

ಆಂಧ್ರಪ್ರದೇಶದ ನಲ್ಲಮಲ ಕಾಡು ಮತ್ತು ಶ್ರೀಶೈಲದ ಮಲ್ಲಿಕಾರ್ಜುನ ದೇವಾಲಯದ ಸುತ್ತಮುತ್ತ ವಿಶಿಷ್ಟ ಬುಡಕಟ್ಟು ಸಮುದಾಯವೊಂದು ಬದುಕು ಕಟ್ಟಿಕೊಂಡಿದೆ. ಪ್ರಾಚೀನ ಕಾಲದ ಕುರುಹುಗಳನ್ನು ಇಂದಿಗೂ ಜೀವಂತವಾಗಿಟ್ಟಿರುವ ಈ ಜಾತಿಯ ಹೆಸರು 'ಚೆಂಚು'.
ಈ ಸಮುದಾಯದವರು ಶ್ರೀಶೈಲದ ಮಲ್ಲಿಕಾರ್ಜುನ ದೇವಾಲಯದ ಸುತ್ತಮುತ್ತ ಬಿಡಾರ ಹೂಡುವುದಕ್ಕೂ ಕಾರಣವಿದೆ. ಅದಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಚೆಂಚು ಸಮುದಾಯದ ಯುವತಿಯ ಸೌಂದರ್ಯಕ್ಕೆ ಮನಸೋತ ಮಲ್ಲಯ್ಯ ಆಕೆಯನ್ನು ಅಪಹರಿಸಿ ವಿವಾಹವಾದನಂತೆ. ಆ ಮಲ್ಲಯ್ಯನೇ ಮಲ್ಲಿಕಾರ್ಜುನ ಎನ್ನುತ್ತಾರೆ ಈ ಸಮಾಜದ ಜನ. ಹೀಗಾಗಿ ಚೆಂಚುಲಕ್ಷ್ಮಿ ಮತ್ತು ಮಲ್ಲಿಕಾರ್ಜುನ ತಮ್ಮ ಕುಲದೈವಗಳೆಂದು ಇವರು ಭಾವಿಸಿದ್ದಾರೆ.
ಚೆಂಚರು ಶ್ರೀಶೈಲದ ಮಲ್ಲಿಕಾರ್ಜುನ ದೇವಾಲಯದ ಸ್ವಚ್ಛತೆ ಹೊಣೆ ವಹಿಸಿಕೊಂಡು ಅಲ್ಲಿಯೇ ನೆಲೆಸಿದ್ದಾರೆ. ಅಲ್ಲಿ ನೆಲೆಸಿರುವ ಭ್ರಮರಾಂಭ ದೇವತೆ ಮನೆ ಮಗಳು ಎನ್ನುತ್ತಾರೆ ಇವರು. ಈ ದೇವಿಯನ್ನು ಚೆಂಚರು ಪ್ರಾಣಿ ಬಲಿ ಕೊಟ್ಟು ಪೂಜಿಸುತ್ತಿದ್ದರು. ಆದರೆ, ಇತ್ತೀಚೆಗೆ ಪ್ರಾಣಿಬಲಿ ನಿಷೇಧಿಸಿರುವುದರಿಂದ ಆ ಸಂಪ್ರದಾಯ ಕೈ ಬಿಟ್ಟಿದ್ದಾರೆ. ಜೊತೆಗೆ ಬ್ರಾಹ್ಮಣ ಅರ್ಚಕರೂ ಅದಕ್ಕೆ ಅವಕಾಶ ಕೊಡುತ್ತಿಲ್ಲ. ಚೆಂಚು ಸಮುದಾಯದವರು ಆಂಧ್ರ ಮಾತ್ರವಲ್ಲದೆ, ಕರ್ನಾಟಕ, ಒರಿಸ್ಸಾ ಮತ್ತು ತಮಿಳುನಾಡಿನಲ್ಲೂ ಇದ್ದಾರೆ. ಕರ್ನಾಟಕದಲ್ಲಿ ಯಾದಗಿರಿ, ಗುಲ್ಬರ್ಗ ಜಿಲ್ಲೆಯಲ್ಲಿ ಚೆಂಚು ಕುಟುಂಬಗಳಿವೆ.
ಈ ಸಮುದಾಯ ಕುರಿತು ವಾರ್ತಾ ಇಲಾಖೆ ತೇಜೇಶ್ ಕುಮಾರ್ ಅವರ ನಿರ್ದೇಶನದಲ್ಲಿ ಸಾಕ್ಷ್ಯಚಿತ್ರ ತಯಾರಿಸಿದ್ದು, ಅದರಲ್ಲಿ ಚೆಂಚರ ಕುರಿತು ಮಾಹಿತಿ ಇದೆ. ವಾರ್ತಾ ಇಲಾಖೆ ಅಧಿಕಾರಿ ಬಸವರಾಜು ಅವರ ಮಾರ್ಗದರ್ಶನದಲ್ಲಿ ಈ ಸಾಕ್ಷ್ಯಚಿತ್ರ ತಯಾರಿಸಲಾಗಿದೆ.
ಗುಡಿಸಲು ಕಟ್ಟುವಲ್ಲಿ ಕಲಾತ್ಮಕತೆ
ಚೆಂಚರು ತಮ್ಮದೇ ಆದ ಭಾಷೆ ಹೊಂದಿದ್ದು, ಅದು ತೆಲುಗು ಭಾಷೆಗೆ ಸಮೀಪವಿದೆ. ಈ ಜಾತಿಯ ಜನ ಗುಂಪಿನಲ್ಲಿ ವಾಸ ಮಾಡುವವರು. ಬಿದಿರಿನಲ್ಲಿ ಕಟ್ಟಿದ ಗುಡಿಸಲುಗಳೇ ಇವರ ಮನೆ. ಗುಡಿಸಲು ಕಟ್ಟಿಕೊಳ್ಳವಲ್ಲಿಯೂ ಇವರು ಕಲಾತ್ಮಕತೆ ಮೆರೆಯುತ್ತಾರೆ. ಗುಡಿಸಲು ಪ್ರತ್ಯೇಕವಾಗಿ ಇದ್ದರೆ ಅದರ ಒಡೆಯ ಸಂಸಾರಸ್ಥ ಎಂದು ಭಾವಿಸಲಾಗುವುದು.
ಕಾಡು ಯಾವುದೇ ಆಗಿರಲಿ, ಅಲ್ಲಿ ಚೆಂಚರು ಇದ್ದೇ ಇರುತ್ತಾರೆ. ದೇವರ ಪೂಜೆ ಮತ್ತು ಸೇವೆಗೆ ನಮ್ಮ ಸಮುದಾಯದವರು ಬೇಕೇ ಬೇಕು ಎನ್ನುತ್ತಾರೆ ಹಿರಿಯರು. ಶ್ರೀಶೈಲದ ಮಲ್ಲಿಕಾರ್ಜುನ ದೇವಾಲಯಕ್ಕೆ ಬರುವ ಭಕ್ತರಿಗೆ ಸಹಾಯ ಮತ್ತು ಸಹಕಾರ ನೀಡುವವರೂ ನಮ್ಮವರೇ ಆಗಿದ್ದಾರೆ. ಇಂದಿಗೂ ಅವರು ಭಕ್ತರ ಸೇವೆಯಲ್ಲಿ ನಿರತರಾಗಿದ್ದಾರೆ. ಹರಕೆ ಹೊತ್ತು ದೇಗುಲಕ್ಕೆ ನಡೆದು ಬರವವರಿಗೆ ಹಾಲು, ಹಣ್ಣು ಕೊಟ್ಟು ಉಪಚರಿಸುತ್ತಾರೆ ಎನ್ನುತ್ತಾರೆ ಅವರು.
ಚೆಂಚರ ಪಾಲಿಗೆ ಬಾಣ, ಬಿಲ್ಲು, ಬಿದಿರಿನ ಬುಟ್ಟಿ, ನೆಲ ಆಗೆವ ಸಾಧನ ಮತ್ತು ಕತ್ತಿಯೇ ಮುಖ್ಯವಾದ ಆಸ್ತಿ. ಬಿಲ್ಲು-ಬಾಣವನ್ನು ಹೆಗಲಿಗೇರಿಸಿ ಕಾಡಿಗೆ ಹೊಕ್ಕರೆ ಭೇಟೆ ಇಲ್ಲದೆ ವಾಪಸ್ ಬರುತ್ತಿರಲಿಲ್ಲ. ಮದ್ಯಪಾನ ಇವರ ಚಟ. ಕಾಡುಗಳಲ್ಲಿ ನೆಲದಲ್ಲಿ ಬೆಳೆಯುವ ಚೆಂಚುಗಡ್ಡೆ ಆಗೆದು ತಿನ್ನುವುದು ಇವರ ಅಭ್ಯಾಸ. ಹೀಗಾಗಿ ಚೆಂಚರು ಎಂಬ ಹೆಸರು ಬಂದಿರಬಹುದು. ಈ ಗಡ್ಡೆ ಗೆಣಸು ಮಾದರಿಯಲ್ಲಿರುತ್ತದೆ.ತೋಕಾಲೋಲು, ಪಿಟ್ಟೋಲೋಲು, ಚಾಲೋಲು, ನಿಮ್ಮಲೋಲು, ಗುಲ್ಲೋಲು, ಕುರುಮಲೋಲು, ಅರ್ಟಿಲೋಲು, ಭೂಮನೋಲು, ಪುಲಚಲೋಲು, ಕುಕ್ಕಲೋಲು, ಮ್ಯಾಕಲೋಲು ಸೇರಿದಂತೆ ಹಲವಾರು ಬೆಡಗುಗಳು ಚೆಂಚರಲ್ಲಿವೆ. ಭ್ರಮರಾಂಬ, ಮಲ್ಲಿಕಾರ್ಜುನ, ವೀರಭದ್ರ, ಭೈರವ, ರುದ್ರ, ಕಾಳಿ, ಗಂಗಮ್ಮ, ಪೋತರಾಜು, ಸುಂಕಲಮ್ಮ, ನಾಗದೇವತಾ, ಭೂದೇವಿ ಮತ್ತಿತರ ದೈವಗಳಿಗೆ ಈ ಸಮಾಜದವರು ನಡೆದುಕೊಳ್ಳುತ್ತಾರೆ.
ಠಾಣೆ ಮೆಟ್ಟಿಲು ಹತ್ತಿದವರಲ್ಲ
ಚೆಂಚರು ಎಂದೂ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದವರಲ್ಲ. ತಂಟೆ, ತಕರಾರು ಏನೇ ಇದ್ದರೂ ಅದನ್ನು ಕುಲ ಪಂಚಾಯಿತಿಯಲ್ಲಿ ಬಗೆಹರಿಸಿಕೊಳ್ಳುತ್ತಾರೆ. ಅದಕ್ಕಾಗಿ ಪೆದ್ದ ಮನಿಷಿ ಅಂದರೆ ದೊಡ್ಡ ಮನುಷ್ಯ ಸಾರಥ್ಯದಲ್ಲಿ ಪಂಚಾಯಿತಿ ನಡೆಯುತ್ತದೆ. ಒಂದು ವೇಳೆ ಯಾರಾದರೂ ಠಾಣೆಗೆ ಹೋದರೂ ಪೊಲೀಸರು, ನಿಮ್ಮ ಪಂಚಾಯಿತಿಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಿ. ಅಲ್ಲಿ ಸಾಧ್ಯವಾಗದಿದ್ದರೆ ಇಲ್ಲಿಗೆ ಬನ್ನಿ ಎಂದು ಹೇಳಿ ಕಳುಹಿಸುತ್ತಿದ್ದರಂತೆ.
ಬಿದಿರಿನ ಅಕ್ಕಿ, ಕಾಳು, ಮೀನು, ಮೊಟ್ಟೆಯೇ ಚೆಂಚರ ಆಹಾರ. ಈ ಮೊದಲು ಜಿಂಕೆ, ಮೊಲ, ಉಡ, ಮೀನು ಭೇಟೆಯಾಡುತ್ತಿದ್ದರು. ಈಗ ಅರಣ್ಯ ಕಾಯಿದೆ ಜಾರಿಯಲ್ಲಿರುವುದರಿಂದ ಕಾಡಿನೊಳಕ್ಕೆ ಹೋಗುವಂತಿಲ್ಲ. ಇನ್ನು ಭೇಟೆ ನಿಷಿದ್ಧ. ಭೇಟೆ ಸಿಕ್ಕ ಪ್ರಾಣಿಯನ್ನು ಗುಡಿಸಲಿಗೆ ತಂದು, ಬೆಂಕಿಯಲ್ಲಿ ಬೇಯಿಸಿ ಅದಕ್ಕೆ ಉಪ್ಪು, ಖಾರ ಹಾಕಿ ಚೆಂಚರು ತಿನ್ನುತ್ತಿದ್ದರು.
ಬಿಲ್ಲಿ ಮತ್ತು ಬಾಣವನ್ನೂ ಚೆಂಚರು ಕಲಾತ್ಮಕತೆಯಿಂದ ತಯಾರು ಮಾಡಿಕೊಳ್ಳುತ್ತಿದ್ದರು. ಪ್ರಾಣಿಗಳ ದೇಹ ಗಾತ್ರಕ್ಕೆ ಅನುಗುಣವಾಗಿ ಬಾಣದ ಹಲಗು ಸಿದ್ಧ ಮಾಡುತ್ತಿದ್ದರು. ದೊಡ್ಡ ಪ್ರಾಣಿಗಳನ್ನು ಭೇಟೆಯಾಡಬೇಕು ಎಂದರೆ ಅಗಲವಾದ ಹಲಗು ಇರುವ ಬಾಣ ತಯಾರಿಸಿಕೊಳ್ಳುತ್ತಿದ್ದರು. ಸಣ್ಣ ಪ್ರಾಣಿಗಳಿಗೆ ಚೂಪಾದ ಹಲಗು ಇರುತ್ತಿತ್ತು. ಜೊತೆಗೆ ಬಾಣದ ಕೊನೆಯಲ್ಲಿ ಗಿಡುಗನ ಪುಕ್ಕ ಜೋಡಿಸುತ್ತಿದ್ದರು. ಬಿಟ್ಟ ಬಾಣ ವೇಗ ಪಡೆದುಕೊಳ್ಳುತ್ತದೆ, ನಿಖರವಾಗಿ ಗುರಿ ತಲುಪುತ್ತದೆ ಎಂಬುದೇ ಇದಕ್ಕೆ ಕಾರಣ. ಇನ್ನು ಕಾಡುಗಳಲ್ಲಿ ಪ್ರಾಣಿಗಳಿಗೆ ಉರುಳು ಕಟ್ಟುವುದರಲ್ಲೂ ಚೆಂಚರು ನಿಸ್ಸೀಮರು. ಭೇಟೆಗೆ ಹೋದರು ಕಾಡಿನಲ್ಲೇ ಇವರು ಅಡುಗೆ ಮಾಡಿಕೊಳ್ಳುತ್ತಿದ್ದರು. ಅದಕ್ಕಾಗಿ ಬಿದಿರಿನಿಂದ ಮಾಡಿದ ಪಾತ್ರೆ ಕೊಂಡೊಯ್ಯುತ್ತಿದರು. ಉಟವಾದ ಬಳಿಕ ಬೀಡಿ ಸೇದುವುದು ಇವರ ಅಭ್ಯಾಸ. ಬೀಡಿ ಎಲೆಗಳ ಗಿಡಗಳನ್ನು ಹುಡುಕಿಕೊಂಡು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಬೆಂಕಿ ನಂದಿಸುವಲ್ಲಿಯೂ ಇವರಿಗೆ ವಿಶೇಷವಾದ ಜ್ಞಾನವಿದೆ. ಒಟ್ಟಾರೆ ಕಾಡಿನ ಮಕ್ಕಳಾದ ಚೆಂಚರ ಪ್ರತಿ ಚಟುವಟಿಕೆ ಹಿಂದೆಯೂ ಅರಣ್ಯ ಕಾಪಾಡುವ ಉದ್ದೇಶ ಇರುತ್ತಿತ್ತು.
ಭೂಮಿಯೊಳಗೆ ಎಲ್ಲಿ ಚೆಂಚು ಗಡ್ಡೆ ಇದೆ ಎನ್ನುವುದನ್ನು ಇವರು ಸುಲಭವಾಗಿ ಪತ್ತೆ ಮಾಡುತ್ತಾರೆ. ಎಲೆಗಳನ್ನು ನೋಡಿ ಕಂಡುಹಿಡಿಯುವ ಚಾಕಚಕ್ಯತೆ ಇವರಲ್ಲಿದೆ. ಆ ಗಡ್ಡೆ ಇವರಿಗೆ ವಿಶೇಷ ಆಹಾರ. ಅದನ್ನು ಅವರು ಪೂರ್ತಿಯಾಗಿ ತೆಗೆಯುವುದಿಲ್ಲ. ಅರ್ಧ ತೆಗೆದುಕೊಂಡು ಉಳಿದರ್ಧವನ್ನು ಭೂಮಿಯೊಳಗೇ ಬಿಡುತ್ತಾರೆ. ಕಾರಣ, ಅದು ಮತ್ತೆ ಬೆಳೆಯಲಿ ಎಂದು. ಹೆಜ್ಜೆ ಗುರುತುಗಳನ್ನು ಆಧರಿಸಿ ಇದು ಇಂಥದ್ದೇ ಪ್ರಾಣಿಯದ್ದು ಎಂದು ಹೇಳುವ ಸಾಮರ್ಥ್ಯವೂ ಚೆಂಚರಲ್ಲಿದೆ. ಭೇಟೆ ಸಂದರ್ಭದಲ್ಲಿ ಯಾವುದೇ ಆಪಾಯ ಎದುರಾಗದೇ ಇರಲಿ ಎಂದು ಕಾಡಿಗೆ ಹೋಗುವ ಮುನ್ನ ಚೆಂಚರು ವನದೇವತೆಗೆ ಪೂಜೆ ಸಲ್ಲಿಸುತ್ತಿದ್ದರು. ಸಾಕಿದ ನಾಯಿಗಳನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಅವು ಪ್ರಾಣಿಗಳ ಶಬ್ದ ಕೇಳಿಬಂದ ದಿಕ್ಕಿನೆಡೆಗೆ ಓಡುತ್ತಿದ್ದವು. ಆ ನಾಯಿಗಳನ್ನು ಹಿಂಬಾಲಿಸಿ ಹೋಗಿ ಚೆಂಚರು ಭೇಟೆಯಾಡುತ್ತಿದ್ದರು.
ಆಟಗಳಿಂದ ಕೂಡಿದ ಮದುವೆ
ಚೆಂಚು ಸಮುದಾಯದಲ್ಲಿ ನಡೆಯುವ ಮದುವೆ ಆಟಗಳಿಂದ ಕೂಡಿರುತ್ತದೆ. ಮದುವೆಯ ದಿನ ವಧವಿನ ಅಕ್ಕನ ಗಂಡ ಕುಂಬಾರನ ಬಳಿಗೆ ಹೋಗಿ ಹೊಸ ಮಡಕೆ ಖರೀದಿಸಿ ತರಬೇಕು. ಖರೀದಿಸಿದ ಬಳಿಕ ಕುಂಬಾರನಿಗೆ ಹೊಸ ಬಟ್ಟೆ, ಸಿಹಿ ನೀಡಬೇಕು. ಆ ಮಡಕೆಯನ್ನು ಮನೆಗೆ ತಂದು ಪೂಜೆ ಮಾಡಬೇಕು. ವಿವಾಹ ವೇಳೆ ತಾಳಿ ಪೋಣಿಸುವ ಅಧಿಕಾರ ಇರುವುದು ವರನ ಅಪ್ಪನಿಗೆ ಮಾತ್ರ. ಮದುವೆ ಮನೆ ಮುಂದೆ ಹಾಕುವ ಚಪ್ಪರಕ್ಕೆ ವಿಶೇಷವಾದ ಮರ ಬಳಸಲಾಗುತ್ತದೆ. ಆ ಮರ ಬಳಸಿ ಹಾಕಿದ ಚಪ್ಪರದ ಕೆಳಗೆ ಇಡೀ ದೇಹ ತಂಪಾಗುತ್ತದೆ.
ಇದಲ್ಲದೆ ಮದುವೆ ದಿನ ವಧುವಿನ ಅಣ್ಣ ಮತ್ತು ಅತ್ತಿಗೆ ಬಾವಿಗೆ ಹೋಗಿ ನೀರು ತರಬೇಕು. ನೀರು ತುಂಬಿದ ಮಡಕೆಗಳನ್ನು ಚಪ್ಪರದ ನಾಲ್ಕು ಕಡೆ ಇಡಬೇಕು. ಬಳಿಕ ಚೌಕಾಕಾರದಲ್ಲಿ ಮಡಕೆಗಳನ್ನು ಇಟ್ಟು ದಾರ ಕಟ್ಟಬೇಕು. ಆ ಚೌಕದೊಳಗೆ ವರ ಪ್ರವೇಶ ಪಡೆಯಬೇಕು. ಆಗ ವಧುವಿನ ಅಣ್ಣ ಒನಕೆ ಹಿಡಿದು ವರನಿಗಾಗಿ ಕಾಯುತ್ತಿರುತ್ತಾನೆ. ಕಾಣಿಕೆ ನೀಡದೆ ಆತನಿಗೆ ಒಳಗೆ ಪ್ರವೇಶವಿಲ್ಲ. ಬಳಿಕ ವರ ಮತ್ತು ವಧುವಿಗೆ ಮಂಗಳ ಸ್ನಾನವಾಗಿ ಮದುವೆ ಕಾರ್ಯಕ್ರಮ ಆರಂಭವಾಗುತ್ತದೆ. ಇಂತಹ ಇನ್ನೂ ಹಲವಾರು ವಿಶೇಷಗಳನ್ನು ಚೆಂಚು ಸಮುದಾಯ ಒಳಗೊಂಡಿದೆ. ಆದರೆ, ಕಾಡಿನಿಂದ ಹೊರಬಿದ್ದು ಜನಸಮುದಾಯದೊಂದಿಗೆ ಬೆರೆತುಹೋದ ಬಳಿಕ ಸಂಪ್ರದಾಯಗಳ ಆಚರಣೆ ಕೊಂಚ ಕಡಿಮೆಯಾಗಿದೆ ಎನ್ನುತ್ತಾರೆ ಸಮಾಜದ ಹಿರಿಯರು.
- ಕೆ.ವಿ.ಪ್ರಭಾಕರ
prabhukolar@yahoo.com