜನನವಾದರೆ ನಾಲ್ಕು ವರ್ಷಕ್ಕೆ ಉಪನಯನ ನೆರವೇರುತ್ತಿತ್ತು. ಬಳಿಕ ಆ ಬಾಲಕ ಪ್ರತಿನಿತ್ಯ ಗರಡಿ ಮನೆಗೆ ಹೋಗಿ ಅಭ್ಯಾಸ ಮಾಡಬೇಕಾಗುತ್ತಿತ್ತು. ಬಾಲಕ ಬೆಳೆದು ದೊಡ್ಡವನಾಗಿ ದೈಹಿಕವಾಗಿ ಬಲಶಾಲಿಯಾದರೆ ಆತನನ್ನು ಅರಮನೆಗೆ ಕುಸ್ತಿಪಟುವಾಗಿ ಕಳುಹಿಸುವ ವಾಡಿಕೆ ಇತ್ತು. 80-90 ವರ್ಷ ವಯಸ್ಸಾಗಿರುವ ಪೈಲ್ವಾನರು ಸಮುದಾಯದಲ್ಲಿ ಇದ್ದಾರೆ. ಅವರಿಗೆ ಈಗಲೂ ಹಲ್ಲುಗಳು ಗಟ್ಟಿಯಾಗಿವೆ. ರೋಗ ರುಜಿನಗಳಿಲ್ಲದೆ ಆರೋಗ್ಯವಂತರಾಗಿ ಜೀವನ ಸಾಗಿಸುತ್ತಿದ್ದಾರೆ. ದೃಢಕಾಯ ದೇವರು ಕೊಟ್ಟ ವರ ಎಂದು ಸಮುದಾಯದ ಜನ ನಂಬಿದ್ದಾರೆ.

ಗೆದ್ದರೆ ಬಹುಮಾನ: ರಾಜರ ಕಾಲದಲ್ಲಿ ಕುಸ್ತಿ ಗೆದ್ದರೆ ಬಹುಮಾನ ಸಿಗುತ್ತಿತ್ತು. ರಾಜರು ಖುಷಿಯಿಂದ ಜಹಗೀರು ಕೊಡುತ್ತಿದ್ದರು. ಹೀಗಾಗಿ ಕೆಲವರು ಅಲ್ಲಲ್ಲಿ ಜಮೀನುಗಳನ್ನು ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಈಗಲೂ ಹೊಟ್ಟೆಪಾಡಿಗೆ ಕುಸ್ತಿ ಮಾಡುತ್ತಿದ್ದಾರೆ. ಹೊಸ ತಲೆಮಾರಿನವರು ಕುಸ್ತಿಯ ಸಹವಾಸವೇ ಬೇಡ ಎಂದು ಶಿಕ್ಷಣದಲ್ಲಿ ಮುಂದುವರಿಯುತ್ತಿದ್ದಾರೆ. ವೈದ್ಯರು, ಎಂಜಿನಿಯರುಗಳು ಆದವರೂ ಇದ್ದಾರೆ. ಅಂದಹಾಗೆ ಖ್ಯಾತ ಸಂಗೀತ ನಿರ್ದೇಶಕ ಜೋಡಿಯಾದ ರಾಜನ್-ನಾಗೇಂದ್ರ ಅವರು ಇದೇ ಸಮುದಾಯದವರು ಎಂದು ಮೋಹನ ಕುಮಾರ್ ಹೆಮ್ಮೆಯಿಂದ ಹೇಳುತ್ತಾರೆ.
2 ಬಿ ವರ್ಗಕ್ಕೆ ಸೇರಿರುವ ಜಟ್ಟಿ ಸಮುದಾಯದವರಿಗೆ ರಾಜಕೀಯವಾಗಿ ಪ್ರಾತಿನಿಧ್ಯವೇ ಸಿಕ್ಕಿಲ್ಲ. ಗ್ರಾಮ ಪಂಚಾಯಿತಿಯಿಂದ ಲೋಕಸಭೆ ವರೆಗೆ ಈ ಜನಾಂಗದ ಒಬ್ಬನೇ ಒಬ್ಬ ಪ್ರತಿನಿಧಿ ಇಲ್ಲ. ಹೀಗಾಗಿ ಈ ಸಮುದಾಯದ ಕಡೆಗೆ ಸರ್ಕಾರದ ಲಕ್ಷ್ಯವೂ ಇಲ್ಲದಂತೆ ಆಗಿದೆ.
ಮೋಹನ ಕುಮಾರ್ ಅವರು ಈಗ ಸಮುದಾಯದ ಸಂಘಟನೆಯಲ್ಲಿ ನಿರತರಾಗಿದ್ದಾರೆ. ಕುಸ್ತಿ ಕುರಿತು ಸಾಕ್ಷ್ಯಚಿತ್ರ ತಯಾರಿಸಬೇಕು. ಪುಸ್ತಕ ಹೊರತರಬೇಕು ಎಂಬುದು ಅವರ ಬಯಕೆ. ಜೊತೆಗೆ ಸಮಾವೇಶ ಆಯೋಜಿಸುವ ಬಗ್ಗೆಯೂ ಅವರು ಚಿಂತನೆ ನಡೆಸಿದ್ದಾರೆ.

- ಕೆ.ವಿ.ಪ್ರಭಾಕರ 
 prabhukolar@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com